ಇಷ್ಟು ವರ್ಷ ಆಡಳಿತ ನಡೆಸಿದ್ದೇ ಇವರ ಹೆಚ್ಚುಗಾರಿಕೆ
'It's only a crisis that concentrates the mind' (ಇಕ್ಕಟ್ಟು ಮತ್ತು ಬಿಕ್ಕಟ್ಟಿನ ಸಂದರ್ಭಗಳಲ್ಲಿ ಮನಸ್ಸು ದೃಢವಾಗುತ್ತದೆ.) 1990ರಲ್ಲಿ ಮನಮೋಹನ್ ಸಿಂಗ್ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದ ಮಾತುಗಳಿವು. ಆಗ ಮನಮೋಹನ್ ಸಚಿವರಷ್ಟೆ. 1991ರಲ್ಲಿ ಉದ್ಭವಿಸಿದ್ದ ತೀವ್ರ ಆರ್ಥಿಕ ಬಿಕ್ಕಟ್ಟಿನ ಸ್ಥಿತಿಗೆ ಜೀನು ಹಾಕಿ ಅದನ್ನು ಸರಿದಾರಿಗೆ ತರುವ ಗುರುತರ ಜವಾಬ್ದಾರಿಯನ್ನು ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ರಾಜಕಾರಣದ ಗಂಧಗಾಳಿ ತಿಳಿಯದ, ಆದರೆ ಅದರ ಹಂಗೂ ಇಲ್ಲದೆ ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳಬಲ್ಲ ಆರ್ಥಿಕ ತಜ್ಞ ಮನಮೋಹನ್ ಸಿಂಗ್‌ರಿಗೆ ವೀಳ್ಯ ನೀಡಿ ದೇಶದ ವಿತ್ತ ಸಚಿವರನ್ನಾಗಿಸಿ "ನಿನಗೆ ಸರಿತೋಚಿದಂತೆ ಮಾಡು, ರಾಜಕಾರಣದ ಕ್ಲೇಶಗಳನ್ನು ನನಗೆ ಬಿಡು" ಎಂದು ಹೇಳಿದ್ದರು. ಪರಿಸ್ಥಿತಿಯ ಒತ್ತಡ, ಸಾಲದಾರ ಸಂಸ್ಥೆಗಳ ಒತ್ತಾಸೆ ಮತ್ತು ಬದಲಾವಣೆ ತರಲೇಬೇಕಾದ ಅನಿವಾರ್ಯತೆಯ ಕಟ್ಟುಪಾಡಿಗೆ ಬಿದ್ದು ನರಸಿಂಹರಾವ್-ಮನಮೋಹನ್ ಸಿಂಗ್ ಜೋಡಿ ಹೊಸ ಬಂಡವಾಳ ನೀತಿಯನ್ನು ಯಶಸ್ವಿಯಾಗಿ ಜಾರಿಗೆ ತಂದದ್ದೇ ಅಲ್ಲದೇ ಅದಕ್ಕೆ ರಾಜಕೀಯ ಮನ್ನಣೆ ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾದರು. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡೇ 1996ರಲ್ಲಿ ಚುನಾವಣೆಗೆ ಮುನ್ನ ಮನಮೋಹನ್ ಈ ಮೇಲಿನಂತೆ ಹೇಳಿದ್ದು. ಐದು ವರ್ಷ ವಿತ್ತ ಸಚಿವರಾಗಿ ದುಡಿದ ಮನಮೋಹನ್ ಆರ್ಥಿಕ ಉದಾರೀಕರಣದ ರೂವಾರಿ ಎಂಬ legacy(ಹಣೆಪಟ್ಟಿ) ಹೊತ್ತು ನಿರ್ಗಮಿಸಿದರು.
2004ರ ಮೇ ತಿಂಗಳು. ಆರು ವರ್ಷಗಳ ಕಾಲ ಪ್ರಭಾವಶಾಲಿ ಆಡಳಿತ ನಡೆಸಿದ್ದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಚುನಾವಣೆಯಲ್ಲಿ ಜನಮನ್ನಣೆ ಪಡೆಯಲು ವಿಫಲವಾಗಿ ಕಾಂಗ್ರೆಸ್ ನೇತೃತ್ವದ ಯುಪಿಎಗೆ ಆಡಳಿತ ನಡೆಸುವ ಜವಾಬ್ದಾರಿ ಬಿಟ್ಟುಕೊಡಬೇಕಾಗಿ ಬಂತು. ಪ್ರಧಾನಿ ಯಾರಾಗಬೇಕು ಎಂಬ ವಿಷಯ ಬಂದಾಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿಶ್ವಾಸ ಇಟ್ಟಿದ್ದು ಮನಮೋಹನ್ ಸಿಂಗ್ ಅವರ ಮೇಲೆ. ಆಗ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಸಿಂಗ್ ರಾಜಕೀಯ ಪಟ್ಟುಗಳಿಗೆ ಇನ್ನೂ ಹೊಸಬರೇ ಆಗಿದ್ದರೂ, ಐದು ವರ್ಷ ವಿತ್ತ ಮಂತ್ರಿಯಾಗಿ ಆಡಳಿತದ ಸೂಕ್ಷ್ಮತೆಗಳನ್ನು ಬಲ್ಲವರಾಗಿದ್ದರು. ಸಿಂಗ್ ಪ್ರಧಾನಿ ಅಭ್ಯರ್ಥಿ ಎಂಬುದು ತಿಳಿಯುತ್ತಲೇ ಪೇಟೆ ಕುಣಿಯಿತು, ಉದ್ಯಮ ವಲಯ ಆಸೆಕಂಗಳಿಂದ ನೋಡಿತು. ರಾಜಕಾರಣಿಯಾಗಿ greenhorn (ಅನನುಭವಿ) ಆದರೂ ಆರ್ಥಿಕ ವಿಷಯಗಳಲ್ಲಿ ಇದ್ದ ಅಗಾಧ ಅನುಭವ ಮತ್ತು ಪಕ್ಕಾ ರಾಜಕಾರಣಿಯ ಇಮೇಜ್ ಇಲ್ಲದಿದ್ದುದು ಸಿಂಗ್‌ರಿಗೆ ಒಂದು ರೀತಿಯಲ್ಲಿ ವರವಾಯಿತು.
ಅದಾಗಿ 9 ವರ್ಷಗಳೇ ಆಗಿದೆ. 2004ರ ನಂತರ 2009ರಲ್ಲೂ ಮತದಾರರಿಂದ ಸೈ ಎನಿಸಿಕೊಂಡ ಸಿಂಗ್ ಎರಡನೇ ಅವಧಿಯ ಅಂತಿಮ ಘಟ್ಟದಲ್ಲಿ ನಿಂತಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಸತತವಾಗಿ ಎರಡು ಪೂರ್ಣಾವಧಿ ಪೂರೈಸಿದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆಯೂ ಸಿಂಗ್ ಅವರ ಹೆಗಲಿಗೇರುವ ಎಲ್ಲ ಲಕ್ಷಣಗಳಿವೆ. ಇತ್ತೀಚೆಗೆ ಜೈಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ರಾಹುಲ್ ಗಾಂಧಿಯವರನ್ನು ಮುಂದಿನ ರಾಜಕಾರಣದ ಮುಂಚೂಣಿಗೆ ತಳ್ಳುವ ಮೂಲಕ 2014ರ ನಂತರದ ನಾಯಕತ್ವದ ಸುಳಿವು ನೀಡಿದೆ. ಈಗಾಗಲೇ 80 ದಾಟಿರುವ ಸಿಂಗ್ ನಿವೃತ್ತ ಜೀವನವನ್ನು ಎದುರು ನೋಡುತ್ತಿದ್ದಾರೆ. ಹಾಗಾದರೆ 10 ವರ್ಷಗಳ ಆಡಳಿತದಲ್ಲಿ (ಪೂರ್ಣಾವಧಿ ಪರಿಗಣಿಸಿ) ಸಿಂಗ್ ಅವರ ಸಾಧನೆ ಏನು? ಹೆಗ್ಗುರುತೇನು? legacy ಏನು ಎಂಬ ಪ್ರಶ್ನೆಗಳು ಎದುರಾಗುತ್ತವೆ.
ಅಣುಬಂಧ!
ಇದು ಸಿಂಗ್ ಅವರು ಪ್ರಧಾನಿಯಾದ ಮೊದಲ ಅವಧಿಗೆ ಸಂಬಂಧಿಸಿದ್ದು. ಪೊಖ್ರಾನ್ ಅಣು ಪರೀಕ್ಷೆ (1998) ನಂತರ ಅಮೆರಿಕದೊಂದಿಗೆ ದೀರ್ಘಾವಧಿಗೆ ಎಂಗೇಜ್ ಆಗುವ ಪ್ರಯತ್ನಗಳ ಫಲವಾಗಿ ಉಭಯ ದೇಶಗಳು ಅಣುಬಂಧಕ್ಕೆ ಒಳಗಾಗುವ ಸಂದರ್ಭ ಒದಗಿಬಂತು. ಎನ್‌ಡಿಎ ಮತ್ತು ಯುಪಿಎ ಸರಕಾರಗಳ ಪ್ರಯತ್ನ ಹಾಗೂ ಅಮೆರಿಕದ ಒತ್ತಾಸೆಯ ಫಲವಾಗಿ ಭಾರತ ಮತ್ತು ಅಮೆರಿಕ ಅಣುಬಂಧಕ್ಕೆ ಸಹಿ ಹಾಕಲು ಮುಂದಾದವು. ಸಿಂಗ್ ಅವಧಿಯಲ್ಲಿ ಈ ಪ್ರಯತ್ನಗಳಿಗೆ ಹೆಚ್ಚಿನ ವೇಗ ಲಭಿಸಿತು. ಹೆಚ್ಚು ಕಡಿಮೆ ಯುಪಿಎ ಆಡಳಿತದ ಕೊನೆಯ ಘಟ್ಟ(2008)ದಲ್ಲಿ ಈ ಐತಿಹಾಸಿಕ ಅಣುಬಂಧಕ್ಕೆ ಕಾಲ ಕೂಡಿಬಂತು. ಖಂಡಿತ ಇದು ಸಿಂಗ್ ಆಡಳಿತದ legacyಆಗಬೇಕಿತ್ತು. ಇದಕ್ಕಾಗಿ ಸಿಂಗ್ ಮತ್ತು ಯುಪಿಎ ಭಾರೀ ಕಸರತ್ತು ನಡೆಸಿತು. ಪ್ರಮುಖ ಅಂಗಪಕ್ಷಗಳು ದೂರಾದವು, ಸಂಸತ್ತಿನಲ್ಲಿ ಹಣ ಕೊಟ್ಟು ವಿಶ್ವಾಸಮತ ಗಿಟ್ಟಿಸಿಕೊಂಡ ಆರೋಪಗಳೂ ಎದುರಾದವು. ಇದೆಲ್ಲದರ ನಡುವೆ ಅಣುಬಂಧ ಭಾರತಕ್ಕೆ ಹೊಸ ಶಕ್ತಿ ತುಂಬುವ ಮಾತುಗಳೂ ಬಂದವು. ಆದರೆ ಈ ಒಪ್ಪಂದಕ್ಕೆ ಅಂಕಿತ ಬಿದ್ದು ಐದು ವರ್ಷಗಳೇ ಆದರೂ ಅದರ ಪರಿಣಾಮ ಇನ್ನೂ ಗೋಚರಿಸಿಲ್ಲ. ಕೂಡಂಕುಲಂ (ಅಲ್ಲಿಯೂ ಇನ್ನೂ ವಿದ್ಯುತ್ ಉತ್ಪಾದನೆ ಆರಂಭವಾಗಿಲ್ಲ) ಹೊರತುಪಡಿಸಿ ಬೇರೆಲ್ಲೂ, ಯಾವುದೇ ಅಣುವಿದ್ಯುತ್ ಘಟಕಗಳ ಸ್ಥಾಪನೆ ಆಗಿಲ್ಲ. ಸ್ಥಾಪನೆ ಇರಲಿ ಆ ಕುರಿತ ಒಪ್ಪಂದಗಳೂ ಆಗಿಲ್ಲ. ಇಲ್ಲಿ ಬಂದು ಉದ್ಯಮ ಸ್ಥಾಪಿಸುವ ಕಂಪನಿಗಳಿಗೆ ಕೊಡುವ ಭದ್ರತೆಗೆ ರೂಪಿಸಲಾಗಿರುವ ಕಾನೂನನ್ನೇ ನೆಪವಾಗಿಟ್ಟುಕೊಂಡು ಅಣುಬಂಧವನ್ನು ಕಾರ್ಯರೂಪಕ್ಕೆ ತರಲುಅಮೆರಿಕ ಮೀನಮೇಷ ಎಣಿಸುತ್ತಿದೆ. ಈ ವಿಚಾರದಲ್ಲಿ ಒಬಾಮಾ ಆಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ, ಅವರ ಮನವೊಲಿಸುವಲ್ಲಿ ಸಿಂಗ್ ಸರಕಾರ ವಿಫಲವಾಗಿದೆ. ಪರಿಣಾಮ ಅಣುಬಂಧ ಇಂದಿಗೂ non-starterಆಗಿದೆ. ಭಾರತದ ವಿದ್ಯುತ್ ಸ್ವಾವಲಂಬನೆಗೆ ಇಂಬು ನೀಡಬೇಕಿದ್ದ ಈ ಬಂಧ ತಣ್ಣಗಾಗಿದೆ. ಆ ಮೂಲಕ ಸಿಂಗ್ ಅವರ ಪ್ರಭಾವಳಿ ಅಲಂಕರಿಸಬೇಕಿದ್ದ legacyಕಾಗದದಲ್ಲಿಯೇ ಉಳಿದುಕೊಂಡಿದೆ.
ಶರ್ಮ್ ಅಲ್ ಶೇಖ್.
ಎರಡನೇ ಅವಧಿಯಲ್ಲಿ ಸಿಂಗ್ ಹೆಚ್ಚಿನ ಗಮನ ನೀಡಿರುವುದು ಪಾಕಿಸ್ತಾನ ಜೊತೆಗಿನ ಸಂಬಂಧ ಸುಧಾರಣೆ ಕಡೆಗೆ. ಆರು ದಶಕಗಳಿಂದ ಬಗಲ ಮುಳ್ಳಾಗಿರುವ ಪಾಕಿಸ್ತಾನದ ಜೊತೆಗೆ ನಿಜವಾದ ಅರ್ಥದಲ್ಲಿ ದೀರ್ಘಾವಧಿ ಶಾಂತಿ ಸ್ಥಾಪನೆಯಾಗಿದ್ದೇ ಆದರೆ ಅದು ತಮ್ಮ ಆಡಳಿತಾವಧಿಯ ಅತಿ ದೊಡ್ಡ ಸಾಧನೆ ಆಗಲಿದೆ ಎಂದು ಸಿಂಗ್ ಭಾವಿಸಿದ್ದರು (ಇಂದಿಗೂ ಆ ಭಾವನೆ ಬದಲಾಗಿಲ್ಲ). 2008ರ ನವೆಂಬರ್ 26ರಂದು ಪಾಕ್ ಉಗ್ರರು ಮುಂಬೈಯಲ್ಲಿ ನಡೆಸಿದ ನರಮೇಧದ ಹೊರತಾಗಿಯೂ ಸಿಂಗ್ ಅವರ ಕನಸು ಕರಗಲಿಲ್ಲ. 26/11 ಕುಕೃತ್ಯಕ್ಕೆ ಕಾರಣರಾದ ವ್ಯಕ್ತಿ, ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ತನಕ ಮಾತುಕತೆಗೆ ಆಸ್ಪದವಿಲ್ಲ ಎಂಬುದು ಭಾರತದ ಘೋಷಿತ ನಿಲುವಾಗಿತ್ತು. ಆದಾಗ್ಯೂ 2011ರಲ್ಲಿ ಈಜಿಪ್ತಿನ ಶರ್ಮ್ ಅಲ್ ಶೇಖ್‌ನಲ್ಲಿ ಪಾಕಿಸ್ತಾನದ ಜತೆ ಜಂಟಿ ಘೋಷಣೆ ಹೊರಡಿಸಿದ ಭಾರತ ಸತತ, ಸುಸ್ಥಿರ ಮಾತುಕತೆಗೆ ಒಪ್ಪಿತು. ಅದೂ ಪಾಕಿಸ್ತಾನದ terms and conditionsಮೇಲೆ. ಸ್ವತಃ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಇದು ಪಥ್ಯವಾಗಲಿಲ್ಲ. ಆದರೂ ಶಾಂತಿ ಸ್ಥಾಪನೆಗೆ ಮಾತುಕತೆ ಮುಂದುವರಿಯಿತು. ಅದು ಸಿಂಗ್ ಅವರ ಒತ್ತಾಸೆಯ ಮೇರೆಗೆ. ನಿರ್ಣಾಯಕ ಫಲಿತಾಂಶ ಹೊರಬರಬಹುದು ಎಂಬ ಸಿಂಗ್ ಅವರ ಸದಾಶಯದ ಮೇರೆಗೆ. ಆದರೆ ಆದದ್ದೇನು? ಇತ್ತ ಮಾತುಕತೆಯ ನಾಟಕ ಆಡಿದ ಪಾಕಿಸ್ತಾನ ಅತ್ತ ಕಾರ್ಗಿಲ್‌ನ ನಿಯಂತ್ರಣರೇಖೆಯಲ್ಲಿ ಭಾರತೀಯ ಯೋಧರಿಬ್ಬರ ಶಿರಚ್ಛೇದ ಮಾಡಿತು. ಮಾತುಕತೆ ಮತ್ತೆ ಸ್ಥಗಿತಗೊಂಡಿತು. ಪರಿಸ್ಥಿತಿ ಮತ್ತೆ back to square oneಆಗಿದೆ. ಸ್ವತಃ ಪ್ರಧಾನಿ ಸಿಂಗ್ business as usualಸಾಧ್ಯವಿಲ್ಲ ಎಂದು ಒಪ್ಪಿಕೊಂಡು ಕೈಚೆಲ್ಲಿ ಕುಳಿತಿದ್ದಾರೆ. ಯಾವುದು ಅವರ ವಿದೇಶನೀತಿಯ legacyಆಗಬೇಕಿತ್ತೊ, ಅದು ಅವರ ಮುಖಕ್ಕೇ ಮಸಿ ಬಳಿದಿದೆ.
ಆರ್ಥಿಕ ಸುಧಾರಣೆಯ ಎರಡನೇ ಪರ್ವ.
ಈ ವಿಷಯದಲ್ಲಾದರೂ ಸಿಂಗ್ ಅವರಿಗೆ ಯಾವುದೇ ತೊಡಕು ಅಥವಾ visionಕೊರತೆ ಎದುರಾಗಬಾರದಾಗಿತ್ತು. 2004ರಿಂದ 2009ರವರೆಗಿನ ಪರಿಣಾಮಕಾರಿ ಆರ್ಥಿಕ ಅಭಿವೃದ್ಧಿ ಅದೇ ವೇಗದಲ್ಲಿ ಮುಂದುವರಿದಿದ್ದರೆ ದೇಶದ ಆರ್ಥಿಕ ಸ್ಥಿತಿ ಇವತ್ತಿನಂತೆ wobble(ಅಸ್ಥಿರ) ಆಗಬೇಕಿರಲಿಲ್ಲ. 2010ರ ವೇಳೆಗೆ ಎಖಖಿ(ಸರಕು-ಸೇವಾ ತೆರಿಗೆ), ಉಖಿಈ (ನೇರ ತೆರಿಗೆ ಸಂಹಿತೆ) ಜಾರಿಗೆ ಬಂದಿದ್ದರೆ ಸರ್ಕಾರದ ಆದಾಯವೂ ಹೆಚ್ಚುತ್ತಿತ್ತು. ಆರ್ಥಿಕ ಸದೃಢತೆ ಸಾಧ್ಯವಾಗುತ್ತಿತ್ತು. 2008ರ ಜಾಗತಿಕ ಆರ್ಥಿಕ ಸಂಕಷ್ಟದ ಹೊರತಾಗಿಯೂ ಶೇ. 7ರಷ್ಟಿದ್ದ ಆರ್ಥಿಕ ಅಭಿವೃದ್ಧಿ ದರ ಶೇ. 6ಕ್ಕೂ ಕಡಿಮೆ ಮಟ್ಟಕ್ಕೆ ಕುಸಿಯುತ್ತಿರಲಿಲ್ಲ. Inclusive growth (ಸರ್ವರ ಅಭಿವೃದ್ಧಿ) ನೆಪದಲ್ಲಿ ಜಾರಿಗೆ ಬಂದ ಅನೇಕ ಸಾಮಾಜಿಕ ಯೋಜನೆಗಳು (ನರೇಗಾ, ಕೃಷಿ ಸಾಲ ಮನ್ನಾ) ಸರ್ಕಾರದ ಖಜಾನೆ ಬರಿದಾಗಿಸಿದರೂ, ಎರಡನೇ ಕಂತಿನ ಆರ್ಥಿಕ ಸುಧಾರಣೆಯ ಕ್ರಮಗಳನ್ನು ಜಾರಿಗೆ ತರುವಲ್ಲಿ ಸರ್ಕಾರ ವಿಫಲವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಬಂಡವಾಳದಾರರನ್ನು ದೇಶದಿಂದ ಕಾಲ್ತೆಗೆಯುವಂತೆ ಅಥವಾ ಒಳಗೆ ಬಾರದಂತೆ ತಡೆಯುವಲ್ಲಿ ಯಶಸ್ವಿಯಾದದ್ದು ಜಿಎಎಆರ್ (ಪೂರ್ವಾನ್ವಯ ತೆರಿಗೆ ನೀತಿ)ನಿಂದಾಗಿ. ಈಗ ರಾಷ್ಟ್ರಪತಿಯಾಗಿರುವ ಪ್ರಣಬ್ ಮುಖರ್ಜಿ ಜಾರಿಗೆ ತರಲು ಉದ್ದೇಶಿಸಿದ ಈ ನೀತಿ ಮಾರುಕಟ್ಟೆಯ ಸೆಂಟಿಮೆಂಟ್ ಜೊತೆ ಚೆಲ್ಲಾಟವಾಡಿತು. ತಮ್ಮದೇ ವಿತ್ತ ಸಚಿವರು ಈ ನೀತಿಯನ್ನು ಜಾರಿಗೆ ತಂದಾಗ, ಅದರ ವ್ಯತಿರಿಕ್ತ ಪರಿಣಾಮಗಳು ಗೊತ್ತಿದ್ದೂ, ಸಿಂಗ್ ಅದನ್ನು ತಡೆಯಲು ಪ್ರಯತ್ನಿಸಲಿಲ್ಲ. ಪ್ರಣಬ್ ಸ್ಥಳಾಂತರಗೊಂಡು ಆ ಜಾಗಕ್ಕೆ ಮರಳಿದ ಚಿಂದಂಬರಂ ಪೂರ್ವಾನ್ವಯ ತೆರಿಗೆ ನೀತಿಯ ಜಾರಿಯನ್ನು 2016ರವರೆಗೆ ಸ್ಥಗಿತಗೊಳಿಸಿರುವುದಾಗಿ ಹೇಳಿದ ನಂತರವಷ್ಟೇ ಷೇರುಪೇಟೆ ಚೇತರಿಕೆ ಕಂಡಿದೆ. ಇನ್ನು ವಿದೇಶಿ ಬಂಡವಾಳ ಆಕರ್ಷಿಸಲು ಕೆಲ ಅಪ್ರಿಯ ಕ್ರಮಗಳನ್ನು ಕೈಗೊಂಡಾಗಲೂ ಅದರ ಅನಿವಾರ್ಯತೆಯನ್ನು ರಾಜಕೀಯ ಪಕ್ಷಗಳಿಗೆ ಮನವರಿಕೆ ಮಾಡಿಕೊಟ್ಟು ಎಲ್ಲರನ್ನೂ ಜೊತೆಗೆ ಕರೆದೊಯ್ಯುವ ಮುತ್ಸದ್ದಿತನ ತೋರುವಲ್ಲಿ ಸಹ ಸಿಂಗ್ ವಿಫಲರಾದರು. ಈ ವೈಫಲ್ಯಗಳು ಮತ್ತು ಕಳೆದೆರಡು ವರ್ಷಗಳಲ್ಲಿ ಒಂದಾದ ಮೆಲೆ ಒಂದರಂತೆ ಬಂದೆರಗಿದ ಹಗರಣಗಳ ಆರೋಪಗಳು ಸಿಂಗ್ ಅವರ ಲೆಗಸಿಗೆ ಭಾರೀ ಪೆಟ್ಟು ನೀಡಿದೆ. 10 ವರ್ಷ (ಪೂರ್ಣಾವಧಿ ಪರಿಗಣಿಸಿ) ದೇಶವನ್ನು ಆಳಿದ ಪ್ರಧಾನಿ ಎಂದಷ್ಟೇ ಇತಿಹಾಸ ಸಿಂಗ್ ಅವರನ್ನು ಸ್ಮರಿಸಿಕೊಳ್ಳಲಿದೆ. ಅದೇ ಅವರ ಹೆಚ್ಚುಗಾರಿಕೆ ಎನಿಸಿಕೊಳ್ಳಲಿದೆ. ಆದರೆ ಈ 10ರಿಂದ ಹೊರಬಂದದ್ದು ಏನು ಎಂಬುದು ಪ್ರಶ್ನೆಯಾಗಿಯೇ ಉಳಿದುಬಿಡಲಿದೆ.
- ಕೆ.ಎಸ್.ಜಗನ್ನಾಥ್
jagannath.kudinoor@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

