ಅಂಕಣಗಳು

ಭಾರತವೆಂದೂ ಜಾತಿರಹಿತ ರಾಷ್ಟ್ರವಾಗಲಾರದು!

Published On :

So long as you retain caste, you also perpetuate casteism. Absurd to say yes to caste and no to casteism. Both are blots on Hindu society. ಹಿರಿಯ ಪತ್ರಕರ್ತ ಕಾಂಚನ್ ಗುಪ್ತ ಅವರು ಟ್ವಿಟರ್‌ನಲ್ಲಿ ಈ ಪ್ರಶ್ನೆಯೆತ್ತಿದ್ದಾರೆ. ಜಾತಿಯ ಬಗ್ಗೆ ಪರೋಕ್ಷವಾಗಿ ಮಾತನಾಡುವುದೇ Tabooಎನ್ನುವ ಪರಿಸ್ಥಿತಿಗೆ ಇಂದು ನಮ್ಮ ದೇಶ ಬಂದು ತಲುಪಿದೆ. ಅಂಥದ್ದರಲ್ಲಿ ಈ ರೀತಿ ನೇರವಾಗಿಯೇ ಬರೆದರೆ ವಿವಾದ ಹುಟ್ಟಿಕೊಳ್ಳುವುದಿಲ್ಲವೇ? ಹಾಗೆ ನೋಡಿದರೆ ಇತ್ತೀಚೆಗೆ ಉದ್ಭವವಾದ ವಿವಾದದಿಂದಲೇ ಗುಪ್ತ ಅವರ ಈ ವಾದ ಹುಟ್ಟಿಕೊಂಡದ್ದು.
ಜೈಪುರ ಲಿಟರೇಚರ್ ಫೆಸ್ಟ್‌ನಲ್ಲಿ ಆಶಿಶ್ ನಂದಿ,  'ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಹೆಚ್ಚಿನ ಸಂಖ್ಯೆಯ ಭ್ರಷ್ಟರಿದ್ದಾರೆ' ಎನ್ನುವ ಮೂಲಕ, ಎಲ್ಲರಿಂದಲೂ ಹಿಗ್ಗಾಮುಗ್ಗಾ ಹೀಯಾಳಿಸಿಕೊಳ್ಳುತ್ತಿದ್ದಾರೆ.
ಗೋಷ್ಠಿಯಲ್ಲಿ ಆಶೀಶ್ ಬರೀ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದರೆ, ಕೇಳಿಸಿಕೊಂಡವರೆಲ್ಲ ಆಕಳಿಸುತ್ತಾ ಸುಮ್ಮನೆ ಕುಳಿತುಕೊಳ್ಳುತ್ತಿದ್ದರೇನೋ? ಆದರೆ ಯಾವಾಗ ನಿರ್ದಿಷ್ಟ ಜಾತಿಗಳ ಹೆಸರು ಅವರ ಮಾತಿನಲ್ಲಿ ತೂರಿಕೊಂಡು ಬಂದವೋ, ಆಗಲೇ ಎದ್ದದ್ದು ವಿವಾದ. ಭ್ರಷ್ಟಾಚಾರ ಎನ್ನುವುದು, ಅಧಿಕಾರ ವರ್ಗ ಮತ್ತು ಆಡಳಿತ ವರ್ಗಗಳಲ್ಲೇ ಹೆಚ್ಚಾಗಿ ನಡೆಯುವುದು ಎನ್ನುವ ಸಂಗತಿ ಎಲ್ಲರಿಗೂ ಗೊತ್ತಿರುವಂಥದ್ದೆ. ನಂದಿ ಅವರ ಹೇಳಿಕೆಯಲ್ಲಿ ನಮಗೆ ಮಾಯಾವತಿ, ಮುಲಾಯಂ ಸಿಂಗ್ ಯಾದವ್ ಮತ್ತು ಎ. ರಾಜಾರಂಥಹ ಭ್ರಷ್ಟರ ಚಹರೆಗಳು ಕಾಣಿಸಿಕೊಳ್ಳಬೇಕೇ ವಿನಃ ಹಿಂದುಳಿದ ವರ್ಗದ ಜನಸಾಮಾನ್ಯರದ್ದಲ್ಲ.
ಆದರೆ ದಲಿತ ಸಮುದಾಯದ ಏಳ್ಗೆಯ ಮಂತ್ರ ಜಪಿಸುತ್ತಾ, ತಾನಷ್ಟೇ ಏಳ್ಗೆಯಾದ ಮಾಯಾವತಿ ಮತ್ತು ಎಲ್‌ಜೆಪಿ ನಾಯಕ ರಾಮ್‌ವಿಲಾಸ್ ಪಾಸ್ವಾನ್ 'ಆಶಿಶ್ ನಂದಿಯನ್ನು ಜೈಲಿಗೆಸೆಯಿರಿ' ಎಂದು ಅಬ್ಬರಿಸುವ ಮೂಲಕ ಹೇಗೆ ವಿಷಯದ ಮೂಲವನ್ನೇ ಬದಲಿಸಿಬಿಟ್ಟರು ನೋಡಿ? ಜನರೂ ಅಷ್ಟೇ, ತಮ್ಮ ಪರವಾಗಿ ಮಾಯಾವತಿ ಮಾತನಾಡುತ್ತಿದ್ದಾರೆ ಎಂದು ಹಿಗ್ಗಿ ಆಕೆಗೆ ಸಾಷ್ಟಾಂಗ ಹಾಕುತ್ತಾರೆ!
ಒಂದು ಪ್ರಮುಖ ವಿಷಯ ಚರ್ಚೆಯಾಗುವಾಗ ಅಪ್ಪಿತಪ್ಪಿ 'ಜಾತಿ' ಎನ್ನುವ ಪದವೇನಾದರೂ ನುಸುಳಿಬಿಟ್ಟಿತೆಂದರೆ, ಆ ಚರ್ಚೆ ಹಾದಿತಪ್ಪಿಸಿಕೊಂಡು ಎತ್ತೆತ್ತಲೋ ಸಾಗಿ ಕೊನೆಗೆ ಜಾತಿಯೆಂಬ ಪದದತ್ತಲೇ ಬಂದು ಪರ್ಯಾವಸಾನವಾಗುತ್ತದೆ. ಈ ಗೋಷ್ಠಿಯಲ್ಲಿ ಆದದ್ದೂ ಕೂಡ ಅದೆ. ರೊಚ್ಚಿಗೆದ್ದ ಆಶುತೋಶ್ ಎಂಬ ಪತ್ರಕರ್ತ, 'ಈವರೆಗೆ ನಾನಿಂಥ ವಿಲಕ್ಷಣ ಹೇಳಿಕೆಯನ್ನು ಕೇಳಿಲ್ಲ, ಭ್ರಷ್ಟಾಚಾರದಲ್ಲಿ ಬ್ರಾಹ್ಮಣರು ಹಾಗೂ ಮೇಲ್ಜಾತಿಯವರು ಭಾಗಿಯಾದರೂ ನುಣುಚಿಕೊಂಡು ಬಿಡುತ್ತಾರೆ. ಕೆಳ ಜಾತಿಯ ವ್ಯಕ್ತಿ ಅದೇ ತಪ್ಪನ್ನು ಮಾಡಿದರೆ ಅದು ಅಕ್ಷಮ್ಯವಾಗುತ್ತದೆ' ಎಂದು ಹೇಳಿ ಎಲ್ಲರಿಂದ ಬೆನ್ನು ಚಪ್ಪರಿಸಿಕೊಂಡ.
ಆದರೆ ಆತ  'ಬ್ರಾಹ್ಮಣರು ಮತ್ತು ಮೇಲ್ಜಾತಿಯವರು ಹೆಚ್ಚು ಭ್ರಷ್ಟರು' ಎಂದು ತಿರುಗೇಟು ನೀಡಿದ್ದು ಕೂಡ ವಿಲಕ್ಷಣವೇ ಎನ್ನುವುದು ಯಾರ ಗಮನಕ್ಕೂ ಬರಲಿಲ್ಲ. ಯಾರೇ ಭ್ರಷ್ಟಾಚಾರ ಮಾಡಿದರೂ ಅದು ತಪ್ಪೇ ಅಲ್ಲವೇ?  
ಈ ವಿಷಯ ಈಗ ಎಲ್ಲೆಡೆಯೂ ಸದ್ದುಮಾಡುತ್ತಿದೆ. ಯಾವುದು ಸರಿ, ಯಾವುದು ತಪ್ಪು ಎನ್ನುವುದು ಚರ್ಚೆಗೆ ಕಿವಿಗೊಟ್ಟವರಿಗೆ ತಿಳಿಯುವುದಿಲ್ಲವಾದರೂ, ನಮ್ಮ ದೇಶದ ಸುಪ್ತ ಮನಸ್ಸಿನಲ್ಲಿ ಬೇರು ಬಿಟ್ಟಿರುವ ಜಾತೀಯತೆಯ ವಿಷವೃಕ್ಷದ ದರ್ಶನವಂತೂ ಇದರಿಂದ ಸ್ಪಷ್ಟವಾಗಿ ಆಗುತ್ತದೆ.
ಜಾತಿ ಪದ್ಧತಿ ತೊಲಗಬೇಕು ಎಂದು ಮೈಕಿನ ಮುಂದೆ ನಾಯಕನೊಬ್ಬ ಒದರಿದಾಗ ನಾವೆಲ್ಲ ಚಪ್ಪಾಳೆ ತಟ್ಟಿ ಸಮ್ಮತಿ ಸೂಚಿಸುತ್ತೇವೆ. ಅದೇ ನಾಯಕ ಮರುದಿನ 'ನನ್ನ ಹಿಂದೆ ಪ್ರಬಲ ಲಿಂಗಾಯತ ಸಮುದಾಯದ ಬೆಂಬಲವಿದೆ', 'ವಕ್ಕಲಿಗರು ಬೆನ್ನಿಗಿದ್ದಾರೆ', 'ನಾನು ಕುರುಬ ಸಮಾಜದ ಮುಖಂಡ' ಎಂದು ಅಬ್ಬರಿಸಿದರೆ, ಹಿಂದಿನ ದಿನಕ್ಕಿಂತ ಹೆಚ್ಚಿನ ಚಪ್ಪಾಳೆ, ಶಿಳ್ಳೆಗಳನ್ನು ಆತನ ಭಾಷಣ ಗಿಟ್ಟಿಸಿಕೊಳ್ಳುತ್ತದೆ. ಜಾತಿಯೆಂಬ ಚಾದರದಡಿ ತಮ್ಮ ಹಳವಂಡಗಳನ್ನೆಲ್ಲ ಚೆನ್ನಾಗಿ ಮುಚ್ಚಿಡಬಹುದು ಎನ್ನುವುದು ರಾಜಕಾರಣಿಗಳಿಗೆ ಚೆನ್ನಾಗಿ ಗೊತ್ತು. ರಾಜಕಾರಣಿ ಎಷ್ಟೇ ಭ್ರಷ್ಟನಾಗಿರಲಿ ಅವನನ್ನು ನಾವು ಮಾಫಿ ಮಾಡಿಬಿಡುತ್ತೇವೆ. 'ಎಲ್ಲರೂ ತಿಂತಾರೆ, ಆದರೆ ನಮ್ಮ ಜಾತಿಯವ ಅನ್ನೋ ಕಾರಣಕ್ಕೆ ಇಷ್ಟೊಂದು ರಂಪ ಎಬ್ಬಿಸಲಾಗುತ್ತಿದೆ. ಅವನೆಷ್ಟೇ ಭ್ರಷ್ಟನಾಗಿರಲಿ, ನಮ್ಮ ಮಠಗಳಿಗೆ ಸಹಾಯ ಮಾಡುತ್ತಿದ್ದಾನಲ್ಲ, ಅಷ್ಟು ಸಾಕು' ಎನ್ನುವ ಮನೋಭಾವ ಜನಗಳದ್ದು!
ಭ್ರಷ್ಟರು ರಾಜಕಾರಣಿಗಳಷ್ಟೇ ಅಲ್ಲ, ನಾವೂ ಕೂಡ ಜಾತಿಯ ವಿಷಯದಲ್ಲಿ ಅಷ್ಟೇ ಭ್ರಷ್ಟರಾಗಿದ್ದೇವೆ. ಎಲ್ಲರಿಗೂ ಜಾತಿರಹಿತ ರಾಷ್ಟ್ರ ಬೇಕು, ಆದರೆ ಯಾರೊಬ್ಬರೂ ಜಾತಿ ಬಿಡುವುದಕ್ಕೆ ಸಿದ್ಧರಿಲ್ಲ. ಬಿಟ್ಟರೂ ಅವರನ್ನದು ಬಿಡುವುದಿಲ್ಲ!  
ಈ ಸಮಯದಲ್ಲಿ ಖ್ಯಾತ ಹಾಸ್ಯ ಸಾಹಿತಿ, ದಾರ್ಶನಿಕ, ಝ್ಛ್ಝೀಯುವರು ಹೇಳಿದ ಮಾತು ನೆನಪಾಗುತ್ತದೆ. ಒಮ್ಮೆ ಯಾರೋ ಅವರನ್ನು ಕೇಳಿದರಂತೆ, 'ಜಾತಿ ಪದ್ಧತಿಯ ಬಗ್ಗೆ ನಿಮ್ಮ ಅನಿಸಿಕೆಯೇನು?' ಅದಕ್ಕುತ್ತರವಾಗಿ ಬೀಚಿಯವರು ನಕ್ಕು, 'ನಾನು ಅದಾಗಲೇ ನನ್ನ ಜಾತಿಯನ್ನು ಬಿಟ್ಟುಬಿಟ್ಟಿದ್ದೇನೆ, ಆದರೆ ಅದೇ ನನ್ನನ್ನು ಬಿಡುತ್ತಿಲ್ಲ' ಎಂದರಂತೆ. ಅವರ ಈ ಮಾತಿನಲ್ಲಿ ಎಷ್ಟೊಂದು ಸತ್ಯವಿದೆಯೆಂದರೆ, ಒಂದು ವೇಳೆ ಬ್ರಾಹ್ಮಣನೊಬ್ಬ ತನ್ನ ಜಾತಿ ಬಿಟ್ಟರೂ, ಜನ ಅವನನ್ನು ಬ್ರಾಹ್ಮಣ ಎಂದು ಕರೆಯುವುದನ್ನು ಮಾತ್ರ ಬಿಡುವುದಿಲ್ಲ. ಉದಾಹರಣೆಗೆ, 'ಈ ಜಾತಿಯ ಗೊಡವೆಯೇ ಸಾಕು' ಎಂದಾತ ತನ್ನ ಜನಿವಾರವನ್ನು ಕಿತ್ತೆಸೆದನೆಂದುಕೊಳ್ಳಿ, ಆಗಲೂ ಎಲ್ಲರೂ ಆತನನ್ನು ಕರೆಯುವುದು, 'ಜನಿವಾರ ಕಿತ್ತೆಸೆದ ಬ್ರಾಹ್ಮಣ' ಅಂತಲೇ! ಆತ ತನ್ನ ಜನಿವಾರವನ್ನು ದೂರಮಾಡಿಕೊಂಡರೂ, ಆತನಿಂದ ಬ್ರಾಹ್ಮಣಿಕೆಯ ಟ್ಯಾಗ್ ಅನ್ನು ದೂರ ಮಾಡಲು ಮಾತ್ರ ಯಾರೂ ಸಿದ್ಧರಿರುವುದಿಲ್ಲ!
ಹಾಗಾಗಿಯೇ, ಜಾತೀಯತೆ ಸುಲಭವಾಗಿ ನಮ್ಮಿಂದ ದೂರವಾಗುವಂಥದ್ದಲ್ಲ ಎನ್ನುವ ನಿಷ್ಠುರ ಸತ್ಯವನ್ನು ನಾವು ಒಪ್ಪಿಕೊಳ್ಳಲೇಬೇಕು. ಆ ಚಾಳಿ ನಮ್ಮಲ್ಲಿ ಇದೆಯೆಂದು ಒಪ್ಪಿಕೊಂಡ ಮೇಲೆ ಪ್ರಶ್ನೆಯೊಂದು ಉದ್ಭವವಾಗುತ್ತದೆ. ಇದೆ ಎಂದ ಮೇಲೆ ಅದರ ಬಗ್ಗೆ ಮಾತನಾಡುವುದು ತಪ್ಪೇ? ಜಾತಿಗಣತಿ ನಡೆಯುವುದು ಸರಿಯಾದರೆ, ಜಾತಿ ಆಧರಿತ ಮೀಸಲಾತಿ ನೀಡುವುದು ಸರಿಯಾದರೆ, ಜಾತಿಯ ಬಗ್ಗೆ, ಅದರಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೂ ಸರಿಯೇ ಅಲ್ಲವೇ? ಆಶಿಶ್ ಅವರ ಮಾತಿನಲ್ಲಿ ಹುಳುಕಿಲ್ಲ, ಅದನ್ನು ಅರ್ಥ ಮಾಡಿಕೊಂಡ ನಮ್ಮ ಮನಸ್ಸುಗಳಲ್ಲಿ ಹುಳುಕಿದೆ. ಅದನ್ನು ನಾವು ನೋಡಿಕೊಳ್ಳುತ್ತಿಲ್ಲವಷ್ಟೆ.
ನಮ್ಮ ಸಮಾಜ ಮನಸ್ಥಿತಿ ಯಾವ ಮಟ್ಟಕ್ಕೆ ಮುಟ್ಟಿದೆಯೆಂದರೆ 'ಕುಲಕುಲ ಕುಲವೆಂದು ಹೊಡೆದಾಡದಿರಿ' ಎಂದ ದಾಸರು ನಮಗೆಲ್ಲ ಸರಿದಾರಿತೋರಿಸಲು ಪ್ರಯತ್ನಿಸಿದ್ದರೆ, 'ಆ ದಾಸರು ನಮ್ಮ ಕುಲದವರೆಂದು' ಜನ ಹೊಡೆದಾಡುತ್ತಿದ್ದಾರೆ! ಒಂದಂತೂ ಸ್ಪಷ್ಟವಾಗುತ್ತಿದೆ. ಭಾರತ ಎಂದಿಗೂ ಜಾತಿರಹಿತ ರಾಷ್ಟ್ರವಾಗಲಾರದು.

-  ರಾಘವೇಂದ್ರ ಆಚಾರ್ಯ
ಕನ್ನಡಪ್ರಭ
raghu.bioastra@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.