ಮರೆಯಾಗದಿರಲಿ ಮಹಾದಂಡನಾಯಕನ ನೆನಪು
ಭಾರತದ ಹೆಮ್ಮೆಯ ವೀರ ಸೇನಾನಿ, ಭಾರತೀಯ ಸೇನಾ ಪಡೆಗಳ ಪ್ರಥಮ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ 114ನೇ ಜನ್ಮದಿನಾಚರಣೆ ಸೋಮವಾರ ನಡೆಯಲಿದ್ದು, 'ಸೇನಾ ಜಿಲ್ಲೆ' ಖ್ಯಾತಿಯ ಕೊಡಗು ತನ್ನ ವೀರ ಪುತ್ರನನ್ನು ಸ್ಮರಿಸಿಕೊಳ್ಳಲು ಸಜ್ಜಾಗಿದೆ.
ಕೊಡಗಿನ ರಕ್ಷಣೆ ಮತ್ತು ತ್ಯಾಗ ಬಲಿದಾನದ ಪರಂಪರೆ ಕ್ರಿ.ಶ. 1174 ರಷ್ಟು ಹಿಂದಿನ ಇತಿಹಾಸ ಹೊಂದಿದೆ. ಇಲ್ಲಿನ ಅಧಿಕೃತ ಶಾಸನ ಮತ್ತು ಉಲ್ಲೇಖಿತ ಐತಿಹಾಸಿಕ ದಾಖಲೆಗಳಿಂದ ಅನೇಕ ಮಂದಿ ವೀರರು, ಶೂರರು ಆಯಾ ಸಂದರ್ಭಗಳಲ್ಲಿ ಕೊಡಗಿನ ರಕ್ಷಣೆಗೆ ಕಟಿಬದ್ಧರಾಗಿದ್ದು, ಅನೇಕ ಸಂದರ್ಭಗಳಲ್ಲಿ ಪ್ರಾಣತ್ಯಾಗ ಮಾಡಿದ್ದಾರೆ ಎನ್ನುವುದು ತಿಳಿಯುತ್ತದೆ. ಇನ್ನು ಕೊಡಗು ಮತ್ತು ರಕ್ಷಣಾ ಪಡೆಗಳ ನಡುವೆ ಮೊದಲಿನಿಂದಲೂ ಒಂದು ಅವಿನಾಭಾವ ಸಂಬಂಧವಿದೆ. ಈ ಪುಟ್ಟ ಜಿಲ್ಲೆ ದೇಶ ರಕ್ಷಣೆಯ ವಿಚಾರಕ್ಕೆ ಬಂದಾಗ ಸದಾ ಮುಂದು. ಭಾರತೀಯ ಸೇನಾ ಪಡೆಯಲ್ಲಿ ಕೊಡಗಿನ 8 ಸಾವಿರಕ್ಕೂ ಅಧಿಕ ಮಂದಿ ಯೋಧರಾಗಿ ಕಾರ್ಯನಿರ್ವಹಿಸಿದ್ದಾರೆ. ಕೊಡಗಿನ ಜನರಲ್ಲಿ ದೇಶರಕ್ಷಣೆಯ ಗುಣ ಹಾಸುಹೊಕ್ಕಾಗಿದೆ.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಕೊಡಗಿನ ರಕ್ಷಣಾ ಇತಿಹಾಸದಲ್ಲಿ ಎರಡು ಧ್ರುವತಾರೆಗಳು. ಅವರಿಬ್ಬರೂ ಒಂದೇ ಮನೆತನಕ್ಕೆ, ಅಂದರೆ ಕೊಡಂದೇರ ಮನೆಯವರಾಗಿದ್ದರು ಎನ್ನುವುದು ವಿಶೇಷ. ಭಾರತೀಯ ಭೂಸೇನೆಯಲ್ಲಿ ಅಣ್ಣತಮ್ಮಂದಿರು ಅತ್ಯುನ್ನತ ಸ್ಥಾನವನ್ನು ಪಡೆದ ಮತ್ತೊಂದು ಉದಾಹರಣೆ ದೊರಕಲಾರದು.
ಕೊಡಗು ಸೇರಿದಂತೆ ದೇಶವಿದೇಶಗಳಲ್ಲಿ ತಮ್ಮ ಛಾಪು ಮೂಡಿಸಿದ ಧೀಮಂತ ವ್ಯಕ್ತಿತ್ವದ ಮಹಾನ್ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರು. ಇಂಗ್ಲೆಂಡ್, ಅಮೆರಿಕ, ನೇಪಾಳ, ಫ್ರಾನ್ಸ್ ದೇಶಗಳ ರಕ್ಷಣಾ ಪಡೆಗಳ ಗೌರವ ದಂಡನಾಯಕರಾಗಿ ಅವರು ಗೌರವ ಪಡೆದಿರುವುದು ಕೊಡಗಿನ ಇತಿಹಾಸದಲ್ಲಿಯೇ ಒಂದು ಅಪೂರ್ವ ದಾಖಲೆ. ಭಾರತೀಯ ಭೂಸೇನೆಯಲ್ಲಿ ಇಲ್ಲಿಯವರೆಗೆ ಕಾರ್ಯಪ್ಪ ಒಳಗೊಂಡಂತೆ ಇಬ್ಬರಿಗೆ ಮಾತ್ರ ಫೀಲ್ಡ್ ಮಾರ್ಷಲ್ ಗೌರವ ಲಭಿಸಿರುವುದು ಕಾರ್ಯಪ್ಪ ಅವರ ಸೇನಾ ಹಿರಿಮೆಗೆ ನಿದರ್ಶನ.
ಭಾರತದ ರಕ್ಷಣಾ ಪಡೆಗಳ ಪಿತಾಮಹ ಮತ್ತು ಮೊಟ್ಟಮೊದಲ ಭಾರತೀಯ ಮಹಾದಂಡನಾಯಕ ಎನಿಸಿದ ಖ್ಯಾತಿ ಕೂಡ ಕೊಡಗಿನ ಕೊಡಂದೇರ ಮಾದಪ್ಪ ಕಾರ್ಯಪ್ಪ ಅವರಿಗೆ ಸಲ್ಲುತ್ತದೆ.
1949ರ ಜನವರಿ 15ರಂದು ಆಗ ಭಾರತೀಯ ಬ್ರಿಟಿಷ್ ಸೇನೆಯ ಮುಖ್ಯಸ್ಥರಾಗಿದ್ದ ಜನರಲ್ ರಾಯ್‌ಬರ್ಚ್ ಅವರಿಂದ ಜನರಲ್ ಆಗಿ ಅಧಿಕಾರದ ದಂಡವನ್ನು ಜನರಲ್ ಕೆ.ಎಂ. ಕಾರ್ಯಪ್ಪ ಅವರು ಪಡೆದರು. ಹೀಗಾಗಿಯೇ ಪ್ರತಿ ವರ್ಷ ಜ.15 ಅನ್ನು ಇಂದಿಗೂ ಭಾರತೀಯ ಸೇನಾಪಡೆ ತನ್ನ ವಾರ್ಷಿಕ ದಿನಾಚರಣೆಯಾಗಿ ಆಚರಿಸಿಕೊಂಡು ಬಂದಿದೆ.
ಕೊಡಗಿನ ಧೀಮಂತ ಮತ್ತು ಚಿರಸ್ಥಾಯಿ ಸಾಧಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಾಮಾನ್ಯ ಮಧ್ಯಮ ವರ್ಗದ ಕೊಡವ ಕುಟುಂಬದಲ್ಲಿ 1899ರ ಜ.28ರಂದು ಮಾದಪ್ಪ ಮತ್ತು ಕಾವೇರಿ ಅಮ್ಮಯ್ಯ ಅವರ ದ್ವಿತೀಯ ಪುತ್ರರಾಗಿ ಜನಿಸಿದರು. ಅವರ ತಂದೆ ಮಾದಪ್ಪ ಶನಿವಾರ ಸಂತೆಯಲ್ಲಿ ಪಾರುಪತ್ಯಗಾರ ಹುದ್ದೆಯಲ್ಲಿದ್ದರು. ಕೊಡಂದೇರ ಕಾರ್ಯಪ್ಪ ತಮ್ಮ ಆತ್ಮೀಯ ವಲಯದಲ್ಲಿ 'ಚಿಮ್ಮ' ಎಂದು ಕರೆಯಲ್ಪಟ್ಟರೆ, ಹಿರಿಯ ಹಾಗೂ ಕಿರಿಯ ಸೇನಾಧಿಕಾರಿಗಳ ವಲಯದಲ್ಲಿ 'ಕಿಪ್ಪರ್' ಎಂಬ ಹೆಸರಿನಿಂದಲೇ ಚಿತಪರಿಚಿತರಾಗಿದ್ದರು.
ಸ್ವತಂತ್ರ ಭಾರತದ ಮೊದಲ ಮತ್ತು ಏಕೈಕ ಸಮಗ್ರ ರಕ್ಷಣಾ ಪಡೆಗಳ ಮೊದಲ ಮಹಾದಂಡನಾಯಕ, ಅಂದರೆ ಕಮಾಂಡರ್ ಇನ್‌ಚೀಫ್ ಎನಿಸಿದವರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ. ಈ ಸಾಧನೆಗೂ ಮೊದಲು ಕಾರ್ಯಪ್ಪ ಅವರು ಹಲವು ಪ್ರಥಮಗಳ ಸಾಧಕರೂ ಆಗಿದ್ದರು. ಬ್ರಿಟಿಷ್ ಅಧೀನದ ಭೂಸೇನೆಗೆ ಆಯ್ಕೆಯಾದ ಮೊದಲ ಭಾರತೀಯ ಕೆಡೆಟ್ ಅವರು. ಅಲ್ಲದೆ ಕ್ವೆಟ್ಟಾದ ಸ್ಟಾಫ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಮೊದಲ ಭಾರತೀಯ, ಒಂದು ಸೇನಾ ತುಕಡಿಯ ನೇತೃತ್ವ ವಹಿಸಿದ ಮೊದಲ ಭಾರತೀಯ ಅಧಿಕಾರಿ, ಪ್ರಥಮ ಭಾರತೀಯ ಸೇನಾ ಕಮಾಂಡರ್ ಎಂಬ ಹೆಗ್ಗಳಿಕೆಯೊಂದಿಗೆ ಭಾರತೀಯ ಸೇನಾ ಪಡೆಗೆ ಪ್ರಥಮ ಭಾರತೀಯ ಜನರಲ್ ಆಗಿ ನೇಮಕವಾದ ಕೀರ್ತಿಯೂ ಅವರದ್ದು. ಅಂತೆಯೇ ಭಾರತೀಯ ಅಂಚೆ ಚೀಟಿಯಲ್ಲಿ ಕಾಣಿಸಿಕೊಂಡ ಕೊಡಗಿನ ಏಕೈಕ ವ್ಯಕ್ತಿಯೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪರಾಗಿದ್ದಾರೆ.
ತಮ್ಮ ಸೇವಾವಧಿಯಲ್ಲಿ ಎರಡನೇ ಮಹಾಯುದ್ಧ ಹಾಗೂ ಭಾರತ- ಪಾಕಿಸ್ತಾನ ನಡುವಿನ ಮೊದಲ ಯುದ್ಧ, ಜಮ್ಮು ಕಾಶ್ಮೀರದ ಸಮಸ್ಯೆಗಳ ಕುರಿತು ಅತ್ಯಂತ ಚಾಕಚಕ್ಯತೆಯಿಂದ ಕಾರ್ಯನಿರ್ವಹಿಸಿದ್ದರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ. ಇನ್ನು ಅವರಿಗೆ ಅತ್ಯಂತ ನಿಕಟವರ್ತಿಯಾಗಿದ್ದವರು ಕೋಡಂದೇರ ಮನೆಯವರೇ ಆಗಿದ್ದ ಜನರಲ್ ಕೆ.ಎಸ್. ತಿಮ್ಮಯ್ಯ.
1918ರಿಂದ 1953ರವರೆಗೆ ತಮ್ಮ 35 ವರ್ಷಗಳ ಅಖಂಡ ಸೇನಾ ಸೇವೆಯಲ್ಲಿ ಕಾರ್ಯಪ್ಪ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಬ್ರಿಟಿಷ್ ಸೇನೆಯಾಗಿದ್ದ ಭಾರತೀಯ ಸೇನೆಯನ್ನು ಸಂಪೂರ್ಣವಾಗಿ ಭಾರತೀಯವಾಗಿಸಿದ ಮತ್ತು ರಕ್ಷಣಾ ಪಡೆಗಳಲ್ಲಿ ರಾಜಕೀಯವನ್ನು ಎಂದೆಂದಿಗೂ ನುಸುಳದಂತೆ ಮಾಡಿದ ಕೀರ್ತಿ ಅವರಿಗೇ ಸಲ್ಲುತ್ತದೆ.
ಸತ್ಯ, ಪ್ರಾಮಾಣಿಕತೆ, ಶಿಸ್ತಿನ ಆಧಾರದ ಮೇಲೆ ಭಾರತೀಯ ಸೇನೆ ಕಟ್ಟಿದ ಖ್ಯಾತಿ ಕೂಡ ಜನರಲ್ ಕಾರ್ಯಪ್ಪ ಅವರಿಗೆ ಸಲ್ಲುತ್ತದೆ. ಶಿಸ್ತಿನ ಪ್ರತಿರೂಪವೇ ಆಗಿದ್ದ ಅವರು ತಮ್ಮ 87ನೇ ವಯಸ್ಸಿನಲ್ಲಿ 1986ರ ಜ.14 ರಂದು ಭಾರತ ಸರ್ಕಾರದಿಂದ ಫೀಲ್ಡ್ ಮಾರ್ಷಲ್ ಗೌರವ ಪದವಿ ಪಡೆದರು. ಅತ್ಯಂತ ಶ್ರೇಷ್ಠ ಮಾನವತಾವಾದಿಯಾಗಿದ್ದರಿಂದಲೇ ಅವರು ಸದಾ ಭಾರತದ ಬಗ್ಗೆ, ಭಾರತೀಯರ ಬಗ್ಗೆ ತಮ್ಮ ಪ್ರೀತಿ ಹಾಗೂ ನಿಷ್ಠೆಯನ್ನು ವ್ಯಕ್ತಪಡಿಸುತ್ತಿದ್ದರು. ಹಾಗಾಗಿಯೇ ಅವರನ್ನು ಅಪ್ರತಿಮ ದೇಶಭಕ್ತ ಸೇನಾನಿ ಎಂದು ನಿರ್ವಿವಾದವಾಗಿ ಒಪ್ಪಿಕೊಳ್ಳಲಾಗುತ್ತದೆ.
ಭಾರತೀಯ ಸೇನೆಯ ಫೀಲ್ಡ್ ಮಾರ್ಷಲ್ ಆಗುವ ಮೊದಲೇ ದೇಶವಿದೇಶಗಳಿಂದ ಅತ್ಯುತ್ತಮ ಪ್ರಶಸ್ತಿ, ಗೌರವ, ಪುರಸ್ಕಾರಗಳಿಗೆ ಅವರು ಪಾತ್ರರಾಗಿದ್ದರು. ಬ್ರಿಟಿಷ್ ಸರ್ಕಾರದ 'ಆರ್ಡರ್ ಆಫ್ ಬ್ರಿಟಿಷ್ ಎಂಪೈರ್', ಅಮೆರಿಕದ 'ಲೀಜನ್ ಆಫ್ ಮೆರಿಟ್' ಸೇರಿದಂತೆ ಅನೇಕ ಅತ್ಯುನ್ನತ ಪ್ರಶಸ್ತಿಗಳನ್ನು ಕೂಡ ಕಾರ್ಯಪ್ಪ ಪಡೆದುಕೊಂಡಿದ್ದರು. 1953ರಲ್ಲಿ ಸೇನೆಯಿಂದ ನಿವೃತ್ತರಾದ ನಂತರ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗಳಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸಿ ತರುವಾಯ ಮಡಿಕೇರಿಯ ತಮ್ಮ ಮೆಚ್ಚಿನ ಮನೆ 'ರೋಷನಾರ'ದಲ್ಲಿ ವಿಶ್ರಾಂತಿ ಜೀವನವನ್ನು ಕಳೆದರು.
ದೇಶದ ಪ್ರಥಮ ಸೇನಾ ಮಹಾದಂಡನಾಯಕರಿಗೂ ಸೇನೆಯಿಂದ ನಿವೃತ್ತರಾದ ಮೇಲೆ ರಾಜಕೀಯ ಆಸಕ್ತಿ ಬೆಳೆಯಿತು. ಹೀಗಾಗಿಯೇ ಮುಂಬೈನಲ್ಲಿ ಶಿವಸೇನೆಯ ಮೂಲಕ ರಾಜಕೀಯ ಪ್ರವೇಶಿಸಿ ಅಲ್ಲಿನ ಚುನಾವಣೆಯೊಂದರಲ್ಲಿ ಶಿವಸೇನಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಗೆಲ್ಲಲು ಅವರಿಗೆ ಸಾಧ್ಯವಾಗಲಿಲ್ಲ. ಆ ಘಟನೆಯ ಬಳಿಕ ಅವರು ರಾಜಕೀಯವನ್ನು ತಮ್ಮ ಜೀವಮಾನದಲ್ಲಿ ಹತ್ತಿರ ಸುಳಿಯಲೂ ಬಿಡಲಿಲ್ಲ.
ಇನ್ನು ಕಾರ್ಯಪ್ಪ ಅವರಿಗೆ ಎರಡು ಪದಗಳ ಮೇಲೆ ಅಪಾರ ಪ್ರೀತಿಯಿತ್ತು. ಆ ಪದಗಳೆಂದರೆ, ಒಂದು ಹಿಂದೂಸ್ಥಾನ್ (ಭಾರತ), ಇನ್ನೊಂದು ಫೌಜಿಸ್ಥಾನ್ (ಸೈನ್ಯ).
ತಮ್ಮ ಮನೆಯಲ್ಲಿ ಸೈನಿಕನೊಬ್ಬನ ಪ್ರತಿಮೆ ಹೊಂದಿದ್ದ ಜನರಲ್ ಕಾರ್ಯಪ್ಪ ಅವರು ಪ್ರತಿನಿತ್ಯ ಸೈನಿಕನಿಗೆ ನಮಿಸುವ ಪರಿಪಾಠ ಬೆಳೆಸಿಕೊಂಡಿದ್ದರು. ಸೈನಿಕರು ಮತ್ತು ದೇವರು ಸಂಕಷ್ಟದ ಸಮಯದಲ್ಲಿ ಮಾತ್ರ ಜನರಿಗೆ ನೆನಪಾಗುತ್ತಾರೆ. ಸಂಕಷ್ಟಗಳು ತೀರಿದ ಬಳಿಕ ಜನರು ಈ ಇಬ್ಬರನ್ನೂ ಮರೆತು ಬಿಡುತ್ತಾರೆ ಎಂದು ಮಾರ್ಮಿಕವಾಗಿ ಅವರು ಹೇಳುತ್ತಿದ್ದರು. ಅವರ ಮಾತು ಇಂದಿಗೂ ನಿತ್ಯಸತ್ಯ.
ಕೊಡವ ಸಂಸ್ಕೃತಿ, ಪರಂಪರೆ ಹಾಗೂ ಆಚಾರ-ವಿಚಾರಗಳಲ್ಲಿ ಅತ್ಯಂತ ಕಟ್ಟುನಿಟ್ಟಾಗಿದ್ದ ಕಾರ್ಯಪ್ಪ, ಸಾಮಾಜಿಕ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಳ್ಳುತ್ತಿದ್ದರು. ವರ್ಷಗಳು ಕಳೆದಂತೆ ದೇಶದ ಸ್ಥಿತಿಗತಿ, ರಾಜಕಾರಣದ ಪರಿಸ್ಥಿತಿ ಹಾಗೂ ಜನಗಳ ದುಸ್ಥಿತಿ ನೋಡಿ ಜನರಲ್ ಕಾರ್ಯಪ್ಪ ಅವರು ಬಹುವಾಗಿ ನೊಂದುಕೊಂಡಿದ್ದರು. ಅವರಿಗೆ ಸಹಜವಾಗಿದ್ದ ಸಾತ್ವಿಕ ಹಾಗೂ ಪ್ರಾಮಾಣಿಕ ಆಕ್ರೋಶದ ಹಿನ್ನೆಲೆಯಲ್ಲಿ ಒಂದುಬಾರಿ 'ನನಗೆ ನಿಜಕ್ಕೂ ಜೀವನದಲ್ಲಿ ಬೇಸರ ಬಂದಿದೆ, ಈ ದೇಶಕ್ಕೆ ಕನಿಷ್ಠ 15 ವರ್ಷ ಸೇನಾಡಳಿತ ಬೇಕು' ಎಂದು ಗುಡುಗಿದ್ದರು. ದೇಶದಾದ್ಯಂತ ಈ ಹೇಳಿಕೆ ಕೋಲಾಹಲವನ್ನೇ ಎಬ್ಬಿಸಿತಾರೂ ಜನರಲ್ ಕಾರ್ಯಪ್ಪ ಅವರು ತಮ್ಮ ಹೇಳಿಕೆಯನ್ನು ಖಂಡಿಸಿದವರಿಗೆ ಮರುಪ್ರತಿಕ್ರಿಯೆ ನೀಡುವ ಗೋಜಿಗೇ ಹೋಗಲಿಲ್ಲ.
ಅನಾರೋಗ್ಯಕ್ಕೀಡಾದ ಅವರು ಬೆಂಗಳೂರಿನ ಮಿಲಿಟರಿ ಆಸ್ಪತ್ರೆಯಲ್ಲಿ ತಮ್ಮ ಜೀವನದ ಕೊನೆಯ ದಿನಗಳನ್ನು ಕಳೆದರು. 94ರ ಇಳಿವಯಸ್ಸಿನಲ್ಲಿ, ಅಂದರೆ 1993ರ ಮೇ 15 ರಂದು ತಮ್ಮ ಭೌತಿಕ ಕಾಯವನ್ನು ತ್ಯಜಿಸಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕೊಡಗಿನ ಇತಿಹಾಸದ ಒಂದು ಚಿರಸ್ಥಾಯಿ ಅಧ್ಯಾಯವಾದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪಗೆ ಮರಣೋತ್ತರವಾಗಿ ಭಾರತ ರತ್ನ ಕೊಡಬೇಕು ಎಂಬ ಬೇಡಿಕೆ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಸತತವಾಗಿ ಶಿಫಾರಸುಗೊಂಡಿದ್ದರೂ ಆ ಕನಸು ಇದುವರೆಗೂ ಈಡೇರಿಲ್ಲ. ಭಾರತ ರತ್ನ ದೊರಕದಿದ್ದರೇನಂತೆ, ಕೊಡಗಿನ ಹೆಮ್ಮೆಯ ವೀರಸೇನಾನಿ ಇಂದಿಗೂ ಜನಮಾನಸದಲ್ಲಿ ರತ್ನವಾಗಿ ಕಂಗೊಳಿಸುತ್ತಿದ್ದಾರೆ ಎನ್ನುವುದು ನಿರ್ವಿವಾದ. ಕಾರ್ಯಪ್ಪ ಈ ನೆಲದಲ್ಲಿ ಜನ್ಮತಾಳಿ ಇಂದಿಗೆ 114 ವರ್ಷಗಳು ಕಳೆದಿವೆ. ಅಂತೆಯೇ ಕಾರ್ಯಪ್ಪ ಕಣ್ಮರೆಯಾಗಿ 19 ವರ್ಷಗಳು ಸಂದಿವೆ.
ವಿಪರ್ಯಾಸವೆಂದರೆ ಅವರನ್ನು ಜನ್ಮ ದಿನ ಮತ್ತು ಪುಣ್ಯ ತಿಥಿಯಂದು ಮಾತ್ರ ಸ್ಮರಿಸಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ವರ್ಷದ ಅನೇಕ ದಿನಗಳು ಬೇರೆ ಬೇರೆ ನಾಯಕರ, ಧಾರ್ಮಿಕ ಮುಖಂಡರ ಜನ್ಮದಿನಾಚರಣೆಗಳು ನಡೆಯುತ್ತಲೇ ಇರುತ್ತವೆ. ಸರ್ಕಾರ ಇಂತಹ ಹತ್ತಾರು ರಾಜ್ಯವ್ಯಾಪಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತದೆ. ಆದರೆ, ಇಂದಿಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರಂಥ ಮಹಾನ್ ಸೇನಾನಿಗಳ, ಭವಿಷ್ಯದ ಪೀಳಿಗೆಗೆ ದಾರಿದೀಪವಾಗುವ ಅಪ್ರತಿಮ ಸೇನಾ ನಾಯಕರ ಹೆಸರಿನಲ್ಲಿ ರಾಜ್ಯವ್ಯಾಪಿ ಕಾರ್ಯಕ್ರಮಗಳು, ಆಚರಣೆಗಳು ನಡೆಯುತ್ತಿಲ್ಲ ಎಂಬುದೇ ವಿಪರ್ಯಾಸ.
- ಅನಿಲ್ ಎಚ್.ಟಿ. ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

