ಅಂಕಣಗಳು

ತ್ರೀಸ್ಟಾರ್ ಸೆಲ್ಯೂಟ್ ಪುರಾಣ!

Published On :

ಎಎಸ್‌ಐಗೆ ಒಂದು ಸ್ಟಾರ್, ಎಸ್‌ಐಗೆ ಎರಡು ಸ್ಟಾರ್, ಇನ್ಸ್‌ಪೆಕ್ಟರ್‌ಗೆ 3 ಸ್ಟಾರ್. ಪೊಲೀಸರಲ್ಲಿ ಒಂದು ಸ್ಟಾರ್ ಹೆಚ್ಚಿದ್ದರೂ ಸೀನಿಯರ್‌ಗಳಿಗೆ ಸೆಲ್ಯೂಟ್ ಹೊಡೆಯಲೇ ಬೇಕು. ಇತ್ತೀಚೆಗೆ ಮಂಗಳೂರಲ್ಲಿ ವಿವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಸಂದರ್ಭ ಈ ವಿಚಾರ ಸ್ವಲ್ಪ ಲಘು ಹಾಸ್ಯಕ್ಕೆ ಕಾರಣವಾಯಿತು. ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಜತೆಗೆ ಎಎಸ್‌ಐ ಭದ್ರತೆಗೆ ಆಗಮಿಸಿದ್ದರು. ಆಗ ವಿವಿ ಕ್ಯಾಂಪಸ್‌ನಲ್ಲಿ 3 ಸ್ಟಾರ್ ಖದರ್‌ನ ಖಾಕಿದಾರಿ ಒಬ್ಬರು ಸಚಿವರನ್ನು ಎದುರುಗೊಂಡು ಸೆಲ್ಯೂಟ್ ಹೊಡೆದರು. ತಕ್ಷಣ ಎಎಸ್‌ಐ ಸಹಿತ ಎಲ್ಲ ಪೊಲೀಸರು ಸೆಲ್ಯೂಟ್ ಹೊಡೆದರು! ಉಸ್ತುವಾರಿ ಸಚಿವರೂ ಒಮ್ಮೆ ಸುಸ್ತಾಗಿ ಭದ್ರತಾ ಸಿಬ್ಬಂದಿಯನ್ನು ದಿಟ್ಟಿಸಿ ನೋಡಿದರು. ಆದರೆ 3 ಸ್ಟಾರ್ ಹೊಂದಿದವರು ವಿವಿಯ ಸೆಕ್ಯುರಿಟಿ ವಿಭಾಗದವರು. ಆದರೆ ಅವರ ಸ್ಟಾರ್ ಒಳ್ಳೆಯದಿತ್ತು!

ಮಹಿಳೆಯರ ರಕ್ಷಣೆ, ಭಕ್ಷಣೆ !
ದೆಹಲಿ ಸಹಿತ ದೇಶದ ಎಲ್ಲ ಅತ್ಯಾಚಾರ ಪ್ರಕರಣಗಳ ವಿರುದ್ಧ ಮಂಗಳೂರು ನಗರದ ಕಾಲೇಜು ವಿದ್ಯಾರ್ಥಿನಿಯರು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲ್ಲಾಧಿಕಾರಿ ಕಚೇರಿಗೆ ತೆರಳಿ ಮಹಿಳೆಯರ ವಿರುದ್ಧ ಲೈಂಗಿಕ ಕಿರುಕುಳ ತಡೆಗಟ್ಟುವಂತೆ ಒತ್ತಾಯಿಸಿದರು. ಇವರ ಜತೆ ಮಾರ್ಗದರ್ಶನಕ್ಕೆ ಪ್ರಾಂಶುಪಾಲ ಮತ್ತು ಹಿರಿಯ ಉಪನ್ಯಾಸಕರೂ ಇದ್ದರು. ವಿಪರ್ಯಾಸ ಎಂದರೆ ಈ ಇಬ್ಬರ ವಿರುದ್ಧ ಕಾಲೇಜು ಆಡಳಿತ ಮಂಡಳಿಗೆ ಇಬ್ಬರು ಉಪನ್ಯಾಸಕಿಯರು ಮಾನಸಿಕ ಕಿರುಕುಳದ ದೂರು ನೀಡಿದ್ದರು!

ಕಳಂಕ ರಹಿತರಿಗಾಗಿ ಕಾಯುತ್ತಿದೆ
ಮಂಗಳೂರಿನ ಉರ್ವಾಸ್ಟೋರ್‌ನಲ್ಲಿ ತಲೆಎತ್ತಿದ ಲೋಕಾಯುಕ್ತ ಪೊಲೀಸರ ಕಚೇರಿ ಕಟ್ಟಡ ಉದ್ಘಾಟನೆಗೆ ಕಾಯುತ್ತಿದೆ. ಪ್ರಥಮ ಹಂತದ ಕಾಮಗಾರಿ ಮುಕ್ತಾಯವಾಗಿ ತಿಂಗಳೇ ಕಳೆದಿದ್ದರೂ ಉದ್ಘಾಟನೆಗೆ ಮುಹೂರ್ತ ಕೂಡಿ ಬಂದಿಲ್ಲ. ಯಾಕೆ ಹೀಗೆ ಎಂದು ಇದರ ಜಾಡು ಹಿಡಿದು ಹೋದಾಗ ತಿಳಿದು ಬಂದದ್ದು ಇಷ್ಟು. ಈ ಲೋಕಾಯುಕ್ತ ಕಚೇರಿ ಉದ್ಘಾಟಿಸಬೇಕಾದರೆ ಮುಖ್ಯಮಂತ್ರಿಯೇ ಬರಬೇಕಂತೆ. ಇದೇನು ಇಲ್ಲಿನ ಲೋಕಾಯುಕ್ತ ಪೊಲೀಸರಿಗೆ ಮುಖ್ಯಮಂತ್ರಿ ಮೇಲಿನ ಅಷ್ಟೊಂದು ಮಮತೆ ಎನ್ನಬೇಡಿ. ರಾಜ್ಯದ ಕಾನೂನು ಸಚಿವ, ಗೃಹ ಸಚಿವ, ಉಪಮುಖ್ಯಮಂತ್ರಿಗಳ ವಿರುದ್ಧ ಒಂದಿಲ್ಲೊಂದು ಪ್ರಕರಣ ದಾಖಲಾಗಿದೆ. ಹೋಗಲಿ ಬಿಡಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆಸೋಣ ಎಂದರೆ ಅವರ ವಿರುದ್ಧವೂ ಆರೋಪ ಕೇಳಿ ಬಂದಿತ್ತು. ಹಾಗಾಗಿ ಕಳಂಕಿತರ ಉಸಾಬರಿ ಬೇಡ ಎಂದು ಮುಖ್ಯಮಂತ್ರಿಯತ್ತ ಮುಖ ಮಾಡಿದ್ದಾರೆ. ಪಾಪ ಸಿಎಂ ಯಾವಾಗ ಬಿಡುವು ಮಾಡಿ ಬರುತ್ತಾರೋ?

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕೇಸರೀಕರಣ!
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕೇಸರೀಕರಣ, ಇದರಿಂದ ವಿಚಲಿತರಾದ ಜನಾರ್ದನ ಪೂಜಾರಿಯವರಿಂದ ಟೀಕೆ! ಇದೇನಪ್ಪಾ ಕಾಂಗ್ರೆಸ್ ಕೇಸರೀಕರಣ ಎಂಬ ಕುತೂಹಲವೇ ಸ್ವಲ್ಪ ಕೇಳಿ. ವಿವೇಕಾನಂದರನ್ನು ತಮ್ಮ ಸ್ವತ್ತು ಎಂದು ಹೇಳಲು ಈಗ ಪೈಪೋಟಿಯೇ ನಡೆಯುತ್ತಿದೆ. ಮಂಗಳೂರಲ್ಲಿಯೂ ಕಾಂಗ್ರೆಸ್ ಮುಖಂಡರು ವಿವೇಕಾನಂದರ ಉತ್ಸವ ಭರ್ಜರಿಯಾಗಿ ಆಯೋಜಿಸಿದ್ದರು. ಹೇಳಿ ಕೇಳಿ ವಿವೇಕಾನಂದರು ಕೇಸರಿ ದಿರಿಸು ಉಟ್ಟವರು. ಬ್ಯಾನರ್‌ಗಳಲ್ಲಿ, ಫ್ಲೆಕ್ಸ್‌ಗಳಲ್ಲಿ ವಿವೇಕಾನಂದರ ಕೇಸರಿ ಬಟ್ಟೆ ತೊಟ್ಟ ಭಾವಚಿತ್ರಗಳಿದ್ದವು. ಅಲ್ಲದೇ ಕಾರ್ಯಕ್ರಮದ ಜಾಹೀರಾತುಗಳು ಕೂಡ ಸಂಪೂರ್ಣ ಕೇಸರಿಮಯವಾಗಿದ್ದವು. ಇದಕ್ಕೆ ಕಾರಣ ವಿಮಾನದ ಛಾವಣಿ ನಿರ್ಮಿಸುವ ಬೃಹತ್ ಸಂಸ್ಥೆಯ ಮಾಲೀಕ ಮುಂಬೈ ಉದ್ಯಮಿ ವಿಜಯನಾಥ ವಿಠಲ ಶೆಟ್ಟಿ. ಇವರು ಆರಂಭದಿಂದಲೂ ತೊಡುವ ಬಟ್ಟೆ ಸಂಪೂರ್ಣ ಕೇಸರಿ. ಕಾಂಗ್ರೆಸ್ ಸೇರ್ಪಡೆ ಸಂದರ್ಭ ಮೊದಲೇ ತಾನು ಕೇಸರಿ ಬಟ್ಟೆ ಬಿಚ್ಚುವುದಿಲ್ಲ, ಆಗಬಹುದಲ್ಲ ಎಂದು ಕೇಳಿದ್ದರು. ಅದಕ್ಕೆ ಜಿಲ್ಲಾ ಕಾಂಗ್ರೆಸ್ ಒಪ್ಪಿಗೆ ನೀಡಿತ್ತು. ಗ್ರಾಮೀಣ ಕ್ರೀಡೋತ್ಸವಕ್ಕೆ ಲಕ್ಷಗಟ್ಟಲೆ ಮೌಲ್ಯದ ಬಹುಮಾನ ನೀಡುವ ಶೆಟ್ಟರು ಬಿಜೆಪಿ ಪಾಳಯದಲ್ಲಿ ಸುಳಿದಾಡಿದ ಬಳಿಕ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದರು. ವಿವೇಕಾನಂದರ ಕಾರ್ಯಕ್ರಮದ ಪ್ರಚಾರದ ಖರ್ಚು ವೆಚ್ಚ ಇವರ ತಲೆಗೆ ಹಾಕಲಾಗಿತ್ತು. ಹೀಗಾಗಿ ಕೇಸರಿಪ್ರಿಯ ಶೆಟ್ಟರಿಂದ ಎಲ್ಲವೂ ಕೇಸರಿಮಯವಾಗಿತ್ತು. ಎಲ್ಲೆಲ್ಲೂ ಕೇಸರಿ ಕಂಡ ಜನಾರ್ದನಪೂಜಾರಿ ಕೆಂಪಗಾದರು. ಕಾಂಗ್ರೆಸಿಗರು ಬಿಳಿ ಬಟ್ಟೆ ತೊಡುವವರು. ಕಾಂಗ್ರೆಸ್ ಸೇರಿದ ಬಳಿಕವಾದರೂ ಬಿಳಿ ಬಟ್ಟೆ ತೊಡಬೇಕೆಂದು ಗೊತ್ತಾಗುವುದಿಲ್ಲವೇ ಎಂದು ಸಮಾರಂಭದಲ್ಲಿ ಬಹಿರಂಗವಾಗಿಯೇ ಟೀಕಿಸಿದರು. ವೇದಿಕೆಯಲ್ಲಿ ಎಲ್ಲರೂ ಬಿಳಿ ಬಟ್ಟೆ ತೊಟ್ಟಿದ್ದರೆ ಶೆಟ್ಟರದ್ದು ಮಾತ್ರ ದೃಷ್ಟಿ ಬೊಟ್ಟಂತೆ ಕೇಸರಿ. ಇಷ್ಟೆಲ್ಲಾ ಪೂಜಾರಿ ವಾಚಾಮಗೋಚರ ಬೈಯುತ್ತಿದ್ದರೂ ಶೆಟ್ಟರು ಮಾತ್ರ ನಗುತ್ತಲೇ ಇದ್ದರು. ಏಕೆಂದರೆ ಅವರಿಗೆ ತುಳು ಮಾತೃಭಾಷೆಯ ಶೆಟ್ಟರಿಗೆ ಕನ್ನಡ ಅರ್ಥ ಆಗುವುದಿಲ್ಲ! ಅದು ಸರಿ ಇನ್ನು ಭಾರತದ ಬಾವುಟದಲ್ಲಿರುವ ಕೇಸರಿ ಬಣ್ಣ ಕಂಡರೂ ಕೆಂಡವಾದರೆ ಕಷ್ಟ ಕಷ್ಟ!

ನಾನ್‌ವೆಜ್ ಬ್ರೇಕ್ ಫಾಸ್ಟ್, ನಾನ್ ಸ್ಟಾಪ್ ಓಟ
ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರು ಕಳೆದ ವಾರ ಮೈಸೂರಿಗೆ ಬಂದಿದ್ದರು. ಬಹಳ ದಿನಗಳ ನಂತರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೂಡ ಸ್ವಕ್ಷೇತ್ರಕ್ಕೆ ಬಂದು ಮೈಸೂರಿನಲ್ಲಿಯೇ ವಾಸ್ತವ್ಯ ಮಾಡಿದ್ದರು. ಮುನಿಯಪ್ಪ ಅವರು ಬಂದಿರುವ ವಿಷಯ ತಿಳಿದು ಸಂಪರ್ಕ ಮಾಡಿದ ಅವರು, ಏಯ್ ಬೆಳಗ್ಗೆ ತಿಂಡಿಗೆ ನಮ್ ಮನೆಗೆ ಬಾರಯ್ಯ ಅಂತಾ ಪ್ರೀತಿಯಿಂದಲೇ ಕರೆದರು. ಮುನಿಯಪ್ಪ ಅವರು ಕೂಡ ಅಷ್ಟೇ ಪ್ರೀತಿಯಿಂದ ಹೋದರು. ಮುನಿಯಪ್ಪ ಅವರು ನಾನ್‌ವೆಜ್ ತಿನ್ನಬಹುದು ಎಂದುಕೊಂಡು ಸಿದ್ದರಾಮಯ್ಯ ಅವರು ಎಂದಿನಂತೆ ತಮಗಿಷ್ಟವಾದ ಇಡ್ಲಿ, ಬೋಟಿ ಗೊಜ್ಜು, ಅಕ್ಕಿ ರೊಟ್ಟಿ, ಕೋಳಿ ಸಾರು ಮಾಡಿಸಿದ್ದರು. ಇದನ್ನು ಕಂಡ ಕೂಡಲೇ ಮುನಿಯಪ್ಪ ಅವರು ತಿರುಪತಿ ವೆಂಕಟರಮಣ, ಏಡುಕೊಂಡಲವಾಡ... ಎಂದು ಮನಸ್ಸಿನಲ್ಲಿಯೇ ಪ್ರಾರ್ಥಿಸುತ್ತಾ, ಎಂದಿನ ಶೈಲಿಯಲ್ಲಿ ಕೈಮುಗಿದು, ಸಾರ್, ನಾನು ನಾನ್‌ವೆಜ್ ತಿನ್ನಾಕಿಲ್ಲ. ತುಮಕೂರಿಗೆ ಅರ್ಜೆಂಟ್ ಹೋಗ್ಬೇಕು ಎಂದು ಅಲ್ಲಿಂದ ಪೇರಿಕಿತ್ತರು. ರಿಗಾಲಿಸ್‌ನಲ್ಲಿ ಮಾಜಿ ಮೇಯರ್ ವಾಸು ಅವರು ಏರ್ಪಡಿಸಿದ್ದ ತಮ್ಮ ಸುದ್ದಿಗೋಷ್ಠಿಗೆ ಆಗಮಿಸಿದ ಮುನಿಯಪ್ಪ ಅವರು, ಅಲ್ಲಿ ತಾಜಾ ಹಣ್ಣಿನ ತುಂಡುಗಳು, ದೋಸೆ ತಿಂದು, ಬೋರ್ನವಿಟಾ ಕುಡಿದು ಬ್ರೇಕ್‌ಫಾಸ್ಟ್ ಮುಗಿಸಿದರು!

-ನಂಬಿರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.