ಅಂಕಣಗಳು

ನೆಮ್ಮದಿ ಎಂಬುದೂ ಖರೀದಿಗೆ ಸಿಗುವಂತಿದ್ದರೆ...

Published On :

ಮೊನ್ನೆ ಆಗಷ್ಟೇ ಎದ್ದು ಕಣ್ಣುಜ್ಜಿಕೊಳ್ಳುತ್ತಿದ್ದೆ. ಆಗಲೇ ಫೋನ್ ರಿಂಗಾಯಿತು. ಕಣ್ಮುಚ್ಚಿಕೊಂಡೇ 'ಹಲೋ' ಎಂದೆ. ಈ ಮಾತಿನ ಮಧ್ಯೆಯೇ ಒಮ್ಮೆ ಸುಧೀರ್ಘವಾಗಿ ಆಕಳಿಸಿದೆ. ಅದು ಗೊತ್ತಾಯಿತೇನೋ: ಆ ತುದಿಯಲ್ಲಿದ್ದಾಕೆ ಕೀಟಲೆಯ ಧ್ವನಿಯಲ್ಲಿ ಕೇಳಿದರು: 'ಓ... ಮಹಾರಾಣಿಯವರು ಇನ್ನೂ ನಿದ್ರೆ ಮಾಡ್ತಾ ಇದೀರೋ? ನೀವು ಎಷ್ಟು ಗಂಟೆಗೆ ಫ್ರೀ ಇರ್ತೀರಿ ಅಂತ ತಿಳಿಯಬಹುದೋ? ಇವತ್ತು ಹೇಗಿದ್ರೂ ಈದ್‌ಮಿಲಾದ್ ಪ್ರಯುಕ್ತ ನಿಮ್ಗೆ ರಜೆ ಇದೆ ತಾನೆ? ಏನೂ ಪ್ರೋಗ್ರಾಂ ಇಲ್ಲ ಅನ್ನುವುದಾದ್ರೆ ನನಗೆ ಕಂಪನಿ ಕೊಡಲು ಸಾಧ್ಯವೇ?'
ಆಕೆ 'ಮಹಾರಾಣಿಯವರು' ಎಂದು ರಾಗವಾಗಿ ಹೇಳಿದ ತಕ್ಷಣವೇ ಅರ್ಥವಾಗಿ ಹೋಯಿತು. ಫೋನ್ ಮಾಡಿರುವುದು ನನ್ನ ಕಾಲೇಜು ದಿನಗಳ ಗೆಳತಿ ಅರುಣ. ಆಕೆ, ರಾಮನಗರಕ್ಕೆ ಸಮೀಪದ ಹಳ್ಳಿಯೊಂದರಲ್ಲಿ ಶಾಲಾ ಶಿಕ್ಷಕಿ. ಆಕೆಯ ಗಂಡನಿಗೂ ಮೇಷ್ಟ್ರ್ರ ಕೆಲಸ. ನನ್ನ ಕಂಪನಿ ಕೇಳ್ತಿರೋದು ನೋಡಿದ್ರೆ ಬಹುಶಃ ಒಬ್ಬಳೇ ಬಂದಿರಬೇಕು ಅನ್ನಿಸ್ತು. 'ಖಂಡಿತ ಕಣೆ. ನಂಗೆ ರಜೆಯಿದೆ. ಫ್ರೀ ಇದೀನಿ. ಹನ್ನೊಂದು ಗಂಟೆಗೆ ಮೆಜೆಸ್ಟಿಕ್‌ನ ವೋಲ್ವೋ ಬಸ್‌ಸ್ಟಾಪ್‌ಗೆ ಬರ್ತೇನೆ. ಆಮೇಲೆ ನೀನು ಹೇಗಂತಿಯೋ ಹಾಗೆ ಮಾಡೋಣ' ಎಂದೆ. ಅವಳಿಗೆ ನನ್ನ ಮಾತಿಂದ ತುಂಬಾ ಖುಷಿಯಾಯಿತೇನೋ; ಎರಡೆರಡು ಬಾರಿ ಥ್ಯಾಂಕ್ಯೂ, ಥ್ಯಾಂಕ್ಯೂ ಎನ್ನುತ್ತಾ ಫೋನ್ ಕಟ್ ಮಾಡಿದಳು. ಮೊದಲೇ ಹೇಳಿದ ಹಾಗೆ ಅರುಣಾ ನನ್ನ ಸಹಪಾಠಿ. ಆಕೆಗೆ ಕಿರಣಾ ಎಂಬ ತಂಗಿಯಿದ್ದಳು. ಅವರ ಮನೆಗೆ ಅರುಣ -ಕಿರಣ ಎಂದೇ ಹೆಸರಿತ್ತು. ಆಗೊಮ್ಮೆ ಈಗೊಮ್ಮೆ ಮಾತಿನ ಸಂದರ್ಭದಲ್ಲಿ, ದೇವರು ನಮಗೆ ಒಂದು ಗಂಡು ಮಗು ಕೊಡದೆ ಅನ್ಯಾಯ ಮಾಡಿಬಿಟ್ಟ ಎಂದು ಅರುಣಾಳ ತಾಯಿ ದೂರು ಹೇಳಿಕೊಳ್ಳುತ್ತಿದ್ದರು. ಅಷ್ಟಕ್ಕೇ ಸುಮ್ಮನಾಗದೆ-'ದೇವರು ಇಂಥಾ ಸೌಂದರ್ಯವನ್ನು ನಮ್ಮ ಮಕ್ಕಳಿಗೆ ಯಾಕಾದ್ರೂ ಕೊಟ್ಟ ಅನಿಸುತ್ತೆ. ಸೌಂದರ್ಯವೇ ಇವರಿಗೆ ಮುಳುವಾಗದಿದ್ರೆ ಸಾಕು' ಎನ್ನುತ್ತಿದ್ದರು.
ಆಕೆಯ ಹಳಹಳಿಕೆಗೆ ಕಾರಣವಿತ್ತು. ಅರುಣಾ-ಕಿರಣ ಇಬ್ಬರೂ ಅಪ್ರತಿಮ ಸುಂದರಿಯಾಗಿದ್ದರು. ಅವರನ್ನು ಮಾತಾಡಿಸಲು, ಪ್ರೀತಿಸಲು ಹಾತೊರೆಯುತ್ತಿದ್ದ ಹುಡುಗರಿಗೆ ಲೆಕ್ಕವಿರಲಿಲ್ಲ. ಆದರೆ ಈ ದಿಟ್ಟೆಯರು ಮುಖಕ್ಕೆ ಹೊಡೆದಂತೆ- 'ಈ ಪ್ರೀತಿ ಪ್ರೇಮ ಅನ್ನೋದ್ರಲ್ಲಿ ನಮಗೆ ನಂಬಿಕೆಯಿಲ್ಲ. ನಾವು ಕಾಲೇಜಿಗೆ ಬಂದಿರೋದು ಓದಲಿಕ್ಕೆ. ದಯವಿಟ್ಟು ಸುಮ್ನೇ ತೊಂದ್ರೆ ಕೊಡಬೇಡಿ' ಎಂದುಬಿಟ್ಟಿದ್ದರು.  ಪದವಿ ಮುಗಿಸಿದ್ದ ಮರುವರ್ಷವೇ ಬಿ.ಎಡ್ ಮಾಡಿಕೊಂಡ ಅರುಣಾ, ಸಹೋದ್ಯೋಗಿಯನ್ನೇ ಮದುವೆಯಾದಳು. ಏನೇ ಇದೂ, ಆದರ್ಶದ ಹಿಂದೆ ಬಿದ್ದಿದ್ದೀಯ ಎಂದಿದ್ದಕ್ಕೆ 'ಹೌದು ' ಎಂದಿದ್ದಳು. ನಂತರ -'ಇರುವಷ್ಟು ದಿನ ಖುಷಿಯಿಂದ, ನೆಮ್ಮದಿಯಿಂದ ಇರಬೇಕು ಅಂತ ನನ್ನಾಸೆ. ನಾವಿಬ್ರು ದುಡೀತೇವೆ. ನೆಮ್ಮದಿಯ ಜೀವನಕ್ಕೆ ಅಷ್ಟು ಸಾಕು. ಮುಂದೆ ಮಕ್ಕಳಾದ ಮೇಲೆ ಉಳಿತಾಯದ ಬಗ್ಗೆ ಯೋಚನೆ ಮಾಡಿದ್ರಾಯ್ತು' ಎಂದಿದ್ದಳು.
ಒಂದು ವರ್ಷದ ನಂತರ ಕಿರಣಳ ಮದುವೆಯೂ ಆಯಿತು. ತಂಗಿ, ಅಕ್ಕನಿಗೆ ತದ್ವಿರುದ್ಧ ಎಂಬಂತಿದ್ದಳು. ಆದರ್ಶಗಳಿಂದ ಹೊಟ್ಟೆ ತುಂಬುವುದಿಲ್ಲ ಎಂದು ವಾದಿಸಿ, ಬೆಂಗಳೂರಿನಲ್ಲಿ ಐದು ಬಂಗಲೆ ಹೊಂದಿದ್ದ ರಿಯಲ್ ಎಸ್ಟೇಟ್ ಮಾಲೀಕರ ಮಗನ ಕೈ ಹಿಡಿದಿದ್ದಳು. ಮದುವೆಯ ನಂತರ ಒಂದೆರಡು ಬಾರಿ ಹಡಗಿನಂಥ ಕಾರ್‌ನಲ್ಲಿ ಬಂದು ಹೋದಳು.
ಮೆಜೆಸ್ಟಿಕ್‌ನಲ್ಲಿ ಅರುಣಾ ಸಿಕ್ಕಿದ ತಕ್ಷಣ ಕೇಳಿದೆ: 'ನಿನ್ನ ತಂಗಿ ಹೇಗಿದ್ದಾಳೆ?' 'ಈಗ ಹೋಗ್ತಾ ಇರೋದೇ ಅವರ ಮನೆಗೆ. ನೀನೂ ಜೊತೆಗಿದ್ರೆ ಒಳ್ಳೇ ಕಂಪನಿ ಅಂದ್ಕೊಂಡೇ ಕರೆದದ್ದು' ಎಂದಳು. ಆಟೋದವರಿಗಿಂತ ಈ ವೋಲ್ವೋ ಬಸ್ ಪರವಾಗಿಲ್ಲ ಕಣೇ ಎಂದು ಸರ್ಟಿಫಿಕೇಟ್ ಕೊಟ್ಟಳು. ಕೋರಮಂಗಲದಲ್ಲಿ ಆಟೋ ಹಿಡಿದು ಯಾವುದೋ ಅಡ್ರೆಸ್ ಹೇಳಿದಳು. ಐದು ನಿಮಿಷದ ನಂತರ ಆಟೋದವನು ಒಂದು ಬಂಗಲೆಯ ಮುಂದೆ ಇಳಿಸಿದ. ಸಿನಿಮಾದಲ್ಲಿ ಕಾಣ್ತೀವಲ್ಲ, ಅಷ್ಟು ಚೆಂದಕ್ಕಿತ್ತು ಮನೆ. ಪ್ರತಿಯೊಂದು ಮೂಲೆಯೂ ಅಲ್ಲಿನ ಶ್ರೀಮಂತಿಕೆಗೆ ಸಾಕ್ಷಿ ಹೇಳುತ್ತಿತ್ತು. ವಿಪರ್ಯಾಸವೇನು ಗೊತ್ತೆ? ಅರುಣಾ ಹೋದಾಗ ಆಕೆಯ ತಂಗಿಯನ್ನು ಬಿಟ್ಟರೆ, ಮನೆಯಲ್ಲಿದ್ದ ಬೇರೆಯವರಿಗೆ ದೊಡ್ಡ ಖುಷಿಯಾದಂತೆ ಕಾಣಲಿಲ್ಲ. ಮಧ್ಯಾಹ್ನ ಊಟ ಮುಗಿಸಿ, ಸಣ್ಣದೊಂದು ನಿದ್ರೆ ತೆಗೆದು ಸುಮ್ಮನೆ ತಿರುಗಾಡಿ ಬರೋಣವೆಂದು ವಾಕ್ ಹೊರಟೆವು. ಪಾರ್ಕ್‌ನ ಒಂದು ಮೂಲೆಯಲ್ಲಿ ಕೂತ ಅರುಣಾ, ತಂಗಿಯ ಗಲ್ಲ ಹಿಡಿದು-'ಹೇಗಿದೀಯ? ಏನೂ ತೊಂದರೆ ಇಲ್ಲ ತಾನೆ?' ಎಂದಳು. ಇಂಥ ಮಾತಿಗೇ ಕಾದಿದ್ದವಳಂತೆ ಕಿರಣ ಹೇಳಿದಳು: 'ಅಕ್ಕಾ, ಶ್ರೀಮಂತಿಕೆಯ ಬೆನ್ನ ಹಿಂದೆ ಬಿದ್ದು ನಾನು ತಪ್ಪು ಮಾಡಿಬಿಟ್ಟೆ. ರಿಯಲ್ ಎಸ್ಟೇಟ್ ಬಿಜಿನೆಸ್ ಅಂದ್ರೆ ಈಗ ಸಾವಿನೊಂದಿಗೆ ಸರಸ ಎಂಬಂತಾಗಿದೆ. ನಮ್ಮ ಮನೆಯವರು ಪೊಲೀಸರು ಹಾಗೂ ಬಾಡಿಗಾರ್ಡ್‌ಗಳ ರಕ್ಷಣೆಯ ಮಧ್ಯೆಯೇ ಬದುಕಬೇಕಾಗಿದೆ. ಯಾವುದೋ ಬೇರೊಂದು ಕಂಪನಿ ತುಂಬಾ ಲಾಭದಲ್ಲಿದೆ ಅಂತ ಗೊತ್ತಾದ್ರೆ ಸಾಕು, ನಮ್ಮ ಮನೆಯವರಿಗೆ ಬಿ.ಪಿ. ಜಾಸ್ತಿಯಾಗುತ್ತೆ. ಬೆಳಗ್ಗೆ ಮನೆಯಿಂದ ಹೊರಟವರು ರಾತ್ರಿ ಕ್ಷೇಮವಾಗಿ ಹಿಂದಿರುಗುವವರೆಗೂ ಯಾರಿಗೂ ನೆಮ್ಮದಿಯಿರೋದಿಲ್ಲ...
.... ಇನ್ನು ನನ್ನ ಪಾಡು ಹೇಳುವುದೇ ಬೇಡ. ಶ್ರೀಮಂತರ ಮನೆಯವಳು ಎಂದು ತೋರಿಸ್ಕೋಬೇಕಲ್ಲ ಅದೇ ಕಾರಣದಿಂದ ನಾನು ಯಾವಾಗ್ಲೂ ಐದಾರು ಒಡವೆಯನ್ನಾದ್ರೂ ಹಾಕಿರಲೇಬೇಕು. ಇಲ್ಲಾಂದ್ರೆ ಮನೆ ಮರ್ಯಾದೆ ಹಾಳಾಗುತ್ತೆ ಎಂದು ಅತ್ತೆ, ಮಾವ, ಗಂಡ ರೇಗಾಡ್ತಾರೆ. ನಾನು ನಿಮ್ಮ ಹಾಗೆ ಆಟೋದಲ್ಲೋ, ಬಸ್‌ನಲ್ಲೋ, ಪಿಕ್ಚರಿಗೆ, ನೆಂಟರ ಮನೆಗೆ ಹೋಗುವ ಹಾಗಿಲ್ಲ. ಹೋದ್ರೆ ನಮಗೆ ಆಗದವರು ಏನಾದ್ರೂ ಮಾಡಿಬಿಡ್ತಾರೆ ಅಂತ ಹೆದರಿಕೆ. ಬದುಕಿಗೆ ಏನೇನು ಬೇಕೋ ಅದನ್ನೆಲ್ಲ ತಗೊಂಡಿದೀವಿ. ಆತ್ಮರಕ್ಷಣೆಗೆ ಅಂತ ಪಿಸ್ತೂಲನ್ನು ಇಟ್ಕೊಂಡಿದೀವಿ. ಆದರೆ, ನೆಮ್ಮದಿ ಅಂತಾರಲ್ಲ; ಅದನ್ನು ಕೊಂಡುಕೊಳ್ಳಲು ಆಗಲಿಲ್ಲ' ಎನ್ನುತ್ತಾ ಅಳಲು ಶುರು ಮಾಡಿದಳು.
ನೆಮ್ಮದಿ ಎಂಬುದೂ ಒಂದು ವಸ್ತುವಾಗಿದ್ದಿದ್ದರೆ, ಅದೂ ಅಂಗಡಿಗಳಲ್ಲಿ ಖರೀದಿಗೆ ಸಿಗುವಂತಿದ್ದರೆ...ಎಂದ ಕಿರಣಳ ಮಾತು ನಮ್ಮನ್ನು ಇನ್ನಿಲ್ಲದಂತೆ ಅಲುಗಾಡಿಸಿಬಿಟ್ಟವು. ಆಕೆಗೆ ಹೇಗೋ ಸಮಾಧಾನ ಹೇಳಿ ಎದ್ದುಬಂದೆವು.

-ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.