ಏನೂ ಮಾತಾಡ್ತಾ ಇಲ್ವಾ? ಹಾಗಾದ್ರೆ ಅವರು ಇವರೇ!
ತಿಕ್ಕಲುತನ ಯಾರೊಬ್ಬರ ಸ್ವತ್ತಲ್ಲ. ಯಾರು ಬೇಕಾದರೂ ಅದರ ವಾರಸುದಾರರಾಗಬಹುದು. ಮೂರ್ಖರು, ದಡ್ಡರು, ಪೆದ್ದರು ಮಾತ್ರ ತಿಕ್ಕಲು ತಿಕ್ಕಲಾಗಿ ವರ್ತಿಸುತ್ತಾರೆ ಎಂದು ಭಾವಿಸಬೇಕಿಲ್ಲ. ಗಣ್ಯ ವ್ಯಕ್ತಿಗಳು, ಉನ್ನತ ಸ್ಥಾನದಲ್ಲಿರುವವರು ಸಹ ತಿಕ್ಕಲುತಿಕ್ಕಲಾಗಿ ಮಾತಾಡಬಹುದು. ಅಮೆರಿಕದ ಅಧ್ಯಕ್ಷ ಗೆರಾಲ್ಡ್ ಫೋರ್ಡ್ ಅವರು ಚುನಾವಣೆ ಪ್ರಚಾರ ಸಂದರ್ಭದಲ್ಲಿ, 'ಅಮೆರಿಕದುದ್ದಕ್ಕೂ ನಾನು ಸಂಚಾರ ಮಾಡಿದಾಗ ನನಗೆ ಕಂಡು ಬಂದಿದ್ದೇನೆಂದರೆ, ಎಲ್ಲೆಡೆಯೂ ಅಮೆರಿಕನ್‌ರೇ ಇದ್ದಾರೆ ಎಂಬುದು' ಎಂದು ಹೇಳಿ ತಮ್ಮ ತಿಕ್ಕಲುತನ ಪ್ರದರ್ಶಿಸಿದ ಪ್ರಸಂಗ ನೆನಪಾಗುತ್ತದೆ.
ಅಮೆರಿಕದ ಅಧ್ಯಕ್ಷ ಜಾರ್ಜ್‌ಬುಶ್‌ರ ತಿಕ್ಕಲು ಹೇಳಿಕೆಗಳು ಬಹಳ ಪ್ರಸಿದ್ಧವಾಗಿದ್ದವು. ಇಂಥ ಹೇಳಿಕೆಗಳನ್ನೆಲ್ಲ ಸೇರಿಸಿ ಪತ್ರಕರ್ತನೊಬ್ಬ ಒಂದು ಪುಸ್ತಕ ಹೊರತಂದಿದ್ದ. ಈ ಪುಸ್ತಕಕ್ಕೆ ಬುಶ್ ಅವರ ಪ್ರತಿಕ್ರಿಯೆ ಹೇಗಿದ್ದಿರಬಹುದು ಎಂದು ಕೇಳಿದ್ದಕ್ಕೆ ಇಂಟರ್‌ನೆಟ್‌ನಲ್ಲಿ ಐದು ಸಾವಿರಕ್ಕೂ ಹೆಚ್ಚು ತಮಾಷೆಯ ಅನಿಸಿಕೆಗಳು ಹರಿದು ಬಂದಿದ್ದವು. 'ಒಂದು ವೇಳೆ ಇಲ್ಲಿನ ಹೇಳಿಕೆಗಳನ್ನೆಲ್ಲವನ್ನೂ ನಾನೇ ಹೇಳಿದ್ದರೆ ಖಂಡಿತವಾಗಿಯೂ ಈ ಮಾತುಗಳನ್ನು ಹೇಳಿದವನು ನಾನೇ ಎಂದು ಭಾವಿಸಬಹುದು' ಎಂಬ ಪ್ರತಿಕ್ರಿಯೆ ಪ್ರಶಂಸೆಗೆ ಪಾತ್ರವಾಗಿತ್ತು.
ಇದೇ ಬುಶ್ ಒಮ್ಮೆ ಹೇಳಿದ್ದರು-
'I have Opinions of my own -strong opinions- but I always don't agree with them.' ಅಮೆರಿಕದ ವಾಷಿಂಗ್‌ಟನ್ ಡಿ.ಸಿ. ನಗರದ ಮೇಯರ್ ಆಗಿದ್ದ ಮೆರಿಯನ್ ಬ್ಯಾರಿ ಹೇಳಿದ ಮಾತು ಅಲ್ಲಿನ ಪತ್ರಿಕೆಗಳಲ್ಲಿ ತೀವ್ರ ಟೀಕೆ, ಗೇಲಿಗೆ ಕಾರಣವಾಗಿತ್ತು. ಅವರು ಹೇಳಿದ್ದರು- If you take out the killings, Washington actually has a very low crime rate.(ಕೊಲೆ ಪ್ರಕರಣಗಳನ್ನು ಹೊರತುಪಡಿಸಿದರೆ, ವಾಷಿಂಗ್‌ಟನ್‌ನಲ್ಲಿ ಅಪರಾಧ ಪ್ರಮಾಣ ಬಹಳ ಕಡಿಮೆ.)
ಅಮೆರಿಕದ ಅಧ್ಯಕ್ಷರಾಗಿದ್ದ ಲಿಂಡನ್ ಜಾನ್ಸನ್‌ಗೆ ಪತ್ರಕರ್ತರ ತಲೆ ಕಂಡರೆ ಆಗುತ್ತಿರಲಿಲ್ಲ. ಅಧ್ಯಕ್ಷರಾಗಿ ಒಂದು ವರ್ಷವಾದರೂ ಅವರು ಪತ್ರಕರ್ತರನ್ನು ವೈಟ್‌ಹೌಸ್‌ಗೆ ಕರೆದು ಸಾಂಪ್ರದಾಯಿಕ ಪಾರ್ಟಿ ಕೊಟ್ಟಿರಲಿಲ್ಲ. ಒಮ್ಮೆ ಲಿಂಡನ್ ಜಾನ್ಸನ್ ಅವರ ಕಾರ್ಯದರ್ಶಿ, 'ಸಾರ್, ಅದೆಲ್ಲ ಸರಿ. ನಿಮಗೆ ಪತ್ರಕರ್ತರನ್ನು ಕಂಡರೆ ಯಾಕೆ ಕೋಪ? ಯಾಕೆ ಅವರನ್ನು ಸದಾ ದೂರವಿಡುತ್ತೀರಿ?' ಎಂದು ಕೇಳಿದ್ದಕ್ಕೆ ಜಾನ್ಸನ್ ಹೇಳಿದರು-'ಮೊದ ಮೊದಲು ನಾನು ಒಂದು ಹೇಳಿದರೆ ಅವರು ಇನ್ನೊಂದು ಬರೆಯುತ್ತಿದ್ದರು. ಆದರೆ ಇತ್ತೀಚೆಗೆ they write what I say and not what I mean'
ಇವರೆಲ್ಲರಿಗೆ ಹೋಲಿಸಿದರೆ ನಮ್ಮ ಪ್ರಧಾನಿ ಡಾ. ಮನಮೋಹನ್‌ಸಿಂಗ್ ಅವರೇ ವಾಸಿ. ಕಾರಣ, ಅವರು ಮಾತನ್ನೇ ಆಡುವುದಿಲ್ಲ. ಹೀಗಾಗಿ ಅವರಿಗೆ ತಿಕ್ಕಲುತನ ಪ್ರದರ್ಶಿಸಲು ಅವಕಾಶವೇ ಸಿಕ್ಕಿಲ್ಲ. ಆದರೂ ಒಮ್ಮೊಮ್ಮೆ ಹೀಗೆಯೂ ಆಗುತ್ತದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಕಾರ್ಯದರ್ಶಿ ಬಂದು 'ಸಾರ್, ನಿಮಗೆ ಯಾರೋ ಫೋನ್ ಮಾಡಿದ್ದಾರೆ, ಲೈನ್‌ನಲ್ಲಿ ಇದ್ದಾರೆ, ಆದರೆ ಮಾತಾಡುತ್ತಿಲ್ಲ' ಅಂದನಂತೆ. ಅದಕ್ಕೆ ಒಬಾಮ ಹೇಳಿದರಂತೆ -'ಹೌದಾ? ನಾನು ನಮಸ್ಕಾರ ತಿಳಿಸಿದ್ದೇನೆ ಅಂತ ಹೇಳು. ಏನು ಮಾತಾಡ್ತಾ ಇಲ್ಲ ಅಂದ್ರೆ ಅವರು ಭಾರತದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರೇ ಇರಬೇಕು.'
ದೇವರು ಬಂದ ಹಾಗೆ...
ಅವನೊಬ್ಬ ಕಳ್ಳ. ಸಿಕ್ಕವರನ್ನು ದೋಚುವುದೇ ಅವನ ಕಸುಬಾಗಿತ್ತು. ಒಂದೆರಡು ಬಾರಿ ಜೈಲಿಗೂ ಹೋಗಿ ಬಂದಿದ್ದ. ಶ್ರೀಮಂತರು ಯಾರೆಂದು ಹುಷಾರಾಗಿ ಗಮನಿಸುವುದು, ಅವರ ಚಲನವಲನದ ಮೇಲೆ ನಿಗಾ ಇಡುವುದು, ಕಡೆಗೊಂದು ದಿನ ಪಕ್ಕಾ ಪ್ಲಾನ್ ಮಾಡಿಕೊಂಡು ಹೋಗಿ ಅವರನ್ನು ದೋಚುವುದೇ ಅವನ ಕಾಯಕವಾಗಿತ್ತು. ತಾನು ಹಿಡಿದಿರುವ ಹಾದಿ ಅನ್ಯಾಯದ್ದು ಎಂದು ಒಪ್ಪಲು ಅವನು ಸಿದ್ಧನಿರಲಿಲ್ಲ.
ಇಂಥ ನೀಚನ ಕಣ್ಣಿಗೆ ಆ ವೃದ್ಧ ದಂಪತಿ ಬಿದ್ದಿದ್ದು ತಿಂಗಳ ಹಿಂದೆ. ಅವರಿಬ್ಬರೂ ಸರ್ಕಾರಿ ನೌಕರಿಯಲ್ಲಿದ್ದವರು. ಅವರ ಮಕ್ಕಳು ವಿದೇಶದಲ್ಲಿದ್ದಾರೆ. ಗಂಡ-ಹೆಂಡತಿ ಬೆಳಗ್ಗೆಯೇ ವಾಕ್ ಹೋಗುತ್ತಾರೆ. ಮನೆಯಿಂದ ಪಾರ್ಕ್‌ಗೆ ಕಾರ್‌ನಲ್ಲಿ ಹೋಗಿ, ಅಲ್ಲಿಂದ ಮತ್ತೆ ಕಾರ್‌ನಲ್ಲಿ ವಾಪಸ್ ಬರುತ್ತಾರೆ. ಮರಳಿ ಬಂದು ಮನೆಯೊಳಕ್ಕೆ ಹೋದ ತಕ್ಷಣ, ಹಿಂದಿನಿಂದ ಮಿಂಚಿನಂತೆ ಒಳನುಗ್ಗಬೇಕು. ಚಾಕು ತೋರಿಸಿ ಹೆದರಿಸಬೇಕು. ಕೂಗಲು ಬಾಯ್ತೆರೆದರೆ ಎರಡೇಟು ಹಾಕಿದರೂ ಆಯಿತು. ನಂತರ ಆ ಮನೇಲಿರುವ ಎಲ್ಲವನ್ನೂ ಲೂಟಿ ಮಾಡಿ ಹೋಗಿ ಬಿಡಬೇಕು. ಒಂದಿಡೀ ವರ್ಷ ಕೂತು ತಿನ್ನಲು ಆಗುವಷ್ಟು ಮೊತ್ತದ ಒಡವೆ, ಹಣ ಸಿಕ್ಕೇ ಸಿಗುತ್ತದೆ ಎಂದು ಆತ ಲೆಕ್ಕ ಹಾಕಿದ್ದ.
ಅಂದುಕೊಂಡ ದಿನ ಬಂದೇ ಬಂತು, ಈ ಕಳ್ಳ ಬೇಗನೇ ಬಂದು ಕಾಂಪೌಂಡಿನ ಹಿಂದೆ ಅಡಗಿ ಕೂತ. ಆ ದಂಪತಿ ಬಾಗಿಲು ತೆರೆದ ತಕ್ಷಣ ಅವರ ಹಿಂದೆಯೇ ಚಿರತೆ ವೇಗದಲ್ಲಿ ಹೇಗೆ ನುಗ್ಗಬೇಕು, ಅವರನ್ನು ಹೇಗೆ ಹೆದರಿಸಬೇಕು, ತಿರುಗಿ ಮಾತಾಡಿದರೆ ಹೇಗೆ ಹೊಡೆಯಬೇಕು ಎಂದೆಲ್ಲಾ ಲೆಕ್ಕ ಹಾಕುತ್ತಿದ್ದ. ಆಗಲೇ ವಾಕಿಂಗ್ ಮುಗಿಸಿಕೊಂಡು ಆ ದಂಪತಿ ಬಂದರು. ಮನೆಯ ಮುಂದೆ ಕಾರ್ ನಿಂತ ಮರುಕ್ಷಣವೇ ಅನಾಹುತವಾಗಿ ಹೋಯಿತು. ಡ್ರೈವರ್ ಸೀಟಿನಲ್ಲಿದ್ದ ಅಜ್ಜ ಎದೆ ಹಿಡಿದುಕೊಂಡು ಕುಸಿದು ಬಿದ್ದ. ಆತನಿಗೆ ಹೃದಯಾಘಾತವಾಗಿತ್ತು.
ಈ ಅನಿರೀಕ್ಷಿತ ಘಟನೆಯಿಂದ ವೃದ್ಧೆ ಕಂಗಾಲಾದಳು. ಹೆಲ್ಪ್, ಹೆಲ್ಪ್, ಕಾಪಾಡಿ, ಕಾಪಾಡೀ ಎಂದು ಚೀರಿಕೊಂಡಳು. ಆಗ ತಾನೆ ಬೆಳಕಾಗುತ್ತಿತ್ತು. ಹೆಚ್ಚಿನವರು ಎದ್ದಿರಲಿಲ್ಲ. ಜೊತೆಗೆ ವಯಸ್ಸಾಗಿದ್ದ ಕಾರಣದಿಂದ ಆಕೆಯ ಧ್ವನಿ ಹೆಚ್ಚಿನವರಿಗೆ ಕೇಳಿಸಲೂ ಇಲ್ಲ. ಕಾಂಪೌಂಡಿನ ಮರೆಯಲ್ಲಿ ಅಡಗಿದ್ದ ಕಳ್ಳನಿಗೆ ಆಕೆಯ ಕೂಗು ಕೇಳಿಸಿತು. ಬೇರೊಂದು ದಿಕ್ಕಿಗೆ ನಿಂತು ಆಕೆ ಹೆಲ್ಪ್ ಹೆಲ್ಪ್ ಅನ್ನುತ್ತಿದ್ದಾಗಲೇ ಈತ ನುಗ್ಗಿ ಬಂದ. ಆ ಅಜ್ಜನನ್ನು ಡ್ರೈವರ್ ಸೀಟಿನಿಂದ ಕೆಳಗಿಳಿಸಿ, ಅವನಿಗೆ ಬಾಯಿಂದ ಉಸಿರು ಕೊಟ್ಟ. ಎದೆಯ ಭಾಗವನ್ನು ಮೆಲ್ಲಮೆಲ್ಲನೆ ಅದುಮಿದ. ವೃದ್ಧೆಯ ಮೊಬೈಲ್ ಪಡೆದು ಹತ್ತಿರದ ಆಸ್ಪತ್ರೆಗೆ ತಕ್ಷಣವೇ ಸುದ್ದಿ ತಿಳಿಸಿದ.
ಐದೇ ನಿಮಿಷದಲ್ಲಿ ಆಂಬುಲೆನ್ಸ್ ಬಂತು. ಅದರ ಸದ್ದು ಕೇಳಿದ್ದೇ ನೆರೆಹೊರೆಯವರ ಕಿವಿಗಳು ನೆಟ್ಟಗಾದವು. ಎಲ್ಲರೂ ಬಂದರು. ಅಜ್ಜ, ಆಗಲೂ ಅರೆಪ್ರಜ್ಞಾವಸ್ಥೆಯಲ್ಲಿದ್ದ. ಆತನನ್ನು ಪರೀಕ್ಷಿಸಿದ ವೈದ್ಯರು, ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದರಿಂದ ಜೀವಕ್ಕೆ ತೊಂದರೆಯಿಲ್ಲ ಅಂದರು. ನೆರೆಹೊರೆಯವರೆಲ್ಲ ಕುತೂಹಲದಿಂದ ನೋಡುತ್ತಿದ್ದಾಗ, ಆ ವೃದ್ಧೆ ಕಳ್ಳನ ಕಡೆ ಕೈ ಮಾಡಿ ತೋರಿಸುತ್ತಾ ಹೇಳಿದಳು: ಈತ ನಮ್ಮ ಪಾಲಿಗೆ ದೇವರಂತೆ ಬಂದ. ಪ್ರಾಥಮಿಕ ಚಿಕಿತ್ಸೆ ನೀಡಿದ್ದು ಈತನೇ. ಡಾಕ್ಟರಿಗೆ ವಿಷಯ ತಿಳಿಸಿದ್ದು ಈತನೇ. ದೇವರೇ ಮನುಷ್ಯನ ರೂಪದಲ್ಲಿ ಬಂದಂತಾಗಿದೆ' ಎಂದೆಲ್ಲಾ ಗುಣಗಾನ ಮಾಡಿದಳು. ನಂತರ ಈ ಕಳ್ಳನ ಕಡೆ ತಿರುಗಿ, ಮನೆಯ ಮಗನಂತೆ ಬಂದು ಯಜಮಾನರ ಪ್ರಾಣ ಉಳಿಸಿದೆಯಪ್ಪ,
ಅದಕ್ಕೆ ಪ್ರತಿಯಾಗಿ ಏನಾದರೂ ಬಹುಮಾನ ಕೊಡ್ತೇನೆ. ಮನೆಯೊಳಗೆ ಬಾ. ಅಲ್ಲಿರುವ ವಸ್ತುವಿನ ಪೈಕಿ ನಿಂಗೆ ಯಾವುದು ಇಷ್ಟವೋ ಅದನ್ನು ತಗೊಂಡು ಹೋಗು. ಇವತ್ತಿನಿಂದ ನೀನು ನಮ್ಮ ಬಂಧು. ಆಗಾಗ್ಗೆ ಮನೆಗೆ ಬರ್ತಾ ಇರಬೇಕು ನೀನು' ಅಂದಳು.
ಆ ವೃದ್ಧೆಯ ಮಾತುಗಳಲ್ಲಿದ್ದ ಅಂತಃಕರಣ ಕಂಡು ಕಳ್ಳನಿಗೆ ಕಣ್ತುಂಬಿ ಬಂತು.
ಆಕೆ ಆತನನ್ನು ತನ್ನ ದತ್ತುಪುತ್ರನನ್ನಾಗಿ ಸ್ವೀಕರಿಸಿ ತನ್ನೆಲ್ಲ ಆಸ್ತಿಯನ್ನು ಅವನಿಗೇ ಬರೆದಳು. ಹಣೆಬರಹದಲ್ಲಿ ನಿಮ್ಮ ಹೆಸರು ಬರೆದಿದ್ದರೆ, ನೀವು ದೋಚಬೇಕಾಗಿಲ್ಲ. ನಿಮಗೆ ತೋಚದಿದ್ದರೂ ಒದ್ದು ಒಲಿದು ಬರುತ್ತದೆ.
ಸಂತೋಷದ ಕ್ಷಣಗಳೆಂದರೆ...
ಅವನೊಬ್ಬ ಉದ್ಯಮಿ. ಆಡು ಮುಟ್ಟದ ಸೊಪ್ಪಿಲ್ಲ ಅನ್ನುತ್ತಾರಲ್ಲಾ; ಅದೇ ಗುಂಪಿಗೆ ಸೇರಿದ ಆಸಾಮಿ. ಆತ ಕೈ ಹಾಕದ ಕ್ಷೇತ್ರವೇ ಇರಲಿಲ್ಲ. ಪ್ರತಿ ಸಂದರ್ಭದಲ್ಲೂ ಆತ ಗೆದ್ದಿದ್ದ. ಒಂದೊಂದು ಯಶಸ್ಸು ಜೊತೆಯಾದಂತೆಲ್ಲ ಉದ್ಯಮಿಗಳಿಗೆ ಟೆನ್ಶನ್ ಕೂಡ ಹೆಚ್ಚುತ್ತದೆ. ಆದರೆ, ಈ ಪುಣ್ಯಾತ್ಮನಿಗೆ ಟೆನ್ಶನ್ ಎಂಬ ಪದವೇ ಗೊತ್ತಿರಲಿಲ್ಲ. ಆತ ಯಾವಾಗಲೂ ನಿರಾಳವಾಗಿ ಇರುತ್ತಿದ್ದ. ದೇಶದ ಎಲ್ಲ ಮಹೋನ್ನತ ಪ್ರಶಸ್ತಿಗಳೂ ಅವನನ್ನು ಹುಡುಕಿಕೊಂಡು ಬಂದಿದ್ದವು.
ಆತ 75ನೇ ಹುಟ್ಟುಹಬ್ಬ ಆಚರಿಸಿಕೊಂಡಾಗ, ಚಾನೆಲ್‌ನ ವರದಿಗಾರನೊಬ್ಬ ಆತನನ್ನು ಪ್ರಶ್ನಿಸಿದ: 'ಸರ್, ಇಷ್ಟು ವರ್ಷಗಳ ಬದುಕಲ್ಲಿ ನಿಮ್ಮ ಸಂತೋಷದ ಕ್ಷಣಗಳೆಂದರೆ ಯಾವುವು? ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪಡೆದದ್ದು, ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ಆಟಗಾರರನ್ನು ಭೇಟಿ ಮಾಡಿದ್ದು... ಇಂಥ ಸಂದರ್ಭಗಳ ಬಗ್ಗೆ ಆತ ಹೇಳಬಹುದೆಂದು ವರದಿಗಾರ ನಿರೀಕ್ಷಿಸಿದ್ದ. ಆದರೆ, ಆ ಉದ್ಯಮಿ ಸಂಕೋಚವಿಲ್ಲದೆ ಹೇಳಿದ: ಚಿಕ್ಕಂದಿನಿಂದಲೇ ಅಪ್ಪನ ಹೆಗಲ ಮೇಲೆ ಕೂತು ಪೇಟೆಗೆ ಹೋಗಿದ್ದು, ಮೊದಲ ಬಾರಿ ಬಸ್‌ನಲ್ಲಿ ಒಬ್ಬನೇ ನಗರಕ್ಕೆ ಬಂದದ್ದು, ಶಾಲೆಯ ಕ್ರೀಡಾಕೂಟದಲ್ಲಿ ಗೆದ್ದು ಬಹುಮಾನವಾಗಿ ಜಾಮಿಟ್ರಿ ಬಾಕ್ಸ್ ಗೆದ್ದದ್ದು... ನನ್ನ ಬದುಕಿನ ಸಂಭ್ರಮದ ಕ್ಷಣಗಳೆಂದರೆ ಇವೇ, ಇಂಥವೇ...
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

