ಡೆಲ್ಲಿ ಸರ್ಕಾರವನ್ನೇ ತೆಗಳುವುದು ತರವೇ?
ನೀವು ಏನ್‌ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!
ಕನ್ನಡಪ್ರಭದಲ್ಲಿ ಪ್ರಕಟವಾಗುತ್ತಿರುವ ಪ್ರತಾಪ್‌ಸಿಂಹ ಮತ್ತು ಸಂದೀಪ್ ಬಾಲಕೃಷ್ಣರ ಲೇಖನಗಳು ರಾಜಕಾರಣಿಗಳ ಸ್ವಾರ್ಥ ಮನೋಭಾವ, ದೇಶಕ್ಕಿಂತ ಪಕ್ಷ, ಪಕ್ಷಕ್ಕಿಂತ ಸ್ವಲಾಭ ದೊಡ್ಡದು ಎಂದು ಬಿಂಬಿಸುವಂತಹ ಹೀನ ಹೇಳಿಕೆಗಳು, ನಡತೆಗಳು ಗೊತ್ತಾಗುತ್ತಿವೆ. ಅವರ ಧೈರ್ಯದ ಬರವಣಿಗೆಗೆ ಜೈ-ಜೈ, ಕನ್ನಡಪ್ರಭಕ್ಕೂ ಜೈ.
ಕೆ.ಎಸ್. ಕೃಷ್ಣಮೂರ್ತಿ, ವಿ.ವಿ. ಮೊಹಲ್ಲ, ಮೈಸೂರು.
ಅಕ್ಷರಗಳ ಜೊತೆ ನಿಮ್ಮ ಆಟ ಕೆಲವು ಸಲ ಶಬ್ದ ಅಥವಾ ವಾಕ್ಯದ ಅರ್ಥವನ್ನೇ ಕೊಡುವುದಿಲ್ಲ ಅಥವಾ ನಾನು ಅರ್ಥಮಾಡಿಕೊಳ್ಳಲು ಅಸಮರ್ಥನಾಗಿದ್ದೇನೆ. ನಾನು ಕನ್ನಡ ಮಾಧ್ಯಮದಲ್ಲಿಯೇ 10ನೇ ತರಗತಿಯವರೆಗೆ ಓದಿದ್ದೇನೆ. ನಂತರದಲ್ಲಿ ನಾನು ಸಾಕಷ್ಟು ಸಾಹಿತಿಗಳ ಲೇಖನ, ಪುಸ್ತಕ ಓದಿದ್ದೇನೆ. ನೀವು ಪತ್ರಿಕೆಯ ಸಂಪಾದಕರಾದಾಗಿನಿಂದ ಅಕ್ಷರಗಳ ಕೂಡ ಆಟ ವಿಪರೀತ ಆಗಿದೆ ಎಂದು ನನ್ನ ಭಾವನೆ. ಇದು ತಪ್ಪಲ್ಲವಾದರೂ ಪತ್ರಿಕೆಯನ್ನು ಸರಾಗವಾಗಿ ಓದಲು ತೊಂದರೆಯಾಗುತ್ತಿದೆ. ಇಂದಿನ ಪತ್ರಿಕೆಯ ಮೊದಲ ಪುಟದಲ್ಲಿಯ ಶಬ್ದ 'ಫಿಲರಾಗ' ನನಗೆ ಅರ್ಥವೇ ಆಗಲಿಲ್ಲ. ಎ.ಆರ್. ಮಣಿಕಾಂತರ ಲೇಖನಗಳು ಅತ್ಯುತ್ತಮವಾಗಿದೆ. 'ಭಾವತೀರಯಾನ' ಎಂದರೇನು ನನಗೆ ಅರ್ಥವಾಗಿಲ್ಲ. ಅಕ್ಷರಗಳ ಕೂಡ ಆಟ ಬೇಡವೆಂತಲ್ಲ. ಆದರೆ ಶಬ್ದವೇ ಅರ್ಥವಾಗದಿದ್ದರೆ, ತಿಣುಕಿ ಅರ್ಥ ಮಾಡಿಕೊಳ್ಳಬೇಕೋ ಹೇಗೆ?
ಜಿ. ಗೋಪಾಲಕೃಷ್ಣ, ಕಂಪ್ಲಿ.
ಪಾಕಿಸ್ತಾನವನ್ನು ನಂಬಕೂಡದು. ಪ್ರತಿಕ್ಷಣ, ಪ್ರತಿದಿನ, ಇಪ್ಪತ್ತನಾಲ್ಕು ಗಂಟೆ, ವರ್ಷಪೂರ್ತಿ ನಾವು ಎಚ್ಚರಿಕೆಯಿಂದ ಸನ್ನದ್ಧರಾಗಿರಬೇಕು ಎಂದು ನಿವೃತ್ತ ಬ್ರಿಗೇಡಿಯರ್ ಐ.ಎನ್.ರೈಯವರ ಮನದಾಳದ ಅಭಿಪ್ರಾಯ ಸತ್ಯನಿಷ್ಠವಾದದ್ದು. (ಕನ್ನಡಪ್ರಭ ಜನವರಿ 20, 2012). ಕಳೆದ 66 ವರ್ಷದಿಂದ ನಮ್ಮ ಮೇಲೆ ದ್ವೇಷ ಸಾಧಿಸುತ್ತಾ, ನಮ್ಮ ಸರ್ವನಾಶವನ್ನು ಬಯಸುತ್ತಾ, ಆ ದಿಕ್ಕಿನಲ್ಲಿ ಕಾರ್ಯಪ್ರವೃತ್ತವಾಗಿರುವ ಪಾಕಿಸ್ತಾನದ ಜೊತೆ ಮಾತುಕತೆಗೆ ಭಾರತ ಸರ್ಕಾರ ಹಾತೊರೆಯುತ್ತಿರುವ ಪರಿ ನಿಜಕ್ಕೂ ದುರಂತ. ಈ ನಡೆ ನಮ್ಮ ವೀರಯೋಧರಿಗೆ ಅವಮಾನ ಮಾಡಿದಂತೆ. ದೇಶಕ್ಕಾಗಿ ಜೀವವನ್ನೇ ಸಮರ್ಪಿಸುತ್ತಿರುವ ವೀರಸೈನಿಕರನ್ನು ಸರ್ಕಾರ ಮತ್ತು ನಾಗರಿಕರು ನಡೆಸಿಕೊಳ್ಳುತ್ತಿರುವ ರೀತಿ, ಯಾವುದೇ ಸರ್ಕಾರ ಮತ್ತು ನಾಗರಿಕ ಸಮಾಜಕ್ಕೆ ತಕ್ಕುದಲ್ಲ. ದೇಶದ ಬೆನ್ನೆಲುಬು ಎನಿಸಿಕೊಂಡಿದ್ದ ರೈತನ ಬೆನ್ನುಮೂಳೆ ಮುರಿದಾಯಿತು. ಮುಂದಿನ ಸರದಿ ಸೈನಿಕರದ್ದು. ಸುತ್ತುವರಿದಿರುವ ಶತ್ರುಗಳನ್ನು ನಂಬಿ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸದಿರುವುದು ದೇಶದ ಭದ್ರತೆಯನ್ನು ಶಿಥಿಲಗೊಳಿಸುತ್ತದೆ. ರಕ್ಷಣೆಯೇ ಇಲ್ಲವೆಂದ ಮೇಲೆ ಉಳಿದೆಲ್ಲಾ ಸೌಲತ್ತುಗಳು ಇದ್ದರೂ ಪ್ರಯೋಜನವೇನು? ರಾಜಕೀಯ ನಾಯಕರುಗಳಿಗೆ ಜೈಕಾರ ಹಾಕುವುದನ್ನೂ, ಬುದ್ಧಿಜೀವಿಗಳೆನಿಸಿಕೊಂಡವರಿಗೆ ಪ್ರಶಸ್ತಿ, ಪಾರಿತೋಷಕಗಳನ್ನು ನೀಡುವುದನ್ನು ನಿಲ್ಲಿಸಿ "ಜೈ ಜವಾನ್, ಜೈ ಕಿಸಾನ್" ಎಂಬ ತತ್ವವನ್ನು ಅಕ್ಷರಶಃ ಜಾರಿಗೆ ತರುವುದು ಇಂದಿನ ತುರ್ತು ಅಗತ್ಯ. ಯಾಕೆಂದರೆ ದೇಶವನ್ನು ರಕ್ಷಿಸುವವರು ರಾಜಕಾರಣಿಗಳಲ್ಲ, ಬುದ್ಧಿಜೀವಿಗಳಲ್ಲ, ಬದಲಾಗಿ ಸೈನಿಕರು ಹಾಗೂ ರೈತರು.
ಕೆ.ಎಂ. ಲಿಂಗರಾಜು, ನಂ. 3031, 20ನೇ ಕ್ರಾಸ್, ನಂಜನಗೂಡು, ಮೊ. 99160 21365.
ಪದ್ಮನಾಭ್‌ರವರು ಬರೆಯುವ 'ಪಂಚ್‌ಮುಖಿ' ಕನ್ನಡ ನಂ.1. ಕಾರ್ಟೂನ್. ಇದನ್ನು ಆರ್.ಕೆ. ಲಕ್ಷ್ಮಣ್‌ರವರ ಕಾರ್ಟೂನ್‌ಗಳಿಗೆ ಹೋಲಿಸಬಹುದು. ಒಂದು ಪುಟದಲ್ಲಿ ಹೇಳುವುದನ್ನು ಒಂದು ಕಾರ್ಟೂನ್‌ನಲ್ಲಿ ಹೇಳುತ್ತಾರೆ. ಸ್ವಾಮಿ ಇಂಥ ಕಾರ್ಟೂನನ್ನು ದಾವಣಗೆರೆ ಎಡಿಷನ್‌ನಲ್ಲಿ ಒಮ್ಮೊಮ್ಮೆ 3ನೇ ಪುಟದಲ್ಲಿ ಹಾಕುತ್ತೀರಿ. ದಯ ಮಾಡಿ ಹೀಗೆ ಮಾಡಬೇಡಿ.
ಗುರು ಜಗಳೂರು, ಸೃಜನಬುಕ್‌ಹೌಸ್, ಹರಿಹರ.
ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ ಎಂಬುದನ್ನು ಮೊದಲಿಗೆ ಸ್ಪಷ್ಟಪಡಿಸುತ್ತೇನೆ ಮತ್ತು ನಿಮ್ಮ ಪತ್ರಿಕೆಯ ಖಾಯಂ ಓದುಗ ಮತ್ತು ನಿಮ್ಮ ಪತ್ರಿಕೆಯಲ್ಲಿ ಮೇಲೆ ಕಾಣಿಸಿದ ವಿಷಯದಲ್ಲಿ ಅತಿರೇಕವೆನಿಸುತ್ತಿರುವ ರೀತಿಯಲ್ಲಿ ಡೆಲ್ಲಿ ಸರ್ಕಾರವೊಂದನ್ನೇ ಗುರಿಯಾಗಿಸಿ ತೆಗಳುವ ರೀತಿಯನ್ನು ಗಮನಿಸಿ ತೀರಾ ಮುಜುಗರದಿಂದ ಈ ವಿಷಯವನ್ನು ಬರೆಯುತ್ತಿದ್ದೇನೆ. ಡೆಲ್ಲಿಯಲ್ಲಿ ಸಂಭವಿಸಿದ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಿಮ್ಮ ವರದಿಗಾರರು ಹಾಗೂ ಅಂಕಣಕಾರರ ಇದುವರೆಗಿನ ಪ್ರಕಟಿತ ವರದಿಗಳನ್ನು ನೋಡಿದಾಗ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರದಂತಹ ಪ್ರಕರಣಗಳು ಡೆಲ್ಲಿ ಸರ್ಕಾರದಲ್ಲಿ ಮಾತ್ರ ನಡೆಯಲು ಸಾಧ್ಯವೆಂದು ಹೇಳಿದಂತಿದೆ? ನಿಮ್ಮ ಪತ್ರಿಕೆಯಲ್ಲಿ ಇದುವರೆಗೆ ಪ್ರಕಟವಾಗಿರುವ ವರದಿಗಳ/ ಲೇಖನಗಳ ಮೂಲಕ ನೀವು ಇದನ್ನೇ ಹೇಳಲು ತಿಣುಕಾಡುತ್ತಾ ಇದ್ದೀರಿ. ಇಂತಹ ಪ್ರಕರಣಗಳು ಎಲ್ಲಾದರೂ ಜರುಗಿದ್ದು ಬೆಳಕಿಗೆ ಬಂದಲ್ಲಿ ಅದನ್ನು ಖಂಡಿಸುವವರ ಪೈಕಿ ನಾವೆಲ್ಲರೂ ಮೊದಲಿಗರೆಂಬುದು ನಿಮಗೆ ತಿಳಿದಿರಲಿ. ಇದರರ್ಥ ನಮಗೂ ಕೂಡಾ ಸಾಮಾಜಿಕ ಜವಾಬ್ದಾರಿ ಇದೆಯಲ್ಲವೇ?
- ರಾಘವೇಂದ್ರ ಪಿ. ಕುಲಕರ್ಣಿ, ದರಬಾರಗಲ್ಲಿ, ವಿಜಾಪುರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

