ಅಂಕಣಗಳು

ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಬಚಾವು ಮಾಡಿದ ಕಾಂಗ್ರೆಸ್!

Published On :

ಭಾರತೀಯ ಜನತಾ ಪಾರ್ಟಿ, ಕಾಂಗ್ರೆಸ್‌ಗೆ ಧನ್ಯವಾದ ಹೇಳಲೇಬೇಕು. ಇದಕ್ಕೆ ಕಾರಣ, ಕಾಂಗ್ರೆಸ್ ಪಕ್ಷ ನಿತಿನ್ ಗಡ್ಕರಿಯವರ ವ್ಯಾಪಾರ ಸಂಸ್ಥೆಗಳ ಮೇಲೆ ಮಾಡಿಸಿದ ಆದಾಯ ತೆರಿಗೆ ದಾಳಿ. ಒಂದು ವೇಳೆ ಈ ದಾಳಿ ನಡೆಯದಿದ್ದರೆ ಮುಂದೆ ಬಿಜೆಪಿ ಪಕ್ಕಾ ಹೊಡೆತ ತಿನ್ನುತ್ತಿತ್ತು!
ಗಡ್ಕರಿಯವರ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳೆಲ್ಲಾ ಸುಳ್ಳು ಎಂದು ಒಂದು ನಿಮಿಷ ಭಾವಿಸೋಣ. ಹಾಗಂತ ಅವರೇ ಅಧ್ಯಕ್ಷರ ಗಾದಿಯಲ್ಲಿ ಮುಂದುವರಿದಿದ್ದರೆ, ವರ್ಷವಿಡೀ ಅವರನ್ನು ಸಮರ್ಥಿಸಿಕೊಳ್ಳುತ್ತಾ ಕುಳಿತುಕೊಳ್ಳುವ ಅನಿವಾರ್ಯತೆ ಬಿಜೆಪಿಗೆ ಎದುರಾಗುತ್ತಿತ್ತು. ಮುಂದಿನ ಚುನಾವಣೆಯಲ್ಲಿ ಅದರ ಈ ನಡೆಯೇ ಸೋಲಿಗೆ ಪ್ರಮುಖ ಕಾರಣವಾಗುತ್ತಿತ್ತು.
ಬಿಜೆಪಿಗೆ ನಿಜವಾಗಲೂ ಟಾಂಗ್ ಕೊಡಬೇಕು ಎನ್ನುವುದೇ ಕಾಂಗ್ರೆಸ್‌ನ ಇರಾದೆಯಾಗಿದ್ದಿದ್ದರೆ, ಗಡ್ಕರಿ ಎರಡನೆಯ ಅವಧಿಗೂ ಆಯ್ಕೆಯಾದ ಕೆಲವು ದಿನಗಳ ನಂತರ, ತೆರಿಗೆ ಇಲಾಖೆಯಿಂದ ದಾಳಿ ಮಾಡಿಸಬಹುದಾಗಿತ್ತು. ಅದೃಷ್ಟವೆಂಬಂತೆ, ಕೊನೆಯ ಕ್ಷಣದಲ್ಲಿ ಬಿಜೆಪಿ ಬದುಕುಳಿದಿದೆ. ಒಂದು ವೇಳೆ ತೆರಿಗೆ ಇಲಾಖೆ ಇನ್ನು ಒಂದೆರಡು ದಿನ ಕಾದಿದ್ದರೆ, ಕಾಂಗ್ರೆಸ್‌ಗೆ ವರ್ಷ ಪೂರ್ತಿ ಬಿಜೆಪಿಯ ಮೇಲೆ ಹರಿಹಾಯಲು ಮತ್ತು ತನ್ನ ವೈಫಲ್ಯಗಳನ್ನೆಲ್ಲ ಮುಚ್ಚಿಡಲು ಒಂದು ಮಾರ್ಗ ಸಿಕ್ಕಂತಾಗುತ್ತಿತ್ತು.
ಪ್ರಸಕ್ತ ದಿನಗಳಲ್ಲಿ ಯಾರೂ ಕೂಡ 2ಜಿ, ಸಿಡಬ್ಲೂಜಿ, ಕಲ್ಲಿದ್ದಲು ಹಗರಣ ಅಥವಾ ವಾದ್ರಾಗೇಟ್ ಹಗರಣಗಳ ಬಗ್ಗೆ ಮಾತನಾಡುತ್ತಲೇ ಇರಲಿಲ್ಲ. ಎಲ್ಲರ ಚಿತ್ತವೂ ಗಡ್ಕರಿಯವರ ಪೂರ್ತಿ ಗ್ರೂಪ್‌ನತ್ತಲೇ ನೆಟ್ಟಿತ್ತು.
ಗಡ್ಕರಿಯವರ ಕೆಲಸಕ್ಕೆ ಕುತ್ತು ತಂದ ಕಾಂಗ್ರೆಸ್ ಅರಿವಿಲ್ಲದಂತೆ ಅವರ ಸ್ಥಾನದಲ್ಲಿ ಬಲಿಷ್ಠ ವ್ಯಕ್ತಿಯೊಬ್ಬರು ಬಂದು ಕೂಡಲು ಕಾರಣವಾಗಿದೆ. ರಾಜ್‌ನಾಥ್ ಸಿಂಗ್ ಅವರು ಅನುಭವಿ ರಾಜಕಾರಣಿ ಅನ್ನುವುದರಲ್ಲಿ ಎರಡು ಮಾತಿಲ್ಲ. ಅಲ್ಲದೆ ಅವರ ಮೇಲೆ ಆರ್‌ಎಸ್‌ಎಸ್‌ನ ಕೃಪಾಕಟಾಕ್ಷವೂ ಇದೆ. ರಾಜ್‌ನಾಥ್, ಉತ್ತರ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಲು ಬಿಜೆಪಿಗೆ ಸಹಾಯ ಮಾಡುವುದಷ್ಟೇ ಅಲ್ಲದೆ, ನರೇಂದ್ರ ಮೋದಿಯನ್ನೂ ಬಹುವಾಗಿ ಬೆಂಬಲಿಸಲಿದ್ದಾರೆ.  
ಈಗ ಬಿಜೆಪಿಯ ಬತ್ತಳಿಕೆಯಲ್ಲಿ ನಾಲ್ಕು ಪ್ರಮುಖ ಅಸ್ತ್ರಗಳಿವೆ. ನರೇಂದ್ರ ಮೋದಿ, ರಾಜ್‌ನಾಥ್ ಸಿಂಗ್, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿಯಂತಹ ಹಿರಿಯ ಅನುಭವಿ ನಾಯಕರ ಒಟ್ಟೂ ಶಕ್ತಿ, ಚುನಾವಣೆಗಳು ಎದುರಾಗುತ್ತಿರುವ ಪ್ರಮುಖ ಸಮಯದಲ್ಲೇ ಬಿಜೆಪಿಯ ಬೆನ್ನನ್ನು ಸದೃಢವಾಗಿಸಲಿದೆ. ಈ ಬಲಿಷ್ಠ ನಾಯಕರ ಸಂಗಮ ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸನ್ನು ಬಹುವಾಗಿ ಕಾಡಲಿದೆ ಎನ್ನುವುದರಲ್ಲಿ ಸಂದೇಹವಿಲ್ಲ.
 ಹಾಗೆ ನೋಡಿದರೆ ಈ ನಾಯಕರುಗಳಿಗೆ ತಮ್ಮದೇ ಆದ ರಾಜಕೀಯ ಅಜೆಂಡಾ ಇದೆಯಾದರೂ, ಅವರ ಇದೇ ಗುಣ ಮಿತ್ರಪಕ್ಷಗಳ ಮನವೊಲಿಸುವಲ್ಲಿ ಬಹಳ ಸಹಕಾರಿಯಾಗಲಿದೆ. ನಿತೀಶ್ ಕುಮಾರ್‌ರ ಮನಗೆಲ್ಲಲು ಮೋದಿಗಿಂತ ರಾಜ್‌ನಾಥ್ ಸಿಂಗ್ ಬಹಳ ಉಪಯೋಗಕ್ಕೆ ಬರಲಿದ್ದಾರೆ!
2014ರಲ್ಲಿ ಮೋದಿಯೇ ಪ್ರಧಾನಿಯಾಗಬೇಕು ಎನ್ನುವ ಆಕಾಂಕ್ಷೆ ಬಿಜೆಪಿಗೇನಾದರೂ ಇದ್ದರೆ, ಅದು ಮೊದಲು ಗಮನ ಹರಿಸಬೇಕಾದದ್ದು ಉತ್ತರ ಪ್ರದೇಶದತ್ತ. ತೀರಾ ಕಡಿಮೆಯೆಂಬಂತಿರುವ 10-12 ಸ್ಥಾನಗಳನ್ನು , ಕನಿಷ್ಠ 20-25ರ ವರೆಗೆ ಏರಿಸಬೇಕಾದರೆ ಉತ್ತರ ಪ್ರದೇಶದ ಬಗ್ಗೆ ಕಾರ್ಯತಂತ್ರವನ್ನು ರಚಿಸದೇ ಬೇರಾವ ಹಾದಿಯೂ ಅದರೆದುರಿಗಿಲ್ಲ. ಬಿಜೆಪಿ ಆ ರಾಜ್ಯದಲ್ಲಿ ಮೇಲುಗೈ ಸಾಧಿಸುವಲ್ಲಿ ರಾಜ್‌ನಾಥ್ ಸಿಂಗ್ ಮತ್ತು ಇಲ್ಲಿಯವರೆಗೂ ಹುಚ್ಚು ಕುದುರೆಯಂತೆ ಅಲ್ಲಿಲ್ಲಿ ಓಡಾಡಿ ಈಗ ಬಿಜೆಪಿಯೊಂದಿಗೆ ಕೈ ಜೋಡಿಸಿರುವ ಕಲ್ಯಾಣ್ ಸಿಂಗ್‌ರ ಪಾತ್ರ ಪ್ರಮುಖವಾಗಲಿದೆ.
ಮೋದಿ ಮತ್ತು ರಾಜ್‌ನಾಥ್‌ರ ಇಕ್ವೇಷನ್ ಹೇಗೆ ಕಾರ್ಯನಿರ್ವಹಿಸಲಿದೆ ಎನ್ನುವುದು ನಮಗೆ ಗೊತ್ತಿಲ್ಲ. ಆದರೆ ಒಂದು ವಿಷಯವನ್ನು ಮಾತ್ರ ಎಲ್ಲರೂ ಒಪ್ಪಿಕೊಳ್ಳಲೇಬೇಕು. ಯಾವೊಬ್ಬ ನಾಯಕನೂ ತನ್ನ ಸ್ವಂತ ಬಲದ ಮೇಲೆಯೇ ಯಶಸ್ವಿಯಾಗಲಾರ. ವಾಜಪೇಯಿಯವರಿಗೆ ಯಶಸ್ಸು ಸಾಧಿಸಲು ಮತ್ತು ಪಕ್ಷವನ್ನು ಸರಿದಾರಿಯಲ್ಲಿ ನಡೆಸಲು ಆಡ್ವಾಣಿ ಬೇಕಾದರು. ಮತ ಕೊಳ್ಳೆ ಹೊಡೆಯುವ ಯಾವ ನಾಯಕನಿಗೇ ಆಗಲಿ, ಸಂಘಟನಾ ಶಕ್ತಿಯುಳ್ಳ ಮತ್ತು ಪಕ್ಷ-ಸರ್ಕಾರದ ನಡುವೆ ಕೊಂಡಿಯಾಗಬಲ್ಲ ವ್ಯಕ್ತಿಯೊಬ್ಬನ ಅವಶ್ಯಕತೆಯಿರುತ್ತದೆ. ಗಡ್ಕರಿಯವರಂತಹ ಪೇಪರ್ ಟೈಗರಗಳಿಂದ ಇದು ಸಾಧ್ಯವಿರಲಿಲ್ಲ.
ಗಡ್ಕರಿ ಬಿಜೆಪಿಯ ಪಾಲಿಗೆ ದುರಂತವಾಗಿದ್ದು ಕೇವಲ ಪೂರ್ತಿ ಪ್ರಕರಣದಿಂದಾಗಿಯಲ್ಲ. ಮೊದಲನೆಯದಾಗಿ ಅವರು ತೂಕದ ರಾಜಕಾರಣಿಯಾಗಿರಲಿಲ್ಲ(ಅಷ್ಟೊಂದು ತೂಕವಿದ್ದ ನಂತರವೂ), ಅಲ್ಲದೆ ತಮ್ಮ ನಿಷ್ಠೆಯನ್ನೆಲ್ಲ ಅವರು ಮೋಹನ್ ಭಾಗವತ್ ಅವರತ್ತಲೇ ಕೇಂದ್ರೀಕರಿಸಿದ್ದರು.  ಒಂದಾದ ನಂತರ ಒಂದರಂತೆ ತಪ್ಪೆಸಗುತ್ತಲೇ ಹೋದರೂ ನಾಗಪುರದ ಅವರ ಸಲಹೆಗಾರರು ಮಾತ್ರ ಅವರ ಕಿವಿ ಹಿಂಡುವ ಕೆಲಸ ಮಾಡಲಿಲ್ಲ.
ಗಡ್ಕರಿ, ಯಡಿಯೂರಪ್ಪನವರನ್ನು ಕಿತ್ತೆಸೆಯುವ ಮೂಲಕ ಕರ್ನಾಟಕ ಬಿಜೆಪಿಗೆ ಅಪಾರ ಹಾನಿ ಮಾಡಿದರು. ಹಾಗೆ ನೋಡಿದರೆ ಅವರ ಮುಂದೆ ಬಹಳಷ್ಟು ಆಯ್ಕೆಗಳಿದ್ದವು. ಯಡಿಯೂರಪ್ಪನವರಿಗೆ ಪಕ್ಷದ ಪ್ರಮುಖ ಹುದ್ದೆಯನ್ನು ಕೊಟ್ಟಿದ್ದರೆ, ಅವರೂ ಸುಮ್ಮನಾಗುತ್ತಿದ್ದರು. ಈ ಅವಿವೇಕದ ನಡೆಯ ಪ್ರತಿಫಲವನ್ನು ಕರ್ನಾಟಕದಲ್ಲಿ ಈ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಪಕ್ಷವಂತೂ ಉಣ್ಣಲಿದೆ.
ಉತ್ತರ ಪ್ರದೇಶದಲ್ಲೂ ಗಡ್ಕರಿ ತಪ್ಪು ಹೆಜ್ಜೆಯನ್ನಿಟ್ಟರು. ಬಾಬು ಸಿಂಗ್ ಖುಶ್ವಾರಂತಹ ಹೆಸರು ಕೆಡಿಸಿಕೊಂಡವರನ್ನು ಪಕ್ಷದೊಳಗೆ ಬಿಟ್ಟುಕೊಂಡು, ಪಕ್ಷದ 'ಭ್ರಷ್ಟಾಚಾರ ವಿರೋಧಿ' ನಿಲುವನ್ನೇ ಅಣಕಿಸುವಂತೆ ಮಾಡಿದರು. ಅಲ್ಲದೆ ಶಿಬು ಸೋರೇನ್‌ರೊಂದಿಗೆ ಕೀಳ್ಮಟ್ಟದ ಡೀಲ್ ಮಾಡಿಕೊಂಡು ಜಾರ್ಖಂಡ್‌ನಲ್ಲೂ ಬಿಜೆಪಿಯ ಬಗಲು ಮುರಿದರು. ಸೊರೇನ್‌ರ ಪಕ್ಷ ಪ್ಲಗ್ಗು ಕೀಳುತ್ತಿದ್ದಂತೆಯೇ ಅರ್ಜುನ್ ಮುಂಡಾ ಮಕಾಡೆ ಮಲಗಿಬಿಟ್ಟರು.
ಗಡ್ಕರಿಯವರೊಂದಿಗೆ ಇರುವ ಸಮಸ್ಯೆಯೇ ಇದು. ಅವರೊಬ್ಬ ಯಶಸ್ವಿ ಉದ್ಯಮಿಯೇ ಹೊರತು ಉತ್ತಮ ನಾಯಕರಲ್ಲ. ಅವರ ರಾಜಕೀಯ ನಿಲುವುಗಳು ದುರ್ಬಲವಾಗಿವೆ, ಬಹುಶಃ ಇದೇ ಕಾರಣಕ್ಕಾಗಿಯೇ ಆರ್‌ಎಸ್‌ಎಸ್ ಮಂದಿ ಅವರನ್ನು ಅತಿಯಾಗಿ ಬೆಂಬಲಿಸುತ್ತಿದ್ದರೇನೋ?
ಆದರೆ ರಾಜಕೀಯ ಪಕ್ಷಗಳಿಗೆ ತಮ್ಮದೇ ಆದ ಒತ್ತಡಗಳಿರುತ್ತವೆ. ಅವಕಾಶಗಳು ಅಥವಾ ಅಪಾಯಗಳು ಎದುರಾದಾಗ ತುರ್ತಾಗಿಯೇ ಅವುಗಳಿಗೆ ಸ್ಪಂದಿಸಬೇಕಾಗುತ್ತದೆ. ದೊಡ್ಡ ಶಕ್ತಿಗಳ ಎದುರು ಯಾವಾಗಲೂ ಮಂಡಿಯೂರಿ ಅವುಗಳು ಕುಳಿತುಕೊಳ್ಳುವುದಿಲ್ಲ. ಆರ್‌ಎಸ್‌ಎಸ್‌ನ ಒತ್ತಡಗಳಿಗೆ ಗಡ್ಕರಿ ಸ್ಪಂದಿಸುತ್ತಿದ್ದ ರೀತಿ, ಮನಮೋಹನ್ ಸಿಂಗ್ ಅವರು ಸೋನಿಯಾ ಎದುರು ನಡೆದುಕೊಳ್ಳುವ ರೀತಿಯನ್ನೇ ಹೋಲುತ್ತಿತ್ತು ಎಂದರೆ ತಪ್ಪಾಗಲಾರದು.
ಪಕ್ಷದ ಅಧ್ಯಕ್ಷರಾಗಿ ಗಡ್ಕರಿಯವರನ್ನೇ ಮರು ಆಯ್ಕೆಮಾಡಿಸುವಲ್ಲಿ ಆರ್‌ಎಸ್‌ಎಸ್ ಸಫಲವಾಗಿದ್ದರೆ, ಅದು ಅರಿವಿಲ್ಲದೇ ತನ್ನ ಜೀವಮಾನದ ದೊಡ್ಡ ತಪ್ಪನ್ನು ಎಸೆಗಿದಂತಾಗುತ್ತಿತ್ತು. ಈಗ ಅಚಾತುರ್ಯವಂತೂ ತಪ್ಪಿದೆ. ಬಿಜೆಪಿಯಂತೆ ಆರ್‌ಎಸ್‌ಎಸ್ ಕೂಡ ಕಾಂಗ್ರೆಸ್ ಪಕ್ಷಕ್ಕೆ ಆಭಾರಿಯಾಗಲೇಬೇಕಿದೆ!

-ಆರ್.ಜಗನ್ನಾಥನ್
ಸಂಪಾದಕರು, ಫಸ್ಟ್‌ಪೋಸ್ಟ್ ಜಾಲತಾಣ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.