ಬರಡಲ್ಲೂ ನೀರುಳಿಸೋದೇ ನಮ್ಮ 'ಬೀಜ'ನೆಸ್ಸು
ಅವತ್ತು ಒಂದು ದಿನ ನಾರಾಯಣ ರೆಡ್ಡಿಯವರು ನಸುಕಿನಲ್ಲೇ ಎದ್ದು ಮುಖಕ್ಕೆ ನೀರೆರೆಚಿಕೊಳ್ಳುತ್ತಿದ್ದರು. ಅದು ದೊಡ್ಡಬಳ್ಳಾಪುರ ಸಮೀಪದ ಅವರ ತೋಟದ ಮನೆ. ಅಲ್ಲಾಗ ನೀರು ಒಂದು ರೀತಿಯಲ್ಲಿ ಸಮಸ್ಯೆಯೇ ಆಗಿ ಕಾಡುತ್ತಿತ್ತು. ಕೃಷಿಯಲ್ಲಿ ಒಮ್ಮೆ ಸೋತಿದ್ದ ನಾರಾಯಣ ರೆಡ್ಡಿಯವರು ಹೊಸತೊಂದು ಸ್ಫೂರ್ತಿಯಿಂದ ಹೊಸ ಅಧ್ಯಾಯ ಆರಂಭಿಸುವ ಉತ್ಸಾಹದಲ್ಲಿದ್ದರು. ಬೆಳಗಿನ ನಿದ್ದೆಯ ಮಂಪರು. ಹಲ್ಲುಜ್ಜಿಕೊಂಡು, ಮುಖ ಮರ್ಜನ ಮುಗಿಸಿ, ಪ್ರಾತಃರ್ವಿಧಿಗಳನ್ನು ತೀರಿಸುವ ಹೊತ್ತಿಗಾಗಲೇ ಸರಿ ಸುಮಾರು ಒಂದು ಬಕೇಟ್ ನೀರು ಖಾಲಿಯಾಗಿತ್ತು. ರೆಡ್ಡಿಯವರ ತಲೆಯಲ್ಲಿ ಹೊಸತೊಂದು ಚಿಂತನೆ. ಬಕೇಟ್‌ನಲ್ಲಿನ ನೀರು ಮುಗಿದು ಹೋಗಿತ್ತು. ಆ ನೀರು ಬಿದ್ದ ನೆಲ ಎಂದಿನ ಒಣ ಜಂಭ ತೋರುತ್ತಿತ್ತು. ಲೆಕ್ಕಾಚಾರ ಅರಂಭವಾಗಿತ್ತು. ಹೀಗೆ ದಿನದಲ್ಲಿ ಏನಿಲ್ಲವೆಂದರೂ ಮೂರ್ನಾಲ್ಕು ಬಕೇಟ್‌ಗಳಷ್ಟು ನೀರನ್ನಾದರೂ ಒಬ್ಬ ವ್ಯಕ್ತಿ ಚೆಲ್ಲುತ್ತಾನೆ. ಅಂದರೆ ಒಂದು ಸಸಿಗೆ ಅದು ಜೀವ ದ್ರವ್ಯ. ಎಲ್ಲವನ್ನೂ ಒಂದೇ ಸಸಿಯ ಬುಡದಲ್ಲೇ ನಿರ್ವಹಿಸಲು ಸಾಧ್ಯವಾದರೆ...? ಯುರೇಕಾ...! ರೆಡ್ಡಿಯವರಿಗೆ ಏನೋ ಹೊಳೆದಿತ್ತು. ತಮ್ಮಿಬ್ಬರು ಮಕ್ಕಳು, ಸೋದರ ಸಂಬಂಧಿ ಯುವಕನನ್ನು ಕರೆದಿದ್ದರು. ಮನೆಯೆದುರು ನಾಲ್ಕು ತೆಂಗಿನ ಸಸಿ. ಒಂದೊಂದಕ್ಕೇ ತಮ್ಮದೂ ಸೇರಿದಂತೆ ನಾಲ್ವರ ಹೆಸರು. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ನೀರಿನ ಎಂಥದ್ದೇ ಉಪಯೋಗವಿದ್ದರೂ ತಮ್ಮ ತಮ್ಮ ಹೆಸರಿನ ಗಿಡಗಳ ಬುಡದಲ್ಲೇ ಮಾಡತಕ್ಕದ್ದು. ಅದು ಸುಗ್ರೀವಾಜ್ಞೆಯಾಗಿ ಜಾರಿಗೊಂಡಿತ್ತು. ಮುಖ, ಕೈಕಾಲು ತೊಳೆಯುವುದರಿಂದ ಆರಂಭಿಸಿ, ಬಟ್ಟೆ, ತಟ್ಟೆ ತೊಳೆಯುವುದು, ಸ್ನಾನದವರೆಗೆ ಅವರವರ ಕೆಲಸ ಅವರವರ ಹೆಸರಿನ ಸಸಿಯ ಬುಡದಲ್ಲೇ. ಕೆಲ ವರ್ಷಗಳಲ್ಲಿ ಆ ಸಸಿ ನಾಲ್ಕು ಎಕರೆಯಲ್ಲಿನ ಎಲ್ಲ ತೆಂಗಿನ ಸಸಿಗಿಂಥ ಹಲುಸಾಗಿ ಬೆಳೆದಿದೆ. ಕಾಯಿಯ ಹಿಡುವಳಿ ಹೆಚ್ಚಿದೆ.
ನೀರಿನ ನಿರ್ವಹಣೆ ಎಂಬುದು ಅತಿ ಚಿಕ್ಕ ಚಿಕ್ಕ ಸಂಗತಿಗಳನ್ನು ಒಳಗೊಂಡದ್ದು. ಅದಕ್ಕೆ ನೀವೇನು ಮಹಾನ್ ತಂತ್ರಜ್ಞಾನವೆಂಬುದನ್ನು ಸಂಶೋಧಿಸಬೇಕಿಲ್ಲ. ಯಂತ್ರೋಪಕರಣಗಳ ಜೊತೆಯಲ್ಲಿ ಕೋಟ್ಯಂತರ ರುಪಾಯಿ ಸುರಿಯಬೇಕಿಲ್ಲ. ಅದಕ್ಕೆ ನೀವು ಹೂಡಬೇಕಾದದ್ದು ಇಚ್ಛಾ ಶಕ್ತಿ ಮತ್ತು ಕ್ರಿಯಾಶೀಲತೆಯನ್ನು ಮಾತ್ರ ಎಂಬುದನ್ನು ತೆಂಗಿನ ಸಸಿಗಳ ಮೂಲಕ ವಿಷದೀಕರಿಸುತ್ತಾರೆ ರೆಡ್ಡಿಯವರು. ಅವರ ಜಮೀನೆಂದರೆ ಅದೊಂದು ಪ್ರಯೋಗಾಲಯ. ನಾಲ್ಕು ಎಕರೆಯಲ್ಲಿ ಬೆಳೆದು ನಿಂತಿರುವ ತೆಂಗಿನ ಸಸಿಗಳು ಅವರ ಪರಿಶ್ರಮ, ಭ್ರಷ್ಟ ರಹಿತ ಕೃಷಿ ಪದ್ಧತಿ, ಪ್ರಾಮಾಣಿಕತೆ ಕಳಕಳಿಗಳ ಪ್ರತಿಬಿಂಬವಾಗಿ ನಿಂತಿವೆ. ಈ ಪೈಕಿ 200 ಸಸಿಗಳು ಫಲಸಮೃದ್ಧಿಯನ್ನು ಸೂಸುತ್ತಿವೆ. ನೂರು ಸಸಿಗಳು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವು ಇವೆ. ಮೇಲ್ನೋಟಕ್ಕೆ ಅದು ತೆಂಗಿನ ತೋಟ. ಆದರೆ ಎರಡು ಎಕರೆಯಲ್ಲಿ ತೆಂಗಿನ ನಡುನಡುವೆ ಕಾಫಿ, ಕರಿಬೇವುಗಳ ಹುಲುಸು ಬೆಳೆ. ಎಲ್ಲವೂ ಹಣ ತಂದುಕೊಡುವಂಥವುಗಳೇ. ಇನ್ನುಳಿದ ಒಂದು ಎಕರೆಯಲ್ಲಿ ಹೂವುಗಳು ನಳನಳಿಸುತ್ತಿವೆ. ಉಳಿದದ್ದು ಮೇವಿಗೆ ಮೀಸಲು.
ಇನ್ನೊಂದು ಕಡೆ ಮತ್ತೆ ಎರಡು ಎಕರೆಯನ್ನು ಹದಿನೈದು ತೆಂಗಿನ ಮರಗಳು ಹಾಗೂ 30 ಚಿಕ್ಕು ಸಸಿಗಳು ಹಂಚಿಕೊಂಡಿವೆ. ಅಲ್ಲೂ ಮಿಶ್ರ ಬೆಳೆಯ ಪ್ರಯೋಗ. ಸಸಿಗಳ ನಡುವಿನ ಜಾಗವನ್ನು ಖಾಲಿ ಬಿಡುವ ಪ್ರಶ್ನೆಯೇ ಇಲ್ಲ. ಪರ್ಯಾಯ ಬೆಳೆಯಾಗಿ ಒಮ್ಮೆ ಬೀನ್ಸ್ ಮತ್ತು ವಿವಿಧ ಧಾನ್ಯಗಳನ್ನು ಬೆಳೆಯಲಾಗುತ್ತದೆ. ಪಕ್ಕದ ಎರಡು ಎಕರೆಯಲ್ಲಿ ಮಾವು ಮತ್ತು ಸೀಬೆಯ ಫಸಲು. ನಂತರದ ತೋಟ ಹೊಕ್ಕರೆ ದಾಂಡಿಗನಂತೆ ಬೆಳೆದು ನಿಂತಿರುವ ತೇಗದ ಮರಗಳು. 18 ತಿಂಗಳಲ್ಲೇ ತಲೆ ಎತ್ತಿ ಆಗಸ ದಿಟ್ಟಿಸಬೇಕಾದ ಬೆಳವಣಿಗೆ. ನೆಲಕ್ಕೆ ಬಗ್ಗಿದರೆ ಅದರ ಬುಡದಲ್ಲಿ ಸವಿಯಾದ ಬಾಳೆ ಮತ್ತು ಹಿಪ್ಪು ನೇರಳೆ ಹಣ್ಣುಗಳದ್ದೇ ಸಾಮ್ರಾಜ್ಯ. ಮತ್ತೊಂದು ಎಕರೆಯಲ್ಲಿ ಭತ್ತ ಹಾಗೂ ಇನ್ನೊಂದು ಎಕರೆಯಲ್ಲಿ ರಾಗಿ.
ಎಲ್ಲವೂ ಅತ್ಯಂತ ಯೋಜಿತ ರೀತಿಯಲ್ಲಿ ರೂಪಿಸಲ್ಪಟ್ಟ ಬೆಳೆ ಪದ್ಧತಿ. ಒಂದಕ್ಕೆ ಹಾಕಿದ ಗೊಬ್ಬರ ಇನ್ನೊಂದಕ್ಕೂ ಮರುಬಳಕೆಯಾಗಬೇಕು. ಒಂದರ ಬುಡಕ್ಕೆ ಬಿದ್ದ ನೀರಿನಲ್ಲೇ ಇನ್ನೊಂದರ ಬೆಳವಣಿಗೆಯೂ ಆಗಬೇಕು. ಒಂದರಲ್ಲಿ ಆಗಬಹುದಾದ ನಷ್ಟ ಇನ್ನೊಂದರಲ್ಲಿ ಸರಿದೂಗಬೇಕು. ಒಣಭೂಮಿಯೂ ಇದೆ. ನಿರಾವರಿಯಲ್ಲೂ ಕೃಷಿ ಸಾಧ್ಯತೆಗಳನ್ನು ಹುಡುಕಾಡಲಾಗುತ್ತಿದೆ. ಮೂರು ಎಕರೆ ಗುತ್ತಿಗೆ ಜಮೀನಿನಲ್ಲಿ ಸಂಪೂರ್ಣ ಒಣ ಬೇಸಾಯದ ಪ್ರಯೋಗಗಳು ಸಾಗಿವೆ. ಈ ದೃಷ್ಟಿಯಿಂದ ಅವರ ಜಮೀನು ಅಕ್ಷರಶಃ ಒಂದು ಕೃಷಿ ಪ್ರಯೋಗಾಲಯವಾಗಿಯೇ ನಿಲ್ಲುತ್ತದೆ. ಒಮ್ಮೆ ರೆಡ್ಡಿಯವರ ಪ್ರಯೋಗಾಲಕ್ಕೆ ಹೊಕ್ಕರೆ ಅಲ್ಲಿನ ಬೆಳೆ ವೈವಿಧ್ಯದ ವೈಭವ ನಿಮ್ಮನ್ನು ಬೆರಗುಗೊಳಿಸದೇ ಇರದು. ಒಂದು ಡಜನ್‌ಗೂ ಹೆಚ್ಚು ಹಣ್ಣಿನ ಬೆಳೆಯೇ ಇಂಥ ವೈವಿಧ್ಯಕ್ಕೆ ಸಾಕ್ಷಿ. ಇಂಥ ಪ್ರಯೋಗಾಲಯ ಸ್ಥಾಪನೆಯಾದದ್ದು ಒಂದು ಕಾಲದಲ್ಲಿ ಯಾತಕ್ಕೂ ಬಾರದ ಬರಡು ಭೂಮಿಯೆಂದು ನಿರ್ಧರಿಸಿ ನೀಲಗಿರಿಯಂಥ ಯುಕಲಿಪ್ಟಸ್ ಸಾಮ್ರಾಜ್ಯಕ್ಕೆ ಬಿಟ್ಟುಕೊಟ್ಟಿದ್ದ ನೆಲದಲ್ಲಿ. ಇವು ನಿಸರ್ಗದ ಸಹಜತೆ, ವೈವಿಧ್ಯಕ್ಕೆ ಧಕ್ಕೆ ತರುವುದು ಮಾತ್ರವಲ್ಲ ಅಡಿಕೆ, ತೆಂಗಿನಂಥ ಬೆಳೆಗಳಲ್ಲಿ ನೈಸರ್ಗಿಕ ಪರಾಗಸ್ಪರ್ಶಕ್ಕೆ ಮಾರಕ ಎಂಬುದು ರೆಡ್ಡಿಯವರ ಅನುಭವದ ಮಾತು.
ಗೋಬರ್ ಅನಿಲ ಘಟಕ, ಸಾವಯವ ಗೊಬ್ಬರ ಬಳಕೆ, ನೈಸರ್ಗಿಕ ಕೀಟ ನಿಯಂತ್ರಣ ವ್ಯವಸ್ಥೆ, ಬರ ನಿರೋಧಕ ತಂತ್ರಗಳು, ಮಣ್ಣಿನ ಸಂರಕ್ಷಣಾ ಕ್ರಮಗಳು, ಬೆಳೆ ಪರಿಷ್ಕರಣೆ ಕ್ರಮಗಳಲ್ಲಿನ ಅಭಿವೃದ್ಧಿ ಹೀಗೆ ಹಲವು ರೀತಿಯಲ್ಲಿ ರೆಡ್ಡಿಯವರ ಹೊಲ ಮಾದರಿಯಾಗಿ ನಿಲ್ಲುತ್ತದೆ.
ರೆಡ್ಡಿಯವರದು ಸದಾ ಪ್ರಯೋಗಶೀಲ ಮತ್ತು ಸಾಹಸಿ ಮನಸ್ಸು. ಭತ್ತ ಬೇಸಾಯದಲ್ಲಿ ನೀರಿನ ಬಳಕೆಯನ್ನು ವಿಪರೀತ ಕಡಿಮೆ ಮಾಡುವ 'ಶ್ರೀ' ಪದ್ಧತಿ ಹಿಂದೆ ಕೆಲಸ ಮಾಡಿದ್ದೂ ಇಂತಹುದೇ ತುಡಿತ. ದೇಶದ ಉದ್ದಗಲ ಮಾತ್ರವಲ್ಲ, ನೆರೆ ದೇಶಗಳಲ್ಲೂ ಇವತ್ತು 'ಶ್ರೀ' ಪದ್ಧತಿ ಜನಪ್ರಿಯ. ರೈತರು ನಿಧಾನಕ್ಕೆ ಸಾಂಪ್ರದಾಯಿಕ ಪದ್ಧತಿಗೆ ವಿದಾಯ ಹೇಳಿ 'ಶ್ರೀ'ಯತ್ತ ವಾಲುತ್ತಿದ್ದಾರೆ. ಇದರಲ್ಲಿ ನೀರಿನ ಬಳಕೆ ಕಡಿಮೆ, ಜತೆಗೆ ದುಪ್ಪಟ್ಟು ಇಳುವರಿ. ಇದು ತಮ್ಮ ಜೀವಮಾನದ ಆವಿಷ್ಕಾರ ಎಂಬುದನ್ನು ಸ್ವತಃ ರೆಡ್ಡಿಯವರೇ ಒಪ್ಪಿಕೊಳ್ಳುತ್ತಾರೆ.
'ಶ್ರೀ' ಪದ್ಧತಿ ಕಥೆಯೂ ತೆಂಗಿನಮರದಂತೆಯೇ. ತೀರಾ ಆಕಸ್ಮಿಕವಾಗಿ ರೂಪುಗೊಂಡದ್ದು. ಫ್ರಾನ್ಸ್‌ಗೆ ಕೃಷಿ ಸಮ್ಮೇಳನಕ್ಕೆಂದು ಹೋಗಿದ್ದಾಗ ಅಲ್ಲಿನ ಮ್ಯಾಗಜಿನ್‌ವೊಂದರಲ್ಲಿ ಪ್ರಕಟವಾಗಿದ್ದ ಸಂಶೋಧನಾ ಲೇಖನ ಗಮನ ಸೆಳೆಯಿತು. ಬತ್ತ ಬೇಸಾಯದಲ್ಲಿ ನೀರಿನ ಬಳಕೆ ಕಡಿಮೆ ಮಾಡುವುದು ಹೇಗೆ ಎನ್ನುವ ಗುಂಗು ಕಾಡುತ್ತಿತ್ತಲ್ಲ. ಲೇಖನ ಓದುತ್ತಿದ್ದಂತೆ ಮನಸ್ಸಿಗೆ ಏನೋ ಹೊಳೆಯಿತು. ಮನದಲ್ಲಿ ರೂಪುಗೊಂಡಿದ್ದನ್ನು ಹೊಲದಲ್ಲಿ ಅನುಷ್ಠಾನಗೊಳಿಸುವ ಪ್ರಯತ್ನದಲ್ಲಿದ್ದರು. ಆಗ ಪತ್ನಿ 'ಗಿಡಗಳನ್ನು ನಾಟಿ ಮಾಡುವ ಬದಲು ನೇರವಾಗಿ ಬೀಜಗಳನ್ನು ಬಿತ್ತನೆ ಮಾಡಿರಲ್ಲ' ಎಂದು ಸಲಹೆ ಕೊಟ್ಟರು. 'ಹೌದಲ್ಲ' ಅನ್ನಿಸಿತು. ಹಾಗೆಯೇ ಮಾಡಿಯೂಬಿಟ್ಟರು. ಅದು ನಾಟಿ ಬದಲು ಹೊಸತೊಂದು ವಿಧಾನಕ್ಕೆ ದಾರಿ ಮಾಡಿಕೊಟ್ಟಿತು. ಅನ್ನಪೂರ್ಣ ಫಾರ್ಮ್‌ನಲ್ಲಿ ಮತ್ತಷ್ಟು ಪ್ರಯೋಗವಂತೂ ಮುಂದುವರಿದಿತ್ತು. ಫಲಿತಾಂಶದಿಂದ ನಿಬ್ಬೆರಗಾದರು. ಅದನ್ನು ಅಕ್ಕಪಕ್ಕದ ರೈತರು, ತಮ್ಮ ಸಾವಯವ ಕೃಷಿ ಬಳಗ ಎಲ್ಲರಿಗೂ ತೋರಿಸಿದರು. ಆಸಕ್ತ ರೈತರ ಹೊಲಗಳಿಗೆ ತಾವೇ ಭೇಟಿ ನೀಡಿ ಮಾಹಿತಿ ನೀಡತೊಡಗಿದರು.
ಒಂದು ಸಸಿ ಬದಲು ಎರಡು ಸಸಿಗಳನ್ನು ನಾಟಿ ಮಾಡುವುದು 'ಶ್ರೀ' ವಿಧಾನದ ಪ್ರಮುಖ ಅಂಶ. ನಷ್ಟದ ಮಾತೇ ಇಲ್ಲ. ಏಕೆಂದರೆ ಒಂದು ಸಸಿ ಕೈಕೊಟ್ಟಿತು ಎಂದಿಟ್ಟುಕೊಳ್ಳಿ, ಮತ್ತೊಂದು ಫಸಲು ನೀಡುತ್ತದೆ. ಸಸಿಗಳ ನಡುವೆ 12 x12 ಇಂಚು ಅಂತರ ಕಾಪಾಡಿಕೊಳ್ಳಲಾಗುತ್ತದೆ. ಬೀಜದ ಬಳಕೆ 1/15ರಷ್ಟು ಕಡಿಮೆಯಾದರೆ, ನೀರಿನ ಬಳಕೆ ಮೂರನೇ ಒಂದು ಭಾಗದಷ್ಟು ಕಡಿಮೆ ಸಾಕು. ಸಸಿಗಳ ನಡುವೆ ಸಾಕಷ್ಟು ಅಂತರ ಇರುವುದರಿಂದ ಇಲಿ ಕಾಟವೂ ಇಲ್ಲ. ಇಳುವರಿ ಡಬಲ್. ಕೆಲವರು ನಾಟಿ ಬದಲು ನೇರವಾಗಿ ಬೀಜ ಬಿತ್ತುತ್ತಾರೆ. ಕೆಲ ಪ್ರಯೋಗಶೀಲರು ಮತ್ತೂ ಮುಂದೆ ಹೋಗಿ ಬತ್ತ ಬೇಸಾಯದಲ್ಲಿ ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ!
ಶ್ರೀಲಂಕಾ, ಥಾಯ್ಲೆಂಡ್, ಪಾಕಿಸ್ತಾನ, ಕಾಂಬೋಡಿಯಾಗಳಲ್ಲಿ 1990ರ ದಶಕದ ಶುರುವಿನಲ್ಲೇ 'ಶ್ರೀ' ಪದ್ಧತಿಯಂತಹ ತಂತ್ರಜ್ಞಾನ ಚಾಲ್ತಿಯಲ್ಲಿತ್ತು. ನಮ್ಮ ದೇಶಕ್ಕೆ 2001ರವರೆಗೆ ಆ ಬಗ್ಗೆ ಕಲ್ಪನೆಯೇ ಇರಲಿಲ್ಲ ಎನ್ನುವುದು ರೆಡ್ಡಿಯವರ ಆಶ್ಚರ್ಯದ ಮಾತು.
ನಮ್ಮಲ್ಲಿ ಪ್ರತಿಯೊಂದಕ್ಕೂ ಸಬ್ಸಿಡಿ ನೀಡುವುದಕ್ಕೆ ರೆಡ್ಡಿಯವರ ಪ್ರಬಲ ವಿರೋಧ. ಕೃಷಿ ವ್ಯವಸ್ಥೆಯನ್ನು ಹಾಳು ಮಾಡಿದ್ದೇ ಈ ಸಬ್ಸಿಡಿ ಎನ್ನುವುದು ಅವರ ನಿಲವು. ಸಬ್ಸಿಡಿಯ ನೆರವಿಲ್ಲದೇ, ಇಡೀ ದೇಶದ ಸಣ್ಣ ಮತ್ತು ಮಧ್ಯಮ ರೈತರು ಹಂತಹಂತವಾಗಿ ರಾಸಾಯನಿಕಗಳ ಬಳಕೆ ನಿಲ್ಲಿಸಿ ಸಾವಯವ ಕೃಷಿಯತ್ತ ವಾಲುವಂತೆ ಮಾಡಲು ಐದರಿಂದ ಆರು ವರ್ಷ ಸಾಕು ಎನ್ನುತ್ತಾರೆ ರೆಡ್ಡಿ. ಬೇಸಾಯಕ್ಕೆ ನೆರವಾಗುವ ಜಾನುವಾರುಗಳ ಸಾಕಣೆ ನಿಲ್ಲಿಸಬೇಡಿ ಎನ್ನುವುದು ಅವರ ಸಲಹೆ.
'ಕೃಷಿ ಆರ್ಥಿಕವಾಗಿ ಲಾಭ ಕೊಡದ ವೃತ್ತಿ ಎನ್ನುವ ಭಾವನೆ ಸರಿಯಲ್ಲ. ದಿನಕ್ಕೆ ಕನಿಷ್ಠ ನಾಲ್ಕು ಗಂಟೆಯಂತೆ ವಾರದಲ್ಲಿ ಕಡೇಪಕ್ಷ ಐದು ದಿನ ಹೊಲದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ನೋಡಿ. ಆಗ ನೆಮ್ಮದಿಯ ಬದುಕು ಸಾಗಿಸಬಹುದು. ವರ್ತಕ, ಉದ್ಯಮಿ ಅಥವಾ ಅಧಿಕಾರಿಗಳಂತೆ ಐಷಾರಾಮಿ ಜೀವನ ಎನ್ನಲಾರೆ, ಆದರೆ ಸಂತೃಪ್ತಿಯ ಗೌರವಯುತ ಬದುಕು ಬಾಳಲಂತೂ ಅಡ್ಡಿಯಿಲ್ಲ' ಎನ್ನುವುದು ರೈತಾಪಿ ವರ್ಗಕ್ಕೆ ನಾರಾಯಣ ರೆಡ್ಡಿಯವರ ಕಿವಿಮಾತು. ಅರ್ಥ ಮಾಡಿಕೊಂಡರೆ ಕೃಷಿ ಬದುಕು ಬಂಗಾರ.
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

