'ಹೆಂಗಿದ್ರೂ ನಡೆಯುತ್ತೆ' ಎಂಬ ಸಾಲಿಗೆ ಶಿಕ್ಷಣವೂ ಸೇರುವುದು ಬೇಡ
ತ್ವರಿತ ಗತಿಯ ಅಭಿವೃದ್ಧಿಯನ್ನು ಸಾಧಿಸಬೇಕೆಂದು ಹಪಾಹಪಿಸುವ ಯಾವುದೇ ದೇಶವಾಗಿರಲಿ, ಅದು ತನ್ನ ಜನಸಂಖ್ಯೆಯಲ್ಲಿ ಅಧಿಕವಾಗಿರುವ ಮಕ್ಕಳ ಮತ್ತು ಯುವಕರಲ್ಲಿ 'ವಿಶಿಷ್ಟ ಲಾಭಾಂಶವನ್ನು' ಕಾಣುತ್ತದೆ. ಆದರೆ ನಮ್ಮ ದೇಶದಲ್ಲಿ ನಡೆಯುತ್ತಿರುವ ಘಟನಾವಳಿಗಳೆಲ್ಲ ನಿಜಕ್ಕೂ ಆತಂಕಕಾರಿಯಾಗಿವೆ. ದುರದೃಷ್ಟವಶಾತ್, ನಮ್ಮ ಸರ್ಕಾರಗಳು ಈ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಲೇ ಇಲ್ಲ. ಇತ್ತೀಚೆಗೆ ನಮ್ಮ ಪ್ರಧಾನಿಗಳು ಖ್ಯಾತ ಗೊಳಿಸಿದ ಪದ 'ಇ್ಡಡ್ಝಟಿಜಡಡ ಛಡ ್ಡಡ್ಡಛಟ' ಎನ್ನುವ ಮಾತನ್ನೇ ಉಳಿದ ರಾಜಕಾರಣಿಗಳೂ ಆಡಿ ನಿರುಮ್ಮಳರಾಗಿ ಕುಳಿತಿದ್ದಾರೆ.
ಕಳೆದ ವಾರ 'ಪ್ರಥಮ್' ಎನ್ನುವ ಅಂತಾರಾಷ್ಟ್ರೀಯ ಖ್ಯಾತಿಯ ಎನ್‌ಜಿಒ, 2012ರ ವಾರ್ಷಿಕ ಶಿಕ್ಷಣಾ ವರದಿಯನ್ನು ಪ್ರಕಟಿಸಿತು. ಈ ವರದಿ ನಿಜಕ್ಕೂ ಚಿಂತೆ ಹುಟ್ಟಿಸುವ ಅಂಶಗಳನ್ನು ಹೊಂದಿದ್ದು, ಅವು ಈ ಕೆಳಕಂಡಂತಿವೆ.
2010ರಲ್ಲಿ, 5ನೇ ತರಗತಿಯಲ್ಲಿ ಓದುವ ಸುಮಾರು 29.1 ಪ್ರತಿಶತ ಮಕ್ಕಳಿಗೆ ಎರಡಂಕಿಯ ಲೆಕ್ಕವನ್ನು ಬಗೆಹರಿಸುವುದಕ್ಕೂ ಬರುತ್ತಿರಲಿಲ್ಲ. ಈ ಸಂಖ್ಯೆ 2011ರಲ್ಲಿ 39 ಪ್ರತಿಶತಕ್ಕೇರಿದರೆ, 2012ರ ವೇಳೆಗೆ 46.6 ಪ್ರತಿಶತಕ್ಕೆ ಬಂದು ತಲುಪಿದೆ. ಒಂದನೇ ತರಗತಿಯ ಪುಸ್ತಕವನ್ನು ಓದಬಲ್ಲ 3ನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ 2008ರಲ್ಲಿ 50 ಪ್ರತಿಶತದಷ್ಟಿದ್ದರೆ 2012ರಲ್ಲಿ 30 ಪ್ರತಿಶತಕ್ಕಿಳಿದಿದೆ. ಇನ್ನು 100ರ ವರೆಗಿನ ಸಂಖ್ಯೆಗಳನ್ನು ಸರಿಯಾಗಿ ಗುರುತಿಸಬಲ್ಲ ವಿದ್ಯಾರ್ಥಿಗಳ ಸಂಖ್ಯೆ 70 ಪ್ರತಿಶತದಿಂದ 50 ಪ್ರತಿಶತಕ್ಕೆ ಕುಸಿದಿದೆ. 2010ರಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದಾಗಿನಿಂದ ಈ 'ಕುಸಿಯುವಿಕೆ' ತೀವ್ರಗತಿಯಲ್ಲಿ ಸಾಗಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುವುದಿಲ್ಲ ಎನ್ನುವ ಭಾವನೆಯಿಂದ ಖಾಸಗಿ ಶಾಲೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ 2006ರಲ್ಲಿ 18.7 ಪ್ರತಿಶತದಷ್ಟಿದ್ದರೆ, 2012ರ ವೇಳೆಗೆ 28.3 ಪ್ರತಿಶತಕ್ಕೇರಿದೆ.
ಇದೇ ಪರಿಪಾಠವೇನಾದರೂ ಮುಂದುವರಿದರೆ ಕೆಲವೇ ದಿನಗಳಲ್ಲಿ ಭಾರತದ 50 ಪ್ರತಿಶತದಷ್ಟು ಮಕ್ಕಳು 'ಹೆಚ್ಚು ಶುಲ್ಕ ಕೀಳುವ' ಖಾಸಗಿ ಶಾಲೆಯಲ್ಲಿಯೇ ಓದುತ್ತಿರುತ್ತಾರೆ. ಬಡವರ ಪರವಾಗಬೇಕಿದ್ದ ಯೋಜನೆಯೊಂದು ಹೇಗೆ 'ಬಡವರ ವಿರೋಧಿ' ಆಗಿ ಬದಲಾಗಿದೆ ಎನ್ನುವುದನ್ನು ನೀವೇ ನೋಡಿ.
ಮಾನವ ಸಂಪನ್ಮೂಲವೇ ಭಾರತದ ಅತಿದೊಡ್ಡ ಸಂಪನ್ಮೂಲವಾಗಿದ್ದರೆ ಮತ್ತು ಅದನ್ನು ಉತ್ಕೃಷ್ಟಮಟ್ಟಕ್ಕೊಯ್ಯಲು 'ಉತ್ತಮ ಶಿಕ್ಷಣವೇ' ಕೀಲಿ ಕೈ ಆಗಿದ್ದರೆ, ನಿಜಕ್ಕೂ ನಮ್ಮ ಸರ್ಕಾರದ ಶಿಕ್ಷಣ ನೀತಿ ಮತ್ತು ಯೋಜನೆಗಳು ಸರಿಯಾದ ಕೀಲಿ ಕೈಯನ್ನು ತಯಾರಿಸಲು ವಿಫಲವಾಗುತ್ತಿವೆ ಎನ್ನಲೇಬೇಕು. ಪ್ರಥಮ್‌ನ ವರದಿ ನಿಜಕ್ಕೂ ಗಮನಾರ್ಹವಾಗಿದೆ, ಏಕೆಂದರೆ 'ಗುಣಾತ್ಮಕ ಅಭಿವೃದ್ಧಿ' ಕೇವಲ ವ್ಯವಸ್ಥೆಯಲ್ಲಿ ಹಣ ಹೂಡುವುದರಿಂದ ಆಗಿಬಿಡುವುದಿಲ್ಲ ಎಂದು ಅದು ತೋರಿಸುತ್ತದೆ. ಶಿಕ್ಷಣದಲ್ಲಿ ಮೊದಲ ಪ್ರಾಧಾನ್ಯತೆ ಸಿಗುವುದು ಗುಣಮಟ್ಟಕ್ಕೆ. ಹಾಗಾಗೇ ಬಡ ಪೋಷಕರೂ ಕೂಡ ಸರ್ಕಾರಿ ಶಾಲೆಗಳ ಬದಲು 'ಖರ್ಚಿನ' ಖಾಸಗಿ ಶಿಕ್ಷಣ ಸಂಸ್ಥೆಗಳತ್ತಲೇ ಹೆಚ್ಚು ಒಲವು ತೋರಿಸುತ್ತಾರೆ. ಭಾರತ ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಕಾಣಬೇಕಾದರೆ , ನೀತಿ ನಿರೂಪಕರೂ ಕೂಡಲೇ ಗುಣಮಟ್ಟದ ಶಿಕ್ಷಣದತ್ತ ಗಮನ ಹರಿಸಬೇಕು. ಶಾಲೆಗಳಿಂದ ಪರಿಣಾಮಕಾರಿ ಫಲಿತಾಂಶಗಳು ಹೊರಬರದೆ ಇರುವಾಗ, ಅಭಿವೃದ್ಧಿ ಸಾಧಿಸಲು ದೇಶಕ್ಕೆ ಸಾಧ್ಯವೇ?
ಈ ಸಮಸ್ಯೆಗೆ ಪರಿಹಾರವೇನು?
ಒಂದು. ಭಾರತದ ಶಾಲಾ ಶಿಕ್ಷಣಕಷ್ಟೇ ಅಲ್ಲದೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯೆಂದರೆ, ಶಿಕ್ಷಣ ವಲಯದ ಮೇಲಿನ ಸರ್ಕಾರದ ಅತಿಯಾದ ಹಿಡಿತ. ಶಿಕ್ಷಣ ಗುಣಮಟ್ಟ ಸುಧಾರಣೆಯಾಗಬೇಕು ಎನ್ನುವ ಆಕಾಂಕ್ಷೆ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಮತ್ತು ಸಮುದಾಯಕ್ಕಿಂತ ಹೆಚ್ಚಾಗಿ ಬೇರಾರಿಗಿರಲು ಸಾಧ್ಯ? ಆದರೂ ಈ ವಿಷಯದಲ್ಲಿ ಅತಿ ಕಡಿಮೆ ಮಾತನಾಡುವ ಅಧಿಕಾರವನ್ನು ಪಡೆದಿರುವವರು ಅವರೇ! ಸರ್ಕಾರ ಶಿಕ್ಷಕರಿಗೆ ಸಂಬಳ ಕೊಡುತ್ತದೆ ಎನ್ನುವ ನೆಪವನ್ನು ಮುಂದಿಟ್ಟು ವರ್ಷಗಳಿಂದ ನೇತಾರರು ಮತ್ತು ಬಾಬುಗಳು ಸರ್ಕಾರಿ ಶಾಲೆಗಳಲ್ಲಷ್ಟೇ ಅಲ್ಲದೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆಯೂ ಹಿಡಿತ ಸಾಧಿಸಿಬಿಟ್ಟಿದ್ದಾರೆ. ದೆಹಲಿಯಲ್ಲಿ ಮತ್ತು ರಾಜ್ಯದ ರಾಜಧಾನಿಗಳಲ್ಲಿ ಕುಳಿತ ದೃಷ್ಟಿಹೀನ ವ್ಯವಸ್ಥೆಯನ್ನು ನಾವು ಈ ಕೂಡಲೆ ಛಿದ್ರ ಮಾಡಬೇಕು. ಅದರೊಟ್ಟಿಗೆ ಶಿಕ್ಷಕರು, ಶಾಲಾ ಆಡಳಿತಗಳು ಮತ್ತು ಶೈಕ್ಷಣಿಕ ಪರಿಣತರಿಗೆ ಹೆಚ್ಚಿನ ಅಧಿಕಾರ ನೀಡುವುದರ ಜೊತೆಗೆ, ಅವರನ್ನು ಉತ್ತರದಾಯಿಯನ್ನಾಗಿ ಮಾಡಬೇಕು.
ಎರಡು. ಏಳನೇ ತರಗತಿಯವರೆಗಿನ ಎಲ್ಲಾ ಪರೀಕ್ಷೆಗಳನ್ನು ಮತ್ತು ಅಸ್ಸೆಸ್‌ಮೆಂಟ್‌ಗಳನ್ನು ತೆಗೆದುಹಾಕಬೇಕು ಎನ್ನುವ ಆರ್‌ಟಿಇಯ ನಿರ್ಧಾರ ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಈ ನಡೆಯಿಂದಾಗಿಯೇ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಇದರಿಂದ ಎಚ್ಚರಗೊಂಡ ಹಲವಾರು ವಿಶೇಷಜ್ಞರು, 'ಪರೀಕ್ಷೆಗಳನ್ನು ನಡೆಸದಿರುವ ಆರ್‌ಟಿಇಯ ಯೋಜನೆ ಗ್ರಾಮೀಣ ಮಕ್ಕಳನ್ನು ಕೇವಲ ಗ್ರಾಮೀಣ ಉದ್ಯೋಗ ಯೋಜನೆಗಷ್ಟೇ ತಯಾರು ಮಾಡುತ್ತಿದೆ' ಎಂದು ರೇಗುತ್ತಿದ್ದಾರೆ. ಹಾಗಾಗೇ, ನಿಯಮಿತ ಪರೀಕ್ಷೆಗಳನ್ನು ಬಿಟ್ಟು ಬಿಡಲು ಶಾಲೆಗಳನ್ನು ಬೆಂಬಲಿಸಿ ಮತ್ತು ಅದರ ಬದಲಿಗೆ ಮಕ್ಕಳ ಬೌದ್ಧಿಕ, ಕ್ರಿಯಾತ್ಮಕ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗಬಲ್ಲ ಹೊಸ ಮತ್ತು ಸಮಗ್ರ ತರಬೇತಿ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲು ಅವುಗಳನ್ನು ಪ್ರೋತ್ಸಾಹಿಸಬೇಕು.
ಮೂರು. ಸರ್ಕಾರ ಅರ್ಹ ಶಿಕ್ಷಕರ ನೇಮಕವಾಗದಂತೆ ನೋಡಿಕೊಳ್ಳುತ್ತಿದೆಯಾದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಇದಕ್ಕೆ ಉತ್ತಮ ಉದಾಹರಣೆಯಾಗಿ ಇತ್ತೀಚೆಗೆ ಬಂಧಿಯಾದ ಹರ್ಯಾಣಾದ ಮುಖ್ಯಮಂತ್ರಿಗಳ ವಿಷಯವನ್ನೇ ತೆಗದುಕೊಳ್ಳಬಹುದು. ಬಹುತೇಕ ರಾಜ್ಯಗಳಲ್ಲಿಂದು ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಬೃಹತ್ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ. ಲಂಚ ಕೊಟ್ಟು ಶಿಕ್ಷಕರಾಗುವವರಿಂದ ಏನು ತಾನೆ ನಿರೀಕ್ಷಿಸಲು ಸಾಧ್ಯ? ಹಾಗಾಗೇ, ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಮಂತ್ರಿಗಳ, ರಾಜಕಾರಣಿಗಳ ಮತ್ತು ಅಧಿಕಾರಿಗಳ ಅಧಿಕಾರವನ್ನು ಕಸಿದುಕೊಂಡು, ಅದನ್ನು ಶಿಕ್ಷಣ ಸಂಸ್ಥೆಗಳ, ಸಮುದಾಯಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ವಿಶೇಷ ಅಧಿಕಾರವನ್ನಾಗಿ ಮಾಡಬೇಕು. ಇದೇ ವೇಳೆಯಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಲ್ಲಿ ತೊಡಗುವ ಖಾಸಗಿ ಸಂಸ್ಥೆಗಳ ನಿರ್ಲಜ್ಜ ಆಡಳಿತ ಮಂಡಳಿಗಳಿಗೂ ಕಡಿವಾಣ ಹಾಕುವ ಕೆಲಸವಾಗಬೇಕು.
ನಾಲ್ಕು. ಶಿಕ್ಷಕರ ನೇಮಕಾತಿಗೆ ಎದುರಾಗಿರುವ ಅತಿದೊಡ್ಡ ಅಡ್ಡಿಯೆಂದರೆ 'ಜಾತಿ ಆಧಾರಿತ ಮೀಸಲಾತಿ'.
ಈ ಕಟು ಸತ್ಯದ ಬಗ್ಗೆ ಎಲ್ಲರಿಗೂ ಗೊತ್ತಿದೆಯಾದರೂ, ಕೆಲವೇ ಕೆಲವರು ಬಹಿರಂಗವಾಗಿ ಈ ಬಗ್ಗೆ ಮಾತನಾಡಿದರೆ, ಉಳಿದವರು ಖಾಸಗಿಯಾಗಿ ವಟಗುಟ್ಟುತ್ತಾರೆ. ಹಾಗಂತ ನಿರ್ದಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳು ಉಳಿದ ಜಾತಿಯವರಿಗಿಂತ ಬುದ್ಧಿವಂತರಾಗಿರುತ್ತಾರೆ ಎಂಬುದು ನನ್ನ ವಾದವಲ್ಲ. ಸ್ವಾಭಾವಿಕ ಕೌಶಲ, ಅರ್ಹತೆ ಮತ್ತು ಪಾಠ ಹೇಳಿಕೊಡುವ ಜ್ಞಾನ ಯಾವ ಜಾತಿ/ಮತದ ಸ್ವತ್ತೂ ಅಲ್ಲ. ಆದರೆ, ಶಿಕ್ಷಕರಾಗುವುದಕ್ಕೆ ಅನರ್ಹರಾದವರಿಗೆ ಮೀಸಲಾತಿ ವ್ಯವಸ್ಥೆಯಡಿಯಲ್ಲಿ ನೇಮಕಾತಿ ಮಾಡಿ, ಮಕ್ಕಳನ್ನೇಕೆ(ಪರಿಶಿಷ್ಟ ಜಾತಿ/ಪಂಗಡದವರನ್ನೂ ಒಳಗೊಂಡು) ನಾವು ಶಿಕ್ಷಿಸುತ್ತಿದ್ದೇವೆ? ಭಾರತದ ಆರ್ಥಿಕ ಪ್ರಗತಿಯಲ್ಲಿ ಅವರು ಎಂದೆಂದೂ ಹಿಂದುಳಿಯುವಂತೆ ಮಾಡಲು ರಚಿಸಲಾದ ಸಂಚು ಇದು ಎಂದು ಅನಿಸುವುದಿಲ್ಲವೇ? ಉತ್ತಮ ಶಿಕ್ಷಣ(ಅದು ದೊರೆಯಬೇಕಾದರೆ ಉತ್ತಮ ಶಿಕ್ಷಕರೂ ಬೇಕು) ಪ್ರತಿಯೊಬ್ಬ ಮಗುವಿನ ಜನ್ಮಸಿದ್ಧ ಹಕ್ಕಲ್ಲವೇ? ಹಿಂದುಳಿದ ಜಾತಿ/ಮತಕ್ಕೆ ಸೇರಿದ ಆಕಾಂಕ್ಷಿಗಳಿಗೆ ಶಿಕ್ಷಕ ತರಬೇತಿ ನೀಡಲು ಸರ್ಕಾರ ಎಷ್ಟು ಬೇಕಾದರೂ ಖರ್ಚು ಮಾಡಲಿ, ಆದರೆ ನೇಮಕಾತಿ ಮತ್ತು ಬಡ್ತಿಯ ವಿಷಯ ಬಂದಾಗ ಯೋಗ್ಯತೆಯನ್ನೇ ಏಕೈಕ ಮಾನದಂಡವನ್ನಾಗಿಸಿಕೊಳ್ಳಬೇಕು.
ಐದು. ಗುಣಮಟ್ಟ ಎನ್ನುವುದು ಪಠ್ಯಕ್ರಮ ಸಂಬಂಧಿತ ವಿಷಯಗಳೊಂದಿಗೆ ಹತ್ತಿರದ ನಂಟು ಹೊಂದಿದೆ. ಅಂದರೆ ಪಠ್ಯೇತರ ಮತ್ತು ಸೇವಾಧಾರಿತ ಕಲಿಕೆ; ಸೃಜನಾತ್ಮಕ ಶೈಕ್ಷಣಿಕ ಆಚರಣೆಗಳು; ಮುಕ್ತ ಆಲೋಚನೆಯತ್ತ ಹೆಚ್ಚು ಗಮನ; ಮತ್ತು, ಇವೆಲ್ಲವುಗಳಿಗಿಂತ ಹೆಚ್ಚಾಗಿ, ಸಾಮಾಜಿಕ ಮತ್ತು ನೈತಿಕ ಮೌಲ್ಯಗಳಿಗೆ ಹೆಚ್ಚು ಒತ್ತುಕೊಡುವುದು. ಇಲ್ಲಿ ಕೂಡ, ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಗಳನ್ನು ಕೇವಲ ಪಠ್ಯ ಪುಸ್ತಕಗಳ ಗುಲಾಮರಾಗಲು ಬಿಡದೆ, ಅವುಗಳಿಗೆ ಹೊಸ ಮಾರ್ಗಗಳನ್ನು ಅನುಸರಿಸುವ ಸ್ವಾತಂತ್ರ್ಯ ಕೊಡಬೇಕು. ಭಾರತಕ್ಕೆ ಇಂದು ಅವಶ್ಯಕವಿರುವುದು ಶೈಕ್ಷಣಿಕ ಪ್ರಯೋಗಗಳು ಮತ್ತು ತಂತ್ರಜ್ಞಾನ ಆಧಾರಿತ ಸಂಶೋಧನೆಗಳ ಹೆಚ್ಚಳವನ್ನು ಪ್ರೋತ್ಸಾಹಿಸಿ ಪ್ರತಿ ಶಾಲೆಗಳಿಗೂ ಪ್ರಯೋಜನ ತಂದುಕೊಡಬಲ್ಲ ಪರಿಸರ.
ಸರಳವಾಗಿ ಹೇಳಬೇಕೆಂದರೆ, ಶಿಕ್ಷಣ ಎನ್ನುವದು 'Business as usual' ಆಗುವುದು ಬೇಡ. ಶಿಕ್ಷಣ ಹಕ್ಕು ಕಾಯ್ದೆ ಪ್ರತಿ ಮಗುವಿಗೆ 'ಉತ್ತಮ ಶಿಕ್ಷಣದ' ಹಕ್ಕಾಗಲಿ.
- ಸುಧೀಂದ್ರ ಕುಲಕರ್ಣಿ
sudheenkulkarni@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

