ಟಿಪ್ಪು ಹೆಸರಿಡಲಿ ಬಿಡಿ, ವಿಶ್ವವಿದ್ಯಾಲಯಕ್ಕಲ್ಲವೇ!
ಶ್ರೀರಂಗ ಪಟ್ಟಣದಲ್ಲಿ ಅಲ್ಪಸಂಖ್ಯಾತರಿಗೆ ಪ್ರಮುಖವಾಗಿರುವ ಒಂದು ವಿಶ್ವವಿದ್ಯಾಲಯಕ್ಕೆ ಟಿಪ್ಪು ಸುಲ್ತಾನರ ಹೆಸರಿಡುವುದಕ್ಕೆ ಸಂಬಂಧಿಸಿ ಕನ್ನಡದ ಪ್ರಖ್ಯಾತರ ವಾಗ್ವಾದಗಳನ್ನು ಓದಿದಾಗ ನನಗನಿಸಿದ್ದು ಹೀಗೆ -ವಿಶ್ವವಿದ್ಯಾಲಯಕ್ಕಲ್ಲವೇ ಹೆಸರಿಡಲಿ ಬಿಡಿ. ಏನೀಗ? ಇದರಿಂದ ವಿಶ್ವವಿದ್ಯಾಲಯವೆಂದರೆ ಒಂದು ಗೌರವದ ಸಂಸ್ಥೆ ಎಂದು ತಿಳಿದವರಿಗೆ ಖುಷಿಯಾಗುತ್ತದೆ. ಮೈಸೂರು ಹುಲಿ ಟಿಪ್ಪುರವರ ಹೆಸರು ಅಮರವಾಯ್ತೆಂದು ತಿಳಿಯುತ್ತಾರೆ. ಇನ್ನು, ಇದನ್ನು ವಿರೋಧಿಸುವವರೂ ಬೇಸರ ಪಡಬೇಕಾಗಿಲ್ಲ. ಇಂದಿನ ಮತ್ತು ಇದೇ ಮಾದರಿಯಲ್ಲಿ ಮುಂದಾಗಲಿರುವ ವಿಶ್ವವಿದ್ಯಾಲಗಳ ಒಳ ಸತ್ಯವನ್ನು ತಿಳಿದವರಿಗೆ ಗೊತ್ತೇ ಇದೆ. ಅಲ್ಲಿ ಆರಂಭದಿಂದಲೇ ತೊಡಗುವ ಪ್ರತಿಯೊಂದು ಹಗರಣದ ಜೊತೆಗೂ ಟಿಪ್ಪು ಹೆಸರು ಪ್ರಕಟಗೊಳ್ಳುತ್ತದೆ. ಅಲ್ಲಿ ಜರುಗಲಿರುವ ವೈಸ್ ಚಾನ್ಸಲರ್ ನೇಮಕದ ಪೈಪೋಟಿ, ಹಣಕಾಸಿನ ಅವ್ಯವಹಾರ, ಸ್ವಜನ ಪಕ್ಷಪಾತ, ಹೆಣ್ಣು ಮಕ್ಕಳ ಶೋಷಣೆ, ಲೈಂಗಿಕ ಕಿರುಕುಳ, ಹಣಕ್ಕಾಗಿ ಅಂಕ ನೀಡಿಕೆ, ಶಿಕ್ಷಕರ ನೇಮಕಾತಿಗಾಗಿ ಲಂಚ, ಪಿ. ಎಚ್. ಡಿ. ಗೆ ಲಂಚ, ಯು.ಜಿ.ಸಿ. ಅನುದಾನಗಳ ಗುಳುಂ ಹೀಗೆ ಇನ್ನೂ ನನಗೆ ಗೊತ್ತಿಲ್ಲದ ಕೆಲವಾದರೂ ಹಗರಣಗಳು ನಡೆದದ್ದನ್ನು ಟಿಪ್ಪು ಹೆಸರನ್ನು ಬಿಟ್ಟು ಮಾಧ್ಯಮಗಳು ಹೇಗೆ ಪ್ರಸಾರಿಸಿಯಾವು? ಆಗ ಟಿಪ್ಪುಗೇ ಅನ್ನಿಸಬಹುದು 'ಯಾಕಾದರೂ ನನ್ನ ಹೆಸರನ್ನಿಟ್ಟು ಹೀಗೂ ಅವಮಾನಿಸುತ್ತಾರಪ್ಪ?'
ಈಗ ವಾಸ್ತವ ಏನೆಂದರೆ ಈ ಹೆಸರಿಡುವ ಹುನ್ನಾರಕ್ಕೆ ಮಾನ್ಯ ಕೇಂದ್ರದ ಮಂತ್ರಿಗಳಾದ ರೆಹಮಾನ್ ಖಾನರಿಗೆ ಐತಿಹಾಸಿಕ ವ್ಯಕ್ತಿ ಟಿಪ್ಪು ಮೇಲೆ ಗೌರವವಿರುವುದೇ ಕಾರಣವೆಂದು ಯಾರಾದರೂ ನಂಬಿದ್ದರೆ ಅವರು ನಿಜಕ್ಕೂ ಅಮಾಯಕರು. ಅಂತಹವರಿಂದ ನಾಲ್ಕು ಓಟು ಹೆಚ್ಚು ಸಿಕ್ಕಿದರೂ ಸಿಕ್ಕಬಹುದು. ಹಾಗೆಯೇ ಕರ್ನಾಟಕದಲ್ಲಿ ಜನತಾ ದಳಕ್ಕೆ ಶಿಫ್ಟ್ ಆಗುವ ಕೆಲವು ಓಟುಗಳು ಉಳಿದರೂ ಉಳಿದಾವು. ಆದರೆ ಅವರು ವಿಶ್ವವಿದ್ಯಾಲಯದ ಫಲಾನುಭವಿಗಳಾಗುವ ಸಾಧ್ಯತೆ ಕಡಿಮೆ. ಇವರಲ್ಲದೆ ಮತ್ತುಳಿದಂತೆ ವೋಟ್ ಬ್ಯಾಂಕ್‌ನ ಠೇವಣಿಗಳಲ್ಲಿ ಹೆಚ್ಚೇನೂ ಬದಲಾವಣೆ ಆಗದು. ಏಕೆಂದರೆ ಈ ದೇಶದಲ್ಲಿ ಒಂದು ಸಿದ್ಧ ಮನೋಸ್ಥಿತಿ ಇದೆ. ಅಲ್ಪಸಂಖ್ಯಾತರು ಕಾಂಗ್ರೆಸ್, ಜನತಾದಳ, ಬಿಜೆಪಿ ಮುಂತಾದ ಪಕ್ಷಗಳಿಗೆ ಒಲಿದಿರುವಲ್ಲಿ ನಿರ್ದಿಷ್ಟ ಮನೋಧರ್ಮ ಇದೆ. ಅದನ್ನು ಸುಲಭದಲ್ಲಿ ಅಲ್ಲಾಡಿಸುವುದು ಕಷ್ಟ. ಒಂದು ವಿಶ್ವವಿದ್ಯಾಲಯಕ್ಕೆ ಟಿಪ್ಪು ಹೆಸರಿಡುವುದರ ಮೂಲಕ ಇದನ್ನು ಬದಲಾಯಿಸ ಬಲ್ಲೆನೆಂದು ಹೊರಟಿರುವುದು ಯಾವ ಜಾಣತನವೋ ತಿಳಿಯದು.
ಇಂದಿನ ವಿಪರ್ಯಾಸವೇನೆಂದರೆ ನಮಗೆ ಕೆಲವೊಂದು ಸಂಗತಿಗಳನ್ನು ಹೇಳಲು ಬ್ರಿಟಿಷರು ಹೇಳಿದ ಇತಿಹಾಸ ಆಧಾರವಾಗುತ್ತದೆ, ಆದರೆ ಇನ್ನು ಕೆಲವಕ್ಕೆ ಆಗುವುದಿಲ್ಲ. ಇದು ವೈಜ್ಞಾನಿಕ ದೃಷ್ಟಿಕೋನವೇ ವಿಶ್ಲೇಷಣಾತ್ಮಕವಾಗಿ ನೋಡಿದರೆ ವಿಶ್ವದಲ್ಲಿ ಅಂತೆಯೇ ಭಾರತದಲ್ಲಿ ಪ್ರತಿಯೊಬ್ಬ ಐತಿಹಾಸಿಕ ಅರಸನಿಗೂ ಎರಡು ಮುಖಗಳಿವೆ. ಅವು ಇಂದಿನ ರಾಜಕಾರಣಿಗಳಿಗೂ, ಸಂತ-ಸನ್ಯಾಸಿಗಳಿಗೂ, ಸಾಹಿತಿಗಳಿಗೂ ಇವೆ. ಹಾಗಿರುವಾಗ ಟಿಪ್ಪು ಮಾತ್ರ ಈ ದ್ವಿಮುಖ ವ್ಯಕ್ತಿತ್ವವನ್ನು ಮೀರಿ ನಿಲ್ಲಲು ಹೇಗೆ ಸಾಧ್ಯ? ಈಗ ಉಳಿದಿರುವ ಪ್ರಶ್ನೆ ಏನೆಂದರೆ ನಮಗೆ ವಿಶ್ವವಿದ್ಯಾಲಯ ಬೇಕಾದ್ದೋ ಅಥವಾ ಅದಕ್ಕೆ ಹೆಸರೇನೆಂದಿಡುತ್ತೇವೆಂಬುದು ಮುಖ್ಯವೋ? ಸ್ಪರ್ಧಾತ್ಮಕವಾದ ಗುಣಮಟ್ಟದ ಶಿಕ್ಷಣ ನೀಡುವ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದು ನಮ್ಮ ಗುರಿಯೋ ಅಥವಾ ಟಿಪ್ಪು ವಿಜೃಂಭಣೆಗಾಗಿ ವಿ.ವಿ. ಸ್ಥಾಪಿಸುವುದೋ ಅಥವಾ ಇದು ಬರೇ ಓಟಿನ ಆಟವೋ? ಕೊನೆಯದ್ದೇ ಹೌದೆನ್ನಿಸುತ್ತದೆ.
ನಿಜಕ್ಕಾದರೆ ಇದು ಓಟಿನ ವಿಷಯವೇ ಅಲ್ಲ. ಇದು ಮಾನ್ಯ ರೆಹಮಾನ್ ಖಾನರು ಜಾರುತ್ತಿದ್ದ ತಮ್ಮ ಪ್ರತಿಷ್ಠೆಯನ್ನು ಮೇಲೆತ್ತಿ ಮತ್ತೆ ಮುಖ ಒರೆಸಿಕೊಳ್ಳುವ ಯತ್ನ. ಆದರೆ ಆ ಪ್ರಯತ್ನದ ಫಲವನ್ನು ಈಗ ಏಕಮುಖ ಚಿಂತಕರ ಚರ್ಚೆಯಲ್ಲಿ ಕಾಣುತ್ತಿದ್ದೇವೆ. ತಾನು ಹೇಳಿದ್ದೇ ಐತಿಹಾಸಿಕ ವಾಸ್ತವಾಂಶಗಳೆಂದು ಅಧ್ಯಯನಕ್ಕೆ ಹೋಗದೆ ಮಾತಾಡುವ ವಿದ್ವಾಂಸರು ಟಿಪ್ಪುವಿನಿಂದ ಹಿಂದಕ್ಕೆ ಶಂಕರಾಚಾರ್ಯರ ವರೆಗೂ ಕೊಳೆ ಮಾಡಿಬಿಡುತ್ತಾರೆ. ಡಾ. ಚಿದಾನಂದ ಮೂರ್ತಿಯವರು ನಿಖರ ಉಲ್ಲೇಖಗಳ ಮೂಲಕ ಪ್ರತಿಪಾದಿಸಿದ್ದನ್ನು ಖಂಡಿಸುವವರು ಯಾವುದೇ ಉಲ್ಲೇಖಗಳ ನೆರವಿಲ್ಲದೆ ತಮ್ಮ ಚಿಂತನೆಯನ್ನು ಹರಿಯ ಬಿಟ್ಟಿದ್ದಾರೆ. ಅವರಿಗೆ ಇತಿಹಾಸ ಗೊತ್ತಿಲ್ಲವೆಂದು ಇವರೂ, ಇವರಿಗೆ ಗೊತ್ತಿಲ್ಲವೆಂದು ಅವರೂ ಪ್ರತಿಪಾದಿಸುವ ಸಂದರ್ಭ ಸೃಷ್ಟಿಯಾದ ಬಳಿಕ ಚರ್ಚೆಯನ್ನು ಬದಿಗಿಡುವುದು ಒಳ್ಳೆಯದು. ಟಿಪ್ಪುವಿನ ನಿಜ ಇತಿಹಾಸವನ್ನು ದಾಖಲೆಗಳ ಆಧಾರದಲ್ಲಿ ಹೇಳಿದಾಗ ಆತನನ್ನು ಆರ್.ಎಸ್.ಎಸ್. ಏಜೆಂಟನೆಂದು ಬ್ರಾಂಡ್ ಮಾಡುವ ಪರಿ ಅಕಾಡೆಮಿಕ್ ನೈತಿಕತೆಯಲ್ಲ. ಸಾಹಿತಿಗಳು ಸೃಜನ ಶೀಲತೆಯ ಹೆಸರಲ್ಲಿ ಪ್ರಚುರಪಡಿಸಿದ್ದನ್ನೇ ನೈಜ ಇತಿಹಾಸಕಾರನು ಪ್ರತಿಪಾದಿಸಬೇಕೆಂದರೆ ಅದು ಬಹಳ ಕಷ್ಟ. ಹೀಗಾದಾಗ ವೈಚಾರಿಕತೆಯ ಹೆಸರಲ್ಲಿ ಪ್ರಸಿದ್ಧರಾದ ಸಾಹಿತಿಗಳು ಭಯೋತ್ಪಾದಕರಾಗಿ ಕಾಣಿಸುತ್ತಾರೆ. ಅವರಿಗೆ ವೈಯಕ್ತಿಕ ಲಾಭಗಳಿಗಾಗಿ ಟಿಪ್ಪು ವಿ.ವಿ. ಬೇಕಾಗಿದೆ, ಸರ್ಕಾರದಲ್ಲಿ ಹಣವಿದೆ, ಹಾಗಾಗಿ ಅದು ಆಗಿಯೇ ಆಗುತ್ತದೆ.
ಇದಕ್ಕೆ ಪೂರಕವಾಗಿ ಇನ್ನೂ ಒಂದು ವಿಷಯವಿದೆ. ಈಗಲೇ ಕಾಣುತ್ತಿದ್ದೇವಲ್ಲ, ಕೆಲವೊಂದು ವಿಷಯಗಳಲ್ಲಿ ನೈತಿಕತೆಯ ಚೂಸಿಯಾಗಿರುವ ನಮ್ಮ ರಾಜ್ಯಪಾಲರು ವಿಶ್ವ ವಿದ್ಯಾಲಯಗಳ ವೈಸ್ ಚಾನ್ಸಲರ್‌ಗಳ ನೇಮಕದಲ್ಲಿ ಅದನ್ನು ಮರೆತು ಬಿಡುತ್ತಾರೆ. ಇದು ಅವರು ಇತ್ತೀಚೆಗೆ ಮಾಡಿರುವ ನೇಮಕಾತಿಗಳಿಂದ ವ್ಯಕ್ತವಾಗುವ ಅಂಶ. ಇನ್ನು, ಟಿಪ್ಪು ಹೆಸರಿನ ಬದಲು ಶಿಶುನಾಳ ಶರೀಫ, ಮಿರ್ಜಾ ಇಸ್ಮಾಯಿಲ್, ಡಾ. ಅಬ್ದುಲ್ ಕಲಾಂ ಮುಂತಾದ ಮಹನೀಯರ ಹೆಸರುಗಳು ಟಿಪ್ಪು ಹೆಸರಿನಷ್ಟು ಕಿಕ್ ಕೊಡುವುದಿಲ್ಲ. ಆದುದರಿಂದ ಅವರ ಹೆಸರುಗಳು ಪರಿಗಣಿಸಲ್ಪಡಲಾರವು. ಮುಂದೆ ಹಗರಣಗಳೊಂದಿಗೆ ಅವರ ಹೆಸರು ಬೆರೆಯುವುದಕ್ಕಿಂತ ಅವರುಗಳ ಹೆಸರನ್ನು ಎಳೆದು ತರದಿರುವುದೇ ಲೇಸು.
- ಡಾ. ಚಂದ್ರಶೇಖರ ದಾಮ್ಲೆ
ಸುಳ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

