ಅಂಕಣಗಳು

ಮೀನು ತಳಿಗಳ ಅಭಿವೃದ್ಧಿಯ ಕತೆ ಕಣ್ತೆರೆಸಲಿ

Published On :

ಮೊದಲನೇ ಮೀನಿನ ಹೆಸರು 'ಟಿಲಾಪಿಯ' ಮತ್ತು ಎರಡನೆಯ ಮೀನಿನ ಹೆಸರು 'ಸಾಲ್ಮನ್‌'. ಈ ಎರಡು ಮೀನುಗಳು ಪ್ರಪಂಚದ ಮೀನು ತಿನ್ನುವವರಲ್ಲಿ ಅತ್ಯಂತ ಪ್ರಿಯವಾದುವು. ಹೀಗಾಗಿ, ಇವು ಪ್ರಪಂಚದ ಮಾರುಕಟ್ಟೆಗಳಲ್ಲಿ ಅತಿ ಹೆಚ್ಚು ಬೆಲೆಬಾಳುತ್ತವೆ. ಕಳೆದ ಹತ್ತು-ಹದಿನೈದು ವರ್ಷಗಳಿಂದ ಈ ಎರಡು ಮೀನುಗಳನ್ನು ಸಮೃದ್ಧಿ ಪಡಿಸುವುದಕ್ಕೆ ವಿಜ್ಞಾನಿಗಳು ಬಹಳಷ್ಟು ಶ್ರಮಿಸಿದ್ದಾರೆ. ವಿಶ್ವ ಮೀನು ಸಂಶೋಧನಾ ಸಂಸ್ಥೆ 'World Fish' ಪೆನಾಂಗ್, ಮಲೇಷಿಯಾದಲ್ಲಿದೆ.   World Fish ನ ವಿಜ್ಞಾನಿಗಳು ಇತ್ತೀಚೆಗೆ ಈಜಿಪ್ಟ್ ದೇಶದ ನೈಲ್ ನದಿಯ ಟಿಲಾಪಿಯ ಮೀನಿನ ತಳಿಯನ್ನು, ತಳಿಶಾಸ್ತ್ರದಿಂದ ವೇಗವಾಗಿ ಬೆಳವಣಿಗೆ ಹೊಂದುವ ಹಾಗೆ (ಶೇಕಡ 30 ಪ್ರತಿಶತ) ಸೃಷ್ಟಿಸಿದ್ದಾರೆ. ಈಜಿಪ್ಟ್ ಸೇರಿದಂತೆ ಆಫ್ರಿಕಾದಲ್ಲಿ ಸುಮಾರು ನಾಲ್ಕು ಮಿಲಿಯನ್ ಜನರು ತಮ್ಮ ಜೀವನಾಧಾರವಾಗಿ ಈ ಟಿಲಾಪಿಯ ಮೀನನ್ನೇ ನಂಬಿರುತ್ತಾರೆ. ಹೊಸದಾಗಿ ಆವಿಷ್ಕರಿಸಿದ ಈ ಟಿಲಾಪಿಯ ಮೀನಿನಿಂದ ಆಹಾರ ಭದ್ರತೆಯಷ್ಟೇ ಆರ್ಥಿಕ ಭದ್ರತೆಯೂ ಹೆಚ್ಚು ಮಾಡಬಹುದಾಗಿದೆ. ಈ ಹೊಸ ತಳಿಯನ್ನು 'Selective breeding' ಎಂಬ ಹಳೆಯ ತಂತ್ರಜ್ಞಾನದಿಂದ ಆವಿಷ್ಕರಿಸಲಾಗಿದ್ದು ಈಜಿಪ್ಟ್‌ನಲ್ಲಿ ಈ ತಳಿಗೆ 'ಅಬ್ಬಾಸ' ಎಂದು ನಾಮಕರಣ ಮಾಡಲಾಗಿದೆ. ಇದೇ ತರಹದ ಮತ್ತೊಂದು ಟಿಲಾಪಿಯ ತಳಿಗೆ ಘನಾದಲ್ಲಿ 'ಅಕೊಸೊಂಬೊ' (Akosombo) ಎಂದು ಕರೆಯುತ್ತಾರೆ. ಈಜಿಪ್ಟ್‌ನ ಜನರ ಶೇಕಡ 38ರಷ್ಟು ಪ್ರೊಟೀನ್ ಅವಶ್ಯಕತೆಯನ್ನು ಈ ಮೀನುಗಳು ಪೂರೈಸುತ್ತವೆ. ಹಾಗಾಗೇ, ಈ ಅಬ್ಬಾಸ ಮೀನಿನಿಂದಾಗಿ ಕಡಿಮೆ ದರದಲ್ಲಿ ಅಧಿಕ ಪ್ರೊಟೀನ್ ದೊರಕುವ ಸಂಭವ ಹೆಚ್ಚಾಗುತ್ತದೆಂಬುದು ಪರಿಣತರ ಅಭಿಪ್ರಾಯ.
ಅಲ್ಲಿ ಅತ್ಯಂತ ಕಡು ಬಡತನದಲ್ಲಿ ಬದುಕುತ್ತಿರುವ ಪ್ರಜೆಗಳಿಗೆ, ಈ ಮೀನಿನಿಂದಾಗಿ ಪ್ರೊಟೀನ್ ಅಷ್ಟೇ ಅಲ್ಲದೆ ಮೈಕ್ರೋ ಪೌಷ್ಠಿಕಾಂಶಗಳೂ ಸಹ ದೊರೆಯಲಿದೆ. ಇನ್ನು ಭಾರತದ ಬಡವರ ಸ್ಥಿತಿಯೂ ಭಿನ್ನವಾಗಿಲ್ಲ. ಹಾಗಾಗಿ, ಈ ರೀತಿ ಅಭಿವೃದ್ಧಿಪಡಿಸಿದ ಮೀನಿನ ತಳಿಗಳನ್ನು ಭಾರತದಲ್ಲಿ ಅಭಿವೃದ್ಧಿಪಡಿಸಬೇಕು, ಇಲ್ಲದಿದ್ದರೆ ಅವುಗಳನ್ನು ಆಮದು ಮಾಡಿಕೊಂಡು ಮೀನುಗಾರಿಕೆಗೆ ಬಿಡಬೇಕು. ನೈಲ್ ಟಿಲಾಪಿಯ ಮೀನಿನ ಪೂರ್ಣ ಬೆಳವಣಿಗೆಗೆ ಸಾಮಾನ್ಯವಾಗಿ ಎಂಟು ತಿಂಗಳು ಹಿಡಿಯುತ್ತದೆ. ಆದರೆ ಅಬ್ಬಾಸ ಮತ್ತು ಅಕೊಸೊಂಚೋ ಮೀನುಗಳು ನಾಲ್ಕು ಅಥವಾ ಐದು ತಿಂಗಳಲ್ಲಿ ಪೂರ್ಣ ಬೆಳವಣಿಗೆಯಾಗುತ್ತವೆ. ಅಂತಾರಾಷ್ಟ್ರೀಯ ಆಹಾರ ಸಂಸ್ಥೆಯ ಪ್ರಕಾರ, ಮೀನುಗಾರಿಕೆ ಕ್ಷೇತ್ರದಲ್ಲಿ ಆಫ್ರಿಕ 78 ಪ್ರತಿಶತದಷ್ಟು ಉದ್ಯೋಗ ಸೃಷ್ಟಿ ಮಾಡಲಿದೆಯೆಂದು ಅಂದಾಜು ಮಾಡಲಾಗಿದೆ. ಈ ತಳಿಗಳಿಂದ ಆಗಬಹುದಾದ ಪರಿಸರ ಪರಿಣಾಮಗಳ ಮೇಲೆ ಸಂಶೋಧನೆ ನಡೆಸಿಯೇ ಇವುಗಳನ್ನು ಮೀನುಗಾರಿಕೆಗೆ ಬಿಡಲಾಗಿದೆ.
ಭಾರತದ ಮೀನುಗಾರಿಕೆಯ ಕ್ಷೇತ್ರದಲ್ಲಿಯೂ ಸಹ ಟಿಲಾಪಿಯ ಮೀನುಗಳು ಅತ್ಯಂತ ಮುಖ್ಯ ಅಂಗವಾಗಿವೆ. ಆದರೆ, ನಾವು ಕೃಷಿ ಕ್ಷೇತ್ರದಲ್ಲಿಯಂತೆಯೇ ಮೀನುಗಾರಿಕೆಯಲ್ಲಿ ಸಹ ಹಿಂದುಳಿದಿದ್ದೇವೆ. ಇದಕ್ಕೆ ಮುಖ್ಯ ಕಾರಣವೆಂದರೆ ಅವಶ್ಯಕವಾದಂತಹ ಮೀನು ತಳಿಗಳು ಇಲ್ಲದಿರುವುದು ಮತ್ತು ಸಮಗ್ರ ಮೀನುಗಾರಿಕೆಯ ಉತ್ಪಾದನಾ ದರ. ಮಲೇಷಿಯ World Fish Centre ನಿಂದ GIFT(Genetically Improved Farmed Tilapia)  ಮೀನು ತಳಿಗಳನ್ನು ಆಮದು ಮಾಡಿಕೊಂಡಾಗಿದೆ. ಅದರ ಜೊತೆಗೆ ರಾಜೀವ್‌ಗಾಂಧಿ ಮೀನುಗಾರಿಕಾ ಕೇಂದ್ರದ ವಿಜ್ಞಾನಿಗಳು ಸ್ವಂತಂತ್ರವಾಗಿ 'ಭಾರತದ ಟಿಲಾಪಿಯ ಮೀನು' ತಳಿಗಳನ್ನು ಅಭಿವೃದ್ಧಿ ಮಾಡಲು ತೊಡಗಿಸಿಕೊಂಡಿದ್ದಾರೆ.
 ಈಜಿಪ್ಟ್, ಘನಾ, ಮಲೇಷಿಯ ಮತ್ತು ಫಿಲಿಪೀನ್ಸ್ ದೇಶಗಳ ಟಿಲಾಪಿಯ ತಳಿಗಳ ಯಶೋಗಾಥೆ ಒಂದು ಕಡೆಯಾದರೆ, ಮತ್ತೊಂದು ತಳಿ 'ಆಕ್ಯೂ ಅಡ್ವಾಂಟೇಜ್‌'ನ ಕಥೆಯೇ ಬೇರೆ. ಅಮೆರಿಕದ ಮೀನುಗಾರಿಕೆ ಕಂಪನಿ ಅಕ್ವಾಬೌಂಟಿ (AquaBounty) ಹದಿನೈದು ವರ್ಷಗಳ ಹಿಂದೆ ಒಂದು ಕುಲಾಂತರಿ ಸಾಲ್ಮನ್ ಮೀನನ್ನು  ಸೃಷ್ಟಿಸಿತ್ತು. ಈ ತಳಿಯನ್ನೇ ಆಕ್ಯೂ ಅಡ್ವಾಂಟೇಜ್ ಎಂದು ಕರೆಯುತ್ತಾರೆ. ಆದರೆ ಇಷ್ಟು ವರ್ಷ ಕಳೆದರೂ, ಈ ಕುಲಾಂತರಿ ತಳಿ ಮಾರುಕಟ್ಟೆಗೆ ಬಂದಿಲ್ಲ. ಅಮೆರಿಕದ ಆಹಾರ ಮತ್ತು ಔಷಧಿ ನಿಯಂತ್ರಣ ಇಲಾಖೆ (US-FDA) ಕಳೆದ ತಿಂಗಳಷ್ಟೇ ಈ ತಳಿಯ ಕುರಿತಾಗಿ ಒಂದು ಕರಡು Environmental Impact Assessment ಅನ್ನು ಪ್ರಕಟಿಸಿ ಸಾಮಾನ್ಯ ಜನರಿಂದ ಅಭಿಪ್ರಾಯ ಪಡೆದುಕೊಳ್ಳಲು ಮುಂದಾಗಿದೆ. ಕೊನೆಯದಾಗಿ ಏನಾಗುತ್ತದೋ ಎಂದು ಹೇಳುವುದು ಸಾಧ್ಯವಿಲ್ಲ. ಇನ್ನೂ ಮೂರು-ನಾಲ್ಕು ತಿಂಗಳು ಕಾದು ನೋಡಬೇಕಿದೆ.
ಮೇಲೆ ತಿಳಿಸಿರುವ ಟಿಲಾಪಿಯ ತಳಿಗೂ ಮತ್ತು ಕುಲಾಂತರಿ ಸಾಲ್ಮನ್ ಮೀನಿನ ತಳಿಗೂ ಇರುವ ವ್ಯತ್ಯಾಸವೆಂದರೆ, ಟಿಲಾಪಿಯ ತಳಿಯನ್ನು ಹಳೆಯ ತಳಿಶಾಸ್ತ್ರದಿಂದ ಅಭಿವೃದ್ಧಿಪಡಿಸಿದ್ದಾದರೆ, ಈ ಕುಲಾಂತರಿ ಸಾಮನ್ ತಳಿಯನ್ನು ಆಧುನಿಕ ಜೈವಿಕ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾಗಿದೆ. ಕುಲಾಂತರಿ ಸಾಲ್ಮನ್ ತಳಿಗೆ ಬೇರೊಂದು ಮೀನಿನಿಂದ ಹೊರತೆಗೆದ ಅಂತಃಸ್ರಾವ (hormone) ವನ್ನು ತಯಾರಿಸುವ ಗುಣಾಣುವನ್ನು ಸೇರಿಸಲಾಗಿದೆ. ಆದರೆ ಈ ತಂತ್ರಜ್ಞಾನವನ್ನು ಉಪಯೋಗಿಸಿ ಈ ತಳಿಯನ್ನು ರೂಪಿಸಲಾಗಿದೆ ಎಂಬ ಒಂದೇ ಕಾರಣದಿಂದ ಈ ಕುಲಾಂತರಿ ಮೀನನ್ನು ನಿಯಂತ್ರಣಾಧಿಕಾರಕ್ಕೆ ಒಳಪಡಿಸಿ, ಸುಮಾರು ಹದಿನೈದು ವರ್ಷದಿಂದ ಮಾರುಕಟ್ಟೆಗೆ ಬಾರದ ಹಾಗೆ ನೋಡಿಕೊಳ್ಳಲಾಗಿದೆ. ಹೇಗಿದೆ ನೋಡಿ! ಅಕ್ವಾಬೌಂಟಿ ಕಂಪನಿ ಒಂದು ಸಣ್ಣ ಕಂಪನಿ. ಈ ಕಂಪನಿ ಇಷ್ಟು ವರ್ಷ ಉಳಿದುಕೊಂಡು ಬಂದದ್ದೇ ವಿಸ್ಮಯದ ಸಂಗತಿ. ಭಾರತದಲ್ಲಾಗಲಿ ಅಥವಾ ಪ್ರಪಂಚದ ಯಾವುದೇ ದೇಶದಲ್ಲಾಗಲಿ ನಿಯಂತ್ರಣ ಪ್ರಾಧಿಕಾರಗಳು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಇಷ್ಟೊಂದು ವಿಳಂಬ ಮಾಡಿದರೆ, ಸಣ್ಣ-ಪುಟ್ಟ ಕಂಪನಿಗಳು ದಿವಾಳಿ ಏಳುವುದರಲ್ಲಿ ಸಂದೇಹವೇ ಇಲ್ಲ. ಇದರಿಂದ, ದೇಶದ ಕೈಗಾರಿಕೋದ್ಯಮಗಳಿಗೆ ತಡೆದುಕೊಳ್ಳಲಾರದಂಥ ಪೆಟ್ಟು ಬಿಳುವುದು ನಿಶ್ಚಿತ. ಹಾಗಾದಾಗ ಆ ದೇಶದ ಉದ್ಯಮಗಳು ಸ್ಪರ್ಧಾತ್ಮಕವಾಗಿ ಬೆಳೆಯುವುದಾದರೂ ಹೇಗೆ?
ಜೈವಿಕ ತಂತ್ರಜ್ಞಾನದ ನಿಯಂತ್ರಣಕ್ಕೆ ಭಾರತದಲ್ಲಿ (BRAI) ಎಂಬ ಶಾಸನವನ್ನು ಲೋಕಸಭೆಯಲ್ಲಿ ಮಂಡಿಸುವುದಕ್ಕೆ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಪ್ರತಿ ಲೋಕಸಭೆಯಲ್ಲೂ ನಡೆಯುತ್ತಿರುವ ಗದ್ದಲಗಳಿಂದ
ಅದು ಸಾಧ್ಯವಾಗುತ್ತಿಲ್ಲ. ಏತನ್ಮಧ್ಯೆ, ಕುಲಾಂತರಿ ವಿರೋಧಿ ಸಂಘಟನೆಗಳು ಇಖಆಐ ಮಸೂದೆಯನ್ನು ಲೋಕಸಭೆಗೆ ತರಬಾರದೆಂದು ಕೆಲವು ಅಜ್ಞಾನಿ ರಾಜಕಾರಣಿಗಳ ಕಿವಿ ತುಂಬಿ ಈ ಮಸೂದೆಯನ್ನು ತಿರಸ್ಕರಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಮತ್ತು ಜೈವಿಕ ತಂತ್ರಜ್ಞಾನದ ಯಾವುದೇ ರೀತಿಯ ಉತ್ಪನ್ನಗಳು ಮಾರುಕಟ್ಟೆಗೆ ಬರದಂತೆ ನೋಡಿಕೊಂಡಿದ್ದಾರೆ. ಇಖಆಐ ಮಸೂದೆ ಒಂದು ಕಡೆ ಕೊಳೆಯುತ್ತಿದ್ದರೆ, ಪ್ರಸ್ತುತ ಎಊಆಈ ಪ್ರಾಧಿಕಾರವೂ ನಿಷ್ಕ್ರಿಯವಾಗಿ ಒಂದು ವರ್ಷವೇ ಕಳೆದಿದೆ. ಇದನ್ನು ಕೇಳುವವರು ಯಾರೂ ಇಲ್ಲ. ಹಾಗಾಗೆ ಜೈವಿಕ ತಂತ್ರಜ್ಞಾನ ವಿರೋಧಿಗಳು ಕಿಲಕಿಲ ನಗುತ್ತಾ ಹಾಯಾಗಿ ಕುಳಿತಿದ್ದಾರೆ. ಭಾರತದಲ್ಲಿ ಅರಾಜಕತೆ, ಉದ್ಯಮಗಳ ಮೇಲೆ ಯಾವ ರೀತಿಯ ದುಷ್ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಮೇಲಿನ ಘಟನೆಯೇ ಸಾಕ್ಷಿ. ದೇಶದ ಎಲ್ಲಾ ಜೈವಿಕ ಉದ್ಯಮಗಳ ಗತಿ ಹೀಗಾಗುತ್ತಾ ಹೋದರೆ ಏನು ಮಾಡುವುದು?  ಬಡಪಾಯಿ ಮೀನುಗಾರರ ದುಃಖ ಕೇಳುವವರ್ಯಾರು?

-ಪ್ರೊ. ಶಾಂತು ಶಾಂತಾರಾಮ್
ಐಯೋವ ರಾಜ್ಯ ಕೃಷಿ ವಿವಿ
Shanthus@iastate.edu

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.