ಕಣ್ಣೀರ ಕೋಡಿಯಲ್ಲಿ ಮತಗಳೇ ತೇಲಾಡಿದಾಗ...!
ಈ ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಮತಬ್ಯಾಂಕ್ ಮೇಲೆ ಕಣ್ಣಿಟ್ಟು ಏನು ಬೇಕಾದರೂ ಮಾಡಬಲ್ಲರು. ಯಾರ ಕೈಕಾಲನ್ನು ಬೇಕಾದರೂ ಹಿಡಿಯಬಲ್ಲರು. ಎಷ್ಟು ಡೊಗ್ಗು ಸಲಾಮನ್ನು ಬೇಕಾದರೂ ಹೊಡೆಯಬಲ್ಲರು. ಎಂಥದೇ ಧರ್ಮಸೂಕ್ಷ್ಮ ವಿಚಾರವನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಲ್ಲರು. ಅದಕ್ಕಾಗಿ ಸೌಜನ್ಯದ ಎಲ್ಲೆಯನ್ನೂ ಮೀರಬಲ್ಲರು. ಆತ್ಮಸಾಕ್ಷಿಯನ್ನು ಅಡವಿಡಬಲ್ಲರು. ಇದಕ್ಕೊಂದು ಸಂಕೇತ ಸ್ವರೂಪ ತಾಜಾ ನಿದರ್ಶನ ಇತ್ತೀಚೆಗೆ ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ವಿಧಿವಶರಾದ ಸಂದರ್ಭ.
ಶ್ರೀಗಳು ಬದುಕಿದ್ದಾಗ ಅವರನ್ನು ಶತ್ರುವಿನಂತೆ ಕಂಡ, ಅವರನ್ನು ತಮ್ಮ ರಾಜಕೀಯ ಎದುರಾಳಿಯಂತೆ ಭ್ರಮಿಸಿದ, ಬಾಯಿಗೆ ಬಂದಂತೆ ನಿಂದಿಸಿದ, ಜಾತಿ ಸೀಮಿತ 'ಧರ್ಮ ರಾಜಕೀಯ' ಸೃಷ್ಟಿಸಿದ, ಅದೇ ರೀತಿ ಜಾತಿ-ಧರ್ಮಗಳ ನಡುವೆ ಸಂಘರ್ಷವನ್ನೂ ಬಿತ್ತಿದ ಕೆಲ ರಾಜಕಾರಣಿಗಳು ಅಂದು ಅತ್ತಿದ್ದೇನು? ಕಣ್ಣೀರ ಕೋಡಿ ಹರಿಸಿದ್ದೇನು? ಆ ಕಣ್ಣೀರ ಕೋಡಿಯಲ್ಲಿ ಬರೀ ಜಾತಿಯ ಮತಗಳೇ ತೇಲಾಡುತ್ತಿದ್ದವು! ಬೆಳ್ಳಿ ಮೀನಿನಂತೆ ಜಿಗಿದಾಡುತ್ತಿದ್ದವು!! ಬೂಟಾಟಿಕೆಯ ಬಲೆಗೂ ಸಿಗದಂತೆ!!!
ಇನ್ನೂ ಕೆಲವರು ಅಂದು ವರ್ತಿಸಿದ್ದನ್ನು ನೋಡಬೇಕಿತ್ತು. ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಿಂತ ಟಿವಿ ಚಾನೆಲ್ಗಳಿಗೆ ಅವರು ನೀಡಿದ ಮುಖದರ್ಶನವೇ ಮಿಗಿಲಾಗಿತ್ತು. ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಲು ತಾವು ಬಂದಿದ್ದೇವೆ ಎಂಬುದನ್ನು ಚಾನೆಲ್ಗಳ ಮೂಲಕ ಜನರಿಗೆ ಬಿಂಬಿಸಿಕೊಳ್ಳುವುದೇ ಅವರ ಆದ್ಯತೆಯಾಗಿತ್ತು. ಹೀಗಾಗಿ ಎಷ್ಟೋ ಮಂದಿಯ ಅಂತಿಮ ನಮನ ಟಿವಿ ಕ್ಯಾಮೆರಗಳ ಮುಂದಷ್ಟೇ ಸೀಮಿತವಾಗಿತ್ತು. ಇಲ್ಲೂ ಕೂಡ ಜಾತಿ ಮತಗಳ ಕ್ರೋಢೀಕರಣ ರಾಜಕೀಯ. ಒಂದೊಮ್ಮೆ ತಮ್ಮನ್ನು ಈ ಸಂದರ್ಭದಲ್ಲಿ ಮಾಧ್ಯಮಗಳ ಮೂಲಕ ಕಾಣದ ಸಮುದಾಯದವರು ತಪ್ಪು ತಿಳಿದುಕೊಳ್ಳಬಹುದು. ಹತ್ತಿರದಲ್ಲೇ ಇರುವ ಚುನಾವಣೆಯಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದು. ಮಠದ ಪರಂಪರೆಗೆ ತಕ್ಕಂತೆ ನಡೆದುಕೊಳ್ಳುವವರು ಕೋಪಿಸಿಕೊಂಡು ವೋಟು ಹಾಕದಿರಬಹುದು. ಇದು ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು ಎಂಬ ಲೆಕ್ಕಾಚಾರವೇ ಟಿವಿಗಳ ಮುಂದೆ ಠಳಾಯಿಸುತ್ತಿದ್ದ ಅವರ ಕಣ್ಣಲ್ಲಿ ಪ್ರತಿಫಲಿತವಾಗುತ್ತಿತ್ತು. ಲೋಭ ತುಂಬಿದ ನಕಲಿ ಭಾವನೆ ಅದುಮಿಟ್ಟಷ್ಟು ಜೋರಾಗಿ ಹೊಳೆಯುತ್ತಿತ್ತು.
ಇನ್ನು ಬ್ಯಾನರ್ ಮತ್ತು ಭಿತ್ತಿಚಿತ್ರಗಳ ಶ್ರದ್ಧಾಂಜಲಿ ರಾಜಕೀಯ ವರ್ಣಿಸಲು ಪದಗಳೇ ಸಾಲದು. ಇಲ್ಲಿ ಸ್ವಾಮೀಜಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುವುದಕ್ಕಿಂತ ಆ ಬ್ಯಾನರ್ ಮತ್ತು ಭಿತ್ತಿಚಿತ್ರಗಳು ತಂದುಕೊಡುವ ಮತಗಳ ಬಗ್ಗೆಯೇ ಅವುಗಳ ಮಾಲೀಕರ ಚಿತ್ತ ಕೇಂದ್ರೀಕೃತವಾಗಿತ್ತು. ತಮ್ಮ ಮನೆಯವರಿಗೇ ಸರಿಯಾಗಿ ಗೊತ್ತಿರದ ಮರಿಪುಡಾರಿಗಳಿಂದ ಹಿಡಿದು ಪಂಚಾಯಿತಿ ಮೆಂಬರ್, ಕಾರ್ಪೊರೇಟರ್, ಎಂಎಲ್ಎ, ಎಂಪಿ, ಮಂತ್ರಿ
ಮಹೋದಯರವರೆಗೆ ಎಲ್ಲರೂ ಸ್ವಾಮೀಜಿಗಳ ಚಿತ್ರವಿದ್ದ ಬ್ಯಾನರ್ಗಳಲ್ಲಿ ದಪ್ಪ-ದಪ್ಪ ಅಕ್ಷರಗಳಲ್ಲಿ ತಮ್ಮ ಹೆಸರು ಛಾಪಿಸಿಕೊಳ್ಳುವಲ್ಲಿ ಧನ್ಯತೆ ಪಡೆದರು. ಮತ್ತೆ ಇದರಲ್ಲೂ ಪಕ್ಷ ಮತ್ತು ವ್ಯಕ್ತಿ ಆಧಾರಿತ ರಾಜಕೀಯ. ಆಯಕಟ್ಟಿನ ಜಾಗಗಳಲ್ಲಿ ಒಬ್ಬರು ಪ್ರತಿಷ್ಠಾಪಿಸಿದ್ದ ಬ್ಯಾನರ್ ಮತ್ತು ಭಿತ್ತಿಪತ್ರವನ್ನು ಮತ್ತೊಬ್ಬರು ರಾತ್ರಿ ಕಳೆದು ಬೆಳಕು ಹರಿಯುವುದರೊಳಗೆ ತರಿದು ಹಾಕಿ ತಮ್ಮದನ್ನು ಸ್ಥಾಪಿಸಿಕೊಂಡರು. ಇನ್ನು ಕೆಲವು ಕಂಜೂಸು ಜಾಣರು ತಮಗಾಗದವರ ಹೆಸರಿನ ಮೇಲೆ ತಮ್ಮ ಹೆಸರು ಲೇಪಿಸಿಕೊಂಡರು. ಹೆಸರು ಹೋದವರು ಕೋಪಿಸಿಕೊಂಡರು. ಸ್ವಾಮೀಜಿಗಳು ಬದುಕಿದ್ದಾಗ ನಿರ್ದಿಷ್ಟ ಸಮುದಾಯಕ್ಕೆ ಸೀಮಿತ ಎಂಬಂತೆ ಕಂಡಿದ್ದ ಅನೇಕರು ಶ್ರದ್ಧಾಂಜಲಿ ಸಂದರ್ಭದಲ್ಲಿ ಮರೆತ ತಾರತಮ್ಯದಲ್ಲಿ ಮತಗಳೇ ಮೆರೆಯುತ್ತಿದ್ದವು!
ಜನನಾಯಕರ ಈ ರೀತಿಯ ವರ್ತನೆ ಆದಿಚುಂಚನಗಿರಿ ಶ್ರೀಗಳ ವಿಧಿವಶ ಸಂದರ್ಭಕ್ಕೆ ಮಾತ್ರ ಸೀಮಿತವಾಗಿದ್ದುದಲ್ಲ. ಇದು ಬೇರೆ-ಬೇರೆ ಸಮುದಾಯದ ಶ್ರೀಗಳ ಗತಕಾಲದಲ್ಲೂ ರಾರಾಜಿಸಿದೆ. ನಕಲಿ ಧಾವಂತ, ಬಲವಂತದ ಕಣ್ಣೀರು, ನಾಟಕೀಯ ಭಾವ ಪ್ರದರ್ಶನ, ಚುನಾವಣೆ ರಾಜಕೀಯ ಪ್ರಲೋಭನ ಆಗೆಲ್ಲ ಈಗಿನಷ್ಟೇ ಢಾಳಾಗಿ ಕಂಡಿದೆ. ಈಗಿನದು ಬರೀ ಸಂಕೇತ ಮಾತ್ರ. ಮತ ಗಳಿಕೆಗಾಗಿ ಈ ರಾಜಕಾರಣಿಗಳು ಏನೂ ಬೇಕಾದರೂ ಮಾಡಬಲ್ಲರು, ಹೇಗೆ ಬೇಕಾದರೂ ವರ್ತಿಸಬಲ್ಲರು, ಒಬ್ಬರು ಸ್ವಾಮೀಜಿಯ ಸಾವನ್ನೂ ಆ ಸಂದರ್ಭದ ಸೂಕ್ಷ್ಮತೆಯನ್ನು ಮೀರಿ ಸ್ವಹಿತಕ್ಕೆ ಬಳಕೆ ಮಾಡಿಕೊಳ್ಳಬಲ್ಲರು, ಹಾಗೆ ಮಾಡಿಕೊಳ್ಳುವಾಗ ಸೌಜನ್ಯ, ಸಂಕೋಚ, ನಾಚಿಕೆ, ಮಾನ, ಮರ್ಯಾದೆಯನ್ನು ಪಣಕ್ಕಿಡಬಲ್ಲರು ಎಂಬುದಕ್ಕೆ ಇದೊಂದು ಜ್ವಲಂತ ಸಾಕ್ಷಿ ಅಷ್ಟೇ. ಇಲ್ಲಿ ಸ್ವಾಮೀಜಿಗಳ ಮೇಲಿನ ಪ್ರೇಮಕ್ಕಿಂತ ಮತಗಳ ಮೇಲಿನ ಕಾಮವೇ ವಿಜೃಂಭಿಸುತ್ತದೆ.
ಅಂದಹಾಗೆ ರಾಜಕಾರಣಿಗಳು ಈ ವಿಚಾರದಲ್ಲಿ ಮಾತ್ರ ಹೀಗೆ ನಡೆದುಕೊಳ್ಳುತ್ತಾರೆ ಎಂದೇನೂ ಇಲ್ಲ. ಚುನಾವಣೆ ಸಂದರ್ಭದಲ್ಲಿ ಸಿಕ್ಕ ಬೇರೆ-ಬೇರೆ ಸಂದರ್ಭಗಳನ್ನೂ ಇದೇ ರೀತಿ ಬಳಕೆ ಮಾಡಿಕೊಳ್ಳುತ್ತಾರೆ. ಸಾವು, ತಿಥಿ, ನಿಶ್ಚಿತಾರ್ಥ, ಮದುವೆ, ಮುಂಜಿ, ನಾಮಕರಣ ಈ ಯಾವುದನ್ನೂ ಬಿಡುವುದಿಲ್ಲ. ಚುನಾವಣೆ ದೂರ ಇರುವಾಗ ಕರೆದರೂ ಹೋಗದವರು, ಚುನಾವಣೆ ಸಮೀಪಿಸಿದಾಗ ಮಾತ್ರ ಕರೆಯದಿದ್ದರೂ ಮನೆ, ಛತ್ರಗಳ ವಿಳಾಸ ಹುಡುಕಿಕೊಂಡು ಹೋಗುತ್ತಾರೆ. ಸತ್ತವರು ಪರಿಚಯ ಇಲ್ಲದಿದ್ದರೂ ತಮಗೆ ಗೊತ್ತಿರದ ಗುಣಗಾನ ಮಾಡಿ ಬರುತ್ತಾರೆ. ಇನ್ನೂ ಕೆಲವರು ಸತ್ತವರ ಜಾಗದಲ್ಲಿ ಬದುಕಿದ್ದವರ ಹೆಸರು ಜಪಿಸಿ ಮುಜುಗರ, ಅವಲಕ್ಷಣಕ್ಕೆ ಗುರಿ ಆಗಿರುವುದೂ ಉಂಟು. ಅದೇ ರೀತಿ ಮದುವೆ ಆಗುತ್ತಿರುವವರು ಯಾರು, ಎತ್ತಣದವರು ಎಂಬುದು ಗೊತ್ತಿಲ್ಲದೆ ಶತ್ರು ಪಾಳೆಯದವರಿಗೂ ಒಲ್ಲದ ಮನಸ್ಸಿಂದ ಅಕ್ಷತೆ ಹಾಕಿ ತಮ್ಮನ್ನು ತಾವೇ ಶಪಿಸಿಕೊಂಡು ಹೊರಬಂದವರೂ ಉಂಟು. ಇದೆಲ್ಲವೂ ಕೂಡ ವೋಟಿಗಾಗಿ ನಡೆಯುವ ಖೊಟ್ಟಿ ನಡವಳಿಕೆಯ ಪರಿತಾಪಗಳ ನಿದರ್ಶನ. ಆತ್ಮವಂಚನೆಯ ಪ್ರತಿರೂಪ.
ಮಂಡ್ಯದಲ್ಲಿ ನಡೆದ ಸತ್ಯ ಘಟನೆಯೊಂದನ್ನು ಇಲ್ಲಿ ಅವಶ್ಯ ದಾಖಲಿಸಲೇ ಬೇಕು. ಅಲ್ಲಿ ಶಾಸಕರಾಗಿದ್ದವರೊಬ್ಬರು ದಾರಿಯಲ್ಲಿ ಸಿಕ್ಕ ಸಿಕ್ಕವರನ್ನೆಲ್ಲಾ ನಿಮ್ಮ ತಂದೆ ಹೇಗಿದ್ದಾರೆ? ಅವರಿಗೆ ಕೇಳಿದೆ ಎಂದು ತಿಳಿಸಿ ಎಂದು ಕೇಳುವುದು ವಾಡಿಕೆಯಾಗಿತ್ತು. ಅದೊಂದು ದಿನ ತಮಗೆ ಎದುರಾದ ಯುವಕನೊಬ್ಬನಿಗೆ 'ನಿಮ್ಮ ಮನೆಯವರೆಲ್ಲಾ ಚೆನ್ನಾಗಿದ್ದಾರಾ? ನಿಮ್ಮ ಅಪ್ಪ ಹೇಗಿದ್ದಾರೆ?, ನಾನು ಕೇಳಿದೆ ಎಂದು ಹೇಳು. ಕಳೆದ ವಾರವಷ್ಟೇ ಅವರು ನನಗೆ ಸಿಕ್ಕಿದ್ದರು' ಎಂದು ಕೇಳಿದಾಗ ಎದುರಿಗಿದ್ದ ಹುಡುಗ ಬೆಚ್ಚಿಬಿದ್ದನಂತೆ. ಏಕೆಂದರೆ, ಅವನ ತಂದೆ ಸತ್ತು ತಿಂಗಳಾಗಿತ್ತು. ಇಂತಹ ಮುಜುಗರದ ಪ್ರಕರಣಗಳಿಗೆ ಕಡಿಮೇಯೇನೂ ಇಲ್ಲ. ರೂಢಿಗತ ವರ್ತನೆಯಿಂದಾಗಿ ಹಿಂದು ಮುಂದು ಏನೊಂದೂ ಅರಿಯದೆ ಆಡುವ ಮಾತುಗಳು ಆಡಿದವರಿಗೆ ಮುಜುಗರ ತರುವುದಷ್ಟೇ ಅಲ್ಲ, ಎದುರಿಗಿದ್ದವರಿಗೆ ಯಾವ ಪರಿಯ ನೋವು ಕೊಡುತ್ತದೆ ಎಂಬುದನ್ನು ನೋಡಬೇಕು. ಇಂತಹ 'ಮೂರ್ಖ' ಪ್ರಕರಣಗಳು ನಡೆಯುವುದು ಮತ್ತದೇ ಮತಗಳಿಕೆ ರಾಜಕೀಯ ತಂತ್ರದ ಅಂಗವಾಗಿ.
ಬಹುತೇಕ ರಾಜಕಾರಣಿಗಳು ಅಧಿಕಾರದ ಅವಧಿಯ ನಾಲ್ಕೂವರೆ ವರ್ಷ ಕುಂಭಕರ್ಣನನ್ನು ಮೀರಿಸಿ ನಿದ್ದೆ ತೆಗೆಯುತ್ತಾರೆ. ಅವರಿಗೆ ಕ್ಷೇತ್ರ, ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯಗಳು, ಜನ, ಅವರ ನೋವು-ನಲಿವು... ಹೀಗೆ ಯಾವೊಂದು ವಿಚಾರವೂ ಈ ಅವಧಿಯಲ್ಲಿ ನೆನಪಾಗಿರುವುದಿಲ್ಲ. ಕಾರ್ಯನಿಮಿತ್ತ ಹುಡುಕಿಕೊಂಡು ಬಂದ ಜನಕ್ಕೆ ಮನೆಯೊಳಗೆ ಇದ್ದೂ ಇಲ್ಲ ಎನಿಸಿಕೊಂಡು ಜನಪ್ರತಿನಿಧಿಗಳಿಗಳೂ ಕಡಿಮೆ ಏನೂ ಅಲ್ಲ. ಈ ಅವಧಿಯನ್ನು ಸ್ವಂತ ಅಭಿವೃದ್ಧಿ, ಸ್ವಜನ ಪಕ್ಷಪಾತ, ಸ್ವ ಹಿತಕ್ಕಷ್ಟೇ ಬಳಕೆ ಮಾಡುವ ಅವರಿಗೆ ಚುನಾವಣೆಗೆ ಮೂರ್ನಾಲ್ಕು ತಿಂಗಳು ಬಾಕಿ ಇರುವಾಗ ಕ್ಷೇತ್ರದ ಜನರೆಲ್ಲಾ ಒಮ್ಮೆಲೇ ನೆನಪಿಗೆ ಬಂದುಬಿಡುತ್ತದೆ. ಪ್ರೀತಿ, ವಿಶ್ವಾಸ ಉಕ್ಕಿ ಹರಿಯುತ್ತದೆ. ಈ ಮೂರ್ನಾಲ್ಕು ತಿಂಗಳಲ್ಲಿ ಅವರು ನೆರವೇರಿಸುವ ಶಿಲಾನ್ಯಾಸಗಳನ್ನು ನೋಡಬೇಕು. ಉದ್ಘಾಟನೆಗಳನ್ನು ಗಮನಿಸಬೇಕು. ಜನರನ್ನು ಹುಡುಕಿಕೊಂಡು ಮನೆಬಾಗಿಲಿಗೆ ಹೋಗುವ ಪರಿಯನ್ನು ಕಾಣಬೇಕು. ಇವೆಲ್ಲವೂ ನಕಲಿ ಶ್ಯಾಮರ ಅಪರಾವತಾರ. ಅನುದಾನ ಅಥವಾ ಹಣಕಾಸು ಇಲ್ಲದ ಯೋಜನೆಗಳಿಗೆ ಸುಳ್ಳುಸುಳ್ಳೇ ಕಲ್ಲು ನೆಟ್ಟು ಬರುತ್ತಾರೆ. ಅದಾಗಲೇ ಉದ್ಘಾಟನೆಯಾಗಿರುವ ಯೋಜನೆಗಳನ್ನು ಮರು ಉದ್ಘಾಟನೆ ಮಾಡುತ್ತಾರೆ. ಸಮಾಧಿಯ ಮೇಲೆ ಹೂವಿಟ್ಟು ಬರುತ್ತಾರೆ. ನಾವು ಮಾಡುತ್ತಿರುವುದು ನಾಟಕ ಎಂಬುದು ಜನರಿಗೂ ಗೊತ್ತಿರುತ್ತದೆ ಎಂಬುದು ಅವರ ಅರಿವಿನಲ್ಲಿದ್ದರೂ ನಾಟಕ ಮುಂದುವರೆಸುತ್ತಾರೆ. ಅರಿವಿಲ್ಲದವರ ಮತಗಳಾದರೂ ಬರಲಿ ಎಂಬ ದು(ದೂ)ರಾಲೋಚನೆ ಅವರದ್ದು. ಇಂತಹ ಪ್ರಸಂಗಗಳು ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲೆಡೆ ರಾರಾಜಿಸುತ್ತವೆ. ಜನ ಇದನ್ನು ನೋಡಿ ಅಸಹ್ಯಪಟ್ಟುಕೊಳ್ಳುತ್ತಿದ್ದಾರೆ.
ಇನ್ನು ನೀವು ಸರ್ಕಾರದ ವರಸೆ ನೋಡಬೇಕು. ಬಜೆಟ್ನಲ್ಲಿ ಘೋಷಣೆಯಾಗಿ ಶವಪೆಟ್ಟಿಗೆಯಲ್ಲಿ ಮಲಗಿದ್ದ ಯೋಜನೆಗಳೆಲ್ಲಾ ಚುನಾವಣೆ ಹೊಸ್ತಿಲಲ್ಲಿ ಅಲ್ಲಾವುದ್ದೀನನ ಅದ್ಭುತ ದೀಪದಂತೆ ಜಿಗಿದು ಹೊರಬರುತ್ತವೆ. ಜನರು ಎಳ್ಳು-ನೀರು ಬಿಟ್ಟ ಯೋಜನೆಗಳೆಲ್ಲಾ ಅವರ ಮನೆಬಾಗಿಲು ಬಡಿಯುತ್ತದೆ. ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರಕ್ಕೆ 50 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸುವ ಯೋಜನೆಯೇ ಇದಕ್ಕೆ ಉದಾಹರಣೆ. ಕಳೆದ ಮಾರ್ಚ್ನಲ್ಲಿ ಮಂಡಿಸಿದ ಬಜೆಟ್ನಲ್ಲಿ ಇದನ್ನು ಘೋಷಣೆ ಮಾಡಲಾಗಿತ್ತು. ಮಳೆಗಾಲ ಮುಗಿದ ಕೂಡಲೇ ಹಣ ಬಿಡುಗಡೆ ಮಾಡಿ ಕೆಲಸ ಆರಂಭಿಸಿದ್ದರೆ ಇಷ್ಟರ ವೇಳೆಗೆ ಕಾಮಗಾರಿ ಮುಗಿದು ಜನ ನೆಮ್ಮದಿಯಿಂದ ಆ ರಸ್ತೆಯಲ್ಲಿ ಓಡಾಡುತ್ತಿದ್ದರು. ಆದರೆ, ಅಧಿಕಾರ ನಡೆಸುವವರಿಗೆ ಜನರ ನೆಮ್ಮದಿಗಿಂತ ಚುನಾವಣಾ ರಾಜಕೀಯವೇ ಮುಖ್ಯ. ಹೀಗಾಗಿ ಚುನಾವಣೆ ಸಮೀಪಿಸುತ್ತಿರುವಾಗ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ. ಅದೇ ರೀತಿ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಇಲ್ಲದ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದವರ ಮೇಲಿನ ವ್ಯಾಮೋಹ ಭೋರ್ಗರೆಯಲಾರಂಭಿಸಿದೆ. ಅವರಿಗೆ ಸೀಮಿತವಾಗಿ ಶಾಲೆಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ. ಇನ್ನು ಮಠ ಮಾನ್ಯಗಳಿಗೆ ಅನುದಾನ ಮುಂದುವರಿಕೆ ವಿಚಾರದಲ್ಲಿ ಪೈಪೋಟಿಗೆ ಬಿದ್ದು ಹಿಂದಿನವರು ಬಿಡುಗಡೆ ಮಾಡಿದ್ದಕ್ಕಿಂತ ದುಪ್ಪಟ್ಟು ಅನುದಾನ ಮಂಜೂರು ಮಾಡಲು ಅಧಿಕಾರಸ್ಥರು ಮುಂದಾಗಿದ್ದಾರೆ. ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗಳೆಲ್ಲಾ ಭರವಸೆಯ ರೂಪ ತಾಳುತ್ತದೆ. ಅನುಷ್ಠಾನಕ್ಕೂ ಬಂದುಬಿಡುತ್ತದೆ. ಈ ಯೋಜನೆ ಘೋಷಣೆ ಮಾಡಿದರೂ ಅದು ಕಾರ್ಯಗತವಾಗಲು ಕನಿಷ್ಠ 6-7 ತಿಂಗಳು ಬೇಕು. ಅಷ್ಟರಲ್ಲಿ ಚುನಾವಣೆ ಮುಗಿದಿರುತ್ತದೆ. ಅಧಿಕಾರದಲ್ಲಿದ್ದವರಿಗೆ ಅದು ಚೆನ್ನಾಗಿ ಗೊತ್ತು. ಆದರೂ ಚುನಾವಣೆಗಳಲ್ಲಿ ಮತಗಳಾಗಿ ಮಾರ್ಪಡಲಿ ಎಂಬ ಒಂದು ಆಸೆ ಇಂತಹ ಘೋಷಣೆಗಳನ್ನು ಹೊರಡಿಸಿ ಜನರನ್ನು ದಾರಿತಪ್ಪಿಸುತ್ತದೆ. ಪ್ರತಿಪಕ್ಷ ಕಾಂಗ್ರೆಸ್ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಅಧಿಕಾರದಲ್ಲಿದ್ದಾಗ ಕೈಚೆಲ್ಲಿ ಕುಳಿತರೂ ಚುನಾವಣೆ ಬಂದಾಗ ಕೃಷ್ಣೆ ನೆನಪಾಗುತ್ತಾಳೆ. ಮತ್ತೆ ಅಧಿಕಾರಕ್ಕೆ ಬಂದರೆ 10 ಸಾವಿರ ಕೋಟಿ ನೀಡುತ್ತೇವೆ ಎಂದು ಹೇಳಿಕೊಂಡು ಪಾದಯಾತ್ರೆ ಮಾಡುತ್ತಾರೆ. ಇದು ಕೂಡ ಜನರನ್ನು ಮರುಳು ಮಾಡಿ ಮತಗಳಿಸುವ ಒಂದು ಸ್ಟಂಟ್ ಅಷ್ಟೆ.
ಹೀಗೆ ನಡೆಯುತ್ತದೆ ರಾಜಕಾರಣಿಗಳ ವರಸೆ. ಇದೇನೂ ಮೊದಲ ಬಾರಿ ನಡೆಯುತ್ತಿರುವುದಲ್ಲ. ಪ್ರತಿ ಚುನಾವಣೆ ಸಂದರ್ಭದಲ್ಲೂ ಅವರು ಹಾಕುವ ಹಗಲುವೇಶವಿದು. ಚುನಾವಣೆ ಸಂದರ್ಭದಲ್ಲಿ ಇವರು ಹೇಗೆ ವರ್ತಿಸುತ್ತಾರೆ? ಹಿಂದೆಲ್ಲಾ ಹೇಗೆ ವರ್ತಿಸಿದರು ಎಂಬುದು ಜನರಿಗೂ ಗೊತ್ತು. ಆದರೂ ಕೂಡ ಇದೇ ಭರವಸೆ, ಆಮಿಷಗಳೊಂದಿಗೆ ಚುನಾವಣೆಗಳು ನಡೆಯುತ್ತವೆ. ಜನ ಕೂಡ ಅವೆಲ್ಲವನ್ನೂ ಮರೆತು ರೂಢಿಗತ ವ್ಯವಸ್ಥೆಗೆ ಅಂಟಿಕೊಂಡು ಬಿಡುತ್ತಾರೆ. ಒಟ್ಟಿನಲ್ಲಿ ಆಡಿದ್ದು ಮತ್ತು ಅಂದಿದ್ದು ಬಿಟ್ಟರೆ ಬೇರೇನೂ ಬದಲಾವಣೆ ಆಗುವುದಿಲ್ಲ. ಇದು ಪ್ರಜಾತಂತ್ರದ ದುರಂತ.
ಲಗೋರಿ: ಅಳುವಾಗ ಭಾವನೆಗೆ ಅಲ್ಲದಿದ್ದರೂ ಕಣ್ಣೀರಿಗಾದರೂ ಬೆಲೆ ಇರಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

