ಅಂಕಣಗಳು

ಪತ್ರ ಬರಿ ಎಂದವಳು ಚಿತ್ರವಾಗಿದ್ದಳು!

Published On :

ಹೇಗಿದ್ರೂ ಮೂರು ದಿನ ರಜೆ ಇದೆ, ಪಿ.ಜಿ. ಯಲ್ಲಿದ್ದು ಏನು ಮಾಡ್ತೀಯ? ಮೈಸೂರಿಗೆ ಬಾ. ಆರಾಮಾಗಿ ಸುತ್ತೋಣ ಎಂದು ಆರ್ಡರ್ ಮಾಡಿದ್ದಳು ಶ್ರಾವಣಿ. ಬೆಂಗಳೂರಿನ ಹೊಗೆ, ಟ್ರಾಫಿಕ್ಕು ಮತ್ತು ಗಿಜಿಗಿಜಿಯಿಂದ ದೂರವಿರೋಣ ಎಂಬ ಆಸೆಯಿಂದ ನಾನೂ ಹೊರಟುನಿಂತೆ. ಮೈಸೂರಿನಲ್ಲಿ ಎಲ್ಲೆಲ್ಲಿಗೆ ಹೋಗಿ ಬರಬೇಕು ಎಂಬುದನ್ನು ನೋಟ್ ಮಾಡಿಕೊಳ್ಳುತ್ತಿದ್ದಾಗಲೇ ನೆನಪಾಗಿಬಿಟ್ಟಳು ಪ್ರಿಯದರ್ಶಿನಿ.
ನಾನು, ಏಳನೇ ತರಗತಿಯಲ್ಲಿದ್ದ ಸಂದರ್ಭ. ಆಗ ನವರಾತ್ರಿ ಸಂದರ್ಭದಲ್ಲಿ ನಡೆದ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಶಾಲೆಯ ವತಿಯಿಂದ ನಾನೂ ಹೋಗಿದ್ದೆ. ಮನೆಯವರ ಆತಂಕದ ನಡುವೆ ನಮ್ಮ ಕಾರ್ಯಕ್ರಮ ನಾಲ್ಕು ದಿನಕ್ಕೆ ಸೀಮಿತವಾಯಿತು. ಮೂರು ದಿನ ಕಾರ್ಯಕ್ರಮದ ಜಾಗದಲ್ಲಿರುವುದು, ನಾಲ್ಕನೇ ದಿನ ಪ್ರೇಕ್ಷಣೀಯ ಸ್ಥಳ ನೋಡುವುದೆಂದು ನಿರ್ಧಾರವಾಯಿತು. ಮೊದಲ ದಿನ ನಮ್ಮ ಕಾರ್ಯಕ್ರಮದ ನಂತರವೇ ಪ್ರಿಯದರ್ಶಿನಿಯ ಭರತನಾಟ್ಯವಿತ್ತು. ಆಕೆ ಎಷ್ಟೊಂದು ಮೋಹಕವಾಗಿ ಹೆಜ್ಜೆ ಹಾಕಿದಳು ಅಂದರೆ, ಡ್ಯಾನ್ಸ್ ಮುಗಿದಾಕ್ಷಣ ಸಭಾಂಗಣವು ಶಿಳ್ಳೆ, ಚಪ್ಪಾಳೆಗಳಿಂದ ತುಂಬಿ ಹೋಯಿತು. ಅವಳನ್ನು ಮಾತಾಡಿಸಲೇ ಬೇಕು ಅನ್ನಿಸಿಬಿಡ್ತು. ನಾನೇ ಹೋಗಿ ಅವಳನ್ನು ಪರಿಚಯ ಮಾಡಿಕೊಂಡೆ. ಹತ್ತು ನಿಮಿಷದ ಮಾತುಕತೆಯಲ್ಲೇ ಆಕೆ ಬಂಧುಗಳಿಗಿಂತ ಹೆಚ್ಚು ಆತ್ಮೀಯಳಾದಳು, ನಾಳೆ, ನಾಡಿದ್ದೂ ನನ್ನ ಪ್ರೋಗ್ರಾಂ ಇದೆ. ನಿಂಗೆ ಖಂಡಿತ ಸಿಕ್ತೀನಿ ಎಂದಳು. ಮರುದಿನ ಬಂದಾಗ - ಚಕ್ಕುಲಿ, ಕೋಡುಬಳೆ ತಂದಿದ್ದಳು. 'ಪ್ರಿಯದರ್ಶಿನಿ ಅಂತಲೇ ಹೆಸರಿರುವ ತನ್ನ ಮನೆ ವಿಳಾಸವನ್ನೂ ವಿವರಿಸಿದ್ದಳು.
ಮೂರನೇ ದಿನ ಆಕೆಯ ಪ್ರೋಗ್ರಾಂ ಬೇಗ ಮುಗಿಯಿತು. ಮನೆಗೆ  ಹೊರಟಾಗ ನೀನೂ ಜೊತೆಗೆ ಬಾ ಎಂದು ಹಠ ಹಿಡಿದಳು. ನಮ್ಮ ಮಿಸ್ ಕಳಿಸೋಲ್ಲ ಎಂದಾಗ, ಸೀದಾ ಮಿಸ್ ಹತ್ರ ಹೋಗಿ - ನಾವಿಬ್ರೂ ಫ್ರೆಂಡ್ಸ್ ಆಗಿದೀವಿ, ಸಂಜೆತನಕ ಆಟವಾಡಿ ಕಳಿಸ್ತೀನಿ, ಒಪ್ಪಿಗೆ ಕೊಡಿ ಮಿಸ್ ಎಂದಿದ್ದಳು. ಹಿಂದೆಯೇ ಬಂದಿದ್ದ ಅವರ ತಾಯಿ - ನಾನು ಸಂಜೆ ಇಬ್ಬರನ್ನೂ ಕರ್ಕೊಂಡು ಬರ್ತೇನೆ ಮೇಡಂ. ಮಗು ತುಂಬಾ ಹಚ್ಕೊಂಡಿದ್ದಾಳೆ, ದಯವಿಟ್ಟು ಕಳಿಸಿಕೊಡಿ ಎಂದರು. ಮೇಡಂ, ಒಪ್ಪಲೇಬೇಕಾಯಿತು.
ಸಂಜೆಯವರೆಗೂ ಇಬ್ಬರೂ ಆಡಿದ್ದೇ ಆಡಿದ್ದು, ಮಧ್ಯೆ ಅವಳು ಒಂದು ನವಿಲು ಗರಿ ಕೊಟ್ಟಳು. ಇದನ್ನು ಪುಸ್ತಕದ ಮಧ್ಯೆ ಅಡಗಿಸಿ ಇಡು. ಮೂರು ದಿನ ನೋಡಬೇಡ. ನಾಲ್ಕನೇ ದಿನ ಮರಿ ಹಾಕಿರುತ್ತೆ ಎಂದಿದ್ದಳು. ಅವಳಿಗೆ ಸ್ಟ್ಯಾಂಪ್ ಸಂಗ್ರಹದ ಹವ್ಯಾಸವಿತ್ತು. ಒಂದು ಡೈರಿಯಲ್ಲಿ ಸ್ಟಾಂಪುಗಳನ್ನು ಸಾಲಾಗಿ ಅಂಟಿಸಿದ್ದಳು. ಊರಿಗೆ ಹೋದ ಮೇಲೆ ನೀನೂ ಪತ್ರ ಬರಿ. ಆಗ ಕವರ್ ಜೊತೆ ಬರುವ ಸ್ಯ್ಟಾಂಪ್‌ನ ಇಲ್ಲಿ ಅಂಟಿಸಿರ್ತೀನಿ ಅಂದಳು. ಮುನ್ನ ಕನಿಷ್ಠ ಹತ್ತು ಬಾರಿಯಾದರೂ ಪತ್ರ ಬರೆಯಲು ಮರೆಯಬೇಡ ಎಂದು ಎಚ್ಚರಿಸಿದ್ದಳು. ಮನೆಗೆ ಬಂದವಳೇ, ಮನೆಯಲ್ಲಿರುವ ಎಲ್ಲರಿಗೂ ಪ್ರಿಯದರ್ಶಿನಿಯ ಬಗ್ಗೆ ಬಾಯಿ ನೋಯುವಷ್ಟು ಹೇಳಿದೆ. ಅವಳು ನೀಡಿದ್ದ ನವಿಲುಗರಿಯನ್ನು ದಿನಕ್ಕೊಂದು ಪುಸ್ತಕದಲ್ಲಿ ಅಡಗಿಸಿಟ್ಟೆ. ದಿನಕ್ಕೆ ಕಡಿಮೆಯೆಂದರೂ ಹತ್ತು ಬಾರಿ ಅದನ್ನು ತೆರೆದು ನೋಡಿ, ಮರಿ ಹಾಕಿಲ್ಲವೆಂದು ನಿರಾಶೆ ಅನುಭವಿಸಿದೆ. ನಾಲ್ಕು ದಿನದ ನಂತರ ತಂದೆಗೆ ದುಂಬಾಲು ಬಿದ್ದು ಕವರ್ ತರಿಸಿಕೊಂಡು ಆಕೆಗೆ ಪತ್ರ ಬರೆದೆ. ನಮ್ಮ ಮನೆಯವರ ಬಗ್ಗೆ ಶಾಲೆಯ ಬಗ್ಗೆ, ಬರೆದು-ಹೂವಿನ ಬಳ್ಳಿ ಬಾಡಿದರೂ, ಬಾವಿಯ ನೀರು ಬತ್ತಿದರೂ, ನೀನು ನನ್ನನ್ನು ಮರೆತರೂ ನಾನು ನಿನ್ನನ್ನು ಮರೆಯಲಾರೆ, ಎಂಬ ಸಾಲಿನೊಂದಿಗೆ ಪತ್ರ ಮುಗಿಸಿದ್ದೆ. ಹೀಗೆಯೇ ನನ್ನ ಕಡೆಯಿಂದ ಐದು ವಾರದಲ್ಲಿ ಐದು ಪತ್ರಗಳು ಹೋದವು. ಒಂದು ಪತ್ರಕ್ಕೂ ಉತ್ತರವೇ ಬರಲಿಲ್ಲ. ನಂತರ ನಾನೂ ಸುಮ್ಮನಾದೆ.
ಸಂಕ್ರಾಂತಿಯ ದಿನ, ಹಳೆಯ ಕತೆಯನ್ನೆಲ್ಲಾ ಶ್ರಾವಣಿಯ ಜೊತೆ ಹೇಳಿಕೊಂಡೆ. ಒಮ್ಮೆ ಹೋಗಿ ಬರೋಣವಾ, ಪ್ಲೀಸ್ ಅಂದೆ. ಅದಕ್ಕೇನಂತೆ, ಈಗಲೇ ಹೋಗೋಣ. ಎಳ್ಳು-ಬೆಲ್ಲ ಕೊಟ್ಟ ಬರೋಣ. ಒಂದು ವೇಳೆ ಅವರ ಮನೇಲಿ ಸರಿಯಾಗಿ ಮಾತನಾಡಿಸದೇ ಹೋದರೆ, ನೆನಪಾಗದೆ ತಡವರಿಸಿದರೆ, ಬೇಗ ಎದ್ದು ಬರೋಣ ಎಂದು ಮಾತನಾಡಿಕೊಂಡೇ ಆಟೋ ಹತ್ತಿದೆವು. 15 ವರ್ಷಗಳ ಅಂತರದಲ್ಲಿ ಆ ಏರಿಯಾ ಸಾಕಷ್ಟು ಬದಲಾಗಿತ್ತು. ಆದರೆ ಮನೆ ಕಂಡುಹಿಡಿಯುವುದು ಕಷ್ಟವಾಗಲಿಲ್ಲ ಅನುಮಾನದಲ್ಲೇ ಬಾಗಿಲು ಬಡಿದೆ. ಬಾಗಿಲು ತೆರೆದವರ ಗುರುತು ಸಿಕ್ಕಿತು. ಆಕೆ ಪ್ರಿಯದರ್ಶಿನಿಯ ತಾಯಿ. ಅನುಮಾನ ಪಡುತ್ತಲೇ ಒಳಗೆ ಬನ್ನಿ ಎಂದರು. ನಾನು ಸಡಗರದಿಂದಲೇ ಹಳೆಯದನ್ನೆಲ್ಲ ಹೇಳಿದೆ. ಪ್ರಿಯದರ್ಶಿನಿ ಈಗ ಏನ್ಮಾಡ್ತಾ ಇದಾಳೆ? ಎಲ್ಲಿದ್ದಾಳೆ, ಅವಳ ಮೊಬೈಲ್ ನಂಬರ್ ಕೊಡ್ತೀರಾ ಎಂದೆಲ್ಲಾ ಬಡಬಡಿಸಿದೆ. ನನ್ನ ಮಾತುಗಳು ಕೇಳಿಸಲೇ ಇಲ್ಲವೇನೋ ಎಂಬಂತೆ ಅವರು ಮುಂದೆ ನಡೆದು, ಬೇರೊಂದು ದಿಕ್ಕಿಗೆ ತಿರುಗಿ ನಿಂತು ಗದ್ಗದಿತರಾಗಿ ಹೇಳಿದರು: ನೀನು ಊರಿಗೆ ಹೋಗಿ ಒಂದು ತಿಂಗಳಾಗಿರಬೇಕು. ಆಗಲೇ ನಮ್ಮ ಪಾಪು ತೀರಿ ಹೋದಳಮ್ಮ. ಒಂದು ದಿನ ಫ್ರೆಂಡ್ಸ್‌ಗೆಲ್ಲಾ ಪತ್ರ ಬರೆದು, ಪೋಸ್ಟ್ ಮಾಡ್ತೇನೆ ಅಂತ ಹೊರಗೆ ಹೋಗಿದ್ಲು.. ಆ ಕಡೆಯಿಂದ ಬರುವಾಗ ಆಕಸ್ಮಿಕವಾಗಿ ಒಂದು ಕಾರ್ ಡಿಕ್ಕಿ ಹೊಡೆದು ರಸ್ತೇಲಿ ಬಿದ್ದು ಬಿಟ್ಲು.. ತಲೆಗೆ ತುಂಬಾ ಪೆಟ್ಟಾಗಿತ್ತು. ಹಾಗಾಗಿ ನಮ್ಮ ಪಾಪು ಹೋಗಿಬಿಟ್ಲು ಎನ್ನುತ್ತಾ ಗೋಡೆಯ ಮೇಲಿದ್ದ ಚಿತ್ರಪಟದ ಕಡೆಗೆ ಕೈ ತೋರಿಸಿದರು.
ಪ್ರಿಯದರ್ಶಿನಿಗೆ ಕೊಡುವುದಕ್ಕೆಂದು ತಂದಿದ್ದ ಎಳ್ಳು-ಬೆಲ್ಲ ಬ್ಯಾಗ್‌ನಲ್ಲೇ ಇದ್ದವು. ಶ್ರಾವಣಿ ಏನು ಮಾತಾಡಲೂ ತೋಚದೆ ಮೂಕವಾಗಿ ನಿಂತುಬಿಟ್ಟಿದ್ದಳು. ಐದು ನಿಮಿಷದ ನಂತರ ಚೇತರಿಸಿಕೊಂಡ ಪ್ರಿಯದರ್ಶಿನಿಯ ತಾಯಿ - ಬನ್ನಿ ಇಲ್ಲಿ ಎಂದು ಒಳಮನೆಗೆ ಕರೆದೊಯ್ದು ಒಂದು ಹಳೆಯ ಡೈರಿ ಕೊಟ್ಟರು. ಅದು ಪ್ರಿಯದರ್ಶಿನಿಯ ಸ್ಟಾಂಪ್ ಕಲೆಕ್ಷನ್ ಡೈರಿ. ಅದರ ಕಡೆಯ ಪುಟದಲ್ಲಿ, ಕಡೆಯದಾಗಿ ಅಂಟಿಸಿದ್ದ ಸ್ಟಾಂಪ್ ನೋಡಿ ಬೆಚ್ಚಿ ಬಿದ್ದೆ. ಕಾರಣ, ಅದು ನಾನು ಕಳಿಸುತ್ತಿದ್ದ ನವಿಲಿನ ಚಿತ್ರದ ಸ್ಟಾಂಪ್ ಥರವೇ ಇತ್ತು.
ಮೈಸೂರಿನಿಂದ ಹಿಂತಿರುಗಿ ಆಗಲೇ ಐದು ದಿನ ಕಳೆದಿದೆ. ಆದರೂ, ಮನಸ್ಸು ಕಂಟ್ರೋಲ್‌ಗೆ ಬಂದಿಲ್ಲ, ಕ್ಷಮಿಸಿ...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.