ಸಂತಾನ ಭಾಗ್ಯವಿಲ್ಲದಿದ್ದರೂ ಅಂತಃಕರಣ ಬಂಜೆಯಾಗಿರಲಿಲ್ಲ!
ಪ್ರೀತಿ ಎಂಬುದು ಒಂದು ಅಮೃತವಾಹಿನಿ. ಗುಪ್ತಗಾಮಿನಿ. ಅದನ್ನು ಹೀಗೇ ಅಂತ ಹಿಡಿದಿಡಲಾಗದು. ರೂಪವಿಲ್ಲ, ತರ್ಕಗಳಿಗೆ ನಿಲುಕುವುದಿಲ್ಲ, ಎಲ್ಲಿಯೂ ಚಿಮ್ಮಬಹುದು, ಎತ್ತಲೂ ಪರಿಯಬಹುದು. ಬೊಗಸೆಯಲ್ಲಿ ಹಿಡಿದವರೇ ಧನ್ಯ. 'ಚಿಕನ್ ಸೂಪ್ ಫಾರ್ ದ ಸೋಲ್' ಎಂಬುದು ನಾನು ಈಗಾಗಲೇ ಹಲವು ಬಾರಿ ಉಲ್ಲೇಖಿಸಿರುವ ಪುಸ್ತಕ ಸರಣಿ. ಅದರಲ್ಲಿ ಲವ್ ಸ್ಟೋರೀಸ್ ಎಂಬುದೊಂದು ಗುಚ್ಛವಿದೆ. ಅದರಿಂದ ಆಯ್ದ ಒಂದು ಕತೆಗೆ ದೇಸಿರೂಪ ಕೊಟ್ಟು ನಿರೂಪಿಸುವ ಯತ್ನ ಮಾಡಿದ್ದೇನೆ. ಹೆಚ್ಚು ವಿವರಣೆಯ ಅಗತ್ಯವಿಲ್ಲದೇ ನೇರ ಆ ಕತೆಯ ಸಾಗರಕ್ಕೆ ಜೀಕಲಾಗಿ.....
-------
ನಮ್ಮ ಆಫೀಸ್ ಇರುವುದು ನಗರದ ಹೊರವಲಯದಲ್ಲಿ. ಅದೇನು ಕಾರಣವೋ ಗೊತ್ತಿಲ್ಲ; ಭಿಕ್ಷುಕರ ಪುನರ್ವಸತಿ ಕೇಂದ್ರ, ಅಬಲಾಶ್ರಮ, ವೃದ್ಧಾಶ್ರಮದಂಥ ಕೇಂದ್ರಗಳು ಹೆಚ್ಚಾಗಿ ನಗರದ ಹೊರವಲಯದಲ್ಲೇ ಇರುತ್ತವೆ. ನಾನು ಕ್ಲರ್ಕ್ ಕಂ ಮೆನೇಜರ್ ಎಂದು ಕೆಲಸ ಮಾಡುತ್ತಿದ್ದ, ಮಕ್ಕಳ ದತ್ತು ನೀಡುವ ಕೇಂದ್ರದ ಕಚೇರಿಯೂ ಹೊರವಲಯದಲ್ಲೇ ಇತ್ತು. ಕೆಲಸಕ್ಕೆ ಸೇರಿದ ಒಂದು ವಾರದಲ್ಲಿ ಅಲ್ಲಿನ ಪರಿಸ್ಥಿತಿ ಸ್ವಲ್ಪ ಸ್ವಲ್ಪವೇ ಅರ್ಥವಾಗ ತೊಡಗಿತು. ಅಲ್ಲಿ ಅನಾಥ ಮಕ್ಕಳಿದ್ದವು. ಕಸದ ತೊಟ್ಟಿಯಲ್ಲಿ ಸಿಕ್ಕಿದ ಕಂದಮ್ಮಗಳಿದ್ದವು. ಹುಡುಗ-ಹುಡುಗಿಯ ದುಡುಕಿನಿಂದ ಮದುವೆಗೆ ಮೊದಲೇ ಹುಟ್ಟಿದ ಮಕ್ಕಳಿದ್ದವು. ಹೆತ್ತವರಿಗೆ 'ಹೊರೆಯಾದ' ಅಂಗವಿಕಲ ಮಕ್ಕಳಿದ್ದವು. ಇಂಥ ಮಕ್ಕಳನ್ನು 'ಮಕ್ಕಳಿಲ್ಲದ ತಂದೆ-ತಾಯಿಗಳ' ಮಡಿಲಿಗೆ ವರ್ಗಾಯಿಸುವ ಕೆಲಸ ನಮ್ಮ ಅಫೀಸಿನದ್ದಾಗಿತ್ತು.
ನಾನು ನೌಕರಿಗೆ ಸೇರಿ ಹದಿನೈದು ದಿನ ಕಳೆದಿತ್ತು. ಆಗಲೇ ಅವನು ಕಣ್ಣಿಗೆ ಬಿದ್ದ. ಅವನ ಹೆಸರು- ಟಿ.ವಸಂತ್ ರಾಜಶೇಖರ್ ಟಿ.ವಿ.ಯ ಹಾರ್ಲಿಕ್ಸ್ ಜಾಹೀರಾತಿನಲ್ಲಿ ಬರುವ ಹುಡುಗನಿದ್ದಾನಲ್ಲ; ಅವನ ಪಡಿಯಚ್ಚಿನಂತೆಯೇ ಇದ್ದ. ಅವನನ್ನು ನೋಡುತ್ತಿದ್ದಂತೆ ಅದೇ ವಯೋವಾನದ ನನ್ನ ಮಗ ನೆನಪಾದ. ಆ ಕ್ಷಣದಲ್ಲಿ ಇದ್ದಕ್ಕಿದ್ದಂತೆ ಸಂತೋಷವೊಂದು ಮನಸ್ಸನ್ನು ಆವರಿಸಿಕೊಂಡಿತು. ಅವನನ್ನೇ ಮತ್ತೆ ಮತ್ತೆ ನೋಡುತ್ತಾ-ಹಾಯ್ ಚಿನ್ನೂ, ಹಲೋ ರಾಜಾ ಗುಡ್‌ನೂನ್' ಎಂದೆ. ಆತ ಒಮ್ಮೆ ನನ್ನತ್ತ ತಿರುಗಿ ಚೆಂದನೆಯ ಸ್ಟೈಲ್ ಕೊಟ್ಟ. ಈ ಸಂದರ್ಭದಲ್ಲಿಯೇ ಅಲ್ಲಿಗೆ ಬಂದ ವಸಂತ್‌ನ ಸಾಕು ತಾಯಿ- 'ನಿಮಗೆ ತುಂಬಾ ಜನ ಪೋಷಕರ ಪರಿಚಯ ಇರುತ್ತೆ. ಈ ಮಗುವನ್ನು ದತ್ತು ಪಡೆಯುವಂಥ ಒಂದು ಕುಟುಂಬವನ್ನು ಹುಡುಕುತ್ತೀರಾ?' ಎಂದಳು.
ಛೆ, ಕೈ ತೊಳೆದು ಮುಟ್ಟಬೇಕು ಎಂಬಂತಿರುವ ಈ ಮಗುವನ್ನು ದತ್ತು ನೀಡಲು ಈಕೆ ಮುಂದಾಗಿದ್ದಾಳಲ್ಲ, ಅದಕ್ಕೆ ಕಾರಣವಾದರೂ ಏನು ಎಂದು ಸೂಕ್ಷ್ಮವಾಗಿ ಗಮನಿಸಿದಾಗ ಶಾಕ್ ಆಯಿತು. ಏಕೆಂದರೆ, ವಸಂತ್ ರಾಜಶೇಖರ್ ಎಂಬ ಇಷ್ಟುದ್ದ ಹೆಸರಿನ, ಗೊಂಬೆಗಿಂಥ ಸುಂದರವಾಗಿದ್ದ ಆ ಹುಡುಗನಿಗೆ ಎರಡೂ ಕೈಗಳಿರಲಿಲ್ಲ. ಏನೂ ಮಾತಾಡಲು ತೋಚದೆ ನಾನು ನಿಂತಿದ್ದಾಗಲೇ ವಸಂತ್‌ನ ಸಾಕುತಾಯಿ ಹೇಳಿದಳು: 'ಈ ಮಗೂಗೆ ಈಗಿನ್ನೂ ಹತ್ತು ತಿಂಗಳು. ಇವನು ಆಗಲೇ ಮಾತಾಡಲು, ಓಡಾಡಲು ಕಲಿತಿದ್ದಾನೆ. ಸ್ವಲ್ಪವೂ ಗಲಾಟೆ ಮಾಡುವುದಿಲ್ಲ. ತುಂಬಾ ಸೈಲೆಂಟಾಗಿರ್ತಾನೆ. ಇಂಥ ಹುಡುಗನನ್ನು ಅಕ್ಕರೆಯಿಂದ ಸಾಕಿಕೊಳ್ಳುವ ಪೋಷಕರನ್ನು ಹುಡುಕಿ ಕೊಡ್ತೀರಾ? ಪ್ಲೀಸ್...'
'ಖಂಡಿತಾ ಪ್ರಯತ್ನಿಸ್ತೇನೆ' ಎಂದೆ. ಅವತ್ತು ಸಂಜೆಯೇ ಆಫೀಸಿನ ನೋಟಿಸ್ ಬೋರ್ಡ್‌ನಲ್ಲಿ ಹೀಗೆ ಬರೆದೆ: 'ಹತ್ತು ತಿಂಗಳ ಮುದ್ದು ಮುದ್ದಾದ ಮಗು ವಸಂತ್ ರಾಜಶೇಖರ್. ಎರಡೂ ಕೈಗಳಿಲ್ಲ ಎಂಬುದನ್ನು ಬಿಟ್ಟರೆ, ಆತ ತುಂಬ ಆರೋಗ್ಯವಂತ, ಬುದ್ಧಿವಂತ, ಗುಣವಂತ. ಟಿ.ವಿ. ಜಾಹೀರಾತಿನ ಹಾರ್ಲಿಕ್ಸ್ ಬೇಬಿಯನ್ನು ನಾಚಿಸುವಷ್ಟು ಮುದ್ದಾಗಿರುವ ಈ ಮಗು ಎಲ್ಲರೊಂದಿಗೂ ಬೇಗ ಹೊಂದಿಕೊಳ್ಳುತ್ತೆ. ಈ ಕಂದಮ್ಮನನ್ನು ಸಾಕುವಂಥ ತಾಯ್ತಂದೆಯರು ಬೇಕಾಗಿದ್ದಾರೆ...'
ಹೀಗೆ ಬರೆದ ನಂತರ ನನಗೆ ನಾನೇ ಹೇಳಿಕೊಂಡೆ: 'ತನ್ನನ್ನು ಸಾಕುವ ಯಾವುದೇ ತಂದೆ-ತಾಯಿಯೊಂದಿಗೆ ಹೋಗಲು ವಸಂತ್ ಸಿದ್ಧನಾಗಿದ್ದಾನೆ. ಆದರೆ ಈ ಮಗುವನ್ನು ಕೊಂಡೊಯ್ಯಲು, ಸಾಕಲು ಎಷ್ಟು ಮಂದಿ ಸಿದ್ಧರಿದ್ದಾರೆ?' ಉಹುಂ, ಎಷ್ಟು ಯೋಚಿಸಿದರೂ ಉತ್ತರ ಸಿಗಲಿಲ್ಲ.
ಮರುದಿನ ಭಾನುವಾರ. ಅವತ್ತು ಬೆಳಗಿನಿಂದಲೇ ಮಕ್ಕಳನ್ನು ದತ್ತು ಪಡೆಯುವ ಹಂಬಲದ ದಂಪತಿಗಳು ಸಾಲುಸಾಲಾಗಿ ಬಂದರು. ಹೀಗೆ ಬಂದವರೆಲ್ಲಾ ತುಂಬು ಆರೋಗ್ಯ ಹೊಂದಿದ, ಅಂಗವೈಕಲ್ಯದಿಂದ ಮುಕ್ತವಾಗಿರುವ ಮಗುವನ್ನೇ ಕೇಳುತ್ತಿದ್ದರು. ಮತ್ತೆ ಕೆಲವರು- ನಾವು ಇಲ್ಲಿಂದ ದತ್ತು ತೆಗೆದುಕೊಂಡು ಹೋದ ನಂತರ ಮಗುವಿಗೆ ಅಂಗವೈಕಲ್ಯ ಉಂಟಾದರೆ ಹೇಗೋ ಸಹಿಸ್ಕೋಬಹುದು. ಆದರೆ, ಅಂಗವೈಕಲ್ಯ ಹೊಂದಿದ ಮಗುವನ್ನೇ ತಗೊಂಡು ಹೋಗುವುದು ಕಷ್ಟ. ಯಾಕಂದ್ರೆ ನಾವೂ ಬಂಧುಗಳ ಜೊತೆ, ಗೆಳೆಯರ ಜೊತೆ ಪದೇ ಪದೆ ಬೆರೆಯಬೇಕು ನೋಡಿ: ಅಂಥ ಸಂದರ್ಭಗಳಲ್ಲೆಲ್ಲ ಕಷ್ಟ ಆಗುತ್ತೆ ಎಂದು ಕಾರಣ ಹೇಳುತ್ತಿದ್ದರು. ಪರಿಣಾಮವಾಗಿ, ಎರಡನೇ ವರ್ಷದ ಹುಟ್ಟುಹಬ್ಬ ಬಂದಾಗಲೂ ವಸಂತ್ ರಾಜಶೇಖರ್ ನಮ್ಮೊಂದಿಗೇ ಉಳಿದಿದ್ದ.
ಹೀಗಿರುವಾಗಲೇ ಆಫೀಸಿಗೆ ಒಂದು ಪತ್ರ ಬಂತು. ರಾಜ್ಯಮಟ್ಟದ ಕ್ರೀಡಾಪಟುಗಳಾಗಿದ್ದ ದಂಪತಿ ತಮಗೊಂದು ಗಂಡು ಮಗು ಬೇಕೆಂದು ಪತ್ರ ಬರೆದಿದ್ದರು. ಗಂಡ-ಹೆಂಡತಿಗೆ ಕ್ರಮವಾಗಿ 48 ಹಾಗೂ 45 ವರ್ಷವೆಂದು ನಮೂದಿಸಿದ್ದರು. ಅವರ ಮನೆಯ ವಿಳಾಸ ನೀಡಿದ್ದರು. ಈ ದಂಪತಿಯ ಮನೆ, ಅವರ ಮನಸ್ಥಿತಿ ಹೇಗಿದೆಯೋ ನೋಡಿಕೊಂಡು ಬನ್ನಿ. ನಂತರ ದತ್ತು ನೀಡುವ ಬಗ್ಗೆ ನಿರ್ಧರಿಸೋಣ ಎಂದು ಆಫೀಸಿನ ಹಿರಿಯ ಅಧಿಕಾರಿಗಳು ಆರ್ಡರ್ ಮಾಡಿದರು. ಮನೆ ಹುಡುಕುವ, ಫಾರ್ಮಲ್ ಆಗಿ ಮಾತಾಡಿಬರುವ ಹೊಣೆ ನನ್ನ ಹೆಗಲಿಗೆ ಬಿತ್ತು.
ಆ ದಂಪತಿ, ಯಾವುದೇ ಮುಜುಗರವಿಲ್ಲದೆ ಹೇಳಿಕೊಂಡರು: 'ನಾವಿಬ್ರೂ ಕ್ರೀಡಾಪಟುಗಳು. ಮದುವೆಯ ನಂತರವೂ ಹೆಚ್ಚಿನ ಸಮಯ ಆಟದ ಅಂಗಳದಲ್ಲೇ ಕಳೆದು ಹೋಯ್ತು. ಮಕ್ಕಳಾಗಲಿಲ್ಲ ಎಂಬ ಕೊರಗು ಕಾಡುವ ವೇಳೆಗೆ ಇಬ್ಬರಿಗೂ ವಯಸ್ಸಾಗಿತ್ತು. ಆನಂತರವೂ ಮಕ್ಕಳನ್ನು ಪಡೆಯಬೇಕೆಂಬ ಆಸೆಯಿಂದ ಆಸ್ಪತ್ರೆ ಸುತ್ತಿದೆವು. ಹರಕೆ ಕಟ್ಟಿಕೊಂಡೆವು. ಹೋಮ ಮಾಡಿಸಿದೆವು. ಪುಣ್ಯ ಕ್ಷೇತ್ರಗಳಿಗೆ ಹೋಗಿ ಬಂದೆವು. ಬಗೆಬಗೆಯ ಪರೀಕ್ಷೆ ಮಾಡಿಸಿದೆವು. ಔಷಧಿ ಸೇವಿಸಿದೆವು. ಏನೂ ಪ್ರಯೋಜನವಾಗಲಿಲ್ಲ. ಕಡೆಗೆ ದತ್ತು ಪಡೆಯುವ ಆಸೆಯಿಂದ ಒಂದೆರಡು ಕಡೆ ಪ್ರಯತ್ನಿಸಿದೆವು. ಒಂದು ಆಫೀಸಿನವರು-ನೀವು ಇರುವ ಮನೆ ಚಿಕ್ಕದು. ಇಷ್ಟು ಚಿಕ್ಕ ಮನೆ ಹೊಂದಿದವರಿಗೆ ನಾವು ಮಕ್ಕಳನ್ನು ದತ್ತು ನೀಡುವುದಿಲ್ಲ ಎಂದರು. ಇನ್ನೊಂದು ಕೇಂದ್ರಕ್ಕೆ ಹೋದರೆ- ನಿಮ್ಮ ವಾರ್ಷಿಕ ಆದಾಯ ಕಡಿಮೆಯಿದೆ. ಹಾಗಾಗಿ ದತ್ತು ನೀಡಲು ಸಾಧ್ಯವಿಲ್ಲ ಎಂದು ಬಿಟ್ಟರು. ನಾವು ಆರ್ಥಿಕವಾಗಿ ಬಡವರಿರಬಹುದು. ಆದರೆ ಹೃದಯ ಶ್ರೀಮಂತಿಕೆಯಲ್ಲಿ ರಾಜ ಮಹಾರಾಜರನ್ನೂ ಮೀರಿಸಬಲ್ಲೆವು ಎಂಬ ಸತ್ಯ ಯಾರಿಗೂ ಅರ್ಥವಾಗಲೇ ಇಲ್ಲ... ಕಡೆಯ ಪ್ರಯತ್ನವೆಂಬಂತೆ ನಿಮ್ಮ ಆಫೀಸಿಗೆ ಕಾಗದ ಬರೆದೆವು. ನಮ್ಮ ಪರಿಸ್ಥಿತಿ ಹೇಗಿದೆ ಎಂಬುದನ್ನು ಪ್ರತ್ಯಕ್ಷ ಕಂಡಿದ್ದೀರಿ. ಈಗ ಹೇಳಿ, ನಮಗೆ ಒಂದು ಗಂಡು ಮಗುವನ್ನು ದತ್ತು ಕೊಡುವಿರಾ?
'ಅವರ ಮಾತು ಮುಗಿಯುತ್ತಿದ್ದಂತೆ ನಾನು ಕಾತುರದಿಂದ ಕೇಳಿದೆ: ಹೇಳಿ, ನಿಮಗೆಂಥ ಗಂಡು ಮಗು ಬೇಕು?' ಹೆಂಡತಿ ಏನೋ ಹೇಳುವ ಮೊದಲೇ, ಆಕೆಯ ಗಂಡ ಜೋರಾಗಿ ನಕ್ಕು, ಗಂಡು ಮಕ್ಕಳಲ್ಲಿ ಅದೆಷ್ಟು ವಿಧ ಇರ್ತವೆ?' ಹೀಗೆಂದವನು, ಅರೆಕ್ಷಣದ ನಂತರ ಹೇಳಿದ: ನೀವು ಏನೋ ಗುಟ್ಟು ಉಳಿಸಿಕೊಂಡಿದ್ದೀರ. ಹೇಳಿ: ನಿಮ್ಮ ಆಫೀಸಿನಲ್ಲಿ ದತ್ತು ನೀಡುವಂಥ ಗಂಡು ಮಗು ಇದೆಯಾ? ಅದು ಹೇಗಿದೆ?'
ಸತ್ಯ ಹೇಳದೆ ಬೇರೆ ದಾರಿಯೇ ಇರಲಿಲ್ಲ. ಬೇರ್ಯಾವುದೋ ಕಡೆಗೆ ನೋಡುತ್ತ, ತಡೆ ತಡೆದು ಉತ್ತರಿಸಿದೆ: ಆ ಮಗುವಿನ ಹೆಸರು ವಸಂತ್ ರಾಜಶೇಖರ್. ಮುದ್ದಾಗಿದೆ. ಕೆಂಪಗಿದೆ. ಆದರೆ... ಆದರೆ... ಆ ಮಗುವಿಗೆ ಹುಟ್ಟಿನಿಂದಲೇ ಎರಡೂ ಕೈಗಳಿಲ್ಲ...' ಹೀಗೆ ಹೇಳುತ್ತಿದ್ದಂತೆಯೇ ಪರ್ಸ್‌ನಲ್ಲಿ ಮಗುವಿನ ಫೋಟೋ ಇರುವುದು ನೆನಪಿಗೆ ಬಂತು. ತಳಮಳದ ಮಧ್ಯೆಯೇ ಅದನ್ನು ದಂಪತಿಗೆ ದಾಟಿಸಿ ಹೇಳಿದೆ: ಈ ಮಗುವಿಗೆ ತಿಂಗಳ ಹಿಂದಷ್ಟೆ ಎರಡು ವರ್ಷ ತುಂಬಿತು...'
ಮಗುವಿನ ಫೋಟೋ ನೋಡಿ, ಆ ದಂಪತಿ ಹರ್ಷದಿಂದ ಕುಣಿದಾಡಿ ಬಿಟ್ಟರು. ವಸಂತ ರಾಜಶೇಖರ್ ಅಂತ ಅವನ ಹೆಸರಿದೆಯಾ?' ಹಾಗಾದ್ರೆ ಅವನನ್ನು ವಸಂತಾ, ವಸಂತೂ, ವಾಸೂ, ರಾಜಾ, ಶೇಖರಾ, ರಾಜಣ್ಣಾ ಎಂದೆಲ್ಲ ಕರೆಯಬಹುದಲ್ವ ಎಂದು ತಮ್ಮಲ್ಲೇ ಹೇಳಿಕೊಂಡರು. ನಂತರ, ಆ ಮನೆಯ ಯಜಮಾನ ನಿರ್ಧಾರದ ಧ್ವನಿಯಲ್ಲಿ ಹೇಳಿದ: ಫುಟ್‌ಬಾಲ್ ಪ್ಲೇಯರ್ ಆಗಿದ್ದವ ನಾನು. ವಾಲಿಬಾಲ್, ಥ್ರೋಬಾಲ್‌ನಲ್ಲೂ ಎಕ್ಸ್‌ಪರ್ಟ್. ಕೈಗಳು ಇಲ್ಲದಿದ್ರೆ ಕತ್ತೆಬಾಲ ಹೋಯ್ತು. ತಲೆಯಿಂದ ಕಿಕ್ ಹೊಡೆದು, ಕಾಲಿಂದ ಒದೆಯುತ್ತಾ ಆಡಿಯೇ ಆಟ ಗೆಲ್ಲಬಹುದು. ಬದುಕನ್ನು ಗೆಲ್ಲಬಹುದು. ಆ ಮಗುವಿಗೆ ಇದನ್ನೇ ಹೇಳಿಕೊಡ್ತೀನಿ. ಅದರ ನಿಜವಾದ ತಂದೆ-ತಾಯಿ ಯಾರು? ಅದು ಎಲ್ಲಿ ಸಿಕ್ತು? ಯಾವ ಜಾತಿ... ಇಂಥ ಯಾವ ವಿವರವೂ ನಮಗೆ ಬೇಡ. ಈ ಕ್ಷಣದಿಂದ ಅದು ನಮ್ಮ ಮಗು. ಕಣ್ಣರೆಪ್ಪೆಯಂತೆ ಜೋಪಾನ ಮಾಡ್ತೇವೆ. ನಮಗೆ ಮಗೂನ ಕೊಡಿಸ್ತೀರ ತಾನೆ?'
ಕೈಗಳೇ ಇಲ್ಲದ ಮಗುವನ್ನು ಬಹುಶಃ ಯಾವ ದಂಪತಿಯೂ ದತ್ತು ತಗೊಳ್ಳಲಾರರು ಎಂಬ ನನ್ನ ನಂಬಿಕೆ ಅವತ್ತು ಸುಳ್ಳಾಗಿ ಹೋಗಿತ್ತು. 'ಒಮ್ಮೆ ನಮ್ಮ ಆಫೀಸಿಗೆ ಬನ್ನಿ. ಅಲ್ಲಿನ ಅಧಿಕಾರಿಗಳೊಂದಿಗೆ ಮಾತಾಡಿ. ಒಮ್ಮೆ ಮಗುವನ್ನು ಪ್ರತ್ಯಕ್ಷ ನೋಡಿ. ನಂತರ ಏನು ಮಾಡಬೇಕೋ ನಿರ್ಧರಿಸಿ' ಎಂದೆ. ಆ ದಂಪತಿಯ ಮೊಗದಲ್ಲಿ ಮಿಂಚು ಕಾಣಿಸಿಕೊಂಡಿತು. ಅವರಿಬ್ಬರೂ ಮಗುವಿನ ಭಾವಚಿತ್ರವನ್ನು ಮತ್ತೆ ಮತ್ತೆ ನೋಡುತ್ತಾ ಏಕಕಂಠದಲ್ಲಿ ಉದ್ಗರಿಸಿದರು: ಇಷ್ಟು ದಿನ ನಮಗೆ ಯಾಕೆ ಸಿಗಲಿಲ್ವೋ ರಾಜಾ...?'
ಹದಿನೈದು ದಿನಗಳ ನಂತರ ವಸಂತ ರಾಜಶೇಖರನನ್ನು ಆ ದಂಪತಿಯ ಮನೆಗೆ ಕಳಿಸುವುದೆಂದು ನಿರ್ಧರಿಸಲಾಯಿತು. ಅವತ್ತು ಬೆಳಗಿನಿಂದಲೇ ಆಫೀಸಿನಲ್ಲಿ ಎಲ್ಲರೂ ಚಟುವಟಿಕೆಯಿಂದಿದ್ದರು. ಒಂದು ಅನಾಥ, ಅಂಗವಿಕಲ ಮಗುವಿಗೆ ತಾಯ್ತಂದೆಯರನ್ನು ದೊರಕಿಸಿಕೊಟ್ಟ ಖುಷಿ ಎಲ್ಲರದಿತ್ತು. ಅವತ್ತು ವಸಂತನಿಗೆ ಸೂಟ್ ಹಾಕಿ ಸಿಂಗರಿಸಲಾಗಿತ್ತು. ಈ ಮಗುವಿನ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಮೊದಲೇ, ಮುಂದೆ ಪಾಲಿಸಬೇಕಿರುವ ಕೆಲವು ನಿಯಮಗಳ ಬಗ್ಗೆ ಆ ದಂಪತಿಗೆ ವಿವರಿಸಲಾಯಿತು. ಕೆಲವೊಂದು ಕಾಗದ ಪತ್ರಗಳಿಗೆ ಸಹಿ ಮಾಡಿಸಿಕೊಳ್ಳಲಾಯಿತು. ಒಂದು ವೇಳೆ ಆ ದಂಪತಿಯೊಂದಿಗೆ ತೆರಳಲು ಮಗು ನಿರಾಕರಿಸಿದರೆ, ಜೋರಾಗಿ ಅಳಲು ಆರಂಭಿಸಿದರೆ, ಅವನನ್ನು ಹೇಗೆಲ್ಲಾ ಸಮಾಧಾನಿಸಬೇಕು ಎಂದು ಆಫೀಸಿನ ಎಲ್ಲರಿಗೂ ತಿಳಿಸಲಾಗಿತ್ತು. ನಾವು ಹೀಗೆಲ್ಲ ಸಿದ್ಧತೆ ನಡೆಸಿದ್ದಾಗಲೇ ಮೆಲ್ಲಗೆ ಬಳಿ ಬಂದು ಆ ಕಂದಮ್ಮ ಮುದ್ದುಮುದ್ದಾಗಿ ಪ್ರಶ್ನಿಸಿತು: 'ನನ್ನನ್ನು ಇಲ್ಲಿಂದ ಕಳಿಸಿಬಿಡ್ತೀರಾ?'
ಆ ಮಾತಿನಲ್ಲಿ ಪ್ರಶ್ನೆಯಿತ್ತು. ಕುತೂಹಲವಿತ್ತು. ಸಂಕಟವಿತ್ತು. ಆಗ ಮಗುವಿನ ಮುಗ್ಧ ಪ್ರಶ್ನೆಗೆ ಹೇಗೆ ಉತ್ತರಿಸುವುದೆಂದು ಗೊತ್ತಾಗಲಿಲ್ಲ. ಸಾವರಿಸಿಕೊಂಡು ಹೇಳಿದೆ: ಛೆ, ಛೆ ನಾವು ಎಲ್ಲಿಗೂ ಕಳಿಸ್ತಾ ಇಲ್ಲ. ನಿಮ್ಮ ಮಮ್ಮಿ-ಡ್ಯಾಡಿ ಬಂದಿದ್ದಾರೆ, ಹೊಸ ಮನೆಗೆ ನಿನ್ನನ್ನ ಕರ್ಕೊಂಡು ಹೋಗ್ತಾ ಇದಾರೆ, ರಜೆ ಬಂದಾಗೆಲ್ಲ ಇಲ್ಲಿಗೆ ಕರ್ಕೊಂಡು ಬರ್ತಾರೆ...' ನನ್ನ ಮಾತು ಮುಗಿಯುತ್ತಿದ್ದಂತೆಯೇ ಅಲ್ಲಿಗೆ ಬಂದ ಆ ಮಗುವಿನ ಸಾಕುತಾಯಿ-'ಹೊಸ ಮನೇಲಿ ಚನ್ನಾಗಿರು ಕಂದಾ' ಎಂದಳು. ಮತ್ತೊಂದು ಮಾತು ಹೇಳುವ ಮೊದಲೇ ಬಿಕ್ಕಳಿಸುತ್ತಾ ಹೋಗಿಬಿಟ್ಟಳು.
ಐದು ನಿಮಿಷದ ನಂತರ ವಸಂತನನ್ನು ಬೀಳ್ಕೊಡಲು ಎಲ್ಲರೂ ಮಾನಸಿಕವಾಗಿ ಸಿದ್ಧರಾದೆವು. ಆಗಲೇ, ಮಗುವಿಗೆ ಬಗೆಬಗೆಯ ಆಟದ ಸಾಮಾನು, ಗಲಗಲ ಸದ್ದಿನ ಗಿಲಕಿಯೊಂದಿಗೆ ಸಿದ್ಧರಾಗಿ ನಿಂತಿದ್ದ ಆ ದಂಪತಿ, ಎರಡೂ ಕೈಗಳನ್ನು ಚಾಚಿ ಹಿಡಿದು, ವಸಂತಾ, ರಾಜೂ, ರಾಜಪ್ಪಾ ದೊರೇ...ಓಡಿ ಬಾ ಚಿನ್ನಾ ಎಂದರು.
ಆ ಮಗು, ಒಂದೊಂದೇ ಹೆಜ್ಜೆಯಿಡುತ್ತಾ ಆ ದಂಪತಿಯನ್ನು ತಲುಪಿ- 'ರಜೆ ಬಂದಾಗ ಇಲ್ಲಿಗೆ ಕರ್ಕೊಂಡು ಬರ್ತೀವಿ ಅಂತ ಪ್ರಾಮಿಸ್ ಮಾಡಿ' ಅಂದಿತು. ಅವರಿಬ್ಬರೂ ಪ್ರಾಮಿಸ್ ಎಂದಾಕ್ಷಣ, ನಮ್ಮತ್ತ ತಿರುಗಿ, 'ಟಾಟಾ, ಸೀಯೂ' ಎನ್ನುತ್ತಾ ಅವರ ಮಡಿಲು ಸೇರಿತು. ಮಗುವಿನೊಂದಿಗೆ ಆ ದಂಪತಿ ಸಂಭ್ರಮದ ಹೆಜ್ಜೆ ಇಡುತ್ತಿದ್ದಂತೆ, ಆಫೀಸಿನಲ್ಲಿದ್ದ ಎಲ್ಲರೂ 'ಮಹತ್ವದ ವಸ್ತುವನ್ನು' ಕಳೆದುಕೊಂಡವರಂತೆ ಚಡಪಡಿಸುತ್ತಾ ಕೂತುಬಿಟ್ಟೆವು.
-ವಿಶ್ವೇಶ್ವರ ಭಟ್
vbhat@me.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

