ನಿಜವಾದ ಚುನಾವಣೆ ಸಿದ್ಧತೆ ಅಲ್ಲ: ಪ್ರಚಾರ ತಂತ್ರ
ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಈಗ ತುರ್ತು ಸಿದ್ಧತೆಗಳನ್ನೇನೂ ಮಾಡಿಕೊಳ್ಳಬೇಕಾಗಿಲ್ಲ. ಫೆಬ್ರವರಿಯಲ್ಲೇ ಚುನಾವಣೆಯನ್ನು ಮುಗಿಸುವ ಮಾತು ಈಗ ಮಾಯವಾಗಿದೆ. ಇನ್ನೇನಿದ್ದರೂ ಏಪ್ರಿಲ್ - ಮೇ ಬಿಸಿಲಿನಲ್ಲಿನ ಚುನಾವಣೆಯ ತಂತ್ರದ ವಿಚಾರ. ಮೇ ಕೊನೆಯ ವೇಳೆಗೆ ಚುನಾವಣೆ ಮುಗಿದರೆ ಸಾಕು.
ಇಂತಹ ಸಮಯ, ಒಂದು ರೀತಿಯಲ್ಲಿ ರಾಜಕೀಯ ಪಕ್ಷಗಳಿಗೆ ಸುಮ್ಮನೆ ಕಾಯಬೇಕಾದ ಪರ್ವಕಾಲದ ಸನ್ನಿವೇಶ. ಎದುರಾಳಿಗಳ ತಂತ್ರವನ್ನು ಗಮನಿಸುವುದಷ್ಟೇ ಕೆಲಸ. ಆದರೆ ಹಾಗೆ ಸುಮ್ಮನೆ ಕೂಡುವುದೂ ಸಾಧ್ಯವಿಲ್ಲ.
ಜನರ ಮನಸ್ಸನ್ನು ಸೆಳೆದಿಟ್ಟುಕೊಳ್ಳುವಂತಹ ಕಾರ್ಯಕ್ರಮವನ್ನು ರೂಪಿಸಿಕೊಳ್ಳಲೇ ಬೇಕು. ಅದರಿಂದ ಮಾಧ್ಯಮಗಳಲ್ಲಿ ಪ್ರಚಾರ ಪಡೆದು, ಜನರ ಮುಂದೆ ಪಕ್ಷದ ಚಿತ್ರ ಇರುವಂತೆ ನೋಡಿಕೊಳ್ಳಬೇಕು, ಇದಿಷ್ಟೇ ಈಗಿನ ಕೆಲಸ. ಆ ಕೆಲಸವನ್ನು ಮಾಡಲಿಕ್ಕೆ ಪ್ರತಿಪಕ್ಷಗಳಿಗಿಂತ ಸರ್ಕಾರದ ಚುಕ್ಕಾಣಿ ಹಿಡಿದ ಪಕ್ಷಕ್ಕೇ ಹೆಚ್ಚಿನ ಅವಕಾಶವಿರುವುದು. ಅದನ್ನು ಭಾರತೀಯ ಜನತಾ ಪಾರ್ಟಿ ಚೆನ್ನಾಗಿಯೇ ಮಾಡುತ್ತಿದೆ.
ಪಕ್ಷಕ್ಕೆ ಹಿಂದೆ ಸಿಕ್ಕಿದ್ದ, ಈಗಲೂ ಇದೆ ಎಂದು ಭಾವಿಸಲಾಗಿರುವ, ಉತ್ತರ ಕರ್ನಾಟಕದ ಹನ್ನೆರಡು ಜಿಲ್ಲೆಗಳ ವೀರಶೈವ ಸಮಾಜದ ಬೆಂಬಲ ಜಾರಿಹೋಗದಂತೆ ಕಾಪಾಡಲು ಆ ಭಾಗದವರೇ ಆದ ಜಗದೀಶ ಶೆಟ್ಟರ್ ಅವರೇ ಚುನಾವಣೆಯಲ್ಲಿ ಪಕ್ಷದ ನಾಯಕ ಹಾಗೂ ಅವರೇ ಮುಂದಿನ ನಾಯಕರು ಕೂಡಾ ಎಂದು ಸ್ಪಷ್ಟವಾಗಿ ಸಾರಿದ್ದಾಗಿದೆ.
ಜಾತ್ಯತೀತ ಜನತಾದಳದಲ್ಲಿ, ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷದಲ್ಲಿ ಈ ವಿಚಾರದಲ್ಲಿ ಗೊಂದಲವೇ ಇಲ್ಲ. ಯಡಿಯೂರಪ್ಪ, ಕುಮಾರ ಸ್ವಾಮಿ ಅವರ ಹೆಸರುಗಳು ತಾವೇ ತಾವಾಗಿ ಮೇಲೆದ್ದು ಬಂದು ವಿಜೃಂಭಿಸಿವೆ. ಆದರೆ ಕಾಂಗ್ರೆಸ್ಸಿಗೆ ಆ ಸೌಭಾಗ್ಯವಿಲ್ಲ. ಪಕ್ಷದ ನಾಯಕರನ್ನು ಸೋನಿಯಾ ಗಾಂಧಿಯವರೇ ಆರಿಸಬೇಕು.
ಈ ಕೊರತೆಯನ್ನು ನೀಗಿಸಿಕೊಳ್ಳಲು ಕಾಂಗ್ರೆಸ್ ನಾಯಕರು, ಚುನಾವಣೆಯವರೆಗೂ ಸಾಮೂಹಿಕ ನಾಯಕತ್ವದ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದಾರೆ. ಸಾಮೂಹಿಕ ನಾಯಕತ್ವದ ಮಾರ್ಗದರ್ಶನ ತೋರಿಕೆಗಾಗಿ ಸೋವಿಯತ್ ರಷ್ಯದ ಕಮ್ಯುನಿಸ್ಟ್‌ಪಕ್ಷದಿಂದ ಎರವಲು ಪಡೆದ ಸೂತ್ರ. ಸಾಮೂಹಿಕ ನಾಯಕತ್ವದ ಕಲ್ಪನೆಯ ನಾನಾ ಮುಖಗಳ ಪರಿಚಯ ಕಾಂಗ್ರೆಸ್ ನಾಯಕರಿಗೆ ಇದ್ದಂತಿಲ್ಲ. ಕಾಂಗ್ರೆಸ್ಸಿಗರ ದೃಷ್ಟಿಯಲ್ಲಿ ಯಾರೂ ನಾಯಕರಲ್ಲ ಎನ್ನುವುದರ ಸಮಾನ ಅರ್ಥಸೂಚಕ ಪದ ಸಾಮೂಹಿಕ ನಾಯಕತ್ವ.
ಅದನ್ನು ನಂಬಿಕೊಂಡೇ ಕಾಂಗ್ರೆಸ್ ಪಕ್ಷ, ಯಡಿಯೂರಪ್ಪ ಕೇಂದ್ರಿತ ಚಟುವಟಿಕೆಯೇ ಮಾಧ್ಯಮದಲ್ಲಿ ರಾರಾಜಿಸುವುದನ್ನು ತಡೆಗಟ್ಟಲು, ಪ್ರಚಾರದಲ್ಲಿ ತನ್ನ ಪಾಲನ್ನು ಪಡೆಯಲು, ಕೃಷ್ಣೆಯತ್ತ ಕಾಂಗ್ರೆಸ್ ನಡಿಗೆಯ ಮಹಾಯಾತ್ರೆಯನ್ನು ನಡೆಸಿದ್ದು. ಆದರೆ ಆ ಯಾತ್ರೆಯಿಂದ ಕಾಂಗ್ರೆಸ್ಸಿಗೆ ಆದ ಅನುಕೂಲ ಅಷ್ಟಕ್ಕಷ್ಟೇ. ಸಾಮೂಹಿಕ ನಾಯಕತ್ವದ ಹೆಸರಿನಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ॥ ಪರಮೇಶ್ವರ ಹಾಗೂ ವಿಧಾನ ಸಭೆಯಲ್ಲಿನ ಪಕ್ಷದ ನಾಯಕ ಸಿದ್ಧರಾಮಯ್ಯ ಅವರ ನಡುವಣ ಶೀತಲ ಸಮರಕ್ಕೆ ದೊಡ್ಡ ರೀತಿಯಲ್ಲೇ ಪ್ರಾಮುಖ್ಯ ಸಿಗುವುದು ತಪ್ಪಲಿಲ್ಲ. ಪಾದಯಾತ್ರೆಯ ಕಾಲದಲ್ಲಿ ಸಿ.ಎಂ. ಇಬ್ರಾಹಿಂ, ಸಿದ್ದರಾಮಯ್ಯ ಹಾಗೂ ಇತರರು ಮಾಡಿದ ಭಾಷಣಗಳಲ್ಲಿ ಕೃಷ್ಣಾ ಬಯಲಿನ ಸಮಸ್ಯೆಗಳ ಪ್ರಸ್ತಾಪವನ್ನು ಬಿಟ್ಟು ಉಳಿದೆಲ್ಲ ವಿಷಯಗಳೂ, ಬಿಜೆಪಿ-ಜೆಡಿಎಸ್ ನಾಯಕರ ತೇಜೋವಧೆಯೂ ಧಾರಾಳವಾಗಿತ್ತು.
ಇಲ್ಲಿ ಚೋದ್ಯದ ವಿಚಾರ ಎಂದರೆ, ಸಿ.ಎಂ. ಇಬ್ರಾಹಿಂ, ಸಿದ್ದರಾಮಯ್ಯ ಅವರಿಬ್ಬರೂ ಕಾಂಗ್ರೆಸ್ಸಿಗೆ ವಲಸೆ ಬಂದವರೇ. ಇಬ್ರಾಹಿಂ ಅವರ ಸಾರ್ವಜನಿಕ ಜೀವನ ಆರಂಭವಾಗಿದ್ದು ಭದ್ರಾವತಿಯ ಕನ್ನಡ ಚಳವಳಿ ಕೇಂದ್ರದ ಮೂಲಕ. ಸಿದ್ದರಾಮಯ್ಯ ರಾಜಕೀಯಕ್ಕೆ ಬಂದಿದ್ದು ಲೋಕದಳ, ಜನತಾ ಪರಿವಾರದ ಮೂಲಕ. ಇವರಿಬ್ಬರೂ ಸಾಕಷ್ಟು ರಾಜಕೀಯ ಅಧಿಕಾರವನ್ನು ಅನುಭವಿಸಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದವರು, ಇಬ್ರಾಹಿಂ ಕೇಂದ್ರದಲ್ಲಿ ಮಂತ್ರಿಯಾಗಿದ್ದವರು, ಆದರೆ ಆ ಅಧಿಕಾರ ಅವರಿಗೆ ಸಿಕ್ಕಿದ್ದು ಭಾಗಶಃ ಜನತಾ ಪರಿವಾರದ ಮೂಲಕ. ಈಗ ಅವರೇ ಕಾಂಗ್ರೆಸ್ಸಿನ ಅತಿರಥ-ಮಹಾರಥಿಗಳಾಗಿದ್ದಾರೆ.
ಬೆಂಗಳೂರು - ಬಳ್ಳಾರಿ ನಡುವಣ ಸಿದ್ದರಾಮಯ್ಯ ಪಾದಯಾತ್ರೆ, ಕೃಷ್ಣಾ ಕಡೆಗಿನ ಸಾಮೂಹಿಕ ನಾಯಕತ್ವದ ಪಾದಯಾತ್ರೆಗಳ ಅನಂತರ ಆ ಶೈಲಿಯ ಪ್ರಚಾರ ಗಳಿಕೆಯ ಯತ್ನ ಜನರ ಮನಸ್ಸಿಗೆ ಹಿಡಿಸಲಾರದು - ಮುಂದಿನ ಯಾತ್ರೆಯ ಕಾಲದಲ್ಲಿ ಬೇರೆ ಯಾವುದಾದರೂ ಆಕರ್ಷಣೆ ಬೇಕು.
ಮುಗಿದ ಗಡವಿನ ಪ್ರಚಾರ: ಯಡಿಯೂರಪ್ಪ ಅವರಿಗೆ ಅಬ್ಬರದ ಪ್ರಚಾರ ದಕ್ಕಿದ್ದು ಸರ್ಕಾರವನ್ನು ಉರುಳಿಸುವ ವಿಚಾರದಲ್ಲಿ ಅವರು ನೀಡಿದ್ದ ಗಡವುಗಳ ಮೂಲಕ. ಸಂಕ್ರಮಣ ಕಳೆದ ಅನಂತರ ಆ ಗಡವಿನ ಪ್ರಚಾರ ರಾಜಕೀಯವೂ ಇಲ್ಲದಂತಾಯಿತು. ಇನ್ನು ಕರ್ನಾಟಕ ಜನತಾ ಪಾರ್ಟಿಯ ಬೆಂಬಲಿಗರ ಮುಖಂಡರ (ಶಾಸಕರೇ ಆಗಬೇಕಾಗಿಲ್ಲ) ಬೆಂಬಲವನ್ನು ಗಟ್ಟಿ ಮಾಡಿಕೊಳ್ಳುವುದಷ್ಟೇ ದೊಡ್ಡ ಕೆಲಸ.
ಯಡಿಯೂರಪ್ಪ ನೇತೃತ್ವದ ಪಕ್ಷಕ್ಕೆ ಈಗ ಬೆಂಬಲಿಗ ನಾಯಕರು ಎಲ್ಲಿಂದ ಬರಬೇಕು? ಅವರು ನಂಬಿರುವುದು, ಭಾರತೀಯ ಜನತಾ ಪಾರ್ಟಿಯ ನಾಯಕರನ್ನೇ. ಕಾಂಗ್ರೆಸ್ಸಿನಿಂದ ಯಡಿಯೂರಪ್ಪ ಹೆಚ್ಚು ಬೆಂಬಲಿಗರ ವಲಸೆಯನ್ನು ನಿರೀಕ್ಷಿಸುವಂತಿಲ್ಲ. ಅವರಿಗೆ ಕೊಡುವಂತಹದ್ದೇನೂ ಇವರಲ್ಲಿ ಇಲ್ಲ. ಮುಂದೆ ಕಾಂಗ್ರೆಸ್ ಟಿಕೆಟ್ ಸಿಗದ ಅತೃಪ್ತರಿಗೆ ಹೊಸ ಪಕ್ಷದಲ್ಲಿ ಅವಕಾಶವಾಗಬೇಕು. ಸದ್ಯದಲ್ಲಿ ಕಾಂಗ್ರೆಸ್ಸಿನಲ್ಲಿ ಯಾವ ಬದಲಾವಣೆಯೂ ಆಗಲಿಕ್ಕಿಲ್ಲ. ಹಲವು ರಾಜಕೀಯ ಭವಿಷ್ಯಕಾರರನ್ನು ನಂಬುವುದಾದರೆ, ಈಗ ಯಡಿಯೂರಪ್ಪ ಬೆಂಬಲಿಗರಾಗಿ, ಬಿಜೆಪಿಯಲ್ಲೇ ಉಳಿದಿರುವ, ಕೆಲವು ಮಂತ್ರಿಗಳು, ಶಾಸಕರು ಕಾಂಗ್ರೆಸ್ ಬಾಗಿಲನ್ನು ತಟ್ಟುವುದೂ ಸಾಧ್ಯ. ಅಂತಹ ಸಾಧ್ಯತೆಯನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಪರಮೇಶ್ವರ ನಿರಾಕರಿಸಿಲ್ಲ. ಆದರೆ ಆ ವಿಚಾರದಲ್ಲಿ ಅಂತಿಮ ಅಧಿಕಾರ ಸೋನಿಯಾ ಗಾಂಧಿ ಅವರದ್ದೇ ಎಂದು ಹೇಳುವುದನ್ನು, ಯಾವ ಕಾರಣಕ್ಕೂ ಅವರು ಮರೆಯುವುದಿಲ್ಲ.
ಅಂದಮೇಲೆ ಈಗ ಬಿಜೆಪಿಯಿಂದಲೇ ಯಡಿಯೂರಪ್ಪ ಪಾರ್ಟಿಗೆ ವಲಸೆ ಹೋಗುವವರು ಹೆಚ್ಚು ಎಂದಿಟ್ಟು ಕೊಂಡರೆ, ಆ ಅವಾಂತರವನ್ನು ಎದುರಿಸುವ ತಂತ್ರವನ್ನು ಹೊಸೆಯುವವರೂ ಆ ಪಕ್ಷದಲ್ಲೇ ಇದ್ದಾರೆ.
ತಮ್ಮ ಪಕ್ಷದ ಈಗಿನ ನಾಯಕ ಪಕ್ಷ ತೊರೆದರೆ ಆ ಪ್ರದೇಶದ ನಂಬರ್ ಟೂ ನಾಯಕನಿಗೇ ಕಿರೀಟ ತೊಡಿಸುವ ಯೋಚನೆ ಬಿಜೆಪಿಯದ್ದು. ಅದು ಅರ್ಥಪೂರ್ಣವಾದದ್ದು ಹಾಗೂ ಅನಿವಾರ್ಯ.
ಯಡಿಯೂರಪ್ಪ ಬೆಂಬಲಿಗರಲ್ಲಿ ಇನ್ನೂ ಬಿಜೆಪಿಯ ಪಟ್ಟಿಯಲ್ಲೇ ಉಳಿದಿರುವವರ ಸಮಸ್ಯೆ ಇದು. ಹಲವು ವರ್ಷಗಳಿಂದಲೂ ಕಾಪಾಡಿಕೊಂಡು ಬಂದಿರುವ ಕಾರ್ಯಕರ್ತರ ತಂಡದಲ್ಲಿ ಬಿರುಕು ಉಂಟಾದರೆ, ಆ ನಾಯಕನ ರಾಜಕೀಯ ಶಕ್ತಿಯೂ ಉಡುಗುವುದು ಖಚಿತ. ಬಿಜೆಪಿ ಯಾವ ಕ್ಷೇತ್ರದಲ್ಲೂ ಏಕವ್ಯಕ್ತಿ ನಾಯಕತ್ವದ ಪಕ್ಷವಲ್ಲ. ಎಲ್ಲ ಕಡೆ ಬಾವುಟ ಹಾರಿಸುವ ಜನ ಇದ್ದೇ ಇರ್ತಾರೆ. ಅವರನ್ನೇ ಬಳಸಿ ಬಿಜೆಪಿಯ ರಾಜ್ಯ ನಾಯಕರು ಕೆಲಸ ಮಾಡಬೇಕು.
ಗ್ರಾಮೀಣ ರಸ್ತೆ ಬೇಕೇನು?: ಇವೆಲ್ಲದರ ನಡುವೆ ಜಗದೀಶ ಶೆಟ್ಟರ್ ನೇತೃತ್ವದ ಸರ್ಕಾರ ಗ್ರಾಮೀಣ ಕರ್ನಾಟಕದ 189 ಕ್ಷೇತ್ರಗಳಲ್ಲಿ ಇನ್ನೆರಡು ತಿಂಗಳಲ್ಲಿ 5700 ಕೋಟಿ ರುಪಾಯಿಗಳಿಗೂ ಹೆಚ್ಚಿನ ಹಣವನ್ನು ವೆಚ್ಚ ಮಾಡುವ ಯೋಜನೆಯನ್ನು ಚಾಲ್ತಿ ಬಜೆಟ್‌ನ ಚೌಕಟ್ಟಿನಲ್ಲೇ ಪ್ರಕಟಿಸಿದೆ. ಈ ಯೋಜನೆಯ ಮುಖ್ಯ ಉದ್ದೇಶ, ಗ್ರಾಮೀಣ ಸಂಪರ್ಕ ಸಾಧನಗಳ ಅಭಿವೃದ್ಧಿ. ಅಂದರೆ ರಸ್ತೆ ಕೆಲಸ. ಇನ್ನೂ ಇಂತಹ ಹಲವು ಯೋಜನೆಗಳೂ ಪ್ರಕಟವಾಗುವ ಸಂಭವವಿದೆ. ಈ ಯೋಜನೆಯ ಉಸ್ತುವಾರಿ ಆಯಾ ಕ್ಷೇತ್ರದ ಶಾಸಕರೇ ಅಂದಮೇಲೆ, ಅಂತಹ ಜನಪ್ರಿಯ ಯೋಜನೆಯ ನಿರ್ಣಾಯಕ ಅಧಿಕಾರವನ್ನು ಯಾವ ಬಿಜೆಪಿ ಶಾಸಕನೂ ಬಿಟ್ಟು ಕೊಡಲಾರ. ಬಿಜೆಪಿಯಲ್ಲೇ ಉಳಿದರೆ ಹಣ ಮಂಜೂರಾಗುವುದು ಖಾತ್ರಿ. ಬಿಜೆಪಿ ಬಿಟ್ಟರೆ, ಅಥವಾ ಬಿಡುವ ಸೂಚನೆ ನೀಡಿದರೆ, ಯಾವುದಾದರೊಂದು ನೆಪ ಹೇಳಿ ಆ ಹಣ ಬಿಡುಗಡೆಯಾಗದೇ ಇರುವಂತೆ ನೋಡಿಕೊಳ್ಳುವುದು ಕಷ್ಟವೇನಲ್ಲ.
ಚುನಾವಣೆಯ ತಂತ್ರಗಾರಿಕೆಯ ದೃಷ್ಟಿಯಿಂದ ನಿಜಕ್ಕೂ ಇದೊಂದು "ಮಾಸ್ಟರ್ ಸ್ಟ್ರೋಕ್" ಬಿಜೆಪಿಯ ರಾಜಕೀಯ ಚಟುವಟಿಕೆ ಇನ್ನಷ್ಟೇ ಆರಂಭವಾಗಬೇಕು. ಬಜೆಟ್ ಮಂಡನೆ ಇವೆಲ್ಲದರ ನಡುವೆ ಫೆಬ್ರವರಿಯ ಮೊದಲ ಭಾಗದಲ್ಲೇ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಜೆಟ್ ಮಂಡಿಸುವ ನಿರ್ಧಾರಕ್ಕೂ ಪ್ರಚಾರ ಸಿಕ್ಕಿದೆ. ಆ ಬಜೆಟ್‌ನಲ್ಲಿ ಎಷ್ಟು ಬೇಕಾದರೂ ಜನ ಕಲ್ಯಾಣ ಕಾರ್ಯಕ್ರಮಗಳನ್ನು ತುರುಕಬಹುದು.
ಹಿಂದೆ ಬಹುತೇಕ ಸರ್ಕಾರಗಳು ಮಾಡಿದ್ದೂ ಅದನ್ನೇ. ಫೆಬ್ರವರಿ ಮಧ್ಯಭಾಗದಲ್ಲಿ ಮಂಡನೆಯಾಗಬಹುದಾದ ಬಜೆಟ್ಟೇ ಬಿಜೆಪಿಯ ಚುನಾವಣೆ ಪ್ರಣಾಳಿಕೆ ಆದೀತು. ಅದಕ್ಕೆ ಬಜೆಟ್‌ನಲ್ಲಿರುವ ಯೋಜನೆ ಎನ್ನುವ ಅಧಿಕಾರದ ಮುದ್ರೆ ಬೇರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಈಗ ಎಲ್ಲ ಪಕ್ಷಗಳಲ್ಲೂ ಕಂಡು ಬಂದಿರುವ ಪ್ರವೃತ್ತಿ ಎಂದರೆ, ಅನ್ಯಪಕ್ಷಗಳ ಸ್ಥಳೀಯ ಸರದಾರರುಗಳನ್ನು ಸೆಳೆಯುವ ಪ್ರಯತ್ನ. ಮೇಲ್ನೋಟಕ್ಕೆ ಈಗಿನ ರಾಜಕೀಯ ಪರಿಸ್ಥಿತಿ ಕಾಂಗ್ರೆಸ್ಸಿಗೆ ಅನುಕೂಲವಾಗಿದೆ ಎಂದು ಕಂಡು ಬಂದರೂ, ಕಾಂಗ್ರೆಸ್ ಅನೇಕ ಕ್ಷೇತ್ರಗಳಲ್ಲಿ ಹೊರಗಡೆಯ ಅಭ್ಯರ್ಥಿಗಳನ್ನು ಹುಡುಕುತ್ತಿರುವಂತಿದೆ. ನಿಜ. ಅದಕ್ಕೆ ದೆಹಲಿಯ ಆಶೀರ್ವಾದ ಬೇಕು. ಇಂತಹ ಪ್ರಯತ್ನ ನಡೆಸುತ್ತಿರುವ ನಾಯಕರಿಗೆ ದೆಹಲಿಯಿಂದ ಅಂಗೀಕಾರ ಪಡೆಯುವುದು ಸುಲಭ ಎನಿಸಿರಬೇಕು. ಆದರೆ ನಿಜವಾಗಲೂ ಕಾಂಗ್ರೆಸ್ಸಿನ ಈ ನಡಿಗೆ ಅರ್ಥವಾಗುವಂತಹದ್ದಲ್ಲ. 2008 ರಲ್ಲಿ, ಅಂದಿನ ವಿಶಿಷ್ಟ ಸನ್ನಿವೇಶದಲ್ಲಿ ಚುನಾವಣೆ ಗೆದ್ದಿದ್ದ ಪಕ್ಷೇತರರು, ಇತರ ಪಕ್ಷಗಳ ಆಗಿನ ಅಭ್ಯರ್ಥಿಗಳು, ಅಲ್ಲಿ ಶಾಶ್ವತವಾಗಿ ನಾಯಕರಾಗಿಬಿಡುವುದು ಸಾಧ್ಯವೇ?
ಕಾಂಗ್ರೆಸ್ಸಿಗೆ ಈಗ ಬೇಕಾಗಿರುವುದು ವಿಶ್ವಾಸಕ್ಕೆ ಅರ್ಹವಾದ, ಜನಬೆಂಬಲದ ಭದ್ರ ಬುನಾದಿ ಇರುವ ಲಿಂಗಾಯತ - ಒಕ್ಕಲಿಗ ಅಭ್ಯರ್ಥಿಗಳು. ದಾವಣಗೆರೆಯ ಧಣಿ ಶ್ಯಾಮನೂರು ಶಿವಶಂಕರಪ್ಪ ಅವರಿಗೆ ನಾಯಕತ್ವ ವಹಿಸಿಕೊಡಲು ಹಿಂದೇಟು ಹಾಕಿದವರೇ ಈಗ ಸ್ಥಳೀಯ ಲಿಂಗಾಯತರ ಪ್ರಭಾವಿ ವ್ಯಕ್ತಿಗಳನ್ನು ಹುಡುಕಲು ಹೊರಟಿರುವಂತಿದೆ. ಹೊರಗಡೆಯಿಂದ ಬರುವವರು ಸುಮ್ಮನೆ ಬರುವುದಿಲ್ಲ, ತಮ್ಮ ಗಂಟು-ಮೂಟೆಯನ್ನು ಕಟ್ಟಿಕೊಂಡೇ ಬರುವುದು. ಕಾಂಗ್ರೆಸ್ಸಿನಲ್ಲಿ ಮುಂದೆ ಎಂದಾದರೂ ಮೂಲದವರು - ವಲಸೆಗಾರರ ನಡುವೆ ಜಗಳ ನಡೆದಾಗ, ಅದರ ಮೂಲದಲ್ಲಿ ಈಗ ಬರುವ ವಲಸೆಗಾರರೇ ಇರುತ್ತಾರೆ. ಅಂತಹ ಸಂಕಟವನ್ನು ಈಗ ಕಾಂಗ್ರೆಸ್ ಆಹ್ವಾನಿಸುತ್ತಿರುವುದೇಕೆ ಎನ್ನುವುದು ಅರ್ಥವಾಗುತ್ತಿಲ್ಲ. ಆತ್ಮ ವಿಶ್ವಾಸದ ಅಭಾವವೇ? ಮೊದಲೇ ಹೇಳಿದಂತೆ ಈಗ ನಡೆಯುತ್ತಿರುವುದು ಚುನಾವಣೆ ಪೂರ್ವದ ತಾಲೀಮು ಮಾತ್ರ. ಈ ತಾಲೀಮಿನಲ್ಲಿ ಯಾವ ರಾಜಕೀಯ ಪಕ್ಷವೂ ಸಿದ್ಧಾಂತ ಬದ್ಧತೆ, ತತ್ವನಿಷ್ಠೆ, ಸಾರ್ವಜನಿಕ ಜೀವನದಲ್ಲಿನ ಪ್ರಾಮಾಣಿಕತೆ, ತಮ್ಮನ್ನು ನಂಬಿದ - ನಂಬಿರುವ ಸಮುದಾಯಗಳ ಹಿತರಕ್ಷಣೆಯಂತಹ ಮಾತನ್ನೇ ಆಡುತ್ತಿಲ್ಲ, ಅವೆಲ್ಲವೂ ಈಗಿನ ಚುನಾವಣೆ ವ್ಯವಸ್ಥೆಯಲ್ಲಿ ನಡೆಯದ ನಾಣ್ಯಗಳೇ.
ಜಾತ್ಯತೀತ ಜನತಾದಳದ ಅಭ್ಯರ್ಥಿಗಳಿಗೆ ಅವರವರ ಶಕ್ತಿಯ ನೆಲೆಗಳಲ್ಲಿ ಯಾವುದೇ ರೀತಿಯ ಚುನಾವಣೆಯ ತಂತ್ರದ ಅವಶ್ಯಕತೆ ಇದ್ದಂತಿಲ್ಲ. ಆ ಪ್ರದೇಶಗಳಲ್ಲಿ ಪಕ್ಷದ ಚುನಾವಣೆ ಯಂತ್ರ ನಿರಂತರವಾಗಿ ಸಿದ್ಧವಾಗಿರುವಂತಹದ್ದು.
ಅದೇ ರೀತಿಯಲ್ಲೇ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಪಕ್ಷದಲ್ಲೂ ಒಂದು ಕಟ್ಟುನಿಟ್ಟಿನ ನಿಯಮಗಳ ಚೌಕಟ್ಟಿನಲ್ಲೇ ದುಡಿಯುವ ಕಾರ್ಯಕರ್ತರ ಪಡೆಗಳೂ ಕೆಲಸ ಮಾಡುತ್ತಿವೆ. ಈಗಷ್ಟೇ ರೈತಸಂಘಟನೆಗಳು, ವಾಮ ಪಂಥೀಯರು ತಮ್ಮ ಅಸ್ತಿತ್ವವನ್ನು ಪ್ರದರ್ಶಿಸಲು ಮುಂದಾಗುತ್ತಿದ್ದಾರೆ, ಆದರೆ ರಾಜ್ಯದ ಪ್ರಬಲ ಕೋಮುಗಳನ್ನೇ ನಂಬಿ ಚುನಾವಣೆ ಕಣಕ್ಕೆ ಇಳಿಯುವವರ ಪಾಲಿಗೆ, ಈ ಶಕ್ತಿಗಳೆಲ್ಲ ಓಟುಗಳನ್ನು ವ್ಯರ್ಥ ಮಾಡಲೆಂದೇ ಕಣಕ್ಕೆ ಇಳಿಯುವುದು. ಚುನಾವಣೆ ಎಂದ ಮೇಲೆ ಎಲ್ಲ ಬಗೆಯ ಜನರೂ ಬೀದಿಗೆ ಬರಲೇ ಬೇಕಲ್ಲ.
ಕಿಡಿಗೇಡಿತನ: ಈಗಿನ ಚುನಾವಣೆ ವಾತಾವರಣದಲ್ಲಿ ಪಕ್ಷೇತರರಾಗಿ ಗೆಲ್ಲುವುದೇ ಸುವರ್ಣ ಅವಕಾಶದ ಬಾಗಿಲ ಮುಂದೆ ನಿಂತಂತೆ. ಪಕ್ಷದ ಶಿಸ್ತು ಪಕ್ಷಾಂತರ ಕಾಯಿದೆಯ ಭೀತಿ ಯಾವುದೂ ಇಲ್ಲದೇ ಮಂತ್ರಿಯಾಗಬಹುದಾದ ಅವಕಾಶ ಅದು.
- ಸತ್ಯ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

