ಕಾಮವೇಕೆ ಉರಿಯುತ್ತಿದೆ ಕಾಳ್ಗಿಚ್ಚಿನಂತೆ?
ಧರ್ಮ, ಅರ್ಥ, ಕಾಮ, ಮೋಕ್ಷ ಇವು ನಾಲ್ಕು ಪುರುಷಾರ್ಥಗಳು ಎಂದ ನಮ್ಮ ನೆಲದಲ್ಲಿ ಕಾಮವೇತಕೆ ಉರಿಯುತ್ತಿದೆ ಕಾಳ್ಗಿಚ್ಚಿನಂತೆ? 'ಸಂಭೋಗದಿಂದ ಸಮಾಧಿಯ ಕಡೆಗೆಂದು ನಡೆದು 'ಕಾಮ'ವನ್ನೂ, ಪೂಜೆಯ ಎತ್ತರಕ್ಕೆ ಏರಿಸಿ 'ರತಿರೂಪಿ ಭಗವತಿ'ಗೆ ಮುಡಿಪಾಗುವ ಬಗೆಯನ್ನು ಬಿತ್ತಿ ಬೆಳೆದ ನಮ್ಮ ಈ ನಾಡಿನಲ್ಲಿ ಇಂದೇಕೆ ಗಂಡು ಮೃಗಗಳು ಹೆಣ್ಣು ದೇವತೆಯ ಮೇಲೆ ರಾಕ್ಷಸ ದಾಳಿಯ ವಿಕೃತ ಕೇಳಿಗಿಳಿದಿವೆ? ಹಡೆದವಳು, ಪೂರೆದವಳು, ಸಲಹಿದವಳು ಎಲ್ಲಿದ್ದಾಳೆ ಆ ನಮ್ಮ ಮಹಾತಾಯಿ? ಮಹಾಕಾಳಿ? ಜಗನ್ಮಾತೆ? ನಮ್ಮ ಪಶುಪತಿ ಕಾಮನ ಸುಟ್ಟು ಬೂದಿ ಮಾಡಿದ ಬೂದಿಬಡುಕ ಪಶುಪತಿ ಎಲ್ಲಿದ್ದಾನೆ? ವಾದ ವಿವಾದ (ಪ್ರತಿವಾದಗಳ ಕಿಚ್ಚು ಹಚ್ಚುವ ಬದಲಿಗೆ ದೆಹಲಿಯಲ್ಲಿ ಆರಿಸಿದ 'ಜ್ಯೋತಿ'ಯನ್ನು ದೇಶದೆಲ್ಲ ಕಣ ಕಣದ ನೆಲದಲ್ಲೂ ಗಂಡಿನೆಲ್ಲ ಅಣುಅಣುವಿನೆದೆಯಲ್ಲೂ ಜ್ಯೋತಿಯ ಕಣ್ಣೀರು, ರಕ್ತ, ಕರುಳಿನ ಎಣ್ಣೆ ಬತ್ತಿಯಿಂದ ಆಕ್ರಂದನದ ಕಿಚ್ಚಿನಿಂದ ಮತ್ತೆ ಮಮತೆಯ, ಪ್ರೀತಿಯ ವಿಕೃತಕಾಮದ ಕಿಚ್ಚಿಲ್ಲದ ತಣ್ಣನೆಯ ಮನುಷ್ಯತ್ವದ ಹಣತೆಯ ಬೆಳಗುವುದು 'ಜ್ಯೋತಿ'ಯನು ಉಳಿಸುವುದು ಹೇಗೆಂದು ಏಕೆ ಈ ಲೋಕ ಯೋಚಿಸುತ್ತಿಲ್ಲಾ? ಯೋಚಿಸಬಾರದೆ? "ಮೊಲೆ ಬಿದ್ದು, ಮುಡಿಸಡಲಿ, ಗಲ್ಲಬತ್ತಿ, ತೋಳು ಕಂದಿದವಳ ಎನ್ನನೇಕೆ ನೋಡುವಿರಿ ಎಲೆ ಅಣ್ಣಗಳಿರಾ?" ಎಂದು ನಮ್ಮ ಅಕ್ಕಂದಿರು, ತಂಗಿಯರು, ತಾಯಂದಿರು ಅದೆಷ್ಟು ಶತಮಾನ ಬೇಡುತ್ತಲೇ ಬದುಕಬೇಕು? ಇದಕ್ಕೆಲ್ಲ ಒಂದು ಕಡೆ ಎಂಬುದಿಂದಾದರೂ ಬರಬಾರದೆ? ಎಂಬ ಎದೆಯ ತುಡಿತ ಮೊಳಗುತ್ತಿದೆ.
ದೆಹಲಿಯಲ್ಲಿ ಜ್ಯೋತಿಸಿಂಗ್ ಪಾಂಡೆ ಎಂಬ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರದ ಕ್ರೌರ್ಯದ ಪರಮಾವಧಿಯ ಪೈಶಾಚಿಕ ಕೃತ್ಯ ಇಡೀ ದೇಶದ ಮನುಷ್ಯತ್ವದ ಅಂತಃಸತ್ವವನ್ನು ಅಲ್ಲಾಡಿಸಿದೆ. ಇಡೀ ದೇಶ ಪ್ರತಿಭಟನೆಯನ್ನು ಮೊಳಗಿಸುತ್ತಿರುವ ಸುದ್ದಿಗಳ ಜೊತೆ ಜೊತೆಗೇ ಆರು ತಿಂಗಳ ಹಸುಗೂಸಿನ ಮೇಲೆ ಲೈಂಗಿಕ ದೌರ್ಜನ್ಯ, ಎಪ್ಪತ್ತು ವರ್ಷದ ಮುದುಕಿಯ ಮೇಲೆ ಅತ್ಯಾಚಾರ, ತಂದೆ, ಚಿಕ್ಕಪ್ಪ, ಅಣ್ಣ, ಸಂಬಂಧಿಕ, ಶಿಕ್ಷಕ, ಪಕ್ಕದ ಮನೆಯವ, ಬಸ್ ಚಾಲಕ, ಆಟೋಚಾಲಕ, ಐಎಎಸ್ ಅಧಿಕಾರಿ, ಮಂತ್ರಿ ಮಹೋದಯನಿಂದ ಅತ್ಯಾಚಾರಗಳೆಂಬ ಸುದ್ದಿ ಎದೆ ಬಿರಿಯುವಂತೆ ಬರುತ್ತಿವೆ.
ಸೀತೆಯಿಂದಾದ ರಾಮಾಯಣ, ಸೀತೆಯ ಕಣ್ಣೀರಿನಿಂದ ತೊಯ್ದು ಹೋದ ಭೂದೇವಿ, ತೊಯ್ದು ಹೋಗದ ರಾಮ, ರಾಮರಾಜ್ಯದ ಕನಸು, ಬೆಂಕಿಯಿಂದ ಹೊರಬರಲಾಗದ ಸೀತೆ! ದ್ರೌಪದಿಯಿಂದಾದ ಮಹಾಭಾರತ. ಅವಳ ಮುಡಿಯಲ್ಲಿ ಹುದುಗಿ ಉರುಳಿ ಹೋದ ಕುರುವಂಶ, ಉರುಳಿ ಹೋಗದ ಅರ್ಜುನ. ಉಳಿಯಲಾಗದ ಭೀಮ, ಭೀಮನಮವಾಸ್ಯೆಯಲ್ಲಿ ಗಂಡನ ಪೂಜಿಸುತ್ತಿರುವ ಹೆಂಡತಿ, ಕೀಚಕರದಂಡು ಮತ್ತೆ ಮತ್ತೆ ಅದೇ ಮಹಾಭಾರತವನ್ನು ಹಿಂಡುತ್ತಿವೆ. ಆದರೆ ಅಮಾವಾಸ್ಯೆಯ ಕತ್ತಲು, ಕೀಚಕರ ನೆರಳು ಕಳೆಯಿತೆ? ಉತ್ತರವಿಲ್ಲ.
ಹೆಣ್ಣು ಮಕ್ಕಳನ್ನು ಅಪಮಾನಿಸಿದ್ದರಿಂದಾಗಿಯೇ ಭಾರತ ಪತನವಾಗಿದೆ ಎಂದು ಅಂದೇ ಸ್ವಾಮಿ ವಿವೇಕಾನಂದರು ಗುಡುಗಿದ್ದರು. ಹೆಣ್ಣು ಗಂಡುಗಳು ಪರಸ್ಪರ ವಿರೋಧಿಗಳು. ಭೋಗಕ್ಕಾಗಿಯೇ ಹುಟ್ಟಿದ ಜಂತುಗಳು. ಮಜಾ ಮಾಡುವುದೇ ಅವರ ಧ್ಯೇಯ. ಪುರಾತನವಾದ ಪರಂಪರೆ ಮೌಲ್ಯಗಳೆಲ್ಲವೂ ಮೌಢ್ಯ. ಇಂಟರ್‌ನೆಟ್ ಹಾಗೂ ಸ್ವೇಚ್ಛಾಚಾರ ಮುಕ್ತ ಲೈಂಗಿಕತೆಯೇ ಆದರ್ಶ ಎಂಬ ತಿಳಿವಳಿಕೆಗಳು ಬದಲಾಗಬೇಕು. ಇತರರ ಹಿತಕ್ಕಾಗಿ ಬದುಕುವ, ಅವರ ಕಲ್ಯಾಣಕ್ಕಾಗಿ ತನ್ನ ಬದುಕನ್ನೇ ಬಲಿಗೊಡಬಲ್ಲ ವೀರಪರಂಪರೆ ಮತ್ತೆ ಉದಯವಾಗಬೇಕಿದೆ.
ಹಿಂದೆ, ಇಂದು, ಮುಂದೆಯೂ ದುಷ್ಟರ ಆಕ್ರಮಣಗಳಿಗೆ ಬಹು ಬೇಗನೆ ಬಲಿಯಾಗುತ್ತಿರುವವಳು ಹೆಣ್ಣೆ ಆಗಿದ್ದಾಳೆ. ಅವಳ ಮಾನ ಹಾನಿಯ ಮೂಲಕ ಆ ಮನೆಯ, ಊರಿನ, ಜಾತಿಯ, ಮತದ, ಧರ್ಮದ, ರಾಜ್ಯದ, ರಾಷ್ಟ್ರದ ಮಾನಹಾನಿ ತೆಗೆಯುತ್ತೇವೆಂದು ಭಾವಿಸಿ ಅನೇಕ ಸಾಮೂಹಿಕವಾದ ಅತ್ಯಾಚಾರಗಳು, ಮಾರಣ ಹೋಮಗಳು, ಸತಿಸಹಗಮನಗಳೂ ಚರಿತ್ರೆಯಲ್ಲಾಗಿವೆ. ಇಂದಿಗೂ ಭಾರತದಲ್ಲಿ, ಬಾಂಗ್ಲಾದಲ್ಲಿ, ಪಾಕಿಸ್ತಾನದಲ್ಲಿ ಸ್ವಾತಂತ್ರ್ಯೋತ್ತರ ಇತಿಹಾಸದಲ್ಲೂ ಆಗಿವೆ, ಆಗುತ್ತಿವೆ. ಮುಂದಾದರೂ ಆಗದಿರಲಿ ಎಂದು ಹಾರೈಸಬೇಕಿದೆ. ಅದಕ್ಕೆ ಬೇಕಾಗಿರುವುದು ಹೇಡಿಗಳ ರಣಹೇಡಿಗಳ ರಕ್ಕಸ ಪಡೆಯಲ್ಲ. ವೀರರ, ಮಹಾನ್ ವೀರರ ಮನುಷ್ಯತ್ವದ ಸೈನಿಕ ಸಂತ ವೀರಪಡೆ. ಅಂಥ ವೀರಪಡೆ ನಮ್ಮ ನಾಡಿನ ವೀರಗಲ್ಲುಗಳಲ್ಲಿ ಅಮರರಾಗಿದ್ದಾರೆ. ಆದರೆ ನಾವು ನಮ್ಮ ಮುಂದೆ ನೂರಾರು ಅತ್ಯಾಚಾರಗಳನ್ನು ಕಂಡೂ ನಡೆದಾಡುವ ಹೆಣಗಳಂತೆ ಬದುಕಿದ್ದೇವೆ.
ಹಿಂದಿನ ವೀರಗಲ್ಲುಗಳಲ್ಲಿ ಪೆಣ್ಗೊಳ್ ಶಾಸನಗಳು ಸಾಕಷ್ಟು ದೊರೆಯುತ್ತವೆ. ಹೆಣ್ಣಿನ ಮಾನ ಪ್ರಾಣ ರಕ್ಷಣೆಗಾಗಿ ಹೋರಾಡಿ ಮಡಿದವರ ಸ್ಮರಣೆಗಾಗಿ ನೆಟ್ಟ ಕಲ್ಲುಗಳೇ ಪೆಣ್ಗೊಳ್ ಶಾಸನಗಳು. ಹೆಣ್ಣಿನ ಗೋಳಿಗೆ ಸ್ಪಂದಿಸಿ ಹೋರಾಡಿ ಮಡಿದವರ ಶಾಸನಗಳು. ನಮ್ಮ ಸುತ್ತಲ ಹೆಣ್ಣು ಮಕ್ಕಳ ಮಾನ, ಪ್ರಾಣಗಳ ರಕ್ಷಣೆ ಕೇವಲ ಸರ್ಕಾರ, ಪೊಲೀಸರು, ಸೈನಿಕರದ್ದಲ್ಲ. ಸಮಾಜದ್ದೂ ಹೌದು. 'ಹೆಣ್ಣೀನಾ ಜನುಮಕ ಅಣ್ಣ ತಮ್ಮರು ಬೇಕು ಬೆನ್ನು ಕಟ್ಟುವರು ಸಭೆಯೊಳಗಾ" ಎಂದದ್ದು ಸುಳ್ಳಲ್ಲ. ಅಣ್ಣ ತಮ್ಮ ಒಡಹುಟ್ಟಿದವರೇ ಆಗಬೇಕೆಂದೇನೂ ಇಲ್ಲ. ನೋವಿಗೆ ಸಹಾಯ ಮಾಡಿದವನೆ ನೆಂಟ. ಆಪತ್ತಿಗಾದವನೆ ದೇವರು ಎಂಬುದು ನಮ್ಮ ಜನರ ಗಾಢವಾದ ನಂಬಿಕೆ ಮತ್ತು ಆಶಾವಾದ.
ಶಿಕಾರಿಪುರ ತಾಲೂಕಿನ ಚಿಗಳಿಕಟ್ಟೆ ಕೆರೆಯ ಮೇಲಿನ 1175ರ ವೀರಗಲ್ಲು ಇಂಥದ್ದೊಂದು ಹೆಣ್ಣೋಳ್‌ಶಾಸನ. ಬಿಟ್ಟೆಯೂರ ಸಿಂಗರದ ಮಂಚಗೌಡ ಎಂಬಾತನು ಹೆಣ್ಣು ಮಕ್ಕಳ ಉಟ್ಟಬಟ್ಟೆಯನ್ನು ಬಿಚ್ಚಿ ದನಕರುಗಳನ್ನು ಕೊಂಡೊಯ್ಯುವಾಗ ಜಂಬೂರಿನ ವಿದ್ವಾಂಸರ ಆದೇಶದ ಮೇರೆಗೆ ದೀವರ ಬಾಚೆಯನೆಂಬಾತನು ಹೆಂಗಸರು ಹಾಗೂ ದನಕರುಗಳನ್ನು ರಕ್ಷಿಸಲು ಹೋರಾಡಿ ಮಡಿದಿದ್ದಾನೆ. ಇದೇ ತಾಲೂಕಿನ ಅಡಗಂಟಿಯ 1058ರ ವೀರಗಲ್ಲಿನಲ್ಲಿ ಮಾಚಗಾವುಂಡನ್ ಎಂಬಾತನು "ಪೆಂಡಿರುಡೆಯನುರ್ಚಿದರೆಂಬ ಪುಯ್ಯಲಂ ಕೇಳ್ದು ಕಡೆಗಣಿಸಿದೆ" ಹೋರಾಡಿ ಮರಣವನ್ನಪ್ಪಿದ್ದಾನೆ. ತಾಳಗುಂದದ 1198ರ ಶಾಸನದಲ್ಲಿ ಕೇಸಿಮಯ್ಯನೆಂಬ ದಂಡನಾಯಕನು "ಸಂತ್ತಳಿಗೆ ನಾಡ ಬಳಿಯ ಬಾಡದ ಅಳಹೂರನಿರುದು ಪೆಂಡಿರ ಉಡೆ ಉಚ್ಚಿಕೊಂಡು ಹೋಹಲ್ಲಿ ನಾಡಕುಳತಿಳಕ ಮುಕ್ಕಡರ, ಸೋವಿಸೆಟ್ಟಿಯ ಮಗಂ ಕಾಳೆಯ ನಾಯಕ" ಹೋರಾಡಿ ಮಡಿದ ಪ್ರಸ್ತಾಪವಿದೆ. ಈ ಕೇಸಿಮಯ್ಯನೇ ಅಕ್ಕಮಹಾದೇವಿಯನ್ನು ಬಲವಂತವಾಗಿ ವಿವಾಹವಾದ ಕೌಶಿಕರಾಜನಿರಬೇಕೆಂಬ ಊಹೆಗಳೂ ಇವೆ. ಏನೇ ಆದರೂ ಕೇಸಿಮಯ್ಯನೆಂಬ ದುಷ್ಟನಿಗೆ ಕಾಳೆಯನಾಯಕನೆಂಬ ವೀರನಿದ್ದ. ಅವನೇ ನಿಜವಾದ ನಾಡಿನ ಕುಲತಿಲಕ. ಇದೇ ಊರಿನ 1007ರ ವೀರಗಲ್ಲಿನಲ್ಲಿ "ನಾವಿದರ ಗೆಸಾಸಿ ಗುಲುಗಂ" ಎಂಬಾತ ಹೆಣ್ಣುಗಳ ಗೋಳನ್ನು ನಿವಾರಿಸಿ ತುರುಗಳನ್ನು ಬಿಡಿಸಿ ಹೋರಾಡಿ ಮಡಿದಿದ್ದಾನೆ. ಚಿಕ್ಕಮಾಗಡಿಯ ವೀರಗಲ್ಲಿನಲ್ಲಿ ಮಲಪರು ದನಗಳನ್ನು ಮುತ್ತಿ ಹೆಂಗಸರ ಬಟ್ಟೆಯನ್ನು ಬಿಚ್ಚಿಕೊಂಡು ಹೋಗುವಾಗ ಕಾಚಿಸೆಟ್ಟಿಯ ಮಗನಾದ ತೈಲಮ ಎಂಬ ವೀರ ಹೋರಾಡಿ ಮಡಿದಿದ್ದಾನೆ. ಅಂತೆಯೇ ಶಿಕಾರಿಪುರದ 'ಹರಿಯಕ್ಕ' ಎಂಬ ವೀರ ಮಹಿಳೆ ತಂದೆ ಮಾದಿಗೌಡನೊಡನೆ ಕಾದುವವರೊಡನೆ ಹೋರಾಡಿ ಮಡಿದಿದ್ದಾಳೆ. ಬಂದಳಿಕೆಯ 912ರ ಶಾಸನದಲ್ಲಿ ಜಕ್ಕಿಯಬ್ಬೆ 'ನಾಗರಖಂಡ-70' ಎಂಬ ಕಂಪಣವನ್ನಾಳಿದ ವೀರಮಹಿಳೆಯಾಗಿದ್ದಾಳೆ. ನಾಗಿಯಕ್ಕ 1067ರಲ್ಲಿ ಬಳ್ಳಿಗಾವೆಯಲ್ಲಿ 'ತಾರಾಭಗವತಿ' ಮಾಡಿಸಿದ್ದಾಳೆ. "ಸತ್ಯದ ತವರ್ಮನೆ, ಚೌಗದ ಜನ್ಮಭೂಮಿ" ಎಂದು ಹೆಸರಾಗಿದ್ದಾಳೆ. 1070ರ ಶಾಸನದಲ್ಲಿನ ಲಚ್ಚಲದೇವಿ "ಶರಣಾಗತ ರಕ್ಷಾಮಣಿ, ಯಾಚಕಜನ ಜಂಗಮ ನಿಧಾನ ಕಳಸೆ" ಎನಿಸಿದ್ದಾಳೆ. ಇಂಥ ಸಾವಿರಾರು ವೀರಮಹಿಳೆಯರು ನಾವು ಅಬಲೆಯರಲ್ಲ ಸಬಲೆಯರು ಎಂದು ಸಾಬೀತು ಮಾಡಿದ್ದಾರೆ. ಇದು ಹೆಣ್ಣು ಗಂಡು ಕದನವಲ್ಲ. ಹೆಣ್ಣು ಗಂಡು ಕಾಮದ ಕಿಚ್ಚನ್ನು ಪ್ರೇಮದ ಉರಿಯನ್ನಾಗಿಸಿ ಅರಿವಿನ ಹಣತೆಯಿಂದ ಕಟ್ಟಬೇಕಾದ ಮನುಷ್ಯತ್ವದ ಸದನ.
"ಗಂಡು ಗಂಡಾದಡೆ ಹೆಣ್ಣಿನ ಸೂತಕ. ಹೆಣ್ಣು ಹೆಣ್ಣಾದಡೆ ಗಂಡಿನ ಸೂತಕ" ಎಂಬ ಅಕ್ಕಮಹಾದೇವಿಯು ನೀಡುವ ಎಚ್ಚರದೊಂದಿಗೆ ಸೂತಕವಿರದ ಗಂಡು ಗಂಡಾಗದ, ಹೆಣ್ಣು ಹೆಣ್ಣಾಗದ ಮನುಷ್ಯರಾಗುವ, ಮನುಷ್ಯತ್ವದ ನಾಡಿನ ಕಡೆಗೆ ನಮ್ಮ ಹೊಸ ನಡಿಗೆ ಸಾಗಬೇಕಿದೆ. ವೀರಗಲ್ಲುಗಳಲ್ಲಿರುವ ಹಾಗೆ ನಾವು ಸಾಯಬೇಕಿಲ್ಲ, ಸಾಯಿಸಲೂ ಬೇಕಿಲ್ಲ. ಆದರೆ ನಾವಿರುವ ಜಾಗದಲ್ಲಿ ಹೆಣ್ಣುಗಳ ಕಾಡುವ, ಕೆಡಿಸುವ ಕೀಚಕರ ಎದೆ ನಡುಗುವಂಥ ಧೀರ ವರ್ತನೆ ವೀರತ್ವದ ಪ್ರತಿಕ್ರಿಯೆ ನಮ್ಮದಾದರೆ ಕಾಮದ ಕಾಳ್ಗಿಚ್ಚಿನಂತೆ ಹಬ್ಬುತ್ತಿರುವ ಊರ ಕಿಚ್ಚನ್ನು ಉರದ ಕಿಚ್ಚನ್ನು ಇರದಂತೆ ಮಾಡಬಹುದು. ಸಣ್ಣ ಅನ್ಯಾಯ ಅತ್ಯಾಚಾರವಾದರೂ ಅನಾಚಾರವಾದರೂ ಸಹಿಸದೇ ಪ್ರತಿಭಟಿಸುವುದೇ ಮೊದಲ ಪ್ರಬಲ ಅಸ್ತ್ರ. ಅದೇ ಪರಾಕ್ರಮದ ವೀರತ್ವದ ಮೊದಲ ಮೆಟ್ಟಿಲು. ಗಂಡು ಹೆಣ್ಣಿನ ರಕ್ಷಕನಲ್ಲ. ಹೆಣ್ಣು ಗಂಡಿನ ರಕ್ಷಕಳಲ್ಲ ಹೆಣ್ಣು ಗಂಡು ಇಬ್ಬರೂ ಸೇರಿ ಮನುಷ್ಯತ್ವದ ಘನತೆಯ ಸಂರಕ್ಷಕರು ಆಗಬೇಕಾಗಿದೆ.
-ಡಾ. ಬಿ.ವಿ. ವಸಂತಕುಮಾರ್
ಕನ್ನಡ ಪ್ರಾಧ್ಯಾಪಕರು ಮೈಸೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

