ಅಂಕಣಗಳು

ಅಳುವ ಗಂಗೆಯೊಳು ತೇಲಿ ಬರುವುದೇ ನಗೆಯ ಹಾಯಿದೋಣಿ!?

ಮಹರ್ಷಿಗಳು ಆಗಿ ಹೋದ, ವೇದಗಳ ಪುಣ್ಯಭೂಮಿ ಎನಿಸಿದ, ಸಾಧು ಸಂತರ...

ಅಳುವ ಗಂಗೆಯೊಳು ತೇಲಿ ಬರುವುದೇ ನಗೆಯ ಹಾಯಿದೋಣಿ!?
Published On :

ಮಹರ್ಷಿಗಳು ಆಗಿ ಹೋದ, ವೇದಗಳ ಪುಣ್ಯಭೂಮಿ ಎನಿಸಿದ, ಸಾಧು ಸಂತರಲ್ಲಿ ದೈವತ್ವ ಕಾಣುವ ದೇಶದಲ್ಲಿ 80 ವರ್ಷದ ವಯೋ- ಜ್ಞಾನವೃದ್ಧ ಸಂತರೊಬ್ಬರು ಅಂಥ ತಪಸ್ಸು ಆರಂಭವಾಗಿ 32 ದಿನಗಳಾದವು. ಅದು ದೇವನದಿ ಗಂಗೆಗಾಗಿ, ಆ ಮಾತೆಯ ಉಳಿವಿಗಾಗಿ, ಅದರ ಅಸ್ತಿತ್ವ ನುಂಗುವ ಎಲ್ಲ ಮನೋಭಾವದ ವಿರುದ್ಧ ಸಂಕಲ್ಪಿಸಿದ ತಪಸ್ಸು. ಸ್ವಾಮೀಜಿಯವರ ಮ್ಯಾರಾಥಾನ್ ತಪಸ್ಸು (ಇಂದಿಗೆ) 33 ದಿನಗಳ ನಂತರವೂ ಮುಂದುವರಿದಿದೆ. ಅಭಿವೃದ್ಧಿಯ ಮಹಾ ಮ್ಯಾರಾಥಾನ್‌ನಲ್ಲಿರುವ ನಮಗದು ಗಮನಕ್ಕೇ ಬರುತ್ತಿಲ್ಲ!
ರೇಸಿಗೆ ಬಿದ್ದಿದ್ದೇವೆ. ಖುಷಿಯಿಂದ ಓಡುತ್ತಿದ್ದೇವೆ. ಗೊತ್ತು ಗುರಿಯಿಲ್ಲ ನಮ್ಮ ಮ್ಯಾರಾಥಾನ್‌ಗೆ ಆಧುನಿಕತೆಯ ಪ್ರೇರಣೆ. ಇಡೀ ಬದುಕಿಗೆ ಬಿಸಿ ಏರಿಸಿಕೊಂಡು ಹುಚ್ಚು ಓಟದಲ್ಲಿ ತೊಡಗಿದ್ದೇವೆ. ವೈಜ್ಞಾನಿಕ ಕ್ರಾಂತಿ, ಕೈಗಾರಿಕಾ ಕ್ರಾಂತಿ, ತಾಂತ್ರಿಕ ಕ್ರಾಂತಿ, ಹಸುರು ಕ್ರಾಂತಿ, ಆರ್ಥಿಕ ಕ್ರಾಂತಿ... ಸಾಲು ಸಾಲು ಕ್ರಾಂತಿಯ ಬಿಸಿಲ್ಗುದುರೆ ಮುಂದಕ್ಕೆ ಓಡುತ್ತಲೇ ಇದೆ. ಹಿಂದೆ ನಮ್ಮ ಮ್ಯಾರಾಥಾನ್. ಇಂಥ ಕ್ರಾಂತಿಯ ಸಂಕೇತ ನಮ್ಮ ನಗರಗಳು.
ಒಪ್ಪಲೇಬೇಕು. ನಗರಗಳು ರೂಪುಗೊಂಡಂತೆ ನಾಗರಿಕರು ಬೆಳೆಯುತ್ತಾರೆ. ಆದರೆ, ದುರಂತ ಗೊತ್ತೇ? ಹೀಗೆ ಬೆಳೆದ ನಾಗರಿಕರ ಆಡಳಿತಾತ್ಮಕ ಅಧಿಕಾರವನ್ನು ಪ್ರಭುತ್ವ ಕಸಿದುಕೊಂಡು ಬಿಡುತ್ತದೆ. ಆಗ ನಾಗರಿಕರ ಮಲ ಮೂತ್ರ ಕೂಡ ರಾಜ್ಯದ ಸಂಪತ್ತಾಗಿ ಬಿಡುತ್ತದೆ?! ಮತ್ತು ಅದರ ನಿರ್ವಹಣೆ ಜವಾಬ್ದಾರಿ ಸಹಜವಾಗಿ ಪ್ರಭುತ್ವದ್ದಾಗಿರುತ್ತದೆ. ಇಂಥ ಜವಾಬ್ದಾರಿಯ ನಿರ್ವಹಣೆಯನ್ನು ನಮ್ಮ ಪ್ರಭುತ್ವ ಹೇಗೆ ಮಾಡುತ್ತಿದೆ ಎಂಬುದಕ್ಕೆ ಕಣ್ಣೆದುರಿನ ನಿದರ್ಶನ ದೇಶದ ಯಾವುದೇ ಭಾಗದ ಯಾವುದೇ ನದಿಗಳು. ಸಮಸ್ತ ಮಾನವ ತ್ಯಾಜ್ಯದ ವಿಲೇವಾರಿಗಾಗಿಯೇ ನದಿಗಳಿರುವುದು ಎಂಬ ನಮ್ಮ ಮನೋಭಾವದ ಪರಿಣಾಮಕ್ಕೆ ನಮ್ಮ ದೇವನದಿ ಗಂಗೆಯೂ ಹೊರತಲ್ಲ.
ನಾಗರಿಕತೆಯ ಮಾನದಂಡವೇ ಕೈಗಾರಿಕೆಗಳಾಗಿರುವಾಗ ನಗರಗಳಲ್ಲಿ ಕೈಗಾರಿಕೆಗಳು ಹೆಚ್ಚುತ್ತಾ ಹೋಗುತ್ತಿವೆ. ಸಹಜವಾಗಿ ಪ್ರಭುತ್ವದ ನೀತಿ ಕೈಗಾರಿಕೆಗಳ ಓಲೈಕೆ ಆಗುತ್ತಿದೆ. ಅವುಗಳಿಗೆ ನೀರು- ವಿದ್ಯುತ್ ಪೂರೈಕೆ ಆದ್ಯತೆ. ಅದೇ ವೇಳೆ, ಅವುಗಳಿಂದ ಹೊರ ಬರುವ ವಿಷಯುಕ್ತ ಉತ್ಪನ್ನಗಳನ್ನು ನದಿಗೆ ಹರಿಯಬಿಡಲಾಗುತ್ತದೆ. ಅಭಿವೃದ್ಧಿಯ ಚಕ್ರದೊಳಗೆ ನಗರಗಳೇನೋ ವಿಕಾಸವಾಗುತ್ತಾ ಹೋಗುತ್ತವೆ, ಜೀವನದಿಗಳು ದೂಷಿತವಾಗುತ್ತಾ ಸಾಗುತ್ತಿವೆ.
ಗಂಗೆಯ ಇಂದಿನ ಸ್ಥಿತಿ ಏನಾಗಿದೆ ಎಂಬುದಕ್ಕೆ ಮತ್ತೆ ವ್ಯಾಖ್ಯಾನ ಬೇಕಿಲ್ಲ. ನಾಗರಿಕತೆಯ ಇಂಥ ದುರಂತದ ವಿರುದ್ಧ ಉತ್ತರಾಖಂಡ್‌ನಲ್ಲಿ ಜ್ಞಾನಸ್ವರೂಪ ಸ್ವಾನಂದ ಸ್ವಾಮೀಜಿ (ಪ್ರೊ.ಜಿ.ಡಿ. ಅಗರ್‌ವಾಲ್) ನಿರಶನ ಆರಂಭಿಸಿ 32 ದಿನಗಳು ಕಳೆದು ಹೋದವು. ಸರಕಾರ, ಮಾಧ್ಯಮಗಳು, ಸಂಘ-ಸಂಸ್ಥೆಗಳು ಕೊನೆಗೆ ಜನಸಾಮಾನ್ಯರಿಗೂ ಏನೇನೂ ಅನ್ನಿಸಿಲ್ಲ. ವ್ಯವಸ್ಥೆ ಎಷ್ಟರಮಟ್ಟಿಗೆ ಜಡ್ಡುಗಟ್ಟಿಹೋಗಿದೆ ಎಂಬುದಕ್ಕೆ ಇದಕ್ಕಿಂಥ ಸಾಕ್ಷಿ ಬೇಕೇ?
ಖ್ಯಾತ ಸಮಾಜಶಾಸ್ತ್ರಜ್ಞನೊಬ್ಬ ಗಂಗಾ ನದಿಯ ಬಗ್ಗೆ 'ಎಛಟ್ಜಿಛ ್ಝಡ ಡ್ಡ್ಠಿಟ್ಝಿಟ್ಜಿ ್ಝಟಿಡ್ಟಿ ಛಟಿ ಛಜಿಜಿಟ್ಡಜಟಿಡಿ ್ಟಜಿ ಝಿಜ ಛಜಿಜಿಟ್ಡಜಟಿಡಿ' ಎಂದಿದ್ದಾನೆ. ಈಗಿನ ಗಂಗಾ ನದಿಯನ್ನು ನೋಡಿದರೆ ಈ ಮಾತು ಅಕ್ಷರಶಃ ಸತ್ಯ. ಗಂಗೆ ಕೊಳೆಗಳಿಂದ ಸಮೃದ್ಧಳಾಗಿದ್ದಾಳೆ. ಇನ್ನೊಂದೆಡೆ ಗಂಗೆಯ ಪ್ರಮುಖ ಜಲಮೂಲವಾದ ಅಲಕಾನಂದದಂಥ ಜೀವವಾಹಿನಿಗಳಿಗೆ ಆಧುನಿಕ ಅಭಿವೃದ್ಧಿಯ ಹೆಸರಲ್ಲಿ ಒಡ್ಡುಗಳನ್ನು ನಿರ್ಮಿಸಿ ಕೊಲ್ಲಲಾಗುತ್ತಿದೆ.
ಗಂಗಾ ನದಿಯ ನೈರ್ಮಲ್ಯದ ವಿರುದ್ಧ ದನಿ ಕೇಳಲಾರಂಭಿಸಿ ದಶಕಗಳು ಕಳೆದಿವೆ. ಜವಾಬ್ದಾರಿ ಬಗ್ಗೆ ಮಾತ್ರ ಯಾರೂ ಯೋಚಿಸುತ್ತಿಲ್ಲ ಎಂಬ ಕಳಕಳಿಯೊಂದಿಗೇ ಸ್ವಾಮೀಜಿ ನಿರಶನ ಆರಂಭಿಸಿರುವ ಜತೆ ಜತೆಗೇ  ಇನ್ನೊಂದೆಡೆ ಅಸ್ತಿತ್ವಕ್ಕೆ ಬಂದದ್ದು ಗಂಗಾ ಸಂಸತ್ತು. ಆಧುನಿಕ ಭಾರತದ ಭಗೀರಥರೆನಿಸಿದ ರಾಜೇಂದ್ರಸಿಂಗ್ ನೇತೃತ್ವದ ಇದರಲ್ಲಿ ಆಡಳಿತ, ಸಮಾಜ ಹಾಗೂ ಸಂತರೂ ಒಗ್ಗೂಡಬೇಕು ಎಂಬುದು ಆಶಯ.
ಜಲ್ ಬಿರಾದರಿ, ತರುಣ್ ಭಾರತ್ ಸಂಘ ಮತ್ತು ಗೋವಿಂದ ವಲ್ಲಭ ಪಂತ್ ಸಾಮಾಜಿಕ ವಿಜ್ಞಾನ ಸಂಸ್ಥೆಗಳು ಸೇರಿ ಅಲಹಬಾದ್‌ನಲ್ಲಿ 2013 ಜನವರಿ 21ರಿಂದ 23ರವರೆಗೆ ಸಭೆಯನ್ನು ಆಯೋಜಿಸಿದ್ದವು. ಅಲ್ಲಿಯೇ ಗಂಗಾ ಸಂಸತ್ ರಚನೆಯಾಯಿತು. ಈ ಸಭೆಯಲ್ಲಿ ದೇಶಾದ್ಯಂತದ 200ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಅವರಲ್ಲಿ ಸಂತರು, ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು, ವಿಜ್ಞಾನಿಗಳು, ಪರಿಸರವಾದಿಗಳು, ಅಧಿಕಾರಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿದ್ದರು. ಅಲ್ಲಿನ ನಿರ್ಣಯಕ್ಕೆ ಪೂರಕವೆಂಬಂತೆ ಕಾಕತಾಳೀಯವಾಗಿ ಆರಂಭಗೊಂಡದ್ದು ಗಂಗಾ ಸಂರಕ್ಷಣೆಗಾಗಿ ಇಂದು ಸ್ವಾಮೀಜಿ ನಡೆಸುತ್ತಿರುವ ನಿರಶನ.
ಗಂಗೆಯ ಬಗೆಗಿನ ಭಾರತೀಯರ ಸಾಂಸ್ಕೃತಿಕ ಮೌಲ್ಯಗಳು ಪುನರ್‌ಸ್ಥಾಪನೆಯವರೆಗೂ ತಮ್ಮ 'ಗಂಗಾ ತಪಸ್ಯಾ' ಮುಂದುವರಿಯುತ್ತದೆನ್ನುವ ಜ್ಞಾನಸ್ವರೂಪ ಸ್ವಾನಂದ ಸ್ವಾಮೀಜಿ ಈ ಬಗ್ಗೆ ಸಂತರಾಗಿ ತಮ್ಮ ಜವಾಬ್ದಾರಿಯನ್ನು ಹಲವು ಬಾರಿ ವ್ಯಾಖ್ಯಾನಿಸಿದ್ದಾರೆ. ಇತ್ತ ರಾಜೇಂದ್ರಸಿಂಗ್‌ರ ಪ್ರತಿಪಾದನೆಯೂ ಇದೇ. ಪ್ರಾಚೀನ ಕಾಲದಲ್ಲಿ ಸಂತರು ತಮ್ಮ ಜವಾಬ್ದಾರಿಯನ್ನು ಅರಿತಿದ್ದರು. ಹಾಗಾಗಿಯೇ ಅವರು ನದಿಯ ತಟದಲ್ಲೇ ತಮ್ಮ ವಾಸಸ್ಥಾನ ಮಾಡಿಕೊಳ್ಳುತ್ತಿದ್ದರು. ಇದೀಗ ಅವರು ತಮ್ಮ ಉತ್ತರಾದಾಯಿತ್ವವನ್ನು ಮರೆತು ಬಿಟ್ಟಿದ್ದಾರೆ. 1932ರಲ್ಲಿ ಬ್ರಿಟಿಷ್ ಅಧಿಕಾರಿ, ಅಂದಿನ ಬನಾರಸ್ ನಗರಾಯುಕ್ತ ಹಾಕಿನ್ಸ್ ಪಟ್ಟಣದ ಗಲೀಜನ್ನು ನದಿಯಲ್ಲಿ ಬಿಡಲು ಸೂಚಿಸಿದಾಗ ಅವರೆಲ್ಲರೂ ಸುಮ್ಮನಿದ್ದರು. ಸಮಾಜ ಕೂಡ ಪ್ರತಿರೋಧ ವ್ಯಕ್ತಪಡಿಸಿರಲಿಲ್ಲ. ಹಾಕಿನ್ಸ್ ಅಂದು ನೀಡಿದ ಆದೇಶವನ್ನೇ ಸ್ವತಂತ್ರ ಭಾರತದ ನಗರಾಯುಕ್ತರು ಇಂದಿಗೂ ಪಾಲಿಸುತ್ತಿದ್ದಾರೆ ಎಂದು ವಿಷಾದಿಸುತ್ತಾರೆ.
ರಾಜೇಂದ್ರ ಸಿಂಗ್ ಪ್ರಕಾರ ನದಿ ಉಗಮದ ಸ್ಥಳದಲ್ಲಿದ್ದ ಅರಣ್ಯ ಹಾಳು ಮಾಡಿರುವುದು ಗಣನೀಯ ಆಘಾತ ತಂದೊಡ್ಡಿದೆ. ಗಂಗಾ ನದಿಗೆ ತೊಂದರೆ ಕೊಡುವ ಕಾರ್ಯ ಅದು ಉಗಮಿಸುವ ಗಂಗೋತ್ರಿಯಿಂದಲೇ ಆರಂಭವಾಗಿದೆ. ಹೇಗೆ ನಗರಗಳು ಬೆಳೆಯುತ್ತಾ ಬಂದವೋ ಅವುಗಳ ಮಲ-ಮೂತ್ರ ಗಂಗೆ ಸೇರುತ್ತಾ ಬಂತು. ಜಲ ವಿದ್ಯುತ್‌ನಿಂದ ಕಾರ್ಖಾನೆಗಳು ಆರಂಭವಾದವು. ಅದು ಸರಿ. ಆದರೆ ಅವುಗಳಿಂದ ಹೊರಬರುವ ರಾಸಾಯನಿಕಗಳು ಗಂಗೆ ಒಡಲು ನಿರಂತರ ಸೇರುತ್ತಿವೆ. ಗಂಗೆ ಯಾವಾಗ ಮಲೀನವಾಗಲು ಆರಂಭಿಸಿದಳೋ ಆಗ ಜಾಗೃತ ಸಮಾಜ ಮತ್ತು ಸಂತರು ಆಡಳಿತವನ್ನು ಬಡಿದೆಬ್ಬಿಸುವ ಕೆಲಸವನ್ನು ಶುರು ಮಾಡಿದ್ದಾರೆ. ನ್ಯಾಯಕ್ಕಾಗಿ ಹೋರಾಟ ಆರಂಭವಾಗಿ ದಶಕಗಳೇ ಸಂದಿವೆ. ಹೀಗೆ ಹೋರಾಟ ಹಾದಿ ಹಿಡಿದ ಸಂಘಟನೆಗಳಲ್ಲಿ ಗಂಗಾ ಸಂಸತ್ ಸಹ ಒಂದು.
ನಮ್ಮ ಶಾಸ್ತ್ರಗಳಲ್ಲಿ ಗಂಗೆಗೆ ತಾಯಿಯ ಸ್ಥಾನವನ್ನು ನೀಡಲಾಗಿದೆ. ಸರ್ಕಾರ ರಾಷ್ಟ್ರೀಯ ನದಿ ಗೌರವ ನೀಡಿದೆ. ಆದರೆ, ಈ ಗಂಗೆಗೆ ಇಂದು ತಾಯಿಯ ಪ್ರೇಮವಾಗಲಿ, ರಾಷ್ಟ್ರೀಯ ನದಿ ಎಂಬ ಗೌರವವಾಗಲಿ ಸಿಗುತ್ತಿಲ್ಲ. ಗಂಗೆಯ ಜತೆಗೆ ನಾವು ನಡೆದುಕೊಳ್ಳಬೇಕಾಗಿದ್ದು ಸಂಭಾವಿತತನ ಯಾವಾಗಲೋ ಬಿಟ್ಟು ಹೋಗಿದೆ. ರಾಷ್ಟ್ರೀಯ ನದಿ ಎಂದು ಘೋಷಿಸಿದಾಕ್ಷಣ ನಾವು ನಮ್ಮ ಕರ್ತವ್ಯವನ್ನು ಪೂರ್ತಿ ಮಾಡಿದಂತೆ ಆಗುವುದಿಲ್ಲ. ರಾಷ್ಟ್ರಧ್ವಜ ರಕ್ಷಣೆಗೆ ಹೇಗೋ ಕಾನೂನುಗಳಿವೆ. ಆದರೆ ರಾಷ್ಟ್ರೀಯ ನದಿಗಿಲ್ಲ! ಗಂಗೆಯ ಸದಾಚಾರಕ್ಕಾಗಿ ಸಾಂವಿಧಾನಿಕ ವ್ಯವಸ್ಥೆಯನ್ನು ಮಾಡಬೇಕಾದ ಅಗತ್ಯವಿದೆ. ಗಂಗೆಯ ಅಸ್ತಿತ್ವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂವಿಧಾನದಲ್ಲಿ ಗಂಗಾ ನದಿಯನ್ನು ಒಬ್ಬ ವ್ಯಕ್ತಿಯ ರೂಪದಲ್ಲಿ ಸ್ಥಾನ ಕಲ್ಪಿಸಬೇಕಾಗಿದೆ ಎಂಬುದು ಗಂಗಾ ಸಂಸತ್‌ನ ಆಗ್ರಹ.
ಗಯಾನಾ, ನೆದರ್ಲೆಂಡ್, ಫ್ರಾನ್ಸ್ ಸೇರಿದಂತೆ ಜಗತ್ತಿನ ಅನೇಕ ದೇಶಗಳು ತಮ್ಮ ಪ್ರಮುಖ ಹಾಗೂ ಮಹತ್ವದ ನದಿಗಳಿಗೆ ವ್ಯಕ್ತಿಯ ಸ್ಥಾನವನ್ನು ಕಲ್ಪಿಸಿವೆ. ಗಂಗಾ ನದಿಗೆ ಸಂವಿಧಾನದಲ್ಲಿ ವ್ಯಕ್ತಿಯ ಮಾನ್ಯತೆ ದೊರೆತರೆ, ನದಿ ಮಾಲಿನ್ಯ ತಡೆಯುವಲ್ಲಿ ಹೆಚ್ಚಿನ ವೇಗ ದೊರೆಯಲಿದೆ. ಮಾಲಿನ್ಯಕ್ಕೆ ಸಂಬಂಧಿಸಿದ ಕೇಸ್‌ಗಳು ಸಿವಿಲ್ ನ್ಯಾಯಾಲಯದಲ್ಲಿ ನಡೆಯುತ್ತವೆ. ಆದರೆ, ವ್ಯಕ್ತಿಯ ಗೌರವ ದೊರೆತರೆ ಇಂಥ ಕೇಸ್‌ಗಳಲ್ಲಿ ಕೆಲವನ್ನು ಕ್ರಿಮಿನಲ್ ಕೋರ್ಟ್‌ನಲ್ಲಿ ವಿಚಾರಣೆ ನಡೆಸಲು ಸಾಧ್ಯವಾಗುತ್ತದೆ. ನೇರವಾಗಿ ಮಲ ಮೂತ್ರಗಳು ನದಿಗೆ ಸೇರುತ್ತಿದ್ದರೆ ನಗರಾಯುಕ್ತರ ವಿರುದ್ಧ ಕ್ರಿಮಿನಲ್ ಕೇಸ್‌ಗಳನ್ನು ದಾಖಲಿಸಬಹುದು. ಆದ್ದರಿಂದ ಗಂಗೆಗೆ ನಮ್ಮ ಸಂವಿಧಾನದಲ್ಲಿ ವ್ಯಕ್ತಿಯ ಮಾನ್ಯತೆ ನೀಡಬೇಕು ಎಂದು ಗಂಗಾ ಸಂಸತ್ ಒತ್ತಾಯಿಸುತ್ತದೆ.
ನದಿ ಮಾಲಿನ್ಯದ ವಿರುದ್ಧ ಗದ್ದಲ ಎಬ್ಬಿಸಿದ್ದರಿಂದ ಸರ್ಕಾರದ ಆತ್ಮ ಕೊನೆಗೂ ಜಾಗೃತ(?)ಗೊಂಡ ಹಿನ್ನೆಲೆಯಲ್ಲಿ 'ಮಲ ಜಲ ನಿರ್ವಹಣಾ ಘಟಕ(ಎಸ್‌ಟಿಪಿ)' ಆರಂಭಿಸಲಾಯಿತು. ಆಧುನಿಕ ತಂತ್ರಜ್ಞಾನದ ಈ ಘಟಕ ವಿದ್ಯುತ್‌ನಿಂದ ಕೆಲಸ ಮಾಡುತ್ತದೆ. ಒಂದು ವೇಳೆ ವಿದ್ಯುತ್ ಇಲ್ಲದಿದ್ದರೆ ಡೀಸೆಲ್ ಬಳಸಬೇಕಾಗುತ್ತದೆ. ಈ ಹೊಸ ತಂತ್ರಜ್ಞಾನದ ಸದುದ್ದೇಶಕ್ಕಿಂತ ದುರುದ್ದೇಶವೇ ಹೆಚ್ಚು ಎನ್ನುತ್ತಾರೆ ರಾಜೇಂದ್ರ ಸಿಂಗ್.
ಗಂಗಾ ನದಿಯ ದಡದಲ್ಲಿ ಈ 27 ವರ್ಷಗಳಲ್ಲಿ ಶೇ.40ಕ್ಕೂ ಹೆಚ್ಚು ಎಸ್‌ಟಿಪಿ ಘಟಕಗಳನ್ನು ಹಾಕಲಾಗಿದೆ. ಆದರೆ ಅವ್ಯಾವೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಅಷ್ಟೇ ಸತ್ಯ. ವಿದ್ಯುತ್ ಹಾಗೂ ಡೀಸೆಲ್ ಭಾರಿ ತುಟ್ಟಿ. ಹಾಗಾಗಿ ಗಂಗೆಯ ಸಲುವಾಗಿ ಇಂಥ ನಗರಗಳಲ್ಲಿ ಯಾವುದೇ ಮಾನವೀಯ ಕಳಕಳಿ ಎಂಬುದೇ ಇಲ್ಲ. ಈ ಘಟಕಗಳಿಂದ ಸೋರಿಕೆಯಾದ ಡೀಸೆಲ್‌ನಿಂದಲೂ ಗಂಗಾ ನದಿ ಮಲಿನವಾಗುತ್ತ ಸಾಗುತ್ತಿದೆ ಎಂಬ ಆಕ್ಷೇಪ ರಾಜೇಂದ್ರ ಭಯ್ಯಾ ಅವರದ್ದು. ಕೆಲವು ವರ್ಷಗಳ ಹಿಂದೆ ಬನಾರಸ್‌ಗೆ ಬರುವ ಯಾತ್ರಿಗಳು ದೋಣಿಯ ಸಹಾಯದಿಂದ ನದಿಯನ್ನು ದಾಟಿ ತಮ್ಮ ಶೌಚವನ್ನು ಮಾಡಿಕೊಂಡು ಬರುತ್ತಿದ್ದರು. ಆದರೆ ಇದೀಗ ಅಂಥ ಪರಿಸ್ಥಿತಿಯಿಲ್ಲ. ನಗರೀಕರಣದ ದುರಾಸೆಗೆ ಗಂಗೆಯ 'ಗಂಗತ್ವ' ಬಲಿಯಾಗುತ್ತಾ ಸಾಗುತ್ತಿದೆ. ಈ ಮೊದಲು ಗಂಗೆಯಲ್ಲಿ ಮಿಂದೇಳುವ ಮುಂಚೆಯೇ ಭಕ್ತರು ತಮ್ಮ ಮನೆಯಲ್ಲಿ ಸ್ನಾನ ಮಾಡಿಕೊಂಡು ಬರುತ್ತಿದ್ದರು. ಅದರಿಂದ ಪುಣ್ಯ ಬರುತ್ತದೆ ಎಂಬುದು ಅದಕ್ಕೆ ಕಾರಣ. ಆದರೆ, ಇದೀಗ ನದಿಯಲ್ಲಿ ಮುಳುಗಿದರೆ ಹೊಲಸು ಮತ್ತು ಪಾಪ ಎರಡೂ ಬರುತ್ತದೆ.
ಮಲ ಜಲ ನಿರ್ವಹಣಾ ಘಟಕದಿಂದ ಹೊರಬರುವ ಸ್ವಲ್ಪವೇ ಸ್ವಲ ಹೊಲಸು ನೀರು ಇಡೀ ನದಿಯನ್ನು ಮಲಿನ ಮಾಡಬಹುದು. ಹೇಗೆ ಸ್ವಲ್ಪವೇ ಹುಳಿಯಿಂದ ಹಾಲು ಮೊಸರಾಗುತ್ತದೆಯೋ ಹಾಗೆ ಎಸ್‌ಟಿಪಿಗಳಿಂದ ಹೊರ ಬರುವ ಹೊಲಸು ನೀರು ಪೂರ್ತಿಯಾಗಿ ಗಂಗಾ ನದಿಯನ್ನು ಮಾಲಿನ್ಯಕ್ಕೀಡು ಮಾಡುತ್ತಿದೆ. ದಂಡೆ ಮಾಲಿನ್ಯವಾಗುತ್ತಿರುವುದರಿಂದ ನದಿ ಮಾಲಿನ್ಯರಹಿತವಾಗಿರಲು ಸಾಧ್ಯವಿಲ್ಲ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಗಂಗಾ ಸಂಸತ್ ನದಿಯ ತಟದಲ್ಲಿರುವ ಎಸ್‌ಟಿಪಿ ಘಟಕಗಳ ಸ್ಥಾಪನೆ ಮತ್ತು ಅವುಗಳ ನಿರ್ವಹಣೆಯನ್ನು ಜನರ ಕೈಗೆ ಕೊಡಬೇಕು ಎಂದು ಒತ್ತಾಯಿಸುತ್ತಿದೆ.
ಎಷ್ಟು ಸಾಧ್ಯವೋ ಅಷ್ಟು ನೀರನ್ನು ಸ್ವಚ್ಛಗೊಳಿಸಿ ಮುಖ್ಯ ಕೃಷಿ ಭೂಮಿಗೆ ಅಥವಾ ಉದ್ಯಾನಕೃಷಿಗೆ ಅಂಥ ನೀರನ್ನು ಬಳಸಿಕೊಳ್ಳುವಂತಾಗಬೇಕೆಂಬುದು ರಾಜೇಂದ್ರ ಭಯ್ಯಾ ಅಪೇಕ್ಷೆ. ಅಲ್ಲದೆ, ನದಿಯ ತಟದಲ್ಲಿರುವ ನಗರಗಳಲ್ಲಿ ಜನರೇ ಜಲ ಲೆಕ್ಕ ಮಾಡುವಂತಾಗಬೇಕು ಎನ್ನುತ್ತಾರೆ ಅವರು. ಆಧುನಿಕ ಕೃಷಿಯಿಂದಾಗಿ ಗಂಗೆಯ ನಿರಂತರ ಮತ್ತು ಸ್ವಚ್ಛತೆ ಹಾಳಾಗಿದೆ. ಆಧುನಿಕ ಕೃಷಿಗೆ ಬಳಸುವ ಅತಿ ನೀರು ಮತ್ತು ಕೀಟನಾಶಕಗಳಿಂದಾಗಿ ನದಿಯ ನಿರ್ಮಲತೆ ನಶಿಸಿದೆ. ಈ ಹಿನ್ನೆಲೆಯ ಗಂಗಾ ಸಂಸತ್ ಸಾವಯವ ಕೃಷಿಯನ್ನು ಪ್ರಚುರಪಡಿಸಬೇಕೆಂದು ಒತ್ತಾಯಿಸುತ್ತದೆ.
ಇಷ್ಟೇ ಅಲ್ಲದೆ, ಗಂಗತ್ವ ಸಂಸ್ಕಾರವನ್ನು ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಗಂಗಾ ಸಂಸತ್ ಸಂಕಲ್ಪ ಮಾಡಿದೆ. ಶಾಲಾ- ಕಾಲೇಜುಗಳಲ್ಲಿ ಗಂಗಾ ನದಿ ಕುರಿತು ಪಠ್ಯಗಳನ್ನು ಅಳವಡಿಸಬೇಕು. ವಿಶ್ವವಿದ್ಯಾಲಯಗಳಲ್ಲೂ ಇದು ಜಾರಿಯಾಗಬೇಕು. ಗಂಗಾ ನದಿಗೆ ಸಂಬಂಧಿಸಿದಂತೆ ಸಂಶೋಧನೆಗಳೂ ನಡೆಯಬೇಕು.
ಗಂಗಾ ನದಿಯಿಂದಲೇ ಭವಿಷ್ಯವಿದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ. ಚಿಂತೆಯ ವಿಷಯ ಎಂದರೆ ಈಗಿನ ಬೆಳವಣಿಗೆ ನೋಡಿದರೆ ಗಂಗೆಯ ಭವಿಷ್ಯವೂ ಮಂಕಾಗಿದೆ. ಆದರೆ, ಗಂಗಾ ಸಂಸತ್ ಅದಕ್ಕೆ ಆಸ್ಪದ ನೀಡುವುದಿಲ್ಲ. ಗಂಗೆಯ ಆಸ್ಥೆ, ನಿರ್ಮಲತೆ, ನಿರಂತರತೆಯ ರಕ್ಷಣೆ ಮತ್ತು ಅದರ ಭವಿಷ್ಯವನ್ನು ಹಾಳು ಮಾಡುವುದನ್ನು ತಡೆಯಲು ಗಂಗಾ ಸಂಸತ್ ಸಿದ್ಧವಾಗಿದೆ. ಅದರೊಂದಿಗೇ ಕೈ ಜೊಡಿಸುವ ಬೃಹತ್ ಪಡೆ ಸಜ್ಜಾಗಬೇಕಿದೆ.
ವರ್ಷದ ಹಿಂದೆ ಉಪವಾಸ ಕೂತ ಅಣ್ಣ ಹಜಾರೆ, ಇಂದು ಮಾಧ್ಯಮಗಳಲ್ಲಿ ಒನ್‌ಲೈನ್ ಸುದ್ದಿ! ಕುಂಭಮೇಳದ ಲಕ್ಷ ಲಕ್ಷ ಸಾಧುಗಳೆಡೆ ಕ್ಯಾಮೆರಾ ಇಡುವ ಮೀಡಿಯಾಗಳು, ಪಕ್ಕದ ವಾರಾಣಸಿಯಲ್ಲಿ ಗಂಗೆಗಾಗಿ ಸದ್ದಿಲ್ಲದೆ ನಿರಶನ ಕೂತ ಜ್ಞಾನಸ್ವರೂಪ ಸ್ವಾನಂದ ಸ್ವಾಮೀಜಿಯವರನ್ನು ಗಮನಿಸಿಲ್ಲ. ಗಂಗೆ ಕೇವಲ ನಿರಶನ ಕುಳಿತ ಸ್ವಾಮೀಜಿಗಷ್ಟೇ ಅಲ್ಲ. ಸಂಸತ್ ರಚಿಸಿ ಆಂದೋಲನಕ್ಕಿಳಿದ ರಾಜೇಂದ್ರ ಭಯ್ಯಾಗಷ್ಟೇ ಅಲ್ಲ. ಆಕೆ ನಮ್ಮೊಳಗಿನ ಪ್ರವಾಹ, ದೇಶದ ಪ್ರತಿಯೊಬ್ಬರ ಉಸಿರು. ನಮ್ಮೆಲ್ಲರ ಸ್ವಾಭಿಮಾನ, ಸಂಸ್ಕೃತಿ, ಸಂಪತ್ತು. ಅದೇ ಕೆಡುತ್ತಿದೆ ಎಂದಮೇಲೆ ಈ ದೇಹದಲ್ಲಿ ಜೀವ ಹೊತ್ತ ನಾವು ತೆಪ್ಪಗಿರಲು ಸಾಧ್ಯವೇ? ಬೆಂಬಲಿಸಿ ಬನ್ನಿ ಗಂಗಾ ತಪಸ್ಸನ್ನು. ನಿಮ್ಮ ಬೆಂಬಲ ದಾಖಲಿಸಲು  rajendra@tarunbharatsangh.org, ಹಾಗೂ  gangaseva@gmail.com ಗೆ ಮಿಂಚಂಚೆ ಕಳುಹಿಸಲು ಮರೆಯದಿರಿ.

-ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.