ಸಿಂಹಗಳೊಂದಿಗೆ 'ಸಹಜ ಪ್ರೀತಿ'ಗೆ ಬಿದ್ದವನ ಬೆರಗು!
ಇದು ಟಿವಿ ಚಾನೆಲ್ ಸೇರಿದ್ದರ ಪ್ರಭಾವವೋ ಅಥವಾ ಸಹಜ ಸೆಳೆತವೋ ಅಥವಾ...
ಇದು ಟಿವಿ ಚಾನೆಲ್ ಸೇರಿದ್ದರ ಪ್ರಭಾವವೋ ಅಥವಾ ಸಹಜ ಸೆಳೆತವೋ ಅಥವಾ ಎರಡೂ ಇರಬಹುದು, ಇತ್ತೀಚೆಗೆ ಸಿನಿಮಾ ಮತ್ತು ಡಾಕ್ಯುಮೆಂಟರಿಗಳನ್ನು ಹೆಚ್ಚಾಗಿ ನೋಡಲಾರಂಭಿಸಿದ್ದೇನೆ. ಒಂದು ಪುಸ್ತಕ ಓದಿದ ಸುಖ, ಸಮಾಧಾನ ಸಿಗುತ್ತದೆ. ಪುಸ್ತಕ ಓದಲು ಕನಿಷ್ಟ ಒಂದೆರಡು ದಿನಗಳಾದರೂ ಬೇಕು. ಸಿನಿಮಾ, ಡಾಕ್ಯುಮೆಂಟರಿಗಳು ಹಾಗಲ್ಲ, ಒಂದೆರಡು ತಾಸಿನಲ್ಲಿ ನೋಡಿ ಮುಗಿಸಬಹುದು.
ಆದರೆ ಪುಸ್ತಕ ಓದಿನ ರುಚಿಯೇ ಬೇರೆ. ಈ ಮಾತನ್ನು ಸಿನಿಮಾ, ಡಾಕ್ಯುಮೆಂಟರಿಗಳಿಗೂ ಅನ್ವಯಿಸಬಹುದು. ನ್ಯಾಶನಲ್ ಜಿಯಗ್ರಾಫಿಕ್, ಬಿಬಿಸಿ, ಡಿಸ್ಕವರಿ ಮುಂತಾದ ಸಂಸ್ಥೆಗಳು ಕೆಲವು ಅದ್ಭುತವೆನಿಸುವ ಡಾಕ್ಯುಮೆಂಟರಿಗಳನ್ನು ಹೊರತಂದಿವೆ. ವಿಮಾನ ಅಪಘಾತಗಳ ಬಗ್ಗೆ ನ್ಯಾಶನಲ್ ಜಿಯಾಗ್ರಾಫಿಕ್ ನಿರ್ಮಿಸಿರುವ Air Crash Investigationಎಂಬ ಡಾಕ್ಯುಮೆಂಟರಿಯನ್ನು ನೋಡಿದರೆ ಎಂಥವನಿಗಾದರೂ ಎದೆ ಝಲ್ ಎಂದೆನಿಸದೇ ಇರದು.
ವಿಮಾನಯಾನ ಇತಿಹಾಸದಲ್ಲಿ ಸಂಭವಿಸಿದ ಹತ್ತಾರು ದುರಂತಗಳು ಘಟಿಸಿದ ರೀತಿ, ಅದಕ್ಕೆ ಕಾರಣವಾದ ಅಂಶಗಳು, ತನಿಖೆಯಿಂದ ದುರಂತಗಳಿಗೆ ಕಾರಣವಾದ ಸಂಗತಿಗಳ ಬಗ್ಗೆ ಈ ಡಾಕ್ಯುಮೆಂಟರಿಯಲ್ಲಿ ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಲಾಗಿದೆ.
ಇದನ್ನು ನೋಡಿದವರಿಗೆ ವಿಮಾನ ಏರುವಾಗ, ವಿಮಾನದಲ್ಲಿ ಪ್ರಯಾಣಿಸುವಾಗ ಒಂದು ಕ್ಷಣವಾದರೂ ಎದೆ ಡುಕಿಡುಕಿ ಎನ್ನದೇ ಹೋಗುವುದಿಲ್ಲ. ಈ ಡಾಕ್ಯುಮೆಂಟರಿ ನೋಡಿದ ಒಂದು ವರ್ಷದವರೆಗೆ ನಾನು ವಿಮಾನ ಪ್ರಯಾಣವನ್ನು avoidಮಾಡುತ್ತಿದ್ದೆ. ಸುಮಾರು ನಲವತ್ತು ದೇಶ ಸುತ್ತಿ ಬಂದವನಿಗೆ ವಿಮಾನ ಪ್ರಯಾಣ ಅಂದರೆ ಸಣ್ಣ ನಡುಕ ಹುಟ್ಟಿಸುತ್ತಿತ್ತು. ಅದಾದ ಬಳಿಕ ನನ್ನ ಪೈಲಟ್ ಸ್ನೇಹಿತರೊಬ್ಬರು ನನಗೆ Safe Air Travel ಎಂಬ ಡಾಕ್ಯುಮೆಂಟರಿಯನ್ನು ಕೊಟ್ಟರು. ವಿಮಾನ ಪ್ರಯಾಣ ಎಷ್ಟು ಸುರಕ್ಷಿತವೆಂಬುದು ಮನದಟ್ಟಾಗಿದ್ದು ಆವಾಗಲೇ. ಬೇರೆಲ್ಲ ಪ್ರಯಾಣ ವಿಧಾನಕ್ಕಿಂತ ವಿಮಾನ ಪ್ರಯಾಣವೇ ಹೇಗೆ ಅತ್ಯಂತ ಸುರಕ್ಷಿತ ಎಂಬುದನ್ನು ಈ ಚಿತ್ರ ಪರಿಣಾಮಕಾರಿಯಾಗಿ ಹೇಳುತ್ತದೆ.
ಅದಿರಲಿ. ನಾನು ಇತ್ತೀಚೆಗೆ ನೋಡಿದ ಒಂದು ಡಾಕ್ಯುಮೆಂಟರಿ ಮತ್ತು ಪುಸ್ತಕದ ಬಗ್ಗೆ ನಿಮಗೆ ಹೇಳಬೇಕು. ಮೊದಲು ಪುಸ್ತಕ ಓದಿದೆ, ಆನಂತರ ತೀರಾ ಆಕಸ್ಮಿಕ ಎಂಬಂತೆ ಅದೇ ವಿಷಯದ ಬಗೆಗಿನ ಡಾಕ್ಯುಮೆಂಟರಿ ಸಿಕ್ಕಿತು. ಪುಸ್ತಕದ ಹೆಸರು - Part of the Pride: My Life among the Big Cats of Africaಮತ್ತು ಡಾಕ್ಯುಮೆಂಟರಿ ಹೆಸರು - Dangerous Companions.
ನೀವು ಕೆವಿನ್ ರಿಚರ್ಡ್ಸ್‌ನ ಹೆಸರನ್ನು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ನನಗಂತೂ ಇಂಥ ಒಂದು ಶರೀರ ಭೂಮಿಯ ಮೇಲೆ ಇದೆ ಎಂಬುದು ಗೊತ್ತಿರಲಿಲ್ಲ ಮತ್ತು ಅದನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಈ ಪುಸ್ತಕ ಮತ್ತು ಡಾಕ್ಯುಮೆಂಟರಿಯ ನಾಯಕ ಅವನೇ. ಈ ಪುಸ್ತಕವನ್ನು ಓದಿ, ಡಾಕ್ಯುಮೆಂಟರಿಯನ್ನು ನೋಡಿ ಮುಗಿಸುವ ಹೊತ್ತಿಗೆ ಕೆವಿನ್ ತನ್ನ ನಾಯಕನೂ ಹೌದು ಎಂಬ ಅಭಿಮಾನ, ಪ್ರೀತಿ ಯಾವನಿಗಾದರೂ ಮೂಡದಿರದು. ಅಂಥ ಭಲೇ ಮನುಷ್ಯನೀತ. 'ನೋಡಿಯೇ ನಂಬಬೇಕು' ಎಂಬ ಮಾತಿನಲ್ಲಿ ನಿಮಗೆ ನಂಬಿಕೆ ಇದ್ದರೆ ಅವನ ಸಾಹಸವನ್ನು ನೀವು ನೋಡಬೇಕು.
ಕೆವಿನ್ ಬಗ್ಗೆ ನಿಮಗೆ ಹೇಳಬೇಕು ಅಂದ್ರೆ ಈತ ಮೂಲತಃ ಒಬ್ಬ ಸಾಮಾನ್ಯ ವ್ಯಕ್ತಿ. ಮನುಷ್ಯರನ್ನು ಮತ್ತು ಪ್ರಾಣಿಗಳನ್ನು ಅತಿಯಾಗಿ ಪ್ರೀತಿಸುವವ. ಆತನಿಗೆ ಜಗಳ, ರಗಳೆ ಗೊತ್ತಿಲ್ಲ. ಆತನಿಗೆ ಜನರನ್ನು ಮಾತಾಡಿಸಲು ಪರಿಚಯವೇ ಇರಬೇಕೆಂದಿಲ್ಲ. ಎಂಥವರ ಜತೆ ಬೇಕಾದರೂ ಸ್ನೇಹ ಕುದುರಿಸಬಲ್ಲ. ಅವರ ಮನೆಗೆ ಹೋಗಿ ಹರಟೆ ಹೊಡೆದು ಬರಬಲ್ಲ. ಎರಡೇ ನಿಮಿಷಗಳಲ್ಲಿ ಇಪ್ಪತ್ತು ವರ್ಷಗಳ ಸ್ನೇಹವನ್ನು ಹಾಸಿ, ಪ್ರೀತಿಯ ಬೆಚ್ಚನೆಯನ್ನು ಹೊದಿಸಬಲ್ಲ.
ಕೆವಿನ್‌ನಲ್ಲಿ ಅದೇನೋ ವಿಚಿತ್ರ ಆಕರ್ಷಣೆ. 'ಕೆವಿನ್ ಹತ್ತಿರ ಬಂದರೆ ಸಾಕು, ತನ್ನಷ್ಟಕ್ಕೆ ತಾನೆ ಹೊಸ ಪರಿಸರ ಅರಳುತ್ತದೆ. ಆತ ಎಂಥ ನೀರಸ ವಾತಾವರಣದಲ್ಲೂ ನಗೆ, ಚೈತನ್ಯ ತುಂಬಬಲ್ಲ. ಅವನಿದ್ದಾನೆ ಅಂದ್ರೆ ಅಲ್ಲಿ ಚಲನಶೀಲತೆ, ಕೇಕೆ, ನಗು, ತಮಾಷೆ, ತುಂಟಾಟ, ಸಡಗರ, ಲವಲವಿಕೆ, ಹುರುಪು, ಉಲ್ಲಾಸ ಇರಲೇಬೇಕು. ಹತ್ತಾರು ಜನರಿದ್ದರೂ ಎಲ್ಲರೂ ಮುಖ ಗಂಟು ಹಾಕಿಕೊಂಡು ಕುಳಿತಿದ್ದಾರೆನ್ನಿ. ಅಲ್ಲಿಗೆ ಕೆವಿನ್ ಬಂದರೆ ಮಿಂಚು ಬಂದಂತೆ.' ಹಾಗಂತ ಅವನ ಸ್ನೇಹಿತರು ಮಾತಾಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲ, ಆತ ಹಾಗೆಯೇ ಇದ್ದ.
ಸೋಜಿಗದ ಸಂಗತಿಯೆಂದರೆ, ಕೆವಿನ್ ಬರೀ ಮನುಷ್ಯರ ಜತೆ ಮಾತ್ರ ಅಲ್ಲ, ಕಾಡುಪ್ರಾಣಿಗಳ ಜತೆಗೂ ಹಾಗೆಯೇ ಇದ್ದ. ಸಿಂಹ, ಪ್ರಾಣಿ, ಚಿರತೆಗಳ ಜತೆ ಕೆವಿನ್ ವರ್ತಿಸುವುದನ್ನು ನೋಡಿದರೆ, ಇವರು ಪೂರ್ವಜನ್ಮದ ಸ್ನೇಹಿತರಿರಬೇಕು ಎಂದು ಯಾರಿಗಾದರೂ ಅನಿಸುತ್ತಿತ್ತು. ಹಾಗಂತ ಆ ಪ್ರಾಣಿಗಳು ತರಬೇತಿ ಪಡೆದ ಅಥವಾ ಪಳಗಿಸಿದ ಪ್ರಾಣಿಗಳೇನಲ್ಲ. ಕಾಡಿನಲ್ಲಿರುವ ಸಿಂಹ, ಹುಲಿ, ಚಿರತೆ ಮುಂತಾದ ಪ್ರಾಣಿಗಳ ಜತೆ ಅರೆಕ್ಷಣದಲ್ಲಿ ಸಖ್ಯ ಬೆಳೆಸಿ, ಅವುಗಳೊಂದಿಗೆ ಚೆಲ್ಲಾಟ ಶುರುವಿಟ್ಟುಕೊಳ್ಳುತ್ತಿದ್ದ.
ಆ ಪ್ರಾಣಿಗಳಿಗೋ ಇವನ ವಾಸನೆ ಮೂಗಿಗೆ ಹೊಡೆದರೆ ಸಾಕು, ಪ್ರೇಯಸಿ ಹಿಂದೆ ಹೋಗುವ ಪಡ್ಡೆ ಪ್ರಿಯಕರನಂತೆ ಓಡೋಡಿ ಬರುತ್ತವೆ. ಕೆವಿನ್ ಅವುಗಳ ಜತೆ ಮಾತಾಡುತ್ತಾನೆ, ಅಪ್ಪಿ ಮುದ್ದಾಡುತ್ತಾನೆ, ತಬ್ಬಿ ಹೊರಳಾಡುತ್ತಾನೆ, ನಾಲ್ಕೈದು ಸಿಂಹಗಳು ಅವನ ಮೇಲೆ ಒಂದೇ ಸಮನೆ ಮುಗಿ ಬೀಳುತ್ತವೆ, ಆತ ಸ್ವಲ್ಪವೂ ವಿಚಲಿತನಾಗದೇ ಅವುಗಳ ಜತೆ ಉರುಳುತ್ತಾನೆ, ಸಿಂಹ ಜೋರಾಗಿ ತನ್ನ ಕಾಲಿನಿಂದ ಅವನ ತಲೆಗೆ ಹೊಡೆಯುತ್ತದೆ, ಅವನಿಗೆ ಗೊತ್ತು ಅದು ಮೂಗೇಟು ಅಂತ, ಆತ ಆ ಏಟಿವಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲ. ಅದೇ ಸಿಂಹಗಳು ಅವನ ಮುಖವನ್ನು ನೆಕ್ಕಲಾರಂಭಿಸುತ್ತವೆ, ಆತ ಸಿಂಹಗಳನ್ನು ಒಂದೇ ತೆಕ್ಕೆಗೆ ಆಲಂಗಿಸಿಕೊಂಡು ನೆಲದ ಮೇಲೆ ಹೊರಳಾಡುತ್ತಾನೆ, ಅವುಗಳ ಜತೆ ತಾಸುಗಟ್ಟಲೆ ಆಟವಾಡಿ ಸುಸ್ತಾಗಿ ಸಿಂಹಗಳ ಜತೆಯಲ್ಲಿಯೇ ನಿದ್ದೆ ಹೋಗುತ್ತಾನೆ. ಅವೂ ಸಹ ಅವನನ್ನು ತಬ್ಬಿಕೊಂಡು ನಿದ್ದೆಹೋಗುತ್ತವೆ.
ಹಾಗಂತ ಇವು ಸರ್ಕಸ್ ಸಿಂಹಗಳೂ ಅಲ್ಲ, ಕೆವಿನ್ ರಿಂಗ್ ಮಾಸ್ಟರ್ ಸಹ ಅಲ್ಲ. ಅವು ಯಾರೋ ಇವನಾರೋ ಆ ಸಿಂಹಗಳಿಗೆ ಇವನ್ಯಾರೆಂಬುದು ಗೊತ್ತಿಲ್ಲ. ಇವನೂ ಅಷ್ಟೇ, ಅವುಗಳನ್ನು ಪಳಗಿಸಿದವನೂ ಅಲ್ಲ. ಅದರೆ ಕೆವಿನ್‌ನಲ್ಲಿ ಅದೆಂಥ ಆಕರ್ಷಣೆ ಇದೆ ಎಂದರೆ ಸಿಂಹ, ಚಿರತೆ, ಹುಲಿಗಳು ಇವನನ್ನು ಕಂಡರೆ ಸಾಕು ತನ್ನ ಕೊರಳ ಗೆಳೆಯನನ್ನು ಕಂಡವರಂತೆ ಮುದ್ದಿಸುತ್ತವೆ.
ಒಮ್ಮೆ ಕೆವಿನ್ ಕಾಡಿನಲ್ಲಿ ಒಬ್ಬನೇ ನಡೆಯುತ್ತಾ ಹೋಗುತ್ತಿರುತ್ತಾನೆ. ಏಳೆಂಟು ಸಿಂಹಗಳು ಎದುರಾಗುತ್ತವೆ. ಕೆವಿನ್ ಅವುಗಳನ್ನು ಕಂಡ ಕೂಡಲೇ, 'ಹಾಯ್ ಫ್ರೆಂಡ್ಸ್, ಎಲ್ಲಿಗೆ ಹೋಗ್ತಾ ಇದ್ದೀರಾ? ನಾನೂ ನಿಮ್ಮ ಜತೆ ಬರಲಾ? ಎಂದು ಅವುಗಳ ಕತ್ತನ್ನು ನೇವರಿಸುತ್ತಾನೆ, ಬೆನ್ನಿಗೆ ಶಹಬಾಸ್ ಎಂದು ಹೊಡೆಯುತ್ತಾನೆ. ಸಿಂಹವೊಂದು ಏಕಾಏಕಿ ಎರಡೂ ಕಾಲುಗಳನ್ನೆತ್ತಿ ಅವನ ಹೆಗಲ ಮೇಲಿಡುತ್ತದೆ, ಆತ ಅದರ ಹೊಟ್ಟೆಯನ್ನು ಹಿಡಿದು ತಬ್ಬಿಕೊಂಡು ನೆಲಕ್ಕೆ ಬೀಳುತ್ತಾನೆ. ಶುರುವಾಯ್ತು ಚೆಲ್ಲಾಟ!
ಬೀದಿ ನಾಯಿಯಿರಬಹುದು, ಸಾಕಿದ ನಾಯಿಯಿರಬಹುದು, ಹೋಗ್ಲಿ ಜಿರಳೆಯನ್ನು ಕಂಡರೆ ಕಿಟಾರನೆ ಕಿರುಚುವವರು ಕೆವಿನ್ ಸಿಂಹಗಳ ಸರಸವನ್ನು ನೋಡಬೇಕು. ಇದು ಪ್ರಾಣಿ-ಮನುಷ್ಯರ ಸಂಬಂಧಕ್ಕೆ ಬರೆದ ಹೊಸ ಭಾಷ್ಯವಾ? ಹುಚ್ಚು ಸಾಹಸವಾ? ಮೃತ್ಯುವಿಗೆ ಬರೆದುಕೊಟ್ಟ ಬೇಷರತ್ ಮುಚ್ಚಳಿಕೆಯಾ? ಹುಚ್ಚೇರಿದ ತರುಣನೊಬ್ಬನ ತಿಕ್ಕಲು ಸಾಹಸವಾ? ಪ್ರತಿ ಬಾರಿಯೂ ಸಾವನ್ನು ಗೆಲ್ಲುತ್ತೇನೆಂಬ ಕನವರಿಕೆಯಾ? ಮನುಷ್ಯನಿಗಿಂತ ಮೂಕ ಕಾಡು ಪ್ರಾಣಿಗಳು ಮೇಲು ಎಂಬುದನ್ನು ಸಾಬೀತುಪಡಿಸುವ ಹುನ್ನಾರವಾ?
ಉಹುಂ...ಗೊತ್ತಾಗುವುದಿಲ್ಲ. ಕನಸಿನಲ್ಲಿ ಹುಲಿ, ಸಿಂಹವನ್ನು ಕಂಡು, ಅವುಗಳ ಘರ್ಜನೆಯನ್ನು ಕೇಳಿಸಿಕೊಂಡು ಚಡ್ಡಿ ಒದ್ದೆ ಮಾಡಿಕೊಳ್ಳುವವರಿಗೆ ಕೆವಿನ್‌ನ ಈ ಸಹಜ ವರ್ತನೆ ಕೂಡ ಮಹಾಸಾಹಸವಾಗಿ ಗೋಚರವಾಗುತ್ತದೆ. ಕೆವಿನ್ ತನ್ನನ್ನು ಒಬ್ಬ ಸಾಮಾನ್ಯ ಪ್ರಾಣಿಪ್ರೇಮಿ ಎಂದು ಕರೆದುಕೊಳ್ಳುತ್ತಾನೆ. ಕೆವಿನ್ ಯಾವಾಗ ಸಿಂಹಗಳ ಜತೆ ಚೆಲ್ಲಾಟವಾಡುವ ದೃಶ್ಯಗಳು ಇಂಟರ್‌ನೆಟ್‌ನಲ್ಲಿ ಹರಿದಾಡಲು ಆರಂಭಿಸಿತೋ, ಜನ ಆವಾಕ್ಕಾಗಿ ಅದನ್ನು ವೀಕ್ಷಿಸಿದರೋ, ನೋಡಿ ನಿಬ್ಬೆರಗಾದರೋ, ಅಂದಿನಿಂದ ಅವನನ್ನು 'ಲಯನ್ ವಿಸ್ಪರರ್' ಎಂದು ಕರೆಯಲಾರಂಭಿಸಿದರು. (ಕನ್ನಡದಲ್ಲೊಂದು 'ಲಯನ್ ಗಜಪತಿ' ಎಂಬ ಸಿನೆಮಾ ಬಂದಿತ್ತು. ಕೆವಿನ್‌ಗೆ ಆ ಹೆಸರು ಸಮರ್ಪಕವಾದೀತು.) ಇನ್ನು ಕೆಲವರು ಆತನನ್ನು Animal terroristಎಂದು ಕರೆಯುತ್ತಾರೆ. ಆದರೆ ಆತನಿಗೆ ಇವುಗಳಲ್ಲಿ ನಂಬಿಕೆ ಇಲ್ಲ. ಕಾರಣ ಆತ ಶಾಸ್ತ್ರೀಯವಾಗಿ ಪ್ರಾಣಿಗಳ ವರ್ತನೆ, ನಡವಳಿಕೆಯನ್ನು ಅಭ್ಯಸಿಸಿದವನಲ್ಲ. ಅದನ್ನು ವೃತ್ತಿಯಾಗಿ ಮಾಡಿಕೊಳ್ಳಬೇಕೆಂದು ಬಯಸಿದವನೂ ಅಲ್ಲ. ಮನುಷ್ಯರ ಜತೆಗೆ ಒಡನಾಡುವುದು ಎಷ್ಟು ಸಹಜವೋ, ಅಷ್ಟೇ ಸಹಜವಾಗಿ ಪ್ರಾಣಿಗಳ ಜತೆ, ಕಾಡು ಪ್ರಾಣಿಗಳ ಜತೆ ಏಕೆ ಒಡನಾಡಬಾರದು ಎಂಬ ಸರಳ ಪ್ರಶ್ನೆ ಆತನನ್ನು ಇಲ್ಲಿ ತನಕ ಕರೆದುಕೊಂಡು ಬಂದಿದೆ. ಕಾಡು ಪ್ರಾಣಿಗಳ ಜತೆ ಹೀಗೆಯೇ ವ್ಯವಹರಿಸಬೇಕು, ಸಿಂಹ, ಹುಲಿಗಳೊಂದಿಗೆ ಹೀಗೆಯೇ ವರ್ತಿಸಬೇಕು ಎಂಬ ಸ್ಥಾಪಿತ ನಿಯಮಗಳನ್ನೆಲ್ಲ ಮುರಿದು ಹಾಕಿರುವ ಕೆವಿನ್‌ನ ನಡವಳಿಕೆ ಪ್ರಾಣಿತಜ್ಞರಿಗೂ ಸೋಜಿಗವಾಗಿಯೇ ಕಂಡಿದೆ. ಕಾರಣ ಆತ ಯಾವ ನಿಯಮವನ್ನೂ ಪಾಲಿಸುವುದಿಲ್ಲ. ಎಲ್ಲ ನಿಯಮಗಳನ್ನು ಉಲ್ಲಂಘಿಸುವ ಮೂಲಕವೇ ಆಚರಿಸುತ್ತಾನೆ. ಸಿಂಹ, ಚಿರತೆ, ಹುಲಿಗಳು ಬೇರೆಯವರ ಜತೆ ವರ್ತಿಸುವುದಕ್ಕೂ ಕೆವಿನ್ ಜತೆ ವರ್ತಿಸುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಪಳಗಿಸಿದ ಕಾಡುಪ್ರಾಣಿಗಳು ಮನುಷ್ಯರ ಜತೆ ಎಂದೂ ಸಲುಗೆಯಿಂದ ವರ್ತಿಸುವುದಿಲ್ಲ. ಆದರೆ ಅದೇನು ಪವಾಡವೋ ಏನೋ ಕೆವಿನ್ ಜತೆ ಮಾತ್ರ 'ಒಳ್ಳೆಯ ಸ್ನೇಹಿತ'ನಂತೆ ವರ್ತಿಸುತ್ತವೆ. ಮಗುವಿನ ಜತೆ ಹಾಸಿಗೆಯಲ್ಲಿ ಹೊರಳಾಡಿ ಮುದ್ದು ಮಾಡುವ ಅಪ್ಪನಂತೆ ಕೆವಿನ್ ಸಿಂಹಗಳ ಜತೆಗೆ ಲಲ್ಲೆಗರೆಯುತ್ತಾನೆ. ಕೆಸರಗದ್ದೆಯಲ್ಲಿ ಅವುಗಳನ್ನು ಕೆಡವಿಕೊಂಡು ಆಡುತ್ತಾನೆ, ನದಿಯಲ್ಲಿ ಅವುಗಳ ಜೊತೆ ಈಜುತ್ತಾನೆ, ಬೆನ್ನ ಮೇಲೆ ಕುಳಿತು ಸವಾರಿ ಮಾಡುತ್ತಾನೆ. ಮೂರ್ನಾಲ್ಕು ಸಿಂಹಗಳು ಅವನನ್ನು ನೆಲಕ್ಕೆ ಕೆಡವಿಕೊಂಡು ಮಸ್ತಿ ಮಾಡುತ್ತವೆ. ಮುಂಗಾಲುಗಳಿಂದ ಅವನನ್ನು ಬರಸೆಳೆದು ಮುಖವನ್ನೆಲ್ಲ ನೆಕ್ಕಿ ನೆಕ್ಕಿ ಸತಾಯಿಸುತ್ತವೆ. ಹುಸಿ ಘರ್ಜನೆ ಮಾಡಿ ಅವನನ್ನು ಹೆದರಿಸುತ್ತವೆ.
ಪ್ರಾಣಿ ತಜ್ಞರಿಗೆ ಅರ್ಥವಾಗದಿರುವುದೇ ಇದು. ಕೆವಿನ್ ಅದೆಂಥ ಮೋಡಿ ಮಾಡಿರಬಹುದು? ಅವನಲ್ಲಿ ಅದೆಂಥ ಸೆಳೆತವಿದೆ? ಯಾಕೆ ಕಾಡಿನ ರಾಜ ಇಲಿಯಂತೆ ಅವನ ಮುಂದೆ ವರ್ತಿಸುತ್ತಾನೆ? ಚಿಕ್ಕ ಮಕ್ಕಳಿಗೆ ಮುತ್ತು ಕೊಡುವಂತೆ ಕೆವಿನ್ ಸಿಂಹಗಳ ತುಟಿ ಚುಂಬಿಸುವ ಮರ್ಮವೇನು? ಇವೆಲ್ಲ ಹೇಗೆ ಸಾಧ್ಯ? ಗೊತ್ತಾಗುತ್ತಿಲ್ಲ.
ಕೆವಿನ್ ಅಂತಾನೆ, ಪ್ರೀತಿ! ಸಹಜ ಪ್ರೀತಿ!
'ನಾವು ಪ್ರಾಣಿಗಳನ್ನು ಪ್ರಾಣಿಗಳೆಂದು ಭಾವಿಸುತ್ತೇವೆ, ತಪ್ಪಿಲ್ಲ. ಆದರೆ ಪ್ರಾಣಿಗಳಲ್ಲೂ ಮನುಷ್ಯತ್ವವಿದೆ. ಮನುಷ್ಯರಲ್ಲಿ ಮೃಗೀಯ ಗುಣವಿರುವುದಿಲ್ಲವೇ? ಹಾಗೆ ಪ್ರಾಣಿಗಳಲ್ಲೂ ಮನುಷ್ಯನ ಪ್ರೀತಿ, ಪ್ರೇಮ, ಸಲುಗೆ ಸ್ನೇಹ ಗುಣಗಳಿವೆ. ಅವುಗಳನ್ನು ಹುಡುಕುವ ಪ್ರಯತ್ನವನ್ನೇ ಮಾಡದ ನಾವು ಅವುಗಳನ್ನು ಬರೀ ಪ್ರಾಣಿಗಳಂತೆ ನೋಡುತ್ತಿದ್ದೇವೆ. ಹೀಗಾಗಿ ನನಗೆ ಸಿಂಹಗಳು ಭೀತಿ ಹುಟ್ಟಿಸುವುದಿಲ್ಲ. ಕೆಲವು ಮನುಷ್ಯರನ್ನು ಕಂಡರೆ ಭಯವಾಗುತ್ತದಲ್ಲ? ನಾವು ಪ್ರಾಣಿಗಳನ್ನು ಸರಿಯಾಗಿ ಅರಿತುಕೊಳ್ಳಲು ಪ್ರಯತ್ನಿಸಿಲ್ಲ. ಮೊದಲನೆಯದಾಗಿ ನಾನು ಅವುಗಳನ್ನು ಪ್ರಾಣಿ ಎಂದು ಭಾವಿಸಿಯೇ ಇಲ್ಲ. ಹೀಗಾಗಿ ನನಗೆ ಅವುಗಳ ಜತೆ ತೀರಾ ಸಹಜವಾಗಿ, ಭೀತಿಯಿಲ್ಲದೆ ಬೆರೆಯುವುದು ಸಾಧ್ಯವಾಗಿದೆ' ಅಂತಾನೆ ಕೆವಿನ್.
ಹಾಗೆಂದು ಆತ ಸಿಂಹಗಳಿಂದ ಕಚ್ಚಿಸಿಕೊಂಡಿಲ್ಲ ಎಂದಲ್ಲ. ಏಳೆಂಟು ಬಾರಿ ಪರಚಿಸಿಕೊಂಡಿದ್ದಾನೆ. ಒಂದೆರಡು ಬಾರಿ ಸಿಂಹ ಆತನ ಮೇಲೆ ಎಗರಿ ಗಾಯಗೊಳಿಸಿದೆ. ನೆಲಕ್ಕೆ ಕೆಡವಿ ಪರಚಿ ಹೈರಾಣ ಮಾಡಿದೆ. ಕೆವಿನ್ ಕೂದಲೆಳೆಯಿಂದ ಬಚಾವ್ ಆಗಿದ್ದಿದೆ.
ಆದರೆ ಅಷ್ಟಕ್ಕೇ ಆತ ಅಧೀರನಾಗಿಲ್ಲ. ಸಿಂಹಗಳ ಸಹವಾಸ ಬಿಟ್ಟಿಲ್ಲ. ಪರಿಚಿತರು ಮೋಸ ಮಾಡುವುದಿಲ್ಲವೇ? ತಂದೆ-ಮಗ ಜಗಳವಾಡುವುದಿಲ್ಲವೇ? ಗಂಡ-ಹೆಂಡತಿ ಜಗಳ ಕೊಲೆಯಲ್ಲಿ ಕೊನೆಯಾಗುವುದಿಲ್ಲವೇ? ಇದು ಸಹ ಹಾಗೇ. ಮನುಷ್ಯರು ತಿಳಿದೂ ತಿಳಿದೂ ತಪ್ಪು ಮಾಡುತ್ತಾರೆ. ಪ್ರಾಣಿಗಳು ಗೊತ್ತಿಲ್ಲದೇ ತಪ್ಪು ಮಾಡುತ್ತವೆ. ಅಷ್ಟೇ ವ್ಯತ್ಯಾಸ. ಅಷ್ಟಕ್ಕೇ ಪ್ರಾಣಿಗಳನ್ನು ತಪ್ಪುಭಾವಿಸಬಾರದು ಅಂತಾನೆ ಕೆವಿನ್.
ಆರಂಭದ ದಿನಗಳಲ್ಲಿ ಅವನ ಹೆಂಡತಿ-ಮಕ್ಕಳು, ಸ್ನೇಹಿತರು, ಬಂಧುಗಳು ಕೆವಿನ್‌ನ ಹುಚ್ಚಾಟ ಕಂಡು ಆತಂಕ ಪಡುತ್ತಿದ್ದರು. 'ಸಾವಿನ ಜತೆ ಸರಸ ಬೇಡ, ಎಷ್ಟೆಂದರೂ ಅವು ಕಾಡು ಪ್ರಾಣಿಗಳು, ಅವುಗಳಿಗೇನು ಬುದ್ಧಿ ಇದೆಯಾ?' ಎಂದೆಲ್ಲಾ ಅವನ ಜತೆ ವಾದಕ್ಕೆ ನಿಲ್ಲುತ್ತಿದ್ದರು. ಹೆಂಡತಿಯಂತೂ 'ದಮ್ಮಯ್ಯ, ದಾತಾರ' ಎಂದು ಬೇಡಿ ಅಂಗಲಾಚುತ್ತಿದ್ದಳು. ಆದರೆ ಕೆವಿನ್‌ನನ್ನು ನಿಯಂತ್ರಿಸುವುದು ಸಾಧ್ಯವೇ ಇಲ್ಲವೆಂಬುದು ಮನದಟ್ಟಾಯಿತು. 'ಮನುಷ್ಯರೇ ಡೇಂಜರಸ್, ಪ್ರಾಣಿಗಳಲ್ಲ. ಪ್ರಾಣಿಗಳಿಗೆ ಬುದ್ಧಿ ಇಲ್ಲದಿರುವುದರಿಂದಲೇ ಮನುಷ್ಯರಿಗಿಂತ ಮೇಲು' ಎಂದೇ ಕೆವಿನ್ ವಾದಿಸುತ್ತಿದ್ದ. ಕೆವಿನ್‌ನನ್ನು ಸಿಂಹ, ಹುಲಿಗಳ ಸಹವಾಸದಿಂದ ದೂರ ಮಾಡುವುದು ಸಾಧ್ಯವೇ ಇಲ್ಲವೆಂಬುದು ಆತನ ಹೆಂಡತಿ ಹಾಗೂ ಬಂಧುಗಳಿಗೆ ಮನವರಿಕೆಯಾಯಿತು.
'ನಾನು ಸಿಂಹಗಳ ಜತೆ ಎಂಥ ಸಂಬಂಧ ಹೊಂದಿದ್ದೇನೆಂಬುದು ಅರ್ಥವಾಗದಿರುವವರಿಗೆ ಇದೊಂದು ದೊಡ್ಡ ಅಚ್ಚರಿಯಾಗಿ ಕಾಣುತ್ತದೆ. ನನಗೆ ಇದು ತೀರಾ ಸಹಜ. ನೀವು ಕ್ರೂರ ಪ್ರಾಣಿಯಂತೆ ನೋಡಬೇಡಿ. ಅದರ ಬದಲು ಸಿಂಹದಂತೆ ನೋಡಿ. ಅದು ನಿಮ್ಮಂತೆ ಒಂದು ಪ್ರಾಣಿ' ಎನ್ನುವ ಕೆವಿನ್‌ನ ಮುಂದೆ ವಾದ ಮಾಡುವುದಾದರೂ ಹೇಗೆ?
ಮೂರ್ನಾಲ್ಕು ವರ್ಷದ ಹಿಂದೆ ಸುಮಾರು 180-200 ಕೆಜಿ ಭಾರದ ಸಿಂಹವೊಂದು ಕೆವಿನ್ ಮೇಲೆ ಎಗರಿತು.ಅದು ಎಗರಿದ ರಭಸ, ರೀತಿಗೆ ಆತ ಎದೆಯೊಡೆದು ಸತ್ತು ಹೋಗಬೇಕಿತ್ತು. ತಟ್ಟನೆ ಮತ್ತೊಂದು ಸಿಂಹವೊಂದು ಅವನ ಸೊಂಟಕ್ಕೆ ಬಾಯಿ ಹಾಕಿ ಪ್ಯಾಂಟನ್ನು ಕಚ್ಚಿ ದೂರಕ್ಕೆ ಎಸೆಯಿತು. ಕೆವಿನ್ ಕತೆ ಮುಗಿಯಿತು ಎಂದೇ ಎಲ್ಲರೂ ಅಂದುಕೊಂಡರು. ಮೊದಲು ಎಗರಿದ ಸಿಂಹ ಪುನಃ ಬಂದು ಆತನ ಭುಜಕ್ಕೆ ಪರಚಿ ಗಾಯಗೊಳಿಸಿತು. ಅಂದು ಕೆವಿನ್ ಬದುಕಿದ್ದೇ ಪುಣ್ಯ. ಆದರೆ ಈ ಘಟನೆಗೆ ಕೆವಿನ್ ಹೇಳೋದೇನು ಗೊತ್ತಾ? 'ಇದರಲ್ಲಿ ಸಿಂಹಗಳ ತಪ್ಪೇನು ಬಂತು? ಸಿಂಹಗಳು ಪರಸ್ಪರ ಕುಶಾಲಿಗೆ ಜಗಳವಾಡುತ್ತವೆ. ಪರಚಿ ಗಾಯ ಮಾಡಿಕೊಳ್ಳುತ್ತವೆ. ನನ್ನನ್ನು ಅವು ಬೇರೆಯವನೆಂದು ಭಾವಿಸಲಿಲ್ಲ. ಹೀಗಾಗಿ ನನಗೂ ಪರಚಿದವು.'
'ಸಿಂಹದಂತೆ ಪ್ರಾಣಿಗಳ ಜತೆ ಸಲುಗೆಯಿಂದ ವರ್ತಿಸುವುದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಯೋಚಿಸಿದ್ದೇನೆ. ಅಪಾಯದ ಅಂಶದ ಬಗ್ಗೆಯೂ ಯೋಚಿಸಿದ್ದೇನೆ. ಆದರೆ ನನ್ನ ಮನಸ್ಸು ಸಿಂಹಗಳ ಜತೆಯೇ ಸದಾ ಗಟ್ಟಿಯಾಗಿ ನಿಲ್ಲುತ್ತದೆ' ಎಂದು ಖಡಾಖಡಿ ಹೇಳುವ ಕೆವಿನ್‌ನನ್ನು ಯಾರೂ ಮನವೊಲಿಸಲಾರರು. 'ಸಿಂಹದಿಂದಲೇ ಸಾವು ಎಂದು ನನ್ನ ಹಣೆಯಲ್ಲಿ ಬರೆದಿದ್ದರೆ ಯಾರು ತಾನೆ ತಪ್ಪಿಸುತ್ತಾರೆ? ಹೀಗಾಗಿ ನಾನ್ಯಾಕೆ ಚಿಂತೆ ಮಾಡಲಿ?' ಎಂದು ವಾದಿಸುವ ಕೆವಿನ್ ದಾರಿಗೆ ಅಡ್ಡ ಹೋಗುವವರಾದರೂ ಯಾರು?
ನಲವತ್ತೆರಡು ವರ್ಷದ ಕೆವಿನ್, ಮೂಲತಃ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್‌ದವನು. ಹುಟ್ಟಿದಂದಿನಿಂದಲೇ ತನ್ನೊಟ್ಟಿಗೆ ಬೆಳೆದ ಸುಮಾರು ನಲವತ್ತು ಸಿಂಹಗಳನ್ನೇ ತನ್ನ ಪರಿವಾರವಾಗಿಸಿಕೊಂಡಿರುವ ಕೆವಿನ್, ಈ ಪ್ರಾಣಿಗಳ ಸಂತತಿ ಉಳಿವಿನ ಕುರಿತು ಜಾಗೃತಿ ಮೂಡಿಸಲು ವಿಶ್ವದಾದ್ಯಂತ ಪರ್ಯಟನೆ ಮಾಡುತ್ತಿದ್ದಾನೆ. ಅದೆಲ್ಲ ಇರಲಿ, ಮೊದಲು www.lionwhisperer.co.za/video.asp?menuld=5 ಲಿಂಕ್ ಮೇಲೆ ಕ್ಲಿಕ್ಕಿಸಿ. ಆತನ ಬಗ್ಗೆ ಇಲ್ಲಿ ತನಕ ಹೇಳಿದ್ದು ಎಷ್ಟು ಕಡಿಮೆ ಅಂತ ನಿಮಗೇ ಗೊತ್ತಾಗುತ್ತದೆ.
- ವಿಶ್ವೇಶ್ವರ ಭಟ್
vbhat@me.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

