ಸರ್ಕಾರದ ವಿಕೆಟ್ ಉರುಳಿಸುತ್ತಾ ಕಾಂಗ್ರೆಸ್ ಟಿಕೆಟ್?
ಆಡಳಿತ ವಿರೋಧಿ ಗಾಳಿ ಬೀಸುತ್ತಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದು ಎಂಬ...

ಆಡಳಿತ ವಿರೋಧಿ ಗಾಳಿ ಬೀಸುತ್ತಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದು ಎಂಬ ದೂರಾಲೋಚನೆ ಬಹುತೇಕರಲ್ಲಿದೆ
ಈ ರಾಜಕೀಯ ಹಣೆಬರಹ ಹೇಗಿರುತ್ತದೆ ನೋಡಿ. ಒಂದು ಪಕ್ಷದ ಆಂತರಿಕ ಕಚ್ಚಾಟ, ಭಿನ್ನಮತೀಯ ಚಟುವಟಿಕೆಗಳು, ಅಧಿಕಾರ ಲಾಲಸೆ ಅಥವಾ ಹಗರಣಗಳು ಆಂತರಿಕವಾಗಿ ಸರ್ಕಾರವನ್ನು ಕೆಡವಬಹುದು. ಇದನ್ನು ಅವರ ಕಾಲ ಮೇಲೆ ಅವರೇ ಚಪ್ಪಡಿ ಎಳೆದುಕೊಂಡಂತೆ ಎನ್ನಬಹುದು. ಸ್ವಯಂಕೃತಾಪರಾಧ ಎಂದೂ ಹೇಳಬಹುದು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಂತಹ ಅನೇಕ ಪ್ರಸಂಗಗಳು ನಡೆದವು. ಚಪ್ಪಡಿ ಕೆಳಗೆ ಬಿತ್ತು ಎನ್ನುವಾಗ ಕಾಲು ಪಕ್ಕಕ್ಕೆ ಸರಿಸಿಕೊಂಡಂತೆ ಸರ್ಕಾರ ಇನ್ನೇನು ಉರುಳಿತು ಎನ್ನುವಷ್ಟರಲ್ಲಿ ಎದ್ದು ನಿಲ್ಲುತ್ತಿತ್ತು. ಇಂತಹ ಅನೇಕ ಅಡೆತಡೆಗಳನ್ನು ದಾಟಿ ಬಂದ ರಾಜ್ಯದ ಬಿಜೆಪಿ ಸರ್ಕಾರದ ಭವಿಷ್ಯ ಈಗ ಕಾಂಗ್ರೆಸ್ ಪಕ್ಷದ ಆಂತರಿಕ ಬೆಳವಣಿಗೆಗಳನ್ನು ಅವಲಂಬಿಸಿರುವುದು ರಾಜಕೀಯ ಕೌತುಕ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ಆ ಪಕ್ಷದವರೇ ಸರ್ಕಾರ ಬೀಳಿಸಲು ಅನೇಕ ಪ್ರಯತ್ನಗಳನ್ನು ಮಾಡಿದರು. ಬಿಜೆಪಿಯಿಂದ ಸಿಡಿದು ಕೆಜೆಪಿ ಕಟ್ಟಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸರ್ಕಾರವನ್ನು ತೆಗೆದುಹಾಕಲು ಇನ್ನಿಲ್ಲದ ಪ್ರಯತ್ನಗಳಿಗೆ ಕೈಹಾಕಿದರು. ಒಂದು ಬಾರಿ ಈ ಸರ್ಕಾರವನ್ನು ಬೀಳಿಸಿಯೇ ತೀರುತ್ತೇವೆ ಎಂದವರು, ಮತ್ಯಾಕೋ ತಣ್ಣಗಾಗಿ ಸರ್ಕಾರ ಉರುಳಿಸಿದ ಅಪವಾದ ತಮ್ಮ ಮೇಲೆ ಬೇಡ ಎಂದು ಸುಮ್ಮನಾದರು. ಸರ್ಕಾರ ತಾನಾಗಿಯೇ ಉರುಳಲು ಬೇರೆ ಬೇರೆ ತಂತ್ರಗಾರಿಕೆಗಳನ್ನೂ ಮಾಡಿದರು. ಸರ್ಕಾರವನ್ನು ತೆಗೆದೇ ಬಿಡಬೇಕು ಎಂಬ ಕಾರಣಕ್ಕೆ ತಮ್ಮ ಒಂದಷ್ಟು ಬೆಂಬಲಿಗರಿಂದ ರಾಜಿನಾಮೆಯನ್ನೂ ಕೊಡಿಸಿದರು. ಸರ್ಕಾರದ ತಲೆ ಕಡಿಯಲು ತಮ್ಮ ಬೆಂಬಲಿಗರ ತಲೆ ಎಣಿಸಿದರು. ಬೆಂಬಲಿಗರಿಗೆ ಮೂಗುದಾರ, ಹಗ್ಗ ಹಾಕಿ ತಮ್ಮತ್ತ ಎಳೆದುಕೊಂಡರು.
ಈ ಕಾರಣಗಳಿಂದಾಗಿ ಸರ್ಕಾರ ಇಂದು ಉರುಳುತ್ತದೆ, ನಾಳೆ ಬೀಳುತ್ತದೆ ಎಂದು ಕಾದಿದ್ದೇ ಬಂತು. ಅಷ್ಟೂ ದಿನ ಬಿಜೆಪಿ ಆತಂಕದಲ್ಲಿ ದಿನ ಕಳೆದರೆ ಜನರೂ ಏನೆಲ್ಲಾ ನಡೆಯುತ್ತಿದೆ ಎಂದು ಕುತೂಹಲದಿಂದಲೇ ಈ ಬೆಳವಣಿಗೆಗಳನ್ನು ಗಮನಿಸುತ್ತಿದ್ದರು. ಇಷ್ಟರ ಮಧ್ಯೆ ತಾವು ಮಾಡಬೇಕಾದ ಕೆಲಸವನ್ನು ಯಡಿಯೂರಪ್ಪ ಅವರೇ ಮಾಡುತ್ತಿದ್ದಾರೆ ಎಂದು ನಿರುದ್ಯೋಗಿಯಂತೆ ಕುಳಿತಿದ್ದ ಪ್ರತಿಪಕ್ಷ ಕಾಂಗ್ರೆಸ್ ಮುಖಂಡರು, ಈ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಮುಂದಿನ ಚುನಾವಣೆಯಲ್ಲಿ ತಮಗೆ ಲಾಭವಾಗಿ ಪರಿವರ್ತಿಸಿಕೊಳ್ಳುವುದು ಹೇಗೆ ಎಂದು ಲೆಕ್ಕ ಹಾಕುತ್ತಿದ್ದರು.
ಆದರೆ, ಈ ಹಿಂದೆ ನಿರುದ್ಯೋಗಿಯಂತೆ ಕುಳಿತಿದ್ದ ಕಾಂಗ್ರೆಸ್ ಪಕ್ಷದ ಕೈಯ್ಯಲ್ಲಿ ರಾಜ್ಯ ಸರ್ಕಾರದ ಭವಿಷ್ಯವಿದೆ. ಇದಕ್ಕೆ ಕಾರಣ ಶಾಸಕರ ಅಧಿಕಾರ ಪ್ರೇಮ. ಹೇಗಾದರೂ ಮಾಡಿ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಬೇಕು ಎಂಬ ಹಪಾಹಪಿ. ಅದು ಹೇಗಂತೀರಾ?
ಬಿಜೆಪಿ ಅಧಿಕಾರಕ್ಕೆ ಬಂದ ನಾಲ್ಕೂಮುಕ್ಕಾಲು ವರ್ಷದ ಅವಧಿಯಲ್ಲಿ ಸರ್ಕಾರ ಹಲವಾರು ಅಡೆತಡೆಗಳನ್ನು ಎದುರಿಸಬೇಕಾಯಿತು. ಮೂರ್ನಾಲ್ಕು ಬಾರಿ ಸರ್ಕಾರ ಉರುಳಿಯೇ ಬಿಟ್ಟಿತು ಎಂಬ ಅಭಿಪ್ರಾಯವೂ ಮೂಡಿತ್ತು. ಶಾಸಕರು ರೆಸಾರ್ಟ್, ಗೋವಾ ಪ್ರವಾಸ ಮಾಡಿದರು. 16 ಶಾಸಕರು ಅನರ್ಹತೆಗೆ ಒಳಗಾದರು. ನಾಲ್ಕು ದಿನದ ಅವಧಿಯಲ್ಲಿ ಎರಡು ಬಾರಿ ವಿಶ್ವಾಸಮತ ಯಾಚಿಸಿದ ದಾಖಲೆ ಸೃಷ್ಟಿಯಾಯಿತು. ಮುಖ್ಯಮಂತ್ರಿ ಬದಲಾದರು. ಮತ್ತೆ ಅದೇ ಸಮಸ್ಯೆ ಎದುರಾಯಿತು. ಅಷ್ಟಾದರೂ 'ಆಡಿಸಿ ನೋಡು, ಬೀಳಿಸಿ ನೋಡು ಉರುಳಿಹೋಗದು' ಎಂಬಂತೆ ಸರ್ಕಾರ ಗಟ್ಟಿಯಾಗಿಯೇ ಉಳಿಯಿತು. ಆದರೆ, ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೆಲವರು ಕಾಂಗ್ರೆಸ್ ಕಡೆ ನೋಡುತ್ತಿದ್ದಾರೆ.
ಇದಕ್ಕೆ ಕಾರಣ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದೆಂಬ ನಂಬಿಕೆ. ಕಾಂಗ್ರೆಸ್‌ನ ನಾಯಕರ ಆಂತರ್ಯದಲ್ಲಿ ಈ ಬಗ್ಗೆ ಸ್ಪಷ್ಟ ವಿಶ್ವಾಸ, ನಂಬಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಆಡಳಿತ ವಿರೋಧಿ ಗಾಳಿ ಬೀಸುತ್ತಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದು ಎಂಬ ದೂರಾಲೋಚನೆ ಬಹುತೇಕರಲ್ಲಿದೆ. ಹೀಗಾಗಿ ಬಿಜೆಪಿ ಸರ್ಕಾರದಲ್ಲಿ ಸಚಿವರು, ಶಾಸಕರಾಗಿದ್ದವರು ಕಾಂಗ್ರೆಸ್‌ಗೆ ಅರ್ಜಿ ಹಾಕಿಕೊಂಡು ಕೂತಿದ್ದಾರೆ. ಕಾಂಗ್ರೆಸ್‌ನಿಂದ ಮುಂದಿನ ವಿಧಾನಸಭೆ ಚುನಾವಣೆ ಟಿಕೆಟ್ ಖಾತರಿಯಾದರೆ ರಾಜಿನಾಮೆ ನೀಡಿ ಕಾಂಗ್ರೆಸ್ ಸೇರುವುದು ಅವರ ಉದ್ದೇಶ. ಈ ರೀತಿ ಮುಗಿಬಿದ್ದವರ ಸಂಖ್ಯೆ ಮಿತಿಮೀರಿರುವುದರಿಂದ ಏನು ಮಾಡಬೇಕು ಎಂಬ ಗೊಂದಲ ಕಾಂಗ್ರೆಸ್‌ನಲ್ಲಿ ಕಾಣಿಸಿಕೊಂಡಿದೆ. ಹೀಗಿದ್ದರೂ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಅವರಿಗೆ ಚನ್ನಪಟ್ಟಣ ಕ್ಷೇತ್ರದಿಂದ ಟಿಕೆಟ್ ಕೂಡ ಖಾತರಿಯಾಗಿದೆ. ಅದೇ ರೀತಿ ಒಂದಷ್ಟು ಮಂದಿ ಕಾಂಗ್ರೆಸ್ ಸೇರುವ ಉದ್ದೇಶದಿಂದ ರಾಜಿನಾಮೆ ನೀಡಲು ಮುಂದಾಗಿದ್ದಾರಾದರೂ ಟಿಕೆಟ್ ಖಾತರಿಯಾಗದ ಕಾರಣ ತಮ್ಮ ನಿರ್ಧಾರ ಮುಂದೂಡಿದ್ದಾರೆ.
ಇವರಲ್ಲಿ ಸುರಪುರ ಶಾಸಕ ರಾಜೂಗೌಡ ಮತ್ತು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಪರಿಸ್ಥಿತಿ ಇನ್ನೂ ತ್ರಿಶಂಕುವಿನಂತಾಗಿದೆ. ಮುಂದಿನ ಚುನಾವಣೆಯಲ್ಲಿ ಸುರಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಉದ್ದೇಶದಿಂದ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದ ರಾಜೂಗೌಡ ಸಚಿವ ಸ್ಥಾನಕ್ಕೇನೋ ರಾಜಿನಾಮೆ ನೀಡಿದರು. ಆದರೆ, ಟಿಕೆಟ್ ಇನ್ನೂ ಖಾತರಿಯಾಗದ ಕಾರಣ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿಲ್ಲ. ಏಕೆಂದರೆ, ಸುರಪುರ ಕ್ಷೇತ್ರದಿಂದ ವೆಂಕಟಪ್ಪ ನಾಯಕ ಅವರನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿಸಬೇಕು ಎಂಬುದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಅಭಿಲಾಷೆ. ಹೀಗಾಗಿ ರಾಜೂಗೌಡ ಸೇರ್ಪಡೆಗೆ ಇನ್ನೂ ಹಸಿರುನಿಶಾನೆ ಸಿಕ್ಕಿಲ್ಲ.
ಬೇಳೂರು ಗೋಪಾಲಕೃಷ್ಣ ಅವರದ್ದೂ ಇದೇ ಸಮಸ್ಯೆ. ಮುಖ್ಯಮಂತ್ರಿ ಸ್ಥಾನದಲ್ಲಿ ಯಡಿಯೂರಪ್ಪ ಅವರನ್ನು ಭದ್ರಪಡಿಸುವ ಕಾರಣಕ್ಕಾಗಿ ಅನರ್ಹತೆಗೊಳಗಾಗಿದ್ದರೂ ನಂತರ ಸುಪ್ರೀಂ ಕೋರ್ಟ್ ತೀರ್ಪಿನಿಂದ ಮತ್ತೆ ಶಾಸಕ ಸ್ಥಾನ ಪಡೆದ ಬಳಿಕ ಮತ್ತೆ ಯಡಿಯೂರಪ್ಪ ಅವರ ಜತೆಗೇ ಇದ್ದರು. ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಮತ್ತು ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಯಡಿಯೂರಪ್ಪ ಅವರ ಪ್ರಯತ್ನಕ್ಕೆ ಕೈಜೋಡಿಸಿದ್ದರು. ಮುಖ್ಯಮಂತ್ರಿ ಬದಲಾದರೆ ಸಚಿವ ಸ್ಥಾನ ಸಿಗಬಹುದು ಎಂಬ ಆಸೆ ಅವರಲ್ಲಿತ್ತು. ಆದರೆ, ಮುಖ್ಯಮಂತ್ರಿ ಬದಲಾದರೂ ಸಚಿವ ಸ್ಥಾನ ಸಿಗಲಿಲ್ಲ. ಇದಕ್ಕೆ ಯಡಿಯೂರಪ್ಪ ಕಾರಣ ಎಂದು ಅವರಿಂದ ದೂರವಾಗಿ ಬಿಜೆಪಿಯಲ್ಲೇ ಗಟ್ಟಿಯಾದರು. ಇದರಿಂದ ಯಡಿಯೂರಪ್ಪ ಅವರ ವಿರೋಧ ಕಟ್ಟಿಕೊಂಡರು. ಈಗ ಯಡಿಯೂರಪ್ಪ ಅವರ ಭೀತಿಯಿಂದಲೇ ಅವರು ಬಿಜೆಪಿ ಬಿಡಲು ಸಿದ್ಧರಾಗಿದ್ದಾರೆ. ಬಿಜೆಪಿಯಿಂದ ಸಾಗರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೆ ಯಡಿಯೂರಪ್ಪ ಅವರು ತಮ್ಮನ್ನು ಸೋಲಿಸಲು ಸಂಚು ಮಾಡುತ್ತಾರೆ. ಹೀಗಾಗಿ ಕಾಂಗ್ರೆಸ್‌ಗೆ ಹೋಗಿ ಪಾರಾಗುವುದು ಅವರ ಉದ್ದೇಶ. ಆದರೆ, ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಇದ್ದಾರೆ. ಹೀಗಾಗಿ ಅವರು ತಮ್ಮ ಸಮುದಾಯದವರು ಸ್ವಲ್ಪ ಹೆಚ್ಚಾಗಿರುವ ಮತ್ತು ಸಾಗರಕ್ಕೆ ಅತೀ ಸಮೀಪದಲ್ಲಿರುವ ಶಿರಸಿ ಕ್ಷೇತ್ರದತ್ತ ಕಣ್ಣು ಹಾಯಿಸಿದ್ದಾರೆ. ಆದರೆ, ಅಲ್ಲಿ ಭೀಮಾನಾಯಕ್ ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಅಲ್ಲಿಯೂ ಬೇಳೂರಿಗೆ ಟಿಕೆಟ್ ಸಿಗುವ ಖಾತರಿ ಇಲ್ಲ. ಹೀಗಾಗಿ ಅವರೂ ರಾಜಿನಾಮೆ ನಿರ್ಧಾರ ಮುಂದೂಡಿದ್ದಾರೆ. ಅದೇ ರೀತಿ ಕಾರವಾರದ ಆನಂದ್ ಅಸ್ನೋಟಿಕರ್ ಅವರ ಕಾಂಗ್ರೆಸ್ ಸೇರ್ಪಡೆಗೆ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅಡ್ಡಗಾಲು ಹಾಕಿದ್ದಾರೆ. ಹೀಗಾಗಿ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಕುಟುಕು ಜೀವದೊಂದಿಗೆ ತೆವಳಲು ದಾರಿ ಮಾಡಿಕೊಟ್ಟಂತಾಗಿದೆ.
ಇವಿಷ್ಟು ಬಿಜೆಪಿ ಶಾಸಕರ ಕಾಂಗ್ರೆಸ್ ಪ್ರೇಮವಾದರೆ, ಈ ವಿಚಾರವೇ ಕಾಂಗ್ರೆಸ್‌ನಲ್ಲಿ ಆಂತರಿಕ ಬೇಗುದಿಗೆ ಕಾರಣವಾಗಿದೆ. ಮೂಲ ಕಾಂಗ್ರೆಸ್ಸಿಗರು ಮತ್ತು ವಲಸಿಗರ ನಡುವಿನ ಮುಸುಕಿನ ಗುದ್ದಾಟದ ತೀವ್ರತೆಗೆ ಆಸ್ಪದ ಮಾಡಿಕೊಟ್ಟಿದೆ. ಬೇರು ಮಟ್ಟದ ಕಾರ್ಯಕರ್ತರಿಂದ ಹಿಡಿದು ರಾಜ್ಯ ನಾಯಕರವರೆಗೂ ಮೂಲ ಮತ್ತು ವಲಸಿಗರ ನಡುವಿನ ಜಗಳ ಪರಾಕಾಷ್ಠೆಗೆ ತಲುಪಿದೆ. ಇಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಮೂಲ ಕಾಂಗ್ರೆಸ್ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಲಸಿಗರ ಸಂಕೇತ. ಹೀಗಾಗಿ ಇದುವರೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನಡೆಸಿದ ಹೋರಾಟಕ್ಕಿಂತಲೂ ಇದೀಗ ಮೂಲ ಮತ್ತು ವಲಸಿಗ ಕಾಂಗ್ರೆಸ್ಸಿಗರ ನಡುವಿನ ಹೋರಾಟ ತೀವ್ರವಾಗಿದೆ. ಈಗಾಗಲೇ ವಲಸಿಗರಿಗೆ ಮಣೆ ಹಾಕಿ ಮೂಲ ಕಾಂಗ್ರೆಸ್ಸಿಗರಿಗೆ ಅನ್ಯಾಯ ಮಾಡಲಾಗಿದೆ. ಇದೀಗ ಮತ್ತೆ ಹೊರಗಿನಿಂದ ಬರುವವರಿಗೆ ಮಣೆ ಹಾಕಿ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಿದರೆ ತಾವು ಮತ್ತಷ್ಟು ಮೂಲೆಗುಂಪಾಗಬಹುದು ಎಂಬ ಭೀತಿ ಮೂಲ ಕಾಂಗ್ರೆಸ್ಸಿಗರನ್ನು ಕಾಡುತ್ತಿದೆ. ಈ ಕಾರಣದಿಂದಾಗಿ ಬ್ಲಾಕ್ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಅಸಮಾಧಾನ ಹೊಗೆಯಾಡುತ್ತಿದ್ದು, ಬೆಂಕಿಯಾಗಿ ಸುಡುವ ಆತಂಕ ಕಾಣಿಸಿಕೊಂಡಿದೆ.
ಹಾಗೆಂದು ವಲಸಿಗರಿಗೆ ಮಣೆ ಹಾಕದೆ ಅವರನ್ನು ಸಂಪೂರ್ಣ ದೂರ ಇಡುವ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಇಲ್ಲ. ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ 3-4 ಅಭ್ಯರ್ಥಿಗಳು ಇದ್ದರೂ ಗೆಲ್ಲುವ ಅಭ್ಯರ್ಥಿಗಳ ಕೊರತೆ ಇದೆ. ಅದಕ್ಕಾಗಿ ವಲಸಿಗರನ್ನು ಓಲೈಸಲೇಬೇಕು ಎಂಬ ಕಾರಣಕ್ಕೆ ಒಟ್ಟು ವಿಧಾನಸಭಾ ಕ್ಷೇತ್ರಗಳ ಪೈಕಿ ಶೇ. 10ರಷ್ಟನ್ನು ಈ ವರ್ಗಕ್ಕೆ ನೀಡುವ ಅಘೋಷಿತ ನೀತಿ ಅಳವಡಿಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಆದರೆ, ಈ ಅಘೋಷಿತ ನೀತಿಯೇ ಪಕ್ಷದಲ್ಲಿ ಗಲಾಟೆಗೂ ಕಾರಣವಾಗಿದೆ. ಅಷ್ಟೇ ಅಲ್ಲ, ಈ ಗಲಾಟೆ ಜಾತಿ ಮೀರಿದ ಗುಂಪುಗಾರಿಕೆಯನ್ನೂ ಸೃಷ್ಟಿಸಿದೆ. ಇತ್ತೀಚೆಗೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್‌ನ ಒಕ್ಕಲಿಗ ಮುಖಂಡರ ಸಭೆಯಲ್ಲಿ ನಡೆದ ಕಿತ್ತಾಟವೇ ಇಂತಹ ಬೆಳವಣಿಗೆಗೆ ಉದಾಹರಣೆ. ಈ ಸಭೆಗೆ ಬಂದಿದ್ದ ಒಕ್ಕಲಿಗ ಮುಖಂಡರೊಬ್ಬರನ್ನು ಶಿವಕುಮಾರ್ ಅವರು ನಿಂದಿಸಿ ಹೊರಗೆ ಕಳುಹಿಸಿದ್ದರು. ಆ ವ್ಯಕ್ತಿ ಜಾತಿಯಲ್ಲಿ ನಮ್ಮವನೇ ಆದರೂ ಪಕ್ಷದ ವಿಚಾರಕ್ಕೆ ಬಂದರೆ ಪರಮೇಶ್ವರ ಅವರ ಕಡೆಯವರು. ಪರಮೇಶ್ವರ್ ಮತ್ತು ಶಿವಕುಮಾರ್ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಆಗಿರುವುದರಿಂದ ಅಲ್ಲಿ ಜಾತಿಗಿಂತಲೂ ವ್ಯಕ್ತಿನಿಷ್ಠೆ ಪ್ರಧಾನವಾಯಿತು. ಇದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಜಿಲ್ಲಾ ಮಟ್ಟಗಳಲ್ಲೂ ಇಂತಹ ಕಿತ್ತಾಟಗಳು ಆರಂಭವಾಗಿವೆ. ಅಲ್ಲಿ ಟಿಕೆಟ್ ಆಕಾಂಕ್ಷಿಗಳು ಹೊರಗಿನವರ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುತ್ತಾ ತಮ್ಮದೇ ಆದ ತಂಡ ಕಟ್ಟಿಕೊಂಡು ಹೋರಾಟ ಮಾಡುತ್ತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಸೇರಲು ಮುಂದಾಗಿರುವವರು ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಅಸಮಾಧಾನ ಹೊಂದಿರುವ ಮೂಲ ಕಾಂಗ್ರೆಸ್ಸಿಗರನ್ನು ತಮ್ಮತ್ತ ಒಲಿಸಿಕೊಂಡು ಪಕ್ಷ ಸೇರ್ಪಡೆಗೆ ಬೇಕಾದ ವೇದಿಕೆ ಸೃಷ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಮತ್ತೆ ಅಧಿಕಾರ ಸಿಗಬಹುದು ಎಂಬ ಆಕಾಂಕ್ಷೆಯೊಂದಿಗೆ ಬಿಜೆಪಿಯಲ್ಲಿ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ಹೇಳಿಕೊಂಡು ಕಾಂಗ್ರೆಸ್‌ನತ್ತ ವಾಲುತ್ತಿರುವವರ ಪೈಕಿ ಅನೇಕರು ಸ್ವಸಾಮರ್ಥ್ಯದಿಂದ ಗೆಲ್ಲುವ ಶಕ್ತಿ ಹೊಂದಿರುವವರು. ಅಂಥವರನ್ನು ದೂರವಿಡುವಂತೆಯೂ ಇಲ್ಲ. ಸೇರಿಸಿಕೊಂಡರೆ ಆಂತರಿಕ ಸಮಸ್ಯೆ ಬಿಗಡಾಯಿಸುತ್ತದೆ. ಹೀಗಾಗಿ ಬಿಜೆಪಿಯ ಆಂತರಿಕ ಬಿಕ್ಕಟ್ಟು, ಅಸಮಾಧಾನದ ನೆರವು ಪಡೆದು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಕನಸೇ ವರವಾಗುವ ಬದಲು ಶಾಪವಾಗಿ ಪರಿಣಮಿಸುತ್ತಿದೆ. ಪಕ್ಷದಲ್ಲಿ ಉಂಟಾಗುತ್ತಿರುವ ಆಂತರಿಕ ತಿಕ್ಕಾಟಗಳು ಕಾಂಗ್ರೆಸ್ ನಾಯಕರನ್ನು ದಿಕ್ಕುಗೆಡುವಂತೆ ಮಾಡಿದೆ.
ಒಟ್ಟಿನಲ್ಲಿ ಕಾಂಗ್ರೆಸ್‌ನ ಆಂತರಿಕ ಬೆಳವಣಿಗೆಗಳು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರದ ಅಳಿವು- ಉಳಿವನ್ನು ನಿರ್ಧಾರ ಮಾಡುವ ಮಟ್ಟಕ್ಕೆ ಬೆಳೆದು ನಿಂತಿರುವುದು ರಾಜಕೀಯ ಕೌತುಕವಲ್ಲದೆ ಇನ್ನೇನು?
ಲಗೋರಿ: ಒಬ್ಬರ ಸಂಕಟ ಮತ್ತೊಬ್ಬರಿಗೆ ಸಂತಸ ತರಬಹುದು.
-ಪಿ. ತ್ಯಾಗರಾಜ್
thyagarjun@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


