ವಾಸ್ತು ಅಂತೇಳಿ ಅಡ್ಗೆ ಮನೆ ಕೆಡುವುದ್ರೆ ಹೆಂಗೆ?
'ಯಾರ್ರೀ ಕೈ ಪಕ್ಸ, ಯಾರ್ರೀ ಕೈ ಪಕ್ಸ, ಬನ್ನಿ ಬನ್ನಿ ತಕ್ಕಳಿ ತಕ್ಕಳಿ ಟಿಕೆಟ್ಟು ಟಿಕೆಟ್ಟು'....

'ಯಾರ್ರೀ ಕೈ ಪಕ್ಸ, ಯಾರ್ರೀ ಕೈ ಪಕ್ಸ, ಬನ್ನಿ ಬನ್ನಿ ತಕ್ಕಳಿ ತಕ್ಕಳಿ ಟಿಕೆಟ್ಟು ಟಿಕೆಟ್ಟು' ಅಂತ ಯಾರೊ ಕೂಗ್ದಂಗೆ ಆಯ್ತು. ಇದೇನು ಕೈ ಪಕ್ಸದ ಆಪೀಸ್ಗೂ ಬಸ್ಸು ಬುಟ್ಟವ್ರಾ? ಅಂತ ಹತ್ರ ವೋಗಿ ನೋಡ್ತನೆ. ಕೈ ಪಕ್ಸದ ಲೀಡ್ರು ಪರಮೇಸ್ವರ್ರು.
'ಮಂಗ ಮರ ಏರುತಿದೆ ಆ ಕೊಂಬೆ ಈ ಕೊಂಬೆ ಹಾರುತಿದೆ, ಕಮಲ ಮುಗಿಯಿತೋ, ಕೈಯಿ ಕೂಗಿತೋ' ಅಂತ ಹಾಡ್ಕಂಡು ಮೈಲಾರಿ ವೋಯ್ತಾಯಿದ್ದ.
ಅದುನ್ನ ಮಾಜಿ ಮಂತ್ರಿ ಸೈನಿಕ ಅಲಿಯಾಸ್ ಯೋಗಿಸಪ್ಪ ಕೇಳುಸ್ಕಂಬುಟ್ಟು ಕೆಂಡ ಆಬುಟ್ರು. 'ಏನಲೇ ಮಗನೇ, ಮಷ್ಕಿರಿ ಮಾಡ್ತಾಯಿದ್ದೀಯ. ನನ್ನುನ್ನ ಕೋತಿ ಮಾಡ್ಕಂಬುಟ್ಟ' ಅಂತೇಳಿ ಗುರಾಯಿಸಿದ್ರು.
'ಆಯ್ಯೋ ಸಿವನೇ, ಎಲ್ಲಾರೂ ವುಂಟೇ ? ಏನೋ ಅಣ್ಣೋರು ಹಾಡು ಗೆಪ್ತಿಗೆ ಬಂತು. ಹಂಗೇ ಹಾಡ್ಕಂಡು ವೋತಾಯಿದ್ದೆ. ಆದುಕ್ಕೂ ನಿಮ್ದು ಪರ್ಮಿಸನ್ನು ತಕ್ಕಬೇಕಾ ದೇವ್ರು ?' ಅಂದ ಮೈಲಾರಿ.
'ಅಣ್ಣೋರು ಹಾಡು ಹೆಂಗದೆ, ನೀನು ಹೆಂಗೆ ಹಾಡ್ತಾಯಿದ್ದೀಯ ಅಂತ ನಂಗೆ ಗೊತ್ತದೆ ಕಣ್ಲಾ. ನಾನು ಕಮ್ಲ ಪಕ್ಸ ಬುಟ್ಟು ಕೈ ಪಕ್ಸುಕ್ಕೆ ವೋಯ್ತಾಯಿದ್ದೀನಿ. ಅದುಕ್ಕೆ ಮಂಗ ಆ ಕೊಂಬೆ ಈ ಕೊಂಬೆ ಹಾರ್ತಾ ಐತೆ ಅಂತಾಯಿದ್ದೀಯ. ವಸಿ ವುಸಾರಾಗಿ ಮಾತಾಡು' ಅಂದ್ರು ಯೋಗಿಸಪ್ಪ.
'ವೋ ಇಸ್ಯ ಹಂಗಾ ? ತಪ್ಪಾಯ್ತು ಧಣಿ, ಏನೋ ತಿಳೀಲಿಲ್ಲ, ವೊಟ್ಟೆಗಾಕ್ಕಂಬುಡಿ' ಅಂತೇಳಿ ಮೈಲಾರಿ ಅಲ್ಲಿಂದ ಎಸ್ಕೇಪು ಆಬುಟ್ಟ. ಮುಂದೆ ವೋಯ್ತಾ ವೋಯ್ತಾ, 'ಮಂಗನ ಕಾಡಿದರೇನು ಮರವನು ಏರದೇ ಇರುವನೇನು ?' ಅಂತೇಳಿ ದೂಸ್ರಾ ಹಾಡು ಬುಟ್ಟ.
ಅದುನ್ನು ಕೇಳುಸ್ಕಂಡು ವೋಡೋಡಿ ಬಂದ್ರು ಮಾಜಿ ಸೆಂಟ್ರಲ್ ಮಂತ್ರಿ ಧನಂಜಯಪ್ನೋರು. 'ಮುಂಡೇ ಮಗ್ನೇ, ಆ ಸದಾನಂದಗೌಡ್ರು ನನ್ನುನ್ನ ಕೋತಿ ಚೇಷ್ಟೆ ಮಾಡೋನು ಅಂತ ಯೋಳವ್ರೆ. ಅದುನ್ನು ಕೇಳುಸ್ಕಂಡು ಬಂದು ನನ್ ಮುಂದೆ ಈ ಹಾಡು ಹಾಡ್ತಾಯಿದ್ದೀಯ. ಮೂಟೆ ಕಟ್ಬುಟ್ಟು ಅರಬ್ಬೀ ಸಮುದ್ರದಾಗೆ ಬಿಸಾಕ್ತೀನಿ ವುಸಾರು' ಅಂದ್ರು ಅವ್ರು.
'ವೊಳ್ಳೇ ಮಂಗನ ಕಾಯ್ಲೆ ಬಂತಲ್ಲ ನಂಗೆ. ಬ್ಯಾಡ ಬ್ಯಾಡ ಅಂದ್ರೂವೆ ಹಾಡೋ ಹಾಡೆಲ್ಲಾ ವುಲ್ಟಾ ಆಯ್ತಾ ಐತಲ್ಲಾ' ಅಂತ ಅನ್ಕಂಡ ಮೈಲಾರಿ. 'ನಾನು ಯೋಳ್ತಾಯಿದ್ದೀನಿ. ಸೈಲೆಂಟಾಗಿ ನಿಂತ್ಕಂಡಿದ್ದೀಯಲ್ಲ. ಏನಲೇ ನನ್ನುನ್ನ ಮಂಗ ಆಂತಾಯಿದ್ದೀಯ' ಅಂದ್ರು ಧನಂಜಯಪ್ನೋರು.
'ಅಯ್ಯೋ ನಾನೆಲ್ಲಿ ಯೋಳ್ದೆ ಸ್ವಾಮಿ, ನೀವೇ ಯೋಳಿದ್ದು ಸದಾನಂದಗೌಡ್ರು ಹಂಗಂದ್ರು ಅಂತ. ಅಲ್ಲ, ನೀವ್ಯಾಕೆ ಕೋತಿ ಚೇಷ್ಟೆ ಮಾಡಕ್ಕೆ ವೋದ್ರಿ' ಅಂತ ಮೈಲಾರಿ ಕೇಳ್ದ. ಇವ್ನು ನಂಗೇ ತಗ್ಲಾಕ್ಕಂಬುಟ್ಟ' ಅಂತ ಬೈಕಂಡು ಧನಂಜಯಪ್ನೋರೇ ಅಲ್ಲಿಂದ ಎಸ್ಕೇಪು ಆಬುಟ್ರು.
ಸರಿ ಮೈಲಾರಿ, 'ಕೋತಿ ಆಡ್ಸೋನು ಮ್ಯಾಲೆ ಕುಂತವ್ನು ನಮ್ಗು ನಿಮ್ಗೂ ಯಾಕೆ ಟೆನ್ಸನ್ನು' ಅಂತ ಹಾಡ್ಕಂಡು ವೂರ್ಕಡೆ ವೋಗಾಣ ಅಂತೇಳಿ ಬಸ್ ಸ್ಟಾಪ್ಗೆ ವೋದ. ಅಲ್ಲಿ, 'ಯಾರ್ರೀ ಕೈ ಪಕ್ಸ, ಯಾರ್ರೀ ಕೈ ಪಕ್ಸ, ಬನ್ನಿ ಬನ್ನಿ ತಕ್ಕಳಿ ತಕ್ಕಳಿ ಟಿಕೆಟ್ಟು ಟಿಕೆಟ್ಟು' ಅಂತ ಯಾರೊ ಕೂಗ್ದಂಗೆ ಆಯ್ತು.
ಇದೇನು ಕೈ ಪಕ್ಸದ ಆಪೀಸ್ಗೂ ಬಸ್ಸು ಬುಟ್ಟವ್ರಾ ? ಅಂತ ತಲೆ ಕೆರ್ಕಂಡು ಹತ್ರ ವೋಗಿ ನೋಡ್ತನೆ. ಕೈ ಪಕ್ಸದ ಲೀಡ್ರು ಪರಮೇಸ್ವರ್ರು.
'ಇದೇನು ಸ್ವಾಮಿ ನೀವು ಯಾವಾಗ ಕಂಡಕ್ಟರ್ರು ಅಬುಟ್ರಿ. ಬಸ್ ಏನರ ಖರೀದಿ ಮಾಡಿ ರಸ್ತೆ ಮ್ಯಾಲೆ ಬುಟ್ಟಿದ್ದೀರಾ ಹೆಂಗೆ ?' ಅಂತ ಮೈಲಾರಿ ಕೇಳ್ದ. 'ಸುಮ್ಕೆ ಸೈಡ್ಗೆ ವೊಂಟೋದ್ರೆ ಸರಿ, ಎಲೆಕ್ಸನ್ ಬತ್ತಾ ಐತೆ. ನಮ್ ಪಕ್ಸುಕ್ಕೆ ಬ್ಯಾರೆ ಪಕ್ಸುದಿಂದ ಲೀಡ್ರುಸು ಬರ್ಲಿ ಅಂತೇಳಿ ನಾನು ಕರೀತಾಯಿದ್ರೆ ಬಸ್ಸಂತೆ ಬಸ್ಸು ಇವ್ನು ತಲೆ' ಅಂತೇಳಿ ಪರಮೇಸ್ವರ್ರು ಬುಸುಗುಟ್ಟುದ್ರು.
ಯಾಕೋ ಏನೋ ಟೇಮು ಸರ್ಯಾಗಿಲ್ಲ ಅಂತೇಳಿ ಮೈಲಾರಿ ವೂರ್ನಾಗೆ ಇಳಿತಾಯಿದ್ದಂಗೆ ಪ್ರೆಂಡು ಆಮಾಸೆ ವೋಟ್ಲಾಗೆ ಕೂತು ತಿಂತಾಯಿದ್ದ. 'ಅಲ್ಲಲೇ ಅಮಾಸೆ, ಯಾವಾಗ ನೋಡುದ್ರೂ ವೋಟ್ಲಾಗೆ ತಿಂತಾಯಿರ್ತೀಯ. ನಿಂಗೆ ಹೆಂಡ್ರು ವೂಟ ಹಾಕ್ತಳೋ ಇಲ್ವೋ ?' ಅಂತೇಳಿ ಮೈಲಾರಿ ಕೇಳ್ದ.
'ನಮ್ ಮನ್ಯಾಗೆ ಆಡುಗೆ ಕ್ವಾಣೆ ಇಲ್ಲ ಕಣಣ್ಣೋ' ಅಂತೇಳ್ದ ಅಮಾಸೆ. 'ಅಯ್ಯೋ ನಿನ್ ಮನೆ ಕಾಯ್ವಾಗ, ಏನಾತಲೇ ?' ಅಂತ ಮೈಲಾರಿ ಕೇಳ್ದ.
'ನನ್ನೆಂಡ್ರು ಮೊನ್ನೆ ಟೀವಿ ನೋಡ್ತಾ ನೋಡ್ತಾ ಅದ್ಯಾರೋ ಜ್ಯೋತಿಸಿಗೆ ಪೋನಾಕಿ ಮನೆ ಕಡೆ ವಸಿ ಕಷ್ಟ ಅದೆ ಏನು ಮಾಡೋದು ಅಂತ ಕೇಳುದ್ಲು. ನಿಮ್ ಮನೆ ವಾಸ್ತು ಸರ್ಯಾಗಿಲ್ಲ. ಅಡ್ಗೆ ಕ್ವಾಣೆ ಕೆಡ್ವಾಕಿ ಅಂತ ಅವಯ್ಯ ಯೋಳ್ದ. ಅಷ್ಟೇ ಕಣಣ್ಣ ಆವತ್ತಿಂದ ವೋಟ್ಲೂಟ ಕಾಯಂ ಆಗೋಗದೆ' ಅಂತೇಳಿ ಆಮಾಸೆ ಪಾರ್ಸಲ್ಲೂ ಕಟ್ಟುಸ್ಕಂಡು ವೋದ.
-ಕೆ.ವಿ.ಪ್ರಭಾಕರ್
prabhukolar@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


