ಅಂಕಣಗಳು

ಮಿಡತೆಯ ಕೂಗಿಗೆ ಓಗೊಡುತ್ತಾ!

ನೊಂದ ಇರುವೆ ಬಹಳ ಹಿಂದೆಯೇ ಭಾರತ ಬಿಟ್ಟು, ಅಮೆರಿಕದಲ್ಲಿ ಶತಕೋಟಿ ಡಾಲರ್ ಬೆಲೆಯ...

ಮಿಡತೆಯ ಕೂಗಿಗೆ ಓಗೊಡುತ್ತಾ!
Published On :

ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ಓದಿದ ಹಳೇ ಕತೆಯ ಹೊಸ ಅವತರಣಿಕೆ ವಿಚಿತ್ರ ಕಚಗುಳಿ ನೀಡಿತು. ಆ ಖುಷಿ ನಿಮಗೂ ಇರಲಿ ಎಂದು...
ಹೀಗೊಂದು ಹಳೆ ಕತೆ: ಚಳಿಗಾಲ ಹತ್ತಿರವಾಗುತ್ತಿತ್ತು. ಹಾಗಾಗೇ ಇರುವೆಯೊಂದು ಬೇಸಿಗೆಯ ಬಿಸಿಲನ್ನೂ ಲೆಕ್ಕಿಸದೆ ಕಷ್ಟಪಟ್ಟು ದುಡಿದು ಮನೆಯೊಂದನ್ನು ಕಟ್ಟಿ, ಚಳಿಗಾಲಕ್ಕಾಗಿ ಆಹಾರ ಸಾಮಗ್ರಿಗಳನ್ನು ಕಲೆಹಾಕತೊಡಗಿತು.
ಇದನ್ನೆಲ್ಲ ನೋಡಿದ ಮೈಗಳ್ಳ ಮಿಡತೆಗೆ ನಗು ತಡೆಯಲಾಗಲಿಲ್ಲ. 'ಇರುವೆಗೆ ತಲೆ ಸರಿಯಿಲ್ಲ' ಎಂದುಕೊಂಡು ಕುಣಿಯುತ್ತಾ, ಹಾಡುತ್ತಾ ಬೇಸಿಗೆಯನ್ನು ಕಳಿದುಬಿಟ್ಟಿತು.
ಚಳಿಗಾಲ ಬಂತು. ಇರುವೆ ತನ್ನ ಬೆಚ್ಚನೆ ಮನೆಯಲ್ಲಿ, ಯಥೇಚ್ಛವಾಗಿ ಊಟ ಮಾಡಿ ಕಾಲು ಚಾಚಿಕೊಂಡು ಮಲಗಿತ್ತು. ಮೈಗಳ್ಳ ಮಿಡತೆ ಚಳಿಯಿಂದ ನಡುಗುತ್ತಾ, ಹಸಿವಿನಿಂದ ಹೈರಾಣಾಗಿ ಸತ್ತುಹೋಯಿತು.
ಒಂದು ವೇಳೆ ಇದು ಭಾರತದಲ್ಲಿ ನಡೆದಿದ್ದರೆ: ಚಳಿಗಾಲ ಹತ್ತಿರವಾಗುತ್ತಿತ್ತು. ಹಾಗಾಗೇ ಇರುವೆಯೊಂದು ಬೇಸಿಗೆಯ ಬಿಸಿಲನ್ನೂ ಲೆಕ್ಕಿಸದೆ ಕಷ್ಟಪಟ್ಟು ದುಡಿದು, ಮನೆಯೊಂದನ್ನು ಕಟ್ಟಿ, ಚಳಿಗಾಲಕ್ಕಾಗಿ ಆಹಾರ ಸಾಮಗ್ರಿಗಳನ್ನು ಕಲೆಹಾಕತೊಡಗಿತು.
ಇದನ್ನೆಲ್ಲ ನೋಡಿದ ಮೈಗಳ್ಳ ಮಿಡತೆಗೆ ನಗು ತಡೆಯಲಾಗಲಿಲ್ಲ. 'ಇರುವೆಗೆ ತಲೆ ಸರಿಯಿಲ್ಲ' ಎಂದುಕೊಂಡು ಕುಣಿಯುತ್ತಾ, ಹಾಡುತ್ತಾ ಬೇಸಿಗೆಯನ್ನು ಕಳೆದುಬಿಟ್ಟಿತು.
ಚಳಿಗಾಲ ಬಂತು. ಇರುವೆ ತನ್ನ ಬೆಚ್ಚನೆ ಮನೆಯಲ್ಲಿ, ಯಥೇಚ್ಛವಾಗಿ ಊಟ ಮಾಡಿ ಕಾಲು ಚಾಚಿಕೊಂಡು ಮಲಗಿತ್ತು. ಮೈಗಳ್ಳ ಮಿಡತೆ ಚಳಿಯಿಂದ ನಡುಗುತ್ತಾ, ಹಸಿವಿನಿಂದ ಕಂಗಾಲಾಗಿ ಇನ್ನೇನು ಸಾಯುವುದರಲ್ಲಿತ್ತು...ಅಷ್ಟರಲ್ಲಿ ಅದು ಸುದ್ದಿ ವಾಹಿನಿಗಳ ಕಣ್ಣಿಗೆ ಬಿದ್ದುಬಿಟ್ಟಿತು!
ಮಿಡತೆ ಚಳಿಯಿಂದ ಸಾಯುತ್ತಿದ್ದರೂ, ಆರಾಮಾಗಿ ಗೊರಕೆ ಹೊಡೆಯುತ್ತಿದ್ದ ಇರುವೆಯ ವೀಡಿಯೋವನ್ನು ಸುದ್ದಿವಾಹಿನಿಗಳು ಪ್ರಸಾರ ಮಾಡಿದವು . ಪ್ರಪಂಚದಾದ್ಯಂತ ಈ ವಿಡಿಯೋ ಹರಿದಾಡಿ ಮಿಡತೆಯ ಪರಿಸ್ಥಿತಿಗೆ ಎಲ್ಲರೂ ಮರುಗಿದರು. ಅಂತಹ ನೀಚ ಇರುವೆಯನ್ನು ದೇಶದಲ್ಲಿ ಇರಲೂ ಬಿಡಬಾರದು ಎಂಬ ಆರ್ಭಟ ಎಲ್ಲೆಡೆಯೂ ಮಾರ್ದನಿಸತೊಡಗಿತು.
ಇರುವೆಯ ಮನೆಯ ಮುಂದೆ ಅರುಂಧತಿ ರಾಯ್ ಧರಣಿ ಕೂತಳು. ಮೇಧಾ ಪಾಟ್ಕರ್ ಮಿಡತೆಗಳ ನೇತೃತ್ವ ವಹಿಸಿ, 'ಎಲ್ಲಾ ಮಿಡತೆಗಳನ್ನೂ ಚಳಿಗಾಲದಲ್ಲಿ ಬೆಚ್ಚಗಿನ ಜಾಗಕ್ಕೆ ಸ್ಥಳಾಂತರಿಸಬೇಕು' ಎಂದು ಉಪವಾಸ ಕುಳಿತಳು. 'ಇದು ಮೈನಾರಿಟಿಗಳಿಗೆ ಮಾಡಿದ ಅನ್ಯಾಯ' ಎಂದು ಮಾಯಾವತಿ ಆರ್ಭಟಿಸಿದ್ದೂ ಆಯಿತು.
ಆ ಮಿಡತೆಯ ಮೂಲಭೂತ ಹಕ್ಕನ್ನು ಕಾಪಾಡುವಲ್ಲಿ ವಿಫಲವಾದ ಭಾರತ ಸರ್ಕಾರಕ್ಕೆ ಅಮ್ನೆಸ್ಟಿ ಇಂಟರ್‌ನ್ಯಾಷ್‌ನಲ್ ಹಿಗ್ಗಾ ಮುಗ್ಗಾ ಛೀಮಾರಿ ಹಾಕಿತು. ಮಿಡತೆಗೆ ಬೆಂಬಲ ನೀಡಬೇಕು ಎಂದು ಅಂತರ್ಜಾಲದಲ್ಲಿ ಆನ್‌ಲೈನ್ ಪಿಟೀಷನ್‌ಗಳು ಹರಿದಾಡತೊಡಗಿದವು (ಇದಕ್ಕೆ ಬೆಂಬಲ ನೀಡಿದರೆ ದೇವರು ನಿಮಗೆ ಸ್ವರ್ಗ ಪ್ರಾಪ್ತಿ ಮಾಡುತ್ತಾನೆ ಎನ್ನುವ ತಲೆಬರಹದಲ್ಲೂ ಕೆಲವು ಪಿಟೀಷನ್‌ಗಳು ಕಾಣಿಸಿಕೊಂಡವು).
ವಿರೋಧ ಪಕ್ಷಗಳ ಎಂಪಿಗಳು ಮಿಡತೆಯ ಮೇಲಾದ ಅನ್ಯಾಯವನ್ನು ಸಹಿಸಲಾರದೆ ಸಭಾತ್ಯಾಗ ಮಾಡಿದರು. ಪಶ್ಚಿಮ ಬಂಗಾಳದ ಎಡಪಕ್ಷಗಳು 'ಬಂಗಾಳ ಬಂದ್‌'ಗೆ ಕರೆ ನೀಡಿದರೆ, ಕೇರಳದ ಎಡ ಪಕ್ಷಗಳು ನ್ಯಾಯಾಂಗ ತನಿಖೆಗೆ ಆಗ್ರಹಿಸಿದವು.
ಎಲ್ಲರೂ ಸಮಾನರಾಗಿರಬೇಕು ಎನ್ನುವ ಉದ್ದೇಶದಿಂದ ಕೇರಳದ ಸಿಪಿಎಮ್, 'ಇನ್ಮುಂದೆ ಯಾವ ಇರುವೆಯೂ ಕಷ್ಟ ಪಟ್ಟು ದುಡಿಯುವಂತಿಲ್ಲ, ಮಿಡತೆಗಿಂತ ಹೆಚ್ಚು ಸಂಪಾದನೆ ಮಾಡುವಂತಿಲ್ಲ' ಎನ್ನುವ ಕಾನೂನನ್ನು ಜಾರಿಗೊಳಿಸಿತು.
ಆಗಿನ ಸಚಿವ ಲಾಲು ಪ್ರಸಾದ್ ಯಾದವ್, ಭಾರತದ ಎಲ್ಲಾ ರೈಲುಗಳಲ್ಲೂ ಮಿಡತೆಗಳಿಗಾಗಿಯೇ ಮೀಸಲಾದ 'ಮಿಡತೆ ರಥ' ಎನ್ನುವ ಉಚಿತ ಬೋಗಿಯನ್ನು ನಿಗದಿ ಪಡಿಸಿದರು.
ನ್ಯಾಯಾಂಗ ಸಮಿತಿ ಎಚ್ಚೆತ್ತು, 'Preventation of Terrorism Against Grasshoppers Act' (POTGA) ಎನ್ನುವ ಕರಡನ್ನು ಸಿದ್ಧಗೊಳಿಸಿ, ಅದು ಮುಂಬರುವ ಚಳಿಗಾಲದಿಂದಲೇ ಜಾರಿಯಾಗಬೇಕೆಂದು ಆದೇಶ ನೀಡಿತು.
ಅಂದು ಸಚಿವರಾಗಿದ್ದ ಅರ್ಜುನ್ ಸಿಂಗ್, ಎಲ್ಲಾ ಶಿಕ್ಷಣ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಮಿಡತೆಗಳಿಗೆ 'ವಿಶೇಷ ಮೀಸಲಾತಿ' ನೀಡಿದರು.   
ಕಿಕಖಿಎಆದ ನಿಯಮಗಳನ್ನು ಅನುಸರಿಸಲು ವಿಫಲವಾದ ಕಾರಣಕ್ಕೆ ಇರುವೆಗೆ ಭಾರೀ ದಂಡ ವಿಧಿಸಲಾಯಿತು. ಅಷ್ಟು ದುಡ್ಡು ಇರುವೆಯ ಬಳಿ ಇರದ ಕಾರಣ, ಅದರ ಮನೆಯನ್ನು ಜಫ್ತಿ ಮಾಡಿ ಅದನ್ನು ಹೊರಗೆಸೆಯಲಾಯಿತು. ಸುದ್ದಿವಾಹಿನಿಗಳ ಸಮಕ್ಷಮದಲ್ಲಿ ಆ ಮನೆಯನ್ನು ಸಕಲ ಮರ್ಯಾದೆಗಳೊಂದಿಗೆ ಮಿಡತೆಗೆ ಕೊಡಲಾಯಿತು.
ಅರುಂಧತಿ ರಾಯ್ ಅದನ್ನು 'ನ್ಯಾಯದ ಗೆಲುವು' ಎಂದು ಕರೆದರೆ, ಲಾಲು ಪ್ರಸಾದ್ 'ಸಮಾಜವಾದದ ದಿಗ್ವಿಜಯ' ಎಂದು ಕೇಕೆ ಹಾಕಿದರು. ಸಿಪಿಎಮ್ ಅಂತೂ ಇದು 'ದೀನರ ಕ್ರಾಂತಿಕಾರಿ ಪುನರ್‌ಜಾಗೃತಿ' ಎಂದು ಕಣ್ಣು ಒರೆಸಿಕೊಂಡಿತು.
ಕೊನೆಯದಾಗಿ, ಭಾರತ ಸರ್ಕಾರ 'ವಿಶ್ವಸಂಸ್ಥೆಯ ಮಹಾಸಭೆ'ಯಲ್ಲಿ ಮಾತನಾಡಲು ಮಿಡತೆಗೆ ಆಹ್ವಾನ ನೀಡಿತು.
ಕೆಲವು ವರ್ಷಗಳ ನಂತರ....: ನೊಂದ ಇರುವೆ ಬಹಳ ವರ್ಷಗಳ ಹಿಂದೆಯೇ ಭಾರತ ಬಿಟ್ಟು, ಅಮೆರಿಕದಲ್ಲಿ ಶತಕೋಟಿ ಡಾಲರ್ ಬೆಲೆಯ ಕಂಪನಿಯೊಂದನ್ನು ಹುಟ್ಟುಹಾಕಿ ಹಾಯಾಗಿದೆ...
ಇಷ್ಟೆಲ್ಲ ಅನುಕೂಲ ಮಾಡಿಕೊಟ್ಟರೂ ದಿನವೂ ನೂರಾರು ಮಿಡತೆಗಳು ಭಾರತದ ಯಾವುದೋ ಮೂಲೆಯಲ್ಲಿ ಉಪವಾಸ ಬಿದ್ದು ಸಾಯುತ್ತಲೇ ಇವೆ...
ಕೊನೆಗೆ: ಕಷ್ಟ ಪಟ್ಟು ದುಡಿಯುವ ಇರುವೆಗಳೆಲ್ಲ ಹೆದರಿ ಹೊರದೇಶಕ್ಕೆ ಓಡಿ ಹೋಗಿದ್ದರಿಂದ ಮತ್ತು ನಮ್ಮ ಸರ್ಕಾರ ಮಿಡತೆಗಳಿಗೆ ಮುದ್ದು ಮಾಡಿ ತುತ್ತು ತಿನಿಸುತ್ತಾ ಕುಳಿತಿದ್ದರಿಂದ, ಭಾರತವಿನ್ನೂ ಅಭಿವೃದ್ಧಿಯಾಗುತ್ತಿರುವ ದೇಶವಾಗಿಯೇ ಉಳಿದಿದೆ!!!

ದೌರ್ಭಾಗ್ಯದ ಸಂಗತಿ
ಇತ್ತೀಚೆಗೆ ಅಫ್ಜಲ್ ಗುರುವನ್ನು ನೇಣಿಗೆ ಹಾಕಿದ ನಂತರ ಟಿವಿಯಲ್ಲಿ ಹಲವಾರು ಮಂದಿ ಕಾಣಿಸಿಕೊಂಡರು, ಸಂದರ್ಶನ ನೀಡಿದರು. ಕಾಶ್ಮೀರದ ರಾಜಕೀಯ ಪಕ್ಷವೊಂದರ ನಾಯಕಿ ಮೆಹಬೂಬ ಮುಫ್ತಿ ಹೇಳಿದ ಮಾತು ಗಮನ ಸೆಳೆಯಿತು. ಆಕೆ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳುತ್ತಿದ್ದಳು- 'ಇದು ನಿಜಕ್ಕೂ ದೌರ್ಭಾಗ್ಯದ ಸಂಗತಿ, ಅಫ್ಜಲ್ ಗುರುವಿಗೆ ತನ್ನ ಐದು ವರ್ಷದ ಮಗನನ್ನು ಕೊನೆಯ ಬಾರಿಗೆ ನೋಡುವ ಅವಕಾಶವನ್ನು ಸಹ ನಿರಾಕರಿಸಲಾಯಿತು.'
ಆದರೆ ಆಕೆಯನ್ನು ಸಂದರ್ಶಿಸುತ್ತಿದ್ದ ಆ್ಯಂಕರ್ ಕೇಳಲೇಬೇಕಾದ ಪ್ರಶ್ನೆಯೊಂದಿತ್ತು. ಆದರೆ ಅದ್ಯಾಕೋ ಆ ಪ್ರಶ್ನೆಯನ್ನು ಕೇಳಲಿಲ್ಲ.
ಪ್ರಶ್ನೆಯೇನೆಂದರೆ, 'ಕಳೆದ ಹನ್ನೊಂದು ವರ್ಷಗಳಿಂದ ಜೈಲಿನಲ್ಲಿರುವ ಅಫ್ಜಲ್ ಗುರುಗೆ ಐದು ವರ್ಷದ ಮಗ ಇರುವುದಾದರೂ ಹೇಗೆ? ಇದು ಸಹ ದೌರ್ಭಾಗ್ಯದ ಸಂಗತಿಯೇ ಅಲ್ಲವೇ?'

ಹೆಂಡತಿ ಅಂದ್ರೆ!
ಗಂಡ-ಹೆಂಡತಿ, ಮದುವೆ, ಸಂಸಾರದ ಬಗೆಗಿರುವ ಜೋಕುಗಳಿಗೆ, ವಕ್ರತುಂಡೋಕ್ತಿಗಳಿಗೆ ಲೆಕ್ಕವಿಲ್ಲ. ಬರೆದಷ್ಟೂ ಮುಗಿಯುವುದಿಲ್ಲ. ಗಂಡ-ಹೆಂಡತಿ ಬಗ್ಗೆ ಹೆಚ್ಚೆಂದರೆ ನೂರಿನ್ನೂರು ವಕ್ರತುಂಡೋಕ್ತಿಗಳನ್ನು ಬರೆಯಬಹುದು ಎಂದು ಅಂದುಕೊಂಡಿದ್ದೆ. ಆದರೆ ಇಲ್ಲಿ ತನಕ ಬರೆದಿದ್ದು ಒಂದೂವರೆ ಸಾವಿರವನ್ನು ದಾಟಿರಬಹುದು. ಪ್ರತಿದಿನ ಬರೆದರೂ ಖಾಲಿಯಾಗದಷ್ಟಿವೆಯೆಂಬುದು ನಿಮಗೂ ಗೊತ್ತಾಗಿರಲಿಕ್ಕೆ ಸಾಕು. 'ಹೆಂಡತಿ ಎಂಬುವವಳು ಇರುವ ತನಕ ವಕ್ರತುಂಡೋಕ್ತಿಯೂ ಇರುತ್ತದೆ' ಎನ್ನುವುದು ವಕ್ರತುಂಡೋಕ್ತಿಯಲ್ಲ.
ಹೆಂಡತಿಯ ಕುರಿತು ಒಂದು ತಾಜಾ ವಕ್ರತುಂಡೋಕ್ತಿ: 'ಹೆಂಡತಿ ಅಂದ್ರೆ ವೆಬ್‌ಸೈಟ್‌ನ ಟರ್ಮ್ಸ್ ಆಂಡ್ ಕಂಡಿಷನ್ ಇದ್ದಂತೆ. ಅದನ್ನು ಯಾರೂ ಓದೋಲ್ಲ, ಓದಿದರೂ ಅರ್ಥವಾಗುವುದಿಲ್ಲ. ಆದರೆ ಎಲ್ಲರೂ accept and agree ಎಂಬುದರ ಮೇಲೆ ಕ್ಲಿಕ್ ಮಾಡ್ತಾರೆ.'

ಹುಲಿ ಸಾಯಿಸುವುದು ಹೇಗೆ?
ಭಲೇ ಭಲೇ ಐಡಿಯಾಗಳು ಬರುತ್ತಿವೆ. ಹುಲಿ ಸಾಯಿಸಲು ಇಷ್ಟೊಂದು ಮಾರ್ಗಗಳಿವೆಯಾ ಎಂದು ನಿಜಕ್ಕೂ ಅಚ್ಚರಿಯಾಗುತ್ತಿದೆ. ಈ ವಾರ ಮತ್ತಷ್ಟು ಮಾದರಿ:
ಜಗದೀಶ ಶೆಟ್ಟರ್ ಮಾದರಿ- ಹುಲಿ ಘರ್ಜಿಸುತ್ತದೆ. ಶೆಟ್ಟರ್ ನೋಡುತ್ತಾರೆ. ಪುನಃ ಹುಲಿ ಘರ್ಜಿಸುತ್ತದೆ. ಶೆಟ್ಟರ್ ನೋಡುತ್ತಾರೆ. ಮತ್ತೆ ಹುಲಿ ಘರ್ಜಿಸುತ್ತದೆ. ಶೆಟ್ಟರ್ ನೋಡುತ್ತಾರೆ. ಇನ್ನೊಮ್ಮೆ ಹುಲಿ ಘರ್ಜಿಸುತ್ತದೆ. ಶೆಟ್ಟರ್ ನೋಡುತ್ತಾರೆ. ಹುಲಿ ಅಲ್ಲಿಯೇ ಸತ್ತು ಹೋಗುತ್ತದೆ.
ಸಿದ್ದರಾಮಯ್ಯ ಮಾದರಿ- ಹುಲಿ ಘರ್ಜಿಸುತ್ತದೆ. ಹೀಗೆ ಘರ್ಜಿಸುವುದು ಆಡಳಿತ ಪಕ್ಷದವರ ಕೆಲಸವಲ್ಲ. ಅದೇನಿದ್ದರೂ ಪ್ರತಿಪಕ್ಷದ ನಾಯಕನ ಕೆಲಸ. ನಿನಗೆ ನಿನ್ನ ಕೆಲಸವೇನೆಂಬುದು ಗೊತ್ತಿಲ್ಲ. ಮೊದಲು ಅದೇನೆಂಬುದನ್ನು ತಿಳಿದುಕೋ ಎಂದು ಗದರಬೇಕು. ಹುಲಿ ಗಲಿಬಿಲಿಗೊಂಡು ಸ್ಥಳದಲ್ಲಿಯೇ ಅಸುನೀಗುತ್ತದೆ.
ಅಂಬರೀಷ್ ಮಾದರಿ- ಹುಲಿ ಘರ್ಜಿಸುತ್ತದೆ. ಚೆನ್ನಾಗಿ ಗುಂಡು ಹಾಕಿ 'ನನ್ಮಗನೇ, ನಾನು ಯಾರು ಅಂತ ತಿಳಿಯಾಕಿಲ್ವ? ಸುಮ್ ಸುಮ್ನೆ ಗುರ್ ಅಂದ್ರೆ ಬಂದು ಎದೆಗೊದ್ದುಬಿಡ್ತೀನಿ' ಅಂತ ಹೇಳಬೇಕು. ಹುಲಿ ಭಯಭೀತಿಯಿಂದ ಸತ್ತು ಹೋಗುತ್ತದೆ.

ವಕ್ರತುಂಡೋಕ್ತಿ
'ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ' ಎಂಬ ಪುಸ್ತಕವನ್ನು ದಯವಿಟ್ಟು ಯಾರಿಗೂ ಕೊಡುವುದಕ್ಕೆ ಹೋಗಬೇಡಿ. ಕಾರಣ ಅದನ್ನು ವಾಪಸ್ ಮಾಡಲು ಅವರು ಬದುಕಿರುವುದಿಲ್ಲ.

-ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.