Hmmm... ಪಾಂಚ್ ...ಜಯಂತ ಕಾಯ್ಕಿಣಿ, ಸಾಹಿತಿ
-ಜಯಂತ ಕಾಯ್ಕಿಣಿ, ಸಾಹಿತಿ
-ನೀವು ಸಾಹಿತಿ ಆಗಿ ಚಿತ್ರರಂಗಕ್ಕೆ ಬಂದಮೇಲೆ, ಹ್ಯಾಂಡ್‌ಸಮ್ ಆಗಿರೋ ನಿಮ್ಮನ್ನ ನೋಡಿ 'ಇದಕ್ಕಿಂಥ ಬೇಗ ಇನ್ನು ಸಿಗಬಾರದಿತ್ತೆ ನೀನು' - ಹೀರೋ ಮಾಡ್‌ಬಿಡ್‌ತಿದ್ವಿ, ಅಂತ ಕೆಲವು ಡೈರೆಕ್ಟರ್‌ಗಳು ಮಾತಾಡಿಕೊಂಡ್ರಂತೆ?
ಒಂದು ವೇಳೆ ಹಂಗಾಗಿದ್ರೆ, ಕನಿಷ್ಠಪಕ್ಷ, 'ಓದು ಬರಹ' ಬರೋ ಹೀರೋಗಳ ಸಂಖ್ಯೆನಾದ್ರೂ ಜಾಸ್ತಿ ಆಗ್ತಿತ್ತೋ ಏನೋ!
-ಜನ, ಕನ್ನಡ ಸಿನಿಮಾ ನೋಡಲ್ಲ ಅಂತಾರೆ. ಇದಕ್ಕೆ ನೀವೇನಂತೀರ?
ನೋಡ್ತಿದಾರಲ್ಲ, ಇನ್ನೆಷ್ಟು ನೋಡಬೇಕಪ್ಪಾ? ಸಿನಿಮಾ ಪತ್ರಕರ್ತರಿಗಂತೂ ಸಿನಿಮಾ ನೋಡೋಕೆ ಸಂಬಳ ಕೊಡ್ತಾರೆ, ಆದ್ರೆ ಸಾಮಾನ್ಯ ಜನ, ನಿಮ್ಮ ಥರಾ ಪ್ರತಿ ಶುಕ್ರವಾರ 'ಚಿತ್ರ'ಹಿಂಸೆ ಅನುಭವಿಸೋಕಾಗುತ್ತಾ?
-ಅದ್ಸರಿ, ನಿಮ್ಮ ಹಾಡುಗಳಲ್ಲಿ 'ಜಾತ್ರೆ' 'ಸಂತೆ' ಅನ್ನೋ ಪದಗಳನ್ನೇ ಜಾಸ್ತಿ ಬಳಸ್ತೀರಿ, ಯಾಕೆ?
ಜಾತ್ರೆ, ಸಂತೆ ಅಂತ ಬರೆದಾಗ, ಗಾಂಧಿನಗರದ ಭಾಷೆಯಲ್ಲಿ ಅದೇನೋ ಹೇಳ್ತಾರಲ್ಲ 'ಕೇಳ್ತಾ ಇದ್ರೆ, ಹಂಗೆ ಕಳ್ದೋಗ್‌ಬಿಡ್‌ಬೇಕು ಸಾರ್' ಅಂತ, ಹಂಗಾಗೋ ಛಾನ್ಸ್ ಇರುತ್ತೆ ಅಲ್ವಾ ಅದಕ್ಕೆ!
-'ಅನಿಸುತಿದೆ ಯಾಕೋ ಇಂದು' ಹಾಡು ಸೂಪರ್ ಹಿಟ್ ಆಗಿ ಟಿವಿ ಚಾನೆಲ್‌ನವ್ರು ಬಂದು ಬೈಟ್ಸ್ ತಗೊಳ್ಳುವಾಗ, 'ಈಗ ನಿಮಗೆ ಏನನ್ನಿಸುತ್ತಿದೆ?' ಅಂತ ಮತ್ತೆ ಕೇಳಿದಾಗ ನಿಮಗೆ 'ಏನನ್ನಿಸಿತು'?
ಬೇರೆ ಬೇರೆ ಚಾನೆಲ್‌ನವರಿಗೆ 'ಅದೇ ಪ್ರೀತಿ, ಬೇರೆ ಬೇರೆ ರೀತಿ ಹೇಗಂತ ಹೇಳೋದು' ಅಂತ ಕನ್‌ಫ್ಯೂಸ್ ಆಯ್ತು!
-ಗಾಂಧಿನಗರ ಸಾಹಿತಿಗಳಿಗೆ ಕೊಡೋ ಮರ್ಯಾದೆ ಅಷ್ಟಕ್ಕಷ್ಟೆ, ಆದ್ರೂ ನಿಮಗೆ ಮಾತ್ರ ಹೇಗೆ ಇಷ್ಟೊಂದು ಮರ್ಯಾದೆ ಸಿಗ್ತಾ ಇದೆ?
ಕನ್ನಡ ಇಂಡಸ್ಟ್ರಿಯವ್ರಿಗೆ ಬಾಂಬೆಯಿಂದ ಕರೆಸಿರೋವ್ರನ್ನ ಕಂಡ್ರೆ ಪ್ರೀತಿ ಜಾಸ್ತಿ ಅಲ್ವಾ, ಬಹುಶಃ, ನಾನು ಮೊದಲು ಬಾಂಬೆಯಲ್ಲಿದ್ದೆ ಅಂತ ಇಷ್ಟು ರೆಸ್ಪೆಕ್ಟ್ ಸಿಕ್ತಿದೆ ಅನ್ನೋದು ನನ್ನ ಅನುಮಾನ!
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಡ್ರಾಯಿಂಗ್-ಪೇಂಟಿಂಗ್ ಬಗ್ಗೆ ಎಷ್ಟೇ ಜ್ಞಾನ ಇದ್ದರೂ ಚಿತ್ರಕಲೆಯ ಕೆಲವೊಂದು ವಿಭಾಗಗಳಲ್ಲಿ ವಿಶೇಷ ಪರಿಣತಿ ಬೇಕಿರುತ್ತದೆ. ಈ ಲೋಗೋ ವಿನ್ಯಾಸ ಕೂಡಾ ಅದರಲ್ಲಿ ಒಂದು. ಇದೊಂಥರಾ ಶಾರ್ಟ್ ಅಂಡ್ ಸ್ವೀಟ್ ಎನಿಸುವ ಕೆಲಸ. ಕಡಿಮೆ ಕೆಲಸದಲ್ಲಿ ಹೆಚ್ಚು ದುಡ್ಡು ಗಳಿಸುವ ಅವಕಾಶ. ಕೆಲವೊಮ್ಮೆ ಪ್ರತಿಷ್ಠಿತ ಕಂಪನಿಗಳು ಮತ್ತು ಸರ್ಕಾರದ ವತಿಯಿಂದಲೂ ಈ ಲೋಗೋ ವಿನ್ಯಾಸದ ಆಫರ್‌ಗಳು ಬರುತ್ತವೆ. ಇತ್ತೀಚೆಗೆ ಬದಲಾದ ನಮ್ಮ ರುಪಾಯಿಯ ಸಿಂಬಲ್ ವಿನ್ಯಾಸಕ್ಕೂ 'ಯೇ ಮೇರೆ ವತನ್ ಕೆ ಲೋಗೋ, ನಮ್ಮ ರುಪಾಯಿಗೊಂದು ಹೊಸ ಲೋಗೋ ಮಾಡಿಕೊಡಿ' ಎಂಬ ಆಫರ್ ಬಂದಿದ್ದನ್ನು ನೋಡಿರುತ್ತೀರಿ. ಇಂಥಹ ಲೋಗೋ ವಿನ್ಯಾಸ ಮಾಡುವುದು ಹೇಗೆ ಎನ್ನುವ ಆಸಕ್ತಿ ನಿಮಗಿದ್ದರೆ ಈ ವೆಬ್‌ಸೈಟ್‌ಗಳನ್ನು ನೋಡಿ. http://bit.ly/PBWRVr, http://bit.ly/RUUnRl, http://bit.ly/UsOiLC, http://bit.ly/AGYFc, http://bit.ly/XSiFJJ
ಹರಿ-ಕಥೆ
ಕಾಲೇಜಿನ ರನ್ನಿಂಗ್ ರೇಸ್‌ನಲ್ಲಿ ಖೇಮು ಯಾವಾಗಲೂ ಫಸ್ಟ್ ಬರುತ್ತಿದ್ದ. ಹಾಗಂತ ಅವನಿಗೆ ಕೆಪಾಸಿಟಿ ಇತ್ತು ಅಂತಲ್ಲ. ಓಡುವಾಗ ಏನಾದ್ರೂ ಮೋಸ ಮಾಡಿ ಇನ್ನೊಬ್ಬರು ಫಸ್ಟ್ ಬರೋದನ್ನು ತಪ್ಪಿಸಿಬಿಡುತ್ತಿದ್ದ. ನಂತರ ಹಾಸ್ಟೆಲಿಗೆ ಬಂದು ಎಲ್ಲರೆದುರು ಜಂಭ ಕೊಚ್ಚಿಕೊಳ್ಳುತ್ತಿದ್ದ. ಅದಲ್ಲದೆ ಅವನಿಗಿದ್ದ ಇನ್ನೊಂದು ರೋಗ ಎಂದರೆ ಯಾರು ಏನೇ ಹೇಳೋಕೆ ಬಂದರೂ 'ನೀವೆಲ್ಲಾ ದಡ್ಡ ಶಿಖಾಮಣಿಗಳು, ಮೈ ಫುಟ್' ಎನ್ನುತ್ತಾ ಉಡಾಫೆಯಿಂದ ರಿಯಾಕ್ಟ್ ಮಾಡ್ತಿದ್ದ. ಇವನಿಗೇನಾದರೂ ಮಾಡಿ, ಬುದ್ಧಿ ಕಲಿಸಬೇಕು ಎಂದು ಹುಡುಗರು ಮಾತಾಡಿಕೊಳ್ಳುತ್ತಿದ್ದರೂ ಏನೂ ಆಗಿರಲಿಲ್ಲ. ಸರಿ, ಒಂದು ದಿನ ಮತ್ತೆ ರನ್ನಿಂಗ್ ರೇಸ್ ಇತ್ತು. ಅವತ್ತು ಬೆಳಿಗ್ಗೆ ಹಾಸ್ಟೆಲಿನ ವಾಚ್‌ಮನ್ ಒಂದು ಗಿಳಿ ತಂದ. ಅದರ ಕೊಕ್ಕು ತುಂಬಾ ಉದ್ದ ಮತ್ತು ಚೂಪಾಗಿತ್ತು. ಅದನ್ನು ಕೆಲವು ಹುಡುಗರಿಗೆ ತೋರಿಸಿ, 'ಇದು ಸಾಮಾನ್ಯ ಗಿಳಿ ಅಲ್ಲ, ಇದರ ಹೆಸರು 'ಡೆಡ್ಲೀ ಗಿಣಿ', ಬೇಕಿದ್ರೆ ನೋಡಿ' ಎನ್ನುತ್ತಾ ವಾಚ್‌ಮನ್ ಗಿಣಿ ಕಡೆಗೆ ತಿರುಗಿ, 'ಡೆಡ್ಲೀ ಗಿಣಿ, ಟೇಬಲ್' ಎಂದ. ಇದ್ದಕ್ಕಿದ್ದಂತೆ ಗಿಣಿ, ಟೇಬಲ್ ಮೇಲೆ ಹಾರಿ ಎರಡೇ ಕ್ಷಣದಲ್ಲಿ ಇಡೀ ಟೇಬಲ್ ಅನ್ನು ತನ್ನ ಕೊಕ್ಕಿನಿಂದ ಕುಕ್ಕಿ ಕುಕ್ಕಿ ಪುಡಿ ಪುಡಿ ಮಾಡಿಬಿಟ್ಟಿತು. ಅದನ್ನು ನೋಡಿ ಗಾಬರಿಯಾದರೂ, ಇನ್ನೊಬ್ಬ ಹುಡುಗ ಮೆಲ್ಲನೆ 'ಡೆಡ್ಲೀ ಗಿಣಿ, ವಿಂಡೋ' ಎಂದ. ಗಿಣಿ ಕಿಟಕಿಯ ಕಡೆಗೆ ಹಾರಿ, ಕಿಟಕಿಯ ಗ್ಲಾಸನ್ನು ಕುಕ್ಕಿ ಅದರ ಲವಲೇಶವೂ ಇಲ್ಲದಂತೆ ಮಾಡಿಬಿಟ್ಟಿತು. ಸ್ತಂಭೀಭೂತರಾಗಿ ಎಲ್ಲರೂ ಬಾಯಿತೆರೆದುಕೊಂಡು ಮಾತನಾಡದೆ ನಿಂತಿದ್ದಾಗ ಖೇಮು ಅಲ್ಲಿಗೆ ಬಂದ. ಎಲ್ಲರೂ ಸುಮ್ಮನೆ ನಿಂತಿದ್ದು ನೋಡಿದ, ಪಕ್ಕದಲ್ಲಿ ಗಿಣಿ ಕೂತಿತ್ತು. 'ಏನಿದು?' ಅಂದ ಖೇಮು. ಅದಕ್ಕೆ ಹುಡುಗನೊಬ್ಬ ಹೇಳಿದ 'ಇದು ಡೆಡ್ಲೀ ಗಿಣಿ'. ಎಂದಿನಂತೆ ಖೇಮು ತಕ್ಷಣ ರಿಯಾಕ್ಟ್ ಮಾಡಿದ 'ಡೆಡ್ಲೀ ಗಿಣಿ? ಮೈ ಫುಟ್'!
ಸ್ಯಾಂಡಲ್‌ವುಡ್
ಮೊನ್ನೆ ಮಣಿಕಾಂತ್ ಅವರ 'ಅಪ್ಪ ಅಂದ್ರೆ ಆಕಾಶ' ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಚಿತ್ರ ನಿರ್ದೇಶಕ ಗುರುಪ್ರಸಾದ್ ಮಾತು ಶುರು ಮಾಡಿದ್ರು, 'ನಾನು ಹೊಸದೇನನ್ನಾದರೂ ಹೇಳಿದರೆ, ಚಪ್ಪಾಳೆ ಹೊಡೀರಿ, ಹಳೇದು ಅನ್ನಿಸಿದರೆ ವಿಶಲ್ ಹೊಡೀರಿ'. ನಂತರ ಮಾತು ಶುರುವಾಗಿ ಗುರು ನಿರರ್ಗಳವಾಗಿ ನೆರೆದಿದ್ದ ಜನರನ್ನು ಎಂಟರ್‌ಟೈನ್ ಮಾಡಿದರು. ಆದರೆ ಅಲ್ಲಿ 'ರಿಪೀಟ್ ಆಡಿಯೆನ್ಸ್' ಇದ್ದುದು, ಗುರು ಗಮನಕ್ಕೆ ಬರಲಿಲ್ಲ. ಅವತ್ತು ಗುರು ಮಾತುಗಳ ಓಘಕ್ಕೆ ಇಡೀ ಸಭಾಂಗಣ ವಿಶಲ್ ಸದ್ದಿನಿಂದ ತುಂಬಿಹೋಗಬೇಕಿತ್ತು ಎನಿಸಿದರೆ ಅದು ಇತ್ತೀಚಿಗೆ ಗುರು ಭಾಗವಹಿಸಿದ ಇನ್ನೊಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದವರ ಅಭಿಪ್ರಾಯ. ತಮ್ಮ ಮಾತಿನ ಧಾಟಿಯನ್ನೂ ಸೇರಿಸಿದಂತೆ, 'ಕರ್ಣಾಟಕ' ಎಕ್ಸ್‌ಪ್ರೆಸ್, ಎಣ್ಣೆ ಕುಡಿದ ಕನ್ನಡದ ಹಣತೆ, ದುಡ್ಡು ಮಾಡುವುದು ಹೇಗೆ, ಸೆಲ್ಫ್ ಮಾರ್ಕೆಟಿಂಗ್, ಹೀಗೆ, ಅಂದು ಅಲ್ಲಿ ಹೇಳಿದ್ದನ್ನೇ ಗುರು ಇಲ್ಲಿಯೂ ಇಂಚಿಂಚೂ ಬಿಡದೆ ಹೇಳುತ್ತಿದ್ದರೆ, 'ಕಮಾನು, ರಿಪೀಟು' ಎನ್ನುತ್ತಾ ಕೂಡುವ ಸರದಿ ಬಹುತೇಕರದ್ದಾಗಿತ್ತು. ಅಂತೂ 'ಅಪ್ಪ ಅಂದ್ರೆ ಆಕಾಶ' ಪುಸ್ತಕ ಬಿಡುಗಡೆಯಲ್ಲಿ, ತಮಗೆ ದೊರೆತ, ಎರಡನೇ ಅವಕಾಶದಲ್ಲೂ ಗುರು, ಆಕಾಶತೋರಿಸಿದ್ದನ್ನು ನೋಡಿ, ಕೆಲವರು 'ಕೇಳದೆ ನಮಗೀಗ' ಹಾಡು ಗುನುಗುತ್ತಿದ್ದುದು ಮಾತ್ರ ನಿಜ.
ಡಬ್ಕುಡಬಲ್ ತುದಾಂಡಲ್...
- ಬಸ್ಸಲ್ಲಿ ಕುಳಿತಿದ್ದವನೊಬ್ಬ ಕಣ್ಣುಮುಚ್ಚಿಕೊಂಡಿದ್ದನ್ನು ನೋಡಿ ಪಕ್ಕದವನು ಕೇಳಿದ
'ಯಾಕ್ರೀ, ಹುಷಾರಿಲ್ವಾ?'
'ಹಾಗೇನಿಲ್ಲ, ಆದ್ರೆ, ಪಾಪ, ಈ ವಯಸ್ಸಾದವರು ನಿಂತ್ಕೊಂಡಿರೋದನ್ನ ನನ್ ಕೈಲಿ ನೋಡೋಕಾಗಲ್ಲ!'
- ವಿಚಿತ್ರ
ಒಳಗೊಂದು ಹೊರಗೊಂದು ಇಲ್ಲದೆ, ಅನಿಸಿದ್ದನ್ನು ಫಟಾಫಟ್ ನೇರವಾಗಿ ಹೇಳುವ ರೆಬೆಲ್‌ಸ್ಟಾರ್ ಅಂಬರೀಶ್‌ಗೆ 'ಅಂದರ್ ಬಾಹರ್' ಆಟ ಯಾಕಿಷ್ಟ?
- ಸಾರಿಗೆ ಗಾದೆಗಳು
ಬಾಯಿಬಿಟ್ಟು ಕೇಳದಿದ್ರೆ, ಬಿಎಂಟಿಸಿ ಡ್ರೈವರ್ರೂ ಸ್ಟಾಪ್ ಕೊಡಲ್ಲ.
ಕೆಎಸ್‌ಆರ್‌ಟಿಸಿಗೆ ಜ್ವರ ಬಂದ್ರೆ ಬಿಎಂಟಿಸಿಗೆ ಬರೆ ಹಾಕಿದ್ರಂತೆ.
---
ಕಿರಿದಾದ ದಾರಿಯಲ್ಲಿ ಎರಡು ಟ್ರಕ್‌ಗಳು ಎದುರಾದವು. ಇಬ್ಬರೂ ಹಿಂದೆ ಸರಿಯಲು ರೆಡಿ ಇಲ್ಲ. ಇಬ್ಬರೂ 'ಯೂ ಗೋ' 'ಯೂ ಗೋ' ಎನ್ನುತ್ತಿದ್ದರೇ ವಿನಃ ತಮ್ಮ ಇಗೋ ಕಡಿಮೆ ಮಾಡಿಕೊಳ್ಳಲು ತಯಾರಿಲ್ಲ. ಒಬ್ಬ ತಾನು ಏನು ಮಾಡಿದರೂ ಹಿಂದೆ ಸರಿಯೊಲ್ಲ ಎಂಬುದನ್ನು ತೋರಿಸಲು ಒಂದು ಪೇಪರ್ ತೆಗೆದು ಅಗಲಿಸಿ
ಇನ್ನೊಬ್ಬನ ಮುಖ ನೋಡಿ ಓದಲಾರಂಭಿಸಿದ. ಅದಕ್ಕೆ ಇವನ ರಿಯಾಕ್ಷನ್ 'ನಿಂದು ಮುಗಿದ ಮೇಲೆ ನಂಗೆ ಕೊಡು, ನಾನೂ ಓದ್‌ಬೇಕು'
-ಹರಿ
harikannadaprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

