ಸ್ಟ್ರೈಗ ಎಂಬ ಕಳೆ, ಕೈಗೆಟುಕಿಸದು ಬೆಳೆ
ಸ್ಟ್ರೈಗ ಎಂಬ ಕಳೆ ಸಾಮಾನ್ಯವಾಗಿ ಜೋಳ, ಮೆಕ್ಕೆ ಜೋಳ ಮತ್ತು ಕಬ್ಬಿನಂತಹ ಬೆಳೆಗಳ ಬೇರಿಗೆ ಅಂಟುಕೊಂಡು ಬೆಳೆಯುತ್ತದೆ. ಇದನ್ನು ವಿಜ್ಞಾನಿಗಳು "ಪರೋಪಜೀವಿ" ಎಂದು ಕರೆಯುತ್ತಾರೆ. ಸ್ಟ್ರೈಗ, ಬೇರುಗಳನ್ನು ಹೊಕ್ಕು ಸತ್ವಾಂಶವನ್ನು ಹೀರಿಕೊಂಡು ಬೆಳೆಗಳನ್ನು ಸಂಪೂರ್ಣವಾಗಿ ಕೊಂದು ಹಾಕುತ್ತದೆ. ಒಂದು ಅಂದಾಜಿನ ಪ್ರಕಾರ ಸ್ಟ್ರೈಗದಿಂದ 50ರಿಂದ 80 ಪ್ರತಿಶತ ಬೆಳೆಗಳ ನಷ್ಟವಾಗುತ್ತದೆ. ಆಫ್ರಿಕಾದಲ್ಲಂತೂ ಇದು ಮೆಕ್ಕೆ ಜೋಳಕ್ಕೆ ಎಷ್ಟು ಹಾನಿ ಮಾಡಿದೆ ಎಂದರೆ, ರೈತರು ತಮ್ಮ ಜಮೀನನ್ನೇ ಬಿಟ್ಟು ಗುಳೆ ಹೋಗಿದ್ದಾರೆ. ಈ ಕಳೆ ಆಫ್ರಿಕಾದಿಂದ ಹಿಡಿದು ಏಷ್ಯಾ ಖಂಡತನಕ ಹರಡಿದೆ. ಮೊದ ಮೊದಲು, ಭಾರತದಲ್ಲಿ ಮೆಕ್ಕೆ ಜೋಳ ಬೆಳೆಯುತ್ತಿರಲಿಲ್ಲ. ಸುಮಾರು 70ರ ದಶಕದಿಂದ ಭಾರತದಲ್ಲಿ ಮೆಕ್ಕೆಜೋಳವನ್ನು ಬೆಳೆಯಲು ಆರಂಭಿಸಲಾಯಿತು. 90ರ ದಶಕದಿಂದೀಚೆಗೆ ಅದನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ವಿಶೇಷವಾಗಿ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಇನ್ನು ದಕ್ಷಿಣ ಭಾರತದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಪ್ರತಿ ವರ್ಷ ಹೊಸ ರೀತಿಯ ಮಿಶ್ರ ತಳಿಗಳು ಕೃಷಿಗೆ ಬರಹತ್ತಿವೆ.ಈ ರೀತಿ ಕೃಷಿಗೆ ಹೊಸ ತಳಿಗಳು ಬರುವಾಗ ಅದರ ಜೊತೆ ಸ್ಟ್ರೈಗ ಎಂಬ ಕಳೆ ಬರದೇ ಇರುವುದಿಲ್ಲ. ಅದು ಬಂದಾಗ ಅದನ್ನು ನಿಯಂತ್ರಿಸುವುದು ಬಹಳ ಕಷ್ಟ. ಅದು ಬರದ ಹಾಗೆ ಜಾಗ್ರತೆ ವಹಿಸಬೇಕು. ಅಂದ ಹಾಗೆ, ಸ್ಟ್ರೈಗ ಜೋಳಕ್ಕೆ ಆಗಲೇ ಬಂದೆರಗಿದೆ.
ಈ ಕಳೆಯ ನಿಯಂತ್ರಣಕ್ಕೆ ಸರ್ವೇ ಸಾಧಾರಣವಾದ ಕೃಷಿ ಕ್ರಮಗಳು ಲಭ್ಯವಿವೆ. ಆದರೆ ಆ ತರಹದ ಕ್ರಮಗಳಿಂದ ಕಳೆ ನಿಯಂತ್ರಣ ಸಂಪೂರ್ಣವಾಗಿ ಸಾಧ್ಯವಾಗುವುದಿಲ್ಲ. ಈ ನಿಯಂತ್ರಣಾ ವಿಧಾನಗಳ ಜೊತೆಗೆ ಆಧುನಿಕ ತಂತ್ರಜ್ಞಾನವನ್ನೂ ಅಳವಡಿಸಿಕೊಳ್ಳಬೇಕಿದೆ. ಪ್ರಸ್ತುತ, ಎರಡು ತರಹದ ಜೈವಿಕ ತಂತ್ರಜ್ಞಾನದಿಂದ ಆವಿಷ್ಕಾರವಾದ ಮೆಕ್ಕೇ ಜೋಳದ ತಳಿಗಳು ತಯಾರಾಗಿವೆ. ಸಮಗ್ರ (integrated) ರೀತಿಯಲ್ಲಿ ಕಳೆ ನಿಯಂತ್ರಣ ಮಾಡಬೇಕಾದರೆ ಎಲ್ಲ ತರಹದ ಸಾಧನಗಳನ್ನು ಉಪಯೋಗಿಸಬೇಕು.
ಸದ್ಯಕ್ಕೆ ಜೋಳಕ್ಕೆ ತಗುಲುವ ಈ ಕಳೆಯನ್ನು ಸಾಧಾರಣ ಕೃಷಿ ಕ್ರಮದಿಂದ ನಿಯಂತ್ರಿಸಬಹುದಾಗಿದೆ. ಅದಲ್ಲದೆ, ಜೋಳದ ವಿವಿಧ ತಳಿಗಳಲ್ಲಿ ಸತ್ತಾತ್ಮಕವಾದ ಸ್ಟ್ರೈಗ ಕಳೆಯನ್ನು ತಡೆಗಟ್ಟುವ ಗುಣಾಣುಗಳನ್ನು ತಳಿಶಾಸ್ತ್ರದ ತಂತ್ರಜ್ಞಾನದಿಂದ ಹೊಸ ಮಿಶ್ರಣ ತಳಿಗೆ ಅಳವಡಿಸಬಹುದು. ಹಾಗಿದ್ದೂ, ಸಹ ಅಂಗಾಂಶ ಕೃಷಿ (tissue culture)ಯಿಂದ ಆವಿಷ್ಕರಿಸಿದ ಜೋಳ ಮತ್ತು ಮೆಕ್ಕೆ ಜೋಳದ ತಳಿಗಳೂ ಲಭ್ಯವಿವೆ ಮತ್ತು ರೈತರು ಅವುಗಳನ್ನು ಬೆಳೆಸುತ್ತಿದ್ದಾರೆ. ಆದರೆ ಅತಿ ಬಲಿಷ್ಠ ರಾಸಾಯನಿಕ ಕಳೆ ನಾಶಕಗಳಾದ "ಇಮಿಡಜೋಲ್" ಅಥವಾ "ಇಮಿ" ಮತ್ತು "ರೌಂಡ್‌ಅಪ್" ಎಂಬ ರಾಸಾಯನಿಕಗಳನ್ನು ತಡೆ ಹಿಡಿಯುವ ತಳಿಗಳನ್ನು, ಆಧುನಿಕ ತಂತ್ರಜ್ಞಾನದಿಂದ ಆವಿಷ್ಕರಿಸಿದ ಜೋಳ ಮತ್ತು ಮೆಕ್ಕೆ ಜೋಳದ ತಳಿಗಳನ್ನು ಭಾರತದಲ್ಲಿ ಕೆಲ ಕಡೆ ಪ್ರಯೋಗಿಸಿ ನಿಲ್ಲಿಸಿಬಿಟ್ಟಿದ್ದಾರೆ. ಕೆಲವು ರಾಜ್ಯಗಳು ಈ ತಳಿಗಳನ್ನು ವಿರೋಧಿಸಿದ್ದರಿಂದ ಇವುಗಳ ಪ್ರಯೋಗವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಿಪರ್ಯಾಸವೆಂದರೆ, ರಾಸಾಯನಿಕ ಕಳೆನಾಶಕಗಳನ್ನು ತಡೆಯುವ ತಳಿಗಳನ್ನು 1996ರಿಂದ ಸುಮಾರು 30 ದೇಶಗಳಲ್ಲಿ ಲಕ್ಷಾನುಗಟ್ಟಲೆ ಎಕರೆಗಳಲ್ಲಿ, ಯಾವ ತೊಂದರೆಯಾಗದಂತೆ ರೈತರು ಬೆಳೆಯುತ್ತಾ ಬಂದಿದ್ದಾರೆ ಮತ್ತು ಅದರಿಂದ ಬಹಳ ಲಾಭ ಗಳಿಸುತ್ತಿದ್ದಾರೆ. ಆದರೆ, ಅದು ಭಾರತದಲ್ಲಿ ರೈತರಿಗೆ ಲಭ್ಯವಾಗುತ್ತಿಲ್ಲ. ಯುರೋಪ್ ರಾಷ್ಟ್ರಗಳು ಇವುಗಳನ್ನು ಬೆಳೆಯದಿದ್ದರೂ, ಸುಮಾರು ನಾಲ್ಕು ನೂರು ಡಾಲರ್‌ಗಳಷ್ಟು ಜೈವಿಕ ತಂತ್ರಜ್ಞಾನದ ಮೆಕ್ಕೆ ಜೋಳವನ್ನು ಆಕಳ ಮೇವಿಗಾಗಿ ಹದಿನೈದು ವರ್ಷದಿಂದ ಆಮದು ಮಾಡಿಕೊಳ್ಳುತ್ತಿವೆ. ಇನ್ನು ಭಾರತದಲ್ಲೇ ರೈತರು ಜೈವಿಕ ತಂತ್ರಜ್ಞಾನದಿಂದ ಆವಿಷ್ಕರಿಸದ ಕಳೆನಾಶಕ ತಡೆಯುವ ಭತ್ತ, ಹತ್ತಿ, ಮೆಕ್ಕೆಜೋಳ ಮತ್ತು ಜೋಳವನ್ನು ಬೆಳೆಯುತ್ತಿದ್ದಾರೆ. ವಿಪರ್ಯಾಸವೆಂದರೆ ವಿವಿಧ ವಿಧಾನಗಳಿಂದ ತಯಾರಾದ ತಳಿಗಳನ್ನು ಯಾವುದೇ ತೊಂದರೆಯಿಲ್ಲದೆ ಬೆಳೆಯಬಹುದು, ಆದರೆ ಜೈವಿಕ ತಂತ್ರಜ್ಞಾನ ಉಪಯೋಗಿಸಿದರೆ, ಅವುಗಳು ನಿಷೇಧ! ಈ ನಗೆಪಾಟಲಿನ ಮತ್ತು ದುಃಖಕರ ಸಂಗತಿಗೆ ಕುಲಾಂತರಿ ತಂತ್ರಜ್ಞಾನ ವಿರೋಧದ ಚಳವಳಿಯೇ ಕಾರಣ. ಇದರಿಂದ, ಭಾರತದ ಬಡ ರೈತನಿಗೆ ಆಗುತ್ತಿರುವ ಅನ್ಯಾಯ ಅಷ್ಟಿಷ್ಟಲ್ಲ. ಪಾಪ, ಅವರಿಗೆ ಇದ್ಯಾವುದರ ಅರಿವೇ ಇಲ್ಲ.
ಇನ್ನು (interference RNA)ಎಂಬ ತಂತ್ರಜ್ಞಾನದಿಂದ ತಯಾರಾಗಿರುವ ಸ್ಟ್ರೈಗ ಕಳೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೋಧಿಸುವ ತಳಿಗಳೂ ಲಭ್ಯವಿವೆ. ಈ ತಂತ್ರಜ್ಞಾನದಿಂದ ಕಳೆಗಳ ಗುಣಾಣುಗಳ ಕ್ರಿಯೆಯನ್ನು ಸಂಪೂರ್ಣವಾಗಿ ತಡೆಹಿಡಿಯಬಹುದು. ವಿವಿಧ ರಾಷ್ಟ್ರಗಳಲ್ಲಿ ಇವು ಲಭ್ಯವಿವೆಯಾದರೂ ಭಾರತದಲ್ಲಿಲ್ಲ. ನಮ್ಮ ರೈತರು ಯಾವಾಗ ಇದರ ಉಪಯೋಗ ಪಡೆಯುತ್ತಾರೋ?!
ಭಾರತದಲ್ಲೂ ಸಹ ಮೆಕ್ಕೆ ಜೋಳವನ್ನು ಪಶುಗಳ ಮತ್ತು ಕೋಳಿಗಳ ಆಹಾರವಾಗಿ ಉಪಯೋಗಿಸಲಾಗುತ್ತದೆ. ಪಶುಸಂಗೋಪನೆ ಮತ್ತು ಕೋಳಿ ಉದ್ಯಮ ಬೆಳೆಯುತ್ತಾ ಹೋದಂತೆ ಮೆಕ್ಕೆ ಜೋಳದ ಬೇಡಿಕೆಯೂ ಹೆಚ್ಚಾಗಲಿದೆ. ಹಾಗಾಗಿ ಮುಂಬರುವ ದಶಕಗಳಲ್ಲಿ ಮೆಕ್ಕೆ ಜೋಳದ ಬೇಡಿಕೆ ಅಧಿಕವಾಗಲಿದೆ. ಆ ಕಾರಣಕ್ಕಾಗಿಯೇ ಅಧಿಕ ಇಳುವರಿ ಕೊಡುವ ಮೆಕ್ಕೆಜೋಳದ ತಳಿಗಳನ್ನು ಕೃಷಿಯಲ್ಲಿ ಅಳವಡಿಸಕೊಳ್ಳಬೇಕಾಗುತ್ತದೆ. integrated Weed Management ಎಂಬ ಸಮಗ್ರ ಕಳೆಗಳನ್ನು ನಿಯಂತ್ರಿಸುವ ಪದ್ಧತಿಗೆ ಎಲ್ಲ ತರಹದ ವಿಧಾನಗಳನ್ನು ಅಳವಡಿಸಿಕೊಂಡು ಜೋಳ ಮತ್ತು ಮೆಕ್ಕೆಜೋಳದ ಇಳುವರಿಯನ್ನು ಹೆಚ್ಚಿಸಬೇಕಾಗಿದೆ. ಮೇಲೆ ತಿಳಿಸಿರುವ ಕುಲಾಂತರಿ ತಳಿಗಳೂ ಸಹ ಐಗಿಂ ಪದ್ಧತಿಗೆ ಹೇಳಿ ಮಾಡಿಸಿದಂತಹ ತಳಿಗಳು. ಸುಮಾರು 22 ವರ್ಷದಿಂದ ಯಾವುದೇ ತರಹದ ದುಷ್ಪರಿಣಾಮವಿಲ್ಲದೆ ಪ್ರಪಂಚದಾದ್ಯಂತ ಇವುಗಳನ್ನು ಬೆಳೆದಿದ್ದಾಗಿದೆ. ಹಾಗಾಗಿ, ಭಾರತದಲ್ಲಿಯೂ ಸಹ ಈ ತರಹದ ಕುಲಾಂತರಿ ತಳಿಗಳನ್ನು ಬೆಳೆಯಲು ರೈತರಿಗೆ ಅನುವು ಮಾಡಿಕೊಡಬೇಕು. ಕುಲಾಂತರಿ ತಂತ್ರಜ್ಞಾನದಿಂದ ಅಭಿವೃದ್ಧಿಯಾಗಿದ್ದೆಂಬ ಒಂದೇ ಕಾರಣದಿಂದಾಗಿ, ಯಾವುದೇ ಆಧಾರವಿಲ್ಲದೆ "ರಾಜಕೀಯ" ಉದ್ದೇಶದಿಂದ ದೇಶದ ರೈತರನ್ನು ಆಧುನಿಕ ತಳಿಗಳಿಂದ ವಿಮುಖರನ್ನಾಗಿ ಮಾಡುತ್ತಿರುವುದು ಅತ್ಯಂತ ವಿಷಾದಕರ ಸಂಗತಿ.
-ಪ್ರೊ. ಶಾಂತು ಶಾಂತರಾಮ್
shanthus@iastate.edu
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

