ಅಂಕಣಗಳು

ಕೊನೆ ಪತ್ರದಲ್ಲಿ ಎಲ್ಲ ಉತ್ತರ!

Published On :

'ನಾನು ಪ್ರತ್ಯೇಕ ಕಾಶ್ಮೀರದ ಗುಂಗಿಗೆ ಬಿದ್ದವನಲ್ಲ, ಬದಲಾಗಿ ದೇಶದಿಂದ ಭ್ರಷ್ಟಾಚಾರವನ್ನು ಹೊಡೆದೋಡಿಸಬೇಕೆಂದು ಹೆಣಗಾಡಿದವನು' ಎಂದು ಅಫ್ಜಲ್ ತಿಹಾರ್ ಜೈಲಿನ ಅಧಿಕಾರಿಗಳಿಗೆ ಪದೇ ಪದೇ ಹೇಳುತ್ತಿದ್ದನಂತೆ. ಅವನ ಇಂಥವೇ ಹೂವಿಡುವ ಹುಸಿ ಮಾತುಗಳನ್ನೇ ಅರುಂಧತಿ ರಾಯ್, ಆನಂದ್ ಪಟವರ್ಧನ್ ಮತ್ತು ನಂದಿತಾ ದಾಸ್‌ರಂಥ 'ಬುದ್ಧೂ'ಜೀವಿಗಳು ಪದೇ ಪದೇ ಉಲ್ಲೇಖಿಸಿ ಆತನಿಗೆ ಗಲ್ಲು ಬೇಡವೆಂದು ಗೋಳಾಡುತ್ತಿದ್ದುದು. ಈಗ ಅಗ್ನಿ ಶ್ರೀಧರ್ ಕೂಡ ಅದೇ ಕೆಲಸ ಮಾಡುತ್ತಿದ್ದಾರೆ. ತಮ್ಮ ಲೇಖನದ ತುಂಬೆಲ್ಲ ಅಫ್ಜಲ್‌ನ ಪರ ಅನುಕಂಪದ ಅಕ್ಷರಗಳನ್ನೇ ಹರಿಸಿದ್ದಾರೆ. ಪುಣ್ಯ ಪುರುಷನೊಬ್ಬ ಸತ್ತನೇನೋ ಅನ್ನುವಂತೆ ಭಾವುಕರಾಗಿ ಬರೆದಿದ್ದಾರೆ. ಅಫ್ಜಲ್ ಪ್ರಕರಣದ ಇತರೆ ಮಗ್ಗಲುಗಳನ್ನೂ ಪ್ರಶ್ನಿಸಬೇಕು ಎನ್ನುತ್ತಾರವರು. ವಿಪರ್ಯಾಸವೆಂದರೆ ಆ 'ಇತರೆ' ಹುಸಿ ಮಗ್ಗಲುಗಳನ್ನಷ್ಟೇ ಅವರು ನೋಡಿದ್ದಾರೆನ್ನುವುದು!
ಮನುಷ್ಯನ ಮನಸ್ಸು ತನಗೆ ಬೇಕಾದದ್ದನ್ನಷ್ಟೇ ಸ್ವೀಕರಿಸುತ್ತದಂತೆ. ಶ್ರೀಧರ್ ಅವರಿಗೆ ಈ ಗುಣ ತುಸು ಹೆಚ್ಚೇ ಇದ್ದಂತಿದೆ. ಅಫ್ಜಲ್ ಅಪರಾಧಿ ಎಂದು ಎಷ್ಟೇ ಸಾಕ್ಷ್ಯಾಧಾರಗಳನ್ನು ತಂದು ಮುಂದಿಟ್ಟರೂ, ಅವರು ಮತ್ತು ಅವರಂಥ ಮನಸ್ಥಿತಿಯವರು ಎಂದಿಗೂ ಅದನ್ನು ಸ್ವೀಕರಿಸುವುದಿಲ್ಲವೇನೋ? ನೊಂದವರ ಬದಲಾಗಿ, ಕೊಂದವರಿ ಗಾಗಿಯೇ ಅವರ ಕರುಳು ಚುರುಗುಟ್ಟುವುದು!
ಹಾಗಾಗೇ ರಾಷ್ಟ್ರೀಯ ತನಿಖಾ ದಳದಿಂದ ಬಂಧಿತನಾಗಿ ಅದೇ ಜೈಲಿನಲ್ಲಿರುವ ಇನ್ನೊಬ್ಬ ಉಗ್ರ ಅಫ್ತಾಬ್ ಆಲಂ, ಅಫ್ಜಲ್‌ನ ಆಂತರ್ಯದಲ್ಲಿ ನಿಜವಾಗಲೂ ಏನಿತ್ತು ಎನ್ನುವುದನ್ನು ವಿಚಾರಣೆಯ ವೇಳೆ ತೆರೆದಿಟ್ಟಿದ್ದನ್ನೂ ಇಂತಹ ಮನಃಸ್ಥಿತಿಯವರು ಅಲ್ಲಗಳೆಯುತ್ತಿರುವುದು.
13/7 ಮುಂಬೈ ದಾಳಿಗೆ ಸಂಬಂಧಿಸಿ ಬಂಧಿತನಾಗಿರುವ ಇಂಡಿಯನ್ ಮುಜಾಹಿದ್ದೀನ್‌ನ ಈ ಉಗ್ರ, ತಿಹಾರ್ ಜೈಲಿನಲ್ಲಿ ಅಫ್ಜಲ್‌ನನ್ನು ಅನೇಕ ಬಾರಿ ಭೇಟಿಯಾಗಿದ್ದನಂತೆ. 'ಇಂಡಿಯನ್ ಮುಜಾಹಿದ್ದೀನ್‌ನ ಹೋರಾಟಗಳ ಬಗ್ಗೆ ಅಫ್ಜಲ್ ಬಹಳ ಹೆಮ್ಮೆಯಿಟ್ಟುಕೊಂಡಿದ್ದ, ಅಲ್ಲದೆ ಕಾಶ್ಮೀರದಲ್ಲಿ 'ಆಜಾದಿ'ಗಾಗಿ ಹೋರಾಡುವ ಕೆಚ್ಚೆದೆಯ ಜಿಹಾದಿಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ ಎಂದು ಬೇಸರಪಡುತ್ತಿದ್ದ' ಎಂದು ಅಫ್ತಾಬ್ ಹೇಳಿದ್ದಾನೆ. ಅಷ್ಟೇ ಅಲ್ಲದೆ, ಭಾರತಕ್ಕೆ ನುಗ್ಗಿ ದಾಳಿ ನಡೆಸಬಲ್ಲ 200 ಫಿದಾಯಿನ್‌ಗಳು ಕಾಶ್ಮೀರದಲ್ಲಿ ಹುಟ್ಟಿಕೊಂಡರೆ ಸಾಕು, ಕಾಶ್ಮೀರಕ್ಕೆ ಸುಲಭವಾಗಿ ಸ್ವಾತಂತ್ರ್ಯ ತಂದುಕೊಡಬಹುದು ಎಂದೂ ಅಫ್ಜಲ್ ಅವನ ಬಳಿ ವಾದಿಸುತ್ತಿದ್ದನಂತೆ.
ಶ್ರೀಧರ್ ಸರ್, ಬಹುಶಃ ನೀವು- 'ಹಾಗೆ ಹೇಳುವಂತೆ ಅಫ್ತಾಬ್‌ಗೆ ಪೊಲೀಸರೇ ಹೇಳಿಕೊಟ್ಟಿರಬಹುದು'ಎನ್ನುತ್ತೀರೇನೋ! ಇನ್ನು ಆತ ಸಾಯುವ ಹಿಂದಿನ ದಿನ ತನ್ನ ಹೆಂಡತಿಗೆ ಬರೆದ ಪತ್ರದಲ್ಲಿ ಏನು ಹೇಳಿದ್ದ ಎನ್ನುವುದಾದರೂ ನಿಮಗೆ ಗೊತ್ತಾ?  
ಅಫ್ಜಲ್ ಬರೆಯುತ್ತಾನೆ- 'ನನ್ನನ್ನು ಈ ಮಟ್ಟಕ್ಕೆ ಒಯ್ದ ದೇವರಿಗೆ ನಾನು ಋಣಿಯಾಗಿದ್ದೇನೆ. ನಾನು ನನ್ನ ಕುಟುಂಬದವರನ್ನು ಕೇಳಿಕೊಳ್ಳುವುದಿಷ್ಟೆ; ನನ್ನ ಅಂತ್ಯವನ್ನು ನೋಡಿ ಕೊರಗುವ ಬದಲು, ನಾನು ಏರಿರುವ ಎತ್ತರವನ್ನು(ಉನ್ನತಿ) ನೋಡಿ ಸಂಭ್ರಮಪಡಿ. ಆ ದೇವರು ನಿಮಗೆ ರಕ್ಷಣೆ ನೀಡಲಿ'!
ಆ ಪತ್ರದಲ್ಲಿ ಅಫ್ಜಲ್, 'ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ' ಎಂದು ಏಕೆ ಹೇಳಿದನೋ ಒಮ್ಮೆ ಯೋಚಿಸಿ? ಆತ ಒಂದು ವೇಳೆ ನಿರಪರಾಧಿಯೇ ಆಗಿದ್ದರೆ ಈ ರೀತಿ ಬರೆಯಲು ಸಾಧ್ಯವಿತ್ತೇ? ಪಾರ್ಲಿಮೆಂಟ್ ಮೇಲಿನ ದಾಳಿಯನ್ನೇ ಆತ ತನ್ನ 'ಸಾಧನೆ' ಎಂದು ಭಾವಿಸಿದ್ದ ಎನ್ನುವುದು ಇದರಿಂದ ಸ್ಪಷ್ಟವಾಗುವುದಿಲ್ಲವೇ? ದೇವರು ತನ್ನನ್ನು ಇಷ್ಟು ಎತ್ತರಕ್ಕೆ ಏರಿಸಿದ್ದಕ್ಕೆ ಸಂತೋಷಪಡಿ ಎಂಬ ಸಾಲು ಉಳಿದ ಉಗ್ರರಿಗೆ, ತನ್ನಂತೆಯೇ ನಡೆದುಕೊಂಡು ಉನ್ನತಿ ಸಾಧಿಸಿ ಎಂದು ಉತ್ತೇಜನ ನೀಡುವ ಧಾಟಿಯಲ್ಲಿಲ್ಲವೇ?    
ಈ ಪತ್ರವೊಂದೇ ಸಾಕು ಆತ 'ಗುರು'ತರ ಅಪರಾಧಿಯಾಗಿದ್ದ, ಮೊದಲಿನಿಂದಲೂ ಮತಾಂಧನಾಗಿದ್ದ ಎನ್ನುವುದನ್ನು ಸಾಬೀತುಪಡಿಸಲು. ನ್ಯಾಯಯುತ ತನಿಖೆ ಆಗಲಿಲ್ಲ ಎಂದು ನ್ಯಾಯಾಂಗ ವ್ಯವಸ್ಥೆಯನ್ನೇ ಬಾಯಿಗೆ ಬಂದಂತೆ ಅಣುಕಿಸುವ ನೀವು ಮತ್ತು ನಿಮ್ಮಂಥವರು ಇದಕ್ಕೇನನ್ನುತ್ತೀರಿ? ಈಗ ಹೇಳಿ, ಮಾಧ್ಯಮಗಳು ಆತನನ್ನು ಭಯೋತ್ಪಾದಕ ಮುಸ್ಲಿಮನೆಂದು ಬಿಂಬಿಸಿದ್ದು ತಪ್ಪೇ?
ಇನ್ನು ಶ್ರೀಧರ್ ಅವರು, 'ಹಿಂದೂ ಹಂತಕರನ್ನು ಉಳಿಸಿಕೊಂಡಿರುವುದು ಎಷ್ಟರ ಮಟ್ಟಿಗೆ ರಾಷ್ಟ್ರೀಯ ಘನತೆಯೆನಿಸುತ್ತದೆ' ಎಂದು ಪ್ರಶ್ನಿಸುವ ಮೂಲಕ ಎಷ್ಟು ಸೂಕ್ಷ್ಮವಾಗಿ ಮತ್ತು ಅನಾವಶ್ಯಕವಾಗಿ ರಾಜೀವ್ ಗಾಂಧಿಯ ಹಂತಕರು 'ಹಿಂದೂ'ಗಳೆಂಬುದನ್ನು ನಮಗೆ ನೆನಪು ಮಾಡಿಕೊಡುತ್ತಾರೋ ನೋಡಿ! ಹಿಂದೂಗಳಾಗಿದ್ದಕ್ಕೆ ಅವರಿಗೆ ನೇಣಾಗಲಿಲ್ಲ, ಅಫ್ಜಲ್ ಮುಸಲ್ಮಾನನೆಂಬ ಕಾರಣಕ್ಕೆ ಸತ್ತ ಎಂಬ ಧಾಟಿಯ ಮಾತು ಅಸಂಬದ್ಧವೆನಿಸುವುದಿಲ್ಲವೇ?
ಅವರು ಮೊದಲು ಎಡವಟ್ಟು ಎಡಪಂಥೀಯರ 'ಬಜಾರು ಪುಕಾರು'ಗಳನ್ನು ಕೇಳಿ ಕ್ರೂರಿಗಳಿಗಾಗಿ ಕಣ್ಣೀರು ಗರೆಯುವುದನ್ನು ಬಿಡಬೇಕು. ಕಣ್ಣು ಸ್ವಚ್ಛವಾದರೆ ಯಾವುದು ಸತ್ಯ, ಯಾವುದು ಸುಳ್ಳು ಎನ್ನುವುದೆಲ್ಲ  ನಿಚ್ಚಳವಾಗಿ ಕಾಣುತ್ತದೆ!

-ರಾಘವೇಂದ್ರ ಆಚಾರ್ಯ
raghu.bioastra@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.