ಅಂಕಣಗಳು

ಅಂತರ್ಜಾಲದ ನೆರವಿನಿಂದ ಅಮ್ಮನ ಮಡಿಲು ಸೇರಿದ!

ನೀವೀಗ ಓದಲಿರುವುದು, ನಂಬಲು ಸಾಧ್ಯವೇ ಇಲ್ಲ ಎಂಬಂಥ ರೋಚಕ ಕಥೆಯ ವಿವರಣೆ.

ಅಂತರ್ಜಾಲದ ನೆರವಿನಿಂದ ಅಮ್ಮನ ಮಡಿಲು ಸೇರಿದ!
ಫಾತಿಮಾ, ಬ್ರಿಯರ್ಲಿ ಅಲಿಯಾಸ್ ಸರೂ
Published On :

ನೀವೀಗ ಓದಲಿರುವುದು, ನಂಬಲು ಸಾಧ್ಯವೇ ಇಲ್ಲ ಎಂಬಂಥ ರೋಚಕ ಕಥೆಯೊಂದರ ವಿವರಣೆ. ಏನೆಂದರೆ, 1989ರಲ್ಲಿ, ಮಧ್ಯಪ್ರದೇಶದ ಖಾಂಡ್ವಾದಲ್ಲಿ, ರೈಲಿನಲ್ಲಿ ಭಿಕ್ಷೆ ಬೇಡುತ್ತಾ ಬದುಕುತ್ತಿದ್ದ 6 ವರ್ಷದ ಸರೂ ಎಂಬ ಬಾಲಕನೊಬ್ಬ, ತೀರಾ ಆಕಸ್ಮಿಕವಾಗಿ ಕೋಲ್ಕತ್ತಾ ತಲುಪಿದ್ದಾನೆ. ಒಂದು ವರ್ಷದ ನಂತರ ವಿದೇಶಿ ದಂಪತಿಗಳ ದಯೆಯಿಂದ ಆಸ್ಟ್ರೇಲಿಯಾಕ್ಕೆ ಹಾರಿದ್ದಾನೆ. ಅಲ್ಲಿ ಈ ಹುಡುಗನ ಹೆಸರು, ಬದುಕು, ಭವಿಷ್ಯ ಮತ್ತು ರಾಷ್ಟ್ರೀಯತೆ ಬದಲಾಗಿ ಹೋಗಿದೆ. ಇಷ್ಟೆಲ್ಲಾ ಬದಲಾವಣೆಗಳ ಮಧ್ಯೆ 23 ವರ್ಷಗಳು ಕಳೆದು ಹೋಗಿವೆ. ಬುದ್ಧಿ ತಿಳಿದಾಗಿನಿಂದಲೂ ತಾಯ್ನೆಲ ಹಾಗೂ ಹೆತ್ತಮ್ಮನ ಕನವರಿಕೆಯಲ್ಲೇ ಇದ್ದ ಸರೂಗೆ, ಹಳೆಯ ಬದುಕು ಒಂದು ಅಸ್ಪಷ್ಟ ಚಿತ್ರವಾಗಿ ಮಾತ್ರ ನೆನಪಿನಲ್ಲಿದ್ದ ದಿನಗಳವು. ಇಂಥ ಸಂದರ್ಭದಲ್ಲಿಯೇ ಗೂಗಲ್ ಅಂತರ್ಜಾಲ ತಾಣದ ನೆರವಿನಿಂದ ಆಸ್ಟ್ರೇಲಿಯಾದಲ್ಲಿ ಕೂತೇ ತನ್ನ ಹುಟ್ಟೂರು ಮತ್ತು ಮನೆಯನ್ನು ಕಂಡು ಹಿಡಿದಿದ್ದಾನೆ. ಸಣ್ಣ ಅನುಮಾನವನ್ನು ಅಂಗೈಲಿ ಹಿಡಿದುಕೊಂಡೇ ಆಸ್ಟ್ರೇಲಿಯಾದಿಂದ ಮಧ್ಯಪ್ರದೇಶಕ್ಕೆ ಹಾರಿಬಂದಿದ್ದಾನೆ. ಗೂಗಲ್ ಮ್ಯಾಪ್‌ನಲ್ಲಿ ಕಾಣಿಸಿದ ನಕ್ಷೆಯನ್ನು ಕೈಲಿ ಹಿಡಿದುಕೊಂಡೇ ಹೆಜ್ಜೆ ಹಾಕಿದ್ದಾನೆ. ಕಡೆಗೆ, ಒಂದು ಗುಡಿಸಲಿನ ಮುಂದೆ ನಿಂತು ಅಮ್ಮಾ ಎಂದಿದ್ದಾನೆ. ಅಷ್ಟೆ: ಕಾಲ ಸ್ತಂಭಿಸಿದೆ!
ಚಂದಮಾಮದ ಕಥೆಗೆ ಸೈಡ್ ಹೊಡೆಯಬಲ್ಲಂಥ ಈ ಕಥನದ ಪೂರ್ಣಪಾಠ ಇಲ್ಲಿದೆ...
----
ಆಕೆಯ ಹೆಸರು ರಮಾ ಮುನ್ಶಿ. ಈ ಹುಡುಗಿಗೆ ಹತ್ತು ವರ್ಷವಿದ್ದಾಗಲೇ ಯಾವುದೋ ಕಾಯಿಲೆಯಿಂದ ಅಪ್ಪ ಅಮ್ಮ ತೀರಿಕೊಂಡರು. ಹೆಣ್ಣು, ಅಂಗೈನ ಹುಣ್ಣು ಎಂಬ ಕಾರಣ ನೀಡಿ ಮರುದಿನವೇ ಎಲ್ಲ ಬಂಧುಗಳೂ ದೂರವಾದರು. ಪರಿಣಾಮ, ರಮಾ ಮುನ್ಶಿಗೆ ಅನಾಥೆ ಎಂಬ ಹಣೆಪಟ್ಟಿ ಅಂಟಿಕೊಂಡಿತು. ಬದುಕು ಸಾಗಬೇಕಲ್ಲವೆ? ಈ ಕಾರಣಕ್ಕೆ ಮನೆ ಕಟ್ಟಿಸುವ ಮೇಸ್ತ್ರಿಯ ಬಳಿ ಸಿಮೆಂಟ್ ಹೊರುವ ಕೂಲಿಯಾಗಿ ಈಕೆ ಕೆಲಸಕ್ಕೆ ಸೇರಿದಳು. ಈ ಹುಡುಗಿಯ ಮುದ್ದು ಮಾತು ಹಾಗೂ ನಿಷ್ಕಪಟ ವ್ಯಕ್ತಿತ್ವ ಮೇಸ್ತ್ರಿಯನ್ನು ಮರುಳು ಮಾಡಿತು. ಆತ ತಾನೇ ಮುಂದಾಗಿ ಮದುವೆಯ ಪ್ರಸ್ತಾಪವಿಟ್ಟ. ಒಂದು ಆಸರೆಗಾಗಿ ಹಂಬಲಿಸಿದ್ದ ರಮಾ, ತಕ್ಷಣವೇ ಒಪ್ಪಿಕೊಂಡಳು. ಆ ವೇಳೆಗೆ ಗಂಡ ಮುಸ್ಲಿಂ ಎಂದು ಅರ್ಥವಾಗಿತ್ತು. ಮದುವೆಯ ನಂತರ ಈಕೆ ಫಾತಿಮಾ ಆದಳು. ಈ ದಂಪತಿ ಮಧ್ಯಪ್ರದೇಶದ ಖಾಂಡ್ವಾದಲ್ಲಿ ನೆಲೆನಿಂತರು. ಹತ್ತು ವರ್ಷದ ದಾಂಪತ್ಯಕ್ಕೆ ಮೂರು ಮಕ್ಕಳಾದವು. ಮೊದಲ ಇಬ್ಬರ ಹೆಸರು  ಗುಡ್ಡು ಮತ್ತು ಸರೂ. ಫಾತಿಮಾ, ನಾಲ್ಕನೇ ಮಗುವಿನ ನಿರೀಕ್ಷೆಯಲ್ಲಿದ್ದಾಗಲೇ ಅನಾಹುತ ನಡೆದುಹೋಯಿತು. ಅವಳ ಗಂಡ ಚಿಕ್ಕ ಪ್ರಾಯದ ಹುಡುಗಿಯನ್ನು ಕರೆತಂದು, ಈಕೆ ನನ್ನ ಹೊಸಾ ಹೆಂಡ್ತಿ ಅಂದ. ಸಿಟ್ಟಿಗೆದ್ದ ಫಾತಿಮಾ, ಜಗಳಕ್ಕೆ ನಿಂತಳು. ಆತ ಇದನ್ನೆಲ್ಲ ಮೊದಲೇ ಊಹಿಸಿದ್ದವನಂತೆ, ತಲಾಕ್, ತಲಾಕ್, ತಲಾಕ್ ಎಂದು ಮೂರು ಬಾರಿ ಹೇಳಿ ಕೈ ಕೊಡವಿ ಹೋಗಿ ಬಿಟ್ಟ.
ಪರಿಣಾಮ, ನಾಲ್ಕು ಮಕ್ಕಳ ಜವಾಬ್ದಾರಿ ಫಾತಿಮಾಳ ಮೇಲೆ ಬಿದ್ದಿತು. ಮಕ್ಕಳನ್ನು ಸಾಕಬೇಕು ಎಂಬ ಕಾರಣದಿಂದ ಈಕೆ ಮತ್ತೆ ದಿನಗೂಲಿಗೆ ಹೊರಟು ನಿಂತಳು. ಅಮ್ಮನಿಗೆ ನೆರವಾಗುವ ಉದ್ದೇಶದಿಂದ, 8 ವರ್ಷದ ಗುಡ್ಡೂ ಮತ್ತು 6 ವರ್ಷದ ಸರೂ, ಉಟ್ಟ ಬಟ್ಟೆಯಿಂದಲೇ ರೈಲಿನ ಬರ್ತ್‌ನಲ್ಲಿ ಕಸ ಗುಡಿಸಿ, ಭಿಕ್ಷೆ ಬೇಡಲು ಆರಂಭಿಸಿದರು. ಬೆಳಗಿನಿಂದ ಸಂಜೆಯವರೆಗೆ ಏಳೆಂಟು ರೈಲುಗಳಲ್ಲಿ ಹೀಗೆ ದುಡಿದು ರಾತ್ರಿ ಮನೆಗೆ ಬರುತ್ತಿದ್ದರು. ಒಂದೊಂದು ಸಂದರ್ಭದಲ್ಲಿ ಪ್ರಯಾಣಿಕರ ಬೈಗುಳ ಮತ್ತು ಪೊಲೀಸರ ಲಾಠಿ ಏಟು ಉಚಿತವಾಗಿ ಸಿಗುತ್ತಿತ್ತು. ಫಾತಿಮಾಗೆ ಕೂಲಿ ಸಿಗದ ದಿನ, ಈ ಮಕ್ಕಳ ದುಡಿಮೆಯಿಂದಲೇ ಹೊಟ್ಟೆ ತುಂಬಿಸಿಕೊಳ್ಳಬೇಕಿತ್ತು. ಬಹಳಷ್ಟು ದಿನಗಳಲ್ಲಿ ನೀರಿಗೆ ಬೆಲ್ಲ ಹಾಕಿ, ಅದನ್ನು ಕುಡಿಸಿ, ಬೇರೇನೂ ಇಲ್ಲ ಎನ್ನುತ್ತಾ ಕಣ್ಣೀರಾಗುತ್ತಿದ್ದಳು ಫಾತಿಮಾ. ಅಮ್ಮ ಅಳುವುದನ್ನು ಕಂಡು ಈ ಮಕ್ಕಳೂ ಅಳುತ್ತಿದ್ದವು.

ಒಂದು ದಿನ ಏನಾಯಿತೆಂದರೆ, ರೈಲಿನಲ್ಲಿ ಭಿಕ್ಷೆ ಬೇಡುವಾಗಲೇ ಸರೂ ಎಚ್ಚರ ತಪ್ಪಿಬಿದ್ದ. ಗಾಬರಿಯಾದ ಗುಡ್ಡೂ, ತಮ್ಮನಿಗೆ ಏನಾದರೂ ತಿಂಡಿ ತರಲೆಂದು ಸ್ಟೇಷನ್‌ನ ಅಂಗಡಿಗೆ ಓಡಿ ಹೋದ. ಅವನು ವಾಪಸ್ ಬರುವುದರೊಳಗೆ ರೈಲು ಹೊರಟು ಹೋಗಿತ್ತು. ಸೀಟ್ ಒಂದರ ಕೆಳಗೆ ಅನಾಥನಂತೆ ಮಲಗಿದ್ದ ಸರೂಗೆ ಎಚ್ಚರವಾಗಿದ್ದು 24 ಗಂಟೆಗಳ ನಂತರ. ಆ ವೇಳೆಗೆ ರೈಲು ಕೋಲ್ಕತ್ತಾಗೆ ಬಂದಿತ್ತು. ಈ ಹುಡುಗ ಅಣ್ಣನಿಗಾಗಿ ಪ್ರತಿ ಬೋಗಿಯಲ್ಲೂ ಹುಡುಕಾಡಿದ. ಆತ ಸಿಗದೇ ಹೋದಾಗ ಶುದ್ಧ ಅಬ್ಬೇಪಾರಿಯಂತೆ ಕೋಲ್ಕತ್ತಾದ ಬೀದಿ ಬೀದಿ ಅಲೆದ. ಮತ್ತೆ ರೈಲು ನಿಲ್ದಾಣಕ್ಕೆ ಬಂದ. ಇವನಿಗೆ ಹಿಂದಿ ಬಿಟ್ಟರೆ ಬೇರೊಂದು ಭಾಷೆ ಗೊತ್ತಿರಲಿಲ್ಲ. ಕೋಲ್ಕತ್ತಾದ ಬಂಗಾಲಿಗಳಿಗೆ ಇವನ ಭಾಷೆ ಅರ್ಥವಾಗಲಿಲ್ಲ. ಕಡೆಗೆ, ರೈಲ್ವೆ ಪೊಲೀಸರು, ಈ ಹುಡುಗನನ್ನು ಒಂದು ಅನಾಥಾಶ್ರಮಕ್ಕೆ ಸೇರಿಸಿದರು. ಒಂದೆರಡು ವಾರಗಳ ನಂತರ ಹಿಂದಿ ಗೊತ್ತಿರುವವರ ನೆರವಿನಿಂದ ಈ ಹುಡುಗನ ಪೂರ್ವಾಪರ ವಿಚಾರಿಸಿದರು. ಆಗಲೂ ಭಾಷಾ ಸಮಸ್ಯೆ ಎದುರಾಯಿತು. ಜೊತೆಗೆ, ಆರು ವರ್ಷದ ಹುಡುಗ ಸರೂ ಹೇಳುತ್ತಿದ್ದ ವಿವರಗಳಲ್ಲಿ ಖಚಿತತೆ ಇರಲಿಲ್ಲ. ನಮ್ಮ ಮನೆಯ ಬಳಿ ಒಂದು ನೀರಿನ ಚಿಲುಮೆಯಿದೆ. ಅದಕ್ಕೆ ಸಮೀಪವೇ ಒಂದು ಚಿತ್ರಮಂದಿರ, ಬ್ರಿಡ್ಜ್ ಮತ್ತು ರೈಲು ನಿಲ್ದಾಣವಿದೆ ಅನ್ನುತ್ತಿದ್ದ. ಇಷ್ಟು ವಿವರಣೆಯಿಂದ ಒಂದು ಕುಟುಂಬದ ವಿಳಾಸ ಪತ್ತೆ ಹಚ್ಚಲು ಕಷ್ಟ ಎಂದು ನಿರ್ಧರಿಸಿದ ಅಧಿಕಾರಿಗಳು, ಸರೂಗೆ ತಪ್ಪಿಸಿಕೊಂಡು ಬಂದವನು ಎಂಬ ಹಣೆಪಟ್ಟಿ ಅಂಟಿಸಿದರು.

ಹೀಗೇ ವರ್ಷ ಕಳೆಯಿತು. ಅದೊಂದು ಮುಂಜಾನೆ, ಅನಾಥ ಮಗುವೊಂದನ್ನು ದತ್ತು ಪಡೆಯುವ ಉದ್ದೇಶದಿಂದ ಆಸ್ಟ್ರೇಲಿಯಾದ ಶ್ರೀಮಂತ ದಂಪತಿ ಅನಾಥಾಶ್ರಮಕ್ಕೆ ಬಂದರು. ಸರೂನ ಮುಗ್ಧತೆ ಮತ್ತು ಮಾತು ಅವರಿಗೆ ಹಿಡಿಸಿತು. ಅಧಿಕಾರಿಗಳೊಂದಿಗೆ ಮಾತಾಡಿ, ಕಾನೂನಿನ ಎಲ್ಲ ನಿಯಮಗಳನ್ನು ಪಾಲಿಸಿ, ಎರಡು ವಾರಗಳ ನಂತರ ಆಸ್ಟ್ರೇಲಿಯಾಕ್ಕೆ ಹೋಗಿಬಿಟ್ಟರು! ಸರೂಗೆ ಅಲ್ಲಿ ಬ್ರಿಯರ್ಲಿ ಎಂದು ನಾಮಕರಣವಾಯಿತು. ಭಾರತದಲ್ಲಿದ್ದಾಗ ರೈಲಿನಲ್ಲಿ ಭಿಕ್ಷೆ ಎತ್ತುತ್ತಿದ್ದ ಸರೂ, ಆಸ್ಟ್ರೇಲಿಯಾಕ್ಕೆ ಬಂದೊಡನೆ ಮಹಾರಾಜರ ಮಗನಂತೆ ಬದುಕುವ ಸೌಭಾಗ್ಯ ಪಡೆದುಕೊಂಡ. ದತ್ತು ಪಡೆದ ದಂಪತಿ, ಈ ಹುಡುಗನ ಹಿನ್ನೆಲೆಯ ಬಗ್ಗೆ ತಲೆಕೆಡಿಸಿಕೊಳ್ಳದೆ, ದೇವರಿಗಿಂತ ಹೆಚ್ಚು ಮುತುವರ್ಜಿಯಿಂದ ಇವನನ್ನು ನೋಡಿಕೊಂಡರು.
----
ಸಂಜೆಯ ವೇಳೆಗೆ ದಿನವೂ ಮನೆಗೆ ಬರುತ್ತಿದ್ದ ಮಕ್ಕಳು ಅವತ್ತು ಬಾರದೇ ಹೋದಾಗ ಫಾತಿಮಾ ಗಾಬರಿಯಾದಳು. ನೆರೆಹೊರೆಯವರೊಂದಿಗೆ ಸಂಕಟ ಹೇಳಿಕೊಂಡಳು. ಹಸಿವಿನಿಂದ ಮಕ್ಕಳು ರೈಲು ನಿಲ್ದಾಣದಲ್ಲೇ ಮಲಗಿರಬಹುದು, ನಾಳೆ ಬರ್ತಾರೆ ಎಂದು ಕಾದು ನೋಡಿದಳು. ಹೀಗೇ ಮೂರು ದಿನ ಕಳೆದು ಹೋದಾಗ ಆಕೆಗೆ ಅನುಮಾನ ಶುರುವಾಯಿತು. ಪರಿಚಯದವರನ್ನು ಕರೆದುಕೊಂಡು ಐದಾರು ಕಡೆ ಸಾಲ ಮಾಡಿ ತನ್ನೂರಿಗೆ ಹತ್ತಿರವಿರುವ ಸಿಕಂದರಾಬಾದ್, ಭೋಪಾಲ್‌ಗೆ ಹೋಗಿ ಬಂದಳು. ಹೈದ್ರಾಬಾದ್ ಹಾಗೂ ಮುಂಬಯಿ ಪೊಲೀಸ್ ಠಾಣೆಗೂ ಹೋಗಿ ತನ್ನ ಮಕ್ಕಳ ಕಥೆ ಹೇಳಿಕೊಂಡಳು. ಚಿಕ್ಕಮಗನಿಗೆ ಹಣೆಯ ಮೇಲೆ ಕುದುರೆಯ ಒದೆತದಿಂದ ಆದ ಗಾಯದ ಗುರುತಿದೆ ಎನ್ನುತ್ತಿದ್ದಳು. ಮತ್ತೆ ಖಾಂಡ್ವಾಕ್ಕೆ ಮರಳಿದಾಗ ಅಲ್ಲಿನ ರೈಲ್ವೆ ಇನ್ಸ್‌ಪೆಕ್ಟರ್ ಒಂದು ಫೋಟೋ ತೋರಿಸಿ ಹೇಳಿದರು: 'ಚಲಿಸುತ್ತಿದ್ದ ರೈಲನ್ನು ಹತ್ತುವಾಗ ಅಥವಾ ಇಳಿಯುವಾಗ ಒಬ್ಬ ಹುಡುಗ ಆಯತಪ್ಪಿ ಬಿದ್ದು ಸತ್ತು ಹೋಗಿದ್ದಾನೆ. ವಾರಸುದಾರರಿಗಾಗಿ ಒಂದು ದಿನ ಕಾಯ್ದು ನಂತರ ದಫನ್ ಮಾಡಲಾಗಿದೆ. ಶವದ ಫೋಟೋ ಇಲ್ಲಿದೆ. ಈ ಹುಡುಗ ನಿನ್ನ ಮಗನಾ? ನೋಡು...'
ಫೋಟೋವನ್ನು ಎವೆಯಿಕ್ಕದೆ ನೋಡಿದ ಫಾತಿಮಾ ಒಮ್ಮೆ 'ಗುಡ್ಡೂ' ಹೋಗಿ ಬಿಟ್ಯಾ ಕಂದಾ ಎಂದು ಚೀರಿ ಎದೆ ಬಡಿದುಕೊಂಡಳು. ಈ ಸಂಕಟದದ ಮಧ್ಯೆಯೂ,ಎರಡನೇ ಮಗ ಎಲ್ಲೋ ಬದುಕಿದ್ದಾನೆ ಎಂದು ಆಕೆಯ ಒಳಮನಸ್ಸು ಪಿಸುಗುಡುತ್ತಲೇ ಇತ್ತು. ಮಕ್ಕಳನ್ನು ಹುಡುಕಿಕೊಂಡು ಹೈದ್ರಾಬಾದ್, ಮುಂಬಯಿವರೆಗೂ ಬಂದಿದ್ದ ಫಾತಿಮಾ, ಅಪ್ಪಿತಪ್ಪಿ ಕೂಡ ಕೋಲ್ಕತ್ತಾ ಕಡೆಗೆ ಮುಖ ಮಾಡಿರಲಿಲ್ಲ. ಕಾರಣ, ತನ್ನ ಊರಿಂದ 1500 ಕಿ.ಮೀ. ದೂರವಿರುವ ಕೋಲ್ಕತ್ತಾಗೆ 6 ವರ್ಷದ ಮಗ ಹೋಗಲು ಸಾಧ್ಯವಿಲ್ಲ ಎಂಬುದು ಆಕೆಯ ನಂಬಿಕೆಯಾಗಿತ್ತು.
----
ಬ್ರಿಯರ್ಲಿ ಈಗ ಪದವಿಯಲ್ಲಿದ್ದ. ಆಸ್ಟ್ರೇಲಿಯಾದ ನೆಲಕ್ಕೆ ಕಾಲಿಟ್ಟು ಆಗಲೇ 23 ವರ್ಷಗಳು ಕಳೆದು ಹೋಗಿದ್ದವು. ಆದರೂ ಅವನ ಎದೆಯೊಳಗೆ ಹಳೆಯ ನೆನಪಿನ ಚಕ್ರ ತಿರುಗುತ್ತಲೇ ಇತ್ತು. ಏಕಾಏಕಿ, ಬದುಕುವ ಪರಿಸರವೇ ಬದಲಾಗಿದ್ದರಿಂದ ಅವನಿಗೆ ಹಿಂದಿ ಮರೆತು ಹೋಯಿತು. ಪುಣ್ಯಕ್ಕೆ ಕೆಲವೇ ಪದಗಳು ನೆನಪಲ್ಲಿ ಉಳಿದಿದ್ದವು. ಅರಮನೆಯಂಥ ಬಂಗಲೆಯಲ್ಲಿ ಮಲಗಿದ್ದಾಗಲೂ ಹಿಂದೊಮ್ಮೆ ಅಂಗಿ ಬಿಚ್ಚಿಕೊಂಡು ರೈಲಿನ ಬರ್ತ್‌ನಲ್ಲಿ ಕಸ ಗುಡಿಸುತ್ತಾ ಭಿಕ್ಷೆ ಬೇಡುತ್ತಿದ್ದ, ಪ್ರಯಾಣಿಕರು ನೀಡಿದ ಆಹಾರವನ್ನು ಪ್ರಸಾದದಂತೆ ಸ್ವೀಕರಿಸುತ್ತಿದ್ದ ಪ್ರಸಂಗ ನೆನಪಾದರೆ, ನಡುರಾತ್ರಿಯಲ್ಲೂ ಆತ ದಿಗ್ಗನೆ ಎದ್ದು ಕೂರುತ್ತಿದ್ದ. ಅಣ್ಣ, ಅಮ್ಮ, ತಮ್ಮ, ತಂಗಿ ಈಗ ಹೇಗಿರಬಹುದು ಎಂದು ಪ್ರಶ್ನೆ ಹಾಕಿಕೊಳ್ಳುತ್ತಿದ್ದ. ಉತ್ತರ ಸಿಗದಿದ್ದಾಗ ಮಂಕಾಗಿ ಕೂರುತ್ತಿದ್ದ.
ಅದೊಂದು ದಿನ ಏನಾಯಿತೆಂದರೆ-ಗೂಗಲ್ ಅಂತರ್ಜಾಲದ ಪುಟ ಹೊಕ್ಕವನು, ತಮಾಷೆಗೆಂದು ಆಸ್ಟ್ರೇಲಿಯಾದ ತನ್ನ ಮನೆಯ ವಿಳಾಸ ಟೈಪ್ ಮಾಡಿ, ಸರ್ಚ್ ಬಟನ್ ಒತ್ತಿದ. ಮರುಕ್ಷಣವೇ ಕಂಪ್ಯೂಟರ್ ಪರದೆಯ ಮೇಲೆ ಮ್ಯಾಪ್ ಬಂತು. ಅದರಲ್ಲಿ ಮನೆಯ ಸಮೀಪದಲ್ಲಿರುವ ಪ್ರಮುಖ ಸ್ಥಳಗಳೆಲ್ಲ ಕಾಣಿಸಿದ್ದವು. ತಕ್ಷಣವೇ ಬ್ರಿಯರ್‌ಲೀ ಅಲಿಯಾಸ್ ಸರೂ ಚುರುಕಾದ. ಭಾರತದಲ್ಲಿ ತನ್ನ ಊರು ಇದ್ದ ಪ್ರದೇಶವನ್ನು ನೆನಪಿಸಿಕೊಂಡ. ಅವನ ಊರಿಗೆ ಹತ್ತಿರದಲ್ಲಿ ಒಂದು ಚಿಲುಮೆ, ಅದಕ್ಕೆ ಅಂಟಿಕೊಂಡಂತೆಯೇ ಒಂದು ಬ್ರಿಡ್ಜ್, ಸಿನಿಮಾ ಮಂದಿರ ಹಾಗೂ ರೈಲ್ವೆ ಸ್ಟೇಷನ್ ಇದ್ದವು. ಈ ವಿವರಣೆಯನ್ನು ಗೂಗಲ್‌ಗೆ ಹಾಕಿ ಎರಡು ದಿನವಲ್ಲ, ಎರಡು ತಿಂಗಳಲ್ಲ, ಭರ್ತಿ ಎರಡು ವರ್ಷ ಹುಡುಕಾಡಿದ. ಈ ಮಧ್ಯೆ ಭಾರತದ ರೈಲುಗಳ ವೇಗ, ಕೊಲ್ಕತ್ತಾದಿಂದ ಹೊರಟ ರೈಲು 24ರಿಂದ 28 ಗಂಟೆಗಳಲ್ಲಿ ತಲುಪಬಹುದಾದ ಸ್ಥಳಗಳ ಹುಡುಕಾಟ ನಡೆಸಿದ. ಆತನ ಸತತ ಪ್ರಯತ್ನಕ್ಕೆ ಕಡೆಗೂ ಪ್ರತಿಫಲ ದಕ್ಕಿತು. ಗೂಗಲ್‌ನ ಮಾಹಿತಿಯ ಸಾಲಿನಲ್ಲಿ ಮಧ್ಯಪ್ರದೇಶ್- ಖಾಂಡ್ವಾ ಎಂಬ ಹೆಸರು ಕಾಣಿಸಿಕೊಂಡಿತು. ಅಲ್ಲಿ ಕಾಣಿಸಿದ ಮ್ಯಾಪ್‌ನಲ್ಲಿ ಸರೂ ಹೇಳಿದ್ದ ವಿವರಗಳೆಲ್ಲ ಇದ್ದವು.
ಸರೂ ಅಲಿಯಾಸ್ ಬ್ರಿಯರ್ಲಿಗೆ ಮತ್ತೊಂದು ವಿಷಯ ನೆನಪಿತ್ತು. ಏನೆಂದರೆ, ಅವನ ಹುಟ್ಟೂರಿನ ಹೆಸರು 'ಜಿ' ಎಂಬ ಅಕ್ಷರದಿಂದ ಶುರುವಾಗುತ್ತಿತ್ತು. ಆದರೆ ಊರಿನ ಹೆಸರೇ ಅವನಿಗೆ ನೆನಪಿರಲಿಲ್ಲ. ಈ ಬಾರಿ ಅವನು ಮತ್ತೊಂದು ಜನಪ್ರಿಯ ಅಂತರ್ಜಾಲ ತಾಣವಾದ ಫೇಸ್‌ಬುಕ್‌ನ ಮೊರೆ ಹೋದ. ಆಸ್ಟ್ರೇಲಿಯಾದ ತಾಸ್ಮೇನಿಯಾದಲ್ಲಿರುವ ನಾನು ಭಾರತದವನು. ಮಧ್ಯಪ್ರದೇಶದ ಖಾಂಡ್ವಾ ಬಳಿ ಇರುವ ಒಂದು ಹಳ್ಳಿ ನನ್ನ ಹುಟ್ಟೂರು ಎಂದು ನನ್ನ ಅನುಮಾನ. ಅದರ ಹೆಸರು 'ಜಿ' ಎಂಬ ಅಕ್ಷರದಿಂದ ಶುರುವಾಗುತ್ತದೆ. ಗೊತ್ತಿರುವವರು ದಯವಿಟ್ಟು ತಿಳಿಸಿ ಎಂದು 2011ರ ಏಪ್ರಿಲ್ 3ರಂದು ವಿನಂತಿಸಿದ. ಒಂದಿಡೀ ವಾರ ಕಾದರೂ ಪ್ರಯೋಜನವಾಗಲಿಲ್ಲ. ಆದರೆ, ಎರಡನೇ ವಾರ ಗೆಳೆಯನೊಬ್ಬ ಉತ್ತರ ಕಳಿಸಿದ್ದ: "ಗಣೇಶ್ ತಲಾಯ್ ಎಂಬ ಹಳ್ಳಿಯೊಂದಿದೆ. ಅದೇ ನಿಮ್ಮ ಊರಾಗಿರಬಹುದು...'
ಹೀಗೆ, ಒಂದೊಂದೇ ಮಾಹಿತಿ ಪಡೆದ ನಂತರವೂ ಅರ್ಧ ಮರೆವು, ಅರ್ಧ ಎಚ್ಚರ ಎಂಬಂಥ ಪರಿಸ್ಥಿತಿಯಿತ್ತು. ಆಗಿದ್ದಾಗಲೀ, ಒಮ್ಮೆ ಪ್ರಯತ್ನಿಸೋಣ ಎಂದುಕೊಂಡ ಸರೂ, 2012ರ ಫೆಬ್ರವರಿ 12ರಂದು ಖಾಂಡ್ವಾಗೆ ಬಂದೇ ಬಿಟ್ಟ. ಅವನ ಬಳಿ, ಅಮೂಲ್ಯ ಆಸ್ತಿಯೆಂಬಂತೆ ಬಾಲ್ಯದ ಫೋಟೋ ಇತ್ತು. ಗಣೇಶ್ ತಲಾಯ್‌ನ ಜನರಿಗೆ ಅದನ್ನು ತೋರಿಸುತ್ತಾ- ಇದು ನಾನು. 25 ವರ್ಷಗಳ ಹಿಂದೆ ಇಲ್ಲಿಂದ ತಪ್ಪಿಸಿಕೊಂಡು ಹೋಗಿ ಬಿಟ್ಟಿದ್ದೆ. ಈಗ ಅಮ್ಮನನ್ನು ಹುಡುಕಿಕೊಂಡು ಬಂದಿರುವೆ. ನಮ್ಮ ಅಮ್ಮನನ್ನು ತೋರಿಸ್ತೀರಾ? ಎಂದು ಪ್ರಾರ್ಥಿಸುತ್ತಿದ್ದ. ವಿಪರ್ಯಾಸವೆಂದರೆ, ಈ ಹುಡುಗನ ಇಂಗ್ಲಿಷ್ ಅಲ್ಲಿದ್ದ ಯಾರಿಗೂ ಅರ್ಥವಾಗುತ್ತಿರಲಿಲ್ಲ. ಕಡೆಗೆ, ಇಂಗ್ಲಿಷ್ ತಿಳಿದವನೊಬ್ಬ ಬಂದು, ಎಲ್ಲ ವಿವರಣೆ ಕೇಳಿ, ಫೋಟೋ ಪಡೆದು, ಮತ್ತೊಂದು ಕ್ರಾಸ್‌ಗೆ ಹೋಗಿ ನಾಲ್ಕೇ ನಿಮಿಷದಲ್ಲಿ ವಾಪಸ್ ಬಂದ. ನಂತರ ಬ್ರಿಯರ್ಲಿಯನ್ನು ಕರೆದೊಯ್ದು ಒಂದು ಹಳೆಯ ಮನೆಯ ಮುಂದೆ ನಿಲ್ಲಿಸಿ, ಎದುರಿಗಿದ್ದ ಮೂವರು ಹೆಂಗಸರಲ್ಲಿ, ಮಧ್ಯೆ ಇದ್ದಾಕೆಯನ್ನು ತೋರಿಸಿ 'ಅವರೇ ನಿಮ್ಮ ತಾಯಿ' ಎಂದ. ಆ ಹೆಂಗಸು ಏನೊಂದೂ ಮಾತನಾಡದೆ ನಡುಗುತ್ತಲೇ ಬಂದು ಬ್ರಿಯರ್ಲಿಯ ಹಣೆ ನೋಡಿದಳು. ಅಲ್ಲಿ ಕುದುರೆಯ ಒದೆತದಿಂದ ಆಗಿದ್ದ ಗಾಯದ ಮಚ್ಚೆ ಕಾಣಿಸಿಕೊಳ್ಳುತ್ತಲೇ- ಸರೂ, ನನ್ನ ಕಂದಾ ಎಂದು ಚೀರಿ, ಬಾಚಿ ತಬ್ಬಿಕೊಂಡಳು. ನಂತರದ ಇಪ್ಪತ್ತು ನಿಮಿಷದವರೆಗೂ ಈ ಅಮ್ಮ-ಮಗ ಪರಸ್ಪರರನ್ನು ನೋಡುತ್ತಾ, ಕಂಬನಿ ಮಿಡಿಯುತ್ತಾ ನಿಂತು ಬಿಟ್ಟಿದ್ದರು. ಆ ಸಂದರ್ಭದಲ್ಲಿ, ಅವರ ಮನಸುಗಳು ಮಾತಾಡಿಕೊಂಡವು. ಹತ್ತು ನಿಮಿಷದ ಅಂತರದಲ್ಲಿ ಅಲ್ಲಿಗೆ ಓಡಿ ಬಂದ ಫಾತಿಮಾಳ ಇನ್ನಿಬ್ಬರು ಮಕ್ಕಳು, 25 ವರ್ಷಗಳ ಸುದೀರ್ಘ ಅವಧಿಯ ನಂತರ ತಮ್ಮ ಸೋದರನನ್ನು ಕಂಡು ಖುಷಿಯಾದರು.
ಬ್ರಿಯರ್ಲಿ ಅಲಿಯಾಸ್ ಸರೂ, ಈಗ ತಾಸ್ಮೇನಿಯಾದಲ್ಲಿದ್ದಾನೆ. ಫಾತಿಮಾಗೆ ತಿಂಗಳು ತಿಂಗಳೂ ಹಣ ಕಳಿಸುತ್ತಾನೆ. ತಮ್ಮ ತಂಗಿಯನ್ನು ಸಾಕುವ, ಅವರಿಗೆ ಒಂದು ಮನೆ ಕಟ್ಟಿಸಿಕೊಡುವ ಅವಸರದಲ್ಲಿದ್ದಾನೆ. ಅದೇ ಸಂದರ್ಭದಲ್ಲಿ ತನ್ನನ್ನು ಸಾಕಿದ ಆಸ್ಟ್ರೇಲಿಯಾದ ಪೋಷಕರ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾನೆ. ನಂಬಲು ಸಾಧ್ಯವೇ ಇಲ್ಲ ಎಂಬಂಥ ಪವಾಡ ನನ್ನ ಬದುಕಲ್ಲಿ ನಡೆದು ಹೋಯಿತು. ಅದಕ್ಕೆ ಕಾರಣವಾದ ಗೂಗಲ್ ಅಂತರ್ಜಾಲ ತಾಣಕ್ಕೆ ನಮೋನ್ನಮಃ ಎನ್ನುತ್ತಾ ಭಾವುಕನಾಗುತ್ತಾನೆ.
ಅಂತರ್ಜಾಲದ ಕಾರಣದಿಂದ ಯುವಕರು ಹಾಳಾಗುತ್ತಿದ್ದಾರೆ. ಫೇಸ್ ಬುಕ್‌ನಿಂದ ಗುಂಪುಗಾರಿಕೆ ಬೆಳೆಯುತ್ತಿದೆ ಎಂಬಂಥ ಮಾತುಗಳು ಹೆಚ್ಚಾಗಿ ಕೇಳುತ್ತಿರುವ ಸಂದರ್ಭದಲ್ಲಿಯೇ, ಅಂತರ್ಜಾಲದ ಕಾರಣದಿಂದಲೇ 25 ವರ್ಷಗಳ ನಂತರ ತಾಯಿ-ಮಗ ಒಂದಾದ ಈ ಹೃದ್ಯ ಪ್ರಸಂಗವು ರೀಡರ್ಸ್ ಡೈಜೆಸ್ಟ್‌ನಲ್ಲಿ ವರದಿಯಾಗಿದೆ. ಖುಷಿಯಲ್ಲವೆ?

-ಎ.ಆರ್. ಮಣಿಕಾಂತ್
armanikanth@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.