ಅಂಕಣಗಳು

ಗಲ್ಲಿಗೆ ಏರಿಸುವಲ್ಲೂ ಸೌಜನ್ಯವಿರಬೇಕು

Published On :

ವೀರಪ್ಪನ್ ಪ್ರಕರಣದಲ್ಲಿ ನಾಲ್ಕು ಆರೋಪಿಗಳಿಗೆ ಮರಣದಂಡನೆ ಶಿಕ್ಷೆಯನ್ನು ನೀಡಿ ಸುಪ್ರೀಂಕೋರ್ಟ್ 2004ರಲ್ಲಿ ತೀರ್ಪು ನೀಡಿತು. ಈ ದೇಶದ ಅತ್ಯುನ್ನತ ನ್ಯಾಯಾಲಯವೇ 9 ವರ್ಷಗಳ ಹಿಂದೆಯೇ ತೀರ್ಪು ನೀಡಿದ್ದರೂ, ಶಿಕ್ಷೆಯು ಅದೇಕೆ ಜಾರಿಯಾಗಲಿಲ್ಲ? ಒಂದು ನ್ಯಾಯಾಲಯವು ತಾನೇ ನೀಡಿದ ತೀರ್ಪನ್ನು ಮರುಪರಿಶೀಲಿಸಬಹುದೇ?! ತನ್ನ ಹಿಂದಿನ ತೀರ್ಪು ತಪ್ಪು ಎಂದು ಸುಪ್ರಿಂಕೋರ್ಟ್ ಈಗ ಹೇಳಬಹುದೇ?! ಕ್ಷಮೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ರಾಷ್ಟ್ರಪತಿಗಳು ವಿಳಂಬಿಸಿದ ಮಾತ್ರಕ್ಕೆ ಅಪರಾಧಿಗಳು ನಿರಪರಾಧಿಗಳಾಗುವರೇ? ರಾಷ್ಟ್ರಪತಿಗಳ ನಿರ್ಧಾರದ ವಿರುದ್ಧವೂ ಅಪೀಲು ಹಾಕಬಹುದೇ?! ಇಂಥಹ ಅರ್ಜಿಗಳು ಪುರಸ್ಕರಿಸಲ್ಪಟ್ಟರೆ ಸಮಾಜಕ್ಕೆ ಎಂಥಹ ಮೆಸೇಜ್ ಹೋಗುತ್ತದೆ?! ಮರಣದಂಡನೆಗೆ ಗುರಿಯಾದ ಅಪರಾಧಿಗಳೆಲ್ಲ ಹೀಗೆ ಅಪೀಲು ಸಲ್ಲಿಸುತ್ತಾ ಪರಿಹಾರ ಪಡೆದರೆ ಗತಿ ಏನು?!
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮೊದಲು ಹಿನ್ನೆಲೆಯನ್ನು ನೋಡಬೇಕು.
1993ರಲ್ಲಿ ನಡೆದ ಪಾಲಾರ್ ಸ್ಫೋಟ ಪ್ರಕರಣದಲ್ಲಿ (ವೀರಪ್ಪನ್ ಪ್ರಕರಣ) ನಾಲ್ವರು ತಪ್ಪಿತಸ್ಥರೆಂದು ಮೈಸೂರಿನ ಟಾಡಾ ನ್ಯಾಯಾಲಯವು ತೀರ್ಮಾನಿಸಿ 2001ರಲ್ಲಿ ಅವರಿಗೆ ಜೀವಾವಧಿ ಜೈಲುವಾಸ ಶಿಕ್ಷೆ ವಿಧಿಸಿತು. ಈ ತೀರ್ಪಿನ ವಿರುದ್ಧ ಮೇಲ್ಮನವಿಯಲ್ಲಿ ಸುಪ್ರಿಂಕೋರ್ಟ್ ಈ ನಾಲ್ವರಿಗೂ ಮರಣದಂಡನೆ ವಿಧಿಸಿ 2004ರಲ್ಲಿ ತೀರ್ಪು ನೀಡಿತು. ಅಲ್ಲಿಗೆ ಪ್ರಕರಣದ ಎಲ್ಲಾ ನ್ಯಾಯಾಂಗ ಪ್ರಕ್ರಿಯೆಗಳು ಮುಕ್ತಾಯವಾದಂತೆ. ದೇಶದ ಅತ್ಯುನ್ನತ ನ್ಯಾಯಾಲಯದ ತೀರ್ಪನ್ನು ಜಾರಿಗೆ ತರುವುದೊಂದು ಬಾಕಿ ಇತ್ತು. ಅಷ್ಟರಲ್ಲಿ ದಂಡಿತರು ರಾಷ್ಟ್ರಪತಿಗಳಲ್ಲಿ ಕ್ಷಮಾ ಅರ್ಜಿ ಸಲ್ಲಿಸಿದರು. ಇತ್ತೀಚೆಗೆ ಈ ಅರ್ಜಿಯು ತಿರಸ್ಕೃತವಾಯಿತು. ಇದು ಹಿನ್ನೆಲೆ.
ಮರಣದಂಡನೆಗೆ ಗುರಿಯಾದ ಯಾವುದೇ ವ್ಯಕ್ತಿಯು ತನ್ನ ದೇಶದ ಅತ್ಯುನ್ನತ ಪ್ರಜೆಯಾದ ರಾಷ್ಟ್ರಪತಿಗಳಲ್ಲಿ ತನ್ನ ದುಃಸ್ಥಿತಿಯನ್ನು ಭಿನ್ನವಿಸಿಕೊಳ್ಳಬಹುದು. ಪ್ರಜಾಪ್ರಭುತ್ವದ ತಂದೆಯ ಬಳಿ, ನಾಗರಿಕನೆಂಬ ಮಗ ಕ್ಷಮೆ ಕೇಳುವಂತೆ. ಯಾವ ಸ್ಥಿತಿಯಲ್ಲಿ, ಎಂಥಹ ಹಿನ್ನೆಲೆಯಲ್ಲಿ ಅಪರಾಧ ಎಸಗಲಾಯಿತು? ಯಾವ ಕಾರಣದಿಂದಾಗಿ? ಅದರಿಂದ ಸಮಾಜದ ಮೇಲೆ ಆದ ಪರಿಣಾಮವೇನು? ಕ್ಷಮಿಸುವ/ ಕ್ಷಮಿಸದೇ ಇರುವ ಪರಿಣಾಮಗಳೇನು? ಎಂಬಿತ್ಯಾದಿ ಸಂಗತಿಗಳ ಆಧಾರದ ಮೇಲೆ ರಾಷ್ಟ್ರಪತಿಗಳು 'ಕ್ಷಮಾ ಅರ್ಜಿ'ಯನ್ನು ಪರಿಗಣಿಸಬೇಕೆಂದು ಸಂವಿಧಾನದ ವಿಧಿ 72 ನಿರ್ದೇಶಿಸುತ್ತದೆ. ಅಪರಾಧಿ ಮಗನನ್ನು ಕ್ಷಮಿಸುವುದರಿಂದ ತನ್ನ ಇತರೆ ಮಕ್ಕಳ ಶಾಂತಿ-ಸಮಾಧಾನಗಳ ಮೇಲಾಗುವ ದುಷ್ಪರಿಣಾಮಗಳೇನು? ತನ್ನ ನಾಗರಿಕನ ಜೀವಿಸುವ ಹಕ್ಕನ್ನು ಕಿತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆಯೇ, ಹಾಗೆ ಮಾಡದಿದ್ದರೆ ಈ ದೇಶದ ಶಾಂತಿ-ಸುವ್ಯವಸ್ಥೆಗಾಗಿ ಸೇವೆ ಸಲ್ಲಿಸುತ್ತಿರುವವರ Morale ಮೇಲಾಗುವ ಪರಿಣಾಮಗಳೇನು? ಈ ಎಲ್ಲಾ ವಿಚಾರಗಳನ್ನು ತೂಗಿ ನೋಡಿ, ರಾಷ್ಟ್ರಪತಿಗಳು ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ. ಇದು ರಾಷ್ಟ್ರಪತಿಗಳಿಗಿರುವ ಅತ್ಯಂತ ಸೂಕ್ಷ್ಮವಾದ ಕರ್ತವ್ಯ. ಕಾರಣ, ಈ ದೇಶದ ಎಲ್ಲಾ ನ್ಯಾಯಾಲಯಗಳ ವಿಚಾರಣೆ ನಂತರವೂ, ತನ್ನ ವಿವೇಚನೆಗೆ ತಕ್ಕಂತೆ ತೀರ್ಮಾನಿಸುವ ಪರಮಾಧಿಕಾರವಿದು. ಅಂತೆಯೇ ಇದು ಪರಮ ಕರ್ತವ್ಯವೂ ಹೌದು.
ಇಂಥಹ ಪರಮ ಕರ್ತವ್ಯವನ್ನು ನಿರ್ವಹಿಸಲು ಈ ಪ್ರಕರಣದಲ್ಲಿ ರಾಷ್ಟ್ರಪತಿಗಳು ಸುಮಾರು 9 ವರ್ಷಗಳನ್ನು ತೆಗೆದುಕೊಂಡರು! 'ಕ್ಷಮಿಸುತ್ತೇನೆ ಅಥವಾ ಕ್ಷಮಿಸಲು ಆಗುತ್ತಿಲ್ಲ' ಇಷ್ಟನ್ನು ನಿರ್ಧರಿಸಲು ಸುಮಾರು 9 ವರ್ಷಗಳು! ರಾಷ್ಟ್ರಪತಿಗಳು ತೀರ್ಮಾನಿಸುವವರೆಗೂ ಸುಪ್ರಿಂಕೋರ್ಟ್ ನಿರ್ಧಾರವನ್ನು ಜಾರಿ ಮಾಡಲಾಗದು. ಅಂತೆಯೇ ಅರ್ಜಿದಾರನೂ ಕೂಡ ಪ್ರತಿದಿನವೂ ಮರಣದ ಭಯದಲ್ಲೇ ಜೈಲಿನಲ್ಲಿ ಜೀವಂತ ಶವವಾಗಿರಬೇಕು! ಬದುಕಿ ಬರುವರೋ-ಇಲ್ಲವೋ ಎಂದು ಬಂಧು-ಮಕ್ಕಳೂ ಆತಂಕದಲ್ಲೇ ಕಾಲ ಕಳೆಯಬೇಕು. ಪೊಲೀಸ್ -ಜೈಲುಗಳಿಗೆ ಅನಗತ್ಯ ಹೊರೆ; ಬಂಧಿತರಿಗೆ ಮತ್ತವರ ಬಂಧುಗಳಿಗೆ ಅನಿವಾರ್ಯ ಆತಂಕ ಪ್ರತಿದಿನವೂ ಅನುಕ್ಷಣವೂ 9 ವರ್ಷಗಳ ಕಾಲ. ಇದರಿಂದಾಗಿ ಶಿಕ್ಷಿತರು ಅದಾಗಲೇ 20 ವರ್ಷ ಜೈಲುವಾಸ ಅನುಭವಿಸುವಂತಾಯ್ತು.
ಶಿಕ್ಷಿಸಲ್ಪಡುವವರು ಅನಾಗರಿಕ, ಅತ್ಯಂತ ಕ್ರೂರಿಯೇ ಆಗಿರಬಹುದು; ಆದರೆ ಶಿಕ್ಷಿಸುತ್ತಿರುವುದು ನಾಗರಿಕ ಸಮಾಜ. ಶಿಕ್ಷಿಸುವಾಗಲೂ ಸೌಜನ್ಯದಿಂದಲೇ ನಡೆಯಬೇಕು. ಹುಟ್ಟು-ಸಾವುಗಳಂತಹ ನಿಸರ್ಗ ನಿಯಮದಲ್ಲಿ ಅತ್ಯಂತ ವಿನಮ್ರತೆಯಿಂದ ಹಸ್ತಕ್ಷೇಪ ಮಾಡಬೇಕು. ಇದು ಭಾರತದ ಸಂವಿಧಾನದ ವಿಧಿ. ಅಂತೆಯೇ ನಮ್ಮ ಸಂವಿಧಾನ ವಿಶ್ವ ಶ್ರೇಷ್ಠ.
ಭಾರತದ ರಾಷ್ಟ್ರಪತಿಗಳು ತಮ್ಮ ಕರ್ತವ್ಯವನ್ನು ನಿಭಾಯಿಸಲು ಸುಮಾರು 9 ವರ್ಷಗಳಷ್ಟು ದೀರ್ಘ ಕಾಲ ತೆಗೆದುಕೊಂಡಿದ್ದರಿಂದ ಅನೇಕ ಕಾನೂನು ಜಿಜ್ಞಾಸೆಗೆ ಕಾರಣವಾಗಿದೆ. ಇಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಪರಿಗಣಿಸುತ್ತಿರುವುದು ವೀರಪ್ಪನ್ ಸಹಚರರು ಅಪರಾಧಿ ಅಥವಾ ನಿರಪರಾಧಿಗಳೇ ಎಂದಲ್ಲ. ತಾನು ನೀಡಿದ ಗಲ್ಲು ಶಿಕ್ಷೆ ಸರಿಯೇ-ತಪ್ಪೇ ಎಂದೂ ಅಲ್ಲ. ಬದಲಾಗಿ ಒಬ್ಬ ರಾಷ್ಟ್ರಪತಿಯು ಇಷ್ಟೊಂದು ದೀರ್ಘಕಾಲ In-sensitve ಆಗಿರಬಹುದೇ? ಮತ್ತು ಅಂಥಹ   In-activity  ಈ ದೇಶದ ನಾಗರಿಕನ "ಬದುಕುವ ಹಕ್ಕು" ಮತ್ತು ಒಂದೇ ತಪ್ಪಿಗೆ ಎರಡು ಬಾರಿ ಜೀವಾವಧಿ ಜೈಲು ಮತ್ತು ಮರಣದಂಡನೆ ಎಂಬುದಾಗಿ ಶಿಕ್ಷಿಸಲ್ಪಡಬಹುದೇ? ಎಂಬ ಕಾನೂನಿನ ಪ್ರಶ್ನೆಗಳು ಉದ್ಭವಿಸಿದೆ. ಬದುಕುವ ಹಕ್ಕು ಮತ್ತು ಕಾನೂನಿಗೆ ಅನುಗುಣವಾಗಿ ಮಾತ್ರ ಜೀವಹರಣ -ಅದೂ ನಾಗರಿಕವಾಗಿ. ಇದು ಈ ದೇಶದ ಪ್ರತಿಯೊಬ್ಬರ ಮೂಲಭೂತ ಸಾಂವಿಧಾನಿಕ ಹಕ್ಕು.  ರಾಷ್ಟ್ರಪತಿಗಳು, ಪಾರ್ಲಿಮೆಂಟ್ ಕೊಟ್ಟಿರುವ ಸವಲತ್ತುಗಳಲ್ಲ. ಸಾಂವಿಧಾನಿಕ ಹಕ್ಕನ್ನು ಸಾಂವಿಧಾನಿಕವಾಗಿಯೇ ನಿರಾಕರಿಸಬೇಕು. ಸಂವಿಧಾನದ ಆಶಯದಂತೆ ರಾಷ್ಟ್ರಪತಿ ಅಥವಾ ಯಾರೇ ನಡೆಯದಿದ್ದರೂ ಅದು ಪ್ರಶ್ನಾರ್ಹ. ಅಂಥ ಪ್ರಶ್ನೆಯನ್ನು ಸುಪ್ರಿಂಕೋರ್ಟ್ ಬಗೆಹರಿಸಲೇಬೇಕು. ಏಕೆಂದರೆ ಸಂವಿಧಾನದ ರಕ್ಷಣೆಯು ಸರ್ವೋಚ್ಛ ನ್ಯಾಯಾಲಯದ ಹೊಣೆಗಾರಿಕೆ.
ಇಂಥಹ ಪರಿಸ್ಥಿತಿ ಉದ್ಭವಿಸಲು ರಾಷ್ಟ್ರಪತಿಗಳು ಕಾರಣ. ಜೀವನವನ್ನು ಕೊಡುವ ಇಲ್ಲವೇ ನಿರಾಕರಿಸುವ ಪರಮಾತ್ಮನ ಸ್ಥಾನದಲ್ಲಿರುವ ರಾಷ್ಟ್ರಪತಿಗಳು ಕ್ಷಮಾ ಅರ್ಜಿಯನ್ನು ಇತ್ಯರ್ಥ ಪಡಿಸಲು 9 ವರ್ಷ ತೆಗೆದುಕೊಂಡದ್ದು ನಾಗರಿಕ ಮೂಲಭೂತ ಹಕ್ಕುಗಳ ಉಲ್ಲಂಘನೆಯೇ, ಸಂವಿಧಾನ ವಿರೋಧಿಯೇ ಎಂಬೀ ಪ್ರಶ್ನೆಗಳು ಈಗ ಸರ್ವೋಚ್ಛ ನ್ಯಾಯಾಲಯದ ಮುಂದಿದೆ. ಇದರ ಲಾಭ ವೀರಪ್ಪನ್ ಸಹಚರರಿಗೆ ದೊರಕುವುದೇ- ಇಲ್ಲವೇ ಎಂಬುದಕ್ಕಿಂತ ವಿಶಾಲ ತಳಹದಿಯ ಪ್ರಶ್ನೆಗಳು ಎದ್ದಿವೆ. ಅಪರಾಧಿಯೇ ಆಗಿದ್ದರೂ ಆತ ಸಾಯುವ ಕ್ಷಣದವರೆಗೂ ಆತನಿಗೆ ಮೂಲಭೂತ ಹಕ್ಕುಗಳಿವೆ; ಆತನ ಜೀವಹರಣವೂ ನಾಗರಿಕವಾಗಿಯೇ ನಡೆಯಬೇಕು. ಹಾಗಿಲ್ಲವಾದರೆ ಆತನಿಗೆ ಸಂವಿಧಾನವು ವಿಧಿ 21ರ ಕೆಳಗೆ ನೀಡಿರುವ ''No Person shall be deprived of his life except accordingly to procedure established by law'' ನಿಯಮದ ಉಲ್ಲಂಘನೆಯಾಗುವುದು. ಈ ಕಾನೂನಿನ ಜಿಜ್ಞಾಸೆಯನ್ನೇ ಈಗ ಸುಪ್ರಿಂಕೋರ್ಟ್ ಇತ್ಯರ್ಥ ಪಡಿಸಬೇಕಿದೆ.

-ವೇಣುಗೋಪಾಲ, ವಕೀಲರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.