ಕುಲಪತಿ ನೇಮಕ ಕಾಸಿನ ದಂಧೆಯೇ?
ಈ ರಾಜ್ಯದಲ್ಲಿರುವ 15 ಹಳೆಯ ಹಾಗೂ ಹೊಸದಾಗಿ ಪ್ರಾರಂಭವಾಗುತ್ತಿರುವ 10 ವಿವಿಗಳ ಕುಲಪತಿ ಹುದ್ದೆಗಳು ಬಿಕರಿಗಿವೆಯೇ?!
ಪದವಿ ಶಿಕ್ಷಣ ವ್ಯವಸ್ಥೆಯ ಅತ್ಯುನ್ನತ ಕುಲಪತಿ ಸ್ಥಾನಕ್ಕೆ ಬರೋಬ್ಬರಿ 6 ಕೋಟಿ ಲಂಚ ಕೇಳಲಾಗುತ್ತಿದೆ ಎಂದು ವಿಧಾನ ಪರಿಷತ್ನ ಹಿರಿಯ ಸದಸ್ಯರೊಬ್ಬರು ಹೇಳುತ್ತಾರೆ. ಆದರೆ ಅದು ಕೇವಲ ಸದನದ ವಿಷಯವಾಗಿ ಮುಚ್ಚಿಹೋಗುತ್ತದೆ. ಪ್ರತಿಪಕ್ಷ ಮುಖಂಡರು ಧ್ವನಿಯೇರಿಸುವುದಿಲ್ಲ, ಆಡಳಿತ ಪಕ್ಷದ ನಾಯಕರು ನಗೆ ಚಾಟಿಕೆ ಹಾರಿಸಿ ಸುಮ್ಮನಾಗುತ್ತಾರೆ. ವ್ಯವಸ್ಥೆಯಲ್ಲಿನ ಇತರ ಬುದ್ಧಿಜೀವಿಗಳು ಸೊಲ್ಲೆತ್ತುವುದಿಲ್ಲ.
ಹಾಗಿದ್ದರೆ ಈ ವ್ಯವಹಾರಗಳ ವಾರ್ಷಿಕ ಲೆಕ್ಕಾಚಾರವೆಷ್ಟು? ವಿವಿಗಳಿಂದ ಲೂಟಿಯಾಗುವ ಹಣವೆಷ್ಟು?
ವಿಧಾನ ಪರಿಷತ್ ಸದಸ್ಯರಾದ ಕೃಷ್ಣ ಭಟ್ ಅವರು ಸದನದಲ್ಲಿ ಹೀಗೆ ಹೇಳುತ್ತಾರೆ, 'ಈ ವಿಷಯವನ್ನು ನಾನಿಲ್ಲಿ ಪ್ರಸ್ತಾಪಿಸಬಹುದೇ ಎಂದು ಗೊತ್ತಿಲ್ಲ. ಸಮಂಜಸವಾಗಿರದಿದ್ದರೆ ಕಡತದಿಂದ ತೆಗೆದುಬಿಡಿ. ರಾಜ್ಯದ ಒಂದು ವಿಶ್ವವಿದ್ಯಾಲಯ ಕುಲಪತಿ ಹುದ್ದೆಗೆ ನೇಮಕ ಪ್ರಕ್ರಿಯೆ ಆರಂಭವಾಗುತ್ತಿತ್ತು. ಈ ಸಂದರ್ಭದಲ್ಲಿ ಶೋಧನಾ ಸಮಿತಿಯ ಎದುರು ಒಬ್ಬ ಮಹಿಳೆಯ ಹೆಸರು ಕೂಡ ಪ್ರಸ್ತಾಪವಾಗಿತ್ತು. ಅವರು ನನ್ನ ಬಳಿ ಬಂದು 'ಅಂತಿಮ ಪಟ್ಟಿಯಲ್ಲಿ ನನ್ನ ಹೆಸರು ಸೇರಿಸುವ ಕುರಿತಂತೆ ತಾವು ಏನಾದರೂ ಹೇಳಬಹುದೇ? ಅಂತಿಮ ಪಟ್ಟಿಯಲ್ಲಿ ಬಂದರೇ ಕೇಂದ್ರ ಸಚಿವರೊಬ್ಬರ ಮೂಲಕ 'ವ್ಯವಸ್ಥೆ' ಮಾಡಿಸಿಕೊಳ್ಳುತ್ತೇನೆ, ಅವರು ಭರವಸೆ ನೀಡಿದ್ದಾರೆ' ಎಂದು ಹೇಳಿದರು. ಹುದ್ದೆಗೆ ಅವರು ಸಮರ್ಥಳೆಂದು ತಿಳಿದು ನನ್ನ ಕೆಲ ಪರಿಚಿತರಿಗೆ ಹೇಳಿದೆ ಕೂಡ. ಕೊನೆಯದಾಗಿ ಅಂತಿಮ ಪಟ್ಟಿಯಲ್ಲೂ ಹೆಸರು ಬಂತು. ಆದರೆ ಆ ಸಂದರ್ಭದಲ್ಲಿ ಅವರು 6 ಕೋಟಿ ಹಣ ನೀಡಬೇಕಾಗಿ ಬಂತು. ಹಣ ನೀಡಲಿಲ್ಲ ಎನಿಸುತ್ತದೆ. ಇದಲ್ಲದೇ ಕೇಂದ್ರ ಸಚಿವರು ದೂರವಾಣಿ ಕರೆಯನ್ನು ಸ್ವೀಕರಿಸಲಿಲ್ಲವಂತೆ. ಹಾಗಾಗಿ ಆಯ್ಕೆಯಾಗಲಿಲ್ಲ'.
ಕೃಷ್ಣ ಭಟ್ರ ಹೇಳಿಕೆಗೆ ಸದನದ ಕೆಲ ಹಿರಿಯ ಸದಸ್ಯರು ಸಹಮತವ್ಯಕ್ತಪಡಿಸುತ್ತಾರೆ. ಕುಲಪತಿಯಾಗಲು ನಿವೇಶನ ಮಾರಿಕೊಳ್ಳಬೇಕಿದೆ, ಹೀಗಾದರೇ ಕುಲಪತಿಯಾದ ಬಳಿಕ ವ್ಯವಹಾರಕ್ಕೆ ಕೂರದೇ ಇರುತ್ತಾರೆಯೇ ಎಂದು ಇದೇ ಕೆಲ ಸದಸ್ಯರು ಪ್ರಶ್ನಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ಉನ್ನತ ಶಿಕ್ಷಣ ಸಚಿವರು, 'ನಾನು ಹಣ ತೆಗೆದುಕೊಂಡಿಲ್ಲ ಎಂದು ಪ್ರಮಾಣ ಮಾಡಬಲ್ಲೆ. ಉಳಿದವರ ವಿಷಯ ನನಗೆ ಗೊತ್ತಿಲ್ಲ' ಎಂದು ಕಾಣದ ಕೈಗಳತ್ತ ಬೊಟ್ಟು ಮಾಡಿ ತೋರಿಸುತ್ತಾರೆ. ಅಂತಿಮವಾಗಿ ಕೃಷ್ಣ ಭಟ್ ಹೇಳಿದ ವಿಚಾರವನ್ನು ಕಡತದಿಂದ ತೆಗೆದುಹಾಕುವುದೂ ಇಲ್ಲ. ಅಷ್ಟಕ್ಕೂ ಸದನದಲ್ಲಿ ಪ್ರಸ್ತಾಪಿಸಲಾಗದ ಆ 'ಲಂಚಾವತಾರದ' ಹೆಸರು ಅಥವಾ ಹುದ್ದೆ ಯಾವುದೆಂಬ ಹುಳುವನ್ನು ಬಿಡಲು ಕೃಷ್ಣ ಭಟ್ ಸಫಲರಾದರು. ಈ ಚರ್ಚೆಯಲ್ಲಿ ಕಾಂಗ್ರೆಸ್ ಸದಸ್ಯರು ಕೂಡ ಮೌನವಾಗಿದ್ದರು ಎಂಬುದು ತಿಳಿದಿರಲಿ.
ವಿಧಾನ ಪರಿಷತ್ನ ಹಿರಿಯ ಸದಸ್ಯರು ವಿಶ್ವವಿದ್ಯಾಲಯ ಹಾಗೂ ಕುಲಪತಿಯ ಹೆಸರನ್ನು ಹೇಳದೇ ಇರಬಹುದು. ಆದರೆ ಅವರು ಪ್ರಸ್ತಾಪಿಸಿರುವ ವಿಷಯ ಬೆಂಗಳೂರು, ಕರ್ನಾಟಕ ಮುಕ್ತ ವಿವಿ ಅಥವಾ ಮೈಸೂರು ವಿವಿಗೆ ಸಂಬಂಧಿಸಿದ್ದಾಗಿದೆ. ಕಳೆದ ಒಂದು ವರ್ಷದಲ್ಲಿ ನೂತನವಾಗಿ ಕುಲಪತಿ ನೇಮಕವಾದ ವಿಶ್ವವಿದ್ಯಾಲಯಗಳಿವು. ಕೃಷ್ಣ ಭಟ್ ಪ್ರಸ್ತಾಪಿಸಿದ 6 ಕೋಟಿ ವಿಷಯ ಈ 3 ವಿವಿಯ ಸುತ್ತಲೇ ಗಿರಕಿ ಹೊಡೆಯುತ್ತದೆ. ಹಾಗಿದ್ದರೆ ಸರ್ಕಾರದಂತಹ ವ್ಯವಸ್ಥೆಗೆ ಇದನ್ನು ಪತ್ತೆಹಚ್ಚುವುದು ಕಷ್ಟವೇ? ಇಲ್ಲವಾದಲ್ಲಿ 'ತಾನು ಹಣ ಪಡೆದಿಲ್ಲ' ಎಂದು ಉನ್ನತ ಶಿಕ್ಷಣ ಸಚಿವರು ಪ್ರಮಾಣ ಮಾಡಿ ಕೈತೊಳೆದುಕೊಳ್ಳುವ ವಿಷಯವೇ?
ಕೃಷ್ಣ ಭಟ್ ಪ್ರಸ್ತಾಪಿಸಿರುವ ವಿಚಾರವು ಕಳೆದ ಕೆಲ ತಿಂಗಳಿಂದ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಆದರೆ ಅವೆಲ್ಲವನ್ನೂ ಗಾಳಿ ಸುದ್ದಿ, ಬೀದಿಯಲ್ಲಿ ಹೋಗುವವರ ಹರಟೆ ಎಂದು ಕಡೆಗಣಿಸಬಹುದಿತ್ತು. ಆದರೆ ಜನಪ್ರತಿನಿಧಿ ಅದರಲ್ಲೂ ಆಡಳಿತ ಪಕ್ಷದ ಒಬ್ಬ ಜವಾಬ್ದಾರಿಯುತ ಸದಸ್ಯರೇ ಕುಲಪತಿ ನೇಮಕದ 'ವ್ಯವಹಾರ'ದ ಬಗ್ಗೆ ವಿಧಾನ ಪರಿಷತ್ನಲ್ಲಿ ಅಳಲು ತೋಡಿಕೊಂಡಿದ್ದಾರೆ. ಮತ್ತೊಂದು ವಿಚಿತ್ರವೆಂದರೆ ಇದ್ಯಾವುದನ್ನು ಸರ್ಕಾರ, ಆಡಳಿತ ಪಕ್ಷದ ಸದಸ್ಯರು, ಪ್ರತಿಪಕ್ಷವಾದ ಕಾಂಗ್ರೆಸ್ ಹಾಗೂ ಜೆಡಿಎಸ್ನ ಸದಸ್ಯರು ಅಲ್ಲಗಳೆಯುವುದಿಲ್ಲ. ಕೆಲವರು ಮೌನವಹಿಸಿದರೆ ಇನ್ನು ಕೆಲವರು ಮತ್ತಷ್ಟು ನೇಮಕಾತಿ ವ್ಯವಹಾರದ ಲೆಕ್ಕಾಚಾರ ಪ್ರಕಟಿಸುತ್ತಾರೆ. ಹಾಗಿದ್ದರೆ ಈ ಲೆಕ್ಕಾಚಾರಗಳು ಸಂದಾಯವಾಗಿದ್ದು ಯಾರಿಗೆ? ಈ ಲೆಕ್ಕಾಚಾರದಲ್ಲಿ ಯಾರ್ಯಾರಿಗೆ ಪಾಲಿದೆ ಎನ್ನುವುದು ಸಾರ್ವಜನಿಕರಿಗೆ ತಿಳಿಯಬೇಕಲ್ಲವೇ? ಅಥವಾ ಕೃಷ್ಣ ಭಟ್ ಹೇಳಿರುವುದೆಲ್ಲ ಸುಳ್ಳು ಎಂದು ಸರ್ಕಾರ ಹೇಳಬೇಕು.
ಕುಲಪತಿ ನೇಮಕದಲ್ಲಿ ಪ್ರಮುಖವಾಗಿ ನಾಲ್ವರ ಪಾತ್ರವಿರುತ್ತದೆ. ಶೋಧನಾ ಸಮಿತಿ, ಉನ್ನತ ಶಿಕ್ಷಣ ಸಚಿವರು, ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಪಾಲರು ಕುಲಪತಿ ನೇಮಕದ ಭೂಮಿಕೆ ನಿಭಾಯಿಸುತ್ತಾರೆ. ಶೋಧನಾ ಸಮಿತಿಯು ಮೂವರು ಸದಸ್ಯರ ಹೆಸರನ್ನೊಳಗೊಂಡ ಲಕೋಟೆಯನ್ನು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸುತ್ತದೆ. ಪ್ರಧಾನ ಕಾರ್ಯದರ್ಶಿ ಲಕೋಟೆಯನ್ನು ತೆರೆಯದೇ ಸಹ ಕುಲಾಧಿಪತಿಯಾದ ಉನ್ನತ ಶಿಕ್ಷಣ ಸಚಿವರಿಗೆ ನೀಡುತ್ತಾರೆ. ಮೂವರಲ್ಲಿ ಒಬ್ಬರ ಹೆಸರನ್ನು ಶಿಫಾರಸು ಮಾಡಿ ಮುಖ್ಯಮಂತ್ರಿ ಮೂಲಕ ಅಂತಿಮವಾಗಿ ರಾಜ್ಯಪಾಲರಿಗೆ ಪಟ್ಟಿ ಹೋಗುತ್ತದೆ. ಸರ್ಕಾರದ ಶಿಫಾರಸಿನ ಜತೆಗೆ ಇತರ ಇಬ್ಬರನ್ನು ಕೂಡ ಕುಲಪತಿಯಾಗಿ ನೇಮಿಸುವ ಅಧಿಕಾರ ಕುಲಾಧಿಪತಿಯಾಗಿರುವ ರಾಜ್ಯಪಾಲರಿಗೆ ಇರುತ್ತದೆ. ಕೃಷ್ಣ ಭಟ್ ಹೇಳಿರುವ 6 ಕೋಟಿ ಲಂಚದ ವಾಸನೆ ಈ ನಾಲ್ಕು ವ್ಯವಸ್ಥೆಯ ಸುತ್ತವೇ ಇರಬೇಕು.
ಇಲ್ಲಿ ಮತ್ತೊಂದು ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಕೇಂದ್ರ ಸಚಿವರು 'ವ್ಯವಸ್ಥೆ' ಮಾಡುತ್ತಾರೆಂದು ಆಕಾಂಕ್ಷಿತ ಅಭ್ಯರ್ಥಿ ಹೇಳುತ್ತಾರಂತೆ. ಹಾಗಿದ್ದರೆ ರಾಜ್ಯ ಸರ್ಕಾರವನ್ನು ಬೈಪಾಸ್ ಮಾಡಿ ಕೇಂದ್ರ ಸಚಿವರು ನೇಮಕ ಪ್ರಕ್ರಿಯೆಯ ಮೇಲೆ ಹೇಗೆ ಪ್ರಭಾವ ಬೀರುತ್ತಾರೆ? ಕೇಂದ್ರ ಕಾಂಗ್ರೆಸ್ ನಾಯಕರ ಪ್ರಭಾವಕ್ಕೆ ಮಣಿಯುವ ಶಕ್ತಿ ರಾಜ್ಯದಲ್ಲಿ ಯಾವುದಿದೆ?
ಒಂದೊಮ್ಮೆ ಕೃಷ್ಣ ಭಟ್ ಪ್ರಸ್ತಾಪಿಸಿರುವ 6 ಕೋಟಿ ವಿಚಾರ ನಿಜವಾದರೇ ಇಂತಹ ಕುಲಪತಿಗಳಿಂದ ಯಾವ ಶೈಕ್ಷಣಿಕ ಗುಣಮಟ್ಟ ನಿರೀಕ್ಷಿಸಲು ಸಾಧ್ಯವಿದೆ? ಕುಲಪತಿಯಾದ ಬಳಿಕ ವಿವಿಯಲ್ಲಿನ ಬ್ಯಾಕ್ಲಾಗ್ ಹುದ್ದೆಗಳ ನೇಮಕಕ್ಕೆ ಮುಂದಾಗುತ್ತಾರೆ. ಪ್ರತಿಯೊಂದು ನೇಮಕಕ್ಕೂ 20-30 ಲಕ್ಷ ಸುಲಿಯುತ್ತಾರೆ. ಯುಜಿಸಿಯಿಂದ ಬರುವ ಕೋಟಿಗಟ್ಟಲೇ ಅನುದಾನದಲ್ಲಿ ಹಗಲು ದರೋಡೆ ನಡೆಸುತ್ತಾರೆ. ಏಕೆಂದರೆ ಇವರು ಕೊಡುವ ಈ 6 ಕೋಟಿ ಹಣ ಶಿಕ್ಷಣ ಸೇವೆಗೆ ಎಂದು ದಾನ ಮಾಡಿ ಬಂದಿರುವುದಿಲ್ಲ. ವಿವಿಯಲ್ಲಿನ 'ಕಮಾಯಿ'ಗಳನ್ನು ನೋಡಿಯೇ 'ದೊಡ್ಡ' ವ್ಯಕ್ತಿಗಳಿಗೆ ಕೋಟಿ ಕೋಟಿಗಳ ಸೂಟ್ಕೇಸ್ ನೀಡಿ ನೇಮಕವಾಗಿರುತ್ತಾರೆ.
ಇದಕ್ಕೆ ಸಾಮ್ಯತೆ ಇರುವ ಮತ್ತೊಂದು ಉದಾಹರಣೆಯನ್ನು ಓದಿ. ಕೆಲ ದಿನಗಳ ಹಿಂದೆ ಮೈಸೂರು ಮಾನಸ ಗಂಗೋತ್ರಿ ವಿವಿಗೆ ಪ್ರೊ.ರಂಗಪ್ಪ ಎಂಬುವವರನ್ನು ಕುಲಪತಿ ಹುದ್ದೆಗೆ ನೇಮಿಸಲಾಯಿತು. ಇದಕ್ಕೂ ಮೊದಲು ಕರ್ನಾಟಕ ಮುಕ್ತ ವಿವಿಯ ಕುಲಪತಿಯಾಗಿ ರಂಗಪ್ಪ ಅವರು ಸೇವೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ರಂಗಪ್ಪ ಅವರ ಮೇಲೆ ಕೆಲ ಆರೋಪಗಳು ಕೇಳಿಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ರಂಗಪ್ಪ, 'ಆರೋಪಗಳಿವೆ ಎಂಬ ಕಾರಣಕ್ಕೆ ಹುದ್ದೆ ಸ್ವೀಕರಿಸಬಾರದೆಂದಿಲ್ಲ. ಕಾನೂನು ಅರಿವಿಲ್ಲದವರ ಆರೋಪ ಮಾಡುತ್ತಿದ್ದರೆ ನಾನು ಬೆಲೆ ಕೊಡಬೇಕಿಲ್ಲ' ಎಂಬ ಮಾರುದ್ದದ ಸ್ಪಷ್ಟೀಕರಣ ನೀಡಿದ್ದರು.
'ಆರೋಪ ಬಂದ ತಕ್ಷಣ ರಾಜಿನಾಮೆ ನೀಡಬೇಕಿಲ್ಲ' ಎಂಬ ಇಂತಹುದೇ ಹೇಳಿಕೆಗಳನ್ನು ಕಳೆದ 3-4 ವರ್ಷಗಳಿಂದ ಭಾರತದ ರಾಜಕಾರಣಿಗಳಿಂದ ನೀವು ಕೇಳಿರುತ್ತೀರಿ. ಈಗ ಶಿಕ್ಷಣ ವ್ಯವಸ್ಥೆಗೂ ಒಕ್ಕರಿಸುತ್ತಿದೆ. ಭವಿಷ್ಯದ ರಾಜಕೀಯ ಸುಧಾರಿಸುತ್ತದೆ ಎಂದು ಸಾಕಷ್ಟು ಜನ ಕನಸನ್ನು ಇಟ್ಟುಕೊಂಡಿದ್ದಾರೆ. ನಾಳಿನ ಪ್ರಜ್ಞಾವಂತ ಪ್ರಜೆಗಳು ರೂಪಗೊಳ್ಳುವ ವಿವಿಯ ಚುಕ್ಕಾಣಿ ಹಿಡಿದ ಕುಲಪತಿಗಳು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಶಿಷ್ಯರು ಪಾಲಿಸದಿರಲು ಸಾಧ್ಯವೇ?
ಇಂತಹುದೇ ಭ್ರಷ್ಟಾಚಾರದ ಪ್ರಕರಣ 4 ತಿಂಗಳ ಹಿಂದೆ ರಾಜ್ಯದಲ್ಲಿ ಸುದ್ದಿ ಮಾಡಿತ್ತು. ಚಿಕ್ಕಮಗಳೂರಿನ ಪಾಲಿಟೆಕ್ನಿಕ್ ಕಾಲೇಜಿನ ಸಿಬ್ಬಂದಿ ಜಯಂತ್ ಬಿ.ವಿ ಎಂಬುವವರು ತಮ್ಮ ವರ್ಗಾವಣೆ ರದ್ದು ಕೋರಿ ರಾಜ್ಯಪಾಲರಿಗೆ 1 ಲಕ್ಷ ಲಂಚ ಕಳುಹಿಸಿದ್ದರು. ವ್ಯವಸ್ಥೆಯಿಂದ ರೋಸಿದ್ದ ಜಯಂತ್ ಆ ಕ್ರಮಕ್ಕೆ ಮುಂದಾಗಿದ್ದರು. ಆದರೆ ಆ ವ್ಯಕ್ತಿ ಇಂದಿಗೂ ಅಮಾನತು ಶಿಕ್ಷೆ ಅನುಭವಿಸುತ್ತಿದ್ದಾರೆ. ಕೃಷ್ಣ ಭಟ್ ಪ್ರಸ್ತಾಪಿಸಿದ ಕುಲಪತಿ ವ್ಯವಹಾರಕ್ಕೂ, ಜಯಂತ್ ಅವರ ಲಂಚಾವತಾರ ನಾಟಕದಲ್ಲಿ ಸಾಮ್ಯತೆ ಇದೆಯೇ ಎನ್ನುವುದನ್ನು ನೀವೇ ನಿರ್ಧರಿಸಿ. ಈ ದೇಶದಲ್ಲಿ ವೈಟ್ ಕಾಲರ್ ಭ್ರಷ್ಟಾಚಾರಕ್ಕೆ ನಿಯಂತ್ರಣವಿಲ್ಲವೇ ಅಥವಾ ಅದನ್ನು ಬಹಿರಂಗವಾಗಿ ಹೇಳುವ ಶಕ್ತಿಯನ್ನು ಸಾಮಾನ್ಯರಿಂದ ನಮ್ಮ ಸಂವಿಧಾನವೇ ಕಿತ್ತುಕೊಂಡಿದೆಯೇ? ಕೊನೆಯ ಪಕ್ಷ ಕುಲಪತಿಯಂತಹ ಪವಿತ್ರ ಹುದ್ದೆಗಳು ಬಿಕರಿಗಿಲ್ಲ ಎಂದಾದರೂ ಸಾಧಿಸಿ ತೋರಿಸಿ. ಇಲ್ಲವಾದಲ್ಲಿ ವಿಶ್ವವಿದ್ಯಾಲಯದಲ್ಲಿ ಮೆರಿಟ್ ಕೋಟಾ ಮಾಯವಾಗಿ ಎಲ್ಲವೂ ಪೇಮೆಂಟ್ ಕೋಟಾವಾಗುತ್ತದೆ.
-ರಾಜೀವ ಹೆಗಡೆ, ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

