ಬೇಡ ಎಂದು ದೂರ ತಳ್ಳಿದರೂ ಬಂದ ಅತಿಥಿ..!
ಯಾವುದೇ ಕಾರಣಕ್ಕೂ ವಿಧಾನಸಭೆಗೆ ಮೊದಲು ಸ್ಥಳೀಯ ಸಂಸ್ಥೆ ಚುನಾವಣೆಗಳು...
ಯಾವುದೇ ಕಾರಣಕ್ಕೂ ವಿಧಾನಸಭೆಗೆ ಮೊದಲು ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯಬಾರದು ಎಂದು ರಾಜ್ಯದ ಬಹುತೇಕ ಪಕ್ಷಗಳು ಒಗ್ಗೂಡಿ ನ್ಯಾಯಾಂಗದ ವಿರುದ್ಧ ಸೆಣಸಿಗೆ ಬಿದ್ದಿದ್ದವು. ವಿಧಾನಸಭೆ ಚುನಾವಣೆಗೆ ಮೊದಲು ತಮ್ಮ 'ಬಂಡವಾಳ' ಬಯಲಾಗಬಾರದು ಎಂಬ ಕುತಾರ್ಕಿಕ ಬಯಕೆ ಈಡೇರಿಸಿಕೊಳ್ಳಲು ಪರಸ್ಪರ ಹೆಗಲ ಮೇಲೆ ಕೈ ಹಾಕಿದ್ದವು.
ಆದರೇನು ಮಾಡುವುದು? ವಿಧಿ ಬಿಡಬೇಕಲ್ಲ. ಸುಪ್ರೀಂ ಕೋರ್ಟ್ ಕೊಟ್ಟಿರುವ ಆದೇಶಕ್ಕೆ ಎಲ್ಲ ಪಕ್ಷಗಳು ತರಗೆಲೆಯಂತೆ ತಿರುಗಿ ಮಖಾಡೆ ಬಿದ್ದಿವೆ. ಯಾಕಾದರೂ ಈ ಚುನಾವಣೆ ಬಂತೋ ಎಂಬ ಕನವರಿಕೆಯೊಡನೆ ಒಲ್ಲದ ಮನಸ್ಸಿನಿಂದಲೇ ಮತದಾರನ ಮನೆ ಬಾಗಿಲಿನೆಡೆ ತೆವಳುತ್ತಿವೆ. ಹಾಗೆ ತೆವಳುವಾಗಲೂ ವೈಯಕ್ತಿಕ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಮುಳುಗಿವೆ.
ಹೌದು, ಯಾವುದೇ ಪಕ್ಷಕ್ಕೂ ವಿಧಾನಸಭೆ ಚುನಾವಣೆಗೆ ಮೊದಲು ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯುವುದು ಬೇಕಿರಲಿಲ್ಲ. ಮೇಲ್ನೋಟಕ್ಕೆ ತಾವೇ ಮುಂದು ಎಂದು ಹೇಳಿಕೊಳ್ಳುತ್ತಿದ್ದರೂ ಅವುಗಳ ಬಂಡವಾಳ ಅವುಗಳ ಅಂತರಂಗಕ್ಕಷ್ಟೇ ಗೊತ್ತು. ವಿಧಾನಸಭೆ ಚುನಾವಣೆಗೆ ಒಂದೆರಡು ತಿಂಗಳಷ್ಟೇ ಬಾಕಿ ಇದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಈ ಚುನಾವಣೆ ಮೇಲೂ ನೇರ ಪರಿಣಾಮ ಬೀರುತ್ತದೆ. ಈ ಚುನಾವಣೆಯ ಫಲಿತಾಂಶವೇ ವಿಧಾನಸಭೆ ಚುನಾವಣೆಗೂ ಬಂಡವಾಳ. ಅದಕ್ಕೆ ಮೊದಲು ತಮ್ಮ ಶಕ್ತಿ-ಸಾಮರ್ಥ್ಯ ಒರೆಗೆ ಹಚ್ಚಲು ಅವುಗಳಿಗೆ ಧೈರ್ಯ ಇರಲಿಲ್ಲ. ಜತೆಗೆ ಒಂದರ ಹಿಂದೊಂದರಂತೆ ಎರಡೆರಡು ಚುನಾವಣೆಗೆ ಸಂಪನ್ಮೂಲ ಕ್ರೋಡೀಕರಿಸಬೇಕು. ಈ ಸಂಪನ್ಮೂಲ ಕ್ರೋಡೀಕರಣ ಮತ್ತೆ ವೈಯಕ್ತಿಕ ಲಾಭ-ನಷ್ಟದ ಲೆಕ್ಕಾಚಾರಕ್ಕೆ ಆಸ್ಪದ ಕೊಟ್ಟು, ಆಂತರಿಕ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಎಲ್ಲ ಕಾರಣದಿಂದ ಸ್ಥಳೀಯ ಚುನಾವಣೆಗಳು ಬೇಡ ಎಂದು ಎಷ್ಟೆಲ್ಲ ದೂರ ತಳ್ಳಿದರೂ ಅದು ಒದ್ದುಕೊಂಡೇ ಹತ್ತಿರ ಬಂದು ರಾಜಕೀಯ ಪಕ್ಷಗಳು ಹಾಗೂ ನಾಯಕರ ಎದೆಬಡಿತವನ್ನು ಇಮ್ಮಡಿಗೊಳಿಸಿವೆ.
ಹೇಗಾದರೂ ಮಾಡಿ ಈ ಚುನಾವಣೆಯನ್ನು ಮುಂದಕ್ಕೆ ಹಾಕಬೇಕು ಎಂದು ಆಡಳಿತಾರೂಢ ಬಿಜೆಪಿ ನೇತೃತ್ವದಲ್ಲಿ ಎಲ್ಲ ಪಕ್ಷಗಳು ವಿಧಾನ ಮಂಡಲದ ಮೂಲಕ ಸುಪ್ರೀಂ ಕೋರ್ಟ್ ತೀರ್ಪು ವಿರುದ್ಧ ಹೋರಾಟಕ್ಕೆ ಮುಂದಾಗಿದ್ದವು. ರಾತ್ರೋ ರಾತ್ರಿ ಸ್ಥಳೀಯ ಸಂಸ್ಥೆ ಚುನಾವಣೆ ಕಾಯಿದೆಗೆ ತಿದ್ದುಪಡಿ ತಂದು !ಒಂದೇ ದಿನ ಎರಡೂ ಸದನದಲ್ಲಿ ಹೆಚ್ಚು ಚರ್ಚೆ ಇಲ್ಲದೆ ಅಂಗೀಕರಿಸಿ ರಾಜ್ಯಪಾಲರ ಬಳಿ ಕಳುಹಿಸಿಕೊಟ್ಟಿದ್ದವು. ರಾಜ್ಯ ಸರಕಾರದ ಸಹಮತದೊಂದಿಗೆ ಚುನಾವಣೆ ಆಯೋಗವು ಚುನಾವಣೆ ನಡೆಸಬೇಕು ಎಂಬುದು ಈ ತಿದ್ದುಪಡಿಯ ಸಾರಾಂಶವಾಗಿತ್ತು. ಜತೆಗೆ ಕಾಂಗ್ರೆಸ್ ನಿಯೋಗ ಬೇರೆ ರಾಜ್ಯಪಾಲರನ್ನು ಖುದ್ದು ಭೇಟಿ ಮಾಡಿತ್ತು. ಎಲ್ಲ ಪಕ್ಷಗಳ ಒಟ್ಟಾರೆ ಆಶಯ ಚುನಾವಣೆ ಮುಂದಕ್ಕೆ ಹಾಕುವುದು. ಆದರೆ ಸ್ವತಃ ಕಾನೂನು ತಜ್ಞರಾದ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರು ತಮ್ಮ ಕಾನೂನೂ ಸಲಹೆಗಾರರಾದ ರಾಜ್ಯ ಚುನಾವಣೆ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್. ಹೆಗಡೆ ಅವರ ಸಲಹೆ ಮೇರೆಗೆ ಈ ತಿದ್ದುಪಡಿ ಕಾಯಿದೆಯನ್ನು ವಾಪಸು ಕಳುಹಿಸಿದ್ದರು. ಸುಪ್ರೀಂ ಕೋರ್ಟ್ ಅದೇಶವೇ ಅಂತಿಮ ಎಂದು ಷರಾ ಬರೆದಿದ್ದರು.
ಇಲ್ಲಿಗೂ ರಾಜ್ಯ ಸರ್ಕಾರದ ಪ್ರಯತ್ನ ನಿಲ್ಲಲಿಲ್ಲ. ಚುನಾವಣೆ ಆಯೋಗ ಅಧಿಸೂಚನೆ ಹೊರಡಿಸುವ ದಿನದ ಹಿಂದಿನ ರಾತ್ರಿ ತರಾತುರಿಯಲ್ಲಿ ಕ್ಷೇತ್ರಗಳ ಮೀಸಲು ಪಟ್ಟಿ ಸಿದ್ಧಪಡಿಸಿ, ಆ ಪ್ರಕಾರವಾಗಿ ಚುನಾವಣೆ ನಡೆಸಬೇಕು ಎಂದು ಕೋರಿತ್ತು. ಹೊಸ ಮೀಸಲು ಪಟ್ಟಿ ಪ್ರಕಾರ ಚುನಾವಣೆ ನಡೆಸಲು ಒಂದಷ್ಟು ಸಮಯ ಹಿಡಿಯುತ್ತದೆ. ಅಲ್ಲಿಯವರೆಗಾದರೂ ಚುನಾವಣೆ ಮುಂದೂಡಬಹುದು ಎಂಬುದು ಸರಕಾರದ ಗುಟುಕು ಆಸೆಯಾಗಿತ್ತು. ಆದರೆ 2007 ರ ಮೀಸಲು ಪಟ್ಟಿ ಪ್ರಕಾರವೇ ಚುನಾವಣೆ ನಡೆಸಬೇಕು ಎಂದು ಆಯೋಗ ಅಧಿಸೂಚನೆ ಹೊರಡಿಸುವುದರೊಂದಿಗೆ ಚುನಾವಣೆ ಮುಂದೂಡುವ ರಾಜಕೀಯ ಪಕ್ಷಗಳ ಸಂಘಟಿತ ಪ್ರಯತ್ನ, ಅದರಲ್ಲೂ ವಿಶೇಷವಾಗಿ ಸರಕಾರದ ಹೆಬ್ಬಯಕೆಗೆ ಅಂತಿಮ ಮೊಳೆ ಬಿದ್ದಿದೆ.
ಹೌದು, ಯಾಕಾಗಿ ಆಡಳಿತ ಮತ್ತು ಪ್ರತಿಪಕ್ಷಗಳು ಈ ಚುನಾವಣೆಗೆ ಹೌಹಾರಿದ್ದವು. ಏನಿದರ ಹಿಂದಿನ ಭಯ? ಎಂಬ ಪ್ರಶ್ನೆಗೆ ಸಮಾನ ಉತ್ತರ ವಿಶ್ವಾಸದ ಕೊರತೆ ಮತ್ತು ಇದೊಂದೇ ಉತ್ತರ. ಹತ್ತು-ಹಲವು ಅಡೆತಡೆಗಳ ನಡುವೆ ಆಮೆಗತಿಯಲ್ಲಿ ಅವಧಿ ಮುಗಿಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಚುನಾವಣೆ ಎದುರಿಸಲು ಪ್ರಮುಖವಾಗಿ ಕಾಡುತ್ತಿರುವ ಸಮಸ್ಯೆ ನಾಯಕತ್ವದ ಕೊರತೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಮುಂದಿನ ಚುನಾವಣೆಗಳನ್ನು ಎದುರಿಸಲು ಹೈಕಮಾಂಡ್ ತೀರ್ಮಾನಿಸಿರುವುದು ಸರಿಯಷ್ಟೇ. ಆದರೆ ಹೈಕಮಾಂಡ್ಗೆ ಇರುವ ವಿಶ್ವಾಸ ಸ್ವತಃ ಶೆಟ್ಟರ್ ಅವರಿಗೇ ಇಲ್ಲ. ಸವೆಸಿರುವ ಅವಧಿಯಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಘನಾಂದಾರಿ ಕೆಲಸಗಳು ಈ ವಿಶ್ವಾಸವನ್ನು ನುಂಗಿ ನೀರು ಕುಡಿದಿದೆ. ಜತೆಗೆ ಪಕ್ಷ ಬೇರೆ ಯಡಿಯೂರಪ್ಪ ನೇತೃತ್ವದಲ್ಲಿ ಕೆಜೆಪಿ, ಶ್ರೀರಾಮುಲು ನೇತೃತ್ವದಲ್ಲಿ ಬಿಎಸ್ಆರ್ ಎಂದು ಮೂರು ಭಾಗವಾಗಿದೆ. ಈ ಮೂರು ಭಾಗಗಳ ಸಹವಾಸವೇ ಬೇಡ ಎಂದು ಒಂದಷ್ಟು ಜನ ಬೇರೆ-ಬೇರೆ ಪಕ್ಷಗಳ ಬಾಗಿಲು ಬಡಿಯುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಯಡಿಯೂರಪ್ಪ ಶಕ್ತಿಯಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಈಗ ಅವರು ಬಿಜೆಪಿಯಲ್ಲಿಲ್ಲ. ಆದರೆ ಕಳೆದ ಚುನಾವಣೆ ಸಂದರ್ಭದಲ್ಲಿದ್ದ ಪರಿಸ್ಥಿತಿಗೂ ಅವರು ಬಿಜೆಪಿಯಿಂದ ನಿರ್ಗಮಿಸಿದ ಸ್ಥಿತಿಯ ನಡುವೆ ಅಜಗಜಾಂತರ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ ಲಿಂಗಾಯತ ಸಮುದಾಯ ತಮ್ಮ ಬೆನ್ನಿಗಿದೆ ಎಂದು ಯಡಿಯೂರಪ್ಪ ಹೇಳಿಕೊಂಡಿದ್ದಾರೆ. ಶೆಟ್ಟರ್ ಕೂಡ ಲಿಂಗಾಯತ ಸಮುದಾಯಕ್ಕೆ ಸೇರಿದವರೇ ಆದರೂ ಇಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಎನ್ನುವುದಕ್ಕಿಂತ ಮತಗಳ ವಿಭಜನೆ ಭೀತಿ ಇಬ್ಬರನ್ನೂ ಕಾಡುತ್ತಿದೆ. ಹೀಗಾಗಿ ಯಡಿಯೂರಪ್ಪ ಇಲ್ಲದ ಬಿಜೆಪಿ, ಬಿಜೆಪಿ ಇಲ್ಲದ ಯಡಿಯೂರಪ್ಪ - ಇಬ್ಬರ ಸ್ಥಿತಿಯೂ ಉಪ್ಪಿಲ್ಲದ ಸಾರಿನಂತಾಗಿದೆ. ಹೀಗಿರುವಾಗ ಅದ್ಯಾವ ಧೈರ್ಯದಲ್ಲಿ ಚುನಾವಣೆ ಎದುರಿಸುವುದು ಎಂಬ ಪ್ರಶ್ನೆ ಪಕ್ಷವಾಗಿ ಬಿಜೆಪಿಯನ್ನು, ವೈಯಕ್ತಿಕವಾಗಿ ಶೆಟ್ಟರ್ ಅವರನ್ನು ಕಾಡುತ್ತಿದೆ.
ಈ ಭಯಕ್ಕೆ ಕಾರಣಗಳು ಇಲ್ಲದಿಲ್ಲ. ಒಂದೊಮ್ಮೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹೆಚ್ಚು-ಕಮ್ಮಿಯಾದರೆ ಅದರ ಹೊಣೆಯನ್ನು ತಮ್ಮ ತಲೆಗೆ ಕಟ್ಟಲಾಗುತ್ತದೆ. ಇದು ವಿಧಾನಸಭೆ ಚುನಾವಣೆ ನಾಯಕತ್ವದ ಮೇಲೂ ಪ್ರತೀಕೂಲ ಪರಿಣಾಮ ಬೀರಬಹುದು. ಹೈಕಮಾಂಡ್ ಬೇರೆ ರೀತಿ ಚಿಂತನೆ ನಡೆಸಲು ಆಸ್ಪದ ಕೊಡಬಹುದು. ಹೀಗಾಗಿ ಸಾಮೂಹಿಕ ನಾಯಕತ್ವದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಎದುರಿಸುತ್ತೇವೆ ಎಂಬುದು ಶೆಟ್ಟರ್ ಸಬೂಬು. ಆದರೆ ಪಕ್ಷದ ಕೆಲ ನಾಯಕರು ಇದನ್ನು ಒಪ್ಪಲು ಸಿದ್ಧರಿಲ್ಲ. ಏಕೆಂದರೆ ಶೆಟ್ಟರ್ ಅವರ ನೇತೃತ್ವದಲ್ಲಿ ವಿಧಾನಸಭೆ ಚುನಾವಣೆ, ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಘೋಷಣೆಯನ್ನು ಅವರು ಅರಗಿಸಿಕೊಂಡಿಲ್ಲ. ಹೀಗಾಗಿ ಸ್ಥಳೀಯ ಸಂಸ್ಥೆ ಚುನಾವಣೆ ಆಗು-ಹೋಗುಗಳ ಜವಾಬ್ದಾರಿಯನ್ನೂ ಅವರ ತಲೆಗೆ ಕಟ್ಟಲು ಮುಂದಾಗಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ನಕಾರಾತ್ಮಕ ಫಲಿತಾಂಶ ಬರಬಹುದು, ಅದರ ಹೊಣೆಯನ್ನು ಶೆಟ್ಟರ್ ಹೆಗಲಿಗೆ ವಹಿಸಬಹುದು ಎಂಬುದು ಅವರ ಹುನ್ನಾರ. ಹೀಗಾಗಿ ಇದೊಂದು ರೀತಿಯಲ್ಲಿ 'ನಾಯಕತ್ವ ಕದನ'ಕ್ಕೂ ಕಾರಣವಾಗಿದೆ.
ಇಲ್ಲಿ ಇನ್ನೂ ಒಂದು ಸಮಸ್ಯೆ ಎದುರಾಗಿದೆ. ಅಭ್ಯರ್ಥಿಗಳ ಆಯ್ಕೆ ಸ್ವಾತಂತ್ರ್ಯ ಸಂಪೂರ್ಣ ತಮಗೇ ಇರಬೇಕು. ಬರೀ ಪ್ರಚಾರಕ್ಕೆ ಮಾತ್ರ ನೀವು ಬರಬೇಕು ಎಂದು ಬಿಜೆಪಿ ಶಾಸಕರು ನಾಯಕರಿಗೇ ತಾಕೀತು ಮಾಡುತ್ತಿದ್ದಾರೆ. ಏಕೆಂದರೆ ತಮ್ಮ ಇರಾದೆಯ ಅಭ್ಯರ್ಥಿಗಳು ಗೆದ್ದು ಬಂದರೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅವರು ತಮ್ಮ ಪರ ಮುತುವರ್ಜಿಯಿಂದ ಕೆಲಸ ಮಾಡುತ್ತಾರೆ, ತಮಗೆ ಅನುಕೂಲ ಆಗುತ್ತದೆ ಎಂಬ ಲೆಕ್ಕಾಚಾರ ಅವರದ್ದು. ಇದು ನಾಯಕರಿಗೆ ಒಂದು ರೀತಿಯಲ್ಲಿ ಬಿಸಿತುಪ್ಪ. ಅಭ್ಯರ್ಥಿಗಳ ಆಯ್ಕೆ ಸ್ವಾತಂತ್ರ್ಯವನ್ನು ಶಾಸಕರಿಗೆ ಬಿಟ್ಟುಕೊಟ್ಟರೆ ತಮಗೆ ಕಿಮ್ಮತ್ತು ಇಲ್ಲದಂತಾಗುತ್ತದೆ. ಹಾಗೆಂದು ನಾವೇ ಆಯ್ಕೆ ಮಾಡಿದರೆ ಫಲಿತಾಂಶದ ಹೊಣೆ ತಮ್ಮ ತಲೆಗೆ ಬರುತ್ತದೆ ಎಂಬ ದ್ವಂದ್ವದಲ್ಲಿ ನಾಯಕರು ಮುಳುಗಿದ್ದಾರೆ. ಇದರ ನಡುವೆ ಚುನಾವಣೆ ದಿನ ಸಮೀಪಿಸುತ್ತಿದೆ.
ಇನ್ನು ಕಾಂಗ್ರೆಸ್ಗಂತು ಯಾವುದೇ ಕಾರಣಕ್ಕೂ ಈ ಚುನಾವಣೆ ಬೇಕಿರಲಿಲ್ಲ. ಪಕ್ಷದ ನಾಯಕರಿಗೆ ಇದೊಂದು ರೀತಿಯಲ್ಲಿ ಪ್ರಿಪರೇಟರಿ ಪರೀಕ್ಷೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ನಾಯಕತ್ವಕ್ಕೂ ಅಗ್ನಿಪರೀಕ್ಷೆ. ಕಾಂಗ್ರೆಸ್ನಲ್ಲಿ ಪ್ರಮುಖ ಸಮಸ್ಯೆ ಸಂಪನ್ಮೂಲ ಕ್ರೋಡೀಕರಣ. ಅಧಿಕಾರ ಅನುಭವಿಸುವ ವಿಚಾರದಲ್ಲಿ ಎಲ್ಲರೂ ಕುಬೇರರೇ. ಆದರೆ ಖರ್ಚು ವಿಚಾರ ಬಂದಾಗ ಎಲ್ಲರೂ ಕುಚೇಲರಾಗಿ ಬಿಡುತ್ತಾರೆ. ಚುನಾವಣೆ ಖರ್ಚು ಎಂದರೆ ಬಾಯಗಲಿಸಿ, ಆಕಾಶ ತೋರಿಸುತ್ತಾರೆ. ಯಾರೋ ಸಿಎಂ ಆಗಲು ನಾವ್ಯಾಕೆ ದುಡ್ಡು ಖರ್ಚು ಮಾಡಬೇಕು ಎಂಬ ತಾತ್ಸಾರ ಹಿರಿಯ ನಾಯಕರದ್ದು. ಹಾಗೆಂದು ನಾಯಕತ್ವ ವಹಿಸಿಕೊಂಡವರು ತಮ್ಮ ಹತ್ತಿರ ದುಡ್ಡೆಲ್ಲಿದೆ ಎಂದು ಬೇರೆಯವರನ್ನು ಇರಲಿ, ತಮ್ಮನ್ನೇ ತಾವು ಪ್ರಶ್ನೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಆಡಳಿತವಿರೋಧಿ ಅಲೆಯನ್ನು ಪಿತ್ರಾರ್ಜಿತ ಆಸ್ತಿ ಎಂಬಂತೆ ಭ್ರಮಿಸಿಕೊಂಡು ತಮ್ಮ ಖಾಲಿ ಜೇಬಲ್ಲಿ ಕೈ ತುರುಕಿ, ಪರರ ಜೇಬಿನತ್ತ ದೃಷ್ಟಿ ಹಾಯಿಸಿಕೊಂಡು ಓಡಾಡುತ್ತಿದ್ದಾರೆ. ಹೀಗಾಗಿ ಈ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಅವರ ಆಸೆಗೆ ಅವರ ಜೇಬೇ ಶತ್ರುವಾಗುವ ಅಪಾಯವಿದೆ. ಅದೇ ರೀತಿ ಪಕ್ಷದ ನಾಯಕತ್ವಕ್ಕೂ ಸವಾಲಾಗಲಿದೆ.
ಇಲ್ಲಿ ಕಾಂಗ್ರೆಸ್ ಒಂದು ಜಾಣತನ ಮೆರೆಯಲು ಯತ್ನಿಸಿದೆ. ಸ್ಥಳೀಯ ಸಂಸ್ಥೆ ಚುನಾವಣೆ ಗೆಲ್ಲುವ ಜವಾಬ್ದಾರಿಯನ್ನು ಶಾಸಕರಿಗೆ ಹೊರಿಸಿ ಕೈ ತೊಳೆದುಕೊಳ್ಳಲು ನೋಡುತ್ತಿದೆ. ಆದರೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಗ್ಯಾರಂಟಿ ಇಲ್ಲದ ಶಾಸಕರು ಈ ಚುನಾವಣೆಯಲ್ಲಿ 'ಬಂಡವಾಳ' ಹೂಡಲು ಹಿಂದೆ-ಮುಂದೆ ನೋಡುತ್ತಿದ್ದಾರೆ. ತೀರಾ ವಿಶ್ವಾಸ ಇಲ್ಲದವರು ಪಲಾಯನವಾದಕ್ಕೆ ಶರಣಾಗಿದ್ದಾರೆ.
ಜೆಡಿಎಸ್ ಕತೆ ಕೂಡ ಭಿನ್ನವಾಗಿಲ್ಲ. ಅಭ್ಯರ್ಥಿಗಳನ್ನು ಹೊಂಚುವಷ್ಟು ಸುಲಭವಾಗಿ ದುಡ್ಡು ಹೊಂದಿಸುವುದೇ ದೊಡ್ಡ ಸವಾಲು. ಅಭ್ಯರ್ಥಿಗಳಾಗಲು ಇರುವಷ್ಟು ಉಮೇದು ಖರ್ಚು ಮಾಡಲು ಇಲ್ಲ. ಚುನಾವಣೆ ಟಿಕೆಟ್ ಜತೆಗೆ ಖರ್ಚಿಗೂ ಕೇಳುವಷ್ಟು ಧಾಷ್ಟ್ಯ ಬೆಳೆಸಿಕೊಂಡಿದ್ದಾರೆ. ರಾಜ್ಯದುದ್ದಕ್ಕೂ ಅಭ್ಯರ್ಥಿಗಳನ್ನು ಈಗಾಗಲೇ ಆಯ್ಕೆ ಮಾಡಿಟ್ಟಿದ್ದೇವೆ ಎಂದು ಹೇಳುವಲ್ಲಿ ಇರುವಷ್ಟು ಧೈರ್ಯ, ಅವರಲ್ಲಿ ಎಷ್ಟು ಮಂದಿ ಗೆಲ್ಲುತ್ತಾರೆ ಎಂದು ಹೇಳುವುದರಲ್ಲಿ ಇಲ್ಲ. ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್ ವಿಧಾನಸಭೆ ಚುನಾವಣೆಯಲ್ಲಿ ಆಂತರಿಕ ಒಪ್ಪಂದಕ್ಕೂ ಮುಂದಾಗಿವೆ. ಆ ಒಪ್ಪಂದ ಈಗಿನ ಸ್ಥಳೀಯ ಸಂಸ್ಥೆ ಚುನಾವಣೆಯಿಂದಲೇ ಶುರುವಾಗುವ ಸಾಧ್ಯತೆ ಹೆಚ್ಚಾಗಿದೆ. ಕೊಡು-ಕೊಳ್ಳುವುದು ಫಲಿತಾಂಶದ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮ ಬೀರಬಹುದು.
ಹಾಗೆ ನೋಡಿದರೆ ಯಡಿಯೂರಪ್ಪ ನೇತೃತ್ವದ ಕೆಜೆಪಿ ನಿರಾಳವಾಗಿದೆ. ಸ್ವಲ್ಪ ಮಟ್ಟಿನ ಬೆಂಬಲಿಗರು ಬಿಜೆಪಿ ತೊರೆದು ಬಂದಿದ್ದಾರೆ. ಇನ್ನೂ ಕೆಲವರು ಬರಬಹುದು. ಆದರೆ ಬೇರೆ ಪಕ್ಷಗಳಲ್ಲಿನ ಒಳಜಗಳ, ಅಲ್ಲಿನ ಟಿಕೆಟ್ ವಂಚಿತರನ್ನೇ ತಮ್ಮ ಪಕ್ಷದ ಬಂಡವಾಳ ಮಾಡಿಕೊಳ್ಳಲು ಕೆಜೆಪಿ ಮುಂದಾಗಿದೆ. ಇದಕ್ಕಾಗಿ ಎಲ್ಲ ಜಿಲ್ಲೆಗಳಲ್ಲೂ ಚುನಾವಣೆ ಉಸ್ತುವಾರಿ ಸಮಿತಿಯನ್ನೇ ರಚಿಸಿದೆ. ಅನ್ಯ ಪಕ್ಷಗಳ ಅಸಮಾಧಾನಿತರನ್ನು ಅನ್ವೇಷಿಸುವುದೇ ಈ ಸಮಿತಿಗಳ ಪ್ರಮುಖ ಕೆಲಸ. ತಾವು ಗೆಲುವು ಸಾಧಿಸುವುದಕ್ಕಿಂತ ಬಿಜೆಪಿಯನ್ನು ಮಲಗಿಸುವುದೇ ಕೆಜೆಪಿಯ ಸದ್ಯದ ಮೂಲ ಸಿದ್ಧಾಂತ. ಈ ವಿಚಾರದಲ್ಲಿ ಯಡಿಯೂರಪ್ಪನವರು ಸ್ವಲ್ಪ ಮಟ್ಟಿಗೆ ಯಶಸ್ಸು ಕಾಣುತ್ತಾರೆ. ಆದರೆ ಆ ಯಶಸ್ಸಿನ ಲಾಭ ಬೇರೆ ಪಕ್ಷಗಳಿಗೆ ಆಗುತ್ತದೆ ಎನ್ನುವುದೇ ರಾಜಕೀಯ ವಿಪರ್ಯಾಸ.
ಲಗೋರಿ: ಸಣ್ಣ ಯುದ್ಧಗಳ ಸೂಕ್ಷ್ಮ ಅರಿಯುವುದೇ ಮಹಾಸಮರಕ್ಕೆ ತಯಾರಿಯಾಗುತ್ತದೆ.
- ಪಿ. ತ್ಯಾಗರಾಜ್
thyagarjun@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

