ಅಂಕಣಗಳು

ಭಾರತಕ್ಕೆ ಬರೀ ದಕ್ಷ ಅಲ್ಲ, ಬುದ್ಧಿವಂತ ಪ್ರಧಾನಿ ಬೇಕು

Published On :

ನಮ್ಮ ದೇಶದಲ್ಲಿ ದುರಂತಗಳಿಗೆ ಕೊನೆ ಎಂಬುದೇ ಇಲ್ಲ. ಪ್ರತಿ ದಿನ ಎಲ್ಲೆಡೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ಪ್ರಧಾನಿ ಎಲ್ಲವನ್ನೂ ಕೇಳುತ್ತಾರೆ, ನೋಡುತ್ತಾರೆ, ಆದರೆ ಏನೂ ಮಾತನಾಡುವುದಿಲ್ಲ. ಎಲ್ಲಕ್ಕಿಂತಲೂ ಹೆಚ್ಚು ನೋವು ತರುವ ವಿಚಾರವೆಂದರೆ, ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯನ್ನು ಬಿಟ್ಟರೆ ಬೇರೆ ಪ್ರಧಾನಿ ಅಭ್ಯರ್ಥಿಯೇ ನಮ್ಮಲ್ಲಿ ಇಲ್ಲದಿರುವುದು. ನೆರೆಯ ಪಾಕಿಸ್ತಾನದಲ್ಲಿ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿಗಳಿದ್ದಾರೆ, ಆಯ್ಕೆಯ ಅವಕಾಶಗಳೂ ಇವೆ.
ಮೋದಿ ಮತ್ತು ರಾಹುಲ್- ಇವರಿಬ್ಬರಲ್ಲೇ ಒಬ್ಬರನ್ನು ಆಯ್ಕೆ ಮಾಡಿ ಎಂದು ಸೂಚಿಸುವುದು ನಿಜಕ್ಕೂ ಹಿಂಸೆಯ ವಿಚಾರ. ನಮ್ಮ ಮೇಲೆ ಮರ್ಸಿಡಿಸ್ ಹರಿಸಬೇಕೋ ಅಥವಾ ಗೂಡ್ಸ್ ಕ್ಯಾರಿಯರ್ ಅನ್ನು ಹರಿಸಬೇಕೋ ಎಂದು ಕೇಳುವುದು ಅದಕ್ಕಿಂತ ಹಿತವೆನಿಸಬಹುದು! ಕನಿಷ್ಠಪಕ್ಷ ಈ ರೀತಿಯಲ್ಲಾದರೂ ತತ್‌ಕ್ಷಣದ ಸಾವು ಕಾಣಬಹುದು! ನಮ್ಮಲ್ಲಿ ಬಹುತೇಕ ಮಂದಿ ಮರ್ಸಿಡಿಸ್ ಲಿಮೋಸಿನ್ ಅಡಿಗೆ ಸಿಲುಕುವುದನ್ನೇ ಹೆಚ್ಚು ಇಷ್ಟಪಡಬಹುದು. ಏಕೆಂದರೆ, ನಾವೆಲ್ಲರೂ ದರ್ಜೆ, ಅಂತಸ್ತಿಗೇ ಬೆಲೆ ನೀಡುವವರು. ಸರಕು ಸಾಗಣೆ ವಾಹನವೆಂದರೆ ನಮ್ಮ ಘನತೆಗೆ ತಕ್ಕುದೆನಿಸದು. ಅಷ್ಟೇ ಅಲ್ಲದೆ, ನಾವೆಲ್ಲ ಕುರಿಮಂದೆಯ ಮನೋವೃತ್ತಿಯವರು. ಹಿಂಡು ಎಲ್ಲಿ ಒಂದುಗೂಡುತ್ತಿದೆ ಎಂಬುದನ್ನು ನಾವು ಈಗಾಗಲೇ ಗಮನಿಸಬಹುದು.
ಪಾಶ್ಚಾತ್ಯ ಜಗತ್ತು ನರೇಂದ್ರ ಮೋದಿ ಮೇಲೆ ನಿಷೇಧ ವಿಧಿಸಿದ್ದು ಹಳೆಯ ಕಥೆ. ಅದನ್ನು ತೆರವುಗೊಳಿಸುವಲ್ಲಿ ಮೊದಲಿಗನಾಗಿದ್ದು ಬ್ರಿಟನ್. ಅದರ ರಾಯಭಾರಿ ಗುಜರಾತ್ ಚುನಾವಣೆಗೆ ಕೆಲವೇ ದಿನಗಳ ಮೊದಲು ಅಹಮದಾಬಾದ್‌ಗೆ ಪ್ರವಾಸ ಕೈಗೊಂಡಿದ್ದರು. ಈಗ ಐರೋಪ್ಯ ಒಕ್ಕೂಟ ಮೋದಿಗೆ ಆಹ್ವಾನ ನೀಡಿದೆ. ಬಹುಶಃ ರಷ್ಯನ್ನರೂ ಇದನ್ನು ಅನುಸರಿಸಬಹುದು. ಇನ್ನು, ಚೀನೀಯರು ಮೋದಿ ಜತೆ ಭಾಯಿ ಭಾಯಿ ಹೇಳಿಕೊಂಡೇ ಬಂದಿದ್ದಾರೆ. ಮೋದಿ ಅವರು ಚೀನಾಕ್ಕೆ ಈಗಾಗಲೇ ಮೂರ್ನಾಲ್ಕು ಬಾರಿ ಭೇಟಿ ನೀಡಿರುವುದೂ ಗಮನಾರ್ಹ.
ಎಂದಿನಂತೆ, ಅಮೆರಿಕನ್ನರು ವಿಭಿನ್ನವಾಗಿ ಗೋಚರಿಸುತ್ತಾರೆ. 2002ರ ಗಲಭೆಯ ವಿರುದ್ಧ ಪ್ರತಿಭಟಿಸಿ 2005ರಲ್ಲಿ ಮೋದಿ ಮೇಲೆ ಹೇರಿದ್ದ ವೀಸಾ ನಿಷೇಧವನ್ನು ಅವರು ಇನ್ನೂ ತೆರವುಗೊಳಿಸಿಲ್ಲ. ಆದರೆ, ಇನ್ನೇನೋ ಒಳಿತನ್ನು ಅವರು ಮಾಡಿರುವುದು ನಿಜ. ಯುರೋಪಿಯನ್ನರು ಮೋದಿಯ ಸಾಧನೆಯನ್ನು ಕಂಡುಕೊಳ್ಳುವ ಮೊದಲೇ,  2011ರ ಕೊನೆಯಲ್ಲಿ ಅಮೆರಿಕ ಕಾಂಗ್ರೆಸ್‌ನ ಸ್ವತಂತ್ರ ಘಟಕ 'ಕಾಂಗ್ರೆಸ್ ರಿಸರ್ಚ್ ಸರ್ವಿಸ್‌' ಮೋದಿ ಸಾಧನೆಯನ್ನು ಹಾಡಿ ಹೊಗಳಿತ್ತು. ದಕ್ಷ ಆಡಳಿತಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಗುಜರಾತ್ ಎಂದು ಬಣ್ಣಿಸಿತ್ತು. ವಿವಾದಾತ್ಮಕ ಮುಖ್ಯಮಂತ್ರಿ ನರೇಂದ್ರ ಮೋದಿ ಕೆಂಪುಪಟ್ಟಿಯನ್ನು ತೊಲಗಿಸುವ ಮೂಲಕ ಹಾಗೂ ಭ್ರಷ್ಟಾಚಾರವನ್ನು ಹತ್ತಿಕ್ಕುವ ಮೂಲಕ ಈ ರಾಜ್ಯದಲ್ಲಿ ಆರ್ಥಿಕ ಬೆಳವಣಿಗೆಯನ್ನು ಸುಸೂತ್ರಗೊಳಿಸಿದ್ದಾರೆ, ಚುರುಕು ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿತ್ತು ಅಮೆರಿಕ ಕಾಂಗ್ರೆಸ್.
ಮೋದಿ ಅವರನ್ನು ಭಾರತದ ಕಾರ್ಪೊರೇಟ್ ಪ್ರಮುಖರ ಮೆಚ್ಚಿನ ವ್ಯಕ್ತಿಯನ್ನಾಗಿಸಿದ್ದು ಇಂಥ ಕ್ರಮಗಳೇ. ಕಾರ್ಪೊರೇಟ್ ಬೆಳವಣಿಗೆಯಷ್ಟೇ ನಮ್ಮ ಗುರಿಯಾದರೆ, ಮೋದಿ ಸೂಕ್ತ ಪ್ರಧಾನಿ ಎನ್ನಿಸಬಹುದು. ಆದರೆ, ಕೇವಲ ಭಾರತೀಯ ಉದ್ಯಮಿಗಳು, ಯುರೋಪ್ ಹೂಡಿಕೆದಾರರು ಮತ್ತು ದೂರದೃಷ್ಟಿಯ ಚೀನೀ ಪರಿಣತರ ಹಿತಾಸಕ್ತಿಯನ್ನಷ್ಟೇ ನೋಡಿದರೆ ಸಾಲುವುದಿಲ್ಲ. ಭಾರತದ ಗುರಿ ವಿಸ್ತಾರವಾದುದು, ವೈವಿಧ್ಯಮಯವಾದುದು, ಸವಾಲಿನ ಮೇಲೆ ಸವಾಲು ಎದುರಾಗುವಂಥದ್ದು. ಜನತೆಯ ತುಡಿತ ಮಿಡಿತಗಳನ್ನು ಅರಿತು ಹೊಂದಾಣಿಕೆಯಿಂದ ಭಾರತದ ಆಡಳಿತವನ್ನು ನಡೆಸಬೇಕಾಗುತ್ತದೆ. ಸಾಮಾಜಿಕವಾಗಿ ತುಳಿತಕ್ಕೊಳಗಾದವರ, ಆರ್ಥಿಕವಾಗಿ ನಿರ್ಲಕ್ಷ್ಯಕ್ಕೊಳಗಾದವರ ಹಿತವನ್ನೂ ಗಮನದಲ್ಲಿರಿಸಿ ಆಡಳಿತ ನಡೆಸಬೇಕಾಗುತ್ತದೆ. ಹಾಗೆಯೇ, ತಮ್ಮದೇ ನಾಯಕರಿಂದ ಮಾತ್ರವಲ್ಲದೆ ಕೋಮುವಾದಿ ರಾಜಕಾರಣಿಗಳಿಂದ ಶೋಷಣೆಗೊಳಗಾದ ಮುಸ್ಲಿಮರ ಹಿತವನ್ನೂ ಗಮನದಲ್ಲಿರಿಸಬೇಕಾಗುತ್ತದೆ.
ಅಂತಿಮವಾಗಿ, ಭಾರತಕ್ಕೆ ಕೇವಲ ದಕ್ಷ ಪ್ರಧಾನಿ ಸಿಕ್ಕಿದರೆ ಸಾಲದು, ಆತ ಬುದ್ಧಿವಂತನೂ ಆಗಿರಬೇಕು. ಸಚಿವ ಸಂಪುಟದಲ್ಲಿ ತಮ್ಮ ವಿರೋಧಿಗಳಿಗೂ ಸ್ಥಾನ ಕಲ್ಪಿಸಿಕೊಟ್ಟು ದೊಡ್ಡತನ ಮೆರೆದ ಒಬ್ಬ ಜವಾಹರಲಾಲ್ ನೆಹರೂ, ಆಡಳಿತಗಾರರಿಗೆ ರಾಜಧರ್ಮವನ್ನು ನೆನಪಿಸಿಕೊಟ್ಟ ಒಬ್ಬ ವಾಜಪೇಯಿ ಈ ದೇಶವನ್ನು ಉತ್ತಮ ಹಾದಿಯಲ್ಲಿ ಮುನ್ನಡೆಸಿದ್ದರು. ದುರಹಂಕಾರದಿಂದ ಆಡಳಿತ ನಡೆಸುವವರು ದೇಶದ ಘನತೆಯನ್ನೇ ಕುಗ್ಗಿಸುತ್ತಾರೆ.
ಮೋದಿಯವರ ಸಾಧನೆಯನ್ನು ಶ್ಲಾಘಿಸಿದ ಅಮೆರಿಕ ಕಾಂಗ್ರೆಸ್‌ನ ಅದೇ ಅಧ್ಯಯನ ವರದಿಯು ಕಾಂಗ್ರೆಸ್ ಪಕ್ಷದ 'ಉತ್ತರಾಧಿಕಾರಿ'ಯ ಬಗ್ಗೆ ಸಂದೇಹದ ಮಾತುಗಳನ್ನು ವ್ಯಕ್ತಪಡಿಸಿದ್ದು ಕಾಕತಾಳೀಯವೇನೂ ಅಲ್ಲ. ಅವರ ಅವಿವೇಕದ ನಡೆನುಡಿಯ ಹಿನ್ನೆಲೆಯಲ್ಲಿ ಪಕ್ಷವನ್ನು ಮುನ್ನಡೆಸುವ ಅವರ ಸಾಮರ್ಥ್ಯದ ಬಗ್ಗೆಯೇ ಅದು ಸಂದೇಹ ವ್ಯಕ್ತಪಡಿಸಿತ್ತು.
ಒಮ್ಮೆ ಯೋಚಿಸಿ ನೋಡಿ. ರಾಹುಲ್ ಗಾಂಧಿಯ ಬಗ್ಗೆ ನಮಗೆ ಏನೇನು ಗೊತ್ತು? ಪೂರ್ವ ಏಷ್ಯಾದ ಬದಲಾಗುತ್ತಿರುವ ಚಿತ್ರಣದ ಬಗ್ಗೆ ರಾಹುಲ್‌ಗೆ ತಿಳಿವಳಿಕೆಯಿದೆಯೇ? ಭಾರತದ ಗ್ರಾಮೀಣ ಬದುಕನ್ನು ಹಾಳುಗೆಡವುತ್ತಿರುವ ಖಾಪ್ ಮತ್ತು ಜಾತಿ ಸಂಸ್ಕೃತಿಯ ಬಗ್ಗೆ ಅವರಿಗೆ ಎಷ್ಟು ತಿಳಿವಳಿಕೆ ಇದೆ? ಜಗತ್ತಿನಲ್ಲಿ ಹೆಚ್ಚುತ್ತಿರುವ ಜಲ ಕ್ಷಾಮದ ಬಗ್ಗೆ ಅವರಿಗೆ ಎಷ್ಟು ಗೊತ್ತಿದೆ? ನಿಜ. ಇಂಥ ಎಲ್ಲ ವಿಷಯಗಳ ಬಗ್ಗೆ ವಿವರಣೆ ನೀಡಲು ಅವರಿಗೆ ಸಲಹೆಗಾರರು ಇರಬಹುದು. ವಿದರ್ಭದ ಕಲಾವತಿಯ ಬಗ್ಗೆ ವಿವರ ನೀಡಿದ್ದೂ ಇಂಥ ಸಲಹೆಗಾರರೇ. ಆದರೆ, ರಾಹುಲ್ ಸಂಸತ್ತಿನಲ್ಲಿ ಆಕೆಯನ್ನು 'ಗಣ್ಯ ವ್ಯಕ್ತಿ'ಯನ್ನಾಗಿಸಿದ ಬಳಿಕ ಆ ಬಡ ಮಹಿಳೆಯ ಸಂಕಷ್ಟಗಳೇನೂ ಕಡಿಮೆಯಾಗಲಿಲ್ಲ. ಬದಲಾಗಿ ಇನ್ನಷ್ಟು ಹೆಚ್ಚಾಯಿತು.
ರಾಹುಲ್ ಗಾಂಧಿ ಅವರಲ್ಲಿ ಏನಾದರೂ ಐಡಿಯಾ ಇದೆಯೇ, ಯಾವುದಾದರೂ ದೂರದೃಷ್ಟಿಯ ಚಿಂತನೆಯಿದೆಯೇ ಎಂಬ ಬಗ್ಗೆ ಭಾರತದ ಪ್ರಜೆಗಳಿಗೆ ತಿಳಿಯದು. ಭಾರತದ ಸಮಸ್ಯೆಗಳು ಮತ್ತು ಅವುಗಳನ್ನು ಪರಿಹರಿಸುವ ಮಾರ್ಗಗಳ ಬಗ್ಗೆ ರಾಹುಲ್‌ಗೂ ತಿಳಿಯದು. ಆದರೆ, ಅವರಿಗೆ ಒಂದು ಕುಲನಾಮವಿದೆ. ಆ ಕುಲನಾಮದ ಬಲವಿರುವ ಕಾರಣ, ಈ ಮಹಾನ್ ರಾಷ್ಟ್ರದ ಪ್ರಧಾನಿ ಸ್ಥಾನಕ್ಕೆ ನಾವು ಅವರನ್ನು ಸ್ವಾಗತಿಸಬೇಕಂತೆ! ಎಲ್ಲ ಪಕ್ಷಗಳೂ ಮಾಡುತ್ತಿರುವುದು ಇಂಥ ಕೆಲಸವನ್ನೇ. ಈ ನೆಲದ ಆಡಳಿತಗಾರರನ್ನಾಗಿ ಪುತ್ರರು, ಪುತ್ರಿಯರು, ಕ್ರಿಮಿನಲ್‌ಗಳನ್ನು ಚುನಾಯಿಸುವಂತೆ ನಮಗೆ ತಾಕೀತು ಮಾಡುತ್ತವೆ. ಕಮ್ಯುನಿಸ್ಟ್ ನೇತಾರ ಖ್ರುಶ್ಚೇವ್‌ರವರ ಮಾತುಗಳನ್ನೂ ಅವುಗಳು ಕೇಳಿಸಿಕೊಳ್ಳಲಾರವು. ಅವರು ಹೇಳಿದ್ದೇನು ಗೊತ್ತೇ? 'ನೀವು ನಿಮ್ಮ ಗ್ರಾಹಕರ ಚರ್ಮವನ್ನು ಸುಲಿಯುವಾಗ, ಅಲ್ಪಸ್ವಲ್ಪ ಚರ್ಮವನ್ನು ಹಾಗೆಯೇ ಬೆಳೆಯಲು ಬಿಡಬೇಕು. ಏಕೆಂದರೆ ಅದನ್ನು ಮತ್ತೆ ಸುಲಿಯಬೇಕಲ್ಲ!'.

- ಟಿ.ಜೆ.ಎಸ್.ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.