ಅಂಕಣಗಳು

ಜನ ಕಡಿಮೆಯಾದಷ್ಟೂ ಕಷ್ಟಗಳು ಜಾಸ್ತಿಯಾದಾವು

Published On :

ಸಿನಿಮಾಗಳಲ್ಲಿ ನೋಡುತ್ತೇವಲ್ಲ: ಅಂಥದೇ ಒಂದು ದೊಡ್ಡಮನೆ ನಮ್ಮ ಊರಲ್ಲಿತ್ತು. ಅದಕ್ಕೆ ಯಜಮಾನ್ ಶಿವಬಸಪ್ಪನವರ ಮನೆ ಎಂದೇ ಹೆಸರಿತ್ತು. ಜನ ಅದನ್ನು ಯಜಮಾನರ ಮನೆ, ಪಟೇಲರ ಮನೆ, ದೊಡ್ಡವರ ಮನೆ ಎಂದೆಲ್ಲಾ ಕರೆಯುತ್ತಿದ್ದರು. ಆ ಮನೆಗೆ, ಒಂದಲ್ಲ ಎರಡಲ್ಲ- ಒಟ್ಟು 34 ಬಾಗಿಲುಗಳಿದ್ದವು. ಮನೆಯೊಳಗೆ ಹತ್ತು ರೂಮುಗಳಿದ್ದವು. ಐವತ್ತು ಮಂದಿ ಕೂರಬಹುದಾದಂಥ ಹಾಲ್ ಇತ್ತು. ಇದಕ್ಕಿಂತ ದೊಡ್ಡ ವಿಷಯ ಏನೆಂದರೆ- ಈ ಮನೆಯ ತುಂಬ ಜನರಿದ್ದರು. ಯಜಮಾನ್ ಶಿವಬಸಪ್ಪನವರಿಗೆ ಐದು ಗಂಡು, ಎರಡು ಹೆಣ್ಣು ಮಕ್ಕಳಿದ್ದರು. ಎಲ್ಲ ಮಕ್ಕಳಿಗೂ ಒಂದೊಂದು ರೂಂ ಇರಲಿ. ಎಲ್ಲರೂ ಒಟ್ಟಾಗಿಯೇ ಬದುಕಲಿ ಎಂಬುದು ಶಿವಬಸಪ್ಪನವರ ಆಸೆಯಾಗಿತ್ತು. ಅದನ್ನೇ ಮಕ್ಕಳಿಗೆ ಹೇಳಿಕೊಟ್ಟಿದ್ದರು. ಅವರ ಮನೆಯಲ್ಲಿರುವ ಒಟ್ಟು ಜನ, ಬೆಳಗಿನ ಉಪಹಾರಕ್ಕೆ ರೊಟ್ಟಿಯನ್ನೋ, ಚಪಾತಿಯನ್ನೋ ಮಾಡಿದರೆ ಆಗ ಸುಡಲಾಗುವ ರೊಟ್ಟಿ/ಚಪಾತಿಯ ಒಟ್ಟು ಸಂಖ್ಯೆಯ ಕುರಿತಂತೆ ಜನ ಜೋಕು ಮಾಡುತ್ತಿದ್ದರು. ಒಬ್ಬರಿಗೆ ನಾಲ್ಕು ಚಪಾತಿ ಅಂದುಕೊಂಡ್ರು, ಒಂದು ಟೈಂಗೆ ನೂರು ಚಪಾತಿ ಸುಡಬೇಕು. ಅಂಥ ತಾಳ್ಮೆ ಅಡುಗೆ ಮಾಡುವ ಹೆಂಗಸರಿಗಿದೆಯಲ್ಲ, ಗ್ರೇಟ್ ಅನ್ನುತ್ತಿದ್ದರು.
ಹೇಳಿ ಕೇಳಿ ಪಟೇಲರಲ್ಲವೆ? ಶಿವಬಸಪ್ಪನವರು ಎರಡು ಕಡೆ ತೋಟ ಮಾಡಿದ್ದರು. ನಲವತ್ತು ಎಕರೆ ಜಮೀನಿಗೆ ಒಡೆಯರಾಗಿದ್ದರು. ನಮ್ಮ ಊರಿನ ನಾಲ್ಕು ದಿಕ್ಕುಗಳಲ್ಲಿ ಅವರ ಜಮೀನಿತ್ತು. ಎರಡು ಕಡೆಯಲ್ಲಿ ಪಂಪ್‌ಸೆಟ್ ಹಾಕಿಸಿದ್ದರು. ಮಕ್ಕಳು ಚೆನ್ನಾಗಿ ಓದಿ ದೊಡ್ಡ ಆಫೀಸರ್‌ಗಳಾಗಲಿ ಎಂದು ಆಸೆಪಟ್ಟಿದ್ದರು. ಮುದ್ದು ಮಾಡಿದ್ದು ಹೆಚ್ಚಾಯಿತೋ ಅಥವಾ ಆ ಮಕ್ಕಳ ದುರಾದೃಷ್ಟವೋ: ಅಂತೂ ಅವರು ಗುಮಾಸ್ತರಾಗಿ, ಶಾಲಾ ಶಿಕ್ಷಕರಾಗಿ ನೌಕರಿಗಳಿಗೆ ಸೇರಿಕೊಂಡರು. ಪಟೇಲರು, ತಮ್ಮ ಪ್ರಭಾವ ಬಳಸಿ, ಮಕ್ಕಳು ತಮ್ಮ ಜಿಲ್ಲೆಯಲ್ಲೇ ಉಳಿಯುವಂತೆ ನೋಡಿಕೊಂಡಿದ್ದರು. ಹೀಗೆ, ಎಲ್ಲರೂ ಒಟ್ಟಾಗಿದ್ದ ಕಾರಣದಿಂದ ಯಾವುದೇ ಕೆಲಸವೂ ಅವರಿಗೆ ಸಮಸ್ಯೆ ಅನ್ನಿಸುತ್ತಲೇ ಇರಲಿಲ್ಲ.
ವಿಪರ್ಯಾಸ ಕೇಳಿ: ಕೂಡು ಕುಟುಂಬಕ್ಕೆ ಚೆಂದದ ಉದಾಹರಣೆ ಎಂಬಂತಿದ್ದ ಶಿವಬಸಪ್ಪನವರ ಕುಟುಂಬವೂ ಬೇರೆಯಾಗುವಂಥ ಸಂದರ್ಭವೊಂದು ಕಡೆಗೂ ಸೃಷ್ಟಿಯಾಯಿತು. ಈ ಬೆಳವಣಿಗೆಗೆ ಶ್ರೀಕಾರ ಹಾಕಿದ್ದು, ಹೆಂಗಸರ ಮಧ್ಯೆ ಶುರುವಾದ ಕೋಳಿ ಜಗಳ. ನೌಕರಿಯಲ್ಲಿದ್ದ ಮಕ್ಕಳ ಹೆಂಡತಿಯರು ಅದೊಂದು ಮಧ್ಯಾಹ್ನ ಇಷ್ಟೊಂದು ಜನರಿಗೆ ಅಡುಗೆ ಮಾಡಲು ನಮ್ಮಿಂದ ಸಾಧ್ಯವಿಲ್ಲ ಎಂದು ಕೂತುಬಿಟ್ಟರು. ಉಳಿದಿಬ್ಬರು ಸೊಸೆಯರಿಗೆ ಈ ಮಾತು ಸರಿಕಾಣಲಿಲ್ಲ. ಅವರು ರೇಗಿ-
'ನೋಡೋಕೆ ಗಟ್ಟಿಮುಟ್ಟಾಗಿ ಇದೀರ. ಅಡುಗೆ ಮಾಡಲು ಆಗಲ್ಲ ಅಂತೀರಲ್ಲ; ನೀವು ಬೇರೆ ಯಾರಿಗೋ ಮಾಡಿ ಹಾಕ್ತಾ ಇದೀರಾ? ಇಲ್ಲ ತಾನೆ? ನಮ್ಮ ಮನೆಯ ಜನರಿಗೆ ಅಡುಗೆ ಮಾಡಲು ಆಗಲ್ಲ ಅಂದ ಮೇಲೆ ನಿಮ್ಮಿಂದ ಯಾರಿಗೆ ಏನುಪಯೋಗ ಎಂದು ಬಿಟ್ಟರು.
ವಾರಗಿತ್ತಿಯರ ಮಾತುಗಳು, ಹಠ ಹಿಡಿದು ಕೂತಿದ್ದ ಹೆಂಗಸರನ್ನು ಕೆರಳಿಸಿದವು. ಸಂಜೆ ಗಂಡಂದಿರು ಬರುವುದನ್ನೇ ಕಾದಿದ್ದ ಅವರು ಒಂದಕ್ಕೆ ಎರಡು ಸೇರಿಸಿ ಹೇಳಿಬಿಟ್ಟರು. ಒಂದು ಬಾರಿ ಅಡುಗೆ ಮಾಡಲು ಕೂತರೆ ನಲವತ್ತೈದು ಮಂದಿಗೆ ಬೇಯಿಸಬೇಕು. ಇದೆಲ್ಲಾ ಜೀತ ಇದ್ದ ಹಾಗೆ. ಈ ಹಳ್ಳೀಲಿ ನಾವು ಅದೆಷ್ಟು ವರ್ಷ ಅಂತ ಹೆಣಗೋದು? ನಾವಿಲ್ಲಿ ದೊಡ್ಡ ಬಂಗಲೆಯಲ್ಲಿ ಇದೀವಿ ನಿಜಾ ಆದರೆ, ನಮಗೆ ಪ್ರೈವೇಸಿ ಎಂಬುದು ಇದೆಯಾ? ಒಂದರ್ಥದಲ್ಲಿ ನಾವು ಜೈಲಿನೊಳಗೆ ಇದೀವೇನೋ ಅನ್ನಿಸ್ತಿದೆ. ಎಷ್ಟೇ ತೊಂದರೆಯಾದರೂ ಪರವಾಗಿಲ್ಲ. ಸಿಟಿಗೆ ಹೋಗಿ ಬಿಡೋಣ. ನೀವು ಧೈರ್ಯ ಮಾಡಿ ಆಸ್ತಿಯಲ್ಲಿ ಪಾಲು ಕೇಳಿ ಎಂದು ಹೇಳಿಕೊಟ್ಟರು.
ಪಟೇಲರ ಮಕ್ಕಳು ಹಾಗೆಯೇ ಮಾಡಿದರು. ಮಕ್ಕಳ ಮನಸ್ಸನ್ನು ಬದಲಿಸಲು ಪಟೇಲರು ಹಲವು ರೀತಿಯಲ್ಲಿ ಪ್ರಯತ್ನಿಸಿದರು. ಏನೂ ಉಪಯೋಗವಾಗಲಿಲ್ಲ. ಕಡೆಗೆ, ನಿಮ್ಮ ಹಣೆಯಲ್ಲಿ ಬರೆದಂತೆ ಆಗಲಿ ಎಂದು ಕೈಚೆಲ್ಲಿ ಕೂತುಬಿಟ್ಟರು. ಮುಂದಿನ ಎರಡೇ ತಿಂಗಳಲ್ಲಿ ಆಸ್ತಿಯ ಹಂಚಿಕೆ ನಡೆದು ಹೋಯಿತು. ಜಮೀನು ಹಂಚಿಕೆಯಿಂದ ತಕ್ಷಣ ಸಿಟಿಗೆ ಮನೆ ಬದಲಿಸಲು ಹೆಂಗಸರು ಪ್ಲಾನ್ ಮಾಡಿದ್ದರು. ಆದರೆ, ನೌಕರಿಯಲ್ಲಿದ್ದವರ ಜಮೀನು ನೋಡಿಕೊಳ್ಳಲು ರೈತರಾಗಿದ್ದ ತಮ್ಮಂದಿರು ಒಪ್ಪಿಕೊಳ್ಳಲಿಲ್ಲ. ಜೊತೆಗೆ ತುಂಬ ಫಲವತ್ತಾದ ಭೂಮಿ ಸಿಗಲಿಲ್ಲ ಎಂಬ ಕಾರಣಕ್ಕೆ ಅಣ್ಣತಮ್ಮಂದಿರ ಮಧ್ಯೆಯೇ ಜಗಳ ಶುರುವಾಯಿತು. ಈ ಸಂದರ್ಭದಲ್ಲಿ ಜಮೀನನ್ನು ಗುತ್ತಿಗೆಗೆ ಪಡೆಯಲು ಕೆಲವರು ಮುಂದೆ ಬಂದರು. ಆದರೆ, ಭವಿಷ್ಯದ ದಿನಗಳಲ್ಲಿ ಏನಾದರೂ ತೊಂದರೆಯಾದರೆ ಪೊಲೀಸ್ ಕೇಸ್ ಆಗಬಹುದು ಅನ್ನಿಸಿದಾಗ ತಕ್ಷಣವೇ ಹಿಂದೆ ಸರಿದರು.
ಪರಿಣಾಮ ಏನಾಯಿತೆಂದರೆ, ನೌಕರಿಯಲ್ಲಿದ್ದವರ ಪಾಲಿನ ಜಮೀನು ಪಾಳು ಬಿತ್ತು. ಪಾಲು ಪಡೆದ ನಂತರ, ಪ್ರತಿಯೊಂದು ಮನೆಯಲ್ಲೂ ನಾಲ್ಕು ಮಂದಿ ಸದಸ್ಯರಾದರು. ಗಂಡ-ಹೆಂಡತಿಯನ್ನು ಬಿಟ್ಟರೆ ಮಕ್ಕಳಿಗೆ ಕೆಲಸ ಗೊತ್ತಿರಲಿಲ್ಲ. ಗೊತ್ತಿದ್ದರೂ ಅವರು ಶ್ರದ್ಧೆಯಿಂದ ಮಾಡುತ್ತಿರಲಿಲ್ಲ. ಹಾಗಾಗಿ, ದಿನೇ ದಿನೆ ಪಟೇಲರ ಮಕ್ಕಳ ಸಮಸ್ಯೆಗಳು ಹೆಚ್ಚಾದವು. ದಶಕಗಳಿಂದಲೂ ಪಟೇಲರ ಮೇಲೆ ದ್ವೇಷ ಸಾಧಿಸುತ್ತಿದ್ದ ಒಂದಿಬ್ಬರು, ಸಮಯ ನೋಡಿಕೊಂಡು ಅಣ್ಣತಮ್ಮಂದಿರ ಮಧ್ಯೆಯೇ ಜಗಳ ತಂದಿಟ್ಟರು. ಆಮೇಲೆ ಏನಾಯಿತೆಂದರೆ, ಪಟೇಲರ ಸಮ್ಮುಖದಲ್ಲೇ ಅವರ ಇಬ್ಬರು ಮಕ್ಕಳೂ ಕೊರಳಪಟ್ಟಿ ಹಿಡಿದು ಹೊಡೆದಾಡಿಕೊಂಡರು. ಇಂಥದೊಂದು ಬೆಳವಣಿಗೆಯನ್ನು ಕನಸಲ್ಲೂ ಊಹಿಸದಿದ್ದ ಪಟೇಲರಿಗೆ ಅವತ್ತು ರಾತ್ರಿ ಹೃದಯಾಘಾತವಾಯಿತು. ತಕ್ಷಣವೇ ಜಯದೇವ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ. ವಾರದ ಹಿಂದಷ್ಟೆ ಅವರು ತೀರಿಕೊಂಡರು.
ಇಂಥದೇ ಕಥೆ ಸಿನಿಮಾದಲ್ಲಿ ಬಂದರೆ, ಕಡೆಗೆ ಅಣ್ಣತಮ್ಮಂದಿರು ಒಂದಾಗುತ್ತಾರೆ. ಆದರೆ ನಮ್ಮೂರಲ್ಲಿ ಹಾಗಾಗಲಿಲ್ಲ. ಕಾರಣ, ನಮ್ಮ ಕಣ್ಣೆದುರು ಇದ್ದುದು ಸಿನಿಮಾ ಅಲ್ಲ, ಜೀವನ!

- ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.