ಅಂಕಣಗಳು

ಚುನಾವಣೆ ನಂತರದಲ್ಲಾದರೂ ಸಿಕ್ಕೀತೇ ರಾಜಕೀಯ ಸ್ಥಿರತೆ?

ನರೆಂದ್ರ ಮೋದಿಯವರು ಗುಜರಾತ್‌ನಲ್ಲಿ ಬಿಜೆಪಿಯನ್ನು ಅದ್ಭುತ ವಿಜಯದತ್ತ ಮುನ್ನಡೆಸಿದ ಬೆನ್ನಲ್ಲೇ ...

Published On :

ನರೆಂದ್ರ ಮೋದಿಯವರು ಗುಜರಾತ್‌ನಲ್ಲಿ ಬಿಜೆಪಿಯನ್ನು ಅದ್ಭುತ ವಿಜಯದತ್ತ ಮುನ್ನಡೆಸಿದ ಬೆನ್ನಲ್ಲೇ ಈಗ ಎಲ್ಲರ ಚಿತ್ತವೂ ಕರ್ನಾಟಕದತ್ತ ನೆಟ್ಟಿದೆ. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಬಿಜೆಪಿಗೆ ಅಧಿಕಾರವನ್ನು ನೀಡಿದ ಕರ್ನಾಟಕವು ಇನ್ನು ಮೂರು ತಿಂಗಳಲ್ಲಿ ಚುನಾವಣೆಗೆ ಸಜ್ಜಾಗಲಿದೆ.
ಟಿ ದಕ್ಷಿಣದ ಹೆಬ್ಬಾಗಿಲು ಎಂದೇ ವರ್ಣಿಸಲಾಗುತ್ತಿರುವ ರಾಜ್ಯವನ್ನು ಬಿಜೆಪಿ ಉಳಿಸಿಕೊಳ್ಳಲಿದೆಯೇ?
ಟಿ ತನ್ನದೇ ಸಮಸ್ಯೆಗಳ ಭಾರಕ್ಕೆ ನಲುಗಿ ಬಿಜೆಪಿಯ ಸಾಮ್ರಾಜ್ಯವು ಪತನ ಹೊಂದಲಿದೆಯೇ?
ಟಿ ಬಿ. ಎಸ್. ಯಡಿಯೂರಪ್ಪ ಹಾಗೂ ಶ್ರೀರಾಮುಲು ಪಕ್ಷದಿಂದ ಸಿಡಿದಿರುವ ಇಬ್ಬರು ಪ್ರಮುಖ ಬಂಡಾಯಗಾರರು. ಇವರು ಬಿಜೆಪಿಯ ಸಾಂಪ್ರದಾಯಿಕ ಮತಗಳಿಗೆ ಕನ್ನ ಹಾಕಲಿದ್ದಾರೆಯೇ?
ಟಿ ಬಿಜೆಪಿಯ ಸಮಸ್ಯೆಗಳ ಲಾಭ ಪಡೆದುಕೊಂಡು ಹಿಮಾಚಲ ಪ್ರದೇಶದಲ್ಲಾದಂತೆ ಕಾಂಗ್ರೆಸ್ ಅಧಿಕಾರದ ಗದ್ದುಗೆಯನ್ನು ಪಡೆದುಕೊಳ್ಳಲಿದೆಯೇ?
ಟಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಪಕ್ಕಕ್ಕೆ ಸರಿಸಿ ಜೆಡಿಎಸ್ ಅಧಿಕಾರ ಸೂತ್ರವನ್ನು ಹಿಡಿಯಲಿದೆಯೇ?
ಟಿ ಮೈತ್ರಿಕೂಟಗಳ ರಾಜಕಾರಣದ ಕೆಟ್ಟ ದಿನಗಳಿಗೆ ರಾಜ್ಯ ಮತ್ತೆ ಮರಳಲಿದೆಯೇ?
ಈ ಪ್ರಶ್ನೆಗಳಿಗೆ ನಿಖರ ಉತ್ತರ ಯಾರ ಬಳಿಯೂ ಇಲ್ಲ. ಆದರೆ ಮೇಲ್ನೋಟಕ್ಕೆ ಸಾಬೀತಾಗಿರುವಂತೆ ಬಿಜೆಪಿ ದುರ್ಬಲಗೊಂಡಿದೆ. ಯಡಿಯೂರಪ್ಪ ಅವರು ಪಕ್ಷವನ್ನೇ ಇಬ್ಭಾಗಿಸಿದ್ದಾರೆ. ಕೆಲವರು ಅದಾಗಲೇ ಕೆಜೆಪಿಯನ್ನು ಸೇರಿಕೊಂಡಿದ್ದಾರೆ. ಮತ್ತೆ ಕೆಲವರು ಎತ್ತ ಜಿಗಿಯುವುದೆಂದು ಹವಣಿಸುತ್ತ ಗೋಡೆಯ ಮೇಲೆ ಕುಳಿತಿದ್ದಾರೆ. ಇನ್ನು ಕೆಲವರು ಪಕ್ಷದ ಟಿಕೇಟ್‌ಗಾಗಿ ಕಾಯುತ್ತಿದ್ದಾರೆ.
ಇನ್ನೊಬ್ಬ ಬಂಡಾಯಗಾರ, ರೆಡ್ಡಿ ಪರಮಾಪ್ತ ಶ್ರೀರಾಮುಲು ಬಿಜೆಪಿಯನ್ನು ಬಳ್ಳಾರಿಯಿಂದ ನಾಮಾವಶೇಷ ಮಾಡಿಬಿಡುವ ಭೀತಿಯನ್ನು ಒಡ್ಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಶ್ರೀರಾಮುಲು ಅವರ ಬಿಎಸ್‌ಆರ್ ಪಕ್ಷವನ್ನು ತಮ್ಮತ್ತ ಸೆಳೆದುಕೊಳ್ಳುವ ಇಚ್ಛೆ ಹೊಂದಿವೆ. ಇತ್ತ ಯಡಿಯೂರಪ್ಪನವರೂ ಶ್ರೀರಾಮುಲು ಜತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳಿರುವುದರಿಂದ ಬಿಜೆಪಿ ಈ ಬಗ್ಗೆ ಕಳವಳಗೊಂಡಿದೆ.
ಈ ಎಲ್ಲ ನಕಾರಾತ್ಮಕ ಅಂಶಗಳನ್ನೂ ಹಿಂದಕ್ಕೆ ತಳ್ಳಿ, ತನ್ನ ವಿರೋಧಿಗಳ ಆಸೆಗಳನ್ನೆಲ್ಲ ನುಚ್ಚುನೂರು ಮಾಡಿ ಬಿಜೆಪಿ ಜಯ ದಾಖಲಿಸುವುದೇ? ಪಕ್ಷದ ಮಂದಿ ಹಾಗೆಂದೇ ವಿಶ್ವಾಸ ಪ್ರದರ್ಶಿಸುತ್ತಿದ್ದಾರೆ. ಏನೂ ಆಗಿಲ್ಲ ಎಂಬಂಥ ಧೀರ ಮುಖಭಾವವನ್ನೇ ಅವರು ಪ್ರದರ್ಶಿಸುತ್ತಿದ್ದಾರೆ. 2008ರಲ್ಲಿ ಜೆಡಿಎಸ್‌ನ ವಚನಭ್ರಷ್ಟತೆ ಸಂದರ್ಭದಲ್ಲಿ ಸೃಷ್ಟಿಯಾದಂಥದ್ದೇ ಅನುಕಂಪದ ಅಲೆಯೊಂದು ಬಿಜೆಪಿ ಪರವಾಗಿ ವ್ಯಕ್ತವಾಗಿದೆ ಎಂಬುದು ಅವರ ಅಭಿಪ್ರಾಯ.  
ಆದರೆ ಟೀಕಾಕಾರರು ಹೇಳುವ ಮಾತುಗಳೇ ಬೇರೆ. ಅದೊಂದು ಮಿಥ್ಯೆ ಅಷ್ಟೇ ಎಂದು ಪ್ರತಿಪಾದಿಸುತ್ತಾರವರು. ಕಳೆದ ಐದು ವರ್ಷಗಳ ಅವಧಿಯಲ್ಲಿ ನೋಡುತ್ತಿರುವ ಮೂರನೇ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಅವರು. ಪ್ರತಿದಿನವೂ ಅವರಿಗೆ ಗದ್ದುಗೆ ಉಳಿಸಿಕೊಳ್ಳುವ ಸಂಕಟ. ತಮ್ಮ ಕಾಲಡಿಗಿನ ಕಂಬಳಿಯನ್ನು ಯಾವಾಗ ಎಳೆದುಬಿಡುತ್ತಾರೋ ಎಂಬ ಆತಂಕದಲ್ಲೇ ಅವರು ದಿನಗಳನ್ನು ತಳ್ಳುತ್ತಿದ್ದಾರೆ. ಆಡಳಿತ ಎನ್ನುವುದಂತೂ ತೀರಾ ಶಿಥಿಲ ವ್ಯವಸ್ಥೆಗೆ ಮುಟ್ಟಿದೆ. ಅವೆಲ್ಲದರ ನಡುವೆಯೇ ಅವರು ಮುಂದಿನ ಚುನಾವಣೆಯನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ರೈತಪರ ಎನ್ನುವಂಥ ಬಜೆಟ್ ಒಂದನ್ನು ನೀಡಿದ್ದಾರೆ. ಅವರು ಪಕ್ಷಕ್ಕೆ ಮತ್ತೊಂದು ಅವಧಿಯನ್ನು ದೊರಕಿಸಿಕೊಡಬಲ್ಲರೇ ಎಂಬ ಬಗ್ಗೆ ಬಿಜೆಪಿಯ ವರಿಷ್ಠರು ಕಾತುರ ಹೊಂದಿದ್ದಾರೆ.
ಬಿಜೆಪಿ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯೇ ತನ್ನನ್ನು ಗೆಲುವಿನತ್ತ ಕೊಂಡೊಯ್ಯಲಿದೆ ಎಂದು ಕಾಂಗ್ರೆಸ್ ಲೆಕ್ಕಾಚಾರ ಹಾಕುತ್ತಿದೆ. ಅದು ಅಧಿಕಾರದಿಂದ ಬಹು ಸಮಯಗಳಿಂದ ದೂರವಿದೆ. ಈ ನಡುವೆ 20 ತಿಂಗಳ ಅವಧಿಗೆ ಜೆಡಿಎಸ್ ಜತೆಗಿನ ಮೈತ್ರಿಯಲ್ಲಿ ಅಧಿಕಾರದ ರುಚಿಯನ್ನು ತುಸು ಉಂಡಿತು. ಆದರೆ ಅದು ಆ ಕ್ಷಣದ ತುರ್ತಿಗೆ ಮಾಡಿಕೊಂಡ ವಿವಾಹವಾಗಿತ್ತು. ಹೀಗಾಗಿ ವಿಚ್ಛೇದನವೂ ಶೀಘ್ರ.
ಈ ಬಾರಿ ಅದು ತನ್ನದೇ ಬಹುಮತದಿಂದ ಸರ್ಕಾರವನ್ನು ರಚಿಸುವ ಆಸೆ ಇರಿಸಿಕೊಂಡಿದೆ. ಒಂದೊಮ್ಮೆ ಸಂಖ್ಯೆ ಕಡಿಮೆ ಬಿದ್ದರೆ ಅದು ಜೆಡಿಎಸ್‌ನ ಬೆಂಬಲವನ್ನು ಪಡೆಯುವುದಕ್ಕೆ ಅಷ್ಟೇನೂ ಮುಜುಗರ ಪಟ್ಟುಕೊಳ್ಳುವುದಿಲ್ಲ. ಆದರೆ ಇಲ್ಲಿ ಭಾರಿ ಕೊಡು-ಕೊಳ್ಳುವಿಕೆ ಬೇಕಾಗುತ್ತದೆ ಎಂಬುದು ಅದಕ್ಕೆ ತಿಳಿದಿದೆ. ಇನ್ನು ಕಾಂಗ್ರೆಸ್ ತಲೆಯಲ್ಲಿರುವ ಇನ್ನೊಂದು ಯೋಚನೆ ಎಂದರೆ ಅಂಥ ಸಂದರ್ಭ ಬಂದರೆ ಯಡಿಯೂರಪ್ಪ ಅವರ ಕೆಜೆಪಿ ಬೆಂಬಲವನ್ನೂ ಹಾಗೂ ಶ್ರೀರಾಮುಲು ಬೆಂಬಲವನ್ನೂ ಪಡೆದುಕೊಳ್ಳಬಹುದು ಎಂಬುದು. ಕಾಂಗ್ರೆಸ್ ಕನಸು ನೆರವೇರುವುದೇ?
ಜೆಡಿಎಸ್ ಚುನಾವಣೆಗೆ ಸರ್ವ ಸನ್ನದ್ಧವಾಗಿದೆ. ಹೆಚ್ಚಿನ ವಿಧಾನಸಭೆ ಕ್ಷೇತ್ರಗಳಿಗೆಲ್ಲ ಅದು ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಬಿಜೆಪಿಯನ್ನು ಮಾತ್ರವಲ್ಲ, ಕಾಂಗ್ರೆಸ್ ಅನ್ನೂ ಧೂಳಿಪಟ ಮಾಡುವುದು ಅದರ ಗುರಿ. ಜನರು ಈ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತಿದ್ದಾರೆ ಎಂಬುದು ಜೆಡಿಎಸ್ ಮುಖಂಡರ ವ್ಯಾಖ್ಯಾನ. 2008ರಲ್ಲಿ ಬಿಜೆಪಿಗೆ ಮಾತಿನಂತೆ ಅಧಿಕಾರ ಹಸ್ತಾಂತರ ಮಾಡುವುದಕ್ಕೆ ವಿಫಲವಾಯಿತು ಎಂದಾದಾಗ ಕಳೆದುಕೊಂಡಿದ್ದ ವಿಶ್ವಾಸವನ್ನು ಜನರಿಂದ ಈ ಬಾರಿ ಗಿಟ್ಟಿಸುವುದಕ್ಕೆ ಅದು ಸಫಲವಾದೀತೇ? ಹೇಳುವುದಕ್ಕೆ ಕಷ್ಟ. ಮತದಾರರು ಈಗಲೇ ತಮ್ಮ ಅಭಿಪ್ರಾಯದ ಯಾವ ಸುಳಿವನ್ನೂ ಬಿಟ್ಟುಕೊಡುತ್ತಿಲ್ಲ. ಜೆಡಿಎಸ್ ಸ್ವಂತ ಬಹುಮತವನ್ನು ಪಡೆಯದೇ ಇದ್ದರೂ ಕಿಂಗ್‌ಮೇಕರ್ ಆಗುವ ಎಲ್ಲ ಲಕ್ಷಣಗಳೂ ಇವೆ. ಯಡಿಯೂರಪ್ಪ ಅವರ ಕೆಜೆಪಿ ಮತ್ತು ಶ್ರೀರಾಮುಲು ಅವರ ಬಿಎಸ್‌ಆರ್ ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸುವ ಪ್ರಯತ್ನವೂ ಅದರಿಂದ ಆಗಬಹುದು. ಅಧಿಕಾರವೇ ಎಲ್ಲದಕ್ಕೂ ಕೀಲಿಕೈ. ಆದ್ದರಿಂದ ಕಾಂಗ್ರೆಸ್‌ಗೂ ಅದು ಬೆಂಬಲ ಕೊಡುವಂತೆ ಕೇಳಬಹುದು.
ಮತದಾರರಂತೂ ಬಹಳ ಮೌನವಾಗಿ ತಮ್ಮ ತೀರ್ಪು ಕೊಡುವುದಕ್ಕೆ ಕಾಯುತ್ತಿದ್ದಾರೆ. ಕಳೆದೊಂದು ದಶಕದ ರಾಜಕೀಯ ಅಸ್ಥಿರತೆ, ಅತಿ ಕೆಟ್ಟ ಆಡಳಿತಗಳಿಂದ ಅವರು ರೋಸಿ ಹೋಗಿರುವುದಂತೂ ಹೌದು. ಆದರೂ ಅವರು ಯಾರಿಗೆಂದು ತಮ್ಮ ಮತ ನೀಡುತ್ತಾರೆ. ಮನಸ್ಸು ಗಟ್ಟಿ ಮಾಡಿಕೊಳ್ಳುವುದಕ್ಕೆ ಅವರಿಗಿನ್ನೂ ಮೂರು ತಿಂಗಳುಗಳ ಕಾಲವಿದೆ.
ಕೊನೆ ಗುಟುಕು: ಭ್ರಷ್ಟಾಚಾರ ಹಿಮದ ಚೆಂಡಿನಂತೆ. ಉರುಳಿದಂತೆಲ್ಲ ಅದು ದೊಡ್ಡದಾಗುತ್ತ ಹೋಗುತ್ತದೆ.


(ಈ ಲೇಖನದ ಇಂಗ್ಲಿಷ್ ಅವತರಣಿಕೆ www.namma-bengaluru. ಹಾಗೂ  www.suvarnanews.tv/featuresನಲ್ಲಿ ಕನ್ನಡ ಅಂಕಣ ಲಭ್ಯ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.