ಅಂಕಣಗಳು

ಅಂತಿಮ ಸಂಸ್ಕಾರದ ಸಾಮಗ್ರಿಗಳ ಮಾರಾಟವೇ ಜೀವನಕ್ಕೆ ಆಧಾರ

ಗೋವಾದಿಂದ ವಲಸೆ ಬಂದ ವೈಶ್ಯವಾಣಿ ಸಮುದಾಯದ ಜನ

Published On :

ಜೀವನೋಪಾಯಕ್ಕಾಗಿ ಒಬ್ಬೊಬ್ಬರು ಒಂದೊಂದು ಮಾರ್ಗ ಕಂಡುಕೊಳ್ಳುತ್ತಾರೆ. ಹಾಗೆಯೇ ಇಲ್ಲೊಂದು ಸಮುದಾಯದವಿದೆ. ಈ ಜಾತಿಯ ಜನ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಲು ಬೇಕಾದ ಸಾಮಗ್ರಿಗಳನ್ನು ಪೂರೈಸುತ್ತಾರೆ.
ಹೌದು, ಅಂತಿಮ ಸಂಸ್ಕಾರದ ವೇಳೆ ಯಾವ ಸಾಮಗ್ರಿ ಬೇಕಾದರೂ ಅದು ಇವರ ಬಳಿ ಸಿಗುತ್ತದೆ. ಶವ ಸಂಸ್ಕಾರಕ್ಕೆ ಎಂದು ಅಂಗಡಿಗೆ ಹೋಗಿ ಹೇಳಿದರೆ ಸಾಕು, ಕ್ಷಣಾರ್ಧದಲ್ಲಿ ಎಲ್ಲವೂ ಸಿದ್ಧವಾಗಿರುತ್ತದೆ. ಅಂದಹಾಗೆ ಆ ಸಮುದಾಯದ ಹೆಸರು ವೈಶ್ಯವಾಣಿ. ಹೆಸರು ವಿಶೇಷವಾಗಿದೆ ಅಲ್ಲವೇ ? ಕೆಲವರು ಇವರನ್ನು ಆರ್ಯವೈಶ್ಯ ಎಂದು ಭಾವಿಸುತ್ತಾರೆ. ಕೆಲವರು ಬ್ರಾಹ್ಮಣ ಸಮುದಾಯಕ್ಕೆ ಸೇರಿರಬಹುದು ಎಂದುಕೊಳ್ಳುತ್ತಾರೆ. ಈ ಸಮುದಾಯದಲ್ಲಿ ಮತ್ತೊಂದು ವಿಶೇಷವೂ ಇದೆ.
ಈಗಿನ ಕಾಲದಲ್ಲಿ ಚಿನ್ನ ಎಂದರೆ ಯಾರಿಗೆ ಇಷ್ಟವಾಗದು ಹೇಳಿ. ಮಹಿಳೆಯರಂತೆ ಪುರುಷರೇ ಈಗ ಮೈಮೇಲೆ ಮಣ ಬಂಗಾರ ಧರಿಸಿ ಓಡಾಡುತ್ತಾರೆ. ಅದರೆ, ಈ ಜಾತಿಯ ಮಹಿಳೆಯರಿಗೆ ಚಿನ್ನದ ಮೇಲೆ ವ್ಯಾಮೋಹವಿಲ್ಲ. ಹೀಗಾಗಿ ಶ್ರೀಮಂತರಂತೆ ಕೆಜಿಗಟ್ಟಲೆ ಚಿನ್ನಾಭರಣ ಧರಿಸುವುದಿಲ್ಲ.

ಪೋರ್ಚುಗೀಸರೊಂದಿಗೆ ಸಂಘರ್ಷ
ಈ ಸಮುದಾಯದ ಮೂಲ ಗೋವಾ. ಅಲ್ಲಿಯೂ ಅವರು ಅಂತಿಮ ಸಂಸ್ಕಾರಕ್ಕೆ ಬೇಕಾದ ಸಾಮಗ್ರಿಗಳನ್ನು ಮಾರುತ್ತಿದ್ದರು. ಜೊತೆಗೆ ದೇವಾಲಯಗಳನ್ನು ಶುಚಿ ಮಾಡುವ ಕೆಲಸ ನಿರ್ವಹಿಸುತ್ತಿದ್ದರು. ಸಣ್ಣಪುಟ್ಟ ಕೆಲಸಗಳನ್ನೂ ಮಾಡಿಕೊಂಡಿದ್ದರು. ಅಲ್ಲಿ ಪೋರ್ಚುಗೀಸರು ಮತ್ತು ಹಿಂದೂ ಸಮುದಾಯದ ನಡುವೆ ಸಂಘರ್ಷ ಶುರುವಾಗುತ್ತದೆ. ಪೋರ್ಚುಗೀಸರು ವಿನಾಕಾರಣ ಕಿರುಕುಳ ನೀಡಲು ಶುರು ಮಾಡುತ್ತಾರೆ. ಅವರ  ದಬ್ಬಾಳಿಕೆ ಹೆಚ್ಚಾದಾಗ ವೈಶ್ಯವಾಣಿಯ ಜನ ಗೋವಾದಿಂದ ಕರ್ನಾಟಕದ ಕಡೆಗೆ ವಲಸೆ ಬಂದರು.
ಹೀಗೆ ಬಂದವರು ಉಡುಪಿ, ಮಣಿಪಾಲ, ಪೆರ್ಡೂರು, ಕೊಕ್ಕರ್ಣೆ, ಪುತ್ತೂರು, ಕುಂದಾಪುರ, ಕೋಟೇಶ್ವರ, ಶಂಕರನಾರಾಯಣ, ಬೈಂದೂರು, ಉಪ್ಪುಂದ, ಮಂಗಳೂರು, ಸೂರತ್ಕಲ್, ಮೂಡಬಿದಿರೆ, ಬೆಳಗಾವಿ, ಖಾನಾಪುರ, ಬೈಲಹೊಂಗಲ, ಸವದತ್ತಿ, ಭಟ್ಕಳ, ಹೊನ್ನಾವರ, ಕುಮಟ ಕಾರವಾರ, ದಾಂಡೇಲಿ, ಯಲ್ಲಾಪುರ, ಜೋಯಿಡಾ, ಧಾರವಾಡ, ಕಲಘಟಗಿ, ಹಾನಗಲ್, ಹಾಸನ ಮತ್ತಿತರ ಪ್ರದೇಶಗಳಲ್ಲಿ ನೆಲೆ ನಿಂತರು. ಈ ಸಮುದಾಯದ ಜನಸಂಖ್ಯೆ ಭಾರಿ ಪ್ರಮಾಣದಲ್ಲೇನೂ ಇಲ್ಲ. ಸುಮಾರು 50 ಸಾವಿರ. ಅದರಲ್ಲೂ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ. ಹೀಗಾಗಿ ಗಂಡು ಮಕ್ಕಳಿಗೆ ಹೆಣ್ಣು ಸಿಗದೆ ಬೇರೆ ಸಮುದಾಯದಲ್ಲಿ ವಧು ಹುಡುಕುವ ಸನ್ನಿವೇಶ ನಿರ್ಮಾಣವಾಗಿದೆ.
ಕೆಲವರು ಅನ್ಯ ಜಾತಿಯವರನ್ನು ಮದುವೆಯಾಗಿದ್ದೂ ಇದೆ. ಆದರೆ, ಈ ಸಮಾಜದಲ್ಲಿ ಎರಡನೇ ವಿವಾಹಕ್ಕೆ ಅಸ್ಪದವೇ ಇಲ್ಲ. ಏನೇ ಆಗಲಿ, ಒಂದೇ ವಿವಾಹ. ಒಮ್ಮೆ ಮದುವೆಯಾದರೆ ಮತ್ತೆ ಹಸೆಮಣೆ ಏರುವ ಅವಕಾಶ ಹೆಣ್ಣು ಅಥವಾ ಗಂಡಿಗೆ ಇಲ್ಲವೇ ಇಲ್ಲ.

ಗೋವಾದಲ್ಲಿ ಕೊಂಕಣಿ, ಮರಾಠ
ವೈಶ್ಯ ಮರಾಠಿ, ಹಿಂದೂ ವೈಶ್ಯ, ಹಿಂದೂ ನಾರ್ವೇಕರ್, ಹಿಂದೂ ವಾಣಿ, ಕೊಂಕಣಿ, ವಾಣಿ, ಕೊಂಕಣಿ ವೈಶ್ಯ, ಪೊಕಳೆ, ಇವು ವೈಶ್ಯವಾಣಿ ಸಮುದಾಯದ ಉಪ ಪಂಗಡಗಳು. ಇವರದ್ದು ಬ್ರಾಹ್ಮಣರಿಗೆ ಹತ್ತಿರವಾದ ಗೋತ್ರಗಳು. ಅವು ಶಾಂಡಿಲ್ಯ, ಕಾಶ್ಯಪ, ವತ್ಸ, ಕೌಂಶ, ಮಹೇಂದ್ರ ಕೌಶಿಕ್, ವಿಶ್ವಾಮಿತ್ರ, ವಸಿಷ್ಠ ಮತ್ತಿತರ. ದೈವಜ್ಞ ಬ್ರಾಹ್ಮಣ, ವಿಶ್ವಕರ್ಮ, ಮರಾಠ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಿಗೆ ಸಮಾನವಾದ ಜಾತಿ ನಮ್ಮದು ಎನ್ನುತ್ತಾರೆ ವೈಶ್ಯವಾಣಿ ಸಮುದಾಯದವರು. ಇವರನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಕನ್ನಡವಾಣಿ, ಕೊಂಕಣ ವೈಶ್ಯ, ವೈಶ್ಯವಾಣಿ, ಕುಮರಿ ಮರಾಠ, ಪಾಪೇಕರ್ ವಾನೀಸ್ ಎಂದು ಕರೆಯುವುದುಂಟು. ಗೋವಾದಲ್ಲಿ ಕೊಂಕಣಿ ಮರಾಠ ಎಂಬ ಹೆಸರಿದೆ.

ವೈಶ್ಯವಾಣಿ ಸಮುದಾಯದ ಮಾತೃ ಭಾಷೆ ಕನ್ನಡವಾದರೂ ಮರಾಠಿ, ಕೊಂಕಣಿ ಮಾತನಾಡುತ್ತಾರೆ. ನಾರ್ವೇಕರ್ ಭಾಷೆಯನ್ನೂ ಹೆಚ್ಚಾಗಿ ಬಳಸುತ್ತಾರೆ. ಮೀನು ಇವರಿಗೆ ಪ್ರಿಯವಾದ ಆಹಾರ. ಅಷ್ಟೇ ಅಲ್ಲ, ಭೋಜನ ಪ್ರಿಯರು. ಹೀಗಾಗಿ ವಿಶೇಷವಾದ ಭಕ್ಷ್ಯ ಭೋಜನ ತಯಾರಿಸುವುದರಲ್ಲಿ ಇವರದ್ದು ಎತ್ತಿದ ಕೈ. 1985ರಲ್ಲಿ ಪ್ರಕಟವಾಗಿರುವ ಉತ್ತರ ಕನ್ನಡ ಜಿಲ್ಲೆಯ ಗೆಸೆಟಿಯರ್ ಪ್ರಕಾರ ವೈಶ್ಯವಾಣಿ ಎಂಬುದುದ ಕೊಂಕಣಿ ವೈಶ್ಯರ ಒಂದು ಉಪ ಪಂಗಡ. ಮೈಸೂರು ಪ್ರಾಂತ್ಯದ ವೈಶ್ಯರಿಗಿಂತ ಭಿನ್ನವಾದ ಇವರ ವೃತ್ತಿ ವ್ಯಾಪರವೇ ಆಗಿದೆ.

ಮುತ್ತುಗದ ಎಲೆ ಪತ್ರಾವಳಿ ಮಾರಾಟ
ಅದರೆ, ವೈಶ್ಯವಾಣಿ ಸಮುದಾಯದ ಶೇ.90ರಷ್ಟು ಮಂದಿ ಮುತ್ತಗದ ಎಲೆ ಪತ್ರಾವಳಿ ಮಾಡಿ ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಇದಲ್ಲದೆ, ಮಿಠಾಯಿ, ಚುರುಮುರಿ ಎಲೆ, ಅಡಿಕೆ ಮಾರುತ್ತಾರೆ. ಮುಖ್ಯವಾಗಿ ಇವರು ಅಂತಿಮ ಸಂಸ್ಕಾರಕ್ಕೆ ಬೇಕಾದ ವಸ್ತುಗಳನ್ನು ಪೂರೈಕೆ ಮಾಡುತ್ತಾರೆ. ಮಣ್ಣಿನ ಮಡಿಕೆ, ಗಂಧದ ಕಟ್ಟಿಗೆ, ತೆಂಗಿನ ಕಾಯಿ, ಶೇಂಗಾ ಎಣ್ಣೆ, ಧೂಪ ಮತ್ತಿತರ ಸಾಮಗ್ರಿಗಳು ಪ್ರಮುಖವಾದದ್ದು. ಕೆಲವರು ಕೃಷಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಸಮುದಾಯದ ಕೆಲವರು ಸಣ್ಣ ಪ್ರಮಾಣದಲ್ಲಿ ಜಮೀನು ಹೊಂದಿದ್ದರೂ ಅನೇಕ ಮಂದಿ ಭೂ ಸುಧಾರಣೆ ಕಾಯ್ದೆ ಜಾರಿಗೆ ಬಂದಾಗ ಜಮೀನುಗಳನ್ನು ಕಳೆದುಕೊಂಡಿದ್ದಾರೆ.

ಇವರು ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಪುರೋಹಿತರನ್ನು ಕರೆಸುತ್ತಾರೆ. ಆದರೆ, ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ಊರಿನ ಜನರೇ ಬಂದು ನೆರವೇರಿಸಿಕೊಡುತ್ತಾರೆ. ಈ ಸಮಾಜ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವವಾಗಿ ಹಿಂದುಳಿದಿದೆ. ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಉನ್ನತ ಹುದ್ದೆಗಳಲ್ಲಿ ಯಾರೂ ಇಲ್ಲ. ಇನ್ನು ರಾಜಕೀಯ ಪ್ರಾತಿನಿಧ್ಯವಂತೂ ಈ ವರೆಗೆ ಸಿಕ್ಕಿಲ್ಲ ಎನ್ನುತ್ತಾರೆ ಸಮುದಾಯದ ಮುಖಂಡ ಅರವಿಂದ ಪಟಣಕರ್.

ಹೋಲಿಕೆ ಮಾಡಲು ಆಗದು
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾಗ ಡಾ.ಸಿ.ಎಸ್.ದ್ವಾರಕಾನಾಥ್ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿ ಪ್ರಕಾರ ಈ ಸಮುದಾಯವನ್ನು ವೈಶ್ಯ ಎಂದು ಕರೆದರೂ ಆರ್ಯವೈಶ್ಯ ಸಮಾಜ, ಶೆಟ್ಟಿ ಅಥವಾ ಕೋಮಟಿ ಎಂದು ಕರೆಯುವ ಜಾತಿಗಳೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಮಹಾರಾಷ್ಟ್ರದಲ್ಲಿ ಈ ಸಮುದಾಯವನ್ನು ಅಲ್ಲಿಯ ಸರ್ಕಾರ ಹಿಂದುಗಳಿದ ವರ್ಗಗಳ ಪಟ್ಟಿಗೆ ಸೇರಿಸಿದೆ. ಕರ್ನಾಟಕದಲ್ಲಿ ಪ್ರವರ್ಗ 1ಕ್ಕೆ ಸೇರಿಸಬೇಕು. ಅದು ಸಾಧ್ಯವಾಗದಿದ್ದರೆ ಪ್ರವರ್ಗ-2ನಲ್ಲಿ ಸೇರಿಸಬೇಕು ಎಂಬುದು ಸಮುದಾಯದ ಮುಖಂಡರ ಮನವಿ.

ದಿವಂಗತ ವಿ.ಎಸ್.ಆಚಾರ್ಯ ಅವರು ಗೃಹ ಸಚಿವರಾಗಿದ್ದಾಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದು ಜನಸಂಖ್ಯೆಯಲ್ಲಿ ಅತಿ ಕಡಿಮೆ ಇರುವ ಆರ್ಯವೈಶ್ಯ ಸಮುದಾಯ ಅರ್ಥಿಕ, ಸಾಮಾಜಿಕವಾಗಿ ತೀರಾ ಹಿಂದುಳಿದೆ. ಹೀಗಾಗಿ ಈ ಜಾತಿಯನ್ನು ಹಿಂದುಳಿಗದ ವರ್ಗಗಳ 2-ಎ ಗುಂಪಿಗೆ ಸೇರಿಸಬೇಕು ಎಂದು ತಿಳಿಸಿದರು. ಹಿಂದುಳಿದ ವರ್ಗಗಳ ಜಾತಿ ಪ್ರಮಾಣ ಪತ್ರ ಪಡೆದರೆ ಉದ್ಯೋಗ ಮತ್ತು ಶಿಕ್ಷಣಕ್ಕೆ ಅನುಕೂಲ ಆಗುತ್ತದೆ ಎಂಬುದು ಆಚಾರ್ಯ ಅವರ ಅಭಿಪ್ರಾಯವಾಗಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲೇ ಇಲ್ಲ ಎನ್ನುತ್ತಾರೆ ಅರವಿಂದ ಪಟಣಕರ್.

ಒಟ್ಟಿನಲ್ಲಿ ವೈಶ್ಯವಾಣಿ ಸಮುದಾಯ ಅಲ್ಪಸಂಖ್ಯಾತವಾಗಿದ್ದರೂ ಸರ್ಕಾರದಿಂದ ಯಾವುದೇ ಸವಲತ್ತು ಅವರಿಗೆ ಸಿಗುತ್ತಿಲ್ಲ. ಐದಾರು ವರ್ಷದಿಂದ ಹೋರಾಟ ಮಾಡುತ್ತಿದ್ದರೂ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರುವ ಅವರ ಪ್ರಯತ್ನ ಯಶ ಕಂಡಿಲ್ಲ. ಈಗಲೂ ಅನೇಕ ಕುಟುಂಬಗಳು ಅಂತಿಮ ಸಂಸ್ಕಾರದ ಸಾಮಗ್ರಿಗಳನ್ನು ಮಾರಾಟ ಮಾಡಿಕೊಂಡೇ ಜೀವನ ಸಾಗಿಸುತ್ತಿವೆ.


ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ನಮ್ಮ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ 10 ವರ್ಷದಿಂದ ಮನವಿ ಸಲ್ಲಿಸುತ್ತಿದ್ದೇವೆ. ಆದರೆ, ನಮ್ಮ ಬೇಡಿಕೆ ಈ ವರೆಗೆ ಈಡೇರಿಲ್ಲ. ಸರ್ಕಾರ ಈಗಲಾದರೂ ಗಮನ ಹರಿಸಬೇಕು.
- ಅರವಿಂದ ಪಟಣಕರ್, ಆರ್ಯವೈಶ್ಯ ಸಮಾಜದ ಮುಖಂಡ

- ಕೆ.ವಿ.ಪ್ರಭಾಕರ  
prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.