ಪ್ರೇಮಿಗಳ ದಿನಕ್ಕೆ ಜೀವನ ಪ್ರೀತಿಯ ಕತೆಗಳ ಗುಚ್ಛ
ನಾನು ಹಲವು ಬಾರಿ ಯೋಗಿ ದುರ್ಲಭಜೀ ಕುರಿತು ಪ್ರಸ್ತಾಪಿಸಿದ್ದೇನೆ...
ನಾನು ಹಲವು ಬಾರಿ ಯೋಗಿ ದುರ್ಲಭಜೀ ಕುರಿತು ಪ್ರಸ್ತಾಪಿಸಿದ್ದೇನೆ. ಅವರ ವ್ಯಕ್ತಿತ್ವ, ವಿಚಾರ ಅನೇಕರಿಗೆ ಇಷ್ಟವಾಗಿದೆ. ಇನ್ನು ಕೆಲವರಿಗೆ ಅವರ ವ್ಯಕ್ತಿತ್ವ ನಿಗೂಢವೂ ಹೌದು. ಮೂಲತಃ ವಜ್ರದ ವ್ಯಾಪಾರಿಯಾಗಿರುವ ಅವರು ಸಾವಿರಾರು ಕೋಟಿ ರೂಪಾಯಿ ಗಳಿಸಿ, ಗಳಿಸಿದ್ದೆಲ್ಲವನ್ನೂ ದಾನ ಮಾಡಿ, ಪುನಃ ಆರಂಭದಿಂದ ಶುರು ಮಾಡಿ, ಮತ್ತೆ ಹಣ ಗಳಿಸಿ ಅದನ್ನೆಲ್ಲ ಸಮಾಜಕ್ಕೆ ಅರ್ಪಿಸುವ ಅವರ ಮನೋಭಾವ ಹಲವರಿಗೆ ವಿಚಿತ್ರವಾಗಿ ಕಂಡಿರಲಿಕ್ಕೂ ಸಾಕು. ದುರ್ಲಭಜೀ ಅವರಿಗೆ ಗಳಿಸುವುದೂ ಗೊತ್ತು. ಗಳಿಸಿದ್ದೆಲ್ಲ ತನ್ನದಲ್ಲ, ಅದು ಸಮಾಜದ್ದು ಎಂದು ಬರಿದಾಗುವ ಬಗೆಯೂ ಗೊತ್ತು.
ಸಂಸ್ಕಾರ ಎಂಬ ಸಂಘಟನೆಯನ್ನು ಕಟ್ಟಿಕೊಂಡುಅವರು ಮಾಡುತ್ತಿರುವ ಸಮಾಜಸೇವೆ ಸುದ್ದಿಸದ್ದು ಗದ್ದಲದಿಂದ ಬಹಳ ದೂರ. ಯೋಗಿಜೀ ಉಪನ್ಯಾಸ ಮಾಡುವುದಿಲ್ಲ. ಉಪದೇಶ ಕೊಡುವುದಿಲ್ಲ. ಆದರೆ ಕಥೆಗಳನ್ನು ಹೇಳುತ್ತಾರೆ, ಸದ್ವಿಚಾರಗಳನ್ನು ಹೇಳುತ್ತಾರೆ. ಉತ್ತಮ ಸಂಗತಿಗಳನ್ನು ಪ್ರಚಾರ ಮಾಡುತ್ತಾರೆ. ನಾನು ಯೋಗಿಜೀ ಅವರ ಸುಳಿವಿಗೆ ಸಿಕ್ಕಿದ್ದು ಅವರ 'GEMS'ಎಂಬ ಪುಸ್ತಕದ ಮೂಲಕ. ಯೋಗಿಜೀ ಮಾತಿಗೆ ತೆರೆದುಕೊಂಡರೆ, ಅವರ ಕೆಲಸವೇ ಮಾತಾಡುತ್ತಾ ಹೋಗುತ್ತದೆ.
ಇತ್ತೀಚೆಗೆ ಯೋಗಿಜೀ ನನಗೆ ಕೆಲವು ಕತೆಗಳು, ನೈಜ ಘಟನೆಗಳನ್ನು ಕಳಿಸಿಕೊಟ್ಟಿದ್ದರು. 'ಸಾಧ್ಯವಾದರೆ ಇವೆಲ್ಲವುಗಳನ್ನು ನಿಮ್ಮ ಓದುಗರಿಗೆ ತಿಳಿಸಿ. ಉತ್ತಮ ವಿಚಾರಗಳನ್ನು ಜನರಿಗೆ ತಲುಪಿಸುವುದಕ್ಕಿಂತ ದೊಡ್ಡ ಸಮಾಜ ಕಾರ್ಯ ಮತ್ತೊಂದಿಲ್ಲ. ಈಗ ಆಗಬೇಕಿರುವುದು ಅದೇ' ಎಂದು ಪುಟ್ಟ ಪತ್ರವನ್ನೂ ಜತೆಯಲ್ಲಿ ಇಟ್ಟಿದ್ದರು.
ನನಗೆ ಗೊತ್ತು ನನ್ನ ಬಹುತೇಕ ಓದುಗರಿಗೆ ಯೋಗಿ ದುರ್ಲಭಜೀ ಒಂದು ರೀತಿಯಲ್ಲಿ ರಿಚರ್ಡ್ ಬ್ರಾನ್‌ಸನ್ ಥರಾನೇ. ನಾಲ್ಕು ವಾರ ಬ್ರಾನ್‌ಸನ್ ಬಗ್ಗೆ ಬರೆಯದಿದ್ದರೆ ಚಡಪಡಿಸುತ್ತಾರೆ. ಆದರೆ ಯಾರೂ ಸಹ 'ಅತಿಯಾಯ್ತು' ಅಂತ ಮೂಗು ಮುರಿದಿದ್ದಿಲ್ಲ. ಆ ಸಾಲಿಗೆ ಹೊಸ ಸೇರ್ಪಡೆ ಅಂದ್ರೆ ಯೋಗಿ ದುರ್ಲಭಜೀ. ಯೋಗಿಜೀ ಯಾಕೆ ಇಷ್ಟವಾಗುತ್ತಾರೆಂದರೆ ಅವರ ಜೀವನವೇ ಒಂದು ಸಂದೇಶ. ಪುನಃ ಅವರು ಸಂದೇಶ ಕೊಡಬೇಕಾಗಿಲ್ಲ.
ಆದರೂ ಮೊನ್ನೆ ಯೋಗಿಜೀ ಹೇಳಿದ ಒಂದು ಮಾತು ಪದೇ ಪದೆ ನೆನಪಾಗುತ್ತಿದೆ-'ನಾನು ಕನಿಷ್ಠ ಹದಿನೈದು ಬಾರಿಯಾದರೂ ಗಳಿಸಿದ್ದೆಲ್ಲವನ್ನೂ ಕೊಟ್ಟು ಹಗುರವಾಗಿದ್ದೇನೆ. ಕೊಡುವುದರಲ್ಲಿರುವ ಹಿತಾನುಭವ ಪಡೆಯುವುದರಲ್ಲಿ ಇಲ್ಲ. ಕೊಡುವುದಕ್ಕಾಗಿ ನಾನು ಖಾಲಿಯಾದಾಗಲೆಲ್ಲ ಪುನಃ ಪುನಃ ದುಡಿಯುತ್ತೇನೆ. ಜೀವನವಿದೆಯಲ್ಲ, ಅದೊಂದು ಅನಂತ ಸಾಧ್ಯತೆಗಳನ್ನು ಸಾಕಾರಗೊಳಿಸಲು ಭಗವಂತನು ನಮಗೆ ಒದಗಿಸಿಕೊಟ್ಟ ಅದ್ಭುತ ಅವಕಾಶ. ಅದನ್ನು ಉಪಯೋಗಿಸಿಕೊಳ್ಳದವನೇ ದುರ್ದೈವಿ. ನಾನು ಆ ದೃಷ್ಟಿಯಿಂದ ಭಾಗ್ಯಶಾಲಿ. ಅಂಥ ಭಾಗ್ಯ ನಿಮ್ಮದಾಗಲಿ.'
ದುರ್ಲಭಜೀ ಹೇಳಿದ ಕೆಲವು ಪ್ರಸಂಗ, ಕತೆ, ನೈಜ ಘಟನೆಗಳನ್ನು ನಿಮ್ಮ ಮುಂದೆ ಹರಡಿಡುತ್ತೇನೆ. ಅದು ನಿಮಗೆ ತಟ್ಟಿದರೆ, ತಡವಿದರೆ ನೀವು ಅದೃಷ್ಟವಂತರು. ಕಾವೇರಿ, ಅಫ್ಜಲ್‌ಗುರು, ರಾಜಕೀಯ, ಶಾಸಕರ ರಾಜೀನಾಮೆ ಪ್ರಹಸನ... ಇವೆಲ್ಲವುಗಳಿಂದ ಕಲುಷಿತಗೊಂಡ ಮನಸ್ಸುಗಳಿಗೆ ಈ ಸಂಗತಿಗಳು ತಂಗಾಳಿಯಂಥ ಸಾಂತ್ವನ ನೀಡಲಿ ಎಂಬ ಆಶಯದಿಂದ ಅವನ್ನೆ ಇಲ್ಲಿ ಕೊಡುತ್ತಿದ್ದೇನೆ. ನಿಮಗೆ ಇಷ್ಟವಾಗಬಹುದು.
----
- ಅಂದು ನನ್ನ ತಂದೆ ತಲೆ ನೇವರಿಸುತ್ತಾ ಹೇಳಿದರು-'ನಿನ್ನಿಂದ ಆಗುವುದಿಲ್ಲವೆಂದು ಬೇಸರಿಸಿಕೊಳ್ಳಬೇಡ. ಸೋಲಲಿ, ಗೆಲ್ಲಲಿ. ಅದು ಮುಖ್ಯವಲ್ಲ. ಯಾವುದಕ್ಕೂ ನೀನೊಮ್ಮೆ ಪ್ರಯತ್ನಿಸಿ ನೋಡು. ಯಶಸ್ವಿ ಪ್ರಾಡಕ್ಟ್‌ಗಳನ್ನು ತಯಾರಿಸಲು ನೀನು ಅನುಭವಿ, ಪ್ರೊಫೆಶನಲ್ ಆಗಿರಲೇಬೇಕೆಂದಿಲ್ಲ.' ತಂದೆಯವರು ಹೇಳುವುದು ನಿಜವೆಂದು ಅನಿಸಿದರೂ, ಸಂಪೂರ್ಣ ಮನಸ್ಸಿಗೆ ನಾಟಿರಲಿಲ್ಲ.
ಕೊನೆಗೆ ತಂದೆಯವರು ಹೇಳಿದರು-'ಗೂಗಲ್ ಹಾಗೂ ಆ್ಯಪಲ್‌ಗಳನ್ನು ಆರಂಭಿಸಿದವರು ಅನುಭವಿಗಳಲ್ಲ, ಅಮೆಚೂರ್‌ಗಳು. ಟೈಟಾನಿಕ್ ಹಡಗುಗಳನ್ನು ನಿರ್ಮಿಸಿದವರು ಅನುಭವಿಗಳು. ಗೂಗಲ್, ಆ್ಯಪಲ್‌ಗೆ ಏನಾಯಿತು, ಟೈಟಾನಿಕ್‌ಗೆ ಎಂಥ ಗತಿ ಬಂತು ಎಂಬುದನ್ನು ವಿವರಿಸಬೇಕಿಲ್ಲವಲ್ಲ?' ನಾನು ಹೊಸ ಸಾಹಸಕ್ಕೆ ಅಣಿಯಾದೆ.
----
- ಆ ಪುಟ್ಟ ಹುಡುಗ-ಹುಡುಗಿ ತಮ್ಮ ಪಾಡಿಗೆ ತಾವು ಆಡುತ್ತಿದ್ದರು. ಹುಡುಗನ ಬಳಿ ಆಕರ್ಷಕ ಗೋಲಿಗಳಿದ್ದವು. ಹುಡುಗಿಯ ಕೈಯಲ್ಲಿ ಚಾಕಲೇಟ್‌ಗಳಿದ್ದವು. 'ನಿನ್ನ ಕೈಯಲ್ಲಿರುವ ಎಲ್ಲ ಚಾಕಲೇಟ್‌ಗಳನ್ನು ಕೊಟ್ಟರೆ ನಾನು ಗೋಲಿಗಳನ್ನು ಕೊಡುತ್ತೇನೆ' ಎಂದ ಹುಡುಗ. ಹುಡುಗಿ ಒಪ್ಪಿದಳು.
ಹುಡುಗ ತನ್ನ ಕೈಯಲ್ಲಿದ್ದ ಗೋಲಿಗಳ ಪೈಕಿ ಅತಿ ಸುಂದರವಾಗಿರುವುದನ್ನು ಕಿಸೆಯಲ್ಲಿಟ್ಟುಕೊಂಡು ಉಳಿದವುಗಳನ್ನು ಹುಡುಗಿಗೆ ಕೊಟ್ಟ. ಒಪ್ಪಂದದ ಪ್ರಕಾರ ಹುಡುಗಿ ತನ್ನಲ್ಲಿರುವ ಎಲ್ಲ ಚಾಕಲೇಟ್‌ಗಳನ್ನು ಅವನಿಗೆ ಕೊಟ್ಟಳು.
ಆ ದಿನ ರಾತ್ರಿ ಹುಡುಗಿ ಶಾಂತವಾಗಿ ನಿದ್ದೆ ಹೋದಳು. ಆದರೆ ಹುಡುಗರಿಗೆ ರಾತ್ರಿಯಿಡಿ ನಿದ್ದೆ ಸುಳಿಯಲಿಲ್ಲ. ತಾನು ಗೋಲಿಯನ್ನು ಎತ್ತಿಟ್ಟುಕೊಂಡಂತೆ, ಹುಡುಗಿಯೂ ಚಾಕಲೇಟ್‌ನ್ನು ಎತ್ತಿಟ್ಟುಕೊಂಡು ತನಗೆ ಮೋಸ ಮಾಡಿರಬಹುದಾ ಎಂಬ ಯೋಚನೆಯಲ್ಲಿ ನಿದ್ದೆಯೇ ಬರಲಿಲ್ಲ.
-----
- ಸುಮಾರು ಇಪ್ಪತ್ತೈದು ವರ್ಷದ ಯುವಕ ರೈಲಿನ ಕಿಟಕಿಯ ಸೀಟಿನಲ್ಲಿ ಕುಳಿತು, 'ಡ್ಯಾಡೀ, ಆ ಮರಗಳನ್ನು ನೋಡು ಎಷ್ಟು ಎತ್ತರವಾಗಿವೆ, ಎಲೆಗಳನ್ನು ನೋಡು ಎಲ್ಲವೂ ಒಂದೇ ಬಣ್ಣದ್ದಾಗಿವೆ. ಆ ಮನೆಗಳ ಬಾಗಿಲುಗಳು ಕಿಟಕಿಗಳಿಗಿಂತ ದೊಡ್ಡದಾಗಿವೆ, ಸೇತುವೆಗಳ ಕಂಬಗಳು ಬಲಿಷ್ಠವಾಗಿವೆ...' ಎಂದು ತಾನು ಕಂಡಿದ್ದೆಲ್ಲವನ್ನೂ ಬಣ್ಣಿಸುತ್ತಿದ್ದ. ತಂದೆ ಖುಷಿಯಿಂದ ಮಗ ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದ. ಆದರೆ ಪಕ್ಕದಲ್ಲಿರುವ ಸಹಪ್ರಯಾಣಿಕರು ಇಷ್ಟು ದೊಡ್ಡ ಹುಡುಗ ವಿಚಿತ್ರವಾಗಿ, ಬಾಲಿಶವಾಗಿ ವರ್ತಿಸುತ್ತಿದ್ದಾನಲ್ಲ ಎಂದು ಕನಿಕರ ಹಾಗೂ ಅಸಹ್ಯ ಪಡುತ್ತಿದ್ದರು.
'ಡ್ಯಾಡಿ, ಮೋಡಗಳನ್ನು ನೋಡಿದೆಯಾ? ಅವು ನಮ್ಮೊಂದಿಗೆ ಬರುತ್ತಿವೆ' ಎಂದು ಯುವಕ ಜೋರಾಗಿ ಅಪ್ಪನಿಗೆ ಹೇಳಿದ. 'ಹೌದು ಮಗು, ಅವು ನಮ್ಮೊಂದಿಗೆ ಬರುತ್ತಿವೆ' ಎಂದ ಅಪ್ಪ.
ಸಹಪ್ರಯಾಣಿಕರಿಗೆ ತಲೆಕೆಟ್ಟು ಹೋಯಿತು. ಇಪ್ಪತ್ತೈದು ವರ್ಷ ವಯಸ್ಸಿನ ಯುವಕನ ಮಾತು, ಹಾವ-ಭಾವ ಅವರಲ್ಲಿ ರೇಜಿಗೆ ಹುಟ್ಟಿಸಿತು.
'ಅಲ್ಲ ಸ್ವಾಮಿ, ನಿಮ್ಮ ಮಗ ಹುಚ್ಚುಹುಚ್ಚಾಗಿ ಆಡ್ತಾ ಇದ್ದಾನಲ್ಲ ಏನು ಕತೆ? ಯಾವುದಾದರೂ ಒಳ್ಳೆಯ ಡಾಕ್ಟರ್ ಬಳಿ ಕರೆದುಕೊಂಡು ಹೋಗಿ ಟ್ರೀಟ್‌ಮೆಂಟ್ ಕೊಡಿಸಬಾರದಾ?' ಎಂದು ಸಹಪ್ರಯಾಣಿಕನೊಬ್ಬ ಕೇಳಿಯೇ ಬಿಟ್ಟ.
ಅದಕ್ಕೆ ಯುವಕನ ತಂದೆ ಹೇಳಿದ-'ಒಳ್ಳೆಯ ಡಾಕ್ಟರ್ ಹತ್ತಿರ ಟ್ರೀಟ್‌ಮೆಂಟ್ ತೆಗೆದುಕೊಂಡೇ ಬರುತ್ತಿದ್ದೇವೆ. ನನ್ನ ಮಗ ಹುಟ್ಟಾ ಕುರುಡನಾಗಿದ್ದ. ಇಂದಷ್ಟೇ ಅವನಿಗೆ ದೃಷ್ಟಿ ಬಂದಿದೆ.'
ಈ ಪ್ರಸಂಗದ ನೀತಿ: ಭೂಮಿಯ ಮೇಲಿರೋ ಪ್ರತಿಯೊಬ್ಬನದೂ ಒಂದು ಕತೆ. ಯಾರನ್ನೂ ಸರಿಯಾಗಿ ಅರಿಯದೇ ತೀರ್ಪು ಕೊಡಬಾರದು. ಹಾಗೆ ನೀಡುವ ತೀರ್ಪು ನಮಗೇ ನಮ್ಮ ಬಗ್ಗೆ ಅಸಹ್ಯ ಹುಟ್ಟಿಸೀತು.
-----
- ಹನ್ನೊಂದು ವರ್ಷದ ಮಗಳು ತಂದೆಯನ್ನು ಕೇಳಿದಳು-'ಅಪ್ಪಾ, ನನ್ನ ಹದಿನೈದನೆ ವರ್ಷದ ಬರ್ಥ್‌ಡೇಗೆ ನೀನು ಏನು ಕೊಡ್ತೀಯಾ? ನೀನು ನನಗೇನಾದರೂ ಗಿಫ್ಟ್ ಕೊಡಬೇಕು.'
ಅದಕ್ಕೆ ಅಪ್ಪ ಹೇಳಿದ-'ಮಗಳೇ, ನಿನ್ನ ಹದಿನೈದನೆ ವರ್ಷದ ಹುಟ್ಟಿದ ಹಬ್ಬಕ್ಕೆ ಇನ್ನೂ ನಾಲ್ಕು ವರ್ಷಗಳಿವೆ. ಈಗಲೇ ಆ ಮಾತು ಏಕೆ? ನಿನಗೆ ನಾನು ಖಂಡಿತವಾಗಿಯೂ ಆಗ ಗಿಫ್ಟ್ ಕೊಡ್ತೇನೆ.'
ಮಗಳು ಹಠಾತ್ತನೆ ಎಚ್ಚರ ತಪ್ಪಿಬಿದ್ದಳು. ಅಪ್ಪ ಅವಳನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದ. ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಪರೇಶನ್ ಥಿಯೇಟರ್‌ನಿಂದ ಹೊರಬಂದು, 'ನಿಮ್ಮ ಮಗಳ ಹೃದಯದಲ್ಲಿ ತೂತುಗಳಾಗಿವೆ. ಅವಳು ಬದುಕಿ ಉಳಿಯುವುದು ಅನುಮಾನ' ಎಂದರು. ತಂದೆಗೆ ಆಕಾಶ ಕಳಚಿ ಬಿದ್ದ ಅನುಭವ.
ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದ ಮಗಳು ಅಪ್ಪನನ್ನು ಕೇಳಿದಳು-'ಅಪ್ಪ, ನಾನು ಬದುಕಿರುವುದು ಅನುಮಾನ ಎಂದು ಡಾಕ್ಟರು ಹೇಳಿದರಾ?'
'ಇಲ್ಲ ಮಗಳೇ... ಅವರು ಹಾಗೆ ಹೇಳಲಿಲ್ಲ. ನಿನಗೇಕೆ ಆ ಅನುಮಾನ? ನಿನಗೆ ಏನೂ ಆಗೊಲ್ಲ. ನೀನು ಬದುಕುತ್ತೀಯಾ.' ಎಂದು ಅಪ್ಪ ಅವಳಿಗೆ ಸಮಾಧಾನ ಮಾಡಲು ಯತ್ನಿಸಿದ. ಆದರೆ ಉಮ್ಮಳಿಸಿ ಬಂದ ದುಃಖವನ್ನು ತಡೆದುಕೊಳ್ಳಲು ಆಗಲಿಲ್ಲ. ಹೊರಬಂದು, ಚಿಕ್ಕಮಗುವಿನಂತೆ ಅಳತೊಡಗಿದ.
ಆತ ಪುನಃ ಅವಳ ಬಳಿಗೆ ಹೋದಾಗ, 'ಅಪ್ಪ, ನೀನು ಹೇಗೆ ಅಷ್ಟು ನಿಖರವಾಗಿ, ನಿಶ್ಚಿತವಾಗಿ ಹೇಳ್ತೀಯಾ ನಾನು ಸಾಯುವುದಿಲ್ಲ ಅಂತ' ಎಂದು ಕೇಳಿದಳು. 'ಮಗಳೇ, ನನಗೆ ಗೊತ್ತಮ್ಮ' ಎಂದಷ್ಟೇ ಹೇಳಿದ ಅಪ್ಪ.
ಮಗಳಿಗೆ ಹದಿನೈದು ತುಂಬಿತು. ಆಕೆ ಆಸ್ಪತ್ರೆಯಿಂದ ಡಿಸ್‌ಛಾರ್ಜ್ ಆಗಿ ಮನೆಗೆ ಬಂದಳು. ಅವಳ ಹಾಸಿಗೆಯ ದಿಂಬಿನ ಮೇಲೆ ಒಂದು ಪತ್ರವಿತ್ತು. ತೆರೆದು ಓದಲಾರಂಭಿಸಿದಳು-'ನನ್ನ ಮುದ್ದಿನ ಮಗಳೇ, ನೀನು ಈ ಪತ್ರ ಓದುತ್ತಿದ್ದೀಯಾ ಅಂದ್ರೆ, ನಾನು ಹೇಳಿದಂತೆ ಎಲ್ಲವೂ ಸುಖಾಂತ್ಯವಾಗಿದೆಯೆಂದೇ ಅರ್ಥ. ನನಗೆ ಗೊತ್ತಿತ್ತು ನೀನು ಬದುಕುತ್ತೀಯಾ ಅಂತ. ನಿನಗೆ ನೆನಪಿದೆಯಾ. ನಾಲ್ಕು ವರ್ಷಗಳ ಹಿಂದೆ ಹದಿನೈದನೆ ಬರ್ಥ್‌ಡೇಗೆ ಏನು ಗಿಫ್ಟ್ ಕೊಡ್ತೀಯಾ ಅಂತ ಕೇಳಿದ್ದೆ. ಅಂದ ಹಾಗೆ ನಿನಗೆ ನನ್ನ ಹಾರ್ಟ್‌ನ್ನು ಗಿಫ್ಟಾಗಿ ಕೊಟ್ಟಿದ್ದೇನೆ.'
---
ಒಮ್ಮೆ ಬಾಲಕ ತನ್ನ ತಂದೆಗೆ ಹ್ಯಾಂಡ್‌ಮೇಡ್ ಕಾರ್ಡ್‌ನ್ನು ಕೊಟ್ಟ. ಅದರ ಮೇಲೆ ಅವನ ಹಸ್ತದ ಚಿತ್ರವಿತ್ತು. ಹಸ್ತವನ್ನು ಶಾಯಿಯಲ್ಲಿ ಅದ್ದಿ ಆ ಕಾರ್ಡಿನ ಮೇಲೆ ಅಚ್ಚೊತ್ತಿದ್ದ. ಇನ್ನೊಂದು ಪಕ್ಕದಲ್ಲಿ ಅವನ ಚಿತ್ರವಿತ್ತು. ಹಸ್ತದ ಕೆಳಗಡೆ ಬರೆದಿದ್ದ-'ನಾನು ಗೋಡೆ ಹಾಗೂ ಫರ್ನಿಚರ್‌ಗಳ ಮೇಲೆ ಗೀಚಿದಾಗ, ಗೋಡೆಗಳ ಮೇಲೆ ಬರೆದಾಗ, ನನ್ನ ಕೈ ಬೆರಳಚ್ಚನ್ನು ಮೂಡಿಸಿದಾಗ ನೀನು ಜೋರಾಗಿ ಗದರುತ್ತಿದ್ದೆ. ನನಗೂ ಬೇಸರವಾಗುತ್ತಿತ್ತು. ಇರಲಿ. ಅಪ್ಪ, ನಾನು ಪ್ರತಿದಿನ ದೊಡ್ಡವನಾಗುತ್ತಿದ್ದೇನೆ. ದಿನಕಳೆದಂತೆ ಈ ಅಕ್ಷರ, ಕೈ ಬೆರಳಚ್ಚು ಮಸುಕಾಗಿ ಕ್ರಮೇಣ ಮಾಯವಾಗಬಹುದು. ಹೀಗಾಗಿ ಈ ಕಾರ್ಡ್ ಮೇಲೆ ನನ್ನ ಕೈ ಬೆರಳ ಅಚ್ಚನ್ನು ಮೂಡಿಸಿ ನಿನಗೆ ಕೊಡುತ್ತಿದ್ದೇನೆ. ನಾನು ಚಿಕ್ಕವನಿದ್ದಾಗ ನನ್ನ ಕೈಬೆರಳಚ್ಚು ಹೇಗೆ ಕಾಣಿಸುತ್ತಿತ್ತು ಎಂಬುದನ್ನು ಮುಂದೊಂದು ದಿನ ನೆನಪಿಸಿಕೊಳ್ಳಲು ನಿನಗೆ ಸಹಾಯಕವಾದೀತೆಂದು ಹೀಗೆ ಮಾಡಿದ್ದೇನೆ.
ತಾನು ಮಗನ ಮುಂದೆ ಚಿಕ್ಕವನಾದೆ ಎಂದು ತಂದೆಗೆ ಅನಿಸಿತು.
---
ಇಂದು ಪ್ರೇಮಿಗಳ ದಿನ ತಾನೆ? ಈ ಮಾತನ್ನು ಸುಮ್ಮನೆ ನೆನಪು ಮಾಡಿಕೊಳ್ಳಿ ಆಗಾಗ.
- ನಿಮ್ಮ ಪ್ರಿಯಕರ/ಪ್ರಿಯತಮೆಗಾಗಿ ತಂದೆ-ತಾಯಿಗೆ ಸುಳ್ಳು ಹೇಳ್ತೀರಲ್ಲಾ, ಅದರ ಬದಲು ಹುಟ್ಟಿಸಿದ ತಂದೆ-ತಾಯಿಗಾಗಿ ಪ್ರಿಯಕರ/ ತಮಗೆ ಸುಳ್ಳು ಹೇಳೊಲ್ಲ ಯಾಕೆ?
- ಪ್ರಿಯಕರ/ತಮೆ ಮದುವೆಯಾಗಲು ನೀವು ನಿಮ್ಮ ತಂದೆ-ತಾಯಿಯನ್ನು ಬೇಕಾದರೂ ಬಿಡಲು ಸಿದ್ಧ ತಾನೆ?
ಅದರ ಬದಲು ತಂದೆ-ತಾಯಿಗಾಗಿ ಅವರನ್ನೇಕೆ ಬಿಡುವುದಿಲ್ಲ?
- ಸರಿಯಾಗಿ ಊಟ ಮಾಡಿದೆಯಾ ಅಂತ ಪ್ರಿಯಕರ/ತಮೆಗೆ ಕೇಳುವ ಹಾಗೆ ತಂದೆ-ತಾಯಿಗೇಕೆ ಕೇಳುವುದಿಲ್ಲ?
- ಪ್ರಿಯಕರ/ಪ್ರಾಮಿಸ್ ಮಾಡಿದಿರೆಂದು ನಿಮ್ಮ ದುಶ್ಚಟಗಳನ್ನು ಬಿಡುತ್ತೀರಿ. ತಂದೆ-ತಾಯಿ ಹೇಳಿದಾಗ ಯಾಕೆ ಬಿಡುವುದಿಲ್ಲ?
- ವಿಶ್ವೇಶ್ವರ ಭಟ್
vbhat@me.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

