ಅಂಕಣಗಳು

ಉಪಯುಕ್ತತೆ ಮುಗಿಸಿಕೊಂಡ ವಿಧಾನಸಭೆ

Published On :

ಶುಕ್ರವಾರ ಕಳೆದ ಅನಂತರ, ಈಗ ಅಸ್ತಿತ್ವದಲ್ಲಿರುವ ಕರ್ನಾಟಕ ವಿಧಾನಸಭೆ, ಜನರ ಪಾಲಿಗೆ ತನ್ನ ಉಪಯುಕ್ತತೆಯನ್ನು ಮುಗಿಸಿಕೊಂಡು, ಇತಿಹಾಸದ ದಾಖಲೆಯ ಪುಟಗಳನ್ನು ಸೇರಬಹುದು.

ಬೇರೆ ಯಾವುದೇ ರೀತಿಯ ರಾಜಕೀಯ ಪವಾಡ ನಡೆಯದೇ ಹೋದರೆ ಇದೇ ಕಟ್ಟ ಕಡೆಯ ವಿಧಾನ ಸಭೆಯ ಅಧಿವೇಶನ. ಅದರಲ್ಲೇನೂ ವಿಶೇಷವಿಲ್ಲ. ಪ್ರತಿ ಐದು ವರ್ಷಕ್ಕೊಮ್ಮೆ ಆಗಬೇಕಾದ, ಆಗುವ ಬದಲಾವಣೆ ಇದು. ವಿಧಾನ ಸಭೆಯ ಕಟ್ಟಕಡೆಯ ಅಧಿವೇಶನ ಜನರ ನೆನಪಿನಲ್ಲಿ ಬಹುಕಾಲ ಉಳಿಯುವುದು ಕೆಲವು ಶಾಸಕರು, ಮಂತ್ರಿಗಳು ಪ್ರದರ್ಶಿಸಿದ ನಿರ್ಲಜ್ಜೆಯ ರಾಜಕೀಯ ಧೋರಣೆಯ ಮೂಲಕ ವಿಧಾನಸಭೆಯಲ್ಲಿ ಆಳುವ ಪಕ್ಷದ ಪರವಾಗಿ ವರ್ತಿಸಿ, ಮೊಗಸಾಲೆಗಳಲ್ಲಿ ಆಳುವ ಪಕ್ಷವನ್ನು ವಾಚಾಮಗೋಚರವಾಗಿ ಖಂಡಿಸಿದ್ದನ್ನು, ವಿಧಾನಸೌಧದ ಹೊರಗಡೆ, ಸರ್ಕಾರದ ವಿರುದ್ಧ ಬೆಂಕಿ ನುಂಗಿ ಹೊಗೆಯನ್ನು ಉಗುಳುವಂತೆ ಮಾತಾಡಿದ್ದನ್ನು, ಪ್ರಬುದ್ಧ ಜನಸ್ತೋಮ ಮರೆಯುವಂತಿಲ್ಲ, ಮರೆಯಲೂ ಬಾರದು. ಆ ವರ್ತನೆ ಆಷಾಢಭೂತಿ ತನವಲ್ಲದೇ ಇನ್ನೇನು?

ಮಾತುಮಾತಿಗೆ, ಸದನದ ಒಳಗಡೆ, ಹೊರಗೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಶಾಸಕರಲ್ಲಿ ಬಹುಮತದ ಬೆಂಬಲವನ್ನು ಕಳೆದುಕೊಂಡಿರುವುದರಿಂದ ಅವರು ರಾಜಿನಾಮೆ ಕೊಡಬೇಕೆಂದು ಕೇಳಿದ್ದು ನಿಜ. ಆದರೆ ಮುಖ್ಯಮಂತ್ರಿಯ ಬೆಂಬಲ ಸದನದಲ್ಲಿ ಅಲ್ಪಮತಕ್ಕೆ ಇಳಿದಿದ್ದನ್ನು ಪ್ರದರ್ಶಿಸುವುದಕ್ಕೆ ಅವರು ಯಾವ ಕ್ರಮವನ್ನು ಕೈಗೊಳ್ಳಲಿಲ್ಲ.

ಅವರನ್ನು ಅವಿಶ್ವಾಸ ಸೂಚಕ ನಿರ್ಣಯವನ್ನು ಮಂಡಿಸಲು ಯಾರೂ ಒತ್ತಾಯಪಡಿಸಲಿಲ್ಲ. ಅವರಿಗೂ ಅದು ಸಹಜ ಜನತಾಂತ್ರಿಕ ಕ್ರಿಯೆ ಎನ್ನುವುದು ಗೊತ್ತಾಗಲಿಲ್ಲ. ಅದಕ್ಕೆ ಕಾರಣ ಅವರ ಪಕ್ಷಕ್ಕೆ ಸಂಖ್ಯಾಬಲವಿರಲಿಲ್ಲ. ಇತರ ಪಕ್ಷಗಳ ವರ್ತನೆಯ ವಿಚಾರದಲ್ಲಿ ನಂಬಿಕೆ ಇರಲಿಲ್ಲ. ಸಿದ್ದರಾಮಯ್ಯ ಅವರಂತೆಯೇ ಜಾತ್ಯತೀತ ಜನತಾದಳದ ನಾಯಕರಿಗೂ ಸರ್ಕಾರ ಬಹುಮತವನ್ನು ಕಳೆದುಕೊಂಡಿದ್ದು ಗೊತ್ತಾಗಿದ್ದರೂ, ಅವರೂ ಏನನ್ನೂ ಮಾಡದೇ ಸುಮ್ಮನಿದ್ದರು. ಸದನದಲ್ಲಿ ಸರ್ಕಾರದ ಎಲ್ಲ ಪ್ರಸ್ತಾಪಗಳನ್ನು ಮರುಮಾತಿಲ್ಲದೇ ಒಪ್ಪಿದರೂ. ಭಾಷಣ ಮಾಡಲೇಬೇಕಲ್ಲ ಎನ್ನುವ ಮನೋಧರ್ಮವನ್ನು ಪ್ರಕಟಿಸಿದರು. ಭಾಷಣ ಮಾಡಿದರು. ಆ ವಿಚಿತ್ರ ರೀತಿಯಲ್ಲಿ ವಿಧಾನ ಸಭೆಯ ನಡವಳಿಕೆಯಲ್ಲಿ ನಿಯಮಗಳ ಬದ್ಧತೆಯನ್ನು ಕೋರಿಕೆಯ ರೂಪದಲ್ಲಿ ಪಾಲಿಸಲಾಯಿತು. ಸದನದ ದಾಖಲೆಗಳಂತೆ ಯಾವ ಅಪಚಾರವೂ ಆಗದಂತೆ ನೋಡಿಕೊಳ್ಳುವುದು ಜಗದೀಶ ಶೆಟ್ಟರ್ ಅವರಿಗೆ ಸಾಧ್ಯವಾಯಿತು. ಆದರೆ ಈ ಪ್ರಕ್ರಿಯೆಯಲ್ಲಿ ಜನತಾಂತ್ರಿಕ ನಿಜ ಮೌಲ್ಯಗಳು ಸೊರಗಿದ್ದವು.

ಒಳಗೊಂದು ಹೊರಗೊಂದು: ಈಗ ಆಳುವ ಬಿಜೆಪಿಗೆ, ಇನ್ನು ತಾಂತ್ರಿಕವಾಗಿ ಬಿಜೆಪಿಯ ಹಣೆಪಟ್ಟಿಯನ್ನು ಅಂಟಿಸಿಕೊಂಡಿರುವ ಆದರೆ ವಾಸ್ತವದಲ್ಲಿ ಯಡಿಯೂರಪ್ಪ ಅವರ ಪಕ್ಷದ ಜತೆಯಲ್ಲಿರುವ ಮಂತ್ರಿಗಳು, ಶಾಸಕರನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ವಿಧಾನ ಸಭೆಯಲ್ಲಿ ಜಗದೀಶ ಶೆಟ್ಟರ್ ತಮ್ಮ ನಾಯಕತ್ವದ ಬಹುಮತದ ಪ್ರದರ್ಶನಕ್ಕೆ ವಿಶ್ವಾಸ ಸೂಚಕ ನಿರ್ಣಯವನ್ನು ಮಂಡಿಸಿದರೆ, ಅದರ ಪರವಾಗಿ ಯಾರ್ಯಾರು ಮತ ನೀಡ್ತಾರೆ, ಯಾರ್ಯಾರು ನೀಡಲ್ಲ ಎನ್ನುವುದು ಇತ್ಯರ್ಥವಾಗಿ ಬಿಡುತ್ತದೆ.  ಯಡಿಯೂರಪ್ಪ ಬೆಂಬಲಿಗರೆಂದು ಬಹಿರಂಗವಾಗಿಯೇ ಹೇಳಿಕೊಂಡಿರುವ ಮಂತ್ರಿಗಳು, ಶಾಸಕರು, ಬಿಜೆಪಿಯ ಆದೇಶವನ್ನು ಮತದಾನದ ಕಾಲದಲ್ಲಿ ಧಿಕ್ಕರಿಸಿದರೂ (ಗೈರು ಹಾಜರಾದರೂ ಅಷ್ಟೇ. ತಟಸ್ಥರಾಗಿದ್ದರೂ ಅಷ್ಟೇ), ಅವರೆಲ್ಲರನ್ನು ಶಾಸಕರ ಸ್ಥಾನದಿಂದ ಅನರ್ಹರನ್ನಾಗಿ ಮಾಡಿ, ಮುಂದಿನ ಆರು ವರ್ಷಗಳ ಕಾಲ ಯಾವ ಚುನಾವಣೆಯಲ್ಲೂ ಅವರು ಸ್ಪರ್ಧಿಸುವುದು  ಅಸಾಧ್ಯವೆನ್ನುವ ವಾತಾವರಣವನ್ನು ಸೃಷ್ಟಿಸಬಹುದು. ಅದು ಕಾಯಿದೆ.

ಆ ಮಂತ್ರಿಗಳು, ಶಾಸಕರು ವಿಶ್ವಾಸ ಸೂಚಕ ನಿರ್ಣಯದ ಪರವಾಗಿ ಮತ ನೀಡಿದರೆ, ಮುಂದಿನ ಚುನಾವಣೆಯಲ್ಲಿ ಅವರ ಆಷಾಢಭೂತಿತನವನ್ನೇ ಪ್ರಚಾರ ವಿಷಯವನ್ನಾಗಿ ಬಳಸುವ ಸಾಧ್ಯತೆ ಬಿಜೆಪಿಗೆ ಒಂದು ಅಸ್ತ್ರವಾಗುತ್ತದೆ. ಆಗ ಜಗದೀಶ ಶೆಟ್ಟರ್, ಬಹುಮತವನ್ನು ಸಾಬೀತು ಪಡಿಸುವುದು ಸಾಧ್ಯವಾಗಲಿ, ಸಾಧ್ಯವಾಗದೇ ಹೋಗಲಿ, ಉತ್ತರ ಕರ್ನಾಟಕದಲ್ಲಿ ಹೀರೋ ಆಗ್ತಾರೆ.  ಆದರೆ ಸ್ವಭಾವತಃ ಹಿಂಜರಿಯುವ ಮನೋಧರ್ಮವನ್ನು ಮೈಗೂಡಿಸಿಕೊಂಡಿರುವ ಮುಖ್ಯಮಂತ್ರಿ, ಇಂತಹ ದಿಟ್ಟ ರಾಜಕೀಯ ಕ್ರಮಕ್ಕೆ ಕೈ ಹಾಕುವ ಸಂಭವ ಕಡಿಮೆ.

ನಿರಂಕುಶ ಅವಕಾಶ: ಇನ್ನು ಮಂತ್ರಿಗಳಿಗೆ ವಿಧಾನ ಸಭೆಯ ಅಂಕುಶ ಇಲ್ಲವಾಗುತ್ತದೆ. ಮಾರ್ಚ್- ಏಪ್ರಿಲ್- ಮೇ ಮೊದಲ ಅರ್ಧ ಭಾಗದಲ್ಲಿ ಅವರಿಗೆ ನಿರಂಕುಶವಾಗಿ ವರ್ತಿಸುವ ಅವಕಾಶ ಸಿಕ್ಕೇ ಸಿಗುತ್ತದೆ. ಆಗ ಮಂತ್ರಿಗಳ ವರ್ತನೆಯನ್ನು ನಿಯಂತ್ರಿಸುವ ಅಧಿಕಾರವನ್ನು ಮುಖ್ಯಮಂತ್ರಿ ವಸ್ತುಶಃ ಕಳೆದುಕೊಂಡಿರುತ್ತಾರೆ.

ಅದೊಂದು ಪರ್ವಕಾಲ. ಅಂತಹ ಸಂದರ್ಭಗಳಲ್ಲಿ ರಾಜ್ಯದ ಉನ್ನತ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮಂತ್ರಿಮಾನ್ಯರ ಆದೇಶಗಳು ಯಾವ ರೀತಿ ಇದ್ದರೂ, ಸರ್ಕಾರದ ನಿಯಮಗಳಂತೆಯೇ ಕೆಲಸ ಮಾಡುವ ಅವಕಾಶವಿದ್ದರೂ ಹಾಗೆ ಅವರು ವರ್ತಿಸುತ್ತಾರಾ ಎನ್ನುವುದು ಈಗಿನ ಯಕ್ಷ ಪ್ರಶ್ನೆ.

ಕಳೆದ ನಾಲ್ಕೂವರೆ ವರ್ಷಗಳ ಆಡಳಿತ ವೈಖರಿಯ ಅನುಭವದ ಆಧಾರದ ಮೇಲೆ ಹೇಳುವುದಾದರೆ, ರಾಜ್ಯದ ಸಿಬ್ಬಂದಿಯಲ್ಲಿ ಅಂತಹ ಗಟ್ಟಿಯಾದ ಬೆನ್ನಲುಬಿದೆ ಎನಿಸುವುದಿಲ್ಲ. ಈಗ ಹಲವು ತನಿಖೆಗಳಿಂದ, ನ್ಯಾಯಾಲಯದ ಆದೇಶಗಳಿಂದ ಕಂಡುಬರುತ್ತಿರುವ ನಿಯಮ ಬಾಹಿರ ಕೃತ್ಯಗಳನ್ನು ನೋಡಿದರೆ, ಚುನಾವಣೆಯ ಮುನ್ನಾದಿನಗಳಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಅರಾಜಕತೆ ಮೂಡುವ ಸಂಭವವಿದೆ ಎನಿಸುತ್ತಿದೆ.

ಬಿಜೆಪಿಯ ನಾಯಕರು ಏನು ಬೇಕಾದರೂ ಹೇಳಿಕೊಳ್ಳಲಿ. ವಿಧಾನ ಸಭೆಯಲ್ಲಿ ಆ ಪಕ್ಷಕ್ಕೆ ತನ್ನದೇ ಆದ ಬಹುಮತವಿಲ್ಲ ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕು. ಆದ್ದರಿಂದ ಯಾರಿಗೂ (ಬಿಜೆಪಿ ಹಾಗೂ ಯಡಿಯೂರಪ್ಪ ಬೆಂಬಲಿಗ ಮಂತ್ರಿಗಳಿಗೆ) ಸರ್ಕಾರದ ಅಧಿಕಾರವನ್ನು ಚಲಾಯಿಸುವ ಹಕ್ಕು ಇಲ್ಲದೇ ಇರುವುದನ್ನು ಒಪ್ಪಿಕೊಂಡರೆ, ನ್ಯಾಯವಾದ, ನಿಷ್ಪಕ್ಷಪಾತವಾದ ಚುನಾವಣೆ ನಡೆಯಬೇಕಾದರೆ, ರಾಷ್ಟ್ರಪತಿಯ ಆಡಳಿತವನ್ನು ಹೇರುವುದೇ ಸೂಕ್ತವೆನ್ನುವ ಅಭಿಪ್ರಾಯ ಅನೇಕರಲ್ಲಿ ಮೂಡುತ್ತಿದೆ.

ನಿಜ. ರಾಷ್ಟ್ರಪತಿಯ ಆಡಳಿತ ಎಂದರೆ ರಾಜ್ಯಪಾಲರ ಮೂಲಕ ನಡೆಯುವ ಆಡಳಿತ. ಹಾಗೆಂದರೆ ಕೇಂದ್ರದಲ್ಲಿ ಅಧಿಕಾರದ ಸೂತ್ರಗಳನ್ನು ಹಿಡಿದ ಕಾಂಗ್ರೆಸ್ಸಿನ ಆಡಳಿತವೇ ಎನ್ನುವ ಮಾತಿನಲ್ಲೂ ಹುರುಳಿಲ್ಲದೇ ಇಲ್ಲ. ಆದರೆ ಅದರ ವ್ಯಾಪ್ತಿ ಕಡಿಮೆ. ಈಗಿನ ಮಂತ್ರಿಗಳೆಲ್ಲರೂ ಮುಂದುವರಿದು ತಮ್ಮ ಅನುಕೂಲಕ್ಕೆ ತಕ್ಕಂತೆ ವರ್ತಿಸುವುದರಿಂದ (ಮಂತ್ರಿಗಳಲ್ಲೇ ಎರಡು ಗುಂಪಾಗಿ) ರಾಷ್ಟ್ರಪತಿ ಆಡಳಿತವೇ ಸೂಕ್ತ ಎನ್ನಬಹುದು. ಇಂತಹ ವ್ಯವಸ್ಥೆಗೆ ಅವಕಾಶವನ್ನು ಕಲ್ಪಿಸಿಕೊಡುವಷ್ಟು ರಾಜಕೀಯ ಜನತಾಂತ್ರಿಕ ಬದ್ಧತೆ ನಮ್ಮ ರಾಜಕಾರಣಿಗಳಿಗಿಲ್ಲ. ಆದ್ದರಿಂದ ಅಂತಹ ಸ್ಥಿತಿಯನ್ನು ನಿರೀಕ್ಷಿಸುವಂತಿಲ್ಲ.

ಬಜೆಟ್ ವಿಚಾರ: ಜಗದೀಶ ಶೆಟ್ಟರ್ ಬಜೆಟ್ ಮಂಡಿಸಿದ್ದಾಗಿದೆ. ಅದರ ಜತೆಯಲ್ಲೇ ಚಾಲ್ತಿ ವರ್ಷದ ಪೂರಕ ಬಜೆಟ್ಟನ್ನೂ ಮಂಡಿಸಿದ್ದಾರೆ. ಬಜೆಟ್‌ಗೆ ಸಂಬಂಧಿಸಿದಂತೆ, ಎಲ್ಲ ವಿಧಿ- ವಿಧಾನಗಳನ್ನು ವಿಧಾನ ಮಂಡಲ ಪಾಲಿಸುವುದರಲ್ಲಿ ಯಾವ ಅನುಮಾನವೂ ಇದ್ದಂತಿಲ್ಲ. ಈಗ ಯಾವ ಪಕ್ಷಕ್ಕೂ ಹೊಸ ಹೊಸ ಬಿಕ್ಕಟ್ಟನ್ನು ಸೃಷ್ಟಿಸಿಕೊಳ್ಳಲು ಇಷ್ಟವಿಲ್ಲ. ಜಗದೀಶ ಶೆಟ್ಟರ್ ಅವರು ಬಜೆಟ್ ಮಂಡಿಸುವುದು ಸಾಧ್ಯವೇ ಇಲ್ಲ ಎಂದಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ತೆಪ್ಪಗಾಗಿ, ವಿಧಾನ ಮಂಡಲದಲ್ಲಿ ಏನಾದರೂ ಆಗಲಿ, ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.

ಅದು ಉತ್ತರ ಕರ್ನಾಟಕದ ಲಿಂಗಾಯತ ನಾಯಕ ಜಗದೀಶ ಶೆಟ್ಟರ್ ಅವರ ವಿಜಯವೇ. ಅದಕ್ಕೆ ಕಾರಣ ಪ್ರತಿಪಕ್ಷದ ನಾಯಕರಿಂದ ರವಾನೆಯಾದ ಅನುಕೂಲಕರವಾದ ಪ್ರತಿಕ್ರಿಯೆ ಹಾಗೂ ಹಲವಾರು ವೀರಶೈವ ಮಠಾಧೀಶ್ವರರು ಬೆಂಗಳೂರಿಗೆ ಬಂದು ಸಾಮೂಹಿಕವಾಗಿ ಶೆಟ್ಟರ್ ನಾಯಕತ್ವಕ್ಕೆ ಬಹಿರಂಗವಾಗಿ ಆಶೀರ್ವಾದ ಮಾಡಿದ್ದೂ ಒಂದು ರೀತಿಯ ಅನುಕೂಲಕರವಾದ ವಾತಾವರಣವನ್ನೇ ಸೃಷ್ಟಿಸಿತ್ತು.

ಬಜೆಟ್‌ನಲ್ಲಿ ಮಠಮಾನ್ಯಗಳಿಗೆ ಜಗದೀಶ್ ಶೆಟ್ಟರ್ ಒದಗಿಸಿರುವ ಹಣ, ಹಿಂದೆ ಯಡಿಯೂರಪ್ಪ ಕೊಟ್ಟಿದ್ದಕ್ಕಿಂತ, ಸದಾನಂದ ಗೌಡರು ಒದಗಿಸಿದ್ದಕ್ಕಿಂತ ಹೆಚ್ಚು. ಸಾಲದ್ದಕ್ಕೆ ಪೂರಕ ಬಜೆಟ್‌ನಲ್ಲೂ ಇನ್ನಷ್ಟು ಹಣವನ್ನು ಒದಗಿಸಲಾಗಿದೆ. ಇದರ ಲಾಭ ಶೆಟ್ಟರ್ ನಾಯಕತ್ವದ ಬಿಜೆಪಿಯ ಜನಪ್ರಿಯತೆಯನ್ನು ಹೆಚ್ಚಿಸಲು ಯಾವ ರೀತಿ ಪ್ರಕಟವಾಗತ್ತೋ ಗೊತ್ತಿಲ್ಲ. ಈ ಹಣಕ್ಕೆ ಯಾರೂ, ಯಾರಿಗೂ, ಯಾವ ರೀತಿಯ ಲೆಕ್ಕವನ್ನೂ ಕೊಡಬೇಕಾಗಿಲ್ಲವೇ? ಹಿಂದಿನ ವರ್ಷಗಳಲ್ಲಿ ಈ ಹಣ ಹೇಗೆ ಖರ್ಚಾಯಿತು?  ಇಂತಹ ಪ್ರಶ್ನೆಗಳನ್ನು ಈಗ ಕೇಳಬಾರದು.
 ಜಗದೀಶ ಶೆಟ್ಟರ್ ಸಮುದಾಯಗಳ ನಾಯಕರಲ್ಲ. ಧೈರ್ಯವಾಗಿ ಮುಂದೆ ನುಗ್ಗಿ ಕೆಲಸ ಮಾಡುವಂತಹ ಸಾಹಸಿಯೂ ಅಲ್ಲ. ಹೇಳಿಕೊಳ್ಳುವಂತಹ ಭಾಷಣಕಾರರೂ ಅಲ್ಲ. ಆದರೂ ಕರ್ನಾಟಕ ಬಿಜೆಪಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಕಾಲದಲ್ಲಿ ನಾಯಕತ್ವದ ಮುಖವಾಡವನ್ನು ಒದಗಿಸಿದವರು.

ವಿಧಾನ ಸಭೆಯ ಅಧಿವೇಶನವನ್ನು ಅವರು ಪಕ್ಷದ ಪರವಾಗಿ ಚೆನ್ನಾಗಿಯೇ ನಿಭಾಯಿಸಿದ್ದಾರೆ. ಕಾವೇರಿ ನೀರಿನ ಹಂಚಿಕೆ ವಿವಾದದಲ್ಲಿ ತಮಿಳುನಾಡಿಗೆ ನೀರನ್ನು ಬಿಟ್ಟಿದ್ದನ್ನು ತೋರಿಕೆಗೆ ಕಾಂಗ್ರೆಸ್ಸಿನ ಸಿದ್ದರಾಮಯ್ಯ ಎಷ್ಟೇ ಕಟುವಾಗಿ ಖಂಡಿಸಿದ್ದರೂ, ಹಿಂದೆ ಇಂತಹದ್ದೇ ಸಮಯದಲ್ಲಿ ಎಸ್ಸೆಮ್ ಕೃಷ್ಣಾ ಅವರೂ ನೀರು ಬಿಟ್ಟಿದ್ದರ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಟೀಕೆ ತನ್ನ ಮೊನಚನ್ನು ಕಳೆದುಕೊಂಡಿತ್ತು. ಅದೇ ವಿಚಾರದಲ್ಲಿ, ಜಗದೀಶ ಶೆಟ್ಟರ್, ಮಾಜಿ ಪ್ರಧಾನಿ, ರಾಜ್ಯದ ಅತಿ ಹಿರಿಯ ರಾಜಕಾರಣಿ ದೇವೇಗೌಡರು ಈಗ ನಿರ್ವಹಿಸಿದ ಪಾತ್ರವನ್ನು ಹೊಗಳಿ, ಜಾತ್ಯತೀತ ಜನತಾದಳದ ಟೀಕೆಯನ್ನು ಮೊಂಡಾಗುವಂತೆ ಮಾಡಿದ್ದೂ ಸಾಮಾನ್ಯವಾದ ವರ್ತನೆಯಲ್ಲ.

ಮೈದಾನದಲ್ಲಿ...: ವಾರಾಂತ್ಯದ ಅನಂತರ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಯಡಿಯೂರಪ್ಪ, ಶ್ರೀರಾಮುಲು ಕಾಂಗ್ರೆಸ್ ಎಲ್ಲರೂ ಚುನಾವಣೆಯ ಮೈದಾನದಲ್ಲೇ ಇರಬೇಕಾಗುತ್ತದೆ. ವಿಧಾನ ಸಭೆ ಚುನಾವಣೆಗೆ ಮುನ್ನ ರಾಜ್ಯದ ಪೇಟೆ- ಪಟ್ಟಣಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವುದು, ಸರ್ಕಾರಕ್ಕೂ ಬೇಡ, ಆಳುವ ಪಕ್ಷದ ಶಾಸಕರಿಗೂ ಬೇಡ, ಪ್ರತಿಪಕ್ಷಗಳ ಶಾಸಕರಿಗೂ ಬೇಡವಾಗಿದೆ.
 ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತಿರುವವರಿಗೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದರೆ, ಅಲ್ಲಿನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕಾದ ಹೊಣೆಗಾರಿಕೆಯೂ ಸೇರಿದಂತೆ, ಮೊದಲೇ ದುಬಾರಿಯಾದ ಚುನಾವಣೆ ಇನ್ನಷ್ಟು ದುಬಾರಿಯಾಗುವುದು ಬೇಕಾಗಿಲ್ಲ.
ವಿಧಾನ ಮಂಡಲದ ಉಭಯ ಸದನಗಳೂ, ಸರ್ವಾನುಮತದಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾಯಿದೆಯನ್ನೇ ಬದಲಾಯಿಸುವ ವಿಧೇಯಕವನ್ನು ಅಂಗೀಕರಿಸಿವೆ. ಆದರೆ, ಆ ವಿಧೇಯಕದಲ್ಲಿ ಚುನಾವಣೆ ನಡೆಯುವ ದಿನಾಂಕಗಳ ಮೇಲೆ ಸರ್ಕಾರ ತನ್ನ ನಿಯಂತ್ರಣ ವ್ಯವಸ್ಥೆಯನ್ನು ಹೇರಲು ಹೊರಟಿರುವುದು ಎಷ್ಟರ ಮಟ್ಟಿಗೆ ಜನತಾಂತ್ರಿಕ ಎನ್ನುವ ಪ್ರಶ್ನೆಗೆ ಯಾವ ಶಾಸಕರೂ ಉತ್ತರ ಕೊಟ್ಟಿಲ್ಲ. ಅವರಿಗೆ ಆ ಪ್ರಶ್ನೆಯನ್ನು ಕೇಳಿಸಿಕೊಳ್ಳುವ ಅಗತ್ಯವೇ ಕಂಡು ಬಂದಿಲ್ಲ. ನಮ್ಮ ರಾಜಕಾರಣಿಗಳಿಗೆ, ಜನ, ಜನರ ರೂಪದಲ್ಲಿ ಕಾಣಿಸುತ್ತಿಲ್ಲ. ಜನ ಎಂದರೆ ಓಟು ಬ್ಯಾಂಕುಗಳೆಂದೇ ಅವರು ಭಾವಿಸಿರುವಂತಿದೆ.

ಕಿಡಿಗೇಡಿತನ: ಸಾಮಾನ್ಯವಾಗಿ, ವಿಧಾನಮಂಡಲದ ಸದನಗಳಲ್ಲಿ ಆಳುವ ಪಕ್ಷ ಹಾಗೂ ಪ್ರತಿಪಕ್ಷಗಳ ಪ್ರತಿನಿಧಿಗಳು, ಸದನದ ಒಳಗಡೆ ಭೀಕರ- ಭಯಾನಕ ಕಾಳಗಗಳೇ ಆಗುವಂತೆ ನೋಡಿಕೊಳ್ಳುತ್ತಾರೆ. ಮೊಗಸಾಲೆಗಳಲ್ಲಿ ಎಲ್ಲರೂ ಸಜ್ಜನರೇ.
 ಆದರೆ ಈ ಬಾರಿ ಈ ವ್ಯವಸ್ಥೆ ತಿರುಗು- ಮುರುಗಾಗಿತ್ತು. ಜಗಳಗಳು ನಡೆದಿದ್ದು ಮೊಗಸಾಲೆಯಲ್ಲಿ. ಸದನಗಳಲ್ಲಿ ಎಲ್ಲವೂ ಸುಗಮ.

- ಸತ್ಯ
anisikeprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.