ಅಂಕಣಗಳು

ಛೇ, ಇದೆಂಥ ವಿಕಟ ವಿನೋದ?

ಅಯ್ಯಯ್ಯೋ ನಮ್ಮ ಹೀರೊ ಸತ್ತು ಹೋದ ಅಂತ ಕಾಶ್ಮೀರದಲ್ಲಿ ಯಥಾಪ್ರಕಾರ ಗುಂಪೊಂದು ಬೀದಿಯಲ್ಲಿ ...

Published On :

ಅಯ್ಯಯ್ಯೋ ನಮ್ಮ ಹೀರೊ ಸತ್ತು ಹೋದ ಅಂತ ಕಾಶ್ಮೀರದಲ್ಲಿ ಯಥಾಪ್ರಕಾರ ಗುಂಪೊಂದು ಬೀದಿಯಲ್ಲಿ ಬೊಬ್ಬೆ ಹಾಕಿಕೊಂಡಿದೆ. ಹಾಗವರು ಚೀರುತ್ತಿರುವುದು ಅಫ್ಜಲ್ ಅಂತ್ಯದ ಬಗ್ಗೆ. ಹೌದೇ ಹೌದು, ನಿಮ್ಮ ದುಃಖವೇ ನಮ್ಮ ನೋವು ಎಂಬಂತೆ ಮಾಧ್ಯಮದ ದೊಡ್ಡದೊಂದು ವರ್ಗವೂ ಇವರಿಗೆ ಪ್ರಚಾರ ಕೊಟ್ಟುಕೊಂಡಿದೆ. ಕಲ್ಲು ತೂರಿಕೊಂಡಿರುವವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು, ಅವರಿಗೆ ಸರ್ಕಾರ ಸ್ಪಂದಿಸಬೇಕು (ಲಕ್ಷಾಂತರ ಮಂದಿಯನ್ನು ಹಿಂಸಾತ್ಮಕವಾಗಿ ಗುಳೆ ಎಬ್ಬಿಸಿದವರಿಗೆ) ಎಂಬ ಎಂದಿನ ವಕಾಲತ್ತುಗಳು ಜಾರಿಯಲ್ಲಿವೆ.
ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ನ್ಯಾಯದ ಧ್ವನಿಯಾಗಿ ಬಿಂಬಿತಗೊಳ್ಳಬೇಕಿದ್ದ ವ್ಯಕ್ತಿಯೊಬ್ಬರತ್ತ ಗಮನ ವಹಿಸುವುದಕ್ಕೆ ಮುಖ್ಯವಾಹಿನಿ ಮಾಧ್ಯಮ ಸೋತಿದೆ. ಅಂತರ್ಜಾಲದ ಸಾಮಾಜಿಕ ತಾಣಗಳ ಗಟ್ಟಿ ಧ್ವನಿಯಿಂದಷ್ಟೇ ಹಾಗೊಬ್ಬ ಹೋರಾಟಗಾರ ಅನಾವರಣವಾಗುತ್ತಿರುವುದು ಸೋಜಿಗ. ಅವರ ಹೆಸರು ವಿನೋದ್ ಪಂಡಿತ್.
ಕಳೆದ ಹನ್ನೆರಡು ದಿನಗಳಿಂದ ಅಮರಣಾಂತ ಉಪವಾಸ ನಡೆಸಿ, ಇದೀಗ ಆರೋಗ್ಯ ತೀರ ಹದಗೆಡುತ್ತಿರುವ ಹಂತದಲ್ಲೂ ವಿನೋದ್ ಪಂಡಿತ್ ರಾಷ್ಟ್ರೀಯ ಚರ್ಚೆಯ ವಿಷಯವಾಗುತ್ತಿಲ್ಲ ಎಂಬುದು ಅತ್ಯಂತ ದುರದೃಷ್ಟಕರ. ಹಾಗೆ ನೋಡಿದರೆ ದೇಶದ 'ಸಾಮೂಹಿಕ ಆತ್ಮಸಾಕ್ಷಿ'ಯನ್ನು ಕಾಡಬೇಕಿರುವುದು ಜನವರಿ 30ರಿಂದ ಗುಜರಾತಿನ ಪೋರಬಂದರಿನಲ್ಲಿ ನಡೆಯುತ್ತಿರುವ ವಿನೋದ್ ಪಂಡಿತರ ಉಪವಾಸ ಸತ್ಯಾಗ್ರಹವೇ ಎಂಬುದರಲ್ಲಿ ಎರಡು ಮಾತಿಲ್ಲ.
ಟ್ವೀಟಿಗರೊಬ್ಬರು ವ್ಯಾಖ್ಯಾನಿಸುತ್ತಿರುವಂತೆ ವಿನೋದ್ ಪಂಡಿತ್ ಅವರೇನೂ ಈಡೇರಿಸಲಾಗದ ಬೇಡಿಕೆಗಳನ್ನು ಮುಂದಿಟ್ಟಿಲ್ಲ. ಅವರ ಆರು ಬೇಡಿಕೆಗಳು ಹೀಗಿವೆ:
ಟ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಪೀಠ ದೇವಾಲಯಕ್ಕೆ ಭೇಟಿ ಸಾಧ್ಯವಾಗುವ ನಿಟ್ಟಿನಲ್ಲಿ ಪಾಕಿಸ್ತಾನದ ಜತೆ ಮಾತುಕತೆ ಆಗಬೇಕು.
ಟ ಜಮ್ಮು-ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ಶಾರದಾ ಪೀಠ ಅಧ್ಯಯನ ಕೇಂದ್ರ ಸ್ಥಾಪನೆ
ಟ ಕಾಶ್ಮೀರದಲ್ಲಿ ಹಿಂದು ದೇವಾಲಯಗಳಿಗೆ ಸೇರಿದ ಬಹುಕೋಟಿ ರುಪಾಯಿಗಳ ಮೌಲ್ಯದ ಭೂಮಿ ಅತಿಕ್ರಮಣವಾಗಿರುವುದರ ಬಗ್ಗೆ ತನಿಖೆ
ಟ ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಹಾಗೆ ಉಳಿದುಕೊಂಡಿರುವ 'ಕಾಶ್ಮೀರ ದೇವಾಲಯಗಳು ಹಾಗೂ ಗುಡಿಗಳ ಮಸೂದೆ'ಯನ್ನು ಪಾಸು ಮಾಡುವುದು
ಟ ವಯೋವಾನ ಮೀರಿರುವ ಕಾಶ್ಮೀರದ ವಲಸಿಗ ಹಿಂದೂ ಯುವಕರಿಗೆ ಏಕಕಾಲದ ಪರಿಹಾರ ಮೊತ್ತವೊಂದನ್ನು ನೀಡುವುದು.
ಟ ಕಾಶ್ಮೀರದಲ್ಲೇ ಉಳಿದಿರುವ ಹಿಂದುಗಳಿಗೆ ವಿಶೇಷ ಆರ್ಥಿಕ ಸೌಲಭ್ಯ.
ಒಮ್ಮೆ ಯೋಚಿಸಿದರೆ ಇವುಗಳಲ್ಲಿ ಅತಾರ್ಕಿಕ ಎನಿಸುವ ಇಲ್ಲವೇ ಈಡೇರಿಸಲಾಗದ ಯಾವ ಬೇಡಿಕೆಗಳೂ ಇಲ್ಲ ಎಂಬುದು ಮನದಟ್ಟಾಗುತ್ತದೆ. ಇದೇ ಬೇಡಿಕೆಗಳ ವಾಕ್ಯದಲ್ಲಿ ಹಿಂದು ಪದದ ಬದಲು ಮುಸ್ಲಿಂ ಎಂದಿದ್ದರೆ ಯಾವುದೇ ಸರ್ಕಾರ ಕ್ಷಣಮಾತ್ರದಲ್ಲಿ ಈಡೇರಿಸುತ್ತಿರಲಿಲ್ಲವೇ?
ಸರ್ವ ಪಕ್ಷಗಳ ವಲಸೆ ಸಂಯೋಜಕ ಸಮಿತಿಯ ನೇತೃತ್ವ ವಹಿಸಿರುವ ವಿನೋದ್ ಪಂಡಿತ್, ಅಕ್ಟೋಬರ್ 2011ರಲ್ಲೇ ಮೊದಲ ಸುತ್ತಿನ ಅಮರಣಾಂತ ಉಪವಾಸ ನಡೆಸಿದ್ದರು. ಆಗ ಒಮರ್ ಅಬ್ದುಲ್ಲಾ ಸರ್ಕಾರದ ಹಿರಿಯ ಮಂತ್ರಿ ಆರ್. ಎಸ್. ಚಿಬ್ ಮಾತುಕತೆಗೆ ಬಂದು ಈ ಬೇಡಿಕೆಗಳ ಪರಿಶೀಲನೆಗೆ ಸರ್ಕಾರ ಸಮಿತಿಯೊಂದನ್ನು ರಚಿಸುವುದಾಗಿ ಭರವಸೆ ನೀಡಿ ಉಪವಾಸ ಅಂತ್ಯಕ್ಕೆ ಮನವಿ ಮಾಡಿದ್ದರು. ಆದರೆ ವರ್ಷ ಉರುಳಿದ ನಂತರವೂ ಆ ಸಮಿತಿಯ ಸುದ್ದಿಯೇ ಇಲ್ಲ. ಈ ಬಾರಿ ಭಾರತದ ಆತ್ಮಸಾಕ್ಷಿಗೆ ಕನ್ನಡಿ ಹಿಡಿಯುವುದಕ್ಕೆ ಗಾಂಧಿ ಹುಟ್ಟಿದ ಪ್ರದೇಶದಲ್ಲೇ ಉಪವಾಸ ಕುಳಿತಿದ್ದಾರೆ ವಿನೋದ್ ಪಂಡಿತ್. ಅವರು ಅಸ್ವಸ್ಥರಾಗಿ ಆಸ್ಪತ್ರೆ ಸೇರುವ ಸ್ಥಿತಿ ಬಂದಿದ್ದರೂ ಅಫ್ಜಲ್ ಸೂತಕದಲ್ಲಿ ಮೀಯುತ್ತಿರುವ ಮಾಧ್ಯಮಕ್ಕೆ, ಭಾರತದ ಸಾಮೂಹಿಕ ಆತ್ಮಸಾಕ್ಷಿಯ ವ್ಯಾಖ್ಯಾನದಲ್ಲಿ ನಿರತರಾಗಿರುವ ಬೌದ್ಧಿಕ ವರ್ಗದ ಆತ್ಮಸಾಕ್ಷಿಗೆ ಏನೂ ಅನ್ನಿಸದೇ ಇರುವುದು ಈ ದೇಶದ ದುರಂತ!
ಟ್ವಿಟ್ಟರ್, ಫೇಸ್ಬುಕ್ಗಳಲ್ಲಿ ಈ ಧೋರಣೆಗೆ ಆಕ್ರೋಶ ಹರಿದಿದೆ. ಕೆಲವನ್ನು ಗಮನಿಸುವುದಾದರೆ-

- ಕಾಶ್ಮೀರ ಮತ್ತು ಮಾಧ್ಯಮದಿಂದ ಅಫ್ಜಲ್ ಗುರು ಬೆಂಬಲ ಪಡೆದುಕೊಳ್ಳುತ್ತಿರುವುದು ಮತ್ತು ವಿನೋದ್ ಪಂಡಿತ್ ಹಕ್ಕೊತ್ತಾಯ ಅವಗಣನೆಗೆ ಒಳಗಾಗಿರುವುದು ಲಜ್ಜೆಗೇಡಿ ವಿದ್ಯಮಾನ!-ದಿನೇಶ್ ಗುಪ್ತ

- ಯಾಸಿನ್ ಮಲಿಕ್ನಂಥ ಪ್ರತ್ಯೇಕತಾವಾದಿಗಳನ್ನು ಸೌಮ್ಯವಾದಿ ಎನ್ನುವ, 13 ದಿನಗಳ ಉಪವಾಸದ ನಂತವೂ ವಿನೋದ್ ಪಂಡಿತ್ ಬಗ್ಗೆ ಗಮನಹರಿಸದ ದೇಶದಲ್ಲಿ ನಾನಿದ್ದೇನೆ!-ಪವನ್ ದುರಾನಿ

- ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ರತ್ನಗಂಬಳಿ ಹಾಕುವ ಭಾರತ ಸರ್ಕಾರ ವಿನೋದ್ ಪಂಡಿತ್ ಜತೆ ಮಾತುಕತೆಗೇಕೆ ಮುಂದಾಗುವುದಿಲ್ಲ?-ಸುಮಂತ್ ಪಟೇಲ್

- ವಿನೋದ್ ಪಂಡಿತ್ ನ್ಯೂಕ್ಲಿಯರ್ ಬಾಂಬ್ ಕೇಳ್ತಿಲ್ಲ. ಅವರ ಬೇಡಿಕೆ ಮಾನವೀಯ ನೆಲೆಯದ್ದು. - ನಂದಿತಾ ಠಾಕೂರ್.

ಇಲ್ಲ, ದೇಶದ ಸಾಮೂಹಿಕ ಆತ್ಮಸಾಕ್ಷಿ ಹೊಯ್ದಾಡುತ್ತಲೇ ಇಲ್ಲ! ಇದಲ್ಲವೇ ಕ್ರೂರ ವಿನೋದ?

-ಶಂತನು ಭಟ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.