ಅಂಕಣಗಳು

ಮಠಗಳ ದಾರಿ ತಪ್ಪಿಸುತ್ತಿರುವ ರಾಜಕಾರಣಿಗಳು

ಅಂತೂ-ಇಂತೂ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಮ್ಮ ಬಹುದಿನಗಳ...

Published On :

ಅಂತೂ-ಇಂತೂ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಮ್ಮ ಬಹುದಿನಗಳ ಬಯಕೆಯಂತೆ ಬಜೆಟ್ ಮಂಡಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ 'ಆಪರೇಷನ್ ಸರಕಾರ'ದ ಸ್ಕೆಚ್ಚು ಯಾವುದೇ ಕ್ಷಣದಲ್ಲಿ ತಮ್ಮ ಅಧಿಕಾರವನ್ನು ಆಪೋಶನ ತೆಗೆದುಕೊಳ್ಳಬಹುದು ಎಂಬ ಆತಂಕ ಇದ್ದ ಕಾರಣ ಅವರು  ಬಜೆಟ್ ಮಂಡನೆಗಾಗಿ ಹಪಾಹಪಿಸಿದ್ದರು. ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ತಾವು ಕೊಡುವ ಪ್ರಣಾಳಿಕೆ ಸ್ವರೂಪದ ಬಜೆಟ್ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದುಬಿಡುತ್ತದೆ ಎಂಬುದು ಅವರ ಹಾಗೂ ಅವರ ಪಕ್ಷದ ಮುಖಂಡರ ಎಣಿಕೆಯಾಗಿತ್ತು.
ಒಮ್ಮೊಮ್ಮೆ ಆತ್ಮವಿಶ್ವಾಸ, ಲೆಕ್ಕಾಚಾರ ತೀರಾ ಅತಿಯಾದರೆ ಎಡವಟ್ಟಾಗಿ ಹೋಗುತ್ತದೆ. ನಿರೀಕ್ಷೆಗಳು ಪೊಳ್ಳಾಗಿ ಹೋಗುತ್ತವೆ. ಏನೋ ಮಾಡಲು ಹೋಗಿ ಇನ್ನೇನೊ ಮಾಡಿದರು ಎಂಬಂತಾಗುತ್ತದೆ. ರಾಜ್ಯ ಬಜೆಟ್ನಲ್ಲಿನ ಕೆಲ ಅಂಶಗಳು ಈ ಮಾತಿಗೆ ಸಾಕ್ಷಿಯಾಗಿ ನಿಲ್ಲುತ್ತವೆ.
ಜಗದೀಶ್ ಶೆಟ್ಟರ್ ಅವರು ಮಂಡಿಸಿದ್ದು ಬಿಜೆಪಿ ಸರ್ಕಾರದ ಅವಧಿಯ ಕಟ್ಟ ಕಡೆಯ ಮುಂಗಡ ಪತ್ರ. ವಿಧಾನಸಭೆ ಚುನಾವಣೆ ಬೆನ್ನಲ್ಲೇ ಇರುವಾಗ ಜನರ ತುಟಿಗೆ ತುಪ್ಪ ಸವರುವ ಕಾರ್ಯಕ್ರಮಗಳನ್ನು ಹೊರತುಪಡಿಸಿ ಬೇರೆ ಏನನ್ನು ತಾನೆ ನಿರೀಕ್ಷಿಸಲು ಸಾಧ್ಯ ?  ಶೆಟ್ಟರ್ ಅವರು ಮಾಡಿರುವುದೂ ಅದನ್ನೇ. ಆದರೆ, ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅದು ಯಾವ ವಿಚಾರದಲ್ಲಿ ಎಂದರೆ, ಮಠ ಮಾನ್ಯಗಳಿಗೆ ದುಡ್ಡು ಸುರಿಯುವ ವಿಷಯದಲ್ಲಿ. ಇದರಲ್ಲಿ ಶೆಟ್ಟರ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನೂ ಮೀರಿಸಿ ಮುನ್ನಡೆದಿದ್ದಾರೆ.
ಶೆಟ್ಟರ್ ಅವರು ಮಂಡಿಸಿರುವ ಬಜೆಟ್ನಲ್ಲಿ 236 ಕೋಟಿ ರುಪಾಯಿ ಮಠ, ಮಾನ್ಯಗಳಿಗೆ ನಿಗದಿಯಾಗಿದೆ. ಅದು ಕಡಿಮೆ ಮೊತ್ತವೇನಲ್ಲ. ಇದರಲ್ಲಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ತಲಾ ಒಂದೊಂದು ಕೋಟಿ ಹೋಗಿದ್ದರೂ ನಗರ, ಪಟ್ಟಣ ಪ್ರದೇಶಗಳು ಕೊಂಚವಾದರೂ ಅಭಿವೃದ್ಧಿ ಕಾಣುತ್ತಿದ್ದವು. ಇಷ್ಟಕ್ಕೂ ಮಠ, ಮಂದಿರಗಳಿಗೆ ಈ ರೀತಿ ಹಣ ಕೊಡುವುದಕ್ಕೆ ಮುಖ್ಯಮಂತ್ರಿಗಳಿಗೆ ಅಧಿಕಾರ ಕೊಟ್ಟವರು ಯಾರು ? ಎಂಬುದು ಸಾರ್ವಜನಿಕರ ಪ್ರಶ್ನೆ. ಈ ವಿಚಾರ ಈಗ ರಾಜ್ಯವ್ಯಾಪಿ ಚರ್ಚೆಗೂ ವಸ್ತುವಾಗಿದೆ. ಮುಖ್ಯಮಂತ್ರಿಯವರ ಈ ನಡೆ ಕುಹಕಕ್ಕೆ ಕಾರಣವಾಗಿದೆ.
ಇಷ್ಟಕ್ಕೂ ಮಠಗಳು ನಡೆಯಬೇಕಾಗಿರುವುದು ಭಕ್ತರ ಕಾಣಿಕೆ ಅಥವಾ ದೇಣಿಗೆಯಿಂದಲೇ ಹೊರತು ಸರ್ಕಾರದ ಅನುದಾನದಿಂದ ಅಲ್ಲ. ಮಠಗಳು ಭಕ್ತರ ಸ್ವತ್ತು ಆಗಬೇಕೇ ವಿನಹ ಸರ್ಕಾರದ ಸ್ವತ್ತು ಆಗಬಾರದು. ನಾಡನ್ನಾಳುವ ಮಂದಿ ಯಾವುದೇ ತಪ್ಪು ಮಾಡಿದಾಗ ಅವರನ್ನು ಎಚ್ಚರಿಸುವ, ತಪ್ಪುಗಳನ್ನು ತಿದ್ದಿ ಸರಿದಾರಿಗೆ ತರುವ ಕೆಲಸವನ್ನು ಗುರುಗಳ ಸ್ಥಾನದಲ್ಲಿರುವ ಮಠಾಧೀಶರು ಮಾಡುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈಗಲೂ ಇದೆ.
ಆದರೆ, ಅನುದಾನ ಸ್ವೀಕರಿಸುವ ಮೂಲಕ ಹೀಗೆ ಸರ್ಕಾರದ ಹಂಗಿಗೆ ಒಳಗಾದರೆ, ಆಡಳಿತ ನಡೆಸುವವರ ಮುಲಾಜಿಗೆ ಬಿದ್ದರೆ, ಮುಖ್ಯಮಂತ್ರಿ, ಮಂತ್ರಿಗಳ ಋಣಕ್ಕೆ ಗುರಿಯಾದರೆ ಸರ್ಕಾರ ನಡೆಸುವವರ ಲೋಪದೋಷಗಳನ್ನು ಎತ್ತಿ ತೋರಿಸುವವರು ಯಾರು? ಇದರಿಂದ ತಪ್ಪು ತಿದ್ದುವ ಮಠಾಧೀಶರ ಸ್ವಾತಂತ್ರ್ಯದ ಹರಣ ಆಗುವುದಿಲ್ಲವೇ? ಮಠಗಳು ಭೀಡೆಗೆ ಒಳಗಾಗುವುದಿಲ್ಲವೇ ? ಸರ್ಕಾರ ಕೊಡುವ ಅನುದಾನನ್ನು ಜೋಳಿಗೆಗೆ ತುಂಬಿಸಿಕೊಳ್ಳುತ್ತಾ ಹೋದರೆ, ಸರ್ಕಾರದಿಂದ ಅಚಾತುರ್ಯಗಳಾದಾಗ, ಮೇಲಿಂದ ಮೇಲೆ ತಪ್ಪುಗಳಾದಾಗ ಧ್ವನಿ ಎತ್ತಲು ಸಾಧ್ಯವೇ. ಅಂತಹ ಸಂದರ್ಭ ಬಂದಾಗ ಮಠಾಧೀಶರು ಮೌನಕ್ಕೆ ಶರಣಾಗಬೇಕಾಗುತ್ತದೆ ಅಲ್ಲವೇ?
ಹಿಂದಿನ ಕಾಲದಲ್ಲಿ ಮಠಾಧೀಶರು ಜೋಳಿಗೆ ಹಿಡಿದು ಊರು, ಕೇರಿ ತಿರುಗುತ್ತಿದ್ದರು. ಮನೆ ಮನೆಗೆ ಹೋಗಿ ಪಾದಪೂಜೆ ಮಾಡಿಸಿಕೊಂಡು ಭಕ್ತರು ಕಾಣಿಕೆ ಅಥವಾ ದೇಣಿಗೆ ರೂಪದಲ್ಲಿ ಕೊಡುತ್ತಿದ್ದ ಹಣವನ್ನು ಸ್ವೀಕರಿಸುತ್ತಿದ್ದರು. ಅಷ್ಟೇ ಅಲ್ಲ, ಧವಸ, ಧಾನ್ಯ ಬೇಡಿ ತರುವ ಕಾಲ ಅದಾಗಿತ್ತು. ಇನ್ನು ಭಕ್ತರು ಕೊಡುವ ಹಣದಿಂದಲೇ ಗುರುಕಲ, ಅನ್ನ, ಅಕ್ಷರ, ಜ್ಞಾನ ದಾಸೋಹ ನಡೆಯುತ್ತಿತ್ತು. ಯಾರೂ ಸರ್ಕಾರದ ಬಳಿ ಅನುದಾನಕ್ಕೆ ಕೈ ಒಡ್ಡುತ್ತಿರಲಿಲ್ಲ. ಹಪಹಪಿಸುತ್ತಿರಲಿಲ್ಲ. ಹೀಗಾಗಿಯೇ ಮಠಗಳು ಚಂದವಾಗಿ ಬೆಳೆದವು. ಸಮಾಜದಲ್ಲಿ ಗೌರವ ಉಳಿಸಿಕೊಂಡವು.
ಈ ಹಿಂದೆ ಮಠಗಳು ಭಕ್ತರನ್ನು ನಂಬಿ ಬೆಳೆದವೇ ಹೊರತು ಸರ್ಕಾರದ ಹಣವನ್ನಲ್ಲ. ಅವು ತಮ್ಮ ಸ್ವಾಭಿಮಾನ, ಅತ್ಮಾಭಿಮಾನಕ್ಕೆ ಕಿಂಚಿತ್ತು ಲೋಪವಾಗದಂತೆ ನಡೆದುಕೊಂಡವು. ಈಗಲೂ ಅದೇ ರೀತಿ ನಡೆದುಕೊಳ್ಳುತ್ತಿವೆ.
ಹೀಗೆ ಸ್ವಾಭಿಮಾನ ಮತ್ತು ಅತ್ಮಾಭಿಮಾನದ ಮೇಲೆ ನಿಂತಿರುವ ಮಠಗಳಿಗೆ ಸರ್ಕಾರ ಅನುದಾನದ ಮೂಲಕ ಆಮಿಷ ಒಡ್ಡುತ್ತಿದೆ. ಜೊತೆಗೆ ಧರ್ಮಾಚಾರವನ್ನು ಕಲುಷಿತಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಧರ್ಮಕ್ಷೇತ್ರಗಳನ್ನು ದಾರಿ ತಪ್ಪಿಸುವ ಹುನ್ನಾರ ನಡೆಸುತ್ತಿದೆ. ಇದರ ಹಿಂದೆ ಮಠಗಳನ್ನು ಸರ್ಕಾರದ ಹಂಗಿಗೆ ಒಳಪಡಿಸುವ ಕುತಂತ್ರವೂ ಅಡಗಿದೆ.
ಮಠಗಳಿಗೆ ಸ್ವಾಭಿಮಾನ, ಸ್ವಂತ ಬಲ ಇರಬೇಕೇ ಹೊರತು ಸರ್ಕಾರದ ಅನುದಾನದ ಮೇಲೆ ನಿಲ್ಲುವ ಪ್ರಯತ್ನ ಮಾಡಬಾರದು. ಸರ್ಕಾರ ಒಡ್ಡುವ ಆಮಿಷ ತಡೆಯುವ ನಿಗ್ರಹ ಶಕ್ತಿ ಮಠಗಳನ್ನು ನಡೆಸುವವರಲ್ಲಿ ಇರಬೇಕು. ಒಂದು ವೇಳೆ ಆ ಶಕ್ತಿ ಇಲ್ಲ ಎಂದಾದರೆ ಅಚಾರ, ವಿಚಾರಗಳ ಬಗ್ಗೆ ಮಠಾಧೀಶರು ಭಕ್ತರಿಗೆ ಏನು ತಾನೆ ಭೋದನೆ ಮಾಡಲು ಸಾಧ್ಯ? ಮದ, ಮೋಹ, ಮತ್ಸರ ಸೇರಿದಂತೆ ಅರಿಷಡ್ವರ್ಗಗಳಿಗೆ ಕಡಿವಾಣ ಹಾಕುವ ಕುರಿತು ತಿಳಿ ಹೇಳುವ ಮಠಾಧಿಪತಿಗಳು ತಮ್ಮ ಅಸ್ತಿತ್ವ ಮತ್ತು ಇರುವಿಕೆಯನ್ನು ಸ್ವಾಭಿಮಾನದ ತಳಹದಿ ಮೇಲೆ ಸಮರ್ಥಿಸಿಕೊಳ್ಳಬೇಕು.
ರಾಜಕೀಯ ಕಾರಣ ಅಥವಾ ಚುನಾವಣೆ ದೃಷ್ಟಿಯಿಂದಲೋ, ಮಠಗಳಿಗೆ ನಡೆದುಕೊಳ್ಳುವ ಭಕ್ತ ಸಮುದಾಯವನ್ನು ಓಲೈಸುವ ಸಲುವಾಗಿಯೋ ಸರ್ಕಾರ ಇಂಥಹ ಆಮಿಷಗಳನ್ನು ಒಡ್ಡುತ್ತಿದೆ. ಮತದಾರರ ಮೇಲೆ ಪ್ರಭಾವ ಬೀರುವ ಕೆಲಸಕ್ಕೆ ಮಠಗಳನ್ನು ಮಧ್ಯವರ್ತಿಯಾಗಿ ಬಳಸಿಕೊಳ್ಳುವ ಕೆಟ್ಟ ಪದ್ಧತಿ ಅನುಸರಿಸುತ್ತಿದೆ. ಸರ್ಕಾರದ ಈ ಹುನ್ನಾರ ಅರ್ಥವಾಗದಂತಹ ಪರಿಸ್ಥಿತಿ ಮಠ ಮಾನ್ಯಗಳಿಗೆ ಬಂದಿದೆಯೇ ? ಆಚಾರ, ವಿಚಾರಗಳ ಭೋದನೆಯನ್ನೇ ಪರಮ ಗುರಿಯಾಗಿ ಮಾಡಿಕೊಂಡಿರುವ ಧರ್ಮಗುರುಗಳಿಗೆ ಸರ್ಕಾರದ ವಿಕಾರ ಮನೋಭಾವ ಏಕೆ ಅರ್ಥವಾಗುತ್ತಿಲ್ಲ. ಸರ್ಕಾರ ಒಡ್ಡುವ ಆಸೆ, ಆಮಿಷಗಳನ್ನು ಅವರೇಕೆ ನಿರಾಕರಿಸುವುದಿಲ್ಲ. ಹಣ ಕೊಡುವುದರ ಹಿಂದಿನ ರಾಜಕಾರಣಿಗಳ ದುರುದ್ದೇಶ ಅವರಿಗೆ ತಿಳಿಯುವುದೂ ಇಲ್ಲವೇ?
ಈ ಹಿಂದೆ ಸರ್ಕಾರದ ಹಣವನ್ನು ಮಠಗಳು ವಿಷ ಎಂದು ಭಾವಿಸಿದ್ದವು. ಎಂದೂ, ಯಾವತ್ತೂ ಹಣ ಕೊಡಿ ಎಂದು ರಾಜಕಾರಣಿಗಳ ಮುಂದೆ ಬೇಡಿ ನಿಂತ ಮಠಾಧೀಶರನ್ನು ಕಂಡವರಿಲ್ಲ. ಆದರೆ, ಇಂದು ಪರಿಸ್ಥಿತಿ ತಿರುಗು ಮುರುಗಾಗಿದೆ. ಆಡಳಿತದ ಕೇಂದ್ರ ವಿಧಾನಸೌಧದಲ್ಲಿ, ಮುಖ್ಯಮಂತ್ರಿ, ಮಂತ್ರಿ, ಮಹೋದಯರ ಮನೆಗಳಲ್ಲಿ ಕಾವಿಧಾರಿಗಳು ಕಾಣ ಸಿಗುತ್ತಾರೆ. ಅನುದಾನ ಕೊಡಿ ಎಂದು ಸರ್ಕಾರವನ್ನು ಕೋರುವ ಮನವಿ ಪತ್ರಗಳು ಅವರ ಕೈಯ್ಯಲ್ಲಿ ರಾರಾಜಿಸುತ್ತಿರುತ್ತದೆ. ಅಷ್ಟೇ ಏಕೆ, ಜಗದೀಶ್ ಶೆಟ್ಟರ್ ಅವರು ಬಜೆಟ್ ಮಂಡಿಸುವ ಎರಡು ದಿನಗಳ ಮುನ್ನ ಗೃಹ ಕಚೇರಿಯಲ್ಲಿ ಮಠಾಧೀಶರ ದಂಡು ನೆರೆದಿತ್ತು. ಏಕೆ, ಧರ್ಮ ಭೋದನೆಗಂತೂ ಖಂಡಿತಾ ಅಲ್ಲ. ಅದೇ ಹಣಕಾಸಿನ ನೆರವಿಗೆ. ಆದರೆ, ಎಲ್ಲ ಮಠಗಳನ್ನೂ ಒಂದೇ ತಕ್ಕಡಿಯಲ್ಲಿ ತೂಗಲು ಆಗದು. ಕೆಲ ಮಠಗಳಿ ಸತ್ಯ, ನಿಷ್ಠೆ, ಅನುಷ್ಠಾನದ ಆಧಾರದ ಮೇಲೆ ಬೆಳೆಯುತ್ತಿವೆ. ಆದರೆ, ಅವುಗಳ ಸಂಖ್ಯೆ ಬೆರಳೆಣಿಕೆಯಷ್ಟು.
ಸರ್ಕಾರ ಇದೇ ರೀತಿ ಹಣ ಚೆಲ್ಲುತ್ತಾ ಹೋದರೆ ನಾಳೆ ಪರಿಸ್ಥಿತಿ ಏನಾಗಬೇಡ. ಒಂದು ಮಠ ಸ್ಥಾಪನೆ ಮಾಡಿಕೊಂಡು ನಾಲ್ಕಾರು ಭಕ್ತರನ್ನು ಬೆನ್ನಿಗೆ ಕಟ್ಟಿಕೊಂಡು ಹೋಗಿ ಸರ್ಕಾರದ ಮುಂದೆ ಹೋಗಿ ಕೈ ಚಾಚಿದರೆ ಹಣ ಹರಿದು ಬರುತ್ತದೆ ಎಂಬ ಭಾವನೆ ಕಂಡಕಂಡವರಲ್ಲಿ ಬೆಳೆಯುತ್ತದೆ. ಆಗ ಸ್ಥಳ ಸಿಕ್ಕ ಕಡೆ ಮಠಗಳು ತಲೆ ಎತ್ತುತ್ತವೆ. ಇದು ಒಂದು ರೀತಿಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಅಸ್ತ್ರವೂ ಆಗಬಹುದು. ಮಠವೊಂದನ್ನು ಸ್ಥಾಪಿಸಿ, ಅದರ ಹೆಸರಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದರೆ ಆದಾಯ ತಾನಾಗೆ ಬರುತ್ತದೆ ಎಂದಾದರೆ ಯಾರು ಬೇಕಾದರೂ ಆ ಕೆಲಸಕ್ಕೆ ಮುಂದಾಗುವ ಅಪಾಯವಿದೆ.
ಈ ರೀತಿ ಮಠಗಳಿಗೆ ಹಣ ಕೊಡುತ್ತಿರುವ ಸರ್ಕಾರಕ್ಕೆ ತನ್ನ ತಪ್ಪು ತಿಳಿಯುತ್ತಿಲ್ಲ. ನಾನಾ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟುಕೊಂಡೇ ಆ ಕೆಲಸ ಮಾಡುತ್ತಿದೆ. ಈ ಹಿಂದೆ ಮಠಗಳಿಗೆ ಸರ್ಕಾರಗಳು ಹಣ ನೀಡಿಲ್ಲವೇ ? ಎಂಬ ಪ್ರಶ್ನೆ ಉಂಟಾಗಬಹುದು. ಆದರೆ ಈ ಪ್ರಮಾಣದಲ್ಲಿ ಯಾರೂ ಕೊಟ್ಟಿಲ್ಲ. ಮಠಗಳನ್ನು ಅನುದಾನದ ಮೂಲಕ ಓಲೈಸುವ ಕೆಲಸ ವೇಗ ಗತಿ ಪಡೆದುಕೊಂಡಿದ್ದು ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಬಳಿಕ. ಮಠ ಮಾನ್ಯಗಳಿಗೆ ಹಣ ಕೊಡುವುದೇ ಬಹುದೊಡ್ಡ ಧರ್ಮಕಾರ್ಯ ಎಂದು ಅವರು ಭಾವಿಸಿದ್ದರು. ಹೀಗಾಗಿ ಹಿಂದೆ ಹತ್ತಾರು ಕೋಟಿಗಳ ಲೆಕ್ಕದಲ್ಲಿದ್ದ ಹಣ ಈಗ 236 ಕೋಟಿಗೆ ಬಂದು ನಿಂತಿದೆ.
ಇಷ್ಟಕ್ಕೂ ಸರ್ಕಾರ ಮಠಗಳಿಗೆ ಸುರಿಯುವ ಹಣ ಯಾರದ್ದು ? ಅದು ಸಾರ್ವಜನಿಕರು ತಮ್ಮ ಬೆವರು ಸುರಿಸಿ ಸಂಪಾದಿಸಿದ ಹಣದಲ್ಲಿ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಕೊಟ್ಟಿದ್ದು. ಇಂತಹ ಹಣವನ್ನು ಖಜಾನೆಯಲ್ಲಿ ಕಾಪಿಟ್ಟಿಕೊಳ್ಳಬೇಕಾದ ಸರ್ಕಾರವೇ ಬೇಕಾಬಿಟ್ಟಿ ಹಂಚುವುದು ಎಷ್ಟರ ಮಟ್ಟಿಗೆ ಸರಿ? ಆ ಅಧಿಕಾರವನ್ನು ಸರ್ಕಾರಕ್ಕೆ ಕೊಟ್ಟವರು ಯಾರು?
ಮಠಗಳಿಗೆ ಅನುದಾನ ನೀಡುವ ವಿಷಯದಲ್ಲಿ ಬಿಜೆಪಿ ಸರ್ಕಾರದಲ್ಲಿ ಭಾರಿ ಪೈಪೋಟಿಯೇ ನಡೆಯುತ್ತಿದೆ. ಯಡಿಯೂರಪ್ಪ ಅವರು ಆರಂಭಿಸಿದ್ದನ್ನು ಬಳಿಕ ಮುಖ್ಯಮಂತ್ರಿಯಾದ ಡಿ.ವಿ. ಸದಾನಂದಗೌಡರು ಮುಂದುವರಿಸಿದರು. ಅವರ ನಂತರ ಬಂದ ಜಗದೀಶ್ ಶೆಟ್ಟರ್ ಹಿಂದಿನವರನ್ನು ಮೀರಿ ಮುನ್ನಡೆದಿದ್ದಾರೆ. ಮುಂದೆ ಅಧಿಕಾರದ ಚುಕ್ಕಾಣಿ ಹಿಡಿಯುವವರು ಏನು ಮಾಡುವರೋ?
ಏಕೆಂದರೆ, ಹಿಂದಿನವರು ಇಷ್ಟು ಕೊಟ್ಟಿದ್ದಾರೆ, ನಾವು ಇನ್ನಷ್ಟು ಕೊಡೋಣ ಎಂಬ ಭಾವನೆ ಅವರಲ್ಲಿಯೂ ಬರದೇ ಇರುವುದೇ ? ಕೊಡದಿದ್ದರೆ ಮುಂಬರುವ ಚುನಾವಣೆಯಲ್ಲಿ ಪರಿಣಾಮ ಬೀರಬಹುದು. ಆಯಾ ಸಮುದಾಯದ ಮತಗಳ ಗಳಿಕೆ ಲೆಕ್ಕಾಚಾರದಲ್ಲಿ ಎಡವಟ್ಟು ಆಗಬಹುದು ಎಂಬ ಭಯ ಅವರನ್ನು ಕಾಡಬಹುದು. ಹೀಗಾಗಿ ಮಠಗಳಿಗೆ ಹರಿಯುವ ಹಣದ ಪ್ರಮಾಣ ವರ್ಷದಿಂದ ವರ್ಷಕ್ಕೆ ಇನ್ನೂ ಹೆಚ್ಚಾಗುವ ಎಲ್ಲ ಸಾಧ್ಯತೆಗಳೂ ಗೋಚರಿಸುತ್ತಿದೆ.
ಆ ರೀತಿ ಏನಾದರೂ ಆದರೆ ಕೃಷಿ ಬಜೆಟ್ನಂತೆ ಮಠಗಳಿಗೂ ಪ್ರತ್ಯೇಕ ಬಜೆಟ್ ಮಂಡಿಸಬೇಕಾಗುತ್ತದೆ. ಹಣ ಕೊಟ್ಟು ಸರ್ಕಾರವೇನೂ ಬೀಗುತ್ತಿರಬಹುದು. ಆದರೆ, ತಾನು ಮಾಡುತ್ತಿರುವ ತಪ್ಪಿನ ಅರಿವಾಗುತ್ತಿಲ್ಲ. ಇದು ಆಯಾ ಮಠಗಳ ನಡುವೆ ಅವರಿಗೆ ಅಷ್ಟೊಂದು, ನಮಗೆ ಇಷ್ಟೇ ಇಷ್ಟು ಎಂಬ ದ್ವೇಷ, ಅಸೂಯೆ ಬೆಳೆಯಲು, ಒಂದು ಸಮುದಾಯದ ಭಕ್ತರ ವಿರುದ್ಧ ಇನ್ನೊಂದು ಸಮುದಾಯದ ಭಕ್ತರ ವೈಮನಸ್ಸು ಬೆಳೆಸಿಕೊಳ್ಳಲು ದಾರಿಯಾಗುತ್ತಿದೆ ಎಂಬುದು ಸರ್ಕಾರಕ್ಕೆ ತಿಳಿಯುತ್ತಿಲ್ಲ. ಮಠ, ಮಠಗಳ ನಡುವೆ ಜಾತಿ ಸಂಘರ್ಷ ಬೆಳೆಸುವ ಮಹತ್ಕಾರ್ಯವೂ ಸರ್ಕಾರದಿಂದ ನಡೆದಿದೆ.
ಆಗ್ಗದ ಪ್ರಚಾರಕ್ಕಾಗಿ ಸರ್ಕಾರ ಒಡ್ಡುವ ಆಸೆ, ಆಮಿಷಗಳಿಗೆ ಮಠಗಳು ಈಗಿನಿಂದಲೇ ಕಡಿವಾಣ ಹಾಕಬೇಕು. ದಿನ ಬೆಳಗಾದರೆ ಆಡಳಿತ ನಡೆಸುವವರ ಮುಂದೆ ಹೋಗಿ ನಿಲ್ಲುವ ಪರಿಪಾಠ ನಿಲ್ಲಿಸಬೇಕು. ಇಲ್ಲದಿದ್ದರೆ ಅವರ ಧರ್ಮಭೋದನೆ ಅರ್ಥ ಕಳೆದುಕೊಳ್ಳುತ್ತದೆ.
ಲಗೋರಿ : ಸನ್ಯಾಸಿಗಳಿಗೂ ದೀಕ್ಷೆ ಕೊಡುವ ಶಕ್ತಿ ರಾಜಕಾರಣಿಗಳಿಗೆ ಇದೆ.  

- ಪಿ. ತ್ಯಾಗರಾಜ್
thyagarjun@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.