ಬೆಳ್ಳುಬ್ಬಿಗೆ ರೇಷ್ಮೆ ರುಮಾಲು ತಂದ ಫಜೀತಿ!
ತವರು ನೆಲದಲ್ಲಿ ಯಾವುದಾದರೂ ಸಮಾವೇಶ, ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳು ನಡೆದರೆ ಸ್ಥಳೀಯ ವೇಷ ತೊಟ್ಟು ವಿಜೃಂಭಿಸುವುದು ಹಲವರ ಖಯಾಲಿ. ಆದರೆ, ಅದು ಒಮ್ಮೊಮ್ಮೆ ವಿಪರೀತಕ್ಕೆ ಹೋದಾಗ ನೆಲಮೂಲ ಸಂಸ್ಕೃತಿಯ ಪರಿಚಯಕ್ಕಿಂತ ಅಪಹಾಸ್ಯಕ್ಕೀಡಾಗುವುದೇ ಹೆಚ್ಚು.
ಅಂಥದೊಂದು ಅಪಹಾಸ್ಯಕ್ಕೀಡಾದ ಸರದಿ ಶನಿವಾರ ಬಿಜಾಪುರದಲ್ಲಿ ಆರಂಭವಾದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರೇಷ್ಮೆ ರುಮಾಲು(ಪಟಗಾ) ಸುತ್ತಿದ್ದ ಕೃಷಿ ಮಾರುಕಟ್ಟೆ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರದಾಗಿತ್ತು!
ತವರಿನಲ್ಲೇ ಇಂಥ ಮಹಾ ಸಮ್ಮೇಳನ ನಡೆಯುತ್ತಿದೆ, ಜಿಲ್ಲಾ ಉಸ್ತುವಾರಿ ಸಚಿವರಾದ ತಾವೇ ಸ್ವಾಗತಿಸುವ ಕಾರ್ಯಕ್ರಮವಿದೆ ಎಂದಾಗ ಬೆಳ್ಳುಬ್ಬಿ ಸಾಹೇಬರ ಖುಷಿಗೆ ಮಿತಿಯೇ ಇರಲಿಲ್ಲ. ಈ ಖುಷಿಯನ್ನು ಇನ್ನಷ್ಟು ಇಮ್ಮಡಿಗೊಳಿಸಿಕೊಳ್ಳಲು ಸಾಹೇಬರು ತಲೆಗೆ ರೇಷ್ಮೆ ರುಮಾಲು ಸುತ್ತಿ ಅಪ್ಪಟ ಮಣ್ಣಿನ ಮಗನಂತೆ ವೇದಿಕೆ ಏರಿದ್ದರು. ಮೊದಲೇ ರೇಷ್ಮೆ ರುಮಾಲು, ಆಗಾಗ ಅದು ಜಾರುತ್ತಿತ್ತು. ಅದನ್ನು ಸರಿ ಮಾಡಿಕೊಳ್ಳುವ ಆತುರದಲ್ಲಿ ಅವರು ಓದುತ್ತಿದ್ದ ಭಾಷಣದಲ್ಲಿ ಏರುಪೇರು ಆಗುತ್ತಿತ್ತು! ಹೀಗಾಗಿ ತಮಗರಿವಿಲ್ಲದೇ ಒಂದೇ ವಾಕ್ಯವನ್ನು ಎರಡೆರಡು ಸಲ ಓದುತ್ತಿದ್ದರು. ವೇದಿಕೆಯಲ್ಲಿದ್ದ ಮಹನಿಯರ ಪರಿಚಯದಲ್ಲೂ ಹೆಸರು ಅನರ್ಥವಾಗುತ್ತಿದ್ದವು. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಹೊಗಳುವ ಅಬ್ಬರದಲ್ಲಿ ಅವರ ಪಕ್ಕದಲ್ಲಿದ್ದ ಶಿಲ್ಪಾ ಶೆಟ್ಟರ್ ಅವರ ಹೆಸರನ್ನು 'ಶೀಲಾ ಶೆಟ್ಟರ್' ಎಂದು ಎರಡು ಸಲ ಸಂಬೋಧಿಸಿದರು. ಪಕ್ಕದಲ್ಲಿದ್ದವರು ಸರ್ ಅಮ್ಮವರ ಹೆಸರು 'ಶೀಲಾ' ಅಲ್ಲ 'ಶಿಲ್ಪಾ' ಎಂದು ನೆನಪಿಸಿದರು. ಅಷ್ಟರಲ್ಲಿ ಸಡಿಲಾಗಿ ಕಿವಿಯ ಮೇಲೆ ಇಳಿಯುತ್ತಿದ್ದ ರೇಷ್ಮೆ ರುಮಾಲು ಮತ್ತೊಮ್ಮೆ ಅವರ ನಾಲಿಗೆಯ ಹಾದಿ ತಪ್ಪಿಸಿದ್ದರಿಂದ ಕ್ಷಮಿಸಿ 'ಶೀಲಾ ಶೆಟ್ಟರ್' ಅಂದರು.
ಅಲ್ಲಿಯವರೆಗೆ ತಾಳ್ಮೆಯಿಂದ ಇದ್ದ ಶೆಟ್ಟರ್ ಅವರು ಬೆಳ್ಳುಬ್ಬಿ ಮತ್ತು ಅವರ ತಲೆಯ ಮೇಲಿನ ರುಮಾಲನ್ನು ಸಿಟ್ಟಿನಿಂದ ನೋಡಿದ್ದೇ ತಡ, ಲಗುಬಗೆಯಲ್ಲಿ ಭಾಷಣ ಮುಗಿಸಿದ ಬೆಳ್ಳುಬ್ಬಿ ವೇದಿಕೆಯ ಹಿಂದಿದ್ದ ರುಮಾಲು ಸುತ್ತಿದವನನ್ನು ಕರೆದು ಕಾರಣವಿಲ್ಲದೇ ದಬಾಯಿಸಿಬಿಟ್ಟರು.
ಇತ್ತೀಚೆಗಷ್ಟೇ ಆಂಧ್ರಪ್ರದೇಶದ ಚಂಚಲಗುಡ ಜೈಲಿಗೆ ಹೋಗಿ ಜನಾರ್ದನ ರೆಡ್ಡಿಯನ್ನು ಭೇಟಿ ಮಾಡಿ ಬಂದಿದ್ದ ಬೆಳ್ಳುಬ್ಬಿ, ರೆಡ್ಡಿ ಸಾಹೇಬರನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳಲು ಮಾತಾಡಿ ಬಂದಿದ್ದೇನೆ ಎಂದು ರೀಲು ಬಿಡುತ್ತ ಬಿಜೆಪಿ ಕಟ್ಟುವ ನಾಯಕರ ಸಾಲಿನಲ್ಲಿ ತಾವೂ ಒಬ್ಬರು ಎಂದು ಪೋಜು ಕೊಡುತ್ತಿದ್ದ ಬೆಳ್ಳುಬ್ಬಿಯವರ ಉತ್ಸಾಹವನ್ನು ರೇಷ್ಮೆ ರುಮಾಲು ಅರೆಕ್ಷಣದಲ್ಲಿ ಕುಗ್ಗಿಸಿಬಿಟ್ಟಿತು.
'ಪಾಸ್' ಕೊಟ್ಟು ಫೇಲ್ ಆದರು!
ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಳೆದ ವಾರ ಖಾಸಗಿ ಚಾನೆಲ್ವೊಂದು ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ 'ಪಾಡುತಾ- ತಿಯಗಾ' ಎಂಬ ತೆಲುಗು ಕಾರ್ಯಕ್ರಮ ಏರ್ಪಡಿಸಿತ್ತು. ಈ ಕಾರ್ಯಕ್ರಮಕ್ಕೆ ಬರುವಂತೆ ಆಶ್ರಮದ ಸಾರ್ವಜನಿಕ ಸಂಪರ್ಕಾಧಿಕಾರಿಯೇ ಖುದ್ದು ಎಲ್ಲಾ ಮಾಧ್ಯಮ ಕಚೇರಿಗಳಿಗೆ ಹೋಗಿ ಆಹ್ವಾನಪತ್ರ ನೀಡಿದ್ದರು. ಅದರಂತೆ ಕಾರ್ಯಕ್ರಮದ ವರದಿಗೆಂದು ಹೋದ ಮಾಧ್ಯಮದವರಿಗೆ ಆಶ್ಚರ್ಯ- ಆಘಾತ ಎರಡೂ ಒಟ್ಟಿಗೆ ಆಯ್ತು. ಏಕೆಂದರೆ ಅಲ್ಲಿದ್ದ ಸ್ವಯಂಸೇವಕರು ಮಾಧ್ಯಮದವರನ್ನು ಒಳಬಿಡಲು ನಿರಾಕರಿಸಿದರು. ಈ ಕಾರ್ಯಕ್ರಮವನ್ನು ವರದಿ ಮಾಡುವಂತಿಲ್ಲ. ಫೋಟೋ, ವಿಡಿಯೋ ಮಾಡುವಂತಿಲ್ಲ ಎಂದು ತಡೆದರು. ಇದೊಳ್ಳೆ ಪಾಡಾಯಿತಲ್ಲ ಎಂದು ಮಾಧ್ಯಮದ ಮಂದಿ 'ಪಾಡುತಾ- ತಿಯಗಾ' ಕಾರ್ಯಕ್ರಮದ ಸಂಘಟಕರ ವಿರುದ್ಧ ತಿರುಗಿಬಿದ್ದರು. ಅವರೊಂದಿಗೆ ಇತರೆ ಕೆಲವರು ಸೇರಿಕೊಂಡು ಕನ್ನಡ ನೆಲದಲ್ಲಿ ತೆಲುಗು ಕಾರ್ಯಕ್ರಮ ಮಾಡುವುದಲ್ಲದೇ ನಮ್ಮನ್ನೇ ತಡೆಯುತ್ತೀರಾ ಎಂದು ಪ್ರಶ್ನಿಸಿದರು. ಆಗ ಪಾಸ್ ಕೊಟ್ಟಿದ್ದವರ ಪರಿಪಾಟಲು ಹೇಳತೀರದಾಗಿತ್ತು. ಪಾಸ್ ಕೊಟ್ಟಿದ್ದವರು ಫೇಲ್ ಆದವರಂತೆ ಅಲ್ಲಿಂದ ಕಾಲ್ಕಿತ್ತರು!
ಯಡಿಯೂರಪ್ಪ ಪಾದಯಾತ್ರೆಯಲ್ಲಿ ಅಪ'ಶ್ರುತಿ'
ಕಾವೇರಿ ನ್ಯಾಯಾಧೀಕರಣ ಐತೀರ್ಪು ಅಧಿಸೂಚನೆ ಹೊರಡಿಸುವುದನ್ನು ವಿರೋಧಿಸಿ ಮಾಜಿ ಸಿಎಂ, ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಳೆದ ವಾರ ಮೈಸೂರಿನಿಂದ ಪಾದಯಾತ್ರೆ ಆರಂಭಿಸಿದರು. ಇದೇ ಸರಿಯಾದ ಸಮಯ ಎಂದು ಚಿತ್ರನಟಿ ಶ್ರುತಿ ಕೆಜೆಪಿ ಸೇರಿಕೊಂಡು ಯಡಿಯೂರಪ್ಪ ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಅಂದ್ರು. ಯಾವುದೇ ಅಧಿಕಾರದ ಆಸೆ ಇಲ್ಲದೇ ಕೆಜೆಪಿ ಸೇರಿರುವುದಾಗಿ ಹೇಳಿಕೊಂಡರು. ಇದನ್ನು ಕೇಳಿದವರು ಶ್ರುತಿ ಕೂಡ ಮೈಸೂರಿನಿಂದ ಬೆಂಗಳೂರುವರೆಗೆ ಯಡಿಯೂರಪ್ಪ ಅವರ ಜೊತೆ ಪಾದಯಾತ್ರೆ ಮಾಡಬಹುದು ಎಂದುಕೊಂಡಿದ್ದರು. ಆದರೆ, ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಆರಂಭವಾದ ಪಾದಯಾತ್ರೆ ದೊಡ್ಡ ಗಡಿಯಾರ ತಲುಪುದರೊಳಗೆ ಶ್ರುತಿ ನಾಪತ್ತೆ! ಕೆಲವರು ಇದಕ್ಕೆ 'ಅಪಶ್ರುತಿ' ತೆಗೆದರೆ ಮತ್ತೆ ಕೆಲವರು ಹೇಳಿದ್ದು, ಎಲ್ರೂ ಪಾದಯಾತ್ರೆ ಮಾಡೋದು ಬಿಟ್ಟು ಶ್ರುತಿ ಅವರ ಪಕ್ಕದಲ್ಲಿ ಹೋಗುತ್ತಾ ಫೋಟೋ ತೆಗೆಸಿಕೊಳ್ಳಲು ಪೈಪೋಟಿ ನಡೆಸುತ್ತಿದ್ದರು. ಇದರಿಂದ ಅವ್ರು ಹೋದ್ರಂತೆ. ಜೈ ಕಾವೇರಿ!
ನಾಯಿ... ದುಷ್ಟಮೃಗಾನಾ?
ಮೊದಲೆಲ್ಲಾ ಮೈಸೂರು ನಗರಪಾಲಿಕೆಯ ಬಜೆಟ್ನಲ್ಲಿ 'ನಾಯಿಗಳು- ಕೋತಿಗಳ' ಹಾವಳಿ ನಿಯಂತ್ರಣಕ್ಕೆ ಎಂದು ಒಂದಷ್ಟು ಹಣ ಮೀಸಲಿಡುತ್ತಿದ್ದರು. ಆದರೆ, ಈ ಬಾರಿ ದುಷ್ಟ ಮೃಗಗಳ ನಿಯಂತ್ರಣಕ್ಕೆ 5 ಲಕ್ಷ ಮೀಸಲಿರಿಸಲಾಗಿದೆ! ಪಾಲಿಕೆ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಮಾಜಿ ಮೇಯರ್ ಸಂದೇಶ್ ಸ್ವಾಮಿ, ನಾಯಿ ದುಷ್ಟಮೃಗವೇ? ಎಂದು ಕೇಳಿದರು. ಮೈಸೂರಿಗೆ ಆನೆಗಳು ಬಂದಿವೆ. ಚಿರತೆಗಳು ಸೇರಿದಂತೆ ಇತರೆ ಪ್ರಾಣಿಗಳು ಬರುತ್ತಲೇ ಇವೆ. ಹೀಗಾಗಿ ದುಷ್ಟಮೃಗ ಎಂದು ಬದಲಿಸಿರಬೇಕು ಎಂದು ಕೆ.ವಿ. ಮಲ್ಲೇಶ್ ಹೇಳಿದಾಗ ಸಭೆಯಲ್ಲಿ ನಗುವಿನ ಅಲೆ.
-ನಂಬಿರಾಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

