ಅಫ್ಜಲ್ ಇವರ ಸಂಬಂಧಿಕನಾಗಿದ್ದನೇ?
ಅಫ್ಜಲ್ ಗುರು ಮರಣ ದಂಡನೆಗೂ ಆಕ್ಷೇಪವೇ? ಈತನೇನು ದೇಶದ ಸಾರ್ವಭೌಮತ್ವ ಉಳಿಸುವುಕ್ಕೆ ಹೋರಾಡಿದವನೇ? ರಾಜಕೀಯ ಹಾಗೂ ಅಭಿಪ್ರಾಯ ನಿರೂಪಕರ ಒಂದು ವರ್ಗ, ಅಫ್ಜಲ್ ಅಂತ್ಯಕ್ಕೆ ಪ್ರತಿಕ್ರಿಯಿಸುತ್ತಿರುವ ರೀತಿ ನೋಡಿ ಈ ಪ್ರಶ್ನೆ ಉದ್ಭವಿಸುತ್ತದೆ. ಸಂಸತ್ತಿನ ಮೇಲೆ ದಾಳಿಗೂ ಮುಂಚೆ ಅಫ್ಜಲ್ ಗುರು ಉಗ್ರರೊಂದಿಗೆ ಮೊಬೈಲ್ ಫೋನ್ನಲ್ಲಿ ಮಾತನಾಡಿರುವ ನಿಖರ ಸಾಕ್ಷ್ಯಗಳನ್ನು ಪರಿಗಣಿಸಿಯೇ ಆತನಿಗೆ ಗಲ್ಲಾಗಿದ್ದು. ಒಟ್ಟಿನಲ್ಲಿ ಗಲ್ಲಿಗೇರಿಸಿಬಿಡಬೇಕು ಎಂಬ ಉಮೇದಿದ್ದರೆ ಇದೇ ನ್ಯಾಯಾಂಗ ವ್ಯವಸ್ಥೆ ಗಿಲಾನಿಯನ್ನು ಬಿಡುಗಡೆ ಮಾಡುತ್ತಿರಲಿಲ್ಲ ಅಲ್ಲವೇ?
ಡಿಸೆಂಬರ್ 13 2001ರಂದು ಸಂಸತ್ತಿನ ಮೇಲಾದ ಗುಂಡಿನ ದಾಳಿಯ ಸಂಚು ರೂಪಿಸಿರುವ ಕಾರಣಕ್ಕೆ ಅವನಿಗೆ ದೆಹಲಿ ವಿಶೇಷ ನ್ಯಾಯಾಲಯ ಡಿಸೆಂಬರ್ 18 2002ರಂದು ಮರಣ ದಂಡನೆ ವಿಧಿಸಿತ್ತು. ಅದನ್ನು ಅಕ್ಟೋಬರ್ 29 2003ರಂದು ದೆಹಲಿ ಉಚ್ಛ ನ್ಯಾಯಾಲಯ ಎತ್ತಿಹಿಡಿದಿತ್ತು. ಕೊನೆಗೂ ಆಫ್ಜಲ್ನನ್ನು ಫೆಬ್ರವರಿ 9 ರಂದು ಬೆಳಿಗ್ಗೆ 8ಕ್ಕೆ ಗಲ್ಲಿಗೇರಿಸಲಾಯಿತು. ಗಲ್ಲಿಗೇರಿಸಿದರಿಂದ ದೇಶದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಆದರೆ ನಮ್ಮ ರಾಜಕಾರಣಿಗಳಲ್ಲಿ ಕೆಲವರು ಅದೇಕೊ ತಮ್ಮ ಸಂಬಂಧಿಕರು ತೀರಿಕೊಂಡಂತೆ ಬೇಸರದಲ್ಲಿದ್ದಾರೆ. ಕೆಲ ಪ್ರತಿಷ್ಟಿತ ರಾಜಕಾರಣಿಗಳು ಅಫ್ಜಲ್ ಗುರುವಿನ ಮರಣ ದಂಡನೆಯ ಕುರಿತು ಯೋಚಿಸಬಹುದಿತ್ತು ಎಂದರೆ ಮತ್ತೊಬ್ಬರು ಅಫ್ಜಲ್ ಗುರು ಈ ಪ್ರಕರಣದಲ್ಲಿ ನೇರ ಶಾಮಿಲಾಗಿಲ್ಲದ ಕಾರಣ ಅವನನ್ನು ಮರಣ ದಂಡನೆಗೆ ಗುರಿಪಡಿಸಬಾರದಿತ್ತು ಮತ್ತು ನಾನು ಅವನ ಮನೆಯವರಿಗೆ ಸಾಂತ್ವಾನ ಹೇಳಿದ್ದೇನೆ ಎಂದಿದ್ದಾರೆ. ಅಷ್ಟಕ್ಕೂ ಅಫ್ಜಲ್ ಗುರು ಯಾರು? ಅವನೇನು ದೇಶಕ್ಕಾಗಿ ಹೋರಾಡಿದ ಯೋಧನೇ ಅಥವಾ ಶಾಂತಿದೂತನೇ? ಯಾವುದೂ ಬೇಡ, ಅವನೇನು ನಿಮ್ಮ ಸಂಬಂಧಿಕನೇ? ಅವನ ಪರವಾಗಿ ಮರುಕ ತೋರಿಸುವ ನೀವು ನಿಜವಾಗಿಯೂ ಭಾರತೀಯರೇ?
RTI Act ಇಂದ ಬಂದ ವರದಿಯ ಪ್ರಕಾರ 11 ಪತ್ರಗಳು ಅಫ್ಜಲ್ ಗುರುನನ್ನು ಮರಣ ದಂಡನೆಗೆ ಒಳಪಡಿಸದೆ ಕ್ಷಮಾದಾನ ನೀಡುವಂತೆ ಕೋರಿ ಬರೆದದ್ದಾಗಿದೆ. ಅದೃಷ್ಟವಶಾತ್ ನಮ್ಮ ರಾಷ್ಟ್ರಪತಿಗಳು ಅದನ್ನು ತಮ್ಮ ಸ್ವಂತ ಬುದ್ಧಿ ಉಪಯೋಗಿಸಿ ತಿರಸ್ಕರಿಸಿದ್ದರು. ಪತ್ರ ಬರೆದ್ದಿದ್ದರಲ್ಲಿ ಪ್ರಮುಖ ರಾಜಕಾರಣಿಗಳೂ ಇದ್ದಾರೆ ಅವರ ಹೆಸರನ್ನು ಬಹಿರಂಗಪಡಿಸಲಾಗುವುದಿಲ್ಲವೆಂದು RTI ಹೇಳಿದೆ. ಕಸಬ್ನ ವಿಚಾರದಲ್ಲೂ ಸಹ ಬಹಳಷ್ಟು ಮಂದಿ ಪ್ರಮುಖ ರಾಜಕಾರಣಿಗಳು ಕಸಬ್ಗೆ ಪ್ರಾಣಭಿಕ್ಷೆ ಕೋರಿ ರಾಷ್ಟ್ರಪತಿಗೆ ಪತ್ರ ರವಾನಿಸಿದ್ದರು. ಸುಮಾರು 200 ಪತ್ರಗಳು ಬಂದಿದ್ದವು ಎಂಬ ಸಂಗತಿಯೂ ಮಾಹಿತಿ ಹಕ್ಕಿನ ಮೂಲಕವೇ ಬೆಳಕಿಗೆ ಬಂದಿದೆ.
ಹಾಗಿದ್ದರೆ ಕಸಬ್ನನ್ನು ಹಿಡಿಯುವ ಸಲುವಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಕಾನ್ಸ್ಟೇಬಲ್ ತುಕರಾಮ್ ಓಂಬ್ಳೆಯ ನೆನಪೂ ಸಹ ಬರಲಿಲ್ಲವೇ? ತುಕರಾಮ್ ಓಂಬ್ಳೆಯ ಶಿಫ್ಟ್ ಅಂದು ಮಧ್ಯಾಹ್ನವೇ ಮುಗಿದಿತ್ತು. ಆದರೂ ದಾಳಿಯ ವಿಷಯ ತಿಳಿದೊಡನೆ ಯುನಿಫಾರ್ಮ್ ಏರಿಸಿಕೊಂಡು ಧಾವಿಸಿ ಬಂದು ಅವನ ಪ್ರಾಣವನ್ನೇ ಮುಡಿಪಾಗಿಟ್ಟನಲ್ಲ, ಅವನಿಗೇನು ಡ್ಯುಟಿ ಮುಗಿದರೂ ಬರುವ ಹುಚ್ಚಿತ್ತೇ? ನಮ್ಮ ರಾಜಕಾರಣಿಗಳಿಗೆ ಕೆಲಸದ ಬೆಲೆ ತಿಳಿದೀತಾದರೂ ಹೇಗೆ?
ಇಂಥ ಅಫ್ಜಲ್ಗಳು ಕಾಶ್ಮೀರದಲ್ಲಿ ಸೃಷ್ಟಿಸಿದ ಸನ್ನಿವೇಶಗಳಿಂದ ಎಷ್ಟು ಮಂದಿ ಪ್ರಾಣ ಕಳೆದುಕೊಳ್ಳಬೇಕಾಯಿತು, ಎಷ್ಟು ಮಂದಿ ತಾಯ್ನೆಲ ತೊರೆಯಬೇಕಾಯಿತು? ರಾಜಕಾರಣಿಗಳು ಆ ಉಗ್ರಗಾಮಿಗಳ ಪರವಾಗಿ ಪತ್ರ ಬರೆಯುವ ಬದಲು ಕಾಶ್ಮೀರದಲ್ಲಿ ಸಾಯುತ್ತಿದ್ದ ಕುಟುಂಬಗಳಿಗೆ ಖುದ್ದಾಗಿ ಹೋಗಿ ಸಾಂತ್ವನ ಹೇಳಿದರೆ ಹುಟ್ಟಿದ್ದಕ್ಕೂ ಮತ್ತು ರಾಜಕಾರಣಿಗಳಾಗಿದ್ದಕ್ಕೂ ಸಾರ್ಥಕವಾಗುತ್ತಿತ್ತು. ಅಷ್ಟಕ್ಕೂ ಮೋದಿಯವರು ಮಾಡಿದ್ದೂ ಇದನ್ನೆ, ಅದು ಜನರ ಕಣ್ತೆರೆಸುವ ಕಾರ್ಯ. ವಾಸ್ತವದಲ್ಲಿ ಮೋದಿ ಅಲೆ ಏಳುತ್ತಿರುವುದರ ಬಗ್ಗೆ ಎಚ್ಚೆತ್ತುಕೊಂಡ ಕೈ ಸರ್ಕಾರ ಕೆಲ ಕ್ಷಿಪ್ರ ಕಾರ್ಯಾಚರಣೆಗಳಿಗೆ ಮುಂದಾಗುತ್ತಿದೆಯಷ್ಟೆ ಎನಿಸದೇ? ಇಲ್ಲದ್ದಿದ್ದರೆ ಅಷ್ಟು ಪ್ರಮುಖ ರಾಜಕಾರಣಿಗಳ ಪತ್ರಗಳನ್ನೂ ತಿರಸ್ಕರಿಸಿ ಮತ್ತು ಇಷ್ಟು ವರ್ಷವಿಲ್ಲದ ಅವರ ನಿರ್ಧಾರ ದಿಢೀರ್ ಜಾರಿಗೊಳ್ಳಲು ಕಾರಣವೇನು? ಯೋಚಿಸುವುದು ಒಳಿತಲ್ಲವೇ?
- ಚಿರಂಜೀವಿ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

