Hmmm... ಪಾಂಚ್ 'ನೆನಪಿರಲಿ' ಪ್ರೇಮ್.
- 'ನೆನಪಿರಲಿ' ಪ್ರೇಮ್ ಅಂತ ಫೇಮಸ್ ಆಗಿದ್ದಕ್ಕೆ, ಎಲ್ಲ ಹಳೇ ನೆನಪುಗಳನ್ನು ಕೆದಕೋ 'ಚಾರ್‌ಮಿನಾರ್' ಸಿನಿಮಾ ಮಾಡಿದ್ರಾ?
ಹಂಗೇನಿಲ್ಲ, ಜನಕ್ಕೆ 'ನೆನಪಿರಲಿ' ಪ್ರೇಮ್ ಹೆಸರು ಮರೆತುಹೋಗೋಕೆ ಬಿಡಬಾರ್ದು ಅನ್ನೋದಷ್ಟೇ ನನ್ನ ಉದ್ದೇಶ ಆಗಿತ್ತು.
- ಶೂಟಿಂಗ್ ಟೈಮಲ್ಲಿ ಹತ್ರ ಬಂದ್ರೆ ಸೆಂಟ್ ಪರಿಮಳನೂ ಬರೊಲ್ಲ ಎನ್ನುವಷ್ಟು ಡೀಸೆಂಟ್ ನೀವು ಅಂತ ನಿಮ್ಮ ನಾಯಕಿಯರು ಕಂಪ್ಲೇಂಟ್ ಮಾಡ್ತಾರಂತೆ?
ಅದು ಸೆಂಟ್ ಪರ್ಸೆಂಟ್ ಅವರ ಸೆಂಟಿಮೆಂಟಲ್ ಕಾಮೆಂಟ್.
- ಗಡ್ಡ ಮೀಸೆ ತೆಗೆದ್ರೆ ಚೆನ್ನಾಗ್ ಕಾಣ್ತೀರ ಅಂತಾರೆ ನಿಮ್ಮ ಅಭಿಮಾನಿಗಳು, ಆದ್ರೂ ಆಗಾಗ ಗಡ್ಡ ಬಿಡೋದ್ ಯಾಕೆ?
ಕಟ್ ಮಾಡಿದ್ರೆ, ಗಡ್ಡ ಕೆರ್ಕೊಳೋಕ್ಕೂ ಪುರಸೊತ್ತಿಲ್ಲ ಅನ್ನುವಷ್ಟು ಅವಕಾಶಗಳಿವೆ ಅಂತ ಹೇಳ್ಕೊಳ್ಳೊಕಾಗಲ್ವಲ್ಲಾ..
- ಈ ಸಿನಿಮಾದಲ್ಲೂ ನಿಮ್ಮ ಹಳೆ ಗರ್ಲ್‌ಪ್ರೆಂಡ್‌ಗೆ 'ಮತ್ತೆ' ಬನ್ನಿ ಪ್ರೀತ್ಸೋಣ' ಅಂತಿದೀರಲ್ಲ, ರಿಪೀಟ್ ಆಡಿಯೆನ್ಸ್ ಬರ್ಲಿ ಅಂತಾನಾ?
ಪ್ರೇಕ್ಷಕರಿಗೆ 'ಒಮ್ಮೆ ನೋಡದಿದ್ರೆ' ಮತ್ತೊಮ್ಮೆ ನೋಡುವ ಅವಕಾಶ ಕೊಡೋಣಾ ಅಂತ.
- ಪ್ರೇಮ ಅಂದ್ರೆನೇ ಕನ್‌ಫ್ಯೂಷನ್. ಅಂಥಾದ್ರಲ್ಲಿ ಕನ್ನಡ ಸಿನಿಮಾದಲ್ಲಿ ಇಬ್ಬಿಬ್ರು ಪ್ರೇಮ್‌ಗಳಿದ್ದೀರಾ, ನಿಮಗೂ ಅವರಿಗೂ ಏನು ವ್ಯತ್ಯಾಸ?
ಅಮ್ಮನ ಸೆಂಟಿಮೆಂಟ್ ಜಾಸ್ತಿ ಇರೋ ಅವರು 'ಲಾಲಿ' ಸ್ಟಾರು, ಲವರ್‌ಬಾಯ್ ಆಗಿರೋ ನಾನು 'ಲವ್'ಲೀ ಸ್ಟಾರ್, ಅವರು ಪ್ರೇಮ್‌ಜೋಗಿ, ನಾನು ಪ್ರೇಮ್‌ರೋಗಿ.
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ನಿಮ್ಮ ಹವ್ಯಾಸಗಳೇನು ಅಂದ್ರೆ ಸ್ಟ್ಯಾಂಪ್ ಕಲೆಕ್ಟಿಂಗು, ಲಿಸನಿಂಗ್ ಟು ಮ್ಯೂಸಿಕ್, ಕ್ರಿಕೆಟ್, ಸಿನಿಮಾ ಅನ್ನೋದು ಮೋಸ್ಟ್ ಕಾಮನ್ ಉತ್ತರಗಳು. ಆದರೆ ಇತ್ತೀಚಿನ ಯುವಪೀಳಿಗೆಯ ಹಾಬಿಗಳ ಲಿಸ್ಟ್‌ನಲ್ಲಿ ಹೆಚ್ಚು ಕಾಣಸಿಗುವ ಹೊಸ ಕೆಟಗರಿ ಎಂದರೆ ಟ್ರೆಕ್ಕಿಂಗ್. ಎರಡು ದಿನಗಳ ರಜೆ ಸಿಕ್ಕರೆ ತಮ್ಮ ಊರಿನ ಸುತ್ತಮುತ್ತಲಿನ ಬೆಟ್ಟ, ಗುಡ್ಡ, ಕಾಡು, ನದಿ, ಕಣಿವೆಗಳ ಅನ್ವೇಷಣೆಗೆ ಗೆಳೆಯರ ಗುಂಪು ಹೊರಡುತ್ತದೆ. ಆದರೆ ಪೂರ್ವತಯಾರಿ ಇಲ್ಲದೆ ಹೊರಟರೆ ಟ್ರೆಕ್ಕಿಂಗ್‌ನ ದಾರಿ, ಕೆಲವೊಂದು ಅನಿರೀಕ್ಷಿತ ತೊಂದರೆಗಳಿಗೆ ದಾರಿ ಮಾಡಿಕೊಡಬಹುದು. ಹಾಗಾಗಿ ನಿಮಗೂ ಟ್ರೆಕ್ಕಿಂಗ್ ಹೋಗುವ ಆಸಕ್ತಿ ಇದ್ದರೆ ಆ ಬಗ್ಗೆ ಒಂದಿಷ್ಟು ನಿಖರ ಮಾಹಿತಿ ಇರುವುದು ಉತ್ತಮ. ಅಂಥ ಕೆಲವು ಸಹಾಯಕರ ಮಾಹಿತಿ ನಿಮಗಿಲ್ಲಿ ಸಿಗಬಹುದು.
http://bit.ly/WLBBvU, http://bit.ly/XZYgE3, http://bit.ly/TYrl4W, http://bit.ly/12crel8, http://bit.ly/150Pc7e
ಹರಿ-ಕಥೆ
ದೇಶದಲ್ಲಿ ಟೆರರಿಸ್ಟ್‌ಗಳ ಜಾಸ್ತಿ ಆಗಿ ಪೊಲೀಸ್ ಇಲಾಖೆಯಿಂದ ಎಲ್ಲ ನಾಗರಿಕರಿಗೂ ಒಂದು ಓಪನ್ ಆಫರ್ ಕೊಡಲಾಯಿತು. ಒಬ್ಬ ಟೆರರಿಸ್ಟ್‌ನ ಹಿಡ್‌ಕೊಂಡ್ ಬಂದವರಿಗೆ 1 ಲಕ್ಷ ರುಪಾಯಿ ಬಹುಮಾನ ಅಂತ. ರಾಮು ಮತ್ತು ಖೇಮು, ಫುಲ್ ಖುಷಿಯಾಗಿ ಪೊಲೀಸ್ ಕಮಿಷನರ್ ಹತ್ರ ಹೋಗಿ, ಮಾತಾಡಿ ಒಂದಷ್ಟು ಟಿಪ್ಸ್ ತಗೊಂಡು ಲಕ್ಷ ದುಡಿಯೋ ಕೆಲಸ ಮಾಡೋಣ ಅಂತ ಹೊರಟ್ರು. ಒಂದಿನ ಅಲ್ಲೆಲ್ಲೋ ಊರ ಹೊರಗೆ ಟೆರರಿಸ್ಟ್‌ಗಳು ಅಡಗಿಕೊಂಡಿದಾರೆ ಅನ್ನೋ ಮಾಹಿತಿ ಸಿಕ್ಕಿತು ಖೇಮುಗೆ. ತಕ್ಷಣ, ರಾಮುನ ಎಬ್ಬಿಸಿಕೊಂಡು ಕರಕೊಂಡು ಅಲ್ಲಿಗೆ ಹೋದ. ಅಲ್ಲಿ ನೋಡಿದರೆ ಒಬ್ಬ ಟೆರರಿಸ್ಟ್ ಕೈಯಲ್ಲಿ ಗನ್ ಹಿಡಿದುಕೊಂಡು ಕತ್ತಲಲ್ಲಿ ಅಡಗಿಕೊಂಡಿದ್ದ. ರಾಮು, ಖೇಮು ಇಬ್ರೂ ಮೆಲ್ಲಗೆ ಅವನ ಹಿಂದಿನಿಂದ ಹೋಗಿ ಗಬಕ್ಕನೆ ಅವನನ್ನು ಹಿಡಿದುಕೊಂಡರು. 'ಸಿಕ್ತಲ್ಲಾ ಒಂದು ಲಕ್ಷ' ಎಂದು ಒಬ್ಬರ ಮುಖ ಒಬ್ಬರು ನೋಡಿಕೊಂಡು ಖುಷಿಯಾಗಿ ಆ ಟೆರರಿಸ್ಟ್‌ನ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿಹಾಕತೊಡಗಿದರು. ಇದ್ದಕ್ಕಿದ್ದಂತೆ ಅವರ ಹಿಂದೆ ಏನೋ ಸರಸರನೆ ಸದ್ದಾಯಿತು. ತಲೆ ಎತ್ತಿ ನೋಡಿದರೆ ಇವರ ಸುತ್ತ ಕೈಯಲ್ಲಿ ಗನ್ ಹಿಡಿದ ಟೆರರಿಸ್ಟ್‌ಗಳ ಒಂದು ಗುಂಪೇ ನಿಂತು, ಇವರತ್ತಲೇ ನೋಡುತ್ತಿತ್ತು. ಅಷ್ಟೊಂದು ಜನರನ್ನೂ ಒಂದು ಕ್ಷಣ ನೋಡಿದ ಖೇಮು ಮುಖದಲ್ಲಿ ಖುಷಿಯ ಛಾಯೆ ಇನ್ನಷ್ಟು ಹೆಚ್ಚಾಗತೊಡಗಿತು. ಆದರೆ, ಇವನ ಮುಖ ನೋಡಿದ ರಾಮುಗೆ ಕನ್‌ಫ್ಯೂಷನ್ನು. ಅಷ್ಟರಲ್ಲಿ, ಹೋದವಾರ ತಾನೇ 'ದಿ ಪವರ್ ಆಫ್ ಪಾಸಿಟಿವ್ ಥಿಂಕಿಂಗ್' ಪುಸ್ತಕ ಓದಿದ್ದ ಖೇಮು, ರಾಮುವಿನತ್ತ ನೋಡಿ ಹೇಳಿದ, 'ನೋಡ್ಲಾ, ಹೆಂಗದೆ ನಮ್ ಅದೃಷ್ಟ, ಒಂದು ಲಕ್ಷ ಸಿಗುತ್ತೆ ಅಂದ್ಕೊಂಡು ಬಂದ್ವಿ, ಆದ್ರೆ ಇವತ್ತು ಏನಂದ್ರೂ 25-30 ಲಕ್ಷಕ್ಕೆ ಮೋಸ ಇಲ್ಲ ಅನ್ಸುತ್ತೆ, ಅಲ್ವಾ?'
ಸ್ಯಾಂಡಲ್‌ವುಡ್
ಈ ವಾರ ಬಿಡುಗಡೆಯಾದ ಎರಡು ಚಿತ್ರಗಳಲ್ಲಿ ಒಂದು ಹೋಲಿಕೆ ಇದೆ. ಎರಡೂ ಚಿತ್ರದ ಪ್ರಮುಖ ಅಚ್ಚರಿ ಎಂದರೆ ಚಿತ್ರದ ಪ್ರಮುಖ ಪಾತ್ರಧಾರಿಗಳ ಅಂಗವೈಕಲ್ಯ. ಆದರೆ 'ಚಾರ್‌ಮಿನಾರ್' ಮತ್ತು 'ಗೊಂಬೆಗಳ ಲವ್' ಎಂಬ ಈ ಎರಡೂ ಚಿತ್ರಗಳಲ್ಲಿ ಬೇರೆ ಯಾವ ಭಾಗಗಳೂ ವೈಕಲ್ಯದಿಂದ ಸೊರಗುವುದಿಲ್ಲ ಎಂಬುದು ಅಚ್ಚರಿ ಮತ್ತು ಖುಷಿಯ ಸಂಗತಿ. ತಾಜ್‌ಮಹಲ್‌ನಿಂದ ಚಂದ್ರು ಚಿತ್ರಗಳ ಫ್ಲೇವರ್ ಇಷ್ಟಪಟ್ಟಿದ್ದ ಕನ್ನಡ ಪ್ರೇಕ್ಷಕರಿಗೆ ಚಾರ್‌ಮಿನಾರ್‌ನಲ್ಲಿ ಅವರು ಮತ್ತೆ, ಮನೆ ಊಟ, ಹಳ್ಳಿ ತಿಂಡಿಯ ರುಚಿ ತೋರಿಸಿದ್ದಾರೆ. ತಾಜ್‌ಮಹಲ್‌ನ ನಂತರ ಮತ್ತೆ ಯಾವಾಗ ಅಂಥ ಚಿತ್ರ ಕೊಡುತ್ತೀರಿ ಎನ್ನುತ್ತಿದ್ದ ಅವರ ಅಭಿಮಾನಿಗಳನ್ನು ಚಂದ್ರು ತೃಪ್ತಿಪಡಿಸಿದ್ದಾರೆ. ಇನ್ನು ಹೊಸಬರ ಚಿತ್ರ ಎಂಬ ಹಣೆಪಟ್ಟಿಯೊಂದಿಗೆ ಬಂದಿರುವ ಸಂತೋಷ್ ನಿರ್ದೇಶನದ 'ಗೊಂಬೆಗಳ ಲವ್' ನೋಡಿ ಹೊರಬಂದವರು ಅದನ್ನು ಹೊಸಬರ ಚಿತ್ರ ಎಂದು ಖಂಡಿತಾ ಒಪ್ಪಿಕೊಳ್ಳಲಾರರು. ನಮ್ಮ ಬಹುತೇಕ ಹೊಸಬರ ಚಿತ್ರಗಳಲ್ಲಿ ಅಭಿನಯ ಬಾರದ ಚಿತ್ರದ ನಾಯಕ ನಾಯಕಿಯರೇ ಗೊಂಬೆಗಳಂತೆ ಕಾಣುವುದನ್ನು ನೋಡಿ ಅಭ್ಯಾಸವಾಗಿರುವ ಪ್ರೇಕ್ಷಕರ ಈ ಚಿತ್ರದ ಪಾತ್ರಗಳನ್ನು ನೋಡಿ 'ಜೀವ ಬಂದ ಬೊಂಬೆಯೇ' ಎಂದು ಹಾಡುತ್ತಾನೆ. ಅಂತೂ ಕನ್ನಡ ಪ್ರೇಕ್ಷಕರಿಗೆ ಬಹಳ ದಿನಗಳ ನಂತರ ಒಂದೇ ಶುಕ್ರವಾರ ಎರಡು ಮನಸ್ಸಿಗೆ ಮುಟ್ಟುವ ಚಿತ್ರಗಳನ್ನು ನೋಡುವ ಅಪರೂಪದ ಅವಕಾಶ. ಚಂದನವನ ಹೊಳೆಯುತ್ತಿದೆ ಎನಿಸುವಂಥ ಈ ಅನುಭವ ಕೊಟ್ಟ ನಿರ್ದೇಶಕರಾದ ಆರ್.ಚಂದ್ರು ಮತ್ತು ಸಂತೋಷ್ ಅವರಿಗೊಂದು ಥ್ಯಾಂಕ್ಸ್ ಹೇಳಬಹುದು.
ಡಬ್ಕುಡಬಲ್ ತುದಾಂಡಲ್...
- ರಜನೀಕಾಂತ್ ಕಂಡಕ್ಟರ್ ಪಾತ್ರದಲ್ಲಿ ಅಭಿನಯಿಸೋ ಸಿನಿಮಾಗೆ ಹೆಸರು
'ಸೀಟಿ' ನನ್ನ ಜೋಡಿ
- ವೈರುಧ್ಯ
ಅಣ್ಣಾವ್ರು 'ಅಭಿಮಾನಿಗಳನ್ನ ದೇವರು' ಅಂತಿದ್ರು,
ಆದ್ರೆ ಇಂದಿನ ಕೆಲವು ನಟರು ಅಭಿಮಾನಿಗಳನ್ನ ಕಂಡರೆ ಮೈ ಮೇಲೇ ದೇವರು ಬಂದಂ'ಗಾಡ್'ತಾರಂತೆ!
-'ಬಂಗಾರಿ' ಸಿನಿಮಾ ನಿರ್ಮಾಪಕ ಎಲ್ಲಪ್ಪ ಅವರ ಬಗ್ಗೆ ಹುಟ್ಟಿಕೊಂಡಿರುವ ಜೋಕು
ಎಲ್ಲಪ್ಪಂದೇ ದುಡ್ಡು, ಇನ್ಯಾರ್‌ದೋ ಜಾತ್ರೆ!
- ನಟಿ ನಮಿತಾ ಬಗ್ಗೆ ಒಂದು ಫ್ಯಾಕ್ಟು
ತುಂಬಿದ ನಡ ಬಳುಕೋದಿಲ್ಲ!
- ಐಂದ್ರಿತಾ ರೇ ಮಾಲೀಕತ್ವದ ಕರಕುಶಲ ವಸ್ತುಗಳ ಅಂಗಡಿಗೆ ಹೆಸರು
ಆ್ಯಂಡಿಕ್ರಾಫ್ಟ್!
ಪೋಸ್ಟ್‌ಮಾಡೋ ಅಂತ ಲೆಟರ್ಸ್ ಕೊಟ್ರೆ ಊರೆಲ್ಲಾ ತಿರುಗಿದ ಗುಂಡ ಸಂಜೆ ಆ ಲೆಟರ್ಸ್‌ಗಳನ್ನ ವಾಪಸ್ ತಗೊಂಡ್ ಬಂದ. 'ಯಾಕೋ ಊರಲ್ಲಿ ಯಾವುದೂ ಪೋಸ್ಟ್‌ಬಾಕ್ಸ್ ಸಿಗಲಿಲ್ವಾ ನಿಂಗೆ?' ಅಂತ ಕೇಳಿದ್ದಕ್ಕೆ ಹೇಳಿದ 'ಪೋಸ್ಟ್ ಬಾಕ್ಸ್‌ಗಳೇನೋ ಸಿಕ್ವು, ಆದ್ರೆ ಎಲ್ಲಾ ಬೀಗ ಹಾಕಿದ್ವು'
ಬಸ್ ಹತ್ತೋಕೆ ಮುಂಚೆ ಗುಂಡ ಮತ್ತು ಕಂಡಕ್ಟರ್‌ನ ಪ್ರಶ್ನೋತ್ತರ
'ಬಸ್‌ನಲ್ಲಿ ಸೀಟ್ ಇದಾವ?
'ಸೀಟ್ ಇದಾವೆ. ಆದ್ರೆ ಜನ ಕೂತ್ಕೊಂಡಿದಾರೆ'.
-ಹರಿ
harikannadaprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

