ಅಂಕಣಗಳು

ಸರ್ಕಾರ ಸಹಕರಿಸದಿದ್ದರೆ ರಾಜ್ಯಪಾಲರ ಮೊರೆ

Published On :

-ಎಸ್.ಆರ್.ಚಿಕ್ಕಮಠ್, ರಾಜ್ಯ ಚುನಾವಣಾ ಆಯೋಗದ ಆಯುಕ್ತ

-    ಎರಡು ಸಂವಿಧಾನಾತ್ಮಕ ಸಂಸ್ಥೆಗಳ ನಡುವೆ ಈಗ ಬಿಕ್ಕಟ್ಟು ಸೃಷ್ಟಿಯಾಗಿದೆ. ಪಟ್ಟು ಸಡಿಲಿಸಲು ಒಪ್ಪದ ನಿಮ್ಮ ಬಲದ ಹಿಂದಿನ ಗುಟ್ಟೇನು?
ಸಂವಿಧಾನ ನನಗೆ ಒಪ್ಪಿಸಿರುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲು ಮುಂದಾಗಿದ್ದೇನೆ. ಇದರಲ್ಲಿ ಗುಟ್ಟೇನು ಇಲ್ಲ. ಸಂವಿಧಾನದ 243ಕೆ ವಿಧಿ ಮತ್ತು 73ನೇ ತಿದ್ದುಪಡಿ ಪ್ರಕಾರ ಎಲ್ಲ ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ರಾಜ್ಯ ಚುನಾವಣಾ ಆಯೋಗವನ್ನು ಸೃಷ್ಟಿಸಿವೆ. ಇದಕ್ಕೆ ಆಯುಕ್ತರನ್ನು ಸಂಬಂಧಪಟ್ಟ ರಾಜ್ಯದ ರಾಜ್ಯಪಾಲರು ನೇಮಕ ಮಾಡಬೇಕು. ನಾನು ರಾಜ್ಯಪಾಲರಿಂದ ನೇಮಕಗೊಂಡವನೇ ಹೊರತು ಸರ್ಕಾರದಿಂದ ಅಲ್ಲ. ಸಂವಿಧಾನದ ಪ್ರಕಾರ ನನಗೆ ಹೈಕೋರ್ಟ್ ನ್ಯಾಯಾಧೀಶರ ಸ್ಥಾನಮಾನ ಇರುವುದರಿಂದ ನನ್ನನ್ನು ರಾಜ್ಯ ಸರ್ಕಾರ ಕಿತ್ತು ಹಾಕುವುದು ಅಸಾಧ್ಯ. ಹೇಗೆ ಹೈಕೋರ್ಟ್ ನ್ಯಾಯಾಧೀಶರನ್ನು ಹುದ್ದೆಯಿಂದ ಇಳಿಸಲು ಸಂಸತ್ತು ಮಹಾಭಿಯೋಗ ಪ್ರಕ್ರಿಯೆ ನಡೆಸಬೇಕಾಗುತ್ತದೋ ನನ್ನ ಬದಲಾವಣೆಗೂ ಅದೇ ಕ್ರಮ ಅಗತ್ಯ. ಮಾತ್ರವಲ್ಲ ರಾಜ್ಯ ಚುನಾವಣಾ ಆಯೋಗ ತನ್ನ ವ್ಯಾಪ್ತಿಯಲ್ಲಿ ಚುನಾವಣೆ ನಡೆಸುವುದಕ್ಕೆ ಸಂದರ್ಭ ಬಂದಾಗ ರಾಜ್ಯಪಾಲರ ನೆರವನ್ನೂ ಕೇಳಬಹುದು ಎಂದು ಸಂವಿಧಾನದಲ್ಲೇ ಹೇಳಲಾಗಿದೆ.

-    ಅಂದರೆ ನೀವು ಈ ಪ್ರಕರಣದಲ್ಲಿ ರಾಜ್ಯಪಾಲರ ನೆರವು ಕೇಳುತ್ತೀರಾ ?
ನನ್ನ ಮಾತಿನ ಅರ್ಥ ಹಾಗಲ್ಲ. ಒಂದೊಮ್ಮೆ ಸರ್ಕಾರ ನಿಗದಿತ ಸಮಯದಲ್ಲಿ ಚುನಾವಣೆ ನಡೆಸುವುದಕ್ಕೆ ಅಗತ್ಯ ಸಹಕಾರ ನೀಡದೇ ಇದ್ದರೆ ಆಗ ನಾನು ರಾಜ್ಯಪಾಲರ ಮೊರೆ ಹೋಗಬಹುದು. ಅದಕ್ಕೆ ಸಂವಿಧಾನದ ಪ್ರಕಾರ ಅವಕಾಶವಿದೆ. ಸಂವಿಧಾನ ವಿಧಿಸಿದ ಕರ್ತವ್ಯವನ್ನು ಆಯೋಗ ಚಾಚೂ ತಪ್ಪದೆ ನಿರ್ವಹಿಸುತ್ತಿದೆ. ಅದಕ್ಕೆ ಅಡ್ಡಿ ಬಂದಾಗ ಸಂವಿಧಾನವೇ ತೋರಿದ ಮಾರ್ಗೋಪಾಯವನ್ನು ನಾನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

-    ಹಾಗಾದರೆ ಇಂಥ ಬಿಕ್ಕಟ್ಟು ತಲೆದೋರಿರುವಾಗ ರಾಜ್ಯಪಾಲರನ್ನು ಸಂಪರ್ಕಿಸಬಹುದಿತ್ತಲ್ಲ ?
ಇಲ್ಲ, ನಾನು ಈಗಾಗಲೇ ರಾಜ್ಯಪಾಲರನ್ನು ಭೇಟಿ ಮಾಡಿದ್ದೇನೆ.
-    ನಿಮ್ಮಿಬ್ಬರ ಚರ್ಚೆಯ ಬಗ್ಗೆ ಕೇಳಬಹುದಾ?

ನಾನು ಕೆಲ ದಿನಗಳ ಹಿಂದೆ ರಾಜ್ಯಪಾಲರನ್ನು ಭೇಟಿ ಮಾಡಿದ್ದೆ. ಇಲ್ಲಿಯವರೆಗೆ ನಡೆದ ಎಲ್ಲ ಬೆಳವಣಿಗೆಗಳು, ಕಾನೂನು ಹೋರಾಟಗಳು, ಸಂವಿಧಾನಾತ್ಮಕವಾಗಿ ಆಯೋಗ ಮಾಡಬೇಕಾದದ್ದು ಏನು? ಎಂಬೆಲ್ಲ ವಿಚಾರಗಳನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ರ ಬಳಿ ನಿವೇದಿಸಿಕೊಂಡಿದ್ದೇನೆ. ಸಂವಿಧಾನಾತ್ಮಕ ಜವಾಬ್ದಾರಿ ಹೊಂದಿರುವ ನೀವು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ತೀರ್ಪು, ಸಂವಿಧಾನಬದ್ದ ಕರ್ತವ್ಯವನ್ನು ನಿರ್ವಹಿಸಿ. ಗೋ ಅಹೆಡ್ ವಿತ್ ದಿ ಲಾ ಎಂದು ರಾಜ್ಯಪಾಲರು ಸೂಚಿಸಿದ್ದಾರೆ.

-    ಹಾಗಾದರೆ ಸರ್ಕಾರ ಮತ್ತು ಆಯೋಗದ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದ್ದು ಎಲ್ಲಿಂದ?
ನನ್ನ ಪ್ರಕಾರ ಯಾವುದೇ ಬಿಕ್ಕಟ್ಟು ಸೃಷ್ಟಿಯಾಗಿಲ್ಲ. ಕಿಶನ್‌ಸಿಂಗ್ ತೋಮರ್/ ಅಹಮದಾಬಾದ್ ನಗರ ಪಾಲಿಕೆ ಪ್ರಕರಣದಲ್ಲಿ (19-6-2006 ) ಸುಪ್ರೀಂ ಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್, ನ್ಯಾ.ಮೂ ಎಸ್.ಎಚ್.ಕಪಾಡಿಯಾ, ಸಿ.ಕೆ.ಥಕ್ಕರ್, ಪಿ.ಕೆ.ಬಾಲಸುಬ್ರಹ್ಮಣ್ಯನ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್‌ನ ಪೂರ್ಣಪೀಠ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಮಹತ್ವದ ತೀರ್ಪು ನೀಡಿದೆ. ಅದರ ಪ್ರಕಾರ ಯಾವುದೇ ರಾಜ್ಯದ ಚುನಾವಣಾ ಆಯೋಗ ಅತಾರ್ಕಿಕ ಕಾರಣಗಳನ್ನು ಆಧರಿಸಿ ಸಕಾಲಕ್ಕೆ ಚುನಾವಣೆಯನ್ನು ನಡೆಸದೇ ಸುಮ್ಮನೆ ಇರುವಂತಿಲ್ಲ. (State Election commission shall not put forward any excuse based on unreasonable grounds that the election could not be completed in time ) ಮಾತ್ರವಲ್ಲ ಆಯೋಗ ನಗರ ಸ್ಥಳೀಯ ಸಂಸ್ಥೆಗಳ ಐದು ವರ್ಷಗಳ ಅಧಿಕಾರಾವಧಿ ಮುಗಿಯುವುದಕ್ಕೆ ಮುನ್ನವೇ ಚುನಾವಣೆ ನಡೆಸುವುದಕ್ಕೆ ಪ್ರಯತ್ನ ಆರಂಭಿಸಬೇಕು. ಜತೆಗೆ ಸ್ಥಾಪಿತ ಹಿತಾಸಕ್ತಿಗಳು ಚುನಾವಣೆಯನ್ನು ಮುಂದೂಡುವುದಕ್ಕೆ ಸೃಷ್ಟಿಸುವ ಯಾವುದೇ ಪ್ರಯತ್ನಕ್ಕೆ ಬಗ್ಗಕೂಡದು. (not yeild to situations that may be creted by vested intrests to postpone elections from being held within the stipulated time )ಎಂದು ಸ್ಪಷ್ಟ ಆದೇಶ ನೀಡಿದೆ. ಮಾತ್ರವಲ್ಲ ಈ ಸಂಬಂಧ ರಾಜ್ಯ ಚುನಾವಣಾ ಆಯೋಗದ ಕರ್ತವ್ಯ ನಿರ್ವಹಣೆಗೆ ಸಂಬಂಧಪಟ್ಟ ರಾಜ್ಯಗಳಿಂದ ಸ್ಪಂದನೆ ಸಿಗದೇ ಇದ್ದಾಗ ಆಯೋಗ ಹೈಕೋರ್ಟ್ ಮೆಟ್ಟಿಲೇರುವುದಕ್ಕೆ ಮುಕ್ತ ಅವಕಾಶವಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಅದರ ಪ್ರಕಾರ ನಾನು ನಡೆದುಕೊಂಡಿದ್ದೇನೆ.

-    ಹಾಗಾದರೆ ಕಿಶನ್ ಸಿಂಗ್ ತೋಮರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಸ್ಪಷ್ಟ ಪರಿಪಾಲನೆ ಮಾಡಿದ್ದೀರಾ?
ಹೌದು. ನಾನು ಅದರಂತೆ ನಡೆದುಕೊಂಡಿದ್ದೇನೆ. ಚುನಾವಣೆ ಪ್ರಕ್ರಿಯೆ ಸಂಬಂಧ ನಗರ ಸ್ಥಳೀಯ ಸಂಸ್ಥೆ ಕಾರ್ಯದರ್ಶಿಗಳ ಜತೆ ಮೂರು ಬಾರಿ ಸಭೆ ನಡೆಸಿ ಮೀಸಲು ಪಟ್ಟಿ ನೀಡುವಂತೆ ಮನವಿ ಮಾಡಿದ್ದೆ. ಅವರು ಸ್ಪಂದಿಸಲಿಲ್ಲ. ಮೀಸಲು ಪಟ್ಟಿ ಇಲ್ಲದಿದ್ದರೆ ಆಯೋಗ ಏನೂ ಮಾಡಲು ಸಾಧ್ಯವಿರಲಿಲ್ಲ. ಹೀಗಾಗಿ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ಅದು ವಿಚಾರಣೆಗೆ ಬಾಕಿ ಇದೆ. ಆದರೆ ರಾಜ್ಯ ಸರ್ಕಾರ ಮೀಸಲು ಪಟ್ಟಿಯನ್ನು ನೀಡದೆ ಸುಪ್ರೀಂ ಕೋರ್ಟ್‌ಗೆ ಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಫೆ 1ರಂದು ಆದೇಶ ನೀಡಿದ್ದು, ಫೆ 4ರೊಳಗೆ ಮೀಸಲು ಪಟ್ಟಿ ನೀಡಲು ಸೂಚಿಸಿತ್ತು. ಮಾತ್ರವಲ್ಲ ಒಂದೊಮ್ಮೆ ಸರ್ಕಾರ ಪಟ್ಟಿ ನೀಡದಿದ್ದರೆ ಅಸ್ತಿತ್ವದಲ್ಲಿರುವ ಮೀಸಲು ಪಟ್ಟಿ ಆಧಾರದ ಮೇಲೆ ಮುಂದುವರಿಯುವಂತೆ ಆದೇಶ ನೀಡಿದೆ.

-    ಹಾಗಾದರೆ ನಿಮ್ಮ ಕಡೆಯಿಂದ ತಯಾರಿ ನಡೆದಿದೆ?
ಹೌದು. ರಾಜ್ಯ ಸರ್ಕಾರ ಹೊಸ ಮೀಸಲು ಪಟ್ಟಿ ಕೊಟ್ಟಿಲ್ಲ. ಹೀಗಾಗಿ 2007ರ ಮೀಸಲು ಪಟ್ಟಿಯನ್ನು ಪ್ರಕಟಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಅವರು ಅದನ್ನು ಪಾಲಿಸಿದ್ದಾರೆ. ಆಯೋಗದ ಕಡೆಯಿಂದ ಚುನಾವಣೆ ನಡೆಸುವುದಕ್ಕೆ ಅಗತ್ಯವಾದ ಎಲ್ಲ ಉಪಕ್ರಮಗಳು ಪೂರ್ಣಗೊಂಡಿವೆ.

-    ಚುನಾವಣೆ ಅಧಿಸೂಚನೆ ಯಾವಾಗ ಹೊರಡಿಸುತ್ತೀರಿ?
ಅದನ್ನು ನಾನು ಈಗ ಹೇಳುವಂತಿಲ್ಲ. ಚುನಾವಣೆಯನ್ನು ಮುಕ್ತ ಮತ್ತು ನಿರ್ಭೀತ ವಾತಾವರಣದಲ್ಲಿ ಸಕಾಲದಲ್ಲಿ ನಡೆಸುವ ಜತೆಗೆ ಗೌಪ್ಯತೆ ಕಾಪಾಡುವ ಹೊಣೆಗಾರಿಕೆಯೂ ನನ್ನ ಮೇಲಿದೆ. ಅಧಿಸೂಚನೆ ದಿನಾಂಕ ಪ್ರಕಟಿಸುವುದು ನನ್ನ ಸೀಕ್ರೆಟ್ ವೆಪನ್!

-    ಸರ್ಕಾರದ ಮುಂದೆ ಆಯೋಗ ಹೊಸ ಪ್ರಸ್ತಾಪವನ್ನೇನಾದರೂ ಇಟ್ಟಿದೆಯೇ?
ಇದೆ. ಆದರೆ ಅದು ಹೊಸ ಪ್ರಸ್ತಾಪವಲ್ಲ. ಎಲ್ಲ ರಾಜ್ಯಗಳ ಚುನಾವಣಾ ಆಯೋಗವನ್ನು ಬಲಪಡಿಸುವುದಕ್ಕಾಗಿ ಕೇಂದ್ರ ಸರ್ಕಾರ 2011ರಲ್ಲಿ ಕಾರ್ಯಪಡೆಯನ್ನು ರಚಿಸಿತ್ತು. ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತ್ ರಾಜ್ ಸಚಿವರ ನೇತೃತ್ವದ ಕಾರ್ಯಪಡೆಯಲ್ಲಿ ನಾನು ಸದಸ್ಯನಾಗಿದ್ದೆ. ಆ ಕಾರ್ಯಪಡೆ ರಾಜ್ಯದಲ್ಲಿ ನಡೆಯುವ ಎಲ್ಲ ಚುನಾವಣೆಯನ್ನು ಆಯೋಗ ವ್ಯಾಪ್ತಿಗೆ ಒಪ್ಪಿಸುವ ಪ್ರಸ್ತಾಪ ನೀಡಿದೆ. ಅಂದರೆ ಗ್ರಾಪಂ, ತಾಪಂ, ಜಿಪಂ ಹಾಗೂ ಮೇಯರ್ ಚುನಾವಣೆ ಜವಾಬ್ದಾರಿಯನ್ನು ಆಯೋಗಕ್ಕೆ ಒಪ್ಪಿಸುವಂತೆ ಸೂಚಿಸಿದೆ. ಅದು ಇನ್ನೂ ರಾಜ್ಯ ಸರ್ಕಾರದ ಮುಂದೆ ಹಾಗೆಯೇ ಇದೆ.



- ರಾಘವೇಂದ್ರ ಭಟ್, ಕನ್ನಡಪ್ರಭ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.