ಲೈಂಗಿಕತೆಯಲ್ಲಿ ಮೌಲ್ಯಗಳು
"ಛೀ ಬಿಡ್ರೀ, ಗಂಡು ಹೆಣ್ಣಿನ ನಡುವೆ ಕತ್ತಲಲ್ಲಿ ನಡೆಯುವ ವಿಷಯವನ್ನು ಬೆಳಕಲ್ಲಿ ಚರ್ಚಿಸುವಂಥದ್ದೇನಿದೆ? ಲೈಂಗಿಕತೆಯಲ್ಲೂ ಮೌಲ್ಯಗಳೆಲ್ಲಿಂದ ಬಂತು? ಹಸಿವಾದಾಗ ಸಿಕ್ಕಿದಲ್ಲಿ ಊಟ ಮಾಡುವಷ್ಟೇ ಸಣ್ಣ ವಿಚಾರವಲ್ಲವೇ?" ಎಂಬುದು ಕೆಲ ಲೌಕಿಕರ ಮಾತಾದರೆ "ಹಸಿವಾಯಿತೆಂದು ಸಿಕ್ಕ ಸಿಕ್ಕಲ್ಲಿ ಸಿಕ್ಕಿ ಸಿಕ್ಕಿದ್ದನ್ನು ತಿನ್ನಲಾದೀತೆ? ಅಂತೆಯೇ ಪ್ರಾಯ ಬಂತೆಂದು, ಸಿಕ್ಕಸಿಕ್ಕವರಲ್ಲಿ ಕಾಮದಾಹವನ್ನು ತೀರಿಸಿಕೊಳ್ಳುವುದು ಮಾನವೀಯತೆಯೇ? ಲೈಂಗಿಕತೆಗೂ ತನ್ನದೇ ಆದ ಇತಿಮಿತಿಗಳಿವೆ, ನೀತಿ ನಿಯಮಗಳಿವೆ, ಲಕ್ಷ್ಮಣರೇಖೆ ಇದೆ' ಎಂಬುದು ಸಂಪ್ರದಾಯಸ್ಥರ ಅಂಬೋಣ. ಅನೈತಿಕ ಲೈಂಗಿಕ ಸಂಬಂಧಗಳು ಮಾನವ ಚರಿತ್ರೆಯಷ್ಟೇ ಹಳೆಯದಾದರೂ, ಭಾರತೀಯ ಸಂಸ್ಕೃತಿಯಲ್ಲಿ ಹಾಗೂ ಸುಸಂಸ್ಕೃತ ಸಮಾಜದಲ್ಲಿ ಇದು ಒಂದು ಬಹಿಷ್ಕೃತ ವಿಷಯ. ವಿವಾಹ ನಂತರವೇ ತನ್ನ ಮಡದಿಯನ್ನು ಮಾತ್ರ ಸೇರುವ ಅನುಮತಿಯನ್ನು ಪಡೆಯುವ ವರ ಕೂಡಾ ತನ್ನ ಈ ಹಕ್ಕನ್ನು ತನಗೆ ಬೇಕು ಬೇಕೆಂದಾಗ ಆಕೆಯ ಮೇಲೆ ಚಲಾಯಿಸುವಂತಿಲ್ಲ. ಮಾತ್ರವೇ ಅಲ್ಲ, ಉತ್ತಮ ಮಕ್ಕಳನ್ನು ಪಡೆಯಲು, ದಂಪತಿಗಳು ಕೂಡಬೇಕಾದ ದಿನ, ಸಮಯಗಳನ್ನು ಕೂಡಾ ಶಾಸ್ತ್ರೋಕ್ತವಾಗಿ ನಿಗದಿಪಡಿಸಲಾಗಿದೆ. ಆದರೆ ಇಂದು, ಲೈಂಗಿಕತೆ ದಂಪತಿಗಳ ನಡುವೆಯಷ್ಟೇ, ಗೃಹಸ್ಥಾಶ್ರಮಕ್ಕಷ್ಟೇ ಸೀಮಿತವಾಗಿಲ್ಲ. ನೀತಿ ನ್ಯಾಯ, ಧರ್ಮಗಳನ್ನು ಮೀರಿ, ಪವಿತ್ರವಾಗಿರಬೇಕಾಗಿದ್ದ ಸಂಬಂಧಗಳನ್ನು ತೂರಿ, ಎಲ್ಲಾ ಕಡೆ ಅನೈತಿಕವಾಗಿ ಹರಡಿ ಹಬ್ಬಿದೆ. ಪರಿಣಾಮವಾಗಿ, ಹೆಣ್ಣು ಮಕ್ಕಳ ಸುರಕ್ಷತೆಗೂ, ಸಾಂಸಾರಿಕ ಸುಖ-ಶಾಂತಿ-ನೆಮ್ಮದಿಗೂ, ಸಾಮಾಜಿಕ ಸಾಮರಸ್ಯಕ್ಕೂ ಭಾರೀ ಧಕ್ಕೆ ತಂದಿದೆ.
ನಾವು ಮೌಲ್ಯಾಧಾರಿತ ಶಿಕ್ಷಣ, ರಾಜಕಾರಣ ಹಾಗೂ ಜೀವನದ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಈ ಬಗ್ಗೆ ಸಾಕಷ್ಟು ಪ್ರವಚನಗಳು, ಉಪನ್ಯಾಸಗಳು, ಉಪದೇಶಗಳು ನಡೆಯುತ್ತಲೇ ಇವೆ. ಆದರೆ, ಮೌಲ್ಯಾಧಾರಿತ ಲೈಂಗಿಕತೆಯ ಬಗ್ಗೆ ಏಕೆ ಯಾರೂ ಹೆಚ್ಚಾಗಿ ಮಾತನಾಡುತ್ತಿಲ್ಲ? ಇದು ಅನಗತ್ಯ ಇಲ್ಲವೇ ಅಸಭ್ಯ ವಿಚಾರವೆಂದೇ? ಅಥವಾ ನಮ್ಮ ಜನಜೀವನದ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಬಹಳವಾಗಿ, ಇದು ಒಂದು ಸಾಮಾನ್ಯ ವಿಚಾರವಾಗಿ ಹೋಯಿತೇ?
ಮೂಲತಃ ನಾವೆಲ್ಲರೂ ಪ್ರಾಣಿ ಜಗತ್ತಿಗೆ ಸೇರಿದವರಾದ ಕಾರಣ, ಪ್ರಾಣಿ ಸಹಜವಾದ ಹಸಿವೆ, ನಿದ್ರೆ, ಭಯ ಹಾಗೂ ಮೈಥುನ ಅಥವಾ ಲೈಂಗಿಕತೆ ಎಂಬ ಪ್ರವೃತ್ತಿಗಳನ್ನು ಮನುಷ್ಯರಲ್ಲೂ ಕಾಣಬಹುದು. ವಂಶಾಭಿವೃದ್ಧಿಯ ದೃಷ್ಟಿಯಿಂದ ಲೈಂಗಿಕ ಸಂಬಂಧಗಳು ಎಲ್ಲಾ ಜೀವಿಗಳಲ್ಲೂ ಅತ್ಯಾವಶ್ಯಕ. ಇದನ್ನೇ ಹಿಂದೂ ವಿವಾಹ ಸಂದರ್ಭದಲ್ಲಿ ವಧೂವರರು ಸಪ್ತಪದಿಗಳನ್ನು ತುಳಿಯುವಾಗ ಐದನೆಯ ಹೆಜ್ಜೆಯನ್ನು ಸಂತಾನಾಭಿವೃದ್ಧಿಗೆಂದು ಇಡುತ್ತಾರೆ (ಪ್ರಜಾಭ್ಯಪಂಚಪದೀಭವ). ಆದರೆ ಇದು, ಬರೇ ಒಂದು ಕರ್ತವ್ಯ ಅಥವಾ ಜವಾಬ್ದಾರಿಯಾಗಿ ಉಳಿಯುತ್ತಿದ್ದಲ್ಲಿ, ಸೋಮಾರಿಗಳಾದ ಹೆಚ್ಚಿನವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸದೇ, ವಂಶ ಅಂತ್ಯಗೊಳ್ಳುವ ಪರಿಸ್ಥಿತಿಗಳೇ ನಿರ್ಮಾಣವಾಗುತ್ತಿತ್ತು. ಹೀಗಾಗದಂತೆ, ಲೈಂಗಿಕ ಕ್ರಿಯೆಯಲ್ಲಿ ಅಪೂರ್ವವಾದ ಅಪರಿಮಿತವಾದ ಆನಂದವನ್ನೂ ಬೆರೆಸಿಬಿಟ್ಟ ಭಗವಂತ. ಆದುದರಿಂದಲೇ, ಆ"ಖಜಠ್ಠ್ಟಜ್ಡ್ಛಡ್ಝ್ಟಿಟಿ ಏಛಡ ಖಿಢ್ಟಿ ಆಡಠಜ್ಛಡಿಡ- ಕ್ಠ್ಟ್ಛ್ಠಿಜಛಡ್ಝ್ಟಿಟಿ ್ ಖಜ್ಛ್ಠಜಛಡ್ಝ್ಟಿಟಿ ಎನ್ನಲಾಗಿದೆ. ಈ ಆನಂದವನ್ನು ಅನುಭವಿಸಲು ಗಂಡು ಹೆಣ್ಣು ಸೇರಬೇಕು. ಗಂಡು ಹೆಣ್ಣು ಸೇರಬೇಕಾದರೆ, ಅವರಿಬ್ಬರೂ ಪರಸ್ಪರ ಆಕರ್ಷಿತರಾಗಬೇಕು. ಆದರೆ ಈ ಆಕರ್ಷಣೆ, ಇವರಿಬ್ಬರ ಸಂಭೋಗದ ಫಲಶೃತಿಯಾಗಿ ಹುಟ್ಟಬಹುದಾದ ಮಗವನ್ನು ಹೊತ್ತು, ಸಾಕಿ-ಸಲಹುವ ವಯಸ್ಸಿನಲ್ಲೇ ಪ್ರಾಪ್ತವಾಗಬೇಕು. ಈ ಕಾರಣದಿಂದಲೇ, ವಯಸ್ಕರಾಗುತ್ತಿದ್ದಂತೆ ಮಾತ್ರ ಗಂಡು-ಹೆಣ್ಣು ಒಬ್ಬರಿನ್ನೊಬ್ಬರು ತಮ್ಮೊಂದಿಗೆ ಆಕರ್ಷಿಸಬಲ್ಲ ದೈಹಿಕ ಸೌಂದರ್ಯವನ್ನೂ ಮಾನಸಿಕ ಆಸಕ್ತಿಯನ್ನೂ ಪಡೆಯುತ್ತಾರೆ.
ಹಾಗೆಂದು ಲೈಂಗಿಕತೆ ಇಷ್ಟಬಂದಾಗ, ಇಷ್ಟಬಂದವರಲ್ಲಿ, ನಡೆಸುವ ಕ್ರಿಯೆಯಲ್ಲ. ಇದಕ್ಕೂ ತನ್ನದೇ ಆದ ನಿರ್ಬಂಧಗಳಿವೆ. ಮನುಷ್ಯ ತನ್ನೊಳಗಿನ ವಿಚಾರ ಶಕ್ತಿಯಿಂದ, ಇಂದ್ರಿಯ ನಿಗ್ರಹದಿಂದ, ಸಂಯಮದಿಂದ, ಸಂಸ್ಕಾರಬಲದಿಂದ ಇಂತಹ ಪ್ರವೃತ್ತಿಗಳಿಗೆ ಕಡಿವಾಣ ಹಾಕಿ, ಲೈಂಗಿಕತೆಯಲ್ಲೂ ಮೌಲ್ಯಗಳನ್ನು ಮೆರೆಯಬೇಕು. ಹಸಿವೆಯಾಗಿದೆ ಎಂದ ಮಾತ್ರಕ್ಕೆ, ಸುಸಂಸ್ಕೃತ ಮನುಷ್ಯ ಇನ್ನೊಬ್ಬರ ತುತ್ತಿಗೆ- ತಟ್ಟೆಗೆ ಕೈ ಹಾಕಲಾರ. ಅಂತೆಯೇ ಕಾಮೋದ್ರೇಕವಾಯಿತೆಂದ ಮಾತ್ರಕ್ಕೆ ಎಲ್ಲಾ ಹೆಣ್ಣುಗಳನ್ನೂ ಸಂಭೋಗಿಸಲಾರ. ಇಂತಹ ಮನುಷ್ಯತ್ವವನ್ನು ಏರಲು ಸಾಧ್ಯವಾಗದವರು, ಮನುಷ್ಯರೂಪದ ಮೃಗಗಳಂತೆ ವರ್ತಿಸುತ್ತಾರೆ. ಇಂದಿನ ದಿನಗಳಲ್ಲಿ ಇಂತಹವರ ಸಂಖ್ಯೆ ಹೆಚ್ಚಾಗುತ್ತಿರೋದು ವಿಷಾದನೀಯ ಹಾಗೂ ಅಪಾಯಕಾರಿ ಬೆಳವಣಿಗೆಯಾಗಿದೆ.
ನೋಡುವವರ ಕಣ್ಣಿಗೆ ಆದರ್ಶ ದಂಪತಿಗಳಂತೆ ಕಂಡರೂ, ಮನೆಯವರಿಂದ ಲೈಂಗಿಕ ಸುಖವನ್ನು ಪಡೆಯದೆ, ಹೆಚ್ಚಿನ ಇಲ್ಲವೇ ಬದಲಾವಣೆಯ ಸುಖಕ್ಕಾಗಿ ಹೊರಗಡೆ, ಗುಪ್ತವಾಗಿ ಆ ಸುಖವನ್ನು ಪಡೆಯುತ್ತಿರುವವರಿಗೇನೂ ನಮ್ಮಲ್ಲಿ ಕೊರತೆ ಇಲ್ಲ. "ಅವಳಿಗೇನುಬೇಕು? ಮನೆ-ಹಣ-ಸಂಪತ್ತು ಎಲ್ಲವನ್ನೂ ನೀಡಿದ್ದೇನೆ. ಮದುವೆ ಆದೇಂತ ಮೂರು ಹೊತ್ತು ಅವಳ ಮುಂದೆ ಕೂತಿರಕ್ಕಾಗುತ್ತಾ? ಒಂದಿಷ್ಟು ಹೆಚ್ಚಿನ ಲೈಂಗಿಕ ಸುಖವನ್ನು ನಾನು ಹೊರಗಡೆಯಿಂದಲೂ ಪಡೆದುಕೊಂಡರೆ ತಪ್ಪೇನಿದೆ? ಮನೆಯಲ್ಲಿ ಊಟ ತಿಂದೂ ತಿಂದೂ ಬೇಸರವಾದಾಗ, ನಾವು ಹೋಟೆಲಿಗೆ ಹೋಗೋದಿಲ್ಲವೇ? ಇದರಲ್ಲೇನು ಮಹಾಪಾಪ?" ಎಂಬುದು ಕೆಲವು ರಸಿಕ ಪುರುಷರ ವಾದ. ಇದೇ ರೀತಿ ಅವರ ಮಡದಿಯೂ ಯೋಚಿಸಿದರೆ? ಮನ-ಮನೆಯ ಸ್ಥಿತಿ ಏನಾಗಬಹುದು? ಇಂತಹ ಸಂದರ್ಭಗಳಲ್ಲಿ ಮೌಲ್ಯಾಧಾರಿತ ಲೈಂಗಿಕತೆಯೊಂದೇ ನಮ್ಮನ್ನು ಹಿಡಿದಿಡಬಹುದಾದ ವಿಧಾನ.
ವಿವಾಹ ನಂತರ, ಸಂಗಾತಿಗಳ -ಸಹೋದ್ಯೋಗಿಗಳ ಜೊತೆ ನಡೆಸುವ ಲೈಂಗಿಕ ಕ್ರಿಯೆಗಳೂ ಅನೈತಿಕವೇ. ಇದು ಪರಸ್ಪರ ಅನುಮತಿಯಿಂದ ನಡೆಯಬಹುದಾದರೂ, ಇವರನ್ನೇ ನಂಬಿರುವ ಮನೆಯವರಿಗೆ ಮಾಡಿದ ದ್ರೋಹ. ಸುಖೀ ದಾಂಪತ್ಯ ಜೀವನಕ್ಕೆ ಗಂಡ ಹೆಂಡತಿಯ ನಡುವೆ ನಿಷ್ಠೆ ಮತ್ತು ನಂಬಿಕೆಯೊಂದೇ ಮೂಲಾಧಾರ. ಗಂಡ ಹೆಂಡತಿಯರಿಬ್ಬರೂ, ಒಬ್ಬರನ್ನೊಬ್ಬರು ಬಿಟ್ಟು ದುಡಿಯಬೇಕಾದ ಈ ದಿನಗಳಲ್ಲಂತೂ ನಿಷ್ಠೆ-ನಂಬಿಕೆ ಅತ್ಯಾವಶ್ಯಕ.
ಮದುವೆಯನ್ನೇ ಮಾಡಿಕೊಳ್ಳದೇ ಮದುವೆಯಾದವರಂತೆ ಎಲ್ಲಾ ಲೈಂಗಿಕ ಸುಖ ಸಂತೋಷಗಳನ್ನು ಅನುಭವಿಸುತ್ತಾ ಒಟ್ಟಿಗೆ ಬಾಳುವ ರೀತಿಯೂ (ಔ್ಝಢ್ಝಟ್ಜಿ ಖ್ಟ್ಜಿಜಝಿಜ್ಠ) ಅನೈತಿಕ ಲೈಂಗಿಕತೆಯ ಇನ್ನೊಂದು ರೂಪವೇ. ವಿವಾಹ ಬಂಧನದಿಂದ ಮುಕ್ತರಾಗಲು, ಕೌಟುಂಬಿಕ ಹೊಣೆಗಾರಿಕೆಯಿಂದ ದೂರವಿರಲು, ಮಕ್ಕಳನ್ನು ಹೆತ್ತು ಹೊತ್ತು ಸಾಕಿ ಸಲಹುವ ಕಷ್ಟಗಳಿಂದ ಪಾರಾಗಲು, ಆದರೆ ಲೈಂಗಿಕ ಸುಖವನ್ನಷ್ಟೇ ಪಡೆಯಲು- ಸೋಮಾರಿ, ಬೇಜವಾಬ್ದಾರೀ, ಅವಕಾಶವಾದಿ ಯುವಕ ಯುವತಿಯರು ಮಾಡಿಕೊಂಡ ಒಂದು ಅನೈತಿಕ ವ್ಯವಸ್ಥೆ ಇದು.
ಹಾಗಾಗಿ ಅನೈತಿಕ ಲೈಂಗಿಕತೆಗಳನ್ನು ತಡೆಗಟ್ಟಲು ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಣದ ಜೊತೆ ಸಂಸ್ಕಾರವನ್ನೂ ನೀಡಬೇಕು. ಇದು ಪೋಷಕರ ಮತ್ತು ಶಿಕ್ಷಕರ ಜವಾಬ್ದಾರಿ. ವ್ಯಕ್ತಿ ಸಂಸ್ಕಾರವಂತನಾದರೆ ಲೈಂಗಿಕತೆಯೂ ಸೇರಿದಂತೆ, ಅನೈತಿಕ ಚಟುವಟಿಕೆಗಳತ್ತ ವಾಲುವ ಸಂಭವಗಳು ಕಡಿಮೆಯಾಗುತ್ತವೆ. ಯಾವ ಗುರುವಿನ ಸಹಾಯವೂ ಇಲ್ಲದೆ, ಯಾವ ಪಾಠಗಳ ನೆರವೂ ಇಲ್ಲದೆ ತಾವೇ ಕಲಿತುಕೊಳ್ಳುವ ವಿದ್ಯೆ ಇದಾದರೂ, ಕದ್ದು ಕಲಿಯೋದಕ್ಕಿಂತ ಹದಿಹರೆಯದ ಯುವಕ ಯುವತಿಯರಿಗೆ ವೈಜ್ಞಾನಿಕವಾಗಿಯೇ, ಲೈಂಗಿಕತೆಯ ಬಗ್ಗೆ ತಿಳಿಸಿದರೆ ಏನು ತಪ್ಪು? ಇದರಿಂದಾಗಿ, ಲೈಂಗಿಕತೆಯ ಕುರಿತಾದ ಅಜ್ಞಾನದಿಂದ ಬರಬಹುದಾದ ಎಷ್ಟೋ ಅನಾಹುತಗಳನ್ನು, ರೋಗಗಳನ್ನು ತಪ್ಪಿಸಬಹುದು. ಲೈಂಗಿಕ ಶಿಕ್ಷಣ, ಮನೆಯಲ್ಲಿ ಹೆತ್ತವರಿಂದಲೇ ಆರಂಭವಾಗಿ ಶಿಕ್ಷಕರವರೆಗೂ ವ್ಯಾಪಿಸಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳು, ಸರಕಾರೀ ಕಾರ್ಯಕ್ರಮಗಳೂ ನೆರವಾಗಬಹುದು. ಸಹ ಶಿಕ್ಷಣವೂ ಹುಡುಗ-ಹುಡುಗಿಯರು ಮಿತ್ರರಂತೆ ಬೆರೆಯಲು, ಬೆಳೆಯಲು ನೆರವಾಗುತ್ತದೆ.
ಲೈಂಗಿಕ ಅಪರಾಧಗಳನ್ನು ಗೈದ ಕಾಮುಕರಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಅದು ತ್ವರಿತಗತಿಯಲ್ಲಿ ಜರುಗಬೇಕು. ಇದು ಉಳಿದವರನ್ನು ಎಚ್ಚೆತ್ತುಕೊಳ್ಳುವಂತೆ ಮಾಡುತ್ತೆ. ಉಪದೇಶಗಳು ವಿಫಲವಾದಾಗ, ದಂಡನೆಯೊಂದೇ ಉಳಿದಿರುವ ಮಾರ್ಗವಲ್ಲವೇ?
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯದಂತೆ ತಕ್ಕ ರಕ್ಷಣೆಯನ್ನು ಒದಗಿಸುವುದು ಹಾಗೂ ಮಹಿಳೆಯರು ಸುರಕ್ಷಿತ ರೀತಿಯಲ್ಲಿ ನಡೆದುಕೊಳ್ಳೋದು ಅತ್ಯಾವಶ್ಯಕ. ಮಧ್ಯರಾತ್ರಿಯಲ್ಲೂ ಓಡಾಡುವ ಒಂಟಿ ಮಹಿಳೆಗೂ ರಕ್ಷಣೆ ನೀಡಬೇಕಾದುದು, ನಮ್ಮ ಕರ್ತವ್ಯವಾದರೂ, 'ಮಧ್ಯರಾತ್ರಿಯಲ್ಲಿ ಈಕೆಗೇನು ಕೆಲಸ'? ಎಂಬ ಪ್ರಶ್ನೆಯೂ ಅಷ್ಟೇ ಪ್ರಸ್ತುತವಾಗುತ್ತದೆ. ಒಟ್ಟಿನಲ್ಲಿ ಕೈ ಮೀರಿದ ಮೇಲೆ, ದಾರಿ ತಪ್ಪಿದ ಮೇಲೆ, ಘಟನೆ ನಡೆದು ಹೋದ ಮೇಲೆ ಪರಿತಪಿಸುವುದಕ್ಕಿಂತ ಮೊದಲೇ ಎಚ್ಚರ ವಹಿಸಿ ಮೌಲ್ಯಾಧಾರಿತ ಲೈಂಗಿಕತೆಯನ್ನು ತಮ್ಮದಾಗಿಸಿಕೊಳ್ಳುವುದು ಎಲ್ಲರಿಗೂ ಲೇಸಲ್ಲವೇ? -ಕ್ಷೇಮವಲ್ಲವೇ?
- ಡಾ. ಕೆ.ಪಿ. ಪುತ್ತೂರಾಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

