ಕೃಷಿ ತಪಸ್ಸಿಗೆ ಭಂಗ ತಂದು ನಗರಮುಖಿಯಾದೆವಾ?
ಕೃಷಿ ಎಂಬುದು ಸಮಸ್ಯೆ ಅಂತ ಅನ್ನಿಸುವುದು ಯಾಕೋ? ಸಮಸ್ಯೆಯೇ ಇಲ್ಲದ ಉದ್ಯೋಗ ...
ಕೃಷಿ ಎಂಬುದು ಸಮಸ್ಯೆ ಅಂತ ಅನ್ನಿಸುವುದು ಯಾಕೋ? ಸಮಸ್ಯೆಯೇ ಇಲ್ಲದ ಉದ್ಯೋಗ ಅಂತ ಈ ಜಗತ್ತಿನಲ್ಲಿ ಇರಲಿಕ್ಕಾದರೂ ಸಾಧ್ಯವೇ? ಬಹುತೇಕರು ಇದೇ ಧಾಟಿಯಲ್ಲಿ ಮಾತನಾಡುತ್ತಾರೆ. ಈ ಜಗತ್ತಿನಲ್ಲಿ ಕೃಷಿಯಲ್ಲಿ ಇರುವಷ್ಟು ಸಮಸ್ಯೆ ಬೇರಾವುದರಲ್ಲೂ ಇಲ್ಲವೇ ಇಲ್ಲ. ಸಮಸ್ಯೆ ಎಂಬುದು ಇರುವುದು ಕೃಷಿಯಲ್ಲಿ ಮಾತ್ರ ಎಂಬರ್ಥದ ಅವರ ಮಾತುಗಳನ್ನು ಕೇಳಿದಾಗಲೆಲ್ಲ ಅಚ್ಚರಿಯಾಗುತ್ತದೆ. ಕೃಷಿ ಸಮಸ್ಯೆಯಾಗಿ ಕಾಡುವುದಿದ್ದರೆ ಅದಕ್ಕೆ ಅಗತ್ಯ ಸಂಪನ್ಮೂಲವನ್ನು ನಾವು ಹೊರಗಿನಿಂದ ತಂದು ಸಾಸುತ್ತೇವೆ ಎಂದು ಹೊರಟಾಗ ಮಾತ್ರ. ಅದರಲ್ಲೂ ನೀರು ಸ್ಥಳೀಯವಾಗಿ ಲಭ್ಯವಿಲ್ಲದಿದ್ದರೆ ಖಂಡಿತಾ ಕೃಷಿ ಎಂಬುದು ಸಮಸ್ಯೆಯೇ. ಆದರೆ ಅದಕ್ಕಿರುವ ಪರಿಹಾರವನ್ನು ಮಾತ್ರ ನಾವು ಸ್ಥಳೀಯವಾಗಿ ಕಂಡುಕೊಳ್ಳಲು ಹೋಗುವುದೇ ಇಲ್ಲ.
ಒಂದು ಮಾತನ್ನು ನೆನಪಿಡಿ. ಜಗತ್ತಿನಲ್ಲಿ ಅಮೆರಿಕವೇ ಇರಬಹುದು. ಬೇರಿನ್ನಾವುದೇ ದೇಶವಿರಬಹುದು. ಕೃಷಿ ಸಂಸ್ಕೃತಿಯ ಹಿನ್ನೆಲೆಯಿಲ್ಲದ ನೆಲದಲ್ಲಿ ಮಹತ್ವದ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವೇ ಇಲ್ಲ. ಒಂದೊಮ್ಮೆ ಸಾಧಿಸಿದರೂ ಅದು ಶಾಶ್ವತವಾಗಿರುವುದಿಲ್ಲ. ಕೃಷಿ ಎಂಬುದು ಅನುಭವ. ಅದರ ಪಂಚಾಂಗದ ಮೇಲೆ ಏಳುವ ಬದುಕಿನ ಮಹಲು ಮಾತ್ರವೇ ಗಟ್ಟಿಯಾಗಿ ಉಳಿಯಬಲ್ಲುದು. ಇಂಥ ಸತ್ಯದ ನಡುವೆ ಬಲಿಷ್ಠ ಕೃಷಿ ಹಿನ್ನೆಲೆಯಿರುವ ದೇಶದಲ್ಲಿ ಹುಟ್ಟಿರುವ ನಾವು ಆ ಬಗ್ಗೆ ಉದಾಸೀನ ವ್ಯಕ್ತಪಡಿಸುವುದು ಮೂರ್ಖತನವೇ ಸರಿ.
ನಿಜವಾದ ಸಮಸ್ಯೆ ಇರುವುದು ಕೃಷಿಯನ್ನು ನಾವು ನೋಡುತ್ತಿರುವ ದೃಷ್ಟಿಕೋನದಲ್ಲಿ. ಅದು ಯಾವುದೇ ಪ್ರದೇಶವಿರಬಹುದು, ಕೃಷಿ ಸಮಸ್ಯೆಯಾಗಿ ಕಾಡುವುದೇ ಹೊರಗಿನಿಂದ ನೀರನ್ನು ಕೊಡಲು ಆರಂಭಿಸಿದಾಗಿನಿಂದ. ಹೊರಗಿನಿಂದ ಬಂದವರು ಯಾವತ್ತಿಗೂ ಶಾಶ್ವತವಾಗಿರಲು ಸಾಧ್ಯ ಇಲ್ಲ. 'ಸೌಹಾರ್ದ ಅಭಿವೃದ್ಧಿ'ಯ ಪರಿಕಲ್ಪನೆ ನಮ್ಮ ಗ್ರಾಮೀಣ ಜನಮಾನಸದಿಂದ ಯಾವತ್ತು ದೂರಾಯಿತೋ ಅವತ್ತೇ ನೀರು ಊರಿಗೆ ಊರನ್ನೇ ಬಹಿಷ್ಕರಿಸಿ ಹೊರನಡೆಯಿತು. ಹೋಗುವಾಗ ಒಂಟಿಯಾಗಿ ಹೋಗಲಿಲ್ಲ. ಊರವರ ಸುಖವನ್ನು, ಕೃಷಿಯ ಸಮೃದ್ಧಿಯನ್ನು, ಪಾರಿಸಾರಿಕ ಸೌಂದರ್ಯವನ್ನು, ಜೈವಿಕ ನೆಮ್ಮದಿಯನ್ನು ...ಹೀಗೆ ಒಂದರ ಹಿಂದೆ ಒಂದರಂತೆ ಎಲ್ಲವನ್ನೂ ಕರೆದುಕೊಂಡೇ ಹೊಗಿದೆ. ಅವೆಲ್ಲವೂ ಮತ್ತೆ ಊರಿನತ್ತ ಮುಖ ಮಾಡುವುದೇ ನೈಜ ಅಭಿವೃದ್ಧಿ ಎಂಬ ಅರಿವು ನಮ್ಮಲ್ಲಿಂದು ಉಳಿದಿಲ್ಲ. ಮೊದಲು ಹೋದವರು ಮೊದಲು ವಾಪಸಾಗಬೇಕು. ಅವರು ಬಂದರೆ ಉಳಿದೆಲ್ಲರೂ ವಾಪಸಾಗುತ್ತಾರೆ ಎಂದುಕೊಳ್ಳುವ ಹಾಗೆಯೇ ಇಲ್ಲ. ಮೊದಲು ಹೋದ ನೀರನ್ನು ಕರೆತರುವ ಮೊದಲು, ಮೊದಲಿದ್ದ ಎಲ್ಲರನ್ನೂ ಮೊದಲಿನಂತೆಯೇ ಸುಸ್ಥಿತಿಗೆ ತಂದಿಡಬೇಕಾದ ಅಗತ್ಯವಿದೆ.
ಅದೊಂದು ಕಾಲವಿತ್ತು. ತಿಂಗಳ ಸಂಬಳದಲ್ಲಿ ಸಂಸಾರ ಸಂಭಾಳಿಸುವ ನೌಕರನಂತೆಯೇ ಮಳೆಗಾಲದ ಮೂರ್ನಾಲ್ಕು ತಿಂಗಳು ಬಿದ್ದ ನೀರನ್ನು ಹಿಡಿದಿಟ್ಟುಕೊಳ್ಳುವ ಗುಡ್ಡದ ನೆತ್ತಿಯ ಮೇಲಿನ ನೆಲ ವರ್ಷವಿಡೀ ಧಾರಾಳಿಯಾಗಿ ವರ್ತಿಸುತ್ತಿತ್ತು. ಮಗ್ಗುಲಿಗೆ ಬಿದ್ದು ಓಡುವ ಮಳೆಯನ್ನು ತನ್ನೊಡಲಿಗೆ ಸೆಳೆದುಕೊಳ್ಳುವ ಬಂಡೆಗಳು ಮಳೆನೀರನ್ನು ತನ್ನಡಿಗೆ ಸೆಳೆದೊಯ್ಯುತ್ತಿದ್ದವು. ಅಲ್ಲಿ ಇಂಗಿದ್ದು ಮತ್ತೆಲ್ಲೋ ಮೇಲೆದ್ದು ಇಣುಕುತ್ತಿತ್ತು. ಅಲ್ಲೇ ಒರತೆ ಸೃಷ್ಟಿಯಾಗುತ್ತಿತ್ತು. ಕೆಳಗಿನ ಹೊಲಗದ್ದೆಗಳಲ್ಲಿ ನೀರಿನ ಕೊರತೆಯನ್ನು ಇಂಥ ಒರತೆಗಳೇ ನೀಗಿಸುತ್ತಿದ್ದವು.
ನಿಜವಾಗಿ ಇಂಥ ಸೆಲೆ ಬತ್ತಿ ಹೋಗಿದ್ದಕ್ಕೆ ಮೂಲ ಕಾರಣ ಮಳೆಯ ಕೊರತೆಯಲ್ಲ. ಅಂಥದ್ದೊಂದು ಮಹಾಭ್ರಮೆ ನಮ್ಮಲ್ಲಿ ಮನೆ ಮಾಡಿದೆ. ಸುರಿವ ಮಳೆಯಲ್ಲಿ ಯಾವ ವ್ಯತ್ಯಾಸವೂ ಆಗಿಲ್ಲ. ಹೆಚ್ಚೆಂದರೆ ಒಂದಷ್ಟು ಸ್ಥಳಾಂತರ, ಸ್ಥಿತ್ಯಂತರವಾಗಿರಬಹುದು. ಆದರೆ ಅದನ್ನು ಹಿಡಿದಿಟ್ಟುಕೊಳ್ಳುವ ಧಾರಣಾಶಕ್ತಿ ಭೂಮಿಯಲ್ಲಿ ಕುಸಿದಿದೆ. ಮಳೆಗೆ ಮೈಯ್ಯೊಡ್ಡಿ ನಿಲ್ಲುತ್ತಿದ್ದ ಬಂಡೆಗಳು ಪುಡಿಯಾಗಿ ಊರ ರಸ್ತೆಗಳನ್ನು ಸೇರಿವೆ. ಗ್ರಾನೈಟ್ ಹೆಸರಿನಲ್ಲಿ ನಾನಾ ಆಕಾರ ಪಡೆದು ಕಟ್ಟಡಗಳ ನೆಲದಲ್ಲಿ ಕಂಗೊಳಿಸಲಾರಂಭಿಸಿವೆ. ಹೀಗಾಗಿ ಗುಡ್ಡಗಳು ಬಯಲಾಗಿವೆ. ಅರಣ್ಯ ನಾಶವಾಗಿ ಭೂಮಿ ಬಕ್ಕಾಗಿ ಹೊಳೆಯುತ್ತಿದೆ. ಹೀಗಾಗಿ ಬಿದ್ದ ಮಳೆ ನೀರು ನಿಲ್ಲುವ ಪ್ರಮೇಯವೇ ಇಲ್ಲ. ದಕ್ಷಿಣದ ರಾಜ್ಯಗಳಲ್ಲಿ ಕಂಡು ಬರುವ ವಿಶೇಷ ಶಿಲಾವೃತ ಬೆಟ್ಟ ಸಾಲುಗಳಿಗೆ ನೀರನ್ನು ಇಂಗಿಸಿಕೊಳ್ಳುವ ವಿಶೇಷ ಶಕ್ತಿಯಿದ್ದಿತ್ತು. ಹೀಗೆ ಶಿಲಾಪದರದಲ್ಲಿ ಇಂಗಿದ ನೀರು ಬುಡಕ್ಕೆ ಹೋಗಿ ಇನ್ನೆಲ್ಲೋ ಒರತೆಯಾಗಿ ಉಕ್ಕುತ್ತಿತ್ತು. ಮಾತ್ರವಲ್ಲ. ಗುಡ್ಡದಗುಂಟ ಇಳಿದು ಬಂದು ಕೆಳಭಾಗದ ಕೆರೆ,ಕುಂಟೆಗಳಿಗೆ ಜಲಮೂಲವಾಗಿ ನಿಲ್ಲುತ್ತಿತ್ತು. ಸುತ್ತಮುತ್ತಲಿನ ಹಳ್ಳಿಗಳ ದಾಹ ಇಂಗಿಸುತ್ತಿದ್ದುದಷ್ಟೇ ಅಲ್ಲ, ತಂಪು ತನಿಯೆರೆಯುತ್ತಿತ್ತು.
ನಿರ್ವಹಣೆಯ ಕೊರತೆ, ನಿರ್ಲಕ್ಷ್ಯ, ನೀರಿನ ಬಗೆಗಿನ ನಿರ್ಲಜ್ಜತನ ಇಂದು ಅತ್ಯಪೂರ್ವ ಜಲ ಮೂಲವೊಂದಕ್ಕೆ ಧಕ್ಕೆ ತಂದಿದೆ ಎಂಬುದಂತೂ ಸತ್ಯ. ಇದರಿಂದ ಆದ ನಷ್ಟ ಒಂದೆರಡಲ್ಲ. ಪಾರಂಪರಿಕ ವ್ಯವಸ್ಥೆಯೊಂದನ್ನೇ ನಾಶ ಮಾಡಿದ್ದು ಮಾತ್ರವಲ್ಲ, ಅದರ ಹಿಂದಿದ್ದ ಸಾಂಸ್ಕೃತಿಕ ಬದುಕನ್ನು ಬುಡಮೇಲು ಮಾಡಿದೆ. ನಿಸರ್ಗದತ್ತವಾಗಿದ್ದ ಸಂಪನ್ಮೂಲವೊಂದನ್ನು ಕಸಿದುಕೊಂಡಿದೆ. ರೈತರಲ್ಲಿ, ಗ್ರಾಮೀಣರಲ್ಲಿ ಇದ್ದ ನೀರಿನ ಭದ್ರತೆಯನ್ನೇ ಕಿತ್ತುಕೊಂಡಿದೆ. ಕೃಷಿ ಬದುಕಿನ ನೆಮ್ಮದಿಗೆ ಭಂಗ ಬಂದಿದೆ. ಭಾವನೆಗಳ ಬೆಚ್ಚನೆಯ ಸುಖಕ್ಕೆ ತ್ಯಾಮಾನ ತಂದಿದೆ. ನಿಸರ್ಗದತ್ತ ಸೌಂದರ್ಯ ಮರೆಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನೀರಿನ ಬಗೆಗೆ ಇದ್ದ ತಾಯೆದೆಯ ಹಾಲಿನಂಥ ಸಮೃದ್ಧಿ, ಶುದ್ಧತೆಯ ನಂಬಿಕೆಯನ್ನು ಹುಸಿಯಾಗಿಸಿದೆ. ಮಾನವನ ಇಂಗದ ದಾಹಕ್ಕೆ ಇದ್ದ ಇಂಥದ್ದೊಂದು ನೈಜ ನೀರ ಸಾಂತ್ವನದ ಬದಲಾಗಿ ಕುಡಿಯುವ ನೀರೂ ಮಾರುಕಟ್ಟೆಯ ಕೃತಕ ಸರಕಾಗಿ ಮಾರ್ಪಟ್ಟಿದ್ದನ್ನು ಸಹಿಸಲಾದೀತೆ?
ಇರುವ ಜಮೀನಿನಲ್ಲೇ ಮೈ ಮುರಿದು ತಿನ್ನುವ ಜಾಯಮಾನ. ಕೆರೆ ಕಟ್ಟೆಗಳು, ಅರಣ್ಯ ಗುಡ್ಡಗಳು, ಪ್ರಾಣಿಪಕ್ಷಿಗಳನ್ನೊಳಗೊಂಡು ನಿಸರ್ಗವೇ ದೇವರೆಂದು ಪೂಜಿಸುವ ಸಾಂಸ್ಕೃತಿಕ ಶ್ರೀಮಂತಿಕೆ. ಗೋವುಗಳೆಂದರೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಕಾಳಜಿ. ಎಲ್ಲಕ್ಕಿಂತ ಹೆಚ್ಚಾಗಿ ಸ್ವಾವಲಂಬಿ ಬದುಕನ್ನೇ ತತ್ತ್ವವನ್ನಾಗಿಸಿಕೊಂಡ ಸದಾಚಾರ ಇವು ಒಂದು ಕಾಲದ ಹಳ್ಳಿಗಳೆಂದರೆ ನೆನಪಿಗೆ ಬರುತ್ತಿದ್ದ ಅಂಶಗಳು. ಸ್ವಾಂತಂತ್ರ್ಯಾ ನಂತರದ ದಿನಗಳಲ್ಲಿ ಕೃಷಿ ಎಂಬುದು ಕೇವಲ ಗಳಿಕೆಯ ಮಾರ್ಗವಾಗಿಯಷ್ಟೆ ಮುಂದುವರಿದುಕೊಂಡು ಬರುತ್ತಿದೆಯೇ ವಿನಾ 'ಕೃಷಿ ಸಂಸ್ಕೃತಿ' ಎನ್ನುವುದು ಅರ್ಥ ಕಳೆದುಕೊಂಡಿದೆ. ಅದರ ಜತೆಯಲ್ಲೇ ಆ ಸಮುದಾಯದಲ್ಲಿದ್ದ ನೈತಿಕತೆಯೂ ನೆಲಕಚ್ಚಿದೆ. ಅದರ ಹಿಂದೆಯೇ ಹಳ್ಳಿಗಳಲ್ಲಿನ ಸಮುದಾಯದ ಕಲ್ಪನೆಯೂ ಸಾಯಲಾರಂಭಿಸಿದೆ. ಸ್ವಾವಲಂಬಿ ಗ್ರಾಮಗಳು ನಿಶ್ಯಕ್ತವಾಗತೊಡಗಿವೆ. ಹಳ್ಳಿಗರ ಬದುಕು ಹಳ್ಳ ಹಿಡಿಯಲಾರಂಭಿಸಿದೆ. ಮನಸ್ಸು ಮೈಮುರಿದು ಬದುಕುವ ಮಾರ್ಗವನ್ನು ತಿರಸ್ಕರಿಸಿ, ಸುಖದ ಭ್ರಮೆಯನ್ನು ಬೆನ್ನಟ್ಟಿ ಹೊರಟಿದೆ. ಹೊಲದ ಬಿಸಿಲಾಗಲೀ, ಮಣ್ಣಿನ ಸುವಾಸನೆಯಾಗಲೀ ಹಿತಕರವೆನಿಸಿದ ಸ್ಥಿತಿಯಲ್ಲಿ ಜನ ನಗರಗಳಿಗೆ ಗುಳೇ ಹೊರಟಿದ್ದಾರೆ. ಜನರೇ ಇಲ್ಲದ ಮೇಲೆ ಜಾನುವಾರುಗಳು ಉಳಿಯುವುದಿಲ್ಲ. ಗೋತ್ಯಾಜ್ಯಗಳಿಂದ ಮಾತ್ರವೇ ಹಳ್ಳಿಯ ಹಸಿರು ನಿರಂತರವಾಗಿರುತ್ತಿತ್ತು. ಅದನ್ನು ಬ್ಯಾಲೆನ್ಸ್ ಮಾಡಲು, ಅದಿಲ್ಲದ ಬರಡು ನೆಲವನ್ನು ಹಸಿರಾಗಿಸಲು ಕೃತಕ ಗೊಬ್ಬರದ ಮೊರೆ ಹೋಗಿದ್ದೇವೆ.
ಗ್ರಾಮದ ಮನೆಮನೆಗಳಲ್ಲಿನ ಕಣಜ ಮೇವು-ಧಾನ್ಯಗಳಿಂದ ವರ್ಷವಿಡೀ ಅಕ್ಷರಶಃ ತುಂಬಿ ತುಳುಕುತ್ತಿದ್ದ ದಿನಗಳು ಇದೀಗ ನೆನಪು ಮಾತ್ರ. ನೀರೆಚ್ಚರದ ಕೆಲಸಗಳ ನಿಜವಾದ ಫಲ ಆರಿವಿಗೆ ಬರುತ್ತಲೇ ಇಲ್ಲ ನಮಗೆ. ತೀರಾ ಕಡಿಮೆ ಮಳೆ ಸರಾಸರಿಯಲ್ಲಿ ಅವತ್ತು ಅತ್ಯಧಿಕ ಕೃಷಿ ಉತ್ಪಾದನೆಯನ್ನು ಊರಿನ ರೈತ ಕಂಡಿದ್ದ. ಅದಕ್ಕೂ ವಿಶೇಷವೆಂದರೆ ಸತತ ಬರದಲ್ಲೂ ರೈತನ ಮುಖದ ಮೇಲಿನ ನಗು ಮಾಸುತ್ತಿರಲಿಲ್ಲ. ಇವತ್ತು ಹಾಗೊಂದು ಸ್ಥಿತಿ ಉಳಿದೀತಾದರೂ ಹೇಗೆ? ನಮ್ಮ ನಂಬಿಕೆಯದು. ನೀರೇ ನಮ್ಮ ಜೀವನಾಧಾರ. ಸಮಸ್ತ ಸುಖವನ್ನು ಬಯಸಿ, ಸಾಧನತೆಯ ಅವಲಂಬನೆಯನ್ನು ಮನಗಾಣಿಸಿ ಸ್ತುತಿಗೈಯ್ಯುತ್ತೇವೆ ನಾವು ನೀರನ್ನು. ಚರೂಪುರೋಡಾಶಾದಿಗಳ ಸಮರ್ಪಣೆಯ ಮೂಲಕ ವರುಣನನ್ನು ಹಾಡಿ ಹೊಗಳುತ್ತಿದ್ದೆವು. ಅಂಥವೆಲ್ಲ ಇವತ್ತು ಕೇವಲ ಆಡಂಬರದ ಆಚರಣೆಗಳೆನಿಸಿಬಿಟ್ಟಿವೆ.
ಒಂದು ಮಾತನ್ನು ಮತ್ತೆ ಮತ್ತೆ ನಾವು ನೆನಪಿಸಿಕೊಳ್ಳಲೇಬೇಕು. ನಾವು ಕೃಷಿಯನ್ನೇ ಬದುಕಾಗಿ ಸ್ವೀಕರಿಸಿದವರು. ಅದಿಲ್ಲದೇ ನಮಗೆ ಬೇರೆ ದಿಕ್ಕಿಲ್ಲ. ಪೇಟೆ, ಉದ್ಯೋಗ, ಶಿಕ್ಷಣ ಎಲ್ಲಕ್ಕೂ ನಮ್ಮ ಮೂಲ ಬೇರು ಕೃಷಿಯೇ. ಕೈಗಾರಿಕೆ, ಉದ್ದಿಮೆ ಸೇರಿದಂತೆ ಎಲ್ಲ ಅಭಿವೃದ್ಧಿಯ ಬೆನ್ನೆಲಬಾಗಿ ನಿಲ್ಲುವುದು ಬೇಸಾಯವೇ. ದೇಶದ ಆರ್ಥಿಕ ಶಕ್ತಿ ಉಳಿಸಿಕೊಳ್ಳಲು ಕೃಷಿಯನ್ನು ಗಟ್ಟಿಗೊಳಿಸಲೇಬೇಕು. ಅದಿಲ್ಲದಿದ್ದರೆ ನಮ್ಮ ಜಮೀನುಗಳು ಮುಂದೊಂದು ದಿನ ಹಣವಂತ ವಿದೇಶಿ ಕಂಪನಿಗಳ ಜೂಜಿನ ಬಯಲಾಗುತ್ತದೆ. ನಮ್ಮ ಜಮೀನಿನಲ್ಲಿ ನಾವೇ ಕೂಲಿಗಳಾಗಿ ಜೀತ ಮಾಡಬೇಕಾದ ಪರಿಸ್ಥಿತಿ ತಲೆದೋರುತ್ತದೆ. ಈಗಾಗಲೇ ನಾವು ಅಂಥ ಪರಿಸ್ಥಿತಿ ಬಹುತೇಕ ಬಂದಿದೆ. ಕೃಷಿ ಜನಜೀವನದ ಸೆಲೆ. ಇಂಥ ಜೀವ ಸೆಲೆ ಇದ್ದಕ್ಕಿದ್ದಂತೆ ನಮಗೆ ನಷ್ಟದ ವ್ಯಾಪಾರ ಎನಿಸಿದೆ ಎಂದರೆ ನಗರೀಕರಣದ ಅಪಸವ್ಯದ ಬಗ್ಗೆ ಆರೋಪ ಮಾಡದೇ ಇರಲಾದೀತೆ? ಯೋಚಿಸಿ.
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

