ಅಂಕಣಗಳು

ಮುಳ್ಳಿನ ಹಾದಿಗೆ ಹೂ ಹಾಸಿದವರ ಹೃದಯಂಗಮ ಕತೆ

'ಸಾರ್, ಮಹೇಶ್ ಎಂಬುವವರು ಸುಮಾರು ಎರಡು ತಾಸಿನಿಂದ...

Published On :

'ಸಾರ್, ಮಹೇಶ್ ಎಂಬುವವರು ಸುಮಾರು ಎರಡು ತಾಸಿನಿಂದ ನಿಮಗಾಗಿ ಕಾಯುತ್ತಿದ್ದಾರೆ. ಕರೆಯಲಾ?' ಎಂದು ನನ್ನ ಸೆಕ್ರೆಟರಿ ರವಿಚಂದ್ರ ಹೇಳಿದರು. ನಾನು ಈಗಲೋ ಆಗಲೋ ಬಡಿಯುವ ಜ್ವಾಲಾಮುಖಿ ಪರ್ವತದ ಮೇಲೆ ಕುಳಿತವರ ಸ್ಥಿತಿಯಲ್ಲಿದ್ದೆ. ಭಗವಂತ ಬಂದು 'ವರ ಕೇಳು' ಅಂತ ಹೇಳಿದರೂ 'ವರವೂ ಬೇಡ, ವಧುವೂ ಬೇಡ. ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡು' ಎಂದು ಹೇಳುತ್ತಿದ್ದೆನೇನೋ? ಟಿವಿ ಚಾನೆಲ್ ಹುಟ್ಟಿಸುವ ಮನಸ್ಥಿತಿ ಅಂಥದು. ನನ್ನ ಭಾವನೆ ಅರ್ಥಮಾಡಿಕೊಂಡ ರವಿಚಂದ್ರ, ಹೊರಗೆ ನನಗಾಗಿ ಕಾಯುತ್ತಿದ್ದ ಮಹೇಶನಿಗೆ, 'ಇಂದು ಭೇಟಿ ಅಸಾಧ್ಯ. ನಾಳೆ ಅವರ ಸಮಯ ಕೇಳಿಕೊಂಡು ಬನ್ನಿ, ಭೇಟಿ ಮಾಡಬಹುದು' ಎಂದು ಹೇಳಿರಬೇಕು. ಅದಕ್ಕೆ ಮಹೇಶ್, 'ಪರವಾಗಿಲ್ಲ, ಎಷ್ಟು ಹೊತ್ತಾದರೂ ಪರವಾಗಿಲ್ಲ, ನಾನು ಇಂದು ಇಡೀ ದಿನ ಬೇಕಾದರೂ ಕಾಯುತ್ತೇನೆ. ಆದರೆ ಇಂದು ಅವರನ್ನು ನೋಡಿಯೇ ಇಲ್ಲಿಂದ ಜಾಗ ಖಾಲಿ ಮಾಡೋದು. ಅವರ ಪಾಡಿಗೆ ಅವರು ಕೆಲಸದಲ್ಲಿ ತಲ್ಲೀನರಾಗಲಿ. ನಾನು ಮಾತ್ರ ಇಲ್ಲಿಯೇ ಕುಳಿತಿರುತ್ತೇನೆ. ನನಗಾಗಿ ಅವರನ್ನು ಡಿಸ್ಟರ್ಬ್ ಮಾಡಬೇಡಿ' ಎಂದು ಹೇಳಿರಬೇಕು. ಅವೆಲ್ಲವನ್ನೂ, ರವಿಚಂದ್ರ ನನಗೆ ಬಂದು ಒಪ್ಪಿಸಿದ.
'... ಅವರನ್ನು ಭೇಟಿ ಮಾಡಿಯೇ ಇಲ್ಲಿಂದ ಜಾಗ ಖಾಲಿ ಮಾಡೋದು...'  ಎಂಬ ಮಾತು ಸಾಲ ಕೊಟ್ಟವರು ಹೇಳಿದ ಮಾತಿನಂತಿದೆಯಲ್ಲ ಎಂದು ನನ್ನೊಳಗೆ ಕೇಳಿಸಿದಂತಾಯಿತು. ನಾನು ನನ್ನ ಕೆಲಸದೊಳಗೆ ಜಾರಿ ಅದರಲ್ಲೇ ಕಳೆದು ಹೋದೆ. ರವಿಚಂದ್ರ ಕೂಡ ಮಧ್ಯೆ ಬಂದು ನೆನಪಿಸಲಿಲ್ಲ. ಆ ದಿನ, ರಾತ್ರಿ ಸುವರ್ಣ ನ್ಯೂಸ್ ಕಚೇರಿಯಿಂದ 'ಕನ್ನಡಪ್ರಭ' ಆಫೀಸಿಗೆ ಹೋಗಬೇಕೆಂದು ಹೊರಬಂದರೆ ನನಗಾಗಿ ಬೆಳಗಿನಿಂದ ಕಾಯುತ್ತಿದ್ದ ವ್ಯಕ್ತಿ ಕಲ್ಲಾಗಿ ಕುಳಿತುಕೊಂಡಿದ್ದ!
ಕಪಾಳಕ್ಕೆ ಹೊಡೆದಂತಾಯಿತು. ಒಬ್ಬನನ್ನು ಇಡೀ ದಿನ ಕಾಯಿಸಿಬಿಟ್ಟೆನಲ್ಲ ಎಂದು ಅತೀವ ಬೇಸರವಾಯಿತು. ಚಡಪಡಿಸುತ್ತಾ ಆ ವ್ಯಕ್ತಿಯ ಮುಂದೆ ಸಣ್ಣವನಾಗಿಬಿಟ್ಟೆ. ಆದರೆ ಅವನಲ್ಲಿ ಆ ಬಗ್ಗೆ ಸ್ವಲ್ಪವೂ ಬೇಸರವಿರಲಿಲ್ಲ. 'ನಿಮ್ಮದೇನೂ ತಪ್ಪಿಲ್ಲ ಬಿಡಿ. ನನಗೆ ಬೇಸರಕ್ಕಿಂತ ಖುಷಿಯೇ ಆಯಿತು. ಉಳಿದುದೆಲ್ಲಕ್ಕಿಂತ ನಮಗೆ ಕೆಲಸವೇ ಮುಖ್ಯ' ಎಂಬ ಜೀವನಪಾಠವನ್ನು ನಿಮಗಾಗಿ ಎಂಟುತಾಸು ಕಾದ ಪ್ರಸಂಗದಿಂದ ಕಲಿತೆ. ದಯವಿಟ್ಟು ಬೇಸರಿಸಿಕೊಳ್ಳಬೇಡಿ.' ಎಂದು ಆ ವ್ಯಕ್ತಿ ನನಗೇ ಸಮಾಧಾನ ಹೇಳಿ, ನನ್ನ ನೆನಪಿನ ಗಣಿಗೆ ಕೈ ಹಾಕಿದ.
'ಸಾರ್ ನಾನು ಮಹೇಶ. ನಾಲ್ಕು ವರ್ಷಗಳ ಹಿಂದೆ ನಾನು ನಿಮ್ಮನ್ನು 'ವಿಜಯ ಕರ್ನಾಟಕ' ಆಫೀಸಿನಲ್ಲಿ ಭೇಟಿಯಾಗಿದ್ದೆ. ನೀವು ಮರೆತಿರಬಹುದು. ಆದರೆ ನಾನು ನನ್ನ ಜನ್ಮದಲ್ಲಿ ನಿಮ್ಮನ್ನು ಮರೆಯಲಾರೆ' ಎಂದು ಹೇಳುತ್ತಾ ಮಹೇಶ್ ಕೈಯಲ್ಲಿ ಹಿಡಿದಿದ್ದ ಸುಂದರವಾದ ಹೂಗೊಂಚಲು ಹಾಗೂ ಸ್ವೀಟ್ ಡಬ್ಬಾವನ್ನು ಕೊಟ್ಟ. ನಾನು ರಿವರ್ಸ್ ಗಿಯರ್ ಹಾಕಿ ನಾಲ್ಕು ವರ್ಷಗಳ ಹಿಂದಕ್ಕೆ ಹೋದೆ. 'ವಿಜಯ ಕರ್ನಾಟಕ' ಆಫೀಸಿಗೆ ಬಂದಿದ್ದ...ಹೌದು... ಅದೇ ಮಹೇಶ!
'ಏನ್ ಮಹೇಶ! ಗುರುತು ಸಿಗದಷ್ಟು ಬದಲಾಗಿಬಿಟ್ಟಿದ್ದೀರಿ. ಕೂದಲೆಲ್ಲ ಉದುರಿ ಹೋಗಿದೆಯಲ್ಲ, ಸ್ವಲ್ಪ ದಪ್ಪ ಬೇರೆ ಆಗಿದ್ದೀರಿ' ಎಂದೆ.
'ಒಂದು ಸಂತಸದ ಸುದ್ದಿ ಹೇಳಲೇಬೇಕು ಎಂದು ಇಷ್ಟು ಹೊತ್ತು ಕಾದು ಕುಳಿತೆ.' ಎಂದು ಹೇಳಿದ ಮಹೇಶ ಒಂದು ಕ್ಷಣ ಸಾವರಿಸಿಕೊಂಡ. ಅವನಲ್ಲಿ ಸಣ್ಣ ಉದ್ವೇಗವಿತ್ತು. ಏನೋ ಸಾಧಿಸಿದ್ದನ್ನು ಹೇಳುವ ಉತ್ಸಾಹವೂ ಇತ್ತು.
'ಸಾರ್, ನಾನು ಕೋಟ್ಯಧೀಶನಾದೆ. ಇಂದು ಬೆಳಗ್ಗೆ ಬ್ಯಾಂಕ್‌ಗೆ ಡೆಪಾಸಿಟ್ ಮಾಡುವಾಗ ನೀವು ನನಗೆ ಬಹಳ ನೆನಪಾದಿರಿ. ಮೊದಲ ಬಾರಿಗೆ ಕೋಟ್ಯಧೀಶನಾದ ಸಂತಸವನ್ನು ಅದುಮಿಟ್ಟುಕೊಳ್ಳಲಾಗಲಿಲ್ಲ' ನಿಮಗೆ ಹೇಳಲೇಬೇಕು ಎಂದು ಇಷ್ಟು ಹೊತ್ತು ಕಾದು ಕುಳಿತೆ. ಅಂದ ಹಾಗೆ ನಾನು ಕೋಟ್ಯಧೀಶನಾಗಲು ನೀವೇ ಕಾರಣ. ಅಂದು ನೀವು ನನಗೆ ಆ ಮಾತುಗಳನ್ನು ಹೇಳದಿದ್ದರೆ, ಓದಲು ಆ ಪುಸ್ತಕ ಕೊಡದಿದ್ದರೆ ನಾನು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ' ಎಂದ ಮಹೇಶ. ಆಗ ಒಂದೊಂದು ಸುರುಳಿಗಳು ಬಿಚ್ಚಿಕೊಳ್ಳಲಾರಂಭಿಸಿದವು.
ಇಲ್ಲಿ ನಿಮಗೆ ನಾನು ಮಹೇಶನ ಬಗ್ಗೆ ತುಸು ಹೇಳಬೇಕು. ಮೂಲತಃ ಮಹೇಶ ಬೆಂಗಳೂರಿನ ಒಂದು ಮಗ್ಗುಲಿಗಿರುವ ವರ್ತೂರಿನ ಸನಿಹದ ಪಣತ್ತೂರು ಗ್ರಾಮದವನು. ತಲತಲಾಂತರಗಳಿಂದ ಅವನ ಪೂರ್ವಿಕರು, ತಂದೆ-ತಾಯಿ ಕನಕಾಂಬರ ಹೂವು ಬೆಳೆದು ಜೀವನ ಸಾಗಿಸಿದವರು. ಮಹೇಶನಿಗೂ ಅದೇ ಕೃಷಿ (ಪುಷ್ಪೋದ್ಯಮ)ಯಲ್ಲಿ ಏನಾದರೂ ಅಗಾಧ ಸಾಧನೆ ಮಾಡಬೇಕೆಂಬ ಹಂಬಲ. ಒಂದು ಬೆಳ್ಳಂಬೆಳಗ್ಗೆ ನಾನು ಕೆಮೆರಾವನ್ನು ಹೆಗಲಿಗೇರಿಸಿಕೊಂಡು ಪಣತ್ತೂರಿಗೆ ಹೋದಾಗ ಮಹೇಶ ಸಿಕ್ಕ. ಆತನ ಜತೆ ಐದು-ಹತ್ತು ನಿಮಿಷ ಕಳೆದಿರಬಹುದು. ನನ್ನ ಮೊಬೈಲ್ ನಂಬರ್ ಕೊಟ್ಟು ಆಫೀಸಿಗೆ ಬರುವಂತೆ ಹೇಳಿದೆ. ಅದಾಗಿ ಹದಿನೈದು ದಿನಗಳಲ್ಲಿ ಐದಾರು ಸಲ ಫೋನ್ ಮಾಡಿ ಆತ ಅಪಾಯಿಂಟ್‌ಮೆಂಟ್ ಕೋರಿದ. ಒಂದು ದಿನ ಆಫೀಸಿಗೆ ಬಂದೇಬಿಟ್ಟ.
ಮಹೇಶನಿಗೆ ಮೂರು ಎಕರೆ ಪಿತ್ರಾರ್ಜಿತ ಜಮೀನಿತ್ತು. ಉಳಿದವುಗಳನ್ನು ಸೈಟ್ ಮಾಡಿ ಮಾರಿ, ಬಂದ ಹಣವನ್ನೆಲ್ಲ ತಂದೆ-ತಮ್ಮಂದಿರು ಕಳೆದು ಬಿಟ್ಟಿದ್ದರು. ಆಗ ತಾನೆ ಡಿಗ್ರಿ ಮುಗಿಸಿದ್ದ ಮಹೇಶನಲ್ಲಿ ಉತ್ಸಾಹವಿತ್ತು. ಏನಾದರೂ ಸಾಧಿಸಬೇಕೆಂಬ ಛಲವಿತ್ತು. ಆದರೆ ಏನು ಮಾಡಬೇಕೆಂಬ ಬಗ್ಗೆ ಸ್ಪಷ್ಟ ಕಲ್ಪನೆಯಿರಲಿಲ್ಲ. ಅವನ ಮುಂದೆ ದಾರಿಯಿತ್ತು. ಕ್ರಮಿಸುವ ತಾಕತ್ತು ಇತ್ತು. ಆದರೆ ಗುರಿ ಇರಲಿಲ್ಲ.
'ಸಾರ್, ನನಗೊಂದು ದಾರಿ ತೋರಿಸಿ. ನಾನು ಪುಷ್ಪೋದ್ಯಮದಲ್ಲಿಯೇ ಅಗಾಧವಾದುದನ್ನು ಸಾಧಿಸಬೇಕೆಂದಿದ್ದೇನೆ. ಆದರೆ ಹೇಗೆ ಮುಂದುವರಿಯುವುದು ಎಂಬುದು ಗೊತ್ತಿಲ್ಲ.' ಎಂದು ಮಹೇಶ ಮನದಾಳವನ್ನು ತೋಡಿಕೊಂಡಿದ್ದ.
ಅಷ್ಟಕ್ಕೂ ಪುಷ್ಪೋದ್ಯಮದ ಬಗ್ಗೆ ನನಗೇನು ಗೊತ್ತು ಬದನೆಕಾಯಿ!? ಆತನಿಗೆ ಏನೂಂತ ಹೇಳಲಿ? ಹೇಗೆ ಸಹಾಯ ಮಾಡುವುದು?
'ಮಹೇಶ್, ನಿನ್ನ ಛಲ ನಿಜಕ್ಕೂ ಶ್ಲಾಘನೀಯ. ಆದರೆ ನೀನು ಹೇಳುವ ಪುಷ್ಪೋದ್ಯಮದ ಬಗ್ಗೆ ನನಗೆ ಏನೇನೂ ಗೊತ್ತಿಲ್ಲ. ನಿನಗೆ ಏನೂಂತ ಮಾರ್ಗದರ್ಶನ ಮಾಡೋದು ಮಾರಾಯ? ನೀನು ನಿನ್ನ ತಂದೆಯನ್ನು ಕೇಳಿದರೆ ಅವರೇ ಹೇಳುತ್ತಿದ್ದರೇನೋ?' ಎಂದು ಅವನನ್ನು ಮೆಲ್ಲಗೆ ಸಾಗಹಾಕಲು ನೋಡಿದೆ. ಆದರೆ ಬಡಪೆಟ್ಟಿಗೆ ಕದಲಲಿಲ್ಲ.
'ನಿನ್ನಲ್ಲಿರುವ ಮೂರು ಎಕರೆ ಜಾಗದಲ್ಲಿ ಗ್ಲಾಸ್‌ಹೌಸ್ ನಿರ್ಮಿಸಿ ಆರ್ಕಿಡ್, ರೋಸ್ ಹೂವುಗಳನ್ನು ಬೆಳೆದು ಬೆಂಗಳೂರಿನ ಪಂಚತಾರಾ ಹೋಟೆಲು, ಕೆಲವು ಕಾರ್ಪೋರೆಟ್ ಆಫೀಸಿಗೆ ಸರಬರಾಜು ಮಾಡಬಹುದಲ್ಲ? ಪ್ರತಿದಿನ ಕನಿಷ್ಠ ಇಪ್ಪತ್ತು ಇಂಥ ಸಂಸ್ಥೆಗಳಿಗೆ ಹೂವುಗಳನ್ನು ಪೂರೈಸುವ, ಅವುಗಳ ಪಾಲನೆ-ಪೋಷಣೆ ಮಾಡಿ ನಿರ್ವಹಣೆ ಮಾಡುವ ಜವಾಬ್ದಾರಿಯನ್ನೂ ಹೊತ್ತುಕೊಂಡರೆ, ಜನ ನಿನ್ನ ಸೇವೆಯನ್ನು ಇಷ್ಟಪಡಬಹುದು' ಎಂದು ಸಾಮಾನ್ಯ ಸಲಹೆಯನ್ನು ಕೊಟ್ಟೆ.
ಅದು ಅವನಿಗೆ ಇಷ್ಟವಾದಂತೆನಿಸಿತು. ಸಂತಸದಿಂದ ತಲೆಯಾಡಿಸಿದ. ನನಗೆ ಅದಕ್ಕಿಂತ ಹೆಚ್ಚು ಏನು ಹೇಳಬೇಕೋ ಗೊತ್ತಾಗಲಿಲ್ಲ. ಆದರೆ ಮಹೇಶ ಅಷ್ಟಕ್ಕೆ ಸುಮ್ಮನಾಗದೇ ಹತ್ತಾರು ಪ್ರಶ್ನೆಗಳನ್ನು ಕೇಳುತ್ತಿದ್ದ. ಅವನ ಹಸಿವನ್ನು ತಣಿಸುವ ಉಪಾಯಗಳು ನನ್ನಲ್ಲಿ ಇರಲಿಲ್ಲ. ಹಾಗೆಂದು ಅವನ ಆಸೆಗೆ ತಣ್ಣೀರನ್ನು ಎರಚಲು ಮನಸ್ಸಾಗಲಿಲ್ಲ.
ನನಗೆ ಆಗ ಎಂದೋ ಓದಿದ ಪುಸ್ತಕ ನೆನಪಾಯಿತು. 'ಮಹೇಶ್, ನಿನಗೊಂದು ಪುಸ್ತಕ ಕೊಡ್ತೇನೆ. ತಕ್ಷಣ ಸಿಕ್ಕರೆ ನೀನು ಅದೃಷ್ಟವಂತ. ಅದನ್ನು ನೀನು ಓದಲೇಬೇಕು. ನೀನು ನನ್ನಿಂದ ನಿರೀಕ್ಷಿಸಿದ ಎಲ್ಲ ಪ್ರಶ್ನೆಗಳಿಗೆ ಅದರಲ್ಲಿ ಉತ್ತರವಿದೆ. ತಾಳು ಹುಡುಕಿ ಕೊಡುತ್ತೇನೆ' ಎಂದು ನನ್ನ ಸಂಗ್ರಹದಲ್ಲಿ ತಡಕಾಡಲಾರಂಭಿಸಿದೆ. ಅವನ ಅದೃಷ್ಟಕ್ಕೆ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತಗುಲಿಕೊಂಡಂತೆ ಆ ಪುಸ್ತಕ ಸಿಕ್ಕಿತು. ಆ ಪುಸ್ತಕವನ್ನು ಜೆರಾಕ್ಸ್ ಮಾಡಿಸಿ, 'ಮಹೇಶ್, ಇದೂ ಸಹ ಒಬ್ಬ ಪುಷ್ಪೋದ್ಯಮಿಯ ಆತ್ಮಕತೆ. ನಾನು ಬಹಳ ಇಷ್ಟಪಟ್ಟ ಕೃತಿ. ಖಂಡಿತವಾಗಿಯೂ ನಿನಗೆ ಉಪಯುಕ್ತ ಮಾಹಿತಿ ಸಿಗಬಹುದು. ಎಲ್ಲರ ಬದುಕು ಭಿನ್ನಭಿನ್ನ. ಒಬ್ಬರಂತೆ ಮತ್ತೊಬ್ಬರು ಅನುಕರಿಸಲು ಆಗುವುದಿಲ್ಲ. ಆದರೂ ನಿನಗೆ ಉಪಯುಕ್ತವಾದುದು ಈ ಕೃತಿಯಲ್ಲಿ ಸಿಕ್ಕರೆ ನಿನ್ನ ಪುಣ್ಯ' ಎಂದು ಮಹೇಶನನ್ನು ಕಳಿಸಿಕೊಟ್ಟೆ. ಅದಾದ ಬಳಿಕ ಆತನ ಪತ್ತೆಯೇ ಇರಲಿಲ್ಲ. ಮೊನ್ನೆಯೇ ಅವನನ್ನು ನೋಡಿದ್ದು. ನಾನು ಮಹೇಶನಿಗೆ ನೀಡಿದ ಪುಸ್ತಕವನ್ನು ಸುಮಾರು ಐದಾರು ವರ್ಷಗಳ ಹಿಂದೆ ಓದಿದ್ದೆ. ಅಂದ ಹಾಗೆ ಆ ಕೃತಿಯ ಹೆಸರು Stop and Sell the Roses. ಜೇಮ್ಸ್ ಮ್ಯಾಕ್‌ಕಾನ್, ಎಂಬ ಪುಷ್ಪೋದ್ಯಮಿಯ ಆತ್ಮಕತೆ.
ಜೇಮ್ಸ್ ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯ. ಆದರೆ ಅದಮ್ಯ ಆಸೆ ಇಟ್ಟುಕೊಂಡವ. ತನ್ನ ಸಾಮರ್ಥ್ಯದಲ್ಲಿ ಅಪಾರ ನಂಬಿಕೆ ಇಟ್ಟುಕೊಂಡವ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಹಂಬಲಿಸಿದವ. ಹಾಗೆಂದು ಏನು ಮಾಡಬೇಕೆಂಬ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲದವ. ಮಾಡುವ ಕೆಲಸದಲ್ಲಿ ಶ್ರದ್ಧೆಯಿದ್ದರೂ ಗುರಿಯಿಲ್ಲದ ಪ್ರಯತ್ನದಿಂದ ನಿಶ್ಚಿತ ಫಲಿತಾಂಶ ಸಿಗದೇ ಜೀವನದಲ್ಲಿ ಹತಾಶೆ ಅನುಭವಿಸಿದವ. ಹೀಗಾಗಿ ಆತನಿಗೆ ನೆಟ್ಟಗೆ ಕಾಲೇಜು ಡಿಗ್ರಿ ಪಡೆಯಲೂ ಆಗಲಿಲ್ಲ. ಅರ್ಧಕ್ಕೆ ಓದನ್ನು ಬಿಟ್ಟುಬಿಟ್ಟ. ಒಂದೆರಡು ಅರೆಕಾಲಿಕ ನೌಕರಿ ಮಾಡಿದ. ಅವು ಕೈಗೆ ಹತ್ತಲಿಲ್ಲ. ಇವ್ಯಾವವೂ ಬೇಡ ಎಂದು ಸಾಮಾಜಿಕ ಕೆಲಸದಲ್ಲಿ ತೊಡಗಿದ. ಸಮಾಧಾನವೇನೋ ಸಿಕ್ಕಿತು. ಆದರೆ ಹಣ ಸಿಗಲಿಲ್ಲ.
ಜೀವನದಲ್ಲಿ ಜುಗುಪ್ಸೆ ಆವರಿಸಿಕೊಳ್ಳುವ ಮೊದಲು ಏನಾದರೂ ಸಾಧಿಸಲೇಬೇಕೆಂಬ ತಹತಹ ಜಾಸ್ತಿಯಾಯಿತು. ಆತನಿಗೆ ಒಂದು ಅಂಶ ಚೆನ್ನಾಗಿ ಗೊತ್ತಿತ್ತು. ಒಂದು ಅವಕಾಶ ಸಿಕ್ಕರೆ ಒಂದು ಕೈ ನೋಡಿಯೇ ಬಿಡುತ್ತೇನೆ, ನಾನು ಯಾರಿಗೂ ಕಮ್ಮಿಯಿಲ್ಲ ಎಂದು ಪದೇ ಪದೆ ಹೇಳಿಕೊಳ್ಳುತ್ತಿದ್ದ. ಈ ಒಂದು ಆಸೆಯೇ ಅವನನ್ನು ಹಿಡಿದಿಟ್ಟಿತ್ತು. ಈ ಯೌವನದಲ್ಲಿ ಸಮಾಜ ಸೇವೆ ಮಾಡಬೇಡ ಎಂದು ಸ್ನೇಹಿತರು ಹೇಳಿದರು. ಆದರೆ ಎರಡು ಹೊತ್ತಿನ ಊಟ ಹಾಗೂ ವಾಸಿಸಲು ಒಂದು ಉಚಿತ ಕೋಣೆ ಸಿಕ್ಕಿದ್ದರಿಂದ ಅಲ್ಲಿ ಅದನ್ನು ನೆಚ್ಚಿಕೊಳ್ಳುವುದೂ ಅನಿವಾರ್ಯವಾಯಿತು. ವಾರದ ಕೊನೆಯ ಎರಡು ದಿನ ನ್ಯೂಯಾರ್ಕಿನ ಹೂವಿನ ಅಂಗಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ.
ಆಶ್ಚರ್ಯ ಎಂದರೆ ಈ ಹೂವಿನ ವ್ಯಾಪಾರ ತನ್ನ ಬದುಕಿನ ಗುರಿಯನ್ನೇ ಬದಲಿಸಬಹುದು ಎಂದು ಜೇಮ್ಸ್ ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಅಂಗಡಿಗೆ ಬರುವ ಗ್ರಾಹಕರ ಮನಸ್ಥಿತಿಯನ್ನು ಹತ್ತಿರದಿಂದ ನೋಡಲಾರಂಭಿಸಿದ. ಹೂವಿನ ಅಂಗಡಿಗೇಕೆ ಜನ ಬರುತ್ತಾರೆ? ಹೂಗೊಂಚಲನ್ನು ಖರೀದಿಸುವುದೇಕೆ? ಹೂವಿಗೂ, ಸಂಬಂಧಕ್ಕೂ, ಭಾವನೆಗೂ ಇರುವ ಸಂಬಂಧವಾದರೂ ಏನು? ಜನರ ಬದುಕಿನಲ್ಲಿ ಹೂವೇಕೆ ಇಷ್ಟೊಂದು ಪ್ರಮುಖ ಪಾತ್ರ ವಹಿಸುತ್ತದೆ? ಎಂದೆಲ್ಲ ಯೋಚಿಸಲಾರಂಭಿಸಿದ. ಒಂದು ದಿನ ಅಂಗಡಿ ತೆರೆಯದೇ ಗ್ರಾಹಕರ ಚಡಪಡಿಕೆಯನ್ನು ಗಮನಿಸಿದ. ಆತನಿಗೆ ಅನಿಸಲಾರಂಭಿಸಿತು. ತಾನು ಹೂವಿನ ವ್ಯಾಪಾರವನ್ನೇಕೆ ಮಾಡಬೇಕು? ಬೇರೆಯವರ ಕೈಕೆಳಗೆ ಕೆಲಸ ಮಾಡುವ ಬದಲು ನಾನೇಕೆ ಸ್ವಂತವಾಗಿ ಹೂವಿನ ಅಂಗಡಿ ತೆರೆಯಬಾರದು?
ಜೇಮ್ಸ್ ನ್ಯೂಯಾರ್ಕಿನ ಜನನಿಬಿಡ ಮ್ಯಾನ್‌ಹಟನ್ ಪ್ರದೇಶದಲ್ಲಿ ನಾಲ್ಕು ಅಡಿ ಅಗಲ, ಆರು ಅಡಿ ಉದ್ದದ ಹೂವಿನ ಅಂಗಡಿ ತೆರೆದ. ಗ್ರಾಹಕರು ಹೇಳುವ ಆಕಾರಕ್ಕೆ ಹೂಗುಚ್ಛ ತಯಾರಿಸಿ ಕೊಡುವುದು ವಾಡಿಕೆ ತಾನೆ? ಆದರೆ ಜೇಮ್ಸ್ ತನ್ನ ಗ್ರಾಹಕರಿಗೆ ಈ ಗೊಂಚಲನ್ನು ಯಾರಿಗೆ, ಯಾವ ಸಂದರ್ಭಕ್ಕೆ ಕೊಡುತ್ತೀರಿ ಎಂದು ಕೇಳಿ ಅದಕ್ಕೆ ತಕ್ಕಂತೆ ಅಂದವಾಗಿ ರೂಪಿಸಿ ಕೊಡುತ್ತಿದ್ದ. ಉಳಿದವರಿಗೂ, ಆತನಿಗೂ ಇರುವ ವ್ಯತ್ಯಾಸವೇ ಅದಾಗಿತ್ತು.
ಆತನಿಗೆ ಹೂವಿನದಂಧೆ ಅದೆಷ್ಟು ಬೇಗನೆ ಕೈ ಹಿಡಿಯಿತೆಂದರೆ ಹತ್ತು ವರ್ಷಗಳಲ್ಲಿ ಆತ ಅಮೆರಿಕದ ಹದಿನಾಲ್ಕು ನಗರಗಳಲ್ಲಿ ಅಂಗಡಿಗಳನ್ನು ಹೊಂದಿದ್ದ. ಅಮೆರಿಕದಲ್ಲೊಂದೇ ಅಲ್ಲ, ವಿಶ್ವದೆಲ್ಲೆಡೆ ತನ್ನ ಸೇವೆಯನ್ನು ವಿಸ್ತರಿಸಬೇಕೆಂಬ ಆಸೆ ಅವನನ್ನು ಕಾಡಲಾರಂಭಿಸಿತು. ಒಂದು ಫೋನ್ ಮಾಡಿದರೆ ಸಾಕು ಹೂಗೊಂಚಲು ಮನೆಗೆ ತಲುಪಬೇಕು. ಅಂಥ ಸೇವೆಯಿಂದ ತನಗೂ ಲಾಭ, ಜನರಿಗೂ ಪ್ರಯೋಜನವಾಗುತ್ತದೆಂದು ಭಾವಿಸಿದ ಜೇಮ್ಸ್, ಒಳ್ಳೆಯ ಟೋಲ್‌ಫ್ರೀ ಫೋನ್ ನಂಬರ್‌ಗಾಗಿ ಹುಡುಕಾಡುತ್ತಿದ್ದ. ಆಗ ಅವನಿಗೆ ದಿವಾಳಿಯಾದ ಕಂಪನಿ ಯೊಂದರ ನಂಬರ್ 1-800 ಸಿಕ್ಕಿತು. ಅದನ್ನೇ ತನ್ನ ಅಂಗಡಿ ಹಾಗೂ ಆನ್‌ಲೈನ್ ಸೇವೆಯ ಹೆಸರನ್ನಾಗಿಟ್ಟುಕೊಂಡ. www.1800flowers.com ಗೆ ಹೋದರೆ ಎಲ್ಲಿಗೆ ಬೇಕಾದರೂ ಹೂವುಗಳನ್ನು ಕಳಿಸಬಹುದು. ಒಂದು ದಿನದೊಳಗೆ ನೀವು ಬಯಸಿದ ಊರಿಗೆ, ಮನೆಗೆ ಹೂಗುಚ್ಛವನ್ನು ತಲುಪಿಸುವ ವ್ಯವಸ್ಥೆಯಿದು. ಈ ದಂಧೆಗೆ ಅದೆಂಥ ಬೇಡಿಕೆ ಬಂತೆಂದರೆ ಜೇಮ್ಸ್‌ಗೆ ಡಿಮಾಂಡ್‌ಗಳನ್ನು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಆತ ಸ್ವಂತ ವಿಮಾನ ಖರೀದಿಸಿ, ಆ ಮೂಲಕ ಹೂವುಗಳನ್ನು ಸಾಗಿಸಲಾರಂಭಿಸಿದ. ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲೂ ಆತನ ಕಂಪನಿ ಲಿಸ್ಟ್ ಆಯಿತು. ಹಣ ಹರಿದು ಬಂದಿತು. '1800 ಫ್ಲವರ್ಸ್‌' ಮನೆಮಾತಾಯಿತು.
ಇಷ್ಟೇ ಆಗಿದ್ದಿದ್ದರೆ ನಾನು ಜೇಮ್ಸ್‌ನ ಪುಸ್ತಕವನ್ನು ಮಹೇಶನಿಗೆ ಕೊಡುತ್ತಿರಲಿಲ್ಲ. ಆದರೆ ಆತ ತನ್ನ ಬದುಕಿನ ಯಶೋಗಾಥೆ ಹೇಳುತ್ತಾ ತನ್ನ ಬದುಕನ್ನೇ ತೆರೆದಿಟ್ಟಿದ್ದ. ಈ ಕಾರಣಕ್ಕೆ Stop and sell the Roses ಆಪ್ತವಾಗುತ್ತದೆ. ಹೂವಿನ ಮೂಲಕ ಬದುಕಿನ ಸಾರವನ್ನು ಜೇಮ್ಸ್ ಈ ಕೃತಿಯಲ್ಲಿ ಹೇಳಿದ್ದ.
ಒಂದು ಪುಸ್ತಕ, ಪುಟ್ಟ ಸಲಹೆ, ಆಪ್ತವಾದ ಮಾತು ಮಹೇಶನ ಬಾಳಲ್ಲಿ ಸುಂದರ ಹೂದೋಟವನ್ನೇ ನಿರ್ಮಿಸಿತಲ್ಲ, ಅದನ್ನು ಆತ ಸಾಕಾರ ಮಾಡಿ ತೋರಿಸಿದನಲ್ಲ ಎಂದು ನನಗೆ ಅತೀವ ಅಭಿಮಾನ ಮೂಡಿತು.
ಇಬ್ಬರ ಕಣ್ಣುಗಳೂ ಮಂಜಾಗಿದ್ದವು!

- ವಿಶ್ವೇಶ್ವರ ಭಟ್
vbhat@me.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.