ಕಮಲ್‌ಹಾಸನ್‌ಗೆ ಇಲ್ಲದ ಸ್ವಾತಂತ್ರ್ಯ ಅನಿರುದ್ಧನಿಗೇಕೆ?
ವಿವಾದ ಮತ್ತು ಪ್ರಭಟನೆಯಿಂದ 'ವಿಶ್ವರೂಪಂ' ಚಲನಚಿತ್ರ 7 ದೃಶ್ಯಗಳನ್ನು ಕತ್ತರಿಸಿಕೊಂಡು 'ವಿಶ್ವವಿರೂಪಂ'ಗೊಂಡಿತು!
ಕಾಶ್ಮೀರದಲ್ಲಿ ಹುಡುಗಿಯರ 'ಬ್ಯಾಂಡ್' 'ಡಿಸ್‌ಬ್ಯಾಂಡ್' ಆಯಿತು.
ಅದೇ ಒಬ್ಬ ಕಲಾವಿದ ಬಿಡಿಸಿದ ದೇವತೆಗಳ ನಗ್ನ ಅಥವಾ ಅರೆನಗ್ನ ಚಿತ್ರವನ್ನು ಬೆಂಗಳೂರು ಚಿತ್ರಕಲಾ ಪರಿಷತ್‌ನಿಂದ ತೆರವು ಮಾಡಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂಬ ಬೊಬ್ಬೆ!
ಕಮಲ್ ಹಾಸನ್ ಅಭಿನಯದ 'ವಿಶ್ವರೂಪಂ' ಸಿನಿಮಾ ಒಂದು ಧರ್ಮದ ಜನರ ಭಾವನೆಗೆ ಧಕ್ಕೆಯುಂಟುಮಾಡುತ್ತದೆ ಎಂಬ ಕಾರಣಕ್ಕೆ ದೊಡ್ಡ ಗದ್ದಲವೇ ಆಯಿತು. ಯಾವ ಕಡೆ ತೀರ್ಪು ನೀಡಬೇಕು ಎಂಬುದು ತಿಳಿಯದೇ ನ್ಯಾಯಾಲಯವೂ 'ನೀವೇ ಸುಧಾರಿಸಿಕೊಳ್ಳಿ' ಎಂದಿತು. ಹಾಗಂತ ಸಿನಿಮಾದಲ್ಲಿ ಎಲ್ಲೂ ಒಂದು ಧರ್ಮದ ದೇವರನ್ನು ಅಥವಾ ಧರ್ಮಗ್ರಂಥವನ್ನು ಹೀಗಳೆಯಲಾಗಿಲ್ಲ.
ಕಾಶ್ಮೀರದಲ್ಲಿ ಕೇವಲ ಹುಡುಗಿಯರೇ ಇರುವ ಬ್ಯಾಂಡ್ ಸಿದ್ಧವಾಗಿತ್ತು. ಅವರು ಮಾಡುತ್ತಿದ್ದುದು ಏನಪ್ಪಾ? ಪಾಶ್ಚಾತ್ಯ ಸಂಗೀತ ಹಾಡುವುದು. ಗಿಟಾರ್, ಡ್ರಮ್ಸ್ ಮುಂತಾದ ಸಂಗೀತ ವಾದ್ಯಗಳನ್ನು ನುಡಿಸುವುದು. ಅವರು ಯಾವದೃಷ್ಟಿಯಿಂದಲೂ ಯಾವುದೇ ಧರ್ಮದ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿರಲಿಲ್ಲ. ಆದರೂ ಅವರ ಬ್ಯಾಂಡ್ ಅನ್ನು ಇನ್ನಾರೋ ಬಾರಿಸಿ, ಒಡೆದುಹಾಕಿದರು. ಸ್ವಯಂ ಘೋಷಿತ ಮತ್ತು ನಿಜವಾಗಿಯೂ ಬುದ್ದಿ ಇರುವ ಬುದ್ದಿಜೀವಿಗಳಿಗೆ ಈ ಬ್ಯಾಂಡ್ ಕಾರ್ಯನಿರ್ವಹಿಸುವಂತೆ ಮಾಡುವ ತಾಕತ್ತಿದೆಯೇ?
ಅದನ್ನು ಪುನಾರಂಭಿಸುವ ಮಾತು ಬಿಡಿ, ಅದರ ವಿರುದ್ಧ ಸೊಲ್ಲೆತ್ತಲೂ ತಾಕ್ಕತ್ತಿಲ್ಲ ಇವರಿಗೆ.
ಅಂಥವರೆಲ್ಲ ಸೇರಿ ಈಗ ಕಲಾವಿದ ಅನಿರುದ್ಧನ ಪರವಾಗಿ ಹೋರಾಟ ಮಾಡುವ ಪೋಸು ನೀಡುತ್ತಿದ್ದಾರೆ. ಹಿಂದು ಧರ್ಮಕ್ಕೆ ಸಂಬಂಧಿಸಿದ್ದಾದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯ. ಅದೇ ಬೇರೆ ಧರ್ಮಕ್ಕೆ ಸಂಬಂಧಿಸಿದ್ದಾದರೆ ಅದು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸಂಗತಿ! ಯಾವ ಸೀಮೆ ನ್ಯಾಯ ಸ್ವಾಮಿ ಇದು?
ಕಮಲ್ ಹಾಸನ್, ಕಾಶ್ಮೀರದ ಯುವತಿಯರು ಮತ್ತು ಅನಿರುದ್ಧ ಎಲ್ಲರೂ ಒಂದೇ ದೇಶದ, ಒಂದೇ ಸಂವಿಧಾನದ ವ್ಯಾಪ್ತಿಯಲ್ಲಿದ್ದಾರೆ. ಆದರೂ ಬೇರೆ ಬೇರೆ ವ್ಯಾಖ್ಯಾನ!
ಎಂ.ಎಫ್. ಹುಸೇನ್ ಅವರು ದೇವತೆಯರ ನಗ್ನ ಚಿತ್ರಗಳನ್ನು ಬಿಡಿಸಿದಾಗಲೂ ಈ ಜನ ಹೀಗೇ ವಾದ ಮಾಡಿದ್ದರು. ಅವರು ದೇಶ ಬಿಟ್ಟು ಹೋಗಿದ್ದು ದೇಶಕ್ಕಾದ ಅವಮಾನ ಎಂಬಂತೆ ಮಾತನಾಡುವವರಿದ್ದಾರೆ. ಅದು ದೇಶಕ್ಕಾದ ಅವಮಾನವಾದರೆ, ಯಾವ ನಗ್ನತೆಯನ್ನೂ ತೋರಿಸದ ಕಮಲ್ ಹಾಸನ್ ಅವರಿಂದ ದೇಶಬಿಟ್ಟು ಹೋಗಬೇಕಾಗುತ್ತದೆ ಎಂಬ ಮಾತು ಹೇಳಿಸಿದ್ದೂ ದೇಶಕ್ಕಾದ ಅವಮಾನವೇ ಅಲ್ಲವೇ?
ದೂರಿನ ಹಿನ್ನೆಲೆಯಲ್ಲಿ ಬೆಂಗಳೂರು ಚಿತ್ರಕಲಾ ಪರಿಷತ್ತಿನಲ್ಲಿ ಪ್ರದರ್ಶನಕ್ಕಿಡಲಾಗಿದ್ದ ಅನಿರುದ್ಧ ಅವರ ಚಿತ್ರಕಲೆಗಳಲ್ಲಿ 3-4 ಚಿತ್ರಗಳನ್ನು ಮಾತ್ರ ತೆಗೆಯಲು ಸೂಚಿಸಲಾಗಿದೆ. ಅವರ ಚಿತ್ರಕಲಾ ಪ್ರದರ್ಶನವನ್ನೇ ನಿಲ್ಲಿಸಬೇಕು ಎಂದು ಯಾರೂ ಹೇಳಿಲ್ಲ. ಆದರೂ ಅನಿರುದ್ಧ ಅವರು ಚಿತ್ರ ಬಿಡಿಸುವುದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ವಾದ ಮುಂದಿಡಲಾಗಿದೆ. ಚಿತ್ರ ಬಿಡಿಸುವುದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯವಾದರೆ, ಅದು ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡುತ್ತಿದೆ ಎಂದು ಹೇಳುವುದು ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯವೇ ಅಲ್ಲವೇ?
ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸಿ ಚಿತ್ರ ಬಿಡಿಸಬಹುದು. ಆದರೆ ಆ ಚಿತ್ರ ನನ್ನ ಭಾವನೆಗಳಿಗೆ ಧಕ್ಕೆಯುಂಟುಮಾಡುತ್ತಿದೆ ಎಂದು ಅದೇ ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸಿ ಹೇಳುವಂತಿಲ್ಲ! ಎಂಥಾ ದ್ವಂದ್ವನೀತಿ!
ಅನಿರುದ್ಧ ಅವರ ಕಲಾಕೃತಿಗಳನ್ನು ಬೆಂಬಲಿಸುವವರು, 'ಹಿಂದು ದೇವಸ್ಥಾನಗಳಲ್ಲಿಯೇ ನಗ್ನತೆಯಿದೆ. ಸಾಕಷ್ಟು ನಗ್ನ ಚಿತ್ರಗಳನ್ನು ದೇವಸ್ಥಾನಗಳಲ್ಲಿಯೇ ಕಾಣಬಹುದು' ಎಂಬ ವಾದವನ್ನು ಮುಂದಿಡುತ್ತಾರೆ. ಆದರೆ ನನಗೆ ತಿಳಿದಂತೆ, ಶಿವ-ಪಾರ್ವತಿಯರ, ಶಾರದೆಯ, ಕಾಳಿಯ ನಗ್ನ ಚಿತ್ರಗಳಾಗಲಿ, ಅವರ ಮೈಥುನದ ಚಿತ್ರಗಳಾಗಲೀ ಇಲ್ಲ. ದೇವಸ್ಥಾನಗಳ ಹೊರಭಾಗದಲ್ಲಿ ಮನುಷ್ಯ ಸಹಜವಾದ ಕ್ರಿಯೆಗಳ ಚಿತ್ರಗಳಿವೆ. ಇವ್ಯಾವುದರಲ್ಲೂ ಸುಖ, ನೆಮ್ಮದಿ ಕಾಣದ ಮನುಷ್ಯ ಅದನ್ನು ಹುಡುಕಿಕೊಂಡು ದೇವರಲ್ಲಿಗೆ ಬರುತ್ತಾನೆ ಎಂಬ ಅರ್ಥವೂ ಅದರಲ್ಲಿ ಅಡಗಿರಬಹುದಲ್ಲವೇ? ಅಥವಾ ಮನುಷ್ಯ ಸಹಜವಾದ ಕೆಟ್ಟಗುಣಗಳನ್ನು ಹೊರಗೆ ಬಿಟ್ಟು ಒಳಗೆ ಬನ್ನಿ ಎಂಬ ಸಂದೇಶವೂ ಆಗಿರಬಹುದು.
ದೇವಸ್ಥಾನಗಳಲ್ಲಿ ಯುದ್ಧದ ಚಿತ್ರಗಳೂ ಇವೆ. ಹಾಗಂತ ಯುದ್ಧ ಮಾಡುವುದು ಸರಿ ಎಂದು ಹೇಳಲಾದೀತೇ?
ಅನಿರುದ್ಧ ಅವರ ಚಿತ್ರಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಒಬ್ಬರು ಆಂಗ್ಲ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡುತ್ತ, 'ಮೂರು ವರ್ಷಗಳ ಹಿಂದೆಯೇ ಇಬ್ಬರು ಪ್ರೌಢ ವ್ಯಕ್ತಿಗಳು ಇಷ್ಟಪಟ್ಟು ಪಾರ್ಕ್‌ನಂತಹ ಸಾರ್ವಜನಿಕ ಸ್ಥಳದಲ್ಲಿ ಮುತ್ತು ಕೊಟ್ಟರೆ ಅದು ಅಶ್ಲೀಲ ನಡವಳಿಕೆ ಅಲ್ಲ ಎಂದು ತೀರ್ಪು ನೀಡಿದೆ. ಅನಿರುದ್ಧ ಕೂಡ ತನ್ನ ಚಿತ್ರಕಲಾ ಪ್ರದರ್ಶನಕ್ಕೆ ವಯಸ್ಸಿನ ಮಿತಿ ಅಳವಡಿಸಿ ಬೋರ್ಡ್ ಹಾಕಿದ್ದಾರೆ. ಹಾಗಾಗಿ ಅದನ್ನು ವಿರೋಧಿಸುವುದು ಸರಿಯಲ್ಲ' ಎಂಬ ಹೊಸದೊಂದು ವಾದ ಮಂಡಿಸಿದ್ದಾರೆ.
ಹಾಗೆ ಹೇಳುವವರಿಗೆ ನನ್ನದು ಒಂದೇ ಒಂದು ಪ್ರಶ್ನೆ. ಸ್ವಾಮಿ ನಿಮ್ಮ ಮಗಳು ಪಾರ್ಕ್‌ನಲ್ಲಿ ಕುಳಿತು ಒಬ್ಬ ಹುಡುಗನಿಗೆ ಮುತ್ತು ಕೊಡುತ್ತಿದ್ದರೆ ನೀವು ಸುಮ್ಮನಿರುತ್ತೀರೋ? ಅಥವಾ ಕರೆದು ಬುದ್ಧಿ ಹೇಳುತ್ತೀರೋ? ಇದು ಸಾರ್ವಜನಿಕ ಸ್ಥಳದ ಕತೆಯಾಯಿತು. ಹೇಳಿಕೆ ನೀಡಿದವರ ಮನೆಯಲ್ಲೇ ಮಗ ಮತ್ತು ಸೊಸೆ, ಅವರ ಎದುರಿಗೇ ಹಾಲ್‌ನಲ್ಲಿ ಮುತ್ತು ಕೊಟ್ಟುಕೊಂಡರೆ ಹೇಗಿರುತ್ತೆ? ನಿಮ್ಮ ಮಗಳು ಅಥವಾ ಸೊಸೆ ನಿಮ್ಮ ಮನೆ ಚಾಲಕ ಅಥವಾ ಇನ್ನೊಬ್ಬ ಸಂಬಂಧಿಯೊಟ್ಟಿಗೆ ಮುತ್ತು ಕೊಟ್ಟುಕೊಂಡರೆ ಹೇಗಿರುತ್ತೆ? ಇಬ್ಬರೂ ಪ್ರೌಢರೇ ತಾನೇ? ಇಷ್ಟಪಟ್ಟೇ ಕೊಟ್ಟುಕೊಂಡಿದ್ದು ತಾನೇ?
ಇವೆಲ್ಲ ನೋಡೋಕೆ ಹಿತವಾಗಿರುತ್ತಾ? ಸ್ವಾಮಿ, ವಾದ ಮಂಡಿಸೋದು ಸುಲಭ. ಆದರೆ ಅದೇ ಸ್ಥಿತಿ ನಮಗೆ ಅಥವಾ ನಮ್ಮ ಮನೆಯಲ್ಲಿ ನಿರ್ಮಾಣವಾದರೆ ಹೇಗಿರುತ್ತೆ ಎಂಬುದನ್ನು ಮಾತನಾಡುವ ಮೊದಲು ಊಹಿಸಿಕೊಂಡರೆ ಉತ್ತಮ. ಇಬ್ಬರು ಪ್ರೌಢ ವ್ಯಕ್ತಿಗಳು ಮುತ್ತು ಕೊಟ್ಟುಕೊಂಡರೆ ಖಂಡಿತ ಅಶ್ಲೀಲವಲ್ಲ. ಆದರೆ ಅವರು ಹಾಗೆ ಮಾಡಿದ್ದು ಎಲ್ಲಿ ಎಂಬುದರ ಮೇಲೆ ಅದನ್ನು ನಿರ್ಧರಿಸಬೇಕಾಗುತ್ತದೆ. ನಮ್ಮ ಸ್ವಾತಂತ್ರ್ಯ ಇನ್ನೊಬ್ಬರಿಗೆ ತೊಂದರೆ, ಮುಜುಗರ ಉಂಟುಮಾಡಬಾರದಲ್ಲ.
ಇವೆಲ್ಲ ಹೋಗಲಿ ಕಾಶ್ಮೀರದ ಆ ಯುವತಿಯರು ಯಾರಿಗೇನು ಅನ್ಯಾಯ ಮಾಡಿದ್ದರು? ಅವರು ಅವರಷ್ಟಕ್ಕೆ ಸಂಗೀತ, ವಾದ್ಯ ನುಡಿಸಿಕೊಂಡಿದ್ದರು. ಅವರು ಯಾರ ಧರ್ಮದ ಕುರಿತೂ ಮಾತನಾಡಲಿಲ್ಲ. ಯಾವ ಧರ್ಮವನ್ನೂ ತೆಗಳಲಿಲ್ಲ. ಯಾವ ದೇವತೆಯರನ್ನೂ ನಗ್ನವಾಗಿ ವರ್ಣಿಸಿಲ್ಲ. ಕೆಟ್ಟದಾಗಿ ಅವರ ಕುರಿತು ಹಾಡು ಬರೆದಿಲ್ಲ. ಆದರೂ ಅವರ ಬ್ಯಾಂಡ್ ಬಂದ್ ಮಾಡಿಸಿದ್ದು ಸರಿಯೇ?
ಸಮಾಜವನ್ನು ಒಡೆಯುತ್ತಿರುವುದು ಆರೆಸ್ಸೆಸ್ಸೂ ಅಲ್ಲ. ಇನ್ಯಾವುದೇ ಸಂಘಟನೆಯೂ ಅಲ್ಲ. ಕೋಮುವಾದವೂ ಅಲ್ಲ. ಕೋಮುಗಲಭೆಗಳೂ ಅಲ್ಲ. ವಿಶ್ವರೂಪಂನಂತಹ ಚಿತ್ರಗಳೂ ಅಲ್ಲ. ಅನಿರುದ್ಧನಂತಹ ಕಲಾವಿದರೂ ಅಲ್ಲ. ದೇಶವನ್ನು ಒಡೆಯುತ್ತಿರುವುದು ಈ ರೀತಿಯ ದ್ವಂದ್ವ ನಿಲುವುಗಳು. ಇವು ಒಂದು ಧರ್ಮದವರ ಮನಸ್ಸಿನಲ್ಲಿ ತಾರತಮ್ಯದ ಭಾವನೆ ಮೂಡಿಸುತ್ತಿದೆ. ಈ ಭಾವನೆ ಬೆಳೆದಷ್ಟೂ ದೇಶಕ್ಕೇ ಹಾನಿ.
ಸಿಕ್ಕರೆ ಎಲ್ಲರಿಗೂ ಸಿಗಲಿ. ಇಲ್ಲವಾದಲ್ಲಿ ಯಾರಿಗೂ ಬೇಡ. ವ್ಯಕ್ತಿಯ ಧರ್ಮ, ಜಾತಿ, ಆತ ವ್ಯಕ್ತ ಪಡಿಸುತ್ತಿರುವ ವಿಷಯ ಯಾವ ಜಾತಿ ಮತ್ತು ಧರ್ಮಕ್ಕೆ ಸಂಬಂಧಿಸಿದ್ದು ಎಂಬುದನ್ನು ಆಧರಿಸಿ ಅಭಿವ್ಯಕ್ತಿ ಸ್ವಾತಂತ್ರ್ವವೂ ನಿರ್ಧಾರವಾಗುವುದು ಬೇಡ.
ಅನಿರುದ್ಧ ಹೇಗೆ ಕಲಾವಿದನೋ ಹಾಗೆಯೇ ಕಮಲ್ ಹಾಸನ್ ಕೂಡ ಕಲಾವಿದ. ಮಾಧ್ಯಮ ಬೇರೆ. ಅನಿರುದ್ಧನಿಗೆ ಅವರಿಗೆ ಬೇಕಾದಂತೆ ಚಿತ್ರ ನಿರ್ಮಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯೆಂದಾದರೆ, ಕಮಲ್ ಹಾಸನ್ ಅವರಿಗೂ ಅವರಿಗೆ ಬೇಕಾದಂತೆ ಚಲನಚಿತ್ರ ನಿರ್ಮಿಸಲು ಇದೇ ಅಭಿವ್ಯಕ್ತಿ ಸ್ವಾತಂತ್ರ್ಯ ಅವಕಾಶ ನೀಡುತ್ತದೆ. ಕಮಲ್ ಹಾಸನ್‌ಗೆ ಅವರ ಇಷ್ಟದಂತೆ ಚಲನಚಿತ್ರ ನಿರ್ಮಿಸಲು, ಸೆನ್ಸಾರ್ ಮಂಡಳಿಯ ಅನುಮತಿ ನಂತರವೂ ಅದನ್ನು ಪ್ರದರ್ಶಿಸಲು ಸ್ವಾತಂತ್ರ್ಯವಿಲ್ಲ ಎಂದಾದರೆ, ಯಾವ ಸೆನ್ಸಾರೂ ಇಲ್ಲದ ಅನಿರುದ್ಧನಿಗೇಕೆ ಅದು ಸಿಗಬೇಕು?
ವಿನಾಯಕ ಭಟ್ಟ ಮೂರೂರು
ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

