ಹೊಸ ಗಾನ ಬಜಾನ, ಇದು ಬಜೆಟ್ ಪುರಾಣ
ಮತ್ತೆ ಲೆಕ್ಕಾಚಾರದ ಕಾಲ ಬಂದಿದೆ. ಇದು ಪ್ರತಿ ವರ್ಷದ ಸಂಪ್ರದಾಯ ರಾಜ್ಯಗಳಿರಲಿ...
ಮತ್ತೆ ಲೆಕ್ಕಾಚಾರದ ಕಾಲ ಬಂದಿದೆ. ಇದು ಪ್ರತಿ ವರ್ಷದ ಸಂಪ್ರದಾಯ ರಾಜ್ಯಗಳಿರಲಿ, ಕೇಂದ್ರ ಸರ್ಕಾರವಿರಲಿ ಪ್ರತಿ ವರ್ಷ ತಮ್ಮ ಖರ್ಚು ವೆಚ್ಚದ ಲೆಕ್ಕವನ್ನು, ಅದರ ರೂಪುರೇಷೆಯನ್ನು ಜನರ ಮುಂದಿಡುತ್ತವೆ. ಮೊದಲೆಲ್ಲ ಈ ವಾರ್ಷಿಕ ಹಣಕಾಸಿನ ದಿಕ್ಕುದೆಸೆ ತೋರುವ ಕಸರತ್ತಿಗೆ ಭಾರೀ ಮಹತ್ವವಿರುತ್ತಿತ್ತು. ಸೂಜಿಯಿಂದ ಹಿಡಿದು ಸಜ್ಜೆವರೆಗೆ, ಬೀಡಿ, ಸಿಗರೇಟಿನಿಂದ ತಿನ್ನುವ ಆಹಾರದವರೆಗೆ ಮತ್ತು ಎಲ್ಲ ಬಗೆಯ ಕೈಗಾರಿಕಾ ಉತ್ಪನ್ನ, ಆಯ-ವ್ಯಯ ಕರಗಳಿಗೆ ಬಜೆಟ್ ಒಂದು ರೀತಿಯ ಭಗವದ್ಗೀತೆ ಎನ್ನುವಂತಿತ್ತು. ಬಜೆಟ್‌ನಲ್ಲಿ ಹೇಳದ್ದಕ್ಕಿಂತ ಹೇಳಿದ್ದೇ ಹೆಚ್ಚಿರುತ್ತಿತ್ತು. ಅದು ಇನ್ನೂ ಭಾರತ controlled economy(ನಿಯಂತ್ರಿತ ಮಾರುಕಟ್ಟೆ ವ್ಯವಸ್ಥೆ) ಆಗಿದ್ದ ದಿನಗಳು. ಇವುಗಳಲ್ಲಿ ಪ್ರಗತಿ, ಪರಿಹಾರಗಳಿಗಿಂತ ತೆರಿಗೆ, ಬೆಲೆ ಏರಿಕೆಗೇ ಹೆಚ್ಚು ಪ್ರಾಧಾನ್ಯತೆ ಇರುತ್ತಿತ್ತು. ಆದರೆ 1991ರ ನಂತರದಲ್ಲಿ ಬಜೆಟ್‌ನ ಸ್ವರೂಪ ಬದಲಾಗಿದೆ. ಈಗ ಹಣಕಾಸಿನ ಗುಣಾಕಾರ, ಭಾಗಾಕಾರದ ವೈಧಾನಿಕತೆಯನ್ನು ಮೀರಿ ಮುಂದಿನ ದಿನ, ವರ್ಷಗಳಲ್ಲಿ ಸರ್ಕಾರಗಳು ಯಾವ ರೀತಿ ತಮ್ಮ ಆರ್ಥಿಕ ಕ್ಷಮತೆ ಮೆರೆಯಲಿವೆ, ಹಣಕಾಸಿನ ಆಕರಕ್ಕೆ ಯಾವ ಮಾರ್ಗಗಳನ್ನೂ ಅನುಸರಿಸಲಿವೆ, ವ್ಯಯದ ಮರು ಪೂರಣಕ್ಕೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಿವೆ ಎಂಬುದರ ದಿಕ್ಸೂಚಿಯಾಗಿ ಬಜೆಟ್ ಅನ್ನು ನೋಡಲಾಗುತ್ತದೆ. ಯಾವುದೇ ನಿರ್ದಿಷ್ಟ ವಸ್ತುವಿನ ಧಾರಣೆ ಹೆಚ್ಚಿಸುವ, ಇಳಿಸುವ ಹೇಳಿಕೆಗಳು ಇಲ್ಲಿರುವುದಿಲ್ಲ. ಆದರೆ, ಉತ್ಪಾದಕ ರಂಗದ ಮೇಲೆ ಇಂತಿಷ್ಟು ತೆರಿಗೆ ವಿಧಿಸುವ ಇಲ್ಲವೇ ಇಳಿಸುವ ನಿರ್ಧಾರಗಳು ಇರುತ್ತವೆ. ಅಂದರೆ ಬೆಂಕಿ ಪಟ್ಟಣದ ಧಾರಣೆ ಎಷ್ಟು ಪೈಸೆ ಹೆಚ್ಚಿಸಬೇಕು. ಅಥವಾ ಇಳಿಸಬೇಕು ಎಂಬುದನ್ನು ಸರಕಾರಗಳು ನಿರ್ಧರಿಸದೆ ಆಯಾ ರಂಗ, ಕೈಗಾರಿಕೆಗಳಿಗೆ ಇಡುತ್ತವೆ. ಒಟ್ಟಾರೆ ಈ ಕಳೆದ ಎರಡು ವರ್ಷಗಳಲ್ಲಿ ಬಜೆಟ್ ಒಂದುvision document (ಭವಿಷ್ಯದ ದಿಕ್ಸೂಚಿ) ಅಥವಾ fiscal policy statement (ವಿತ್ತೀಯ ನೀತಿಯ ಮಾರ್ಗಸೂಚಿ) ಎನ್ನುವ ಮಟ್ಟಕ್ಕೆ ತಲುಪಿದೆ. 1991ರಿಂದ ಐದು ವರ್ಷ, ಅಂದರೆ 1996ರವರೆಗೆ ಸತತವಾಗಿ ಐದು ವರ್ಷ ಬಜೆಟ್ ಮಂಡಿಸಿದ್ದ ಆಗಿನ ವಿತ್ತಸಚಿವ ಮನಮೋಹನ್ ಸಿಂಗ್ ಪ್ರತಿ ಬಜೆಟ್‌ನಲ್ಲೂ ಆರ್ಥಿಕ ಉದಾರೀಕರಣದ ಒಂದೊಂದೇ ಮಜಲುಗಳನ್ನು ಪರಿಚಯಿಸುವ ಮೂಲಕ ಈ ಪರಿವರ್ತನೆಗೆ ಚಾಲನೆ ನೀಡಿದರು. ಬಜೆಟ್ ಅನ್ನು ಏರಿಕೆ, ಇಳಿಕೆ, ತೆರಿಗೆ ಹೇರಿಕೆಯ ಸಾಧನವಾಗಿ ಪರಿಗಣಿಸದೆ ಅದನ್ನು ತಮ್ಮ ಮತ್ತು ತಮ್ಮ ಸರ್ಕಾರದ ಹಣಕಾಸು ನೀತಿ ಮತ್ತು ಅದರ ಅನುಷ್ಠಾನಕ್ಕೆ ತಾವು ಅನುಸರಿಸಲಿರುವ ಮಾರ್ಗಗಳ ರೋಡ್‌ಮ್ಯಾಪ್ ನೀಡುವ ಹೇಳಿಕೆಯಾಗಿ ಪರಿವರ್ತಿಸಲಾಯಿತು.
ಎಲ್ಲ ಮುಂದುವರಿದ ದೇಶಗಳಲ್ಲಿಯೂ ಇದೇ ನೀತಿ ಅನುಸರಿಸಲಾಗುತ್ತದೆ. ಆ ತನಕ ಭಾರತದಲ್ಲಿ ಬಜೆಟ್ ಮಂಡನೆಗಿರುವಷ್ಟು ಮಹತ್ವ ಬೇರೆ ದೇಶಗಳಲ್ಲಿ ಇರಲಿಲ್ಲ. 1990ರ ದಶಕದಿಂದೀಚೆಗೆ ಭಾರತದಲ್ಲೂ ಬಜೆಟ್ ಎನ್ನುವುದು ಒಂದು ಶುಷ್ಕ ಲೆಕ್ಕಾಚಾರ ಪತ್ರವಾಗಿ ಉಳಿದಿಲ್ಲ. ಯಾವುದೇ ಸರ್ಕಾರ ತನ್ನ ಪೂರ್ಣಾವಧಿಯಲ್ಲಿ ಐದು ಬಜೆಟ್ ಮಂಡಿಸುತ್ತದೆ. ಅದರಲ್ಲಿ ಮೊದಲ ವರ್ಷದಲ್ಲಿ ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ತಾನು ಅನುಸರಿಸಲಿರುವ ಆರ್ಥಿಕ ಕ್ರಮಗಳ ಮನ್ಸೂಚಿ ಇದ್ದರೆ ಚುನಾವಣೆಗೆ ಮೊದಲು ಅಥವಾ ಚುನಾವಣಾ ವರ್ಷದಲ್ಲಿ ಮತದಾರರ ಓಲೈಕೆಗೆ ಮೀಸಲಾದ ಬಜೆಟ್ ಅನಾವರಣಗೊಳ್ಳುತ್ತದೆ. ಅದೊಂದು ಗಿಮಿಕ್. ಅದು ಆರ್ಥಿಕ ಲೆಕ್ಕಪತ್ರವಾಗಿರದೆ ಮತ ಬ್ಯಾಂಕ್ ಬಜೆಟ್ ಆಗಿರುತ್ತದೆ. ಎರಡು ದಶಕದ ಆರ್ಥಿಕ ಉದಾರೀಕರಣ, ನಿಯಂತ್ರಣ ಮುಕ್ತ (ಬಹುತೇಕ) ಮಾರುಕಟ್ಟೆ ವ್ಯವಸ್ಥೆ, ತೆರಿಗೆ ಸುಧಾರಣೆ ಮತ್ತು 2002ರಲ್ಲಿ ಜಾರಿಗೆ ಬಂದ ವಿತ್ತೀಯ ಹೊಣೆಗಾರಿಕೆ ವಿಧೇಯಕದ ಫಲವಾಗಿ ಎಲ್ಲ ಸರ್ಕಾರಗಳ ಖಜಾನೆಯಲ್ಲಿಯೂ ಹಣ ಯಥೇಚ್ಛವಾಗಿಯೇ ಇದೆ. ಇವುಗಳ ವಿನಿಯೋಗ ಮತ್ತು ಹೆಚ್ಚುವರಿ ಕ್ರೋಢೀಕರಣವನ್ನು ನಿಭಾಯಿಸುವುದೇ ಆಯಾ ಸರ್ಕಾರ ಅಥವಾ ವಿತ್ತ ಸಚಿವರ ಹೊಣೆಗಾರಿಕೆಯಾಗಿದೆ. ಈ ಹೊಣೆಗಾರಿಕೆ ನಿಭಾಯಿಸುವಲ್ಲಿ ಸಹಜವಾಗಿಯೇ ವಿತ್ತ ಸಚಿವರ ಒಳಗಿರುವ ರಾಜಕಾರಣಿ ಜಾಗೃತನಾಗುತ್ತಾನೆ. ಆಗ ಅಂತಹ ಬಜೆಟ್‌ಗಳನ್ನು ಪಾಪ್ಯುಲಿಸ್ಟ್ ಬಜೆಟ್ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಈ populism(ಜನಪ್ರಿಯತೆ) ಬಜೆಟ್‌ನ ಗಾಂಭೀರ್ಯವನ್ನೇ ಹಾಳು ಮಾಡುತ್ತದೆ. ಇದಕ್ಕೆ sound fiscal backing (ಗಟ್ಟಿ ವಿತ್ತೀಯ ಬೆಂಬಲ) ಇರುವುದಿಲ್ಲ. ಎರಡು ವರ್ಷಗಳ ಹಿಂದೆ ರಾಜ್ಯದ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಾವು ದೇಶಕ್ಕೇ ಒಂದು ಮಾದರಿಯಾಗಿ ರೈತರ ಬಜೆಟ್ ಮಂಡಿಸುವುದಾಗಿ ಘೋಷಿಸಿದರು. ಹಾಗೆಯೇ ಮಾಡಿದರು ಕೂಡ. ಈವರೆಗೆ ಯಾರೂ ಮಾಡದಿದ್ದ ಸಾಧನೆ ಮಾಡಿರುವುದಾಗಿ ಬೆನ್ನು ತಟ್ಟಿಕೊಂಡಿದ್ದೂ ಆಯಿತು. ಈ ಬಜೆಟ್‌ನಲ್ಲಿ ರೈತರನ್ನು (ಅವರ ಮತಗಳನ್ನು) ಸೆಳೆಯುವ ಭರಪೂರ ಯೋಜನೆಗಳನ್ನು ಘೋಷಿಸಲಾಯಿತು. ಆಕಾಶಕ್ಕೆ ಏಣಿ ಹಾಕಿದ್ದರು. ಆದರೆ ಅದಾವುದಕ್ಕೂ ಅಗತ್ಯವಾದ financial backing ಇರಲಿಲ್ಲ. ಹೀಗಾಗಿಯೇ ರೈತರ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಹಲವಾರು ಯೋಜನೆಗಳು ಇನ್ನೂ ಜಾರಿಗೆ ಬಂದಿಲ್ಲ, ಬಂದಿದ್ದರೂ ಅದರ ಪೂರ್ಣ ಪ್ರಯೋಜನ ರೈತರ ಕೈ ಸೇರಿಲ್ಲ. ಆದರೆ, ಮೊಟ್ಟ ಮೊದಲ ರೈತರ ಬಜೆಟ್ ಮಂಡಿಸಿದ ಹೆಗ್ಗಳಿಕೆಯನ್ನು ಮಾತ್ರ ಬಿಎಸ್‌ವೈ ತಮ್ಮ ಸಾಧನೆಯ ಪ್ರಭಾವಳಿಗೆ ಸೇರಿಸಿಕೊಂಡರು. ಒಂದರ್ಥದಲ್ಲಿ ನಿಜವಾಗಿಯೂ ಒಂದು ಹೊಸ ಹೆಜ್ಜೆಯಾಗಬಹುದಾಗಿದ್ದ ಕ್ರಮ ಚುನಾವಣಾ ಭಾಷಣದ ಡಿಕ್ಷನರಿಯಲ್ಲಿ ಹೊಸ ಸೇರ್ಪಡೆಯಾಯಿತಷ್ಟೇ.
ನರೇಗಾ ಮತ್ತು ರೈತರ ಸಾಲ ಮನ್ನಾ
2004ರಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಅನಿರೀಕ್ಷಿತ ರೀತಿಯಲ್ಲಿ ಅಧಿಕಾರ ಕಳೆದುಕೊಂಡು, ಅಷ್ಟೇ ಅನಿರೀಕ್ಷಿತವಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂತು. ಹಣಕಾಸು ನಿರ್ವಹಣೆಯಲ್ಲಿ ನುರಿತರಾದ ಚಿದಂಬರಂ ವಿತ್ತ ಸಚಿವರೂ ಆದರು. 1996ರಲ್ಲಿ ದೇವೇಗೌಡರ ಸರ್ಕಾರದಲ್ಲಿ ಮೊದಲ ಬಾರಿಗೆ ದೇಶದ ವಿತ್ತ ಸಚಿವರಾಗಿ ಅನಾವರಣಗೊಂಡ ಚಿದಂಬರಂ ನಂತರ ಗುಜ್ರಾಲ್ ಸಂಪುಟದಲ್ಲಿ ಸಹ ಅದೇ ಖಾತೆ ನಿರ್ವಹಿಸಿದ್ದರು. ಅದರಲ್ಲೂ 1997ರಲ್ಲಿ ಅವರು ಮಂಡಿಸಿದ ಬಜೆಟ್ ಅನ್ನು ಪೇಟೆ ತಜ್ಞರು dream budget ಎಂದೇ ವ್ಯಾಖ್ಯಾನಿಸಿದ್ದರು. ಮುಂದಿನ ಹತ್ತು ವರ್ಷಗಳಲ್ಲಿ ಭಾರತ ಹಾಕಿಕೊಳ್ಳಬೇಕಾದ ಗುರಿಗಳನ್ನು ಚಿದಂಬರಂ ಆಗಿನ ಬಜೆಟ್‌ನಲ್ಲಿ ಮಂಡಿಸಿದ್ದರು. ಅಲ್ಲಿ ಪಾಪ್ಯುಲಿಸಂಗಿಂತ ವಾಸ್ತವತೆ ಹೆಚ್ಚಿತ್ತು. ಮುಂದೆ ಬಂದ ಸರ್ಕಾರಗಳು ಸಹ ಅದೇ ಹಾದಿಯಲ್ಲಿ ಮುನ್ನಡೆದವು. ಅದೇ ಚೌಕಟ್ಟಿನಲ್ಲಿ ಆರ್ಥಿಕತೆಯನ್ನು ಮುನ್ನಡೆಸಿದ್ದವು. ಹೀಗಾಗಿ 2004ರಲ್ಲಿ ಮತ್ತೆ ಚಿದಂಬರಂ ವಿತ್ತ ಸಚಿವಾಲಯಕ್ಕೆ ಮರಳಿದಾಗ ಅಲ್ಲಿ ಜನಪ್ರಿಯತೆಗಿಂತ ವಾಸ್ತವತೆಗೆ ಹೆಚ್ಚು ಒತ್ತು ಇರುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, 1990ರ ದಶಕಕ್ಕೂ 2000ದ ದಶಕಕ್ಕೂ ವ್ಯತ್ಯಾಸಗಳಿದ್ದವು. 1990ರ ಆರಂಭದಲ್ಲಿ ಮೊದಲ ಬಾರಿ ಜಾರಿಗೆ ಬಂದ ಆರ್ಥಿಕ ಉದಾರೀಕರಣದ ಆರಂಭಿಕ ಕಂತು ಇನ್ನೂ ಪೂರ್ಣ ಪ್ರಮಾಣದಲ್ಲಿ ಸ್ಥಿರತೆ ಕಂಡುಕೊಂಡಿರಲಿಲ್ಲ. 1991ರಿಂದ ಐದು ವರ್ಷ ಕಾಲ ಮನಮೋಹನ್ ಸಿಂಗ್ ಅವರು ವಿವಿಧ ಮಜಲುಗಳನ್ನು ಜಾರಿಗೆ ತಂದು ಪರ್ಮಿಟ್ ರಾಜ್ ವ್ಯವಸ್ಥೆಗೆ ತಕ್ಕ ಮಟ್ಟಿಗೆ ಕಡಿವಾಣ ಹಾಕಿದ್ದರೂ ಬೊಕ್ಕಸ ತುಂಬುವ ತೆರಿಗೆ ಸಂಗ್ರಹ ಕ್ರಮಗಳ ಉದಾರೀಕರಣ ಪೂರ್ಣ ಪ್ರಮಾಣದಲ್ಲಿ ಆಗಿರಲಿಲ್ಲ. ಆ ಸಂದರ್ಭದಲ್ಲಿ ಸಿಂಗ್ ಅವರ ನಂತರ ದೇಶದ ದುಡ್ಡಿನ ವಾರಸುದಾರರಾದ ಚಿದಂಬರಂ ಈ ದುಡ್ಡನ್ನು ದುಪ್ಪಟ್ಟು ಮಾಡಲಿಕ್ಕೆ ಗಮನ ಹರಿಸಿದರು. ಅದರ ಫಲವಾಗಿ VDS (Volunary Discolsure Seheme) ಬಂತು. ತೆರಿಗೆ ಹಂತಗಳನ್ನು ಸರಳಗೊಳಿಸುವ ಸಲುವಾಗಿ VAT(ಮೌಲ್ಯವರ್ಧಿತ ತೆರಿಗೆ) ಕಲ್ಪನೆ ಬಂತು. ಇವೆಲ್ಲ ದೇಶದ ಆರ್ಥಿಕತೆಯನ್ನು ಸುಸ್ಥಿರಗೊಳಿಸುವ ಕ್ರಮಗಳಾಗಿದ್ದವು. ಇದರಲ್ಲಿ ಪಾಪ್ಯುಲಿಸಂ ಎಂಬುದು ಇರಲಿಲ್ಲ. ಚಿದಂಬರಂ ನಂತರ ಬಂದ ವಿತ್ತ ಸಚಿವರೂ ಇದೇ ವಾಸ್ತವಗಳನ್ನು ಮುಂದುವರಿಸಿದ ಪರಿಣಾಮ ಮತ್ತು ಜಾಗತಿಕ, ಆರ್ಥಿಕ ಉಬ್ಬರದ ಫಲವಾಗಿ ಭಾರತ 2000ದ ದಶಕದ ಮಧ್ಯ ಭಾಗದ ವೇಳಿಗೆ ದೇಶದ ಖಜಾನೆ ಒಂದು ಮಟ್ಟಕ್ಕೆ ಸದೃಢವಾಗಿತ್ತು.
ಎಡ ಪಕ್ಷಗಳ ಒತ್ತಾಸೆ ಮತ್ತು ಸ್ವತಃ ಕಾಂಗ್ರೆಸ್ ಪಕ್ಷದ ಕಟ್ಟುಪಾಡುಗಳಿಂದಾಗಿ ಚಿದಂಬರಂ ಸಹ ಪಾಪ್ಯುಲಿಸಂಗೆ ಮೊರೆ ಹೋಗಬೇಕಾಗಿ ಬಂತು. ಅದರ ಫಲವಾಗಿ ಜಾರಿಗೆ ಬಂದದ್ದೇ ನರೇಗಾ (ಉದ್ಯೋಗ ಖಾತ್ರಿ ಯೋಜನೆ) ಮತ್ತು ರೈತರ ಸಾಲ ಮನ್ನಾ ಯೋಜನೆಗಳು ಇವು ಎಡಪಕ್ಷಗಳು, ಸೋನಿಯಾ ಗಾಂಧಿ ಮತ್ತು ಸ್ವತಃ ಪ್ರಧಾನಿ ಮನಮೋಹನ್ ಸಿಂಗ್ ಅವರ ನೆಚ್ಚಿನ Inclusive Growth (ಸರ್ವರ ಏಳಿಗೆ)ನ ವ್ಯಾಪ್ತಿಗೆ ಬರುವ ಕ್ರಮಗಳಾಗಿದ್ದವು. ಜೊತೆಗೆ ಜನಪ್ರಿಯ ಮತ್ತು ಮತಪ್ರಿಯ ಯೋಜನೆಗಳೂ ಆದವು. ಈ ಪಾಪ್ಯುಲಿಸಂನ ಫಲವಾಗಿ ಯುಪಿಎ ಸರ್ಕಾರ 2009ರ ಚುನಾವಣೆಯಲ್ಲಿ ಉತ್ತಮ ಇಳುವರಿಯನ್ನು ಪಡೆದು ಎರಡನೇ ಬಾರಿಗೆ ದೇಶದ ಚುಕ್ಕಾಣಿ ಹಿಡಿಯಿತು. ಆದರೆ ಈ ಜನಪ್ರಿಯತೆಯ ಹೆಸರಿನಲ್ಲಿ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿರಬೇಕಿದ್ದ ಹಲವಾರು ಕ್ರಮಗಳು ಸ್ಥಗಿತಗೊಂಡವು. ಮುಖ್ಯವಾಗಿ ಎರಡನೇ ಸುತ್ತಿನ ಆರ್ಥಿಕ ಉದಾರೀಕರಣ ನೀತಿ, ವಿದೇಶಿ ಹೂಡಿಕೆದಾರರಿಗೆ ಹೆಚ್ಚಿನ ಮಾರುಕಟ್ಟೆ access, ಕಡೆಗೆ ಚಿದಂಬರಂ ಗಮನಹರಿಸಲು ಸಾಧ್ಯವಾಗಲಿಲ್ಲ. GST (ಸರಕು ಸೇವಾ ತೆರಿಗೆ) ಮತ್ತು ನೇರ ತೆರಿಗೆ ಸಂಹಿತೆಯ ಅಗತ್ಯತೆಯನ್ನು ಅವರು ಮನಗಂಡಿದ್ದರೂ ಅದನ್ನು ವಾಸ್ತವಕ್ಕಿಳಿಸಲು ಅವಕಾಶ ಸಿಗಲಿಲ್ಲ. ಇದರ ನಡುವೆ ಮುಂಬೈನಲ್ಲಿ ಉಗ್ರರ ದಾಳಿ ಫಲವಾಗಿ ಚಿದಂಬರಂ ಗೃಹ ಸಚಿವಾಲಯಕ್ಕೆ ವರ್ಗಗೊಂಡು ಅವರ ಸ್ಥಾನಕ್ಕೆ ಪ್ರಣಬ್ ಮುಖರ್ಜಿ ಬಂದರು. 2008ರ ಜಾಗತಿಕ, ಆರ್ಥಿಕ ಕುಸಿತ ಒಂದು ಮಟ್ಟಕ್ಕೆ ಉದಾರೀಕರಣಕ್ಕೆ ಬ್ರೇಕ್ ಹಾಕಿತ್ತು. 2004-2009ರ ಅವಧಿಯಲ್ಲಿ ವೇಗ ಕಳೆದುಕೊಂಡ ಉದಾರೀಕರಣ ಚಕ್ರ ತದನಂತರದಲ್ಲಿ ಗೊಂದಲ-ಗೋಜಲು-ರಾಜಕಾರಣದ ರಾಡಿಯಲ್ಲಿ ಸಿಲುಕಿ ಇನ್ನೂ ಒದ್ದಾಡುತ್ತಿದೆ.
ಈ ಮಾಸಾಂತ್ಯಕ್ಕೆ ಚಿದಂಬರಂ ಮತ್ತೆ ಬಜೆಟ್ ಮಂಡಿಸಲಿದ್ದಾರೆ. ಮುಂದಿನ ವರ್ಷ ಚುನಾವಣಾ ವರ್ಷ. ಅದಕ್ಕೆ ಈಗಲೇ ಮತ ಬೀಜ ಬಿತ್ತಿ ಉತ್ತಮ ಕೊಯಿಲು ಪಡೆಯಲು ಕಾಂಗ್ರೆಸ್ ತುದಿಗಾಲ ಮೇಲೆ ನಿಂತಿದೆ. ಈಗಾಗಲೇ ಕೃಶವಾಗಿರುವ ಖಜಾನೆಯನ್ನು ಇನ್ನಷ್ಟು ಬರಿದು ಮಾಡುವ ಯೋಜನೆಗಳು, ಪ್ರಮುಖವಾಗಿ ಆಹಾರ ಭದ್ರತೆ ಕಾಯಿದೆ ಜಾರಿಗೆ ದೊಡ್ಡ ಪ್ರಮಾಣದ ಹಣ ಮೀಸಲಿಡುವಂತೆ ಚಿದಂಬರಂ ಮೇಲೆ ಒತ್ತಡ ಹೇರಲಾಗಿದೆ. ಕುಸಿಯುತ್ತಿರುವ ದೇಶದ ಆರ್ಥಿಕ ಪರಿಸ್ಥಿತಿಯನ್ನು, ವಿತ್ತೀಯ ಸಂಪನ್ಮೂಲ ಸಮತೋಲವನ್ನು ಇದು ಇನ್ನಿಲ್ಲದಂತೆ ಕಾಡಲಿದೆ.
ಇತ್ತ ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಹ ಫೆ.4 ರಂದು ಬಜೆಟ್ ಮಂಡಿಸಲಿದ್ದಾರೆ. ಹೇಳಿ, ಕೇಳಿ ಇದು ಚುನಾವಣಾ ವರ್ಷ. ಜನಪ್ರಿಯತೆಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಸಹ ಎದುರು ನೋಡುತ್ತಿದೆ. ವಿತ್ತೀಯ ನಿರ್ವಹಣೆಯ ಪ್ರಕ್ರಿಯೆ ಮತಗಾಳದ ಸಾಧನವಾಗುವ ಎಲ್ಲ ಲಕ್ಷಣಗಳಿವೆ.
-ಕೆ.ಎಸ್.ಜಗನ್ನಾಥ್
jagannath.kudinoor@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

