ಅಂಕಣಗಳು

ಬಯಸಿದ್ದೆಲ್ಲವೂ ನಿಮ್ಮ ಬಾಳಲ್ಲಿ ಬರಲಿ...

Published On :

ಬಾಲ್ಯದ ದಿನಗಳ ನನ್ನ ಮಧುರ ನೆನಪುಗಳ ಪೈಕಿ, ಊರ ಬಯಲಲ್ಲಿ ನಿಂತು ವಿಮಾನಗಳನ್ನು ನೋಡುತ್ತಿದ್ದುದೂ ಒಂದು. ಹೇಳಿ ಕೇಳಿ ಬೆಂಗಳೂರಿನಿಂದ ಮುನ್ನೂರು ಕಿಲೋಮೀಟರ್ ದೂರವಿದ್ದ ಹಳ್ಳಿ ನನ್ನದು. ಅಲ್ಲಿನ ಆಗಸದಲ್ಲಿ ವಿಮಾನಗಳ ದರ್ಶನವಾಗುತ್ತಿದ್ದುದು ಎರಡು ತಿಂಗಳು, ಮೂರು ತಿಂಗಳಿಗೆ ಒಮ್ಮೆ. ಅಂಥ ಸಂದರ್ಭದಲ್ಲೆಲ್ಲ, ಆಗಸದಲ್ಲಿ ಬಹುದೊಡ್ಡ ಸದ್ದು ಕೇಳಿ ಬರುತ್ತಿತ್ತು. ಅಷ್ಟೆ: ಮನೆಯೊಳಗಿದ್ದ ಮಕ್ಕಳೆಲ್ಲ, ಮೊದಲು ಅಂಗಳಕ್ಕೆ, ನಂತರ ಬಯಲಿಗೆ ಓಡಿ ಬರುತ್ತಿದ್ದರು. ಎಲ್ಲರೂ, ಹಣೆಯ ಮುಂದೆ ಅಂಗೈ ಹಿಡಿದುಕೊಂಡು, ಒಂದು ಹಕ್ಕಿಯಂತೆ ಹಾರಿ ಹೋಗುವ ವಿಮಾನವನ್ನೇ ನೋಡುತ್ತಾ ನಿಂತುಬಿಡುತ್ತಿದ್ದೆವು. ಆ ವಿಮಾನವೆಂಬುದು-  ಈಗಿತ್ತು, ಈಗಿಲ್ಲ ಎಂಬಂತೆ ಕ್ಷಣದಲ್ಲಿ ದೂರ ಸಾಗಿ ಕಣ್ಮರೆಯಾಗುತ್ತಿತ್ತು. ಆನಂತರದಲ್ಲಿ ನಾವೆಲ್ಲ, ಈಗ ಅದು ಯಾವ ಊರಿನ ಮೇಲೆ ಹಾರುತ್ತಿರಬಹುದು, ವಿಮಾನದಲ್ಲಿ ಎಷ್ಟು ಜನ ಪ್ರಯಾಣ ಮಾಡುತ್ತಿರಬಹುದು ಎಂಬ ವಿಷಯವಾಗಿ ನಮ್ಮ ಅರಿವಿಗೆ ತೋರಿದ ಲೆಕ್ಕಾಚಾರದಲ್ಲಿಯೇ ಚರ್ಚಿಸುತ್ತಿದ್ದೆವು. ಒಂದೊಂದು ಸಂದರ್ಭದಲ್ಲಂತೂ ನಾವೆಲ್ಲ ಶಾಲೆಯೊಳಗಿದ್ದಾಗಲೇ ಆಗಸದಲ್ಲಿ 'ಗುಂಯ್‌ಡಡಡ' ಎಂಬಂಥ ಸದ್ದಾಗುತ್ತಿತ್ತು. ಆಗ, ನಮಗಿಂತ ಮೊದಲು ಶಿಕ್ಷಕರೇ ಹೊರಗೆ ಬರುತ್ತಿದ್ದರು. ಅವರ ಹಿಂದೆ ನಾವೂ. ಮಾಸ್ಟರು ಒಂದೆರಡು ಕ್ಷಣ ವಿಮಾನ ಹೋಗುವ ಮಾರ್ಗವನ್ನೇ ಗಮನಿಸಿ-'ಬಾಂಬೆಗೆ ಹೋಗ್ತಾ ಇದೆ ಅನಿಸುತ್ತೆ! ಡೆಲ್ಲಿಗೆ ಹೋಗ್ತಾ ಇರುವ ಹಾಗಿದೆ' ಎನ್ನುತ್ತಿದ್ದರು.
ಮೊನ್ನೆ, ದೆಹಲಿಗೆ ಹೊರಟುನಿಂತ ಗೆಳತಿಯನ್ನು ಬೀಳ್ಕೊಡಲು ಏರ್‌ಪೋರ್ಟ್‌ಗೆ ಹೋದಾಗ ಇದೆಲ್ಲಾ ನೆನಪಾಯಿತು. ಬಾಲ್ಯದ ನೆನಪುಗಳನ್ನೆಲ್ಲಾ ಹೇಳಿಕೊಂಡು, ವಿಮಾನ ಕುರಿತಂತೆ ಆಗ ನಮಗಿದ್ದ ಕಲ್ಪನೆಗಳ ಬಗ್ಗೆ ಹೇಳಿಕೊಂಡು ನಕ್ಕು, ಕಾಫಿ ಡೇನಲ್ಲಿ  ಕಾಫಿ ಕುಡಿದು, ಗೆಳತಿಗೆ ಶುಭ ಹಾರೈಸಿ, ವಿಮಾನದೊಳಗೆ ಊಟ ಕೊಡ್ತಾರೆ. ಆಗ ನಾನ್‌ವೆಜ್ಜೇ ತಗೋ. ವಿಮಾನದೊಳಗೆ ನೀನು ಮಾಂಸ ತಿಂದದ್ದು ಯಾರಿಗೂ ಗೊತ್ತಾಗುವುದಿಲ್ಲ ಎಂದು ರೇಗಿಸಿ, ಹೊರಟು ನಿಂತಾಗಲೇ ಅವರು ಕಣ್ಣಿಗೆ ಬಿದ್ದರು: ಅಪ್ಪ ಮತ್ತು ಮಗಳು.
ನೋಡಿದ ತಕ್ಷಣವೇ ಗೊತ್ತಾಗಿ ಬಿಡುತ್ತಿತ್ತು. ಮಗಳು ಹೊರಟು ನಿಂತಿದ್ದಳು. ಅಪ್ಪ ಬೀಳ್ಕೊಡಲು ಬಂದಿದ್ದ. 'ಪ್ರಯಾಣಿಕರೆಲ್ಲ ಸೆಕ್ಯೂರಿಟಿ ಚೆಕಪ್‌ಗೆ ಸಿದ್ಧರಾಗಬೇಕಾಗಿ ವಿನಂತಿ' ಎಂಬ ಸಂದೇಶ ಕೇಳುತ್ತಿದ್ದಂತೆಯೇ ಆ ಯುವತಿ ತಂದೆಯ ಕಾಲಿಗೆರಗಿದಳು. ನಂತರ, - ಅಪ್ಪಾ, ಹುಷಾರು ಅಂದಳು. ಆ ವೃದ್ಧ- 'ಮಗೂ, ನಿನಗೆ ಬಯಸಿದ್ದೆಲ್ಲವೂ ಹೆಚ್ಚು ಹೆಚ್ಚಾಗಿ ಸಿಗುವಂತಾಗಲಿ. ಅಮೆರಿಕ ತಲುಪಿದ ತಕ್ಷಣ ಫೋನ್ ಮಾಡು' ಎಂದ. ಆಕೆ, ಸರಿ ಎಂಬಂತೆ ತಲೆಯಾಡಿಸಿ, ಹೊರಡುವ ಮುನ್ನ ಆತನ ಅಂಗೈ ಹಿಡಿದು ಕಣ್ಣಿಗೆ ಒತ್ತಿಕೊಂಡಳು. ನಂತರ ಸರಸರನೆ ಸೆಕ್ಯೂರಿಟಿ ಚೆಕಪ್‌ನ ಸಾಲು ಸೇರಿಕೊಂಡಳು.
ಈ ಅಜ್ಜ, ನಾನು ಕುಳಿತಿದ್ದ ಜಾಗದಿಂದ ಸ್ವಲ್ಪ ಮುಂದೆ ಇದ್ದ ಬೆಂಚ್‌ನ ಮೇಲೆ ಗದ್ದಕ್ಕೆ ಎರಡೂ ಕೈಗಳನ್ನು ತಡೆಯಂತೆ ಇಟ್ಟುಕೊಂಡು ಕೂತುಬಿಟ್ಟ. ಒಂದೆರಡು ನಿಮಿಷದ ನಂತರ ಆತನ ದೇಹ ಅದುರಿದಂತೆ, ಕೆನ್ನೆಯ ಮೇಲಿಂದ ಒಂದೊಂದೇ ಹನಿ ಬಿದ್ದಂತೆ ಭಾಸವಾಯಿತು. ಅಲರ್ಟ್ ಆಗಿ, ತುಂಬ ಸೂಕ್ಷ್ಮವಾಗಿ ಗಮನಿಸಿದೆ. ಹೌದು, ಅಜ್ಜ ಅಳುತ್ತಿದ್ದ. ಪಾಪ ಅನ್ನಿಸಿತು. ನಾನೇ ಮುಂದಾಗಿ ಹೋಗಿ, ಎದುರು ನಿಂತು 'ಅಂಕಲ್, ಸಮಾಧಾನ ಮಾಡ್ಕೊಳ್ಳಿ' ಎಂದೆ. ಅಜ್ಜ, ತಕ್ಷಣವೇ ತಲೆಯೆತ್ತಿ, 'ಕೂತ್ಕೋಮ್ಮಾ' ಎಂದ. ಅನಂತರ ಕೇಳಿದ: 'ನೀನು ನಿನಗೆ ಅತ್ಯಂತ ಪ್ರಿಯರಾದ ಯಾರಾದರೂ ಒಬ್ಬರಿಗೇ ಅದೇ ಕಡೆಯ ಬಾರಿಗೆ ಗುಡ್‌ಬೈ ಹೇಳಿದ್ದೀಯಾ?'
ಹೀಗೆ ಮಾತಾಡುವಾಗ 'ಅದೇ ಕಡೆಯ ಬಾರಿ' ಎಂಬ ಶಬ್ದಗಳನ್ನು ಆತ ಸ್ವಲ್ಪ ಗಟ್ಟಿಯಾಗಿ, ಒತ್ತಿ ಹೇಳಿದಂತೆ ಭಾಸವಾಯಿತು. 'ಅಜ್ಜಾ, ನೀವು ಇದೇ ಕಡೆಯ ಬಾರಿಗೆ ವಿದಾಯ ಹೇಳ್ತಿದೀನಿ' ಅಂತ ಯಾಕಾದ್ರೂ ಅಂದುಕೊಳ್ತೀರಿ? ನಿಮ್ಮ ಮಗಳು ಇನ್ನು ಕೆಲವೇ ದಿನಗಳಲ್ಲಿ ವಾಪಸ್ ಬರ್ತಾರೆ ಅಲ್ವ? ಎಂದು ಪ್ರಶ್ನೆ ಹಾಕಿದೆ. ಆ ವಿಮಾನ ನಿಲ್ದಾಣ, ಅಲ್ಲಿನ ಹೈಫೈ ಜನ, ಕಿರಿಕಿರಿ ಅನ್ನಿಸುವ ನಿಯಮಗಳ ಮಧ್ಯೆ ಸಿಕ್ಕಿ ಒದ್ದಾಡುವುದಕ್ಕಿಂತ ಈ ಅಜ್ಜನೊಂದಿಗೆ ಹರಟುವುದರಲ್ಲಿ, ಅವನೊಂದಿಗೆ ಕಷ್ಟ-ಸುಖ ಹಂಚಿಕೊಳ್ಳುವುದರಲ್ಲಿ ಹೆಚ್ಚು ಖುಷಿಯಿದೆ ಅನ್ನಿಸಿತು. ನನ್ನ ಪ್ರಶ್ನೆಗೆ ಉತ್ತರವೆಂಬಂತೆ ಅಜ್ಜ ಹೀಗೆಂದ: 'ನೋಡ್ತಾ ಇದೀಯಲ್ಲಮ್ಮ, ನಂಗೆ ವಯಸ್ಸಾಗಿದೆ. ಬಿ.ಪಿ. ಇದೆ. ಶುಗರ್ ಇದೆ. ಅಪೆಂಡಿಸೈಟಿಸ್ ಆಪರೇಷನ್ ಆಗಿದೆ. ಎರಡು ಬಾರಿ ಸಣ್ಣ ಪ್ರಮಾಣದಲ್ಲಿ ಹೃದಯಾಘಾತವೂ ಆಗಿದೆ. ಮಗಳಿಗೆ ನೌಕರಿ ಇರುವುದು ಅಮೆರಿಕದಲ್ಲಿ. ಅವಳು ಬರುವುದು ವರ್ಷಕ್ಕೆ ಒಂದು ಬಾರಿ ಮಾತ್ರ. ಆಕೆ ಮತ್ತೆ ವಾಪಸ್ ಬರುವ ವೇಳೆಗೆ ನಾನು ಬದುಕಿರ್ತೀನಿ ಅಂತ ನನಗೇ ಗ್ಯಾರಂಟಿ ಇಲ್ಲ. ಹಾಗಾಗಿ ಇದೇ ಕೊನೆಯ ಬಾರಿಗೆ' ಅವಳನ್ನು ನೋಡ್ತಾ ಇದೀನಿ. ಇದೇ ಕೊನೆಯ ಬಾರಿಗೆ ಅವಳಿಗೆ ವಿದಾಯ ಹೇಳ್ತಿದೀನಿ ಅಂದುಕೊಂಡೆ. ಇದೇ ಕಡೆಯ ಭೇಟಿ ಎಂದು ಮತ್ತೆ ಮತ್ತೆ ನೆನಪಿಸಿಕೊಂಡಾಗ ಅಳು ಬಂತು...'
ಅಜ್ಜಾ, ನೀವು ಬೀಳ್ಕೊಡುವ ಮುನ್ನ-'ಮಗೂ, ಬಯಸಿದ್ದೆಲ್ಲವೂ ನಿನ್ನ ಪಾಲಿಗೆ ದಂಡಿಯಾಗಿ ಸಿಗಲಿ ಅಂತ ಹಾರೈಸಿದ್ರಿ ಅಲ್ವ? ಅದರ ಅರ್ಥವೇನು?' ಎಂದು ಪ್ರಶ್ನೆ ಹಾಕಿದೆ. ಅಜ್ಜ ಮುಗುಳ್ನಕ್ಕು ಹೇಳಿದ: 'ಅದು, ನಮ್ಮ ತಂದೆ ನನಗೆ ಹೇಳಿಕೊಟ್ಟ ಮಾತು. ಅದನ್ನೇ ನಾನು ಮಗಳಿಗೆ ಹೇಳಿದೆ. 'ನಮ್ಮ ಬದುಕಲ್ಲಿ ಸಂತೋಷವೆಂಬುದು ದಂಡಿಯಾಗಿ ಸಿಕ್ಕಿದರೆ ಬದುಕನ್ನು ಉಲ್ಲಾಸದಿಂದ ಕಳೆಯಲು ಸಾಧ್ಯವಾಗುತ್ತೆ. ಕಂಡ ಕನಸುಗಳೆಲ್ಲಾ ನನಸಾದರೆ, ಬದುಕಲ್ಲಿ 'ನೆಮ್ಮದಿ' ಎಂಬುದು ತಾನಾಗಿಯೇ ಬರುತ್ತೆ. ಬದುಕಲ್ಲಿ ಸೂರ್ಯದೇವನಂಥ ಗೆಳೆಯರು ಹೆಚ್ಚಿದಷ್ಟೂ ಅಜ್ಞಾನ, ಸಂಕಟವೆಂಬ ಅಂಧಕಾರ ಕಣ್ಮರೆಯಾಗುತ್ತದೆ. ಎಲ್ಲರನ್ನೂ ಆದರಿಸುವ ಗುಣ ಜೊತೆಯಾದರೆ, ಆಗ ವೈರಿಗಳ ಸಂಖ್ಯೆ ಕಡಿಮೆಯಾಗಿ ಹೆಚ್ಚು ಕಾಲ ನೆಮ್ಮದಿಯಿಂದ ಬದುಕುವುದು ಸಾಧ್ಯವಾಗುತ್ತದೆ....? ಇದೆಲ್ಲಾ ನನ್ನ ಮಗಳ ಬದುಕಲ್ಲಿ ಬರಲಿ ಎಂಬುದು ನನ್ನ ಸದಾಶಯ. ಅಷ್ಟೇ ಅಲ್ಲಮ್ಮಾ, ಬಯಸಿದ್ದೆಲ್ಲವೂ ನಿನಗೂ ಕೂಡ ಹೆಚ್ಚು ಪ್ರಮಾಣದಲ್ಲಿ ಸಿಗಲಿ. ಟೈಂ ಆಯ್ತು. ಹೋಗಿ ಬರ್ತೇನೆ. ಅಂದ ಹಾಗೆ, ನಿನ್ನ ಹೆಸರೇನು?
ತಕ್ಷಣವೇ ಹೇಳಿದೆ. ಮೊಬೈಲ್ ನಂಬರ್ ಕೊಟ್ಟೆ. ಥ್ಯಾಂಕ್ಯೂ ಅಂಕಲ್. ಮತ್ತೆ ಸಿಗೋಣ. ಬೈ ಎಂದೆ.  ಏರ್‌ಪೋರ್ಟಿಂದ ಬಂದವಳೇ, ಊರಿಗೆ ಫೋನ್ ಮಾಡಿ ನಡೆದದ್ದನ್ನೆಲ್ಲ ಹೇಳಿದೆ. ಆನಂತರ ನಿಮಗೆ ಹೇಳ್ತಿದ್ದೀನಿ...

- ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.