ಎರಡು ಕಡೆ ಕಾದು ದಾಸಯ್ಯ ಕೆಟ್ಟಂಗಾಗದೆ!
'ಅಲ್ಲಿ ನಿಂತ್ಕಂಡ್ರೆ ಕೆಜೆಪಿ, ಇಲ್ಲಿ ನಿಂತ್ಕಂಡ್ರೆ ಬಿಜೆಪಿ' ಅಂತೇಳ್ಕಂಡು ದನಗ್ಳು ಮಂತ್ರಿ ಬೆಳ್ಮಗಿಯೋರು ಬೆಳಿಗ್ಗೆ ಬೆಳಿಗ್ಗೆ ಅ ಕಡೆಯಿಂದ ಈ ಕಡೆ ವೋಡಾಡ್ತಾಯಿದ್ರು.
'ಅರೆರೆ, ಮಂತ್ರಿಗ್ಳು ಇದೇನು ಬಾಲ ಸುಟ್ಟಿರೋ ಬೆಕ್ನಂಗೆ ವೋಡಾಡ್ತಾಯಿದ್ದೀರಿ. ಏಕ ಪಾತ್ರಾಭಿನಯ ನಾಟ್ಕ ಏನರ ಪ್ರಾಕ್ಟೀಸು ಮಾಡ್ತಾಯಿದ್ದೀರ? ಯಾಕೆ ಅಂದ್ರೆ ಅಲ್ಲಿ ನಿಂತ್ರೆ ಇದು, ಇಲ್ಲಿ ನಿಂತ್ರೆ ಅದು ಅಂತಾಯಿದ್ದೀರಲ್ಲ ಅದುಕ್ಕೆ' ಅಂತೇಳಿ ಮೈಲಾರಿ ಯೋಳ್ದ.
'ಏನಿಲ್ಲ ಮೈಲಾರಿ, ಈ ಪೇಪರ್ದೋರು ಸುಮ್ಕೆ ಬುಡಾದೇಯಿಲ್ಲ. ನೀವು ಯಾವ್ ಪಾರ್ಟಿ, ನಿಮ್ ಲೀಡ್ರು ಯಾರು? ಅಂತೇಳಿ ಆವಾಗಾವಾಗ ಜೀವ ತಿಂತಾರೆ. ಸೆಟ್ರು ನಮ್ ಲೀಡ್ರು ಅಂದ್ರೆ ಯಡೂರಪ್ನೋರ್ಗೆ ಕ್ವಾಪ, ಯಡೂರಪ್ನೋರು ನಂಗೆ ನಾಯ್ಕ ಅಂತಂದ್ರೆ ಸೆಟ್ರು ಸೆಟಗತರೆ. ಸೆಟಗಂಡ್ರೆ ಪರ್ವಾಗಿಲ್ಲ ಕಣ್ಲಾ. ಮಂತ್ರಿ ಪೋಸ್ಟು ಕಿತ್ಕಂಡ್ರೆ ಏನ್ಲಾ ಮಾಡಾದು. ಬರಿಗೈನಾಗೆ ಬಸ್ ಹತ್ಕಂಡು ವೂರು ಸೇರ್ಬೇಕಾಯ್ತದೆ. ಗೂಟದ ಕಾರು, ಆಳುಕಾಳು ಇರಾಕಿಲ್ಲ. ಅದುಕ್ಕೆ ಬೆಣ್ಣೆನಾಗೆ ಕೂದ್ಲು ತಗ್ದಂಗೆ ಮಾತಾಡ್ಬೇಕು. ಅಮ್ಯಾಲೆ ಗಾಳಿ ಬರೋ ಕಡೀಕೆ ತೂರ್ಕಬೇಕು' ಅಂದ್ರು ಬೆಳ್ಮಗಿ ಸಾಹೇಬ್ರು.
'ಪರ್ವಾಗಿಲ್ಲ ಕಣೇಳಿ, ಗಾಂಧಿ ಟೋಪಿ ಹಾಕ್ಕಂಡು ನಾಟ್ಕ ಮಾಡೋದ್ನ ಸರ್ಯಾಗೇ ಕಲ್ತಂಡಿದ್ದೀರಿ. ಯಾವ್ದಾರ ವೊಂದ್ ಕಡ್ಯಾಗೆ ಇದ್ದೋಗಿ. ಅಮೇಕೆ ಎರಡು ಕಡೆ ಕಾದು ದಾಸಯ್ಯ ಕೆಟ್ಟ ಅನ್ನಂಗೆ ಆಬುಟ್ಟಾತು' ಅಂತೇಳಿ ಮೈಲಾರಿ ಯೋಳ್ದ.
'ಅಲ್ಲ, ಮೇವು ಇನ್ನಾ ಅದೆ, ಇನ್ನಾ ಅದೆ ಅಂತ ಟೀವಿನಾಗೆ ಯೋಳ್ತಾ ಇದ್ದಂಗಿತ್ತು. ನೀವೆಲ್ಲ ಕೈ-ಬಾಯಿ ಗಲೀಜು ಮಾಡ್ಕಂಡು ಈಪಾಟಿ ತಿಂದ್ರೂನೂವೆ ಮೇವು ಇನ್ನ ಖಾಲಿ ಆಗ್ದೆ ವುಳ್ದೈತಾ?' ಅಂತೇಳಿ ಮೈಲಾರಿ ಕೇಳ್ದ. 'ನಾನು ಯೋಳಿದ್ದು ದನ-ಕರ ತಿನ್ನೋ ಮೇವು ಕಣ್ಲಾ. ಅಲ್ಲಲೇ, ನಾನು ಎಲ್ಲಲಾ ತಿಂದೆ. ತಿನ್ನೋ ಖಾತೆ ಏನರ ನಂಗೆ ಕೊಟ್ಟವ್ರಾ ? ವಯಸ್ಕರ ಶಿಕ್ಷಣ, ಲೈಬ್ರರಿ, ಆಮ್ಯಾಲೆ ದನುಗ್ಳು ಖಾತೆ ಕೊಟ್ಟಿರಾದು. ವೊಂದು ಲೈಬ್ರರಿಗಂಟ ವೋಗಿ ಬುಕ್ಕು ತಿನ್ಕಂಡು ಕೂತ್ಕಬೇಕು. ಇಲ್ಲಾಂದ್ರೆ ದನುಗ್ಳುಗೆ ಹಾಕೋ ಹುಲ್ಲು, ಸೊಪ್ಪು ಸೋದೆ ತಿನ್ಕಬೇಕು ವೋಗಲೇ' ಅಂತೇಳಿ ಬೆಳ್ಮಗಿಯೋರು ಕಾರು ಹಾಕ್ಕಂಡು ಬರ್ ಅಂತ ವೊಂಟೇ ವೋದ್ರು.
'ಅರೆ ಇರ್ರಿ, ಇರ್ರಿ' ಅಂತ ಮೈಲಾರಿ ಕೂಗುದ್ರೂ ಕೇಳುಸ್ಕಳ್ಳೇ ಇಲ್ಲ. 'ವೊಳ್ಳೇ ಅಸಾಮಿ' ಅಂತೇಳ್ಕಂಡು ಮೈಲಾರಿ ವಿಧಾನಸೌಧ ಮೆಟ್ಲು ಇಳಿತಾಯಿದ್ದಂಗೆ ಕೈ ಪಕ್ಸದ ಲೀಡ್ರು ಮೋಟಮ್ನೋರು ಎಂಟ್ರಿ ತಂಗಂಡ್ರು. 'ತುಳ್ದಾಕುದ್ರಪ್ಪ ತುಳ್ದಾಕುದ್ರು' ಅಂತ ವೊಂದೇ ಕಣ್ಣಾಗೆ ಅತ್ಕಂಡು ಬಂದ್ರು.
'ಅರೆ, ಯಾರಕ್ಕ ತುಳ್ದಿದ್ದು, ಯಾವ್ ನೂಕು ನುಗ್ಲಾಗೆ ಸಿಕ್ಕಾಕ್ಕಂಡಿದ್ರಿ ತುಳ್ಯಕ್ಕೆ. ಹೆಂಗೆ ತುಳುದ್ರು ಭಕ್ತ ಕುಂಬಾರ ಪಿಚ್ಚರ್ನಾಗೆ ಅಣ್ಣೋರು ಮಣ್ಣು ತುಳ್ದಂಗಾ ?' ಅಂತೇಳಿ ಮೈಲಾರಿ ಕೇಳ್ದ.
'ಯಾವ್ ಸೀಮೆಯೋನ್ಲಾ ನೀನು ? ಬಡ್ಡೆತ್ತದೆ, ನಿನ್ ಮುಖುಕ್ಕೆ ಮಂಗ್ಳಾರ್ತಿ ಎತ್ತ. ನಾನೇಳಿದ್ದು ರಾಜ್ಕೀಯದಾಗೆ ತುಳ್ದಾಕುದ್ರು ಅಂತ' ಅಂದ್ರು ಮೋಟಮ್ನೋರು.
'ವೋಗ್ಲಿ ಬುಡಕ್ಕಾ ರಾಜ್ಕೀಯ ಅಂದ್ರೇನೆ ಹಂಗೆ. ತುಳಸ್ಕಳೋರು ಇರೋಗಂಟ ತುಳಿಯೋರು ಇದ್ದೇ ಇರ್ತರೆ ಅಲ್ವಾ? ಅದೋಗ್ಲಿ, ಈಕಿತ ಎಲೆಕ್ಸನ್ಗೆ ಏನರ ನಿಂತ್ಕತೀರ ಹೆಂಗೆ?' ಅಂತೇಳಿ ಮೈಲಾರಿ ಕೇಳ್ದ.
'ಯಾಕಲೇ ನಾನು ಸಂದಾಕಿರಾದು ನಿಂಗೆ ಹಿಡುಸ್ತಾಯಿಲ್ವಾ? ಏನೋ ನಯಾಪೈಸೆ ಖರ್ಚು ಮಾಡ್ದಂಗೆ ಎಂಎಲ್‌ಸಿ ಆಗೋಗಿದ್ದೀನಿ. ಇನ್ನ ಅಸೆಂಬ್ಲಿ ಎಲೆಕ್ಸನ್ಗೆ ನಿಂತು ವೊಗೆ ಹಾಕುಸ್ಕಂಬುಡ್ಲಾ ?' ಅಂದ್ರು ಮೋಟಮ್ಮ.
'ನೀವೇ ಟೀವಿನಾಗೆ ಯೋಳ್ತಾಯಿದ್ರಿ, ಸೋನಿಯಾ ಮೇಡಮ್ಮು ಯೋಳುದ್ರೆ ನಿಂತ್ಕತೀನಿ ಅಂತ' ಅಂದ ಮೈಲಾರಿ.
'ಸುಮ್ಕೆ ಹಂಗೇ ಡೈಲಾಗು ಬುಟ್ಟೆ ಕಣ್ಲಾ. ಲೀಡ್ರು ಅಂದ್ಮೇಕೆ ನ್ಯೂಸ್ನಾಗೆ ಇರ್ಬೇಕು ಕಣಲೇ. ಇಲ್ಲಾಂದ್ರೆ ಜನ ಈವಮ್ಮ ಯಾರೋ ಗೊತ್ತಿಲ್ಲ ಅಂತೇಳ್ಬುಡ್ತರೆ' ಅಂದ್ರು ಮೋಟಮ್ಮ.
'ನೀವೇಳುದ್ರಿ ಅಂತ ಸೋನಿಯಾ ಮೇಡಮ್ಮು ನಿಂತ್ಕಳಿ ಅಂತಂದ್ರೆ?' ಅಂದ ಮೈಲಾರಿ. 'ಟ್ಯೂಬ್‌ಲೈಟು ಕಣಲೇ ನೀನು. ನನ್ ಹೇಳ್ಕೆ ಬಂದಿರಾದು ಕನ್ನಡ ಪೇಪರ್ರು, ಟೀವಿ ಚಾನೆಲ್ನಾಗೆ. ಸೋನಿಯಾ ಮೇಡಮ್ಗೆ ಕನ್ನಡ ಬತ್ತದಾ? ವೋಗೋಗಲೇ, ಕೋಳಿ ಕೇಳಿ ಯಾರು ಮಸಾಲೆ ಅರೀತರೆ' ಅಂತೇಳಿ ಮೋಟಮ್ನೋರು ವಿಧಾನಸೌಧ ಮೆಟ್ಲು ಹತ್ಕಂಡು ವೋದ್ರು.
- ಕೆ.ವಿ.ಪ್ರಭಾಕರ್
prabhukolar@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

