ಅಂಕಣಗಳು

ಸಾಕುವ ಹೋರಿಗಳಿಗೆ ಮಾತ್ರ ಕಿಮ್ಮತ್ತು, ಹಳ್ಳಿಕಾರರ ಬದುಕಲ್ಲಿಲ್ಲ ಗಮ್ಮತ್ತು

Published On :

ಹಳ್ಳಿಕಾರ ಎಂಬುದು ದುಬಾರಿ ಬೆಲೆಯ ಹೋರಿ ತಳಿಯ ಹೆಸರು. ಆದರೆ, ಆ ಹೆಸರಿನ ಹಿಂದೆ ಒಂದು ಸಮುದಾಯದ ಇತಿಹಾಸವೇ ಅಡಗಿದೆ.
ಹೆಸರೇ ಹೇಳುವಂತೆ ಹಳ್ಳಿಕಾರ ಸಮುದಾಯ ಗ್ರಾಮೀಣ ಪ್ರದೇಶ ಅದರಲ್ಲೂ ದನ-ಕರುಗಳೊಂದಿಗೆ ಬದುಕು ಬೆಸೆದುಕೊಂಡ ಜಾತಿ. ಈ ಜನಾಂಗಕ್ಕೆ 1600 ವರ್ಷಗಳ ಇತಿಹಾಸವೂ ಇದೆಯಂತೆ. ವಿಚಿತ್ರ ಎಂದರೆ ಹಳ್ಳಿಕಾರ ಎಂಬುದು ಯಾದವ ಕುಲಕ್ಕೆ ಸಂಬಂಧಿಸಿದ ಒಂದು ಜನಾಂಗ. ಆದರೆ, ಈ ಜಾತಿಯ ಹೆಸರು ಥಳಕು ಹಾಕಿಕೊಂಡಿರುವುದು ಒಕ್ಕಲಿಗ ಸಮುದಾಯದ ಜೊತೆಗೆ.
ಶ್ರೀಕೃಷ್ಣ ಪರಮಾತ್ಮ ನಮ್ಮ ಮೂಲ. ಹೀಗಾಗಿ ನಾವು ಯಾದವ ಕುಲಕ್ಕೆ ಸೇರಿದವರು ಎನ್ನುವುದು ಹಳ್ಳಿಕಾರ ಸಮುದಾಯದ ಹಿರಿಯರ ಅನಿಸಿಕೆ. ಈ ಜನಾಂಗದ ಪೂರ್ವಿಕರು ರಾಜ, ಮಹಾರಾಜರ ಕಾಲದಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದರಂತೆ. ದೆಹಲಿಯ ಒಬ್ಬ ರಾಜನ ಸೈನ್ಯದಲ್ಲಿ ಇದೇ ಸಮುದಾಯದ ದೊಡ್ಡನಾಯಕ, ಶಲ್ಯತಿಮ್ಮನಾಯಕ ಎಂಬುವರು ಕೆಲಸ ಮಾಡುತ್ತಿದ್ದರಂತೆ. ಸಂಬಂಧದಲ್ಲಿ ಇವರು ಭಾವ-ಭಾವಮೈದುನರಾಗಿದ್ದರು. ಅವರಿಂದಾಗಿ ದೆಹಲಿಯಲ್ಲಿ ಈ ಜನಾಂಗ ಬೆಳೆಯಿತು. ಮುಂದೆ ಸಮುದಾಯದವರು ದೆಹಲಿಯಿಂದ ದೇಶದ ನಾನಾ ಭಾಗಗಳಿಗೆ ವಲಸೆ ಹೋಗಿ ನೆಲೆಸಿದರು. ಅದರಲ್ಲಿ ಕರ್ನಾಟಕವೂ ಒಂದು.

ವ್ಯವಸಾಯ, ಪಶುಸಂಗೋಪನೆ
ಹಳ್ಳಿಕಾರರ ಮೂಲ ಕಸುಬು ವ್ಯವಸಾಯ, ಪಶು ಸಂಗೋಪನೆ. ಅದರಲ್ಲೂ ಇವರು ಸಾಕುವ ಹೋರಿಗಳು ದೇಶ, ವಿದೇಶಗಳಲ್ಲಿ ಮನ್ನಣೆ ಗಳಿಸಿವೆ. ಹಳ್ಳಿಕಾರ ಎತ್ತುಗಳು ಎಂದರೆ ಬೆಲೆಯಲ್ಲಿ ಬಲು ದುಬಾರಿ. ಜೋಡಿ ಎತ್ತುಗಳ ಬೆಲೆ ಸುಮಾರು ಒಂದು ಲಕ್ಷದವರೆಗೆ ಇದೆ. ಈ ಎತ್ತುಗಳನ್ನು ರಾಜರ ಕಾಲದಲ್ಲಿ ಸೈನ್ಯದಲ್ಲೂ ಬಳಕೆ ಮಾಡುತ್ತಿದ್ದರಂತೆ. ಕಾರಣ, ವೇಗವಾಗಿ ಓಡುವ ತಾಕತ್ತು ಹೋರಿಗಳಿವೆ. ಅದು ಅವುಗಳಿಗೆ ಶ್ರೀಕೃಷ್ಣ ಪರಮಾತ್ಮನಿಂದ ಬಂದಿರುವ ವಿಶೇಷ ಶಕ್ತಿ ಎನ್ನುತ್ತಾರೆ ಹಿರಿಯರು.
ಹಿಂದಿನ ಕಾಲದಲ್ಲಿ ಸಾರಿಗೆ ವ್ಯವಸ್ಥೆ ಇರಲಿಲ್ಲ. ರಾಜ, ಮಹಾರಾಜರಾಗಲಿ, ಜನ ಸಾಮಾನ್ಯರಾಗಲಿ ಪ್ರಯಾಣಕ್ಕೆ ಹೆಚ್ಚಾಗಿ ಎತ್ತಿನ ಬಂಡಿಗಳನ್ನು ಬಳಕೆ ಮಾಡುತ್ತಿದ್ದರು. ಅದರಲ್ಲೂ ಹಳ್ಳಿಕಾರರ ಸಮುದಾಯದವರ ಎತ್ತುಗಳು ಬಂಡಿಗಳಿಗೆ ಯೋಗ್ಯವಾದವು ಎಂಬ ಹೆಸರಿತ್ತು. ಹೀಗಾಗಿ ಎತ್ತುಗಳಿಗೆ ಹಳ್ಳಿಕಾರ ಎಂಬ ಹೆಸರು ಬಂದಿತು. ಈಗಲು ಚಿಕ್ಕಮಗಳೂರು ಜಿಲ್ಲೆಯ ಅಮೃತ ಕಾವಲ್ ಎಂಬಲ್ಲಿ ಈ ತಳಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ದನಗಳ ಜಾತ್ರೆ ರಾಜ್ಯದ ಯಾವುದೇ ಭಾಗದಲ್ಲಿ ನಡೆದರೂ ಅಲ್ಲಿ ಹಳ್ಳಿಕಾರ ಹೋರಿಗಳು ವಿಶೇಷ ಆಕರ್ಷಣೆ ಆಗಿರುತ್ತವೆ.

ಗ್ರಾಮೀಣ ಪ್ರದೇಶದಲ್ಲಿ ವಾಸ
ಈ ಸಮುದಾಯದ ಜನ ಈಗಲೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿದ್ದಾರೆ. ತುಮಕೂರು, ಚಿತ್ರದುರ್ಗ, ಹಾಸನ, ಮಂಡ್ಯ, ಚಿಕ್ಕಮಗಳೂರು, ಮೈಸೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಅವರಿದ್ದಾರೆ. ಜನಸಂಖ್ಯೆ ಸುಮಾರು 10ರಿಂದ 15 ಲಕ್ಷದವರೆಗೆ ಇರಬಹುದು ಎನ್ನುತ್ತಾರೆ ರಾಜ್ಯ ಹಳ್ಳಿಕಾರ ಸಂಘದ ಪ್ರಧಾನ ಕಾರ್ಯದರ್ಶಿ ಕರಿಯಪ್ಪ. ಈ ಮೊದಲು ಹಳ್ಳಿಕಾರರು ಸಂಘಟಿತರಾಗಿರಲಿಲ್ಲ. ಹೀಗಾಗಿ ಒಕ್ಕಲಿಗ ಸಮುದಾಯದ ಹಿರಿಯರು ಇವರನ್ನು ತಮ್ಮೊಂದಿಗೆ ಸೇರಿಸಿಕೊಂಡರು. ಆದ್ದರಿಂದಲೇ ಸರ್ಕಾರದ ಜಾತಿ ಪಟ್ಟಿಯಲ್ಲಿ ಪ್ರವರ್ಗ-3ಎಗೆ ಸೇರುವಂತಾಯಿತು.
ಹಸು, ಕರುಗಳ ಜೊತೆ ಹಳ್ಳಿಕಾರರ ಒಡನಾಟ ಯಾವ ರೀತಿ ಇತ್ತು ಎಂದರೆ ಒಂದೊಂದು ಹಸುವಿಗೂ ಅವರು ನಾಮಕರಣ ಮಾಡುತ್ತಿದ್ದರು. ಈ ಹಿಂದೆ ಈ ಸಮುದಾಯದಲ್ಲಿ ದನಗಳನ್ನು ಮೇಯಿಸಲು ಕಾಡಿಗೆ ಹೋಗುತ್ತಿದ್ದವರು ಬೇಸರ ಕಳೆಯಲು ಕೊಳಲು ನುಡಿಸುತ್ತಿದ್ದರು. ಆ ಕೊಳಲಿನಲ್ಲಿ ಹಸುಗಳ ಹೆಸರು ಕೂಗಿದರೆ ಅವು ಒಂದೊಂದಾಗಿ ಓಡಿ ಬರುತ್ತಿದ್ದವಂತೆ.
ಆದರೆ, ಈಗ ಹೋರಿಗಳನ್ನು ಸಾಕುವ ತಾಕತ್ತು ಸಮುದಾಯದವರಿಗೆ ಇಲ್ಲ. ಏಕೆಂದರೆ, ಅದು ದುಬಾರಿ ಕೆಲಸ. ಹೀಗಾಗಿ ಹೆಚ್ಚಿನ ಮಂದಿ ಕೃಷಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದಾರೆ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ನಮ್ಮ ಜಾತಿ ಹಿಂದುಳಿದಿದ್ದರೂ ಯಾರೂ ಕಣ್ಣೆತ್ತಿ ನೋಡುತ್ತಿಲ್ಲ
ಎಂಬುದು ಕರಿಯಪ್ಪ ಅವರ ನೋವಿನ ನುಡಿ.
ರಾಜಕೀಯದಲ್ಲಿ ಹೆಸರು ಮಾಡಿರುವ ಒಬ್ಬರೂ ಈ ಸಮುದಾಯದಲ್ಲಿ ಇಲ್ಲ. ಇನ್ನು ಐಎಸ್,ಐಪಿಎಸ್ ಸೇರಿದಂತೆ ಉನ್ನತ ಹುದ್ದೆಯಲ್ಲಿರುವರೂ ಸಿಗುವುದಿಲ್ಲ. ವಿದ್ಯಾಭ್ಯಾಸ ಎಸ್‌ಎಸ್‌ಎಲ್‌ಸಿ ವರೆಗೆ ಓದಿದರೆ ಅದೇ ಹೆಚ್ಚು. ಕೊಂಚ ಸ್ಥಿತಿವಂತರಾದವರು ಪದವಿ ವರೆಗೆ ಹೋಗಬಹುದು. ದ್ಯಾವನಹಳ್ಳಿಕಾರ, ಗೋಡೆ ಹಳ್ಳಿಕಾರ, ಕೆಂಪನಹಳ್ಳಿಕಾರ ಎಂಬುದು ಸೇರಿದಂತೆ ಈ ಸಮುದಾಯದಲ್ಲಿ 50-60 ಉಪ ಪಂಗಡಗಳು ಇರುವುದು ಮತ್ತೊಂದು ವಿಶೇಷ.

ವರದಕ್ಷಿಣೆಗೆ ಚಿನ್ನ, ಬೆಳ್ಳಿ ನಾಣ್ಯ
ಹಳ್ಳಿಕಾರರಲ್ಲಿ ಈ ಹಿಂದೆ ಒಂದು ವಿಶಿಷ್ಟವಾದ ಸಂಪ್ರದಾಯ ಆಚರಣೆಯಲ್ಲಿ ಇತ್ತಂತೆ. ಅದೇನೆಂದರೆ, ಮನೆಯಲ್ಲಿ ಹೆಣ್ಣು ಮಗಳಿಗೆ ಮದುವೆ ನಿಶ್ಚಯವಾದರೆ ಗಂಡಿನ ಕಡೆಯವರಿಗೆ ಬೆಳ್ಳಿ ಮತ್ತು ಚಿನ್ನದ ನಾಣ್ಯಗಳನ್ನು ವರ ದಕ್ಷಿಣೆಯಾಗಿ ಕೊಡಬೇಕಾಗಿತ್ತು. ಅದು ಅಂದಿನ ಕಾಲದಲ್ಲಿ ರಾಜರು ಮಾಡಿದ ನಿಯಮವೂ ಆಗಿತ್ತಂತೆ. ಹೀಗಾಗಿ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಕೊಡುವ ಶಕ್ತಿ ಇಲ್ಲದ ಕಾರಣ ಬಹುತೇಕ ಹೆಣ್ಣು ಮಕ್ಕಳಿಗೆ ಮದುವೆಯೇ ಆಗುತ್ತಿರಲಿಲ್ಲವಂತೆ. ಕೊನೆಗೆ ಹೆಣ್ಣು ಹೆತ್ತವರು ರಾಜರ ಬಳಿಗೆ ಹೋಗಿ ತಮ್ಮ ಕಷ್ಟ ಹೇಳಿಕೊಂಡರಂತೆ. ವರದಕ್ಷಿಣೆಯಾಗಿ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಕೊಡುವ ಶಕ್ತಿ ನಮಗಿಲ್ಲ. ಹೀಗಾಗಿ ನಮ್ಮ ಮನೆಯ ಹೆಣ್ಣು ಮಕ್ಕಳು ಕನ್ಯೆಯರಾಗೇ ಉಳಿದುಕೊಂಡಿದ್ದಾರೆ. ಈ ನಿಯಮವನ್ನು ಸಡಿಲ ಮಾಡಿ ಎಂದು ಮನವಿ ಮಾಡಿದರಂತೆ. ರಾಜ ನಯಾಪೈಸೆ ವರದಕ್ಷಿಣೆ ಇಲ್ಲದೆ ಮದುವೆ ನಡೆಯಬೇಕು ಎಂದು ಆಗ ಆದೇಶ ಹೊರಡಿಸಿದನಂತೆ. ಬಳಿಕ ಸಾವಿರಾರು ಸಂಖ್ಯೆಯಲ್ಲಿ ಮದುವೆಗಳು ನಡೆದು ಹೋದವಂತೆ.

ಚನ್ನರಾಯನದುರ್ಗದಲ್ಲಿ ಮಠ
ಹಳ್ಳಿಕಾರ ಸಮುದಾಯದ ಮೂಲ ಕುಲಗುರುಗಳಾದ ಶ್ರೀ ಗುರುಮುರಹಸ್ವಾಮಿ ಅವರು ಸುಮಾರು 200 ವರ್ಷದ ಹಿಂದೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಎಂಬಲ್ಲಿ ಮಠವೊಂದನ್ನು ಸ್ಥಾಪನೆ ಮಾಡಿದ್ದು ಈಗಲೂ ಅಸ್ತಿತ್ವದಲ್ಲಿದೆ. ಬೆಂಗಳೂರಿನ ರಾಣಾಸಿಂಗ್ ಪೇಟೆಯಲ್ಲೂ ಶಾಖಾ ಮಠ ಇದೆ. ಜನಸಂಖ್ಯೆ ಹೆಚ್ಚುತ್ತಿದ್ದರೂ ಸಮುದಾಯ ಅರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ನಿರೀಕ್ಷಿಸಿದಷ್ಟು ಮುಂದುವರಿದಿಲ್ಲ. ಶೇ. 90ರಷ್ಟು ಮಂದಿ ಹಳ್ಳಿಗಳಲ್ಲಿ ವಾಸ ಮಾಡುತ್ತಿರುವುದೂ ಇದಕ್ಕೆ ಕಾರಣವಾಗಿದೆ ಹಳ್ಳಿಕಾರ ಸಮುದಾಯದವರು ಹೆಚ್ಚಾಗಿರುವ ಹಳ್ಳಿಗಳಲ್ಲಿ ಅದೇ ಜಾತಿಯವರು ಚೇರ್ಮನ್, ಪಟೇಲ ಸೇರಿದಂತೆ ಮುಖ್ಯ ಹುದ್ದೆಗಳಲ್ಲಿ ಇದ್ದಾರಂತೆ.

ಅತ್ಯಂತ ಹಳೆಯ ಸಂಘ
ಜನಾಂಗದ ಸಂಘಟನೆಗಾಗಿ ಸ್ಥಾಪನೆಯಾಗಿರುವ ಸಂಘವೂ ಅತ್ಯಂತ ಹಳೆಯದ್ದಾಗಿದೆ. 1905ರಲ್ಲಿ ಈ ಜನಾಂಗದವರು ತಮ್ಮನ್ನು ಹಳ್ಳಿಕಾರರು ಎಂದು ಗುರುತಿಸಿಕೊಂಡು 1932ರಲ್ಲಿ ಸಂಘದ ಘೋಷಣೆ ಮಾಡಿದರು. ಬಳಿಕ ಸಂಘದ ನಿಯಮಾವಳಿಗಳನ್ನೂ ರೂಪಿಸಲಾಯಿತು. 1938ರಲ್ಲಿ ಮೈಸೂರು ಅರಸರಿಗೆ ಮನವಿಯೊಂದನ್ನು ಸಲ್ಲಿಸಿದ ಸಂಘದ ಪ್ರಮುಖರು ನಮ್ಮ ಜನಾಂಗದ ಜನಗಣತಿಯನ್ನು ಪ್ರತ್ಯೇಕವಾಗಿ ಮಾಡಿಸಬೇಕು ಎಂದರು. ಅದರಂತೆ 1940ಲ್ಲಿ ಮಹಾರಾಜರು ಪ್ರತ್ಯೇಕವಾಗಿ ಜನಗಣತಿ ಮಾಡಿಸಿದರು. ಸಂಘ 1944ರಲ್ಲಿ ಅಧಿಕೃತವಾಗಿ ನೋಂದಣಿ ಆಯಿತು.
ಸಂಘದ ಪ್ರಮುಖರು 1975ರಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಿದರು. ಸಂಘದ ಮೂಲದಿಂದ ಬರುವ ಆದಾಯದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನೂ ನೀಡಲಾಗುತ್ತಿದೆ. ತುಮಕೂರು ನಗರದಲ್ಲಿಯೂ 25 ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ನಿಲಯದ ಸೌಲಭ್ಯಗಳನ್ನು ಒದಗಿಸಲಾಗಿದೆ. ರಾಣಾಸಿಂಗ್ ಪೇಟೆಯಲ್ಲಿ ಮಠದ ಹಳೆಯ ಕಟ್ಟಡ ಕೆಡವಿ ಹೊಸದಾಗಿ ಕಟ್ಟಡ ನಿರ್ಮಿಸಲಾಗಿದೆ. ಇದ್ದುದರಲ್ಲಿ ಸಂಘ ಸಮುದಾಯದವರಿಗಾಗಿ ನಾನಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ.

ಸಂಕಷ್ಟದಲ್ಲಿರುವ ಹಳ್ಳಿಕಾರ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು. ಜನಾಂಗದ ಅಭಿವೃದ್ಧಿಗೆ ಈ ಸಾಲಿನ ಮುಂಗಡ ಪತ್ರದಲ್ಲಿ ಸರ್ಕಾರ ಐದು ಕೋಟಿ ರೂ. ಮೀಸಲಿಡಬೇಕು.

-ಕರಿಯಪ್ಪ, ಪ್ರಧಾನ ಕಾರ್ಯದರ್ಶಿ, ರಾಜ್ಯ ಹಳ್ಳಿಕಾರರ ಸಂಘ

-ಕೆ.ವಿ.ಪ್ರಭಾಕರ  prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.