ಅಂಕಣಗಳು

ಕಂಗೆಟ್ಟಿರುವ ಕರ್ನಾಟಕದ ಜನತೆಗೆ ಚುನಾವಣೆಯೊಂದೇ ಆಶಾಕಿರಣ

Published On :

ಕರ್ನಾಟಕದ ಬಿಜೆಪಿ ಸರ್ಕಾರ ಈಗ ರೋಗಗ್ರಸ್ತವಾಗಿದೆ. ಇದಕ್ಕೆ ಮುಖ್ಯ ಕಾರಣ ಅದು, ಮತ್ತದರ ನಾಯಕರೇ. ಯಡಿಯೂರಪ್ಪ ಅವರ ಕೆಜೆಪಿ ಪಕ್ಷವನ್ನು ಸೇರಲು ಅದಾಗಲೇ ಬಿಜೆಪಿಯಿಂದ 13 ಎಮ್‌ಎಲ್‌ಎಗಳು ಹೊರಗಡಿಯಿಟ್ಟಿದ್ದಾರೆ. ಇನ್ನೊಂದು 5 ಎಮ್‌ಎಲ್‌ಎಗಳು ಹೊರನಡೆದರೆಂದರೆ ಪಕ್ಷ ಕುಸಿದು ಬೀಳುತ್ತದೆ. ಅದು ಬದುಕುಳಿಯುತ್ತದೋ ಇಲ್ಲವೋ ಎನ್ನುವ ಪ್ರಶ್ನೆ ಈಗ ಹೆಚ್ಚು ಮುಖ್ಯವಾಗುವುದೇ ಇಲ್ಲ. ಏಕೆಂದರೆ ಚುನಾವಣೆಗಳಿಗೆ ಇನ್ನು ಮೂರು ತಿಂಗಳುಗಳೇ ಉಳಿದಿರುವುದು. ಪಕ್ಷದಲ್ಲಿನ ನಾಯಕರನ್ನು ಹಿಡಿದಿಡಲು ಮುಖ್ಯಮಂತ್ರಿ ಶೆಟ್ಟರ್ ಒದ್ದಾಡುತ್ತಲೇ ಇದ್ದಾರೆ, ಹಾಗಾಗಿ ಆಡಳಿತವೆನ್ನುವುದು ಹೊಡೆತ ತಿಂದು ಮಕಾಡೆ ಮಲಗಿದೆ. ಅಭಿವೃದ್ಧಿಯಂತೂ ಹೇಳಹೆಸರಿಲ್ಲದಾಗಿದೆ.
ಚುನಾವಣೆಯೇ ಉತ್ತಮ ಆಯ್ಕೆ ಎನಿಸುತ್ತಿದೆ. ರಾಜ್ಯದ ಮತದಾರರಂತೂ ಗೊಂದಲಗೊಂಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅಧಿಕಾರ ನೋಡಿ ಬೇಸತ್ತಿದ್ದ ಅವರುಗಳು, ಬಿಜೆಪಿಯಾದರೂ ಉತ್ತಮ ಆಡಳಿತ ನಡೆಸುತ್ತದೇನೋ ಎನ್ನುವ ಆಸೆಯಿಂದ ಅದನ್ನು ಕುರ್ಚಿಯಲ್ಲಿ ತಂದು ಕೂರಿಸಿದ್ದರು. ಆದರೆ ಅವರ ನಂಬಿಕೆಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಹೋದವು. ಮೊದಲು ಆಳಿದ ಪಕ್ಷಗಳಿಗಿಂತ ತಾನು ಭಿನ್ನವಿಲ್ಲ ಎನ್ನುವುದನ್ನು ಬಿಜೆಪಿ ತೋರಿಸಿಕೊಟ್ಟಿತು. ಸಾಲದೆಂಬಂತೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಅಧಿಕಾರದಾಹ ಪಕ್ಷವನ್ನೇ ಬುಡಮೇಲಾಗಿಸಿದವು. ಸಾಲುಸಾಲಾಗಿ ಮುಖ್ಯಮಂತ್ರಿಗಳು ಬದಲಾಗುತ್ತಾ ಹೋದರು. ಬಂಡಾಯವೆದ್ದವರನ್ನು ಬಿಗಿದಪ್ಪಿ ಮುದ್ದು ಮಾಡಲಾಯಿತು. ಪಕ್ಷವಂತೂ ಈಗ ಗೊಂದಲದ ಗೂಡಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಮಾಡಲಾಗದ ಕೆಲಸವನ್ನು ಯಡಿಯೂರಪ್ಪ ಮಾಡಿದ್ದಾರೆ. ಕೇಸರಿ ಪಕ್ಷದ ಬೆನ್ನೆಲುಬನ್ನೇ ಅವರು ಮುರಿದಿದ್ದಾರೆ.
ತಾನಿಲ್ಲದೇ ಬಿಜೆಪಿಯೂ ಇಲ್ಲ ಎನ್ನುವುದನ್ನು ತೋರಿಸಲು ಅವರು ಸಫಲರಾಗುವರೇ? ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ಬಿಜೆಪಿ ಸಾಬೀತುಪಡಿಸಬಲ್ಲದೆ? ಅಥವಾ ಬಿಜೆಪಿಯ ಸಂಗಡವೇ ಯಡಿಯೂರಪ್ಪ ಮುಳುಗಿಹೋಗಲಿದ್ದಾರೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮತದಾರರ ಬಳಿಯಿದೆ. ಮತದಾರರು ಮುನಿಸಿಕೊಂಡಿದ್ದಾರಾದರೂ, ಆ ಬಗ್ಗೆ ತುಟಿಬಿಚ್ಚುತ್ತಿಲ್ಲ. ಯಾರಿಗೆ ಗೊತ್ತು, ಅವರು ಬಿಜೆಪಿಗೇ ಮಾನ್ಯತೆ ನೀಡಿ ಯಡಿಯೂರಪ್ಪನವರಿಗೆ ಹೊರದಾರಿ ತೋರಿಸಲೂಬಹುದು ಅಥವಾ ಬಿಜೆಪಿಯೊಂದಿಗೆ ಯಡಿಯೂರಪ್ಪನವರನ್ನೂ ಬದಿಗೆಸೆದು ಮತ್ತೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳನ್ನೇ ಆಯ್ಕೆ ಮಾಡಬಹುದು. ಅವರು ಒಂದು ಸ್ಪಷ್ಟ ನಿರ್ಧಾರಕ್ಕೆ ಬರದೇ ಹೋದರೆ, ರಾಜ್ಯ ಅತಂತ್ರ ವಿಧಾನಸಭೆಗೆ ಸಾಕ್ಷಿಯಾಗಲಿದೆ. ಹಾಗೇನಾದರೂ ಆದರೆ ಮತ್ತೆ ಅಪವಿತ್ರ ಮೈತ್ರಿಗಳು, ಕುದುರೆ ವ್ಯಾಪಾರ, ಕೊಡು-ತೆಗೆದುಕೊಳ್ಳುವುದು, ಬ್ಲ್ಯಾಕ್‌ಮೇಲಿಂಗ್‌ಗಳು ತಲೆಯೆತ್ತಲಿವೆ.
ಜಗದೀಶ್ ಶೆಟ್ಟರ್ ಅವರ ಸರ್ಕಾರ ಪರ್ವತದ ತುದಿಗೆ ಬಂದು ನಿಂತಿದೆಯಾದ್ದರಿಂದ, ಬಹಳಷ್ಟು ಸನ್ನಿವೇಶಗಳು ಎದುರಾಗಬಹುದು:
-ವಿಶ್ವಾಸಮತ ಸಾಬೀತು ಪಡಿಸಲು ರಾಜ್ಯಪಾಲರು ಮುಖ್ಯಮಂತ್ರಿಗಳನ್ನು ಕೇಳಬಹುದು. ಒಂದು ವೇಳೆ ಹಾಗೆ ಮಾಡಲು ಸಿಎಂ ಸಫಲರಾದರೆ, ಚುನಾವಣೆವರೆಗಾದರೂ ಬಿಜೆಪಿ ಅಧಿಕಾರದಲ್ಲಿ ಉಳಿಯುತ್ತದೆ.
- ವಿಶ್ವಾಸಮತ ಸಾಬೀತುಪಡಿಸಲು ಮುಖ್ಯಮಂತ್ರಿಗಳು ವಿಫಲರಾದರೆ, ಅವರು ಹೊಸ ಚುನಾವಣೆ ನಡೆಯಬೇಕೆಂದು ಆಗ್ರಹಿಸಬಹುದು. ಅವರ ಮಾತಿಗೆ ರಾಜ್ಯಪಾಲರು ಒಪ್ಪಿಕೊಂಡು ಚುನಾವಣೆವರೆಗೂ ರಾಷ್ಟ್ರಪತಿ ಆಡಳಿತಕ್ಕೆ ಆಗ್ರಹಿಸಬಹುದು.
- ಮುಖ್ಯಮಂತ್ರಿಗಳಿಗೆ ವಿಶ್ವಾಸಮತ ಸಾಬೀತು ಪಡಿಸುವಂತೆ ಕೇಳದೆಯೇ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬಹುದು. ಯಡಿಯೂರಪ್ಪ ಅವಧಿಯಲ್ಲಿ ಒಮ್ಮೆ ಅವರು ಹಾಗೆ ಮಾಡಿದ್ದರಾದರೂ, ಕೇಂದ್ರ ಸರ್ಕಾರ ಅವರ ಮಾತಿಗೆ ಮಣೆ ಹಾಕಿರಲಿಲ್ಲ ಮತ್ತು ಅವರು ವಿಶ್ವಾಸಮತ ಗಳಿಕೆಯಲ್ಲಿ ಜಯ ಸಾಧಿಸಿದ್ದರು.
- ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಸರ್ಕಾರ ರಚಿಸಬಹುದು. ಅಧಿಕಾರದಲ್ಲಿದ್ದರೆ ಚುನಾವಣಾ ಸಮಯದಲ್ಲಿ ಸಹಾಯಕವಾಗುತ್ತದೆ ಎನ್ನುವ ಕಾರಣಕ್ಕೆ! ಆದರೆ ಅವುಗಳ ಬಳಿ ಅಷ್ಟು ಸ್ಥಾನಗಳೇ ಇಲ್ಲ. ಹಾಗಾಗೇ ಅವರು ಚುನಾವಣೆವರೆಗೂ ಅಥವಾ ರಾಷ್ಟ್ರಪತಿ ಆಡಳಿತ ಜಾರಿಯಾಗುವವರೆಗೂ ಕಾದು, ಬಿಜೆಪಿಯ ವಿರುದ್ಧ ಏಳುವ ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಪ್ರಯತ್ನಿಸಬಹುದು(ಹಿಮಾಚಲದಂತೆ).
ಕಾಂಗ್ರೆಸ್‌ಗೆ ದೂರದಲ್ಲೆಲ್ಲೋ ಭರವಸೆಯ ದೀಪ ಕಾಣಿಸುತ್ತಿದೆ. ಹಾಗಂತ ಪಕ್ಷದಲ್ಲಿ ಎಲ್ಲವೂ ಸರಿಯಿದೆ ಎಂದಲ್ಲ. ಕೇಂದ್ರ ಮಟ್ಟದಲ್ಲಿ ನಡೆದಿರುವ ಹಗರಣಗಳು, ರಾಜ್ಯ ಘಟಕದಲ್ಲಿನ ಅನ್ಯೋನ್ಯತೆಯ ಅಭಾವಗಳೆಲ್ಲ ಆ ಪಕ್ಷವನ್ನು ಕಾಡುತ್ತಿದೆ. ಆದರೆ ಬಿಜೆಪಿ ವಿರೋಧಿ ಮತಗಳಿಂದ ಲಾಭ ಪಡೆಯಬಹುದೆಂಬ ಲೆಕ್ಕಾಚಾರ ಆ ಪಕ್ಷದ್ದು. ಜನರ ವಿಶ್ವಾಸವನ್ನು ಗಳಿಸಲು ರಾಜ್ಯದ ತುಂಬೆಲ್ಲ ಪಾದಯಾತ್ರೆಗಳನ್ನು ಅದು ಶುರುವಿಟ್ಟುಕೊಂಡಿದೆ. ರಾಜ್ಯ ಕಾಂಗ್ರೆಸ್‌ನ ಪ್ರತಿ ನಾಯಕನೂ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾನೆ. ಪರಮೇಶ್ವರ್ ಮತ್ತು ಸಿದ್ಧರಾಮಯ್ಯ ಈ ವಿಷಯದಲ್ಲಿ ಮುಂಚೂಣಿಯಲ್ಲಿರುವ ನಾಯಕರು. ಅವರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರಾದರೂ, ಚುನಾವಣೆಯಲ್ಲಿ ಗೆಲುವು ಸಾಧಿಸಬೇಕಿದ್ದರೆ ಒಟ್ಟುಗೂಡಿ ಕಠಿಣ ಪರಿಶ್ರಮ ಹಾಕಬೇಕು. ಕಾಂಗ್ರೆಸ್‌ನಲ್ಲಿ, ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ತೀರ್ಮಾನ ಮೊದಲಿನಿಂದಲೂ ಹೈಕಮಾಂಡ್ ಮಾಡಿಕೊಂಡು ಬಂದಿದೆ. ಆಕಾಂಕ್ಷಿಗಳಿಗೆ ಸಿದ್ಧತೆಗಳನ್ನು ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ಆಯ್ಕೆಗಳೇ ಇಲ್ಲ.
ಇನ್ನು ಯುದ್ಧಕ್ಕೆ ಸನ್ನದ್ಧವಾಗಿ ನಿಂತಿರುವ ಏಕೈಕ ಪಕ್ಷವೆಂದರೆ ಜೆಡಿಎಸ್. ಅದಾಗಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನದು ಆಯ್ಕೆ ಮಾಡಿಯೇ ಬಿಟ್ಟಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕಪಟ ಪಕ್ಷಗಳು ಹಾಗಾಗೇ ತನಗೇ ಅಧಿಕಾರ ನಡೆಸುವ ಭಾಗ್ಯ ಕರುಣಿಸಬೇಕೆಂದು ಜನತೆಯನ್ನದು ಕೇಳಿಕೊಳ್ಳುತ್ತಿದೆ. ಮುಖ್ಯಮಂತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿಯವರೂ ಸಜ್ಜಾಗಿ ನಿಂತಿದ್ದಾರೆ. ಬಿಜೆಪಿ-ಜೆಡಿಎಸ್ ಅಧಿಕಾರದಲ್ಲಿದ್ದ ಸಮಯದಲ್ಲಿ ಮುಖ್ಯಮಂತ್ರಿಯಾಗಿ ಅವರು ಉತ್ತಮ ಆಡಳಿತ ನಡೆಸಿ ಹೆಸರು ಗಳಿಸಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಜೆಡಿಎಸ್‌ಗೆ, ಅಷ್ಟೊಂದು ಬೆಂಬಲವಿಲ್ಲ ಎನ್ನುವುದೂ ಸತ್ಯ.ಇನ್ನು ಅದರ ಮತಗಳು ಕಾಂಗ್ರೆಸ್‌ನ ಜೊತೆಗೂ ಹಂಚಿಹೋಗಿವೆ. ಅಲ್ಲದೆ ಅದರ ಪ್ರಭಾವ ನಗರ ಪ್ರದೇಶಗಳಲ್ಲಿ(ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ) ಅಷ್ಟೇನೂ ಹೆಚ್ಚಿಲ್ಲ.  ಆದರೂ ಏನಾಗುತ್ತದೆ ಎಂದು ಈಗಲೇ ಹೇಳುವುದು ಯಾರಿಗೂ ಸಾಧ್ಯವಿಲ್ಲ. ಜೆಡಿಎಸ್ ಪಕ್ಷವೇ ಗೆಲುವಿನ ಕುದುರೆ ಆದರೂ ಆದೀತೇನೋ?
ಹಾಗಾಗೆ ಎಲ್ಲರ ದೃಷ್ಟಿ ಚುನಾವಣೆಯತ್ತ ನೆಟ್ಟಿದೆ. ಮತದಾರರು ತಮ್ಮ ಕಾರ್ಡ್‌ಗಳನ್ನು ಎದೆಗವುಚಿಕೊಂಡು ನಿಂತಿದ್ದಾರೆ. ಈಗಲೂ ಅವರು ಬಿಜೆಪಿಯನ್ನೇ ನೆಚ್ಚಿಕೊಳ್ಳುತ್ತಾರಾ? ಕಾಂಗ್ರೆಸ್ ಅನ್ನು ಮತ್ತೆ ಗದ್ದುಗೆಗೆ ತಂದು ಕೂರಿಸುತ್ತಾರಾ? ಅಥವಾ ಎರಡನ್ನೂ ಕಡೆಗಣಿಸಿ ಜೆಡಿಎಸ್‌ಗೆ ಜೈ ಅನ್ನುತ್ತಾರಾ? ಅಥವಾ ಗೊಂದಲಗೊಂಡು ಸಮ್ಮಿಶ್ರ ಸರ್ಕಾರ ಬರಲು ಕಾರಣರಾಗುತ್ತಾರಾ? ಇದಕ್ಕೆಲ್ಲ ಉತ್ತರ ದೊರೆಯಬೇಕೆಂದರೆ ನಾವು ಕಾಯಲೇಬೇಕು. ದೃಢವಾದ ಮತ್ತು ಉತ್ತಮ ಆಡಳಿತ ನೀಡುವ ಸರ್ಕಾರವನ್ನು ನೋಡಿಯೇ ಬಹಳಷ್ಟು ವರ್ಷಗಳಾಗಿಹೋಗಿವೆ ಅಲ್ಲವೇ?
ಕೊನೆಯ ಗುಟುಕು: ಸಂತೋಷವೆನ್ನುವುದು ಭವಿಷ್ಯಕ್ಕಾಗಿ ಮುಂದೂಡಲ್ಪಡುವಂಥದ್ದಾಗಬಾರದು. ಅದು ವರ್ತಮಾನಕ್ಕಾಗಿ ನೀವು ವಿನ್ಯಾಸಗೊಳಿಸುವ ವಿಷಯವಾಗಬೇಕು.

-ಎಚ್.ಎಸ್. ಬಲರಾಮ್
hsbalram@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.